Sunday 9 August 2015

ಮತ್ತೆ ಅದೇ ಪ್ರಶ್ನೆ!

ಮುಂದೆ ಏನು? ಮತ್ತೆ ಏನು? -
ಮತ್ತೆ ಅದೇ ಪ್ರಶ್ನೆಯು;
ಕೇಳುವ ದನಿ ಮಾತ್ರ ಬೇರೆ,
ಕಾಡುತಿಹುದು ನಿತ್ಯವು.

ಮುಂದುಗಾಣದಂತೆ ಕಣ್ಣ
ಕತ್ತಲೆಯದು ಕವಿದಿದೆ;
ವಿಧಿಯ ಆಟದಲ್ಲಿ ಸಿಲುಕಿ
ಜೀವವಿಂದು ನಲುಗಿದೆ.

………
………

ಯಾವ ಮರುಳೊ ಯಾವ ಭ್ರಮೆಯೊ
ಮನವನಿಂದು ಮುಸುಕಿದೆ;
ಕಣ್ಣೆದುರಿನ ಸತ್ಯವನ್ನು
ತಾನು ಕಾಣದಾಗಿದೆ.

ಕಂಗಳೆರಡು ನೋಟ ಒಂದು -
ಎಂಬ ಸತ್ಯ ಮರೆತಿದೆ
ಯಾವ ಕಣ್ಣಿಗಾವ ಕನಸೊ
ಎಂದು ತಿಳಿಯದಾಗಿದೆ

ಎದೆಯ ತುಂಬ ತುಂಬಿ ನಿಂತ
ಭಯವು ಮತ್ತೆ ಕಾಡಿದೆ;
ಮುಂದುವರೆವ ದಾರಿ ಯಾವ -
ದಿಕ್ಕಿಗೆಂದು ಕೇಳಿದೆ.

ಬಗೆಯನರಿಯೆ ಬೆಳಕನರಿಯೆ
ಎಂದು ಮನವು ತೊಳಲಿದೆ;
ದಾರಿ ತೋರು ಗುರುವೆ ಎಂದು
ದೇವನನ್ನು ಬೇಡಿದೆ.

………
………

ಹೆದರಬೇಡ ಮನವೆ, ಕೇಳು -
ಮುಗಿಯುವುದೀ ರಾತ್ರಿಯು;
ತಮದ ಹಿಂದೆ ಬೆಳಕು ಬಹುದು,
ಇಂದಿಗಿಹುದು ನಾಳೆಯು.