Wednesday 5 June 2013

Nenapemba abhishaapa (ನೆನಪೆಂಬ ಅಭಿಶಾಪ)

"ಮರೆತುಬಿಡು" ಎನ್ನದಿರು
ಮರೆತೆನ್ನ ಕೊಲ್ಲದಿರು;
ಮರೆವೇನು ಮದ್ದಹುದೆ
ಮುದ್ದಿಸಿದ ಹೃದಯಕ್ಕೆ?


ನನ್ನ ಬಾಳಿನಲೊಂದು
ಬಲುದೊಡ್ಡ ಭಯವಿತ್ತು –
"ಒಂದೊಮ್ಮೆ ನೀ ಎನ್ನ
ಮರೆತುಬಿಟ್ಟರೆ!" ಎಂದು.


ಆದರೂ, ಅಯ್ಯೋs!
ನೀ ಎನ್ನ ಮರೆತಾಯ್ತು.
ಭರವಸೆಯು ಹುಸಿಯಾಯ್ತು.
ನಿನ್ನ ಒಲವೇs ನನ್ನ
ಹೃದಯಕ್ಕೆ ಸಾವಾಯ್ತು.


ಇತ್ತ ಮಾತನು ಮರೆತೆ,
ಕೊಟ್ಟ ಮುತ್ತನು ಮರೆತೆ
ಇದ್ದ ಪ್ರೀತಿಯ ಮರೆತೆ ;
ನನ್ನನೇ ನೀ ಮರೆತೆ!!


ಈಗ ಕಾಡುವ ಪ್ರಶ್ನೆ ಒಂದೇ –
"ಹೇಗೆ ಮರೆತೆಯೆ ನನ್ನ?"
ಸುಲಭವೇ ಮರೆಯುವುದು –
ನಿನ್ನ ಒಳಗಿನ ನನ್ನ?


ಹೃದಯವೊಂದಾಗಿರಲು
ಪ್ರೇಮವದು ಹಾರಿತ್ತು;
ನೆನಪನ್ನು ಜೊತೆಗುಳಿಸಿ
ಏಕಾಂಗಿ ಮಾಡಿತ್ತು.


ಅಯ್ಯೋ ಒಲವೆs,
ಮೃದುಹೃದಯವೇ ಬೇಕೆ –
ನಿನ್ನಯಾ ತೊಟ್ಟಿಲಿಗೆ
ನಿನ್ನ ಸಿರಿ ಮಂಚಕ್ಕೆ
ಚಿತೆಯ ಆ ತಲ್ಪಕ್ಕೆ??


ಎಲ್ಲ ಮುಗಿದಿರುವಾಗ
ಹಂಬಲಿಸಿ ಫಲವೇನು? 
ಬಾಳು ಬರಿದಹುದೀಗ –
ನೀನಿರದೆ, ಮುಂದೇನು!!


ಮರೆವೆಯೇ ನಿನಗೆ ವರವಾಯ್ತು
ನೆನಪೆಂಬುದು ನನಗೆ ಅಭಿಶಾಪವಾಯ್ತು;
ಪಡೆದದ್ದು ಇಷ್ಟೇ,ದುಃಖ ನನಗೇ ಇರಲಿ
ಸುಖಬಾಳು ಮಾತ್ರ ಎಂದಿಗೂ ನಿನಗಿರಲಿ.

No comments:

Post a Comment