Saturday 22 June 2013

ಮನಸಿಗೊಂದು ಕಿವಿಮಾತು

ಮರುಳು ಕಳೆಯಿತೆ? ಮನವೆ,
ಭ್ರಮೆಯು ಕಳೆಯಿತೆ? ಹೇಳು;


'ನಾನು' ನಾನೆಂದೊರಲಿ ಕುರುಡಾಗಿ ನಡೆದಿದ್ದೆ;
ಮನಕೆ ಬಂದಂತೆಲ್ಲ ಬಡಬಡಿಸಿ ನುಡಿದಿದ್ದೆ;
ಇಂದು ಏಕೀ ಮೌನ, ಸತ್ಯದs ಅರಿವಾಯ್ತೆ?
ಈಗ ಎಲ್ಲಿದೆ ಧ್ಯಾನ, ಎಲ್ಲವುs ಸರಿಯಾಯ್ತೆ?


ಹರಿಯ ಮರೆತಿರುವಾಗ ಹದುಳವಿನ್ನೇನಹದು,
ಅವನ ಜರೆದರೆ ನೀನು ಮುಕುತಿಯಿನ್ನೆಲ್ಲಿಯದು..?

ಭಂಡತನವನು ಮಾಣು, ನಿನ್ನಲವನನೆ ಕಾಣು;
ಎಲ್ಲ ತಪ್ಪನು ಕ್ಷಮಿಸಿ ನಿನ್ನ ಪೊರೆವನು ತಾನು.

Sunday 16 June 2013

ಸ್ತುತಿ

ಶ್ರೀಯನುರದೊಳ್ ಧರಿಸಿ ಸೊಬಗಿಗಧಿಪತಿ ಎನಿಸಿ
ಸಕಲವಿಶ್ವವ ಸೃಜಿಸಿ ಲೀಲೆಯಿಂದಾಳುತಿಹ
ವಾರಿಜನಾಭ ಶ್ರೀ ವರಶೇಷಶಯನನು ಸರಸಿಜೋದ್ಭವನ ಪಿತನು, ತಾನ್
ವಸುಮತಿಯೊಳವತರಿಸಿ ದೈತ್ಯರನು ಸಂಹರಿಸಿ
ಓಜೆಯಿಂ ಧರ್ಮಸಂಸ್ಥಾಪನೆಯ ಗೈದವನು
ಪರಶಿವನ ಪ್ರಿಯಸಖನು ವೇದಾರ್ಥಭೂಷಿತನು ಹರಿಯು ಹರಸುವುದೆಮ್ಮನು


ಕಲಹಂಸ ವಾಹಿನಿಯೆ ಧವಳಾಬ್ಜ ವಾಸಿನಿಯೆ
ವಾಗೀಶ ಕಾಮಿನಿಯೆ ವಿದ್ಯಾರ್ಥ ದಾಯಿನಿಯೆ
ವಿಶದೆ ವೀಣಾಲೋಲೆ ವರದೆ ಕರುಣಾಲೀಲೆ ವಿಮಲೆ ಸುಗುಣಾಶೀಲೆ^
ಸಕಲ ಸುರವಂದಿತೆಯೆ ಜನನಿ ವೀಣಾಪಾಣಿ
ಶೃತಿಗೀತ ಸಂಸ್ತುತೆಯೆ ಕಮಲಹಾಸಿನಿ ವಾಣಿ
ವಿನತಿಯಿಂ ನಮಿಸುವೆವು  ಶುಭದೆ ಸದಯಾಪೂರ್ಣೆ ಪ್ರೇಮದಿಂ ಸಲಹೆಮ್ಮನು


ತ್ರಿಪುರಹರ ಶೂಲಧರಂ
ದುರಿತಹರ ಗರಳಧರಂ
ವಿಷಯಹರ ಭುಜಗಧರಂ
ಮದನಹರಮನಲಧರಂ
ದರ್ಪಹರಮಿಂದುಧರಂ
ಪ್ರಣಮಾಮಿ ಭುವನಧರಂ
ಪ್ರಣತೋಸ್ಮಿ ಗಂಗಾಧರಂ

ನನ್ನ ಮಾತು

ಅರಿಯದಾ ಹಾದಿಯಲಿ
ಹೊಸಹೆಜ್ಜೆಯಿಟ್ಟಿರುವೆ,
ಹಳೆಯ ಬಾಳಿನ ಗಡಿಯ
ಅಧಿಗಮಿಸಿ ನಡೆದಿರುವೆ


ನನ್ನ ಕನಸನು ಹುಡುಕಿ
ಈ ತನಕ ಬಂದಿರುವೆ;
ಹೊಸತನಕೆ ಹಾತೊರೆದು
ಈ ದಾರಿ ಹಿಡಿದಿರುವೆ.


ದಾರಿಯಾ ಅರಿವಿಲ್ಲ,
ಗುರಿ ಮಾತ್ರ  ಸುಸ್ಪಷ್ಟ
ಅದನು ಸೇರದ ಹೊರತು
ಕಳೆಯದೀ ಸಂಕಷ್ಟ

Wednesday 5 June 2013

Nenapemba abhishaapa (ನೆನಪೆಂಬ ಅಭಿಶಾಪ)

"ಮರೆತುಬಿಡು" ಎನ್ನದಿರು
ಮರೆತೆನ್ನ ಕೊಲ್ಲದಿರು;
ಮರೆವೇನು ಮದ್ದಹುದೆ
ಮುದ್ದಿಸಿದ ಹೃದಯಕ್ಕೆ?


ನನ್ನ ಬಾಳಿನಲೊಂದು
ಬಲುದೊಡ್ಡ ಭಯವಿತ್ತು –
"ಒಂದೊಮ್ಮೆ ನೀ ಎನ್ನ
ಮರೆತುಬಿಟ್ಟರೆ!" ಎಂದು.


ಆದರೂ, ಅಯ್ಯೋs!
ನೀ ಎನ್ನ ಮರೆತಾಯ್ತು.
ಭರವಸೆಯು ಹುಸಿಯಾಯ್ತು.
ನಿನ್ನ ಒಲವೇs ನನ್ನ
ಹೃದಯಕ್ಕೆ ಸಾವಾಯ್ತು.


ಇತ್ತ ಮಾತನು ಮರೆತೆ,
ಕೊಟ್ಟ ಮುತ್ತನು ಮರೆತೆ
ಇದ್ದ ಪ್ರೀತಿಯ ಮರೆತೆ ;
ನನ್ನನೇ ನೀ ಮರೆತೆ!!


ಈಗ ಕಾಡುವ ಪ್ರಶ್ನೆ ಒಂದೇ –
"ಹೇಗೆ ಮರೆತೆಯೆ ನನ್ನ?"
ಸುಲಭವೇ ಮರೆಯುವುದು –
ನಿನ್ನ ಒಳಗಿನ ನನ್ನ?


ಹೃದಯವೊಂದಾಗಿರಲು
ಪ್ರೇಮವದು ಹಾರಿತ್ತು;
ನೆನಪನ್ನು ಜೊತೆಗುಳಿಸಿ
ಏಕಾಂಗಿ ಮಾಡಿತ್ತು.


ಅಯ್ಯೋ ಒಲವೆs,
ಮೃದುಹೃದಯವೇ ಬೇಕೆ –
ನಿನ್ನಯಾ ತೊಟ್ಟಿಲಿಗೆ
ನಿನ್ನ ಸಿರಿ ಮಂಚಕ್ಕೆ
ಚಿತೆಯ ಆ ತಲ್ಪಕ್ಕೆ??


ಎಲ್ಲ ಮುಗಿದಿರುವಾಗ
ಹಂಬಲಿಸಿ ಫಲವೇನು? 
ಬಾಳು ಬರಿದಹುದೀಗ –
ನೀನಿರದೆ, ಮುಂದೇನು!!


ಮರೆವೆಯೇ ನಿನಗೆ ವರವಾಯ್ತು
ನೆನಪೆಂಬುದು ನನಗೆ ಅಭಿಶಾಪವಾಯ್ತು;
ಪಡೆದದ್ದು ಇಷ್ಟೇ,ದುಃಖ ನನಗೇ ಇರಲಿ
ಸುಖಬಾಳು ಮಾತ್ರ ಎಂದಿಗೂ ನಿನಗಿರಲಿ.

Tuesday 4 June 2013

maruLu (ಮರುಳು)

ಚಿಂದಿಯ ಪೇಟವಂ ಸುತ್ತಿ
ಹರಕು ಬಟ್ಟೆಯ ಧರಿಸಿ
ಕೋಲ್ದಂಡವಂ ಪಿಡಿದು
ಪೊಳಲೊಳಗಲೆದಾಡುತಿರ್ದ
ಮರುಳನೋರ್ವನ ಕಂಡೆ |


ಇಹದ ಪರಿವೆಯು ಇರದೆ
ಪರದ ಪರಿವೆಯು ಇರದೆ
ಭ್ರಮಾಪರಿಧಿಯೊಳಗಿಂತು
ಸಿಲುಕಿ ನಲುಗುತಿಹ ಅವನ
ಹೀನ ಸ್ಥಿತಿಯನು ಕಂಡೆ |


ಮತ್ತಿನೊಳಗೆಂಬಂತೆ ತೂರುತ್ತ ನಡೆಯುವ,
ಅಲ್ಲಲ್ಲಿ ನಿಲ್ಲುತ್ತ ಅಲ್ಲಲ್ಲಿ ಕೂರುವ,
ಆಗೊಮ್ಮೆ ಈಗೊಮ್ಮೆ ಗತ್ತಿನಿಂದರಚುವ,
ಒಮ್ಮೊಮ್ಮೆ ಅತ್ತು ಒಮ್ಮೊಮ್ಮೆ ನಗುವs;
ತನ್ನ ಸ್ಥಿತಿಯನು ತಾನು ಆರಿಯದೆಯೆ ಸಾಗುವ.


ಕಾಂಬ ವಸ್ತುವ ಕಸಿದು ಕಿಸೆಯೊಳಗೆ ತುಂಬುವ,
ಬೆತ್ತವಂ ಬೀಸುತ್ತ ಹೆದರಿಸುತ ಕಾಡುವ,
ಮಂದಿಯs ಗುಂಪಿಂಗೆ ಕಲ್ಲನ್ನು ಎಸೆಯುವ,
ಅನ್ಯರs ಆಳಲಿಂಗೆ ಮುದವನ್ನು ತಾಳುವ;
ತನ್ನ ಮರುಳಿನೊಳಿಂತು ಜಗಮರೆತು ಬಾಳುವ.


ಭಾವಿಸಿ ನೋಡಲು ಎಲ್ಲರೂ ಮರುಳರೇ;
ಕೆಲರು ಬಾಹ್ಯದೊಳು ಮರುಳರು!
ಕೆಲರಬಾಹ್ಯದೊಳು ಮರುಳರು!
"ತಾನೆಂಬ ಮರುಳು ಹತ್ತಿರಲು ಜನಕೆ,
ಸತ್ಯದs ಅರಿವು ಬಾರದೆಂದಿಗು ಜಗಕೆ"


ಅಹಂಕಾರದs ಚಿಂದಿ ಪೇಟವನು ಸುತ್ತಿ,
ಅಧಿಕಾರದs ಮುರುಕು ಬೆತ್ತವನು ಹಿಡಿದು,
ಸ್ವಾರ್ಥದs ಹರಕು ಬಟ್ಟೆಯನು ಧರಿಸಿ,
ಭ್ರಮೆಯ ಲೋಕದೊಳಗಲೆಯುವೆವು;
ಮರುಳರೇ ನಾವು! ಮರುಳರೇ ನಾವು!


ಕಂಡದ್ದೆಲ್ಲವ ಬಾಚಿ ಕಿಸೆಯಲ್ಲಿ ತುಂಬುವೆವು,
ಅನ್ಯರಿಗಪಕಾರವನೆಸಗೆ ಮುದವನ್ನು ತಾಳುವೆವು,
ದರ್ಪವಂ ತೋರುತ್ತ ಅವರಿವರ ಕಾಡುವೆವು,
ನಮ್ಮ ಕಾಯ್ದವರೊಡನೆ ಕಿಚ್ಚಿನಿಂ ಕಾದುವೆವು;
ಕಡುಧೂರ್ತರೇ ನಾವು! ಕಡುಧೂರ್ತರೇ ನಾವು!


ಕಂಡವರ ಕಷ್ಟಕ್ಕೆ ಕುರುಡಾಗಿ ನಡೆಯುವೆವು,
ಮೋಹಕ್ಕೆ ಸೆರೆಯಾಗಿ ಜಗಮರೆತು ಸಾಗುವೆವು,
ಸರ್ವಥಾ ನಾನೆಂಬ ಭ್ರಮೆಯಲ್ಲಿ ಬಾಳುವೆವು,
ನಮ್ಮ ನೆಲೆಯರಿಯುವೆಡೆ ಮನಸನ್ನೆ ಮಾಡೆವು;
ಕಡುಮೂಢರೇ ನಾವು! ಕಡುಮೂಢರೇ ನಾವು!


ವಿಚಾರಿಸಿ ನೋಡಲು ಜಗವೆಲ್ಲ ಮರುಳೇ;
ನಾನು-ತಾನೆಂಬ ಮರುಳು ಏರಿಹುದು ಜನಕೆಲ್ಲ,
'ತನ್ನ'ತನದೊಳಗೆ ಮುಳುಗಿಹುದು ಜಗವೆಲ್ಲ;
ಇದ ಹರಿಸಿ ಕಾವುದನು ಶಿವ ಮಾತ್ರ ಬಲ್ಲ!
ನಮ್ಮ ಕಾವುದನು ಆ ಶಿವ ಮಾತ್ರ ಬಲ್ಲ.

Monday 3 June 2013

Naanemba bhrame

ಅನಂತಸೃಷ್ಟಿಯ ಕಿಡಿಯಾಗಿ
ನಿನ್ನಿಂದುದಿಸಿದೀ ಕಾಯವನು
"ನಾನು" ನಾನೆಂಬುದೀ ಮನವು,
ಎನಿತೀಸು ಮರುಳೋ ತನಗೆ!!


ನಿನ್ನಿಚ್ಛೆಯಂತೆಯೇ ನಡೆಯುವುದು ಎಲ್ಲವು;
ಆದರೇನಂತೆ, ಎಲ್ಲ ಕಾರ್ಯಕು  ಕಾರಣವು
"ನಾನು" ನಾನೆಂಬುದೀ ಮನವು,
ಎನಿತೀಸು ಭ್ರಾಂತಿಯೋ ತನಗೆ!!


ನಾನೆಂಬ ಸೆರೆಯೊಳು ಸಿಲುಕಿ
ನಿನ್ನ ನಿಲುವನು ಮರೆತು
ತನ್ನ ಭ್ರಮೆಯೊಳಗಿಂತು
ಕುರುಡಾಗಿಹುದೆನ್ನ ಮನವು.


ನಾನೆಂಬುದಳಿಯುವ ಮೊದಲು
ನಿನ್ನನರಿಯಲು ಬಹುದೆ?
ಹರಹರಾ! ಎನ್ನ ಮರುಳನ್ನು ಮಾಣಿಸೈ ;
ನಾನೆಂಬ ಭ್ರಮೆಯನು ಕಳೆದು
ನಿನ್ನತ್ತ ತೋರೈ ವಿಷ್ಣುವಲ್ಲಭ.