Thursday 18 July 2013

ಪಾಲಿಸೆನ್ನನು ಹರಿಯೆ

ಪಾಲಿಸೆನ್ನನು ಹರಿಯೆ; ಪಾಲಿಸೆನ್ನನು ದೊರೆಯೆ.
ಬಿಡದೆನ್ನ ಬೆಂಬತ್ತಿ ಬಗೆಗೆಡಿಸಿ ಕಾಡುತಿಹ,
ಹೊಡೆಹೊಡೆದು ಕೆಡೆಗೆಡೆದು ಛಲದಿಂದ ಬಂಧಿಸಿಹ -
ಆರು ಪಾಶದೆ ಸಿಲುಕಿ ನರಳುತಿಹುದೆನ್ನಾತ್ಮ;
ಅದನು ಪೊರೆದುದ್ಧರಿಸಿ ಸಲಹೆನ್ನ ಶ್ರೀ ಹರಿಯೆ.


ಅನ್ಯರುತ್ತಮಿಕೆಯೊಳು ಕರುಬುವುದು ಈ ಮನವು,
ಅನ್ಯರಾ ಅವನತಿಗೆ ಮೂಡುವುದು ಸಂತಸವು,
ಆನ್ಯರೇಳ್ಗೆಯ ಕಂಡು ಮೊರೆಯುವುದು ಮತ್ಸರವು;
ಇದರ ದೆಸೆಯೊಳು ನನ್ನ ಜೀವನವು ನಿಷ್ಫಲವು.
ಈ ದ್ವೇಷದುರಿ ಹರಿಸಿ ಕಾಯೆನ್ನ ಶ್ರೀ ಹರಿಯೆ.


ನಾನೆಂಬಹಂಕಾರ ತುಂಬಿಹುದು ಎದೆಯೊಳಗೆ,
ತಾತ್ಸಾರದಾ ಪೊರೆಯು ಮೂಡಿಹುದು ಕಣ್ಣೊಳಗೆ,
ಅಧಿಕರಣದಾ ಅಮಲು ಏರಿಹುದು ತಲೆಯೊಳಗೆ,
ಮದದ ಭೂತವು ಹೊಕ್ಕು ಮೆರೆಯುತಿಹುದೆನ್ನೊಳಗೆ;
ಅದರ ಚೇಷ್ಟೆಯ ಕಳೆದು ಕಾಯೆನ್ನ ಶ್ರೀ ಹರಿಯೆ.


ನನದೆಂಬ ಮಮಕಾರ - ಅಜ್ಞಾನದಾವಾರ;
ಮುಗಿಯದೆಂದಿಗು ಅದರ ಪಾಶದಾ ವಿಸ್ತಾರ –
ಸುಖದ ನೇಣಿನೊಳೆನ್ನ ಬಂಧಿಸಿದ ಹುನ್ನಾರ ;
ಮೋಹಸೆರೆಯೊಳು ಸಿಕ್ಕ ಜೀವವಿದು ನಿಸ್ಸಾರ.
ಇದರ ಬಂಧವ ಬಿಡಿಸಿ ಕಾಯೆನ್ನ ಶ್ರೀ ಹರಿಯೆ.


ಇರುವುದನು ಕಡೆಗಣಿಸಿ ಇರದುದನು ಧ್ಯಾನಿಸುವ
ಎನಿತೆಷ್ಟು ಪಡೆದರೂ ಮತ್ತಷ್ಟಿಗಾಶಿಸುವ
ಪರರ ಸೊತ್ತನು ಕಸಿದು ತನದೆಂದು ವಾದಿಸುವ
ತನ್ನ ಲಾಭವ ಮಾತ್ರ ನೆನೆನೆನೆದು ಸಾಧಿಸುವ
ಲೊಭದುಪಟಳ ಹರಿಸಿ ಕಾಯೆನ್ನ ಶ್ರೀ ಹರಿಯೆ.


ಆವ ಕಾರಣವಿರದೆ ಉದಿಸುವುದು ತಾಮಸವು –
ತನುಮನವ ಕೆಡಿಸುತ್ತ ಭ್ರಮೆಗೆಳೆಸುವಾವಹವು,
ಹೃದಯವನು ಕುದಿಸುತ್ತ ಮತಿಗೆಡಿಸುವಾನಲವು,
ಉರಿದುರಿದು ಕೊಲ್ಲುವ ಮಹದ್ವಿಲಯ ಕಾರಣವು;
ಈ ಕ್ರೋಧವನು ದಹಿಸಿ ಕಾಯೆನ್ನ ಶ್ರೀ ಹರಿಯೆ.


ಸುಖದ ಸಿರಿಯನು ಕುರಿತು ಸರ್ವಥಾ ಧ್ಯಾನಿಸಿಹ,
ಸಂಗಕ್ಕೆ ಹಾತೊರೆದು ಸಕಲವನ್ನಾರ್ಥಿಸಿಹ,
ಭೋಗದಾಸೆಗೆ ಸೋತು ಮೈಮರೆತು ಬಾಗುತಿಹ,
ವಿಷಯ ವಾಂಛೆಯ ಸುಳಿಗೆ ಮರಮರಳಿ ಬೀಳುತಿಹ –
ಮನವ ಕಾಮದಿಂ ಬಿಡಿಸಿ ಕಾಯೆನ್ನ ಶ್ರೀ ಹರಿಯೆ.


ಧೃಡದ ಭಕುತಿಯನಿತ್ತು; ಚಿತ್ತ ಶುದ್ಧಿಯನಿತ್ತು,
ನಿನ್ನ ನಾಮವ ನಂಬಿ ಬಾಳುವಾಸೆಯನಿತ್ತು,
ಮತಿಗೆಡದೆ ತೊಡಕುಗಳ ದಾಟುವಾ ಬಲವಿತ್ತು,
ಧೃತಿಗೆಡದೆ ಕಷ್ಟಗಳ ಸೈರಿಸುವ ಛಲವಿತ್ತು,
ದಯೆಯಿರಿಸಿ ನೀನಿನ್ನು ಕಾಯೆನ್ನ ಶ್ರೀ ಹರಿಯೆ.

Samharisu deva

ಇವರ ಸಂಹರಿಸು ದೇವ –
ನಿನ್ನ ಮರೆತವರನ್ನು,
ಮಲಿನ ಕಲೆತವರನ್ನು,
ಮೋಹ ಬೆರೆತವರನ್ನು,
ಸುಖದೆ ಮಲೆತವರನ್ನು –
ಬಿಡದೆ ನೀ ಸಂಹರಿಸು ದೇವ.


ಕಾಮ-ಲಾಲಸೆ ತುಂಬಿ,
ಅಚಿರ ದೇಹವ ನಂಬಿ,
ಪಾಪ ಕಾರ್ಯವ ಗೈದು
ಗರ್ವದಿಂದಲಿ ಮೆರೆವ
ಈ ದುರುಳರೆಲ್ಲರನು –
ಹರಿದು ನೀ ಸಂಹರಿಸು ದೇವ.


ಮಾನವತ್ವವ ಮರೆತು
ಮೃಗವು ನಾಚುವ ತೆರದಿ
ನೀಚ ಕೃತ್ಯವನೆಸಗಿ
ಮರೆಯೊಳಗೆ ಹುದುಗಿರುವ
ಈ ಘೋರ ರಕ್ಕಸರ –
ಸಿಗಿದು ನೀ ಸಂಹರಿಸು ದೇವ

Saturday 6 July 2013

Shiva kathana - saraLa ragaLe

ಬ್ರಹ್ಮನ ಹೃತ್ಸರಸಿಯೊಳುದಿಸಿದಾ ಶಾರದೆಯೆ
ವಾಣಿ; ದಿವ್ಯಕಾವ್ಯದ ರಾಣಿ, ವರದೆ ಕಲ್ಯಾಣಿ
ಹರಸೆನ್ನ ಭಾರತಿಯೆ, ರಜತ ವೀಣಾ ಪಾಣಿ.
ತೊದಲನುಡಿಯೊಳು ನಿನ್ನ ನುತಿಸುವೆನು ವಾಗ್ದೇವಿ
ಬಿಡದೆ ಕೈಯನು ಹಿಡಿದು ನಡೆಸೆನ್ನ ಸರಸತಿಯೆ
ಹೃದಯದೊಳು ನೀ ಬಂದು ನೆಲೆಸಮ್ಮ ಸ್ವರವನಿತೆ
ನಿನ್ನ ಕಂದನ ಹರಸಿ ನುಡಿಸಮ್ಮ ಸುರ ವಿನುತೆ
ಬಾ ಎನ್ನ ಕಾಮಿನಿಯೆ, ಆವರಿಸು ಹೃದಯವನು
ಬಾ ತಾಯೆ ಭಾರತಿಯೆ ತುಂಬೆನ್ನ ಆತ್ಮವನು
ನಲಿದು ನರ್ತಿಸು ಎನ್ನ ಜಿಹ್ವೆಯಾ ತುದಿಯಲ್ಲಿ (10)
ತುಂಬಿ ಪ್ರವಹಿಸು ತಾಯೆ ಭಾವದs ಕಡಲಿನಲಿ
ನುಡಿ ತಾಯೆ ನಡೆ ತಾಯೆ ಎನ್ನ ಜೀವವ ತುಂಬಿ
ನೆರೆದು ನೆಚ್ಚಿದೆ ತಾಯೆ ನಿನ್ನ ಕರುಣೆಯ ನಂಬಿ
ಭಾವಾಬ್ಧಿಯನು ಮಥಿಸಿ ಕಾವ್ಯಸುಧೆ ಹೊಮ್ಮಲಿs
ಶಬ್ಧಾರ್ಥ ಭಾವದೊಳು ನಿನ್ನ ಸೆಲೆ ತುಂಬಲಿ
ಪ್ರೇಮದಿಂದಲಿ ಹರಸಿ ಪೊರೆ ತಾಯೆ ಹರುಷದಲಿ
ಭಾಳನೇತ್ರನ ಕಥೆಯ ಪೇಳುವೆನು ವಿನಯದಲಿ :-


ಕಲ್ಪಾದಿಯೊಳು ಹರಿಯು ಯೋಗನಿದ್ರೆಯೊಳಿರಲು
ಅವನ ನಾಭಿಯೊಳಿಂದ ಶತಪತ್ರ ಹೊರಬರಲು
ಮೂಡಿದನು ನಾಲ್ಮುಖನು ಕಮಲದಳಗಳ ನಡುವೆ (20)
ಭಯಗೊಂಡ ನೆಲ್ಲೆಲ್ಲು ಕತ್ತಲೆಯು ತಾನ್ ಮೆರೆಯೆ
ತನ್ನ ಮೂಲವ ಹುಡುಕಿ ಬ್ರಹ್ಮ ನಡೆಯುತ ಬರಲು
ಕಂಡನೌ ಹರಿಯನ್ನು ನಾರ ಶಯನದೊಳಿರಲು
ಅಜನ ಬರವಂ ಕಂಡು ಹರಿಯು ತಾನೆಚ್ಚೆತ್ತು
"ಬಾ ಮಗನೆ, ಬಾ" ಎನಲು ಬಹು ಕೋಪವೇರಿತ್ತು
"ಎನ್ನ ಮಗನೆನುವೆ ಮರುಳೆ, ಭ್ರಾಂತಿಯೈಸಲೆ ನಿನಗೆ
ಹಿರಿಯ ನಾನಹೆನಯ್ಯ, ಮಗನಹೆಯೊ ನೀನೆನಗೆ"
ಎಂದು ಬ್ರ ಹ್ಮನು ನುಡಿಯೆ ಹರಿಯು ಮುನಿಸನು ತಳೆದು
"ಮರುಳು ನೀನಹೆ ಮಗನೆ ,ನೋಡು ಭ್ರಾಂತಿಯ ಕಳೆದು
ನಾಭಿಕಮಲದೊಳಿಂದ ಜನಿಸಿರುವೆ ನೀ ಮಗುವೆ (30)
ಪಿತನೆಂಬ ಗೌರವವ ಮರೆತು ಹರಟುವೆಯೇಕೆ"
ಎಂದು ಹರಿ ತಾನ್ ನುಡಿಯೆ ಉದಿಸಿತೀರ್ವರ ನಡುವೆ
ಬಹು ಘೋರ ತಾಮಸವು - ಮನಸು ರೋಷದ ಮಡುವೆ.
ಹೊರಳಿ ಹೊಯ್ದರು ಅವರು ನಾ ಮೇಲು ಮೇಲೆಂದು
ಕೆರಳಿ ಬಯ್ದರು ಕೆಲರ ನೀನು ಬಹು ಕೀಳೆಂದು
ಆನು ತಾನೆಂತೆಂದು ಕಾದು ಕಾದಿದರವರು -
ತಮ್ಮಲ್ಲಿ ತಾವೇ ಬಹುಶ್ರೇಷ್ಠರೆಂತೊರೆದು.
ದೃಷ್ಟಿ ಯುದ್ಧವ ಮಾಡಿ, ಮುಷ್ಠಿ ಯುದ್ದವ ಮಾಡಿ
ವಿಧವಿಧದಿ ಸೆಣೆಸುತ್ತ ಬಲು ನೊಂದರೀರ್ವರೂ;
ಮೇರುಗಿರಿ ಮಂದರವು ಕೆಣಕಿ ಹೋರುವ ತೆರದಿ (40)
ಬಡಿದು ಹೊಡೆದಾಡಿದರು ಆವ ಪರಿವೆಯು ಇರದೆ.
ಇಂತು ಇವರೀರ್ವರೂ ಹೊಯ್ದಾಡುತಿರಲಲ್ಲಿ
ಮೂಡಿತೈ ಕಾಂತಿಮಯ ಅಗ್ನಿಲಿಂಗವದೊಂದು -
ತುದಿಯಿರದೆ ಮೊದಲಿರದೆ ಆವ ಪರಿಧಿಯು ಇರದೆ -
ಮೂಡಿ ನಿಂತಿತು ತಾನು ಇವರ ಕಾದಿನ ನಡುವೆ.
ಆದಿ ಅಂತವದಿರದ ಜ್ಯೋತಿ ಲಿಂಗವ ಕಂಡು
ಕೌತಕದಿ ಮೈಮರೆತು ನಿಂತರೈ ಹರಿಯಜರು -
"ಏನಿದೀ ವಿಸ್ಮಯವು ಏನಿದೀ ವಿಭ್ರಮೆಯು
ಇನಿತು ಹಿರಿದಾದ ಲಿಂಗರೂಪವಿದೇನೆಂದು".


“ಅಹಹಹಾ!! ಇದೇನಿದು!! ಏನಿದೆತ್ತಣ ಬರವು!! (50)
ಏನಿದರ ಹೊಳಹೇನಿದರೆತ್ತರದೀ ನಿಲುವು!!
ಆವ ಮಾಯೆಯಿದಾವ ಛಾಯೆಯಿದು !! ಆವುದೀ
ತಂತ್ರಮಾವುದೀ ಮಂತ್ರಮಿದಾವುದೀ ಸೂತ್ರ!!
ಆರರೂಪವಿದಾರ ಬಲವೇನಿದೀ ಗಾತ್ರ!!”
ಎಂದು ಚೋದ್ಯಂಬಟ್ಟು ಬಹುವಾಗಿ ಚಿಂತಿಸುತ
ಹೋರುವುದ ಕಡೆಗಣಿಸಿ ತಿಳಿಯಲೆಂದೆಳಸಿದರು .
"ಏನಿದರ ಒಳ್ಮೆಯೋ! ಏನಿದರ ಮರ್ಮವೋ!" -
ಎಂದು ಪರಿಪರಿಯಾಗಿ - ಜಿಜ್ಞಾಸೆ ನಡೆಸುತ್ತ,
ತಳಹಿ ನಿಂತರು - ಅವರು - ಲಿಂಗವನು ನೋಡುತ್ತ.
"ತಿಳಿಯಬೇಕಿದರ ಹದನವನರಿಯಬೇಕಿದರ (60)
ನಿಯಮವನು, ಕಾಣಬೇಕಿದರ ಮೂಲವನೆಂದು"
ಇಬ್ಬರೂ ನಿಶ್ಚಯಿಸಿ ಹುಡುಕಿಬರಲೊಪ್ಪಿದರು.
ಮುನ್ನದೊಳಗಾವನಿದರಾದ್ಯಂತದೊಳೊಂದಂ
ಕಂಡುಬಂದರುಹುವನವನೇ ಎಮ್ಮೊಳಧಿಕಂ,
ಆತನಹನೆಮ್ಮೊಳಗೆ ಉತ್ತಮನೆಂದೊಪ್ಪಿದರು .


ನಂತರದೆ ಕಮಲಜನು ಹಂಸರೂಪವ ತಳೆಯೆ,
ಕಮಲಾಕ್ಷ ತಾನೊಂದು ವಿಶದಸೂಕರನಾಗೆ;
ಬ್ರಹ್ಮ ಮೇಲಕೆ ಹಾರೆ; ಹರಿಯು ತಳದೆಡೆ ಹೋರೆ,
ಈರ್ವರಿರುದಿಕ್ಕಿನೊಳು ಅರಸಿಬರಲೈದಿದರು.
ಅರಸುತ್ತಲರಸುತ್ತ ಬಹುದೂರ ಸಾರಿದರು; (70)
ತುದಿ-ಮೊದಲ ಕಾಣದೆಯೆ ಬಳಲುತ್ತ ಸಾಗಿದರು.
ಎನಿತು ದೂರವ ಕ್ರಮಿಸಿ ಎನಿತು ನೊಂದರು ಏನು?
ಕಾಣದಾಯಿತು ತಮಗೆ ಲಿಂಗಮೂಲವು ತಾನು.
"ಕಣ್ಣು ಕಾಣುವವರೆಗೆ ಕಾಣುವುದು ವಿಸ್ತರವು;
ಮತ್ತೆ ಮುಂದಕೆ ಹಾಯೆ ಇನ್ನಷ್ಟು ಕಾಣುವುದು.
ಇದರ ಕೊನೆಯದು ಎಲ್ಲಿ? ಇದರ ತುದಿಯಿಹುದೆಲ್ಲಿ?"
ಎನ್ನುತ್ತಲಿಬ್ಬರೂ ಬಳವಳಿಸಿ ಬಾಡಿದರು.
ಎನಿತಿವರು ಹಾರಿದರು ಅವಧಿ ತಿಳಿಯದೆಹೋಯ್ತು -
ಹರಿಗೆ ಕಾಣದೆಹೋಯ್ತು, ವಿಧಿಗೆ ಎಟುಕದೆಹೋಯ್ತು.


(to be continued..)