Sunday 15 December 2013

ಕಳೆದುಹೋಗಬೇಕು 'ನಾನು'

ಕಳೆದುಹೋಗಬೇಕು ನಾನು ಕಳೆದುಹೋಗಬೇಕು ನಾನು ;
ಜೀವನದs ಜಾತ್ರೆಯಲ್ಲಿ ಕಳೆದುಹೋಗಬೇಕು 'ನಾನು'.

ಎಲ್ಲರ ಜೊತೆ ನಡೆಯುವಾಗ ಕಳೆದುಹೋಗಬೇಕು ನಾನು 
ಎಲ್ಲರ ಜೊತೆ ನುಡಿಯುವಾಗ ಕಳೆದುಹೋಗಬೇಕು ನಾನು 
ಎಲ್ಲರ ಜೊತೆ ದುಡಿಯುವಾಗ ಕಳೆದುಹೋಗಬೇಕು ನಾನು 
ಎಲ್ಲರಲ್ಲಿ ಒಬ್ಬನಾಗಿ ಕಳೆದುಹೋಗಬೇಕು ನಾನು.

ಎಲೆಮರೆಯs ಧ್ವನಿಯ ಹಾಗೆ ಕಳೆದುಹೋಗಬೇಕು ನಾನು
ಧರೆಗಿಳಿವಾ ಹನಿಯ ಹಾಗೆ ಕಳೆದುಹೋಗಬೇಕು ನಾನು
ಹೆಸರಿರದಾ ಝರಿಯ ಹಾಗೆ ಕಳೆದುಹೋಗಬೇಕು ನಾನು
ಸಾಗರದಾ ಅಲೆಯ ಹಾಗೆ ಕಳೆದುಹೋಗಬೇಕು ನಾನು.

ಧಾನ್ಯದಲ್ಲಿ ವೃಕ್ಷದಂತೆ ಕಳೆದುಹೋಗಬೇಕು ನಾನು
ಹಾಲಿನಲ್ಲಿ ಬೆಣ್ಣೆಯಂತೆ ಕಳೆದುಹೋಗಬೇಕು ನಾನು 
ಜಲದೊಳಗಣ ಜೀವದಂತೆ ಕಳೆದುಹೋಗಬೇಕು ನಾನು
ಜೀವನೊಳಗೆ ದೇವನಂತೆ ಕಳೆದುಹೋಗಬೇಕು "ನಾನು"

ಯಾವುದೋ ಸಭೆಯೊಂದರಲ್ಲಿ ಒಬ್ಬರು ಕನಕದಾಸರನ್ನು ಕೇಳಿದರಂತೆ "ಸ್ವಾಮಿ, ಪ್ರಪಂಚದಲ್ಲಿ ಇಷ್ಟೊಂದು ಜನ ಮೋಕ್ಷಪದವನ್ನು ಹೊಂದಲು ಪ್ರಯತ್ನಿಸುತ್ತ ಇರುತ್ತಾರಲ್ಲ, ಅವರಲ್ಲಿ ಯಾರುಯಾರು(ಎಂಥವರು) ಮೋಕ್ಷಪದವನ್ನು ತಲುಪುತ್ತಾರೆ?" ಅಂತ.ಅದಕ್ಕೆ ಕನಕದಾಸರು "ಗೊತ್ತಿಲ್ಲಪ್ಪ, ನಾನು ಹೋದ್ರೆ ಹೋಗಬಹುದು" ಅಂದರಂತೆ.
ಪ್ರಶ್ನೆ ಕೇಳಿದವನಿಗೆ ಆಶ್ಚರ್ಯ! ಜೊತೆಗೆ ಸ್ವಲ್ಪ ಅಸಮಾಧಾನ - "ಅಲ್ಲ, ಈತ ತಾನೊಬ್ಬ ಮಾತ್ರ ಮೋಕ್ಷ ಹೊಂದಬಹುದು ಅಂತಿದಾನಲ್ಲ. ಹಾಗಿದ್ರೆ ಮಿಕ್ಕವರೆಲ್ಲ ಅದಕ್ಕೆ ಅನರ್ಹರು ಎಂದು ಇವರ ಅಭಿಪ್ರಾಯವೇನು??" - ಅಂತ. ಅದನ್ನೇ ಆತ ಕನಕದಾಸರನ್ನು ಕೇಳುತ್ತಾನೆ.
ಅದಕ್ಕೆ ಕನಕದಾಸರು ಹೇಳಿದರಂತೆ "ನಾನು ಹೇಳಿದ್ದು ನಾನೊಬ್ಬ ಮಾತ್ರ ಹೋಗ್ತೀನಿ ಅಂತ ಅಲ್ಲಪ್ಪ, ಈ 'ನಾನು' ಅನ್ನೋ ಭಾವನೆ ನಮ್ಮಿಂದ ಹೋದ್ರೆ ಮೋಕ್ಷಪದಕ್ಕೆ ಹೋಗಬಹುದು" ಅಂತ. (ಕನಕದಾಸರ ಮಾತು/ದಾಸಪದಗಳಲ್ಲಿ ಯಾವಾಗಲೂ ಒಂದಲ್ಲ ಒಂದು ಗೂಢಾರ್ಥ ಇರುವುದು ನಮಗೆಲ್ಲ ಬಹುಶ ಗೊತ್ತಿರುವ ವಿಷಯವೇ). ಅದಕ್ಕೇ ಒಂದು ನುಡಿ ಇದೆ "ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ" ಅಂತ.
ಅದೇನೇ ಇರಲಿ, ಅವರ ಆ ಮಾತು ನಮಗೆಲ್ಲ ಸರ್ವಥಾ ಮನನೀಯ. 'ನಾನು' ಅನ್ನೋ ಸ್ವಾರ್ಥ ಭಾವನೆ ಹೋದ್ರೆ ಕಾಣದ ಮೋಕ್ಷ ನಮಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ನಿಸ್ವಾರ್ಥ,ನಿರಹಂಕಾರದಿಂದ ಭೂಮಿಯ ಮೇಲಿರುವಾಗಲೇ ನಮಗೆ ಒಂದು ಬಗೆಯ ಆನಂದದ ಅನುಭವ ಆಗದೇ ಇರದು. ಅದನ್ನು ಕುರಿತೇ ಬರೆದದ್ದು ಈ ಕವನ - ಕಳೆದುಹೋಗಬೇಕು "ನಾನು"

"ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇ
sಸ್ತಂ ಗಚ್ಛಂತಿ ನಾಮರೂಪೇ ವಿಹಾಯ|
ತಥಾ ವಿದ್ವಾನ್ನಾಮರೂಪಾದ್ವಿಮುಕ್ತಃ
ಪರಾತ್ ಪರಂ ಪುರುಷಮುಪೈತಿ ದಿವ್ಯಂ"                                              -- ಮುಂಡಕ ಉಪನಿಷದ್ ೩.೨.೮

'ಹೇಗೆ ಹರಿಯುತ್ತಿರುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಅದೃಶ್ಯವಾಗುವವೋ, ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರತ್ಪರನೂ ದಿವ್ಯನೂ ಆದ ಪುರುಷನನ್ನು ಹೊಂದುವನು.'
ಈ ಉಪನಿಷದ್ವಾಕ್ಯ ಪ್ರೇರಣೆಯಿಂದ ಬರೆದದ್ದು ಮೊದಲ ಚರಣ - ನಾವು ನಮ್ಮ ಅಹಂ ಅನ್ನು ತೊರೆದು ಎಲ್ಲರಲ್ಲಿ ಒಂದಾಗಿ ಬೆರೆಯಬೇಕು - ಸಮುದ್ರದಲ್ಲಿ ಬೆರೆವ ನದಿಯ ಹಾಗೆ. ಅಲ್ಲಿ 'ನಾನು-ತಾನು' ಎಂಬ ಭಾವವಿರಬಾರದು.

ಪೊದೆಗಳ ನೇಪಥ್ಯದಿಂದ ಕೇಳಿಬರುವ ಮಧುರಗೀತೆಯನ್ನು ನಾವು ಕೇಳಿ ಬಲ್ಲೆವೇ ಹೊರತು ಯಾವ ಹಾಡನ್ನು ಯಾವ ಹಕ್ಕಿ ಹಾಡುತ್ತಿದೆ ಎಂದೇನೂ ನಾವು ಹುಡುಕಾಡುವುದಿಲ್ಲ. ಹಾಡುತ್ತಿರುವ ಹಕ್ಕಿಗೂ 'ಹಾಡಿದ್ದು ತಾನೇ' ಎಂದು ತೋರಿಸಿಕೊಳ್ಳುವ ಹಂಬಲವೇನೂ ಇರುವುದಿಲ್ಲ. ಅಂತೆಯೇ ಆಗಸದಿಂದ ಧರೆಗಿಳಿವ ಮಳೆಹನಿ ಕೂಡ - ತನ್ನ ಅಸ್ತಿತ್ವವನ್ನು ಪ್ರತ್ಯೇಕವಾಗಿ ತೋರ್ಪಡಿಸಿಕೊಳ್ಳುವ ಇಚ್ಛೆ ಅದಕ್ಕಿರುವುದಿಲ್ಲ. ಹೆಸರೇ ಇಲ್ಲದೆ ಕಾಡು-ಮೇಡುಗಳ ನಡುವೆ ಹರಿದು ನದಿಯನ್ನು ಕೂಡಿಕೊಳ್ಳುವ ಝರಿಗಳೆಷ್ಟೋ! ನೌಕಾಯಾನದಲ್ಲಿ ಹಡಗಿಗೆ ಸಹಕರಿಸಿ ಸಾಗುವ ಸಾಗರದ ಅಲೆಗಳು ಅದೆಷ್ಟೋ! ಅವು ಯಾವೂ ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಹಂಬಲಿಸುವುದಿಲ್ಲ.

ಪ್ರತಿ ಬೀಜವೂ ವೃಕ್ಷವಾಗಬಲ್ಲ ಸಂಭವನೀಯತೆ ಇದೆ. ಆದರೆ ಅದು ತತ್ ಕ್ಷಣಕ್ಕೆ ಆಗುವಂಥದ್ದದಲ್ಲ, ಬೀಜವೊಂದು ವೃಕ್ಷವಾಗಿ ಬೆಳೆಯಲು ಸಾಕಷ್ಟು ಸಮಯ ಬೇಕು. ಹಾಗೆ ಬೆಳೆಯಲು ಅದಕ್ಕೆ ತಾಳ್ಮೆಯೂ ಇರಬೇಕು. ಹಾಲಿನೊಳಗಿನ ಬೆಣ್ಣೆ ಪ್ರಕಟವಾಗಬೇಕಾದರೂ ಹಾಗೆಯೇ, ಅದು ತಕ್ಷಣಕ್ಕೆ ಕಾಣುವುದಿಲ್ಲ. ಸಂಸ್ಕರಣೆ ಹೊಂದುವವರೆಗೂ ಬೆಣ್ಣೆ ಆಗೋಚರವಾಗಿಯೇ ಇರುತ್ತದೆ. ತಕ್ಕ ಸಮಯದಲ್ಲಿಯೇ ಅದು ನಮಗೆ ಸಿಗುವುದು. ಇಲ್ಲಿ ಕೂಡ ತಾಳ್ಮೆಯ ಅವಶ್ಯಕತೆಯಿದೆ. ಇನ್ನು, ಪ್ರತಿಯೊಬ್ಬರಲ್ಲೂ ಪರಮಾತ್ಮನಿದ್ದಾನೆ. ಅವನು ಕೂಡ ತಕ್ಷಣಕ್ಕೆ ನಮಗೆ ಸಾಕ್ಷಾತ್ಕಾರವಾಗುವುದಿಲ್ಲ, ನಮ್ಮೊಳಗಿನ ಅವನನ್ನು ಅರಿಯಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ - ಆ ಯತ್ನಕ್ಕೆ ಫಲವಾಗಿ - ಅವನು ನಮಗೆ ಗೋಚರಿಸುತ್ತಾನೆ.

Thursday 5 December 2013

ಚಂದ್ರಹಾಸ ಉಪಾಖ್ಯಾನ - ಭಾಗ ೪

ಅತ್ತ ಚಂದ್ರಹಾಸನು ತನ್ನ ಮಾವ ದುಷ್ಟಬುದ್ಧಿಯ ಆದೇಶದಂತೆ ಊರ ಹೊರಗಿನ ಚಂಡಿಕಾ ದೇವಾಲಯಕ್ಕೆ ಹೊರಟಿರುತ್ತಾನೆ.
------------------------------------------------------------------------------------------------
ಹೀಗಿರಲು, ಇತ್ತ ಅರಮನೆಯಲ್ಲಿ ಕುಂತಳನಗರದ ಅರಸನು :

ಗಾಲವನ ಪದಕೆರಗಿ ಕೈಮುಗಿದು ನಿಂದು ಭೂ
ಪಾಲಕಂ 'ತನಗಿನ್ನು ಸಾಕು ರಾಜ್ಯದ ಚಿಂತೆ
ಕಾಲವಂ ಸಾಧಿಸುವೆನಮಲ ಯೋಗದೊಳೆನಗೆ ಸುತರಿಲ್ಲ ಧರೆಯನಾರ್ಗೆ
ಬಾಲೆ ಚಂಪಕಮಾಲಿನಿಯನಾರ್ಗೆ ಕೊಡುವೆಂ ವಿ
ಶಾಲಮತಿ ಬೆಸಸೆಂದು' ಬೇಡಿಕೊಳೆ "ಲಕ್ಷಣ ಸು
ಶೀಲನಹ ಚಂದ್ರಹಾಸಂಗೆ ಮೇದಿನಿ ಸಹಿತ ಮಗಳನಿತ್ತಪುದೆಂದನು."

ಎಂದೊಡರಸಂ ಗಾಲವನ ಬುದ್ಧಿಯಂ ಕೇಳ್ದು
ತಂದೆ ಮಾಡುವ ರಾಜಕಾರ್ಯವಂ ನಿರ್ವಹಿಸು
ತಂದು ಬಾಗಿಲೊಳಿರ್ದ ಮದನನಂ ಕರೆಸಿ ಕೈವಿಡಿದು ಮೆಲ್ಲನೆ ಕಿವಿಯೊಳು
ಮುಂದೆ ನಮಗುರ್ವ ಕೆಲಸದ ಪೊರಿಗೆಯುಂಟು ನೀ
ನಿಂದುಹಾಸನನಿಲ್ಲಿಗೀಗಲೊಡಗೊಂಡು ಬಾ
ಸಂದೇಹಿಸದೆ ಪೋಗೆನಲ್ಕೆ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು.

ಕುಂತಳ ದೇಶದ ಅರಸನು ತಾನು ವಾನಪ್ರಸ್ಥಾಶ್ರಮಕ್ಕೆ ಹೊರಡುವುದಾಗಿ ನಿಶ್ಚಯಿಸುತ್ತಾನೆ. ತಾನು ಹೊರಡುವ ಮೊದಲು ರಾಜ್ಯವನ್ನೂ,ತನ್ನ ಮಗಳಾದ ಚಂಪಕಮಾಲಿನಿಯನ್ನೂ ಯಾರಿಗಾದರೂ ಒಪ್ಪಿಸಿ ಹೋಗಬೇಕಲ್ಲವೇ? ಈ ವಿಚಾರವಾಗಿ ರಾಜಪುರೋಹಿತನಾದ ಗಾಲವನ ಸಲಹೆ ಕೇಳುತ್ತಾನೆ. ಗಾಲವನು ಚಂದ್ರಹಾಸನೇ ಚಂಪಕಮಾಲಿನಿಗೆ ತಕ್ಕ ವರನೂ, ಕುಂತಳನಗರಕ್ಕೆ ತಕ್ಕ ಅರಸನೂ ಆಗುತ್ತಾನೆಂದು ರಾಜನಿಗೆ ತಿಳಿಸುತ್ತಾನೆ. ಅರಸನು ಆ ಮಾತಿಗೊಪ್ಪಿ ಅಲ್ಲಿ ಹತ್ತಿರವಿದ್ದ ಮದನನ್ನು ಕರೆದು 'ನೀನು ಕೂಡಲೇ ಚಂದ್ರಹಾಸನನ್ನು ಇಲ್ಲಿಗೆ ಕರೆದುಕೊಂಡು ಬಾ' ಎಂದು ಹೇಳುತ್ತಾನೆ. ಮದನನು ರಾಜನ ಆಣತಿಯಂತೆ ಚಂದ್ರಹಾಸನನ್ನು ಕರೆತರಲು ತೆರಳುತ್ತಾನೆ.
------------------------------------------------------------------------------------------------
ಹೀಗೆ ಮದನನು ಚಂದ್ರಹಾಸನನ್ನು ಕರೆತರಲೆಂದು ಬರುತ್ತಿರುವಾಗ ಮಾರ್ಗಮಧ್ಯದಲ್ಲಿಯೇ ಚಂದ್ರಹಾಸನನ್ನು ಭೇಟಿಯಾಗುತ್ತಾನೆ. ಮದನನು "ಎಲ್ಲಿಗೆ ಹೊರಟಿರುವೆ?" ಎಂದು ಕೇಳಿದಾಗ ಚಂದ್ರಹಾಸನು ತಾನು ಚಂಡಿಕಾಲಯಕ್ಕೆ ಹೊರಟಿರುವುದಾಗಿ ಹೇಳುತ್ತಾನೆ. ಅದಕ್ಕೆ ಮದನನು "ಅಯ್ಯಾ ಚಂದ್ರಹಾಸ, ಅನಿವಾರ್ಯ ರಾಜಕಾರ್ಯವೊಂದರ ನಿಮಿತ್ತ ಕುಂತಳೇಶ್ವರನು ನಿನ್ನನ್ನು ಬರಹೇಳಿದ್ದಾನೆ. ಆದ್ದರಿಂದ ನೀನು ಕೂಡಲೆ ಅರಮನೆಗೆ ಹೋಗು. ಪೂಜೆಗೆ ಬೇಕಾದರೆ ನಾನೇ ಹೋಗುತ್ತೇನೆ" ಎಂದು ತಿಳಿಸಿ ಚಂದ್ರಹಾಸನನ್ನು ಅರಮನೆಗೆ ಕಳುಹಿಸಿ ತಾನು ಚಂಡಿಕಾಲಯದ ಕಡೆಗೆ ಹೊರಡುತ್ತಾನೆ.
ಸಂಪ್ರದಾಯವನ್ನು ಉಲ್ಲಂಘಿಸಬಾರದೆಂದು ಮದನನು ಏಕಾಂಗಿಯಾಗಿಯೇ ದೇವಾಲಯಕ್ಕೆ ಹೊರಡುತ್ತಾನೆ.

ಹೀಗೆ ಹೊರಟ ಮದನನು ಕತ್ತಲಾಗುವ ವೇಳೆಗೆ ಆಲಯವನ್ನು ಸಮೀಪಿಸುತ್ತಾನೆ. ಬರುವ ಹಾದಿಯಲ್ಲಿ ಅನೇಕ ತರದ ಅಪಶಕುನಗಳನ್ನು ಕಂಡು ಆತಂಕಗೊಂಡು 'ಕೆಟ್ಟದ್ದೇನೂ ಆಗದಿರಲಿ' ಎಂದು ಪ್ರಾರ್ಥಿಸುತ್ತ ಅವನು ಆಲಯವನ್ನು ಪ್ರವೇಶಿಸುವ ವೇಳೆಗೆ ಆಲಯದ ಒಳ ಗೆ ತುಂಬ ಹೊತ್ತಿನಿಂದ ಹೊಂಚು ಹಾಕಿ ಕುಳಿತಿದ್ದ ಚಂಡಾಲರು ಅವನನ್ನು ಒಂದೇ ಏಟಿಗೆ ಕೊಂದು ಅಲ್ಲಿಂದ ಪರಾರಿಯಾಗಿಬಿಡುತ್ತಾರೆ.
ಇತ್ತ ಚಂದ್ರಹಾಸನು ಅರಮನೆಗೆ ಬರಲು, ಕುಂತಳದ ಅರಸನು ತನ್ನ ರಾಜ್ಯವನ್ನು ಚಂದ್ರಹಾಸನಿಗೊಪ್ಪಿಸಿ, ಮಗಳು ಚಂಪಕಮಾಲಿನಿಯನ್ನು ಗಾಂಧರ್ವ ರೀತಿಯಲ್ಲಿ ಧಾರೆಯೆರೆದು ತಾನು ಅರಣ್ಯವಾಸಕ್ಕೆಂದು ಹೊರಡುತ್ತಾನೆ.

ನಂತರದಲ್ಲಿ ಚಂದ್ರಹಾಸನೂ ಚಂಪಕಮಾಲಿನಿಯೂ ವೈಭವದ ಮೆರವಣಿಗೆಯಲ್ಲಿ ಬರುತ್ತಿರಲು, ಇದ್ದಕ್ಕಿದ್ದಂತೆ ಈ ಉತ್ಸವದ ಧ್ವನಿಯಿದೇನೆಂದು ತನ್ನ ಮನೆಯಿಂದ ಹೊರಗೆ ಬಂದ ಮಂತ್ರಿ ದುಷ್ಟಬುದ್ಧಿಯು ಇವರನ್ನು ನೋಡುತ್ತಾನೆ. ಅವರಿಬ್ಬರೂ ಅವನಿಗೆ ನಮಸ್ಕರಿಸಲು ಬಂದಾಗ "ಅಲ್ಲಯ್ಯ ಚಂದ್ರಹಾಸ, ವಂಶದ ಆಚಾರದಂತೆ ಒಬ್ಬನೇ ಚಂಡಿಕಾಲಯಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಾ ಎಂದು ಕಳುಹಿಸಿದರೆ ಇದೇನು ಮಾಡಿದೆ?" ಎಂದು ಕೇಳುತ್ತಾನೆ (ತನ್ನ ಕೋಪ-ಅಸಮಾಧಾನವನ್ನು ತೋರ್ಪಡಿಸದೆ).
ಅದಕ್ಕೆ ಚಂದ್ರಹಾಸನು ನಡೆದದ್ದನ್ನು ತಿಳಿಸಿ, ತನ್ನ ಬದಲಿಗೆ ಮದನನು ಆಲಯಕ್ಕೆ ಹೋದ ವಿಚಾರವನ್ನು ತಿಳಿಸುತ್ತಾನೆ.

ಹಮ್ಮೈಸಿದಂ ದುಷ್ಟಬುದ್ಧಿ ಮನದೊಳಗಳಿಯ
ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ
ಯಮ್ಮಾಡಿ ಮಾನವಂ ಬಾಳ್ದಪನೆ ದೀಪಮಂ ಕೆಡಿಸುವ ಪತಂಗದಂತೆ
ನಮ್ಮುಪಾಯವೆ ನಮಗಪಾಯಮಂ ತಂದುದೆಂ
ದೊಮ್ಮೆ ನಿಜಸದನಮಂ ಪೋಕ್ಕಾರುಮರಿಯದವೊ
ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಂಟೆಯಂ ಕತ್ತಲೆಯೊಳು.

ದುಷ್ಟಬುದ್ಧಿಗೆ ಚಂದ್ರಹಾಸನರುಹಿದ ವಿಷಯವನ್ನು ಕೇಳಿ ಆಘಾತವಾಗುತ್ತದೆ. ಪರರಿಗೆ ಹಿಂಸೆಯನ್ನು ಮಾಡಲೆಂದೆಳಸಿದವನಿಗೆ ಒಳ್ಳೆಯದಾಗುವುದೇ? ತಾವು ಮಾಡಿದ ತಪ್ಪು/ಸಂಚು ತಮಗೇ ಅಪಾಯವನ್ನು ತಾರದೇ ಇರುತ್ತದೆಯೇ?
ವಿಷಯವನ್ನು ತಿಳಿದ ದುಷ್ಟಬುದ್ಧಿಯು ಅತಿ ದುಃಖದಿಂದ ಕತ್ತಲೆಯಲ್ಲಿ - ಚಂಡಿಕಾಲಯದ ಕಡೆಗೆ - ಹುಚ್ಚನಂತೆ ಓಡುತ್ತಾನೆ.
ಹಾಗೆ ಅವನು ಬರುವುದನ್ನು ಕಂಡು ಕಾಡಿನ ಹಾದಿಯಲ್ಲಿದ್ದ ಭೂತ ಪ್ರೇತಗಳೂ ಇವನ ಆ ಅವತಾರವನ್ನು ಕಂಡು ಆಶ್ಚರ್ಯಗೊಳ್ಳುತ್ತವೆ.
ಹೀಗೆ ದುಷ್ಟಬುದ್ಧಿಯು ಆಲಯವನ್ನು ಸೇರಿದಾಗ ಅವನು ಅಲ್ಲಿ ಸತ್ತುಬಿದ್ದ ತನ್ನ ಮಗ ಮದನನ್ನು ಕಾಣುತ್ತಾನೆ. ದುಃಖದಿಂದಲೂ, ತನ್ನ ದುರ್ಬುದ್ಧಿಯಿಂದ - ಅಮಾಯಕನಾದ ತನ್ನ ಮಗನಿಗೆ - ಒದಗಿದ ದುಸ್ಥಿತಿಯನ್ನು ಕಂಡು ಸೈರಿಸಲಾರದೆ ದುಷ್ಟಬುದ್ಧಿಯು ಆಲಯದ ಕಂಬಕ್ಕೆ ತಲೆಯೊಡೆದುಕೊಂಡು ತಾನೂ ಸಾವನ್ನಪ್ಪುತ್ತಾನೆ.
------------------------------------------------------------------------------------------------
ಮರುದಿನ ಆ ದೇವಾಲಯಕ್ಕೆ ಪೂಜೆಗೆಂದು ಬಂದ ಪೂಜಾರಿಯು ಇವರಿಬ್ಬರ ಶವಗಳನ್ನು ಕಂಡು ಕೂಡಲೇ ಚಂದ್ರಹಾಸನಲ್ಲಿಗೆ ಹೋಗಿ ಈ ಸಂಗತಿಯನ್ನರುಹುತ್ತಾನೆ.
ವಿಷಯ ತಿಳಿದ ಚಂದ್ರಹಾಸನು ಆ ಕೂಡಲೇ ದೇವಾಲಯಕ್ಕೆ ಬಂದು ಅಲ್ಲಿನ ಘೋರ ದೃಶ್ಯವನ್ನು ಕಂಡು ಮರುಗುತ್ತಾನೆ. ತನ್ನಿಂದಾದ ಯಾವ ತಪ್ಪಿಗೆ ಇವರಿಬ್ಬರಿಗೆ ಈ ಸ್ಥಿತಿ ಬಂದೊದಗಿತೋ ಎಂದು ದುಃಖಿಸುತ್ತ ಅವರಿಗೆ ಪುನರ್ಜೀವವನ್ನು ಕೊಡಲೆಂದು ದೇವಿಯನ್ನು ಪ್ರಾರ್ಥಿಸುತ್ತಾನೆ. ಕಡೆಗೆ ತನ್ನನ್ನು ತಾನೇ ಕೊಂದುಕೊಂಡು ದೇವಿಗೆ ಪೂರ್ಣಾಹುತಿಯನ್ನು ನೀಡುವುದಾಗಿ ನಿಶ್ಚೈಸಿ ಚಂದ್ರಹಾಸನು ತನ್ನ ಖಡ್ಗವನ್ನು ಹಿರಿಯುವ ವೇಳೆಗೆ ದೇವಿಯು ಪ್ರತ್ಯಕ್ಷಳಾಗುತ್ತಾಳೆ. ಅವನ ಬೇಡಿಕೆಯಂತೆಯೇ ಅವರಿಬ್ಬರಿಗೂ ಮತ್ತೆ ಪ್ರಾಣ ಬರುವಂತೆ ಮಾಡಿ, ಚಂದ್ರಹಾಸನಿಗೆ ಕೇಳಿದ ವರಗಳನ್ನಿತ್ತು ದೇವಿಯು ಅಂತರ್ಧಾನಳಾಗುತ್ತಾಳೆ.

ಭೂವಲಯಕಿದು ಪೊಸತು ಮರಣಮಾದೊಡೆ ಮತ್ತೆ
ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು
ಕೈವಾರಿಸುವ ನಿಖಿಳ ಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು
"ಕಾವರಾರ್ ಕೊಲ್ವರಾರಳಿವರಾರುಳಿವರಾರ್
ಭಾವಿಪೊಡೆ ವಿಷ್ಣು ಮಾಯಾಮಯಮಿದೆಂದರಿದು
ನೀವೆಲ್ಲರುಂ ಕೃಷ್ಣಭಜನೆಗೈದಪುದೆಂದು" ಸಾರಿದಂ ಬೇಡಿಕೊಳುತ.

"ಹೀಗೆ ಎಲ್ಲವೂ ಸುಖಾಂತವಾಯಿತು. ಮುಂದೆ ಚಂದ್ರಹಾಸನು ಹರಿಭಕ್ತಿಯಿಂದ ರಾಜ್ಯಪಾಲನೆಗೈಯುತ್ತಿದ್ದ. ನಂತರದಲ್ಲಿ ಅವನಿಗೆ ಮಕರಧ್ವಜ ಹಾಗು ಪದ್ಮಾಕ್ಷ ಎಂಬ ಮಕ್ಕಳು ಜನಿಸಿದರು. ಈಗ ಚಂದ್ರಹಾಸನಿಗೆ ಮುನ್ನೂರು ವರುಷಗಳು."

"ಬುದ್ಧಿಪೂರ್ವಕಮಿಲ್ಲದಿಹ ಬಾಲಕರಿಗೆ ಪರಿ
ಶುದ್ಧ ಸಾಲಗ್ರಾಮಶಿಲೆಯ ಸಂಸರ್ಗದಿಂ
ದುದ್ಧತದ ಸಾಮ್ರಾಜ್ಯಪದವಿ ಕೈಸಾರ್ದುದೆನಲಿನ್ನು ಬೇಕೆಂದು ಬಯಸಿ
ಶ್ರದ್ಧೆಯಿಂ ಪ್ರತಿದಿನದೊಳರ್ಚಿಸುವ ನರನಾವ
ಸಿದ್ಧಿಯಂ ಪಡೆದಪನೊ ತನಗದರ ಪುಣ್ಯದಭಿ
ವೃದ್ಧಿಯಂ ಬಣ್ಣಿಸುವೊಡರಿದೆಂದು" ಫಲುಗುಣಂಗಾ ನಾರದಂ ಪೇಳ್ದನು.

ಹೀಗೆ ಚಂದ್ರಹಾಸನ ಕಥೆಯನ್ನು ನಾರದ ಮಹರ್ಷಿಗಳು ಅರ್ಜುನನಿಗೆ ವಿವರಿಸಿ ಹೇಳಿದರು.
ಅರ್ಜುನನಿಗೆ ಈ ಕಥೆಯನ್ನು ಕೇಳಿ ಚಂದ್ರಹಾಸನ ಬಗೆಗೆ ಗೌರವ-ಪ್ರೇಮಗಳುಂಟಾಗುತ್ತವೆ. ಆದರೆ ಅಶ್ವಮೇಧದ ಕುದುರೆಗಳು ಕುಂತಳನಗರದಲ್ಲಿ ಕಟ್ಟಲ್ಪಟ್ಟಿವೆ. ಆದ್ದರಿಂದ ಈಗ ಚಂದ್ರಹಾಸನೊಡನೆ ಯುದ್ಧ ನಡೆಯಲೇಬೇಕಲ್ಲವೇ?
------------------------------------------------------------------------------------------------
ನಗರದ ಹೊರವಲಯದಲ್ಲಿ ತಿರುಗಾಡುತ್ತಿದ್ದ ಯಜ್ಞದ ಕುದುರೆಗಳನ್ನು ಕಂಡು ಪದ್ಮಾಕ್ಷ,ಮಕರಧ್ವಜರು ಅವುಗಳ ಹಣೆಪಟ್ಟಿಯ ಮೇಲೆ ಬರೆದ ವೃತ್ತಾಂತವನ್ನೋದಿಕೊಂಡು ಅವನ್ನಲ್ಲಿಯೇ ಕಟ್ಟಿ ಅರಮನೆಗೆ ಬಂದು ತಂದೆ ಚಂದ್ರಹಾಸನಿಗೆ ತಿಳಿಸುತ್ತಾರೆ. ಚಂದ್ರಹಾಸನು "ಇದೇಕೆ ಹೀಗೆ ಮಾಡಿದಿರಿ, ಭೂಮಿಯೊಳಗೆ ಪ್ರತ್ಯಕ್ಷ ಧರ್ಮದಾಕೃತಿಯೆನಿಸುವ ಯುಧಿಷ್ಟಿರನ ಹಯಗಳನ್ನು ಏಕೆ ತಡೆದಿರಿ? ಈಗ ನಮ್ಮಿಂದ ಅವರ ಯಜ್ಞಕ್ಕೆ ತೊಂದರೆಯಾಗುವುದು ಬೇಡ, ಆ ಕುದುರೆಗಳನ್ನು ರಕ್ಷಿಸಿ ಅರ್ಜುನ-ಕೃಷ್ಣರು ಬಂದಾಗ ಅವರಿಗೆ ಒಪ್ಪಿಸಿ" ಎಂದು ಹೇಳಿ ಕಳುಹಿಸುತ್ತಾನೆ.
ಹಾಗು, ಕೃಷ್ಣಾರ್ಜುನರನ್ನು ಕಾಣುವ ಉತ್ಸುಕತೆಯಿಂದ ಚಂದ್ರಹಾಸನು ನಗರದ ಹೊರವಲಯಕ್ಕೆ ಬಂದು ಅವರಿಗಾಗಿ ಕಾಯುತ್ತಿರುತ್ತಾನೆ.
ಇತ್ತ ಅರ್ಜುನನ ಸೇನೆಯಾದರೋ ಯುದ್ಧಕ್ಕೆ ಸನ್ನದ್ಧವಾಗಿ ಬರುತ್ತಿದೆ.! ಚಂದ್ರಹಾಸನು ಹರಿಯ ದರ್ಶನಾರ್ಥಿಯಗಿದ್ದನೇ ಹೊರತು ಯುದ್ಧಾಪೇಕ್ಷೆ ಅವನಲ್ಲಿರಲಿಲ್ಲ.
ಇದನ್ನರಿತ ಶ್ರೀ ಕೃಷ್ಣನು ಚಂದ್ರಹಾಸನಿಗೆ ತನ್ನ ದಿವ್ಯ ಮಂಗಳರೂಪವನ್ನು ತೋರುತ್ತಾನೆ (ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ ಪೊಂಬಟ್ಟೆಯಂ ತಾಳ್ದು ಕೌಸ್ತುಭವ ಶೋಭಾವಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು....)
ನಂತರದಲ್ಲಿ ಕೃಷ್ಣನು ಅರ್ಜುನನಿಗೆ "ಅಯ್ಯಾ ಅರ್ಜುನ, ಕೇಳು, ಈ ಚಂದ್ರಹಾಸ ನನ್ನ ಪರಮಭಕ್ತ. ಇವನೊಂದಿಗೆ ಯುದ್ಧಕ್ಕೆ ತೊಡಗದೆ ಇವನನ್ನಾಲಂಗಿಸಿ ಸ್ನೇಹದಿಂದಿರು" ಎನ್ನಲು, ಅರ್ಜುನನು "..ಕಾಳಗವೆ ತನಗೆ ಕರ್ತವ್ಯಮೀ | ಪದದೊಳಾಲಿಂಗನಮುಚಿತವಲ್ಲ ವೃದ್ಧನಹನದರಿಂದ ಬೇಕಾದೊಡೀತಂಗೆ ವಂದಿಸುವೆನೆನೆ..."
ಕೃಷ್ಣನು "ತನ್ನ ಕಿಂಕರರ್ಗೆ ಮುದದೊಳೆರಗಿದೊಡೆ, ಮೇಣವರನಪ್ಪಿದೊಡೆ ತಪ್ಪದು ಮಾನವರ್ಗೆ ಕಪಿಲಾ ಗೋ ಸಹಸ್ರ ದಾನದ ಪುಣ್ಯ'ಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಕೇಳೆಂದ"

...... ಬಳಿಕ ಫಲುಗುಣಂ ಕೃಷ್ಣನ ನಿರೂಪಮಂ ಕೈಕೊಂಡು ಹರ್ಷದಿಂದಾಗ ನಿಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂಗೈಯಲು, ಆ ಪೊಡವಿಪತಿ(ಚಂದ್ರಹಾಸ) ನುಡಿದ"ನೆಲೆ ಪಾರ್ಥ ಕದನದಾಳಾಪಮಮಂ ನಿನ್ನೊಡನೆ ಮಾಡಿದೊಡೆ ನೃಪಮುಖಂ ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ರಕ್ಷಣಾರ್ಥಮಾಗಿ"
ಹೀಗೆ ಹೇಳಿ ಚಂದ್ರಹಾಸನು ತನ್ನ ಮಕ್ಕಳು ರಕ್ಷಿಸುತ್ತಿದ್ದ ಯಾಗದ ಕುದುರೆಗಳನ್ನು ತರಿಸಿ ಫಲ್ಗುಣನಿಗೆ ಒಪ್ಪಿಸುತ್ತಾನೆ.
ಮುಂದೆ ಅವರೆಲ್ಲರನ್ನು ತನ್ನ ಅರಮನೆಗೆ ಕರೆದುಕೊಂಡು ಹೋಗಿ ಬಹುವಿಧದಿಂದ ಅರ್ಜುನನ ಪರಿವಾರವೆಲ್ಲವನ್ನೂ ಸತ್ಕರಿಸಿ ಚಂದ್ರಹಾಸನು ತನ್ನ ರಾಜ್ಯವನ್ನು ಕೃಷ್ಣನಿಗೆ ಅರ್ಪಿಸುತ್ತಾನೆ. ಕೃಷ್ಣನಾದರೋ ಅರ್ಜುನನ ಸಮ್ಮತಿಯೊಡನೆ ಆ ರಾಜ್ಯದೊಡೆತನವನ್ನು ವಿಷಯೆಯ(ಚಂದ್ರಹಾಸನ ಹೆಂಡತಿ) ಮಗನಿಗೆ ಕೊಟ್ಟು ಹರಸುತ್ತಾನೆ.

"ಮುಪ್ಪಾದೆನೆಲೆ ಮಗನೆ, ಕೃಷ್ಣದರ್ಶನದಿಂದ
ತಪ್ಪದೆನಗಿನ್ನು ಮೋಕ್ಷದ ಲಾಭಮಸುರಾರಿ
ಗೊಪ್ಪಿಸುವೆನೀ ತನುವನಿವರಧ್ವರಂ ಮುಗಿದ ಬಳಿಕ ವನಕಾಂ ಪೋಪೆನು
ಬಪ್ಪುದಿಲ್ಲದರಿಂದ ನಗರಕರಸಾಗಿ ಸುಖ
ಮಿಪ್ಪುದೆಂ"ದಿರಿಸಿ ನಿಜತನಯರಂ ಶರಧಿಗೆಣೆ
ಯಪ್ಪ ಸೈನಿಕದೊಡನೆ ಪೊರಮಟ್ಟನಾ ಚಂದ್ರಹಾಸನರ್ಜುನನ ಕೂಡೆ.

"ನನಗೆ ವಯಸ್ಸಾಯಿತು. ಯಜ್ಞ ಮುಗಿಯುವವರೆಗೂ ಇವರೊಡನಿದ್ದು ನಂತರ ನಾನು ಅರಣ್ಯವಾಸಕ್ಕೆ ಹೋಗುತ್ತೇನೆ. ಈ ನಗರಕ್ಕೆ ನೀವು ಅರಸರಾಗಿ ಸುಖದಿಂದ ಬಾಳಿ" ಎಂದು ಹರಸಿ ಚಂದ್ರಹಾಸನು ಕೃಷ್ಣಾರ್ಜುನರೊಡನೆ ಹೊರಡುತ್ತಾನೆ.

"ಪುತ್ರಸಂಪದಮಾಯುರಾರೋಗ್ಯಮರಿವು ಶತ
ಪತ್ರನಾಭನ ಭಕ್ತಿ ಧೃಡವಾಗಲೀತನ ಚ
ರಿತ್ರಮಂ ಕೇಳ್ದವರ್ಗೆಂದು" ಹರಿ ವರವನಿತ್ತಾತನಂ ಕೂಡಿಕೊಂಡು
ಸುತ್ರಾಮಸುತನ ಕುದುರೆಗಳೊಡನೆ ತೆರಳ್ದಂ..."


THE END

Thursday 31 October 2013

ಪ್ರಾರ್ಥನೆ

ನಿನ್ನೊಲವು ನನ್ನನ್ನು ಚಿರವಾಗಿಸಿದೆ ಪ್ರಭುವೆ;
ನನ್ನೊಳಗಿನಾನಂದ ನೀನಾಗಿರುವೆ ವಿಭುವೆ.
ಎನ್ನೊಡಲ ಪಾತ್ರೆಯಿದು ಖಾಲಿಯಾದಂತೆಲ್ಲ
ಜೀವಜಲವನು ತುಂಬಿ ಹರಸುತ್ತ ಕಾದಿರುವೆ.

ಬೆಟ್ಟ-ಕಣಿವೆಯ ಹಾಯ್ದು ಕಿರುಗೊಳಲನೂದುತ್ತ
ಉಸಿರಿನಮೃತದೆ ನವ್ಯರಾಗಗಳ ನುಡಿಸಿರುವೆ;
ನಿನ್ನ ಮೃದುಸ್ಪರ್ಶದೊಳು ಹೃದಯವಿದು ಮೈತುಂಬಿ
ನುಡಿಯಿರದ ಭಾವಗಳನೀವಂತೆ ಮಾಡಿರುವೆ.

ಕೊನೆಯಿರದ ಕೊಡುಗೆಗಳನಿತ್ತಿರುವೆ ಈ ಕೈಗೆ.
ಕಾಲ ಕರಗಿದರೇನು? ಇನ್ನಷ್ಟು ಕೊಡಲಿರುವೆ.!
ಕೊಟ್ಟಿರುವೆ, ಕೊಡುತಿರುವೆ - ನಿನ್ನ ಪ್ರೇಮದ ಒರತೆ
ನಿನ್ನೊಲುಮೆ ನನಗಿರಲು ಬಾರದೆಂದಿಗು ಕೊರತೆ.

Sunday 27 October 2013

ನಾಗರಸ ಕವಿಯ 'ಕರ್ಣಾಟಕ ಭಗವದ್ಗೀತೆ' - ಒಂದು ಪರಿಚಯ


ಈಚೆಗೆ ಒಂದೆರೆಡು ಅಪರೂಪದ ಕನ್ನಡ ಕೃತಿಗಳಿಗಾಗಿ ಬಹುತೇಕ ಎಲ್ಲ ಪುಸ್ತಕ ಮಳಿಗೆಗಳಲ್ಲೂ ನನ್ನ ಹುಡುಕಾಟ ಸಾಗಿತ್ತು. ಆದರೆ ಎಲ್ಲಿಯೂ ಅವುಗಳ ಪತ್ತೆಯೇ ಇಲ್ಲ..! ಇಲ್ಲಾದರೂ ಅವುಗಳು ಲಭ್ಯವಿದೆಯೋ ಎಂಬ ಆಸೆಯಿಂದ ಬೆಂಗಳೂರಿನ 'ನವಕರ್ನಾಟಕ ಪ್ರಕಾಶನ' ಮಳಿಗೆಯನ್ನು ಹೊಕ್ಕೆ. ನನ್ನ ದುರಾದೃಷ್ಟ, ಅಲ್ಲಿಯೂ ಕೃತಿಗಳು ಲಭ್ಯವಿರಲಿಲ್ಲ.!!
ಹಾಗೇ ಅಲ್ಲಿದ್ದ ಪುಸ್ತಕಗಳ ಕಡೆಗೆ ಕಣ್ಣು ಹಾಯಿಸುತ್ತಿರುವಾಗ ಪುಸ್ತಕವೊಂದು ನನ್ನನ್ನು ಸೆಳೆಯಿತು. "ನಾಗರಸ ಕವಿಯ ಕರ್ಣಾಟಕ ಭಗವದ್ಗೀತೆ" ಎಂಬುದು ಅದರ ಶೀರ್ಷಿಕೆ.

'ಯಾರಪ್ಪ ಇವನು ನಾಗರಸ! ಎಲ್ಲಿಯೂ ಇವನ ಹೆಸರನ್ನು ಕೇಳಿದ ನೆನಪೇ ಬರುತ್ತಿಲ್ಲವಲ್ಲ!!' ಎಂದುಕೊಳ್ಳುತ್ತ ಪುಸ್ತಕವನ್ನೆತ್ತಿಕೊಂಡು ಒಂದೆರೆಡು ಪುಟಗಳನ್ನು ತಿರುವಿ ಹಾಕಿದೆ. ಅಚ್ಚರಿಯ ಜೊತೆಗೆ ಆನಂದವೂ ಆಯಿತು.!! ನಾನು ಹುಡುಕಿ ಬಂದ ಪುಸ್ತಕಗಳು ದೊರಕದೇ ಹೋದರೂ ಅಪೂರ್ವವೆನಿಸುವ ಪುಸ್ತಕವೊಂದು ಸಿಕ್ಕಿತಲ್ಲ ಎಂದು ಖುಷಿಯಾಯಿತು.

ಈ ಹೆಸರಿನ ಒಬ್ಬ ಕವಿ ಇದ್ದನೆಂದೂ, ಇಂತಹದ್ದೊಂದು ಕೃತಿ ಕನ್ನಡದಲ್ಲಿದೆಯೆಂದೂ ಅಲ್ಲಿಯವರೆಗೆ ನನಗೆ ತಿಳಿದೇ ಇರಲಿಲ್ಲ.. ಹೀಗೆ ಆಕಸ್ಮಿಕವಾಗಿ ತಿಳಿದದ್ದು ಒಳ್ಳೆಯದೇ ಆಯಿತು. ಪುಸ್ತಕವನ್ನು ನಾನು ಕೊಂಡ ನಂತರ ನನ್ನ ಹಲಕೆಲವು ಮಿತ್ರರಿಗೂ ಅದರ ಬಗ್ಗೆ ತಿಳಿಸಿದೆ - ಅದನ್ನು ಕೊಂಡು ಓದಲಿ ಎಂದು.. ಸಾಧ್ಯವಾದಲ್ಲಿ ನೀವೂ ಇದನ್ನು ಕೊಂಡು ಓದಿ :) ಇಂತಹ ಅಪರೂಪದ ಕೃತಿಯ ಬೆಲೆ ಕೇವಲ ೯೦ ರುಪಾಯಿಗಳಷ್ಟೇ.. ತುಂಬಾ ಹೆಚ್ಚೇನಲ್ಲ ಅಲ್ಲವೇ? 

ಸರಿ, ಇಷ್ಟಕ್ಕೂ ನಾಗರಸ ಯಾರು? 'ಕರ್ಣಾಟಕ ಭಗವದ್ಗೀತೆ' ವಿಶಿಷ್ಟತೆಗಳೇನು? - ಇದನ್ನು ಕುರಿತು ಒಂದು ಪರಿಚಯ ಲೇಖನ..

ಕವಿಯನ್ನು ಕುರಿತು :
ಕವಿ ನಾಗರಸನು ೧೭ನೆಯ ಶತಮಾನದಲ್ಲಿ ಜೀವಿಸಿದ್ದವನು. ಕೃತಿಯಲ್ಲಿ ಈತ ತನ್ನ ಊರು ವಿಳಾಸದ ಬಗೆಗೆ ಹೆಚ್ಚಾಗಿ ಏನೂ ಹೇಳಿಕೊಂಡಿಲ್ಲ. ಆದರೆ, ಪ್ರಕೃತ ಕೃತಿಯಲ್ಲಿ ಕವಿಯೇ ಹೇಳಿಕೊಳ್ಳುವಂತೆ ಈತ "ಯೋಗಿ ಕಾಶ್ಯಪ ಗೋತ್ರ ಸಂಭವ.." ಈತನ ತಂದೆಯ ಹೆಸರು ವಿಶ್ವೇಶ್ವರ ಎಂದು. ಇವನು ತನ್ನ ಗುರುವಾದ ಶಂಕರ ಎಂಬುವವನ ಸೂಚನೆಯಂತೆ ಕೃತಿಯನ್ನು ರಚಿಸಿದ್ದಾನೆ ಎಂದು ಕೃತಿಯಿಂದಲೇ ತಿಳಿದುಬರುತ್ತದೆ. ನಾಗರಸ ಕವಿಯು ರಚಿಸಿದ ಏಕೈಕ ಕೃತಿ 'ಕರ್ಣಾಟಕ ಭಗವದ್ಗೀತೆ' ಎಂದು ವಿದ್ವಾಂಸರ ಅನಿಸಿಕೆ. ನಾಗರಸನು ಕೃತಿಯನ್ನು ಸುಮಾರು ೧೬೫೦ರ ವೇಳೆಗೆ ರಚಿಸಿರಬಹುದು ಎಂದು ಊಹಿಸಲಾಗಿದೆ.

ಕೃತಿಯನ್ನು ಕುರಿತು:
ಮಹಾಭಾರತ ಕಾವ್ಯದ ಪ್ರಮುಖ ಘಟ್ಟವಾದ ಗೀತೋಪದೇಶವನ್ನು(ಯುದ್ಧರಂಗದಲ್ಲಿ ಭಗವಾನ್ ಶ್ರೀ ಕೃಷ್ಣ ಹಾಗು ಅರ್ಜುನನ ನಡುವೆ ನಡೆದ ಸಂವಾದ) ಕವಿ ನಾಗರಸನು ಅತ್ಯಂತ ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾನೆ. ಅದೂ ಹೇಗೆ, ಮೂಲ ಸಂಸ್ಕೃತದ ಪ್ರತಿಯೊಂದು ಶ್ಲೋಕವನ್ನು ಸ್ವಲ್ಪವೂ ಅರ್ಥ ಕೆಡದಂತೆ ಒಂದೊಂದು ಭಾಮಿನಿ ಷಟ್ಪದಿಯ ಪದ್ಯಗಳಲ್ಲಿ  ಕನ್ನಡೀಕರಿಸಿದ್ದಾನೆ.

ಮೂಲ ಮಹಾಭಾರತದ ಭಾಗಗಳನ್ನು ಸಂಸ್ಕೃತದಿಂದ ಹೀಗೆ ಕನ್ನಡಕ್ಕಿಳಿಸಿದ ಕವಿಗಳಲ್ಲಿ ಈತನೇನೂ ಮೊದಲನೆಯವನಲ್ಲ.. ಈತನಿಗೂ ಹಿಂದೆಯೇ ಹಲವಾರು ಕವಿಗಳು ಹಾಗೆ ಮಾಡಿದ್ದಾರೆ. ಆದರೆ ಇದೊಂದು ಹೊಸ ಪ್ರಯತ್ನ, ಸಂಪೂರ್ಣವಾಗಿ ಸಂಸ್ಕೃತ ಭಗವದ್ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದವನು ಇವನೊಬ್ಬನೇ..
ಎಲ್ಲಕ್ಕಿಂತ ನನ್ನನ್ನು ಹೆಚ್ಚಾಗಿ ಮೋಡಿ ಮಾಡಿದ್ದು ಆತನ ಭಾಷೆಯಲ್ಲಿನ ಸರಳತೆ, ಅಚ್ಚುಕಟ್ಟಾದ ನಿರೂಪಣೆ (ಹಳಗನ್ನಡದ ಪರಿಚಯವಿಲ್ಲದವರಿಗೂ ಕೂಡ ಸುಲಭವಾಗಿ ಅರ್ಥವಾಗಬಲ್ಲಂತಹ ಅತ್ಯಂತ ಸರಳ ಭಾಷೆಯಲ್ಲಿ ಈತ ಗೀತೆಯನ್ನು ಅನುವಾದಿಸಿದ್ದಾನೆ.)

ಒಂದು ಶ್ಲೋಕದಲ್ಲಿನ ಅರ್ಥ ಸಂಪತ್ತನ್ನೂ,ಶಬ್ದ ಸಂಪತ್ತನ್ನೂ ಸ್ವಲ್ಪವೂ ಕುಂದಾಗದಂತೆ ಒಂದೇ ಷಟ್ಪದಿಯಲ್ಲಿ(ಅಥವಾ ಬೇರಾವುದೇ ಪ್ರಕಾರದಲ್ಲಿ) ತುಂಬುವುದು ಸುಲಭದ ಮಾತೇನಲ್ಲ. ಅದು ಅತ್ಯಂತ ಕ್ಲಿಷ್ಟಕರ ಕಾರ್ಯವೇ ಹೌದು, ಆದರೆ ನಾಗರಸನು ಈ ಕಾರ್ಯದಲ್ಲಿ ಸಫಲನಾಗಿದ್ದಾನೆ. ಇದೊಂದು ಮಹತ್ಸಾಧನೆಯೇ ಅಲ್ಲವೇ?
ನಾಗರಸನ ಅನುವಾದ ಎಷ್ಟು ಸೊಗಸಾಗಿ, ಸುಲಭವಾಗಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು :
------------------------------------------------------------------------------------------------------------------
ಶ್ಲೋಕ : ನ ಕಾಂಕ್ಷೇ ವಿಜಯಂ ಕೃಷ್ಣಾ ರಾಜ್ಯಂ ಸುಖಾನಿ ಚ|
          ಕಿಂ ನೋ ರಾಜ್ಯೇನ ಗೋವಿಂದಾ ಕಿಂ ಭೋಗೈರ್ಜೀವಿತೇ ವಾ|   - .೩೨

ಅರ್ಥ : ಅರ್ಜುನ ಹೇಳುತ್ತಾನೆ "ಕೃಷ್ಣ, ನನಗೆ ಯುದ್ಧದಲ್ಲಿ ಗೆಲ್ಲುವುದೂ ಬೇಡ, ರಾಜ್ಯ-ಸುಖವೂ ಬೇಡ. ಗೋವಿಂದಾ, ರಾಜ್ಯ- ಭೋಗಗಳಿಂದ, ಇಂತಹ ಜೀವನದಿಂದ (ತನ್ನವರನ್ನೆಲ್ಲ ಕೊಂದ ನಂತರ ಪಡೆವ ವೈಭವದ ಜೀವನ) ನಮಗುಂಟಾಗುವ ಪ್ರಯೋಜನವಾದರೂ ಏನು?"

ಕರ್ಣಾಟಕ ಭಗವದ್ಗೀತೆಯಲ್ಲಿ :
ಘಾಸಿಯಾದೆನು ರಿಪುಗಳನು ಗೆಲು
ವಾಸೆ ತಾನೆನಗಿಲ್ಲ ರಾಜ್ಯವ
ನಾಸುಖಂಗಳ ಬಯಸುವವನಾನಲ್ಲ ಗೋವಿಂದ
ಕ್ಲೇಶದಿಂದಪಕೀರ್ತಿಯಿಂಬಹ
ದೇಶದಿಂ ಭೋಗಂಗಳಿಂ ನಾ
ವೇಸುದಿನ ಜೀವಿಸಲುಮಾವುದು ಫಲವು ಕೇಳೆಂದ.
------------------------------------------------------------------------------------------------------------------

ಶ್ಲೋಕ : ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ ಭೋಕ್ತುಂ ಭೈಕ್ಷ್ಯಂ ಅಪಿ ಇಹ ಲೋಕೇ
          ಹತ್ವಾ ಅರ್ಥ ಕಾಮಾನ್ ತು ಗುರೂನ್ ಇಹೈವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್ ||  - ೨.೫

ಅರ್ಥ : "ಕೃಷ, ಮಹಾನುಭಾವರಾದ ಗುರುಜನರನ್ನು ಕೊಲ್ಲುವುದಕ್ಕಿಂತ ಭಿಕ್ಷೆ ಬೇಡಿ ಜೀವಿಸುವುದೇ ಒಳ್ಳೆಯದಲ್ಲವೇ?
ಅದರ ಬದಲು ಅರ್ಥದಾಸೆಗೆ ಬಿದ್ದು ನಾನು ಇವರನ್ನು ಕೊಂದೆನಾದರೆ ಮುಂದೆ ನಾವು ಅನುಭವಿಸಬಹುದಾದ ಎಲ್ಲ ಭೋಗಗಳು ಇವರ ರಕ್ತದಿಂದ ತೊಯ್ದಿರುವುದಿಲ್ಲವೇ"

ಹಿರಿಯರನು ಗುರುಗಳನು ಕೊಲ್ಲದೆ
ತಿರಿದುಣುವುದೇ ಲೇಸು ಜಗದಲಿ
ಗುರುಗಳನು ನೆರೆಕೊಂದವರ ರಕ್ತಂಗಳಿಂ ನೆನೆದ
ಪರಕೆ ಸಲದ ಅನರ್ಥ ಕಾಮದ
ಪಿರಿದು ಭೋಗಂಗಳನು ಭೋಗಿಸಿ
ನರಕದಲಿ ಬೀಳುವೆನದೆಂತೈ ದೇವ ಹೇಳೆಂದ
-------------------------------------------------------------------------------------------------------------------

ಶ್ಲೋಕ : ದೇಹಿನೋಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
          ತಥಾ ದೇಹಾಂತರ ಪ್ರಾಪ್ತಿರ್ಧೀರಸ್ತತ್ರ ಮುಹ್ಯತಿ | - ೨.೧೩

ಅರ್ಥ : "ಅರ್ಜುನ, ಹೇಗೆ ದೇಹಿಯಾದ ಜೀವಾತ್ಮನಿಗೆ ದೇಹದಲ್ಲಿ ಬಾಲ್ಯ-ಯೌವನ ಮತ್ತು ವೃದ್ಧಾಪ್ಯಗಳು ಉಂಟಾಗುತ್ತವೆಯೋ ಹಾಗೆಯೇ ದೇಹ ತೀರಿದ ಬಳಿಕ ಬೇರೆ ಶರೀರವು ದೊರೆಯುತ್ತದೆ. ವಿಷಯವಾಗಿ ಧೀರರು ಮೋಹಿತರಾಗುವುದಿಲ್ಲ."

ತನುವನಭಿಮಾನಿಸಿದವಂಗೀ
ತನುವಿನಲಿ ಕೌಮಾರ ಯೌವನ
ದಿನದ ನಂತರ ಜರೆಗಳೆಂಬಿವನನುಭವಿಸುತೆ
ತನುವಿದನು ಬಿಟ್ಟನ್ಯ ದೇಹವ
ನನುಕರಿಸಿ ತಾನಿರ್ದಡದರಲಿ
ವಿನುತಧೀರನು ಮುಂದುಗೆಡನೆಲೆ ಪಾರ್ಥ ಕೇಳೆಂದ
-------------------------------------------------------------------------------------------------------------------

ಶ್ಲೋಕ : ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋsಪರಾಣಿ |
          ತಥಾ ಶರೀರಾಣಿ ವಿಹಾಯ ಜೀರ್ಣಾನ್ಯ ನ್ಯಾನಿ ಸಂಯಾತಿ ನವಾನಿ ದೇಹೀ | - ೨.೨೨

ಅರ್ಥ : ಮನುಷ್ಯನು ತನ್ನ ಹಳೆಯ ವಸ್ತ್ರವನ್ನು ಬಿಸುಟು ಬೇರೆ ಹೊಸ ವಸ್ತ್ರವನ್ನು ಧರಿಸುವಂತೆಯೇ, ಜೀವಾತ್ಮನು ಹಳೆಯ ಶರೀರವನ್ನು ಬಿಸುಟು ಬೇರೆ ಹೊಸ ಶರೀರವನ್ನು ಪಡೆಯುತ್ತಾನೆ.

ಹಳೆಯ ವಸ್ತ್ರಂಗಳನುಳಿದು ಹೊಸ
ಕೆಲವು ವಸ್ತ್ರಂಗಳನು ಹೊದೆವಂ
ತಿಳೆಯ ಭೋಗದದೃಷ್ಟ ತೀರಲು ಜೀವನೀತನುವ
ಕಳಚಿ ಹೊಸತಾದನ್ಯವಹ ತನು
ಗಳನು ತಾನೈದುತ್ತಿಹನು ನಿಜ
ತಿಳಿಯೆ ದೇಹಭ್ರಮಣೆ ಕೆಡುವುದು ಪಾರ್ಥ ಕೇಳೆಂದ.
-------------------------------------------------------------------------------------------------------------------

ಶ್ಲೋಕ : ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಂ|
          ತಥಾಪಿ ತ್ವಂ ಮಹಾಬಾಹೋ ನೈವಂ ಶೋಚಿತುಮರ್ಹಸಿ| - ೨.೨೬

ಅರ್ಥ : "ಆದರೂ, ಒಂದು ವೇಳೆ ನೀನು ಆತ್ಮನು ಸದಾ ಹುಟ್ಟುವವನು ಹಾಗೂ ಸದಾ ಸಾಯುವವನು ಎಂದು ತಿಳಿದರೂ ಕೂಡ, ಹೇ ಮಹಾಬಾಹುವೇ! ನೀನು ಪ್ರಕಾರವಾಗಿ ಶೋಕಿಸುವುದಕ್ಕೆ ಅರ್ಹನಲ್ಲ

ಮತ್ತಿದನು ಫಲುಗುಣನೆ ಕೇಳೈ
ನಿತ್ಯ ಜನ್ಮವ ಪಡೆವಾತ್ಮನು
ನಿತ್ಯ ಸಾವುಳ್ಳವನು ತಾನಹನೆಂದು ಮತಿಗೆಟ್ಟು
ಚಿತ್ತದಲಿ ನೀ ಬಗೆದೆಯಾದಡೆ
ಸತ್ತು ಹುಟ್ಟುವ ಗುಣವ ಕೊಡುವ
ಚಿತ್ತೆನಿಸಿದಾತ್ಮನ ಕುರಿತು ಶೋಕಿಸಲು ಬೇಡೆಂದ.
-------------------------------------------------------------------------------------------------------------------

ಶ್ಲೋಕ : ಜಾತಸ್ಯ ಹಿ ಧ್ರುವೋ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ |
          ತಸ್ಮಾದಪರಿಹಾರ್ಯೇsರ್ಥೇ ತ್ವಂ ಶೋಚಿತುಮರ್ಹಸಿ|| - .೨೭

ಅರ್ಥ : ಏಕೆಂದರೆ, ಅಭಿಪ್ರಾಯಕ್ಕನುಸಾರವಾಗಿ 'ಹುಟ್ಟಿದವನಿಗೆ ಸಾವು ನಿಶ್ಚಿತವಾಗಿದೆ, ಮತ್ತು ಸತ್ತವನು ಹುಟ್ಟುವುದೂ ನಿಶ್ಚಿತವಾಗಿದೆ.' ಆದ್ದರಿಂದ ಉಪಾಯವಿಲ್ಲದ ವಿಷಯವಾಗಿ ನೀನು ಶೋಕಿಸುವುದು ಯೋಗ್ಯವಲ್ಲ.

ಉದ್ಭವಿಸಿದಾತ್ಮಂಗೆ ಸಾವೇ
ವಿದಿತ ಸತ್ತಾತ್ಮಂಗೆ ಪುನರಪಿ
ಯುದುಭವಿಸುವುದು ನೆಲೆ ಕಣಾ ಕೇಳದು ನಿಮಿತ್ತದಲಿ
ಇದಕೆ ಪರಿಹಾರಾರ್ಥವಿಲ್ಲದ
ಹದನ ನೀನೇ ತಿಳಿದು ಕಡುಶೋ
ಕದಲಿ ಮರುಗುವುದುಚಿತವಲ್ಲೆಲೆ ಪಾರ್ಥ ಕೇಳೆಂದ.
-------------------------------------------------------------------------------------------------------------------

ಶ್ಲೋಕ : ಧೂಮೇನಾವ್ರಿಯತೇ ವಹ್ನಿಃ ಯಥಾದರ್ಶೋ  ಮಲೇನ |
          ಯಥೋಲ್ಬೇನಾವೃತೋ  ಗರ್ಭಃ ತಥಾ ತೇನೇದಮಾವೃತಮ್|| - .೩೮

ಅರ್ಥ : ಹೇಗೆ ಹೊಗೆಯಿಂದ ಬೆಂಕಿಯು, ಕೊಳೆಯಿಂದ ಕನ್ನಡಿಯು , ಜರಾಯು(ಗರ್ಭಕೋಶದ) ಪೊರೆಯಿಂದ ಗರ್ಭ(ಶಿಶು)ವು ಮುಚ್ಚಲ್ಪಟ್ಟಿರುತ್ತದೆಯೋ ಹಾಗೆ ಕಾಮವೆಂಬ ಪೊರೆಯಿಂದ ಜ್ಞಾನವು ಮುಚ್ಚಲ್ಪಟ್ಟಿದೆ.

ಹೊಗೆಯ ಬಲುಹಿಂದಗ್ನಿ ಕಿಲುಬುರೆ
ನೆಗೆದಿರಲು ದರ್ಪಣವು ಮಾಸಿಂ
ದೊಗೆದ ಗರ್ಭವು ಮುಸುಕಿಕೊಂಡಿರ್ಪಂತೆ ಹೃದಯದಲಿ
ನಿಗಮತತ್ವಜ್ಞಾನ ಕಾಮಾ
ದಿಗಳೆನಿಪ ಹಗೆಯಿಂದ ತಿಳಿದರ
ಬಗೆಗೆ ಮುಸುಕಿಕೊಂಡಿಹುದು ಕೇಳೆಂದನಸುರಾರಿ.
------------------------------------------------------------------------------------------------------------------ 

ತೀರ ಸರಳವಾದ ನಡುಗನ್ನಡ ಭಾಷೆಯಲ್ಲಿರುವ ಈ ಕೃತಿಯನ್ನು ಓದಿ ಜೀರ್ಣಿಸಿಕೊಳ್ಳುವುದು ಅಂತಹ ಕಷ್ಟವೇನಲ್ಲ. ಒಂದು ಸಾಧಾರಣ ಕನ್ನಡ ಶಬ್ದಕೋಶ ಜೊತೆಗಿದ್ದರಂತೂ ಇದನ್ನು ಓದಿ ಅರ್ಥ ಮಾಡಿಕೊಳ್ಳುವುದು ಇನ್ನೂ ಸುಲಭವೆನಿಸದೇ ಇರದು. ಯಾವುದಕ್ಕೂ ಒಮ್ಮೆ ಪ್ರಯತ್ನಿಸಿ ನೋಡಿ :) ಕನ್ನಡಕ್ಕೆ ಹೆಮ್ಮೆಯೆನಿಸುವಂತಹ ಇಂತಹ ಕೃತಿಗಳನ್ನು ಓದಿ, ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆಯಲ್ಲವೇ?