Saturday 28 June 2014

ಆವ ಸಿರಿ ರಾಗವಿದು?

ಆವ ಸಿರಿ ರಾಗದೊಳು ಹಾಡುತಿಹೆ ದೊರೆಯೇ?
ಬಗೆಯಲೆನ್ನಳವಲ್ಲ, ಕೇಳುವೆನು ಮೌನದಲಿ.!

ನಿನ್ನ ಗಾನದ ಬೆಳಕು ಜಗವೆಲ್ಲ ತುಂಬಿಹುದು,
ಮಧುರತೆಯು ಮೈತುಂಬಿ ಜಡತೆಯದು ಅಳಿದಿಹುದು;
ಹರಿಯುತಿರೆ ಹೊನಲ ಸೊದೆ ಜೀವಜೀವವ ಮೀಟಿ,
ನಿನ್ನುಸಿರು ಪ್ರವಹಿಸಿದೆ ಗಗನದಾಚೆಯ ದಾಟಿ.

ಹೃದಯವಿದು ನಿನ್ನೊಡನೆ ತಾ ಹಾಡಬಯಸುವುದು!
ಚರಣಗಳನನುಕರಿಸಿ ಹಾಡಲೆಂದೆಳಸುವುದು,
ಮರುಕ್ಷಣದೆ ಪದ ಮರೆತು ದನಿ ಬರದೆ ತೊದಲುವುದು;
ನುಡಿಯಲಾರದೆ ಸೋತು ಕಂಬನಿಯ ಮಿಡಿಯುವುದು.

ನಿನ್ನ ಗಾನದ ಬಲೆಯ ಹೆಣೆದು, ನನ್ನನು ಸೆಳೆದು -
ಬಂಧಿಸಿಹೆ ಹೃದಯವನು ಎದೆಯ ಸೆರೆಮನೆಯೊಳಗೆ;
ರಾಗದಲೆಗಳ ಮೇಲೆ ತೇಲುತೇಳುತ ಸಾಗಿ
ಅರಮನೆಯೊ ಸೆರೆಮನೆಯೊ ಎಲ್ಲ ಮರೆತಿಹುದೆನಗೆ.

Monday 16 June 2014

ಶ್ರವಣಬೆಳಗೊಳ


ಪಂಪನ "ಆದಿಪುರಾಣ"ವನ್ನು ಓದುತ್ತ ಓದುತ್ತ ಅದರಲ್ಲಿನ ಬಾಹುಬಲಿಯ ಪಾತ್ರ ತುಂಬ ಎಂದರೆ ತುಂಬವೇ ಹಿಡಿಸಿಬಿಟ್ಟಿತು. ಬಾಹುಬಲಿಯ ಉನ್ನತ ವ್ಯಕ್ತಿತ್ವವಂತೂ ನನ್ನ ಮನಸನ್ನು ಸೂರೆಗೊಂಡಿತು. ಅಂತಹ ಭವ್ಯವ್ಯಕ್ತಿತ್ವದಭವ್ಯಮೂರ್ತಿ ಬಾಹುಬಲಿಯನ್ನು ನೋಡಲೇಬೇಕೆಂಬ ಮನದ ಹಂಬಲವನ್ನು ತಣಿಸಲು ನಾನು ಶ್ರವಣಬೆಳಗೊಳಕ್ಕೆ ಹೋಗಲೇಬೇಕಾಯಿತು.

ಬಾಹುಬಲಿಯ ಕಥೆಯನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು :

ಜೈನರ ಪ್ರಥಮ ತೀರ್ಥಂಕರನಾದ ಆದಿನಾಥ(ವೃಷಭನಾಥ)ನಿಗೆ ಭರತಬಾಹುಬಲಿಯೂ ಸೇರಿದಂತೆ ೧೦೨ ಜನ  ಗಂಡುಮಕ್ಕಳೂಬ್ರಾಹ್ಮಿಸೌಂದರಿ ಎಂಬ ಇಬ್ಬರು ಹೆಣ್ಣುಮಕ್ಕಳೂ ಇದ್ದರುತಾನು ತಪಕ್ಕೆ ತೆರಳುವ ಮುನ್ನ ಆದಿನಾಥನು ತನ್ನ ಎಲ್ಲ  ಮಕ್ಕಳಿಗೂ ಭೂಭಾಗಗಳನ್ನು ಹಂಚಿಕೊಟ್ಟು ಅವನ್ನು ಆಳುವ ಹೊಣೆಯನ್ನು ವಹಿಸಿ ಹೋಗುತ್ತಾನೆ.
 ಮಧ್ಯೆ ಭರತನ ಆಯುಧಾಗಾರದಲ್ಲಿ ಚಕ್ರರತ್ನವು ಉದಯಿಸುತ್ತದೆಭರತನು ಚಕ್ರವರ್ತಿಯೆನಿಸಿಕೊಳ್ಳಲು  ಚಕ್ರದ   ಮಾರ್ಗದರ್ಶನದಲ್ಲಿ ದಿಗ್ವಿಜಯಕ್ಕೆಹೊರಡುತ್ತಾನೆಆರು ಖಂಡಗಳ ರಾಜರನ್ನು ಜಯಿಸಿದ ನಂತರದಲ್ಲಿತಾನು  
 ಚಕ್ರವರ್ತಿಯಾದೆನೆಂಬ ಹೆಮ್ಮೆಯಿಂದ ಭರತನು ತನ್ನ ರಾಜಧಾನಿ ಅಯೋಧ್ಯೆಯ ಕಡೆಗೆ ಹೊರಡುತ್ತಾನೆಆದರೆ ಚಕ್ರವು ಅಯೋಧ್ಯಾ ನಗರವನ್ನು ಪ್ರವೇಶಿಸದೆ ಹೊರಗೆಯೇ       ನಿಲ್ಲುತ್ತದೆಅದು ಹಾಗೆ ನಿಲ್ಲಲು ಕಾರಣವೇನು ಎಂದು ಭರತನು ಕೇಳಲುಮಂತ್ರಿಯು "ಸ್ವಾಮಿತಾವು ಈಗಾಗಲೇ ಅನ್ಯ ರಾಜರೆಲ್ಲರನ್ನೂ ಜಯಿಸಿದ್ದಾಯಿತುಆದರೆ ತಮ್ಮ ಸಹೋದರರನನ್ನು ಇನ್ನೂ ಜಯಿಸಲಿಲ್ಲವಾದ ಕಾರಣ ಚಕ್ರವು ನಗರದೊಳಕ್ಕೆ ಪ್ರವೇಶಿಸದೆ ನಿಂತಿತುಅವರೆಲ್ಲರನ್ನೂ ಗೆದ್ದ ಹೊರತು   ಸಂಪೂರ್ಣ ಚಕ್ರವರ್ತಿತ್ವ ಬರುವುದಿಲ್ಲಎನ್ನುತ್ತಾನೆ.
ತಾನು ಚಕ್ರವರ್ತಿ ಎಂಬ ಗರ್ವದಿಂದ, 'ಎಲ್ಲರೂ ತನಗೆ ಶರಣಾಗತನಾಗಬೇಕೆಂದು’ ಭರತನು ತನ್ನ ನೂರು ಜನ ತಮ್ಮಂದಿರಿಗೂಮಲಸಹೋದರ ಬಾಹುಬಲಿಯ ಬಳಿಗೂ ದೂತರನ್ನು ಕಳುಸಿತ್ತಾನೆ. ಭರತನ ತಮ್ಮಂದಿರು ಅಣ್ಣನ ಬಳಿ ದಾಸರಾಗಿರಲು ಇಚ್ಛಿಸದೆ ಜಿನದೀಕ್ಷೆಯನ್ನು ಕೈಗೊಂಡರು.
"ಭರತನನ್ನು ಅಣ್ಣನೆಂದು ಗೌರವಿಸುವೆನೇ ಹೊರತು ಅವನು ಚಕ್ರವರ್ತಿನಾನು ಸಾಮಂತ ಎಂಬ ದಾಸ್ಯವನ್ನು ಎಂದಿಗೂ ಒಪ್ಪುವುದಿಲ್ಲ" ಎಂಬ ಸ್ವಾಭಿಮಾನ ಬಾಹುಬಲಿಯದು. ಆದ್ದರಿಂದ ಅನಿವಾರ್ಯವಾಗಿ ಅಣ್ಣನೊಡನೆ ಯುದ್ಧಕ್ಕೇ ಸಿದ್ಧನಾಗುತ್ತಾನೆ ಬಾಹುಬಲಿ
ಯುದ್ಧದಲ್ಲಿ ನೇ ಸೈನಿಕರ ಮಾರಣಹೋಮವನ್ನು ತಪ್ಪಿಸಲು ಉಭಯ ಪಕ್ಷಗಳ ಮಂತ್ರಿಗಳಿಬ್ಬರೂ ಪ್ರಾರ್ಥಿಸಲಾಗಿ - ಭರತ-ಬಾಹುಬಲಿ - ಇವರಿಬ್ಬರ ನಡುವೆ ಮಾತ್ರ ಯುದ್ಧವಾಗಬೇಕೆಂದು ನಿಶ್ಚಯವಾಗುತ್ತದೆ.

ದೃಷ್ಟಿಯುದ್ಧಜಲಯುದ್ಧ ಹಾಗೂ ಮಲ್ಲಯುದ್ಧ - ಮೂರರಲ್ಲೂ ಭರತನಿಗೇ ಸೋಲುಂಟಾಗುತ್ತದೆ. ಮಲ್ಲಯುದ್ಧದಲ್ಲಿ ತೊಡಗಿದ್ದಾಗ ಬಾಹುಬಲಿಯು ಭರತನನ್ನು ಮೇಲಕ್ಕೆ ಎತ್ತಿ ಹಿಡಿಯುತ್ತಾನೆ. ತನ್ನ ಅಣ್ಣನೊಡನೆಯೇ ಯುದ್ಧಕ್ಕೆ ತೊಡಗಿದುದರ ಬಗ್ಗೆ ಆಗ ಅವನಿಗೆ ಕೆಟ್ಟದೆನಿಸುತ್ತದೆ. ಹಾಗಾಗಿ ಭರತನನ್ನು ಗೌರವಪೂರ್ವಕವಾಗಿ ಮೆಲ್ಲಗೆ ಕೆಳಕ್ಕಿಳಿಸುತ್ತಾನೆ ಬಾಹುಬಲಿ. ಆದರೆ ತಮ್ಮನಿಂದ ಸೋತ ಅಪಮಾನವನ್ನು ಸಹಿಸದ ಭರತನು ಕೋಪದಿಂದ ಬಾಹುಬಲಿಯ ಮೆಲೆ ಚಕ್ರರತ್ನವನ್ನು ಪ್ರಯೋಗಿಸುತ್ತಾನೆ. ಚಕ್ರವು ಬಾಹುಬಲಿಗೆ ಯಾವ ಹಾನಿಯನ್ನೂ ಮಾಡದೆ ಅವನಿಗೆ ಪ್ರದಕ್ಷಿಣೆ ಹಾಕಿ ಅವನ ಪಕ್ಕ ಬಂದು ಕಾಂತಿಹೀನವಾಗಿ ನಿಲ್ಲುತ್ತದೆ.
ಕ್ಷಣದಲ್ಲಿ ಬಾಹುಬಲಿಗೆ ರಾಜ್ಯದಾಸೆಯ ಗ್ಗೆ ಜುಗುಪ್ಸೆ ಮೂಡುತ್ತದೆ. "ಅಣ್ಣತಮ್ಮಂದಿರ ನಡುವೆತಂದೆ-ಮಕ್ಕಳ ನಡುವೆಯೇ ಕೋಪವನ್ನು ತಂದಿಡುವ ರಾಜ್ಯವಿಮೋಹವು ಬಹಳ ಅಪಾಯಕಾರಿಯಾಗಿದೆ. ನಶ್ವರವಾದ ದೇಹವನ್ನೂರಾಜ್ಯವನ್ನೂ ಇನ್ನಾದರೂ ನೆಚ್ಚಿಕೊಳ್ಳದೆ ಇವೆಲ್ಲವನ್ನೂ ತ್ಯಜಿಸಿ ಜಿನದೀಕ್ಷೆಯನ್ನು ಕೈಗೊಳ್ಳುವೆ" ಎಂದು ನಿರ್ಧರಿಸುತ್ತಾನೆ.
ನಂತರದಲ್ಲಿ ತನಗೆ ಸೇರಿದ ರಾಜ್ಯವೆಲ್ಲವನ್ನೂ ಭರತನಿಗೇ ಒಪ್ಪಿಸಿತಾನು ಅಣ್ಣನೊಂದಿಗೆ ಅವಿನಯದಿಂದ ವರ್ತಿಸಿ ಮಾಡಿದ ದೋಷವನ್ನು ತಪವನ್ನಾಚರಿಸಿ ಕಳೆಯುತ್ತೇನೆ ಎಂದು ನಿಶ್ಚಯಿಸಿ ಬಾಹುಬಲಿಯು ಜೈನದೀಕ್ಷೆಯನ್ನು ಕೈಗೊಂಡು ದಿಗಂಬರನಾಗಿ ಉಗ್ರವಾದ ತಪಸನ್ನಾಚರಿಸಲು ತೊಡಗುತ್ತಾನೆ. ಅವನು ನಿಂತ ಸ್ಥಳದಲ್ಲಿ ಅವನ ಸುತ್ತಲೂ ಹುತ್ತಗಳು ಬೆಳೆದವುಅವನ ಕೈಕಾಲುಗಳ ಮೇಲೆಲ್ಲ ಬಳ್ಳಿಗಳು ಹಬ್ಬಿ ಹರಡಿದವು. ಹೀಗಿರಲು ಬಾಹುಬಲಿಯ ಘೋರ ತಪಸ್ಸಿನ ಫಲವಾಗಿ ಅವನ ಕರ್ಮಕ್ಷಯವಾಗಿಅವನು ಕೇಲಜ್ಞಾನವನ್ನು ಪಡೆದು ಮುಕ್ತಿಯನ್ನು ಹೊಂದಿದನು.

ಮೈಸೂರಿನಿಂದ ಸುಮಾರು ೮೦ ಕಿ.ಮಿ(ಬೆಂಗಳೂರಿನಿಂದ ಸುಮಾರು ೧೪೫ ಕಿ.ಮಿ) ಶ್ರವಣಬೆಳಗೊಳವು ಐತಿಹಾಸಿಕ ಮಹತ್ವವುಳ್ಳ ಕ್ಷೇತ್ರ. ಜೈನರ ಪಾಲಿಗೆ ಇದು ಮಹಾ ಪುಣ್ಯಕ್ಷೇತ್ರ. ಊರನ್ನು ತಲುಪಿದ ತಕ್ಷಣ ೨೪ ತೀರ್ಥಂಕರರ ಮೂರ್ತಿಗಳಿರುವ ಪ್ರಾಚೀನ ಜಿನಾಲಯವೊಂದು ಕಾಣುತ್ತದೆ. ಪ್ರಥಮ ತೀರ್ಥಂಕರ ಆದಿನಾಥನಿಂದ ಹಿಡಿದು ಮಹಾವೀರನವರೆಗೂ ಎಲ್ಲ ತೀರ್ಥಂಕರರ ಬಿಂಬಗಳೂ ಇವೆ ಜಿನಾಲಯದ ಗರ್ಭಗುಡಿಯೊಳಗೆ. ಪದ್ಮಾವತಿಯ ವಿಗ್ರಹವೂ ಇದೆ ಆಲಯದಲ್ಲಿ.
ಆಲಯದ ಒಳಗಿನ ನಿಶ್ಶಬ್ದವು ನಮ್ಮ ಮನಸಿನಲ್ಲಿ ಶಾಂತಿಯನ್ನೂ, ಅಲೌಕಿಕವಾದ ಆನಂದವನ್ನೂ ಮೂಡಿಸುತ್ತದೆ.
ಆಲಯದ ಎಡಮಗ್ಗುಲಲ್ಲಿ ಎರಡು ಶಾಸನಗಳು ಕಂಡುಬರುತ್ತದೆ. ಅವುಗಳಲ್ಲಿ ಒಂದು ವಿಜಯನರದ ಅರಸು ಬುಕ್ಕರಾಯರು ಹಾಕಿಸಿದ್ದು(ಕ್ರಿ. ೧೩೬೮). ಕಾಲಕ್ಕೆ ಜೈನರಿಗೂ ವೈಷ್ಣವರಿಗೂ ಮೂಡಿದ್ದ ವಿವಾದವೊಂದನ್ನು ಬುಕ್ಕರಾಯರು ನಿವಾರಿಸಿ ಎರಡೂ ಬಣಗಳ ನಡುವೆ ರಾಜಿ ಮಾಡಿಸಿದರು. ಒಪ್ಪಂದದ ಒಕ್ಕಣೆಯನ್ನು ಶಾಸನದಲ್ಲಿ ದಾಖಲಿಸಲಾಗಿದೆ.
 
 

 ಲಯದ ಪಕ್ಕದಲ್ಲೇ ಇನ್ನೊಂದು ಜಿನಾಲಯವಿದೆ. ಅಲ್ಲಿ ಆದಿನಾಥನ ಜನ್ಮಾಂತರದ ಕಥಾಸಂದರ್ಭಗಳ ಚಿತ್ರಣವುಳ್ಳ ಸುಂದರವಾದ ಪ್ರಾಚೀನ ವರ್ಣಚಿತ್ರಗಳಿವೆ.

ಆಲಯಕ್ಕೆ ಅನತಿ ದೂರದಲ್ಲಿಯೇ ವಿಂಧ್ಯಗಿರಿಯಿದೆ. ಕಡಿದಾದ ಬೆಟ್ಟದ ತುದಿಯನ್ನು ತಲುಪಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕು. ಬೆಟ್ಟದ ತುದಿಯನ್ನು ತಲುಪುವ ಮುನ್ನ ಮೊದಲು ನಮಗೆ ಒದೆಗಲ್ಲು ಬಸದಿ ಕಾಣಿಸುತ್ತದೆ. ಕಲ್ಲುಗಂಭಗಳನ್ನು ಆಧಾರವಾಗಿ ನಿಲ್ಲಿಸಿದ್ದರಿಂದ ಇದಕ್ಕೆ ಒದೆಗಲ್ಲು ಬಸದಿ ಎಂಬ ಹೆಸರು ಬಂದಿರುವಂತೆ ತಿಳಿದುಬರುತ್ತದೆಬಸದಿಯೊಳಗೆ ಸುಂದರ ಜಿನಮೂರ್ತಿಗಳಿವೆ.

ಬಸದಿಯ ಪಕ್ಕದಲ್ಲಿ ಸುಮಾರು ಸಾವಿರ ವರ್ಷಗಳಷ್ಟು ಹಳೆಯವಾದ ಕೆಲವು ಬರಹಗಳು ಕಾಣಿಸುತ್ತವೆ. ಬರಹಗಳಲ್ಲಿ ಕೆಲವು ಕನ್ನಡ ಹಾಗೂ ಕೆಲವು ದೇವನಾಗರಿ ಲಿಪಿಯಲ್ಲಿವೆ. ಬಹುಶಃ ಆಗ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ ಮಹನೀಯ ವ್ಯಕ್ತಿಗಳು ಯಾರಾದರೂ ಬರೆಸಿರುವ ಬರಹಗಳವು.

ಮುಂದೆ, ಮಂಟಪವೊಂದರ ನಡುವೆ ಸುಂದರವಾದ ಕುಸುರಿ ಕೆತ್ತನೆಯನ್ನುಳ್ಳ ಸುಮಾರು ಹತ್ತು ಅಡಿ ಎತ್ತರದ ತ್ಯಾಗದ ಕಂಬವು ಕಾಣಿಸಿ ನಮ್ಮ ಮನಸೆಳೆಯುತ್ತದೆ.



ಇದೇ ಸ್ಥಳದಿಂದ ನೋಡಿದರೆ ಎದುರಿಗಿರುವ ಚಂದ್ರಗಿರಿ, ಅದರ ಮೇಲಿನ ಜಿನಾಲಯ ಹಾಗೂ ಊರಿನ ದೃಶ್ಯವು ಅತಿ ರಮಣೀಯವಾಗಿ ಕಾಣುತ್ತದೆ.

 



ಮುಂದಕ್ಕೆ ಮೆಟ್ಟಿಲುಗಳನ್ನು ಹತ್ತಿ ಹೋಗುತ್ತಿದ್ದಂತೆ ಅಖಂಡ ದ್ವಾರವು ಎದುರಾಗುತ್ತದೆ. ಅದರ ಎರಡೂ ಪಾರ್ಶ್ವಗಳಲ್ಲಿ ಭರತ ಹಾಗು ಬಾಹುಬಲಿಯ ಚಿಕ್ಕ ಮೂರ್ತಿಗಳಿವೆ.
ಮುಂದೆ ಇರುವ ಹತ್ತಾರು ಮೆಟ್ಟಿಲುಗಳನ್ನು ಹತ್ತುತ್ತಿದಂತೆಯೇ ದಿವ್ಯವಾದ ಲೋಕವೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಸುಮಾರು ೧೮ ಮೀಟರ್ ಎತ್ತರದ ಬಾಹುಬಲಿಯ ಭವ್ಯಮೂರ್ತಿಯು ನಮ್ಮನ್ನು ಹಾರೈಸಿ ಆಹ್ವಾನಿಸುತ್ತದೆ. ಅವನ ಭಂಗಿಯೇನು, ಅವನ ಗಾಂಭೀರ್ಯವೇನು.. ಅಬ್ಬ! ಅದ್ಭುತವೆಂದು ಹೇಳದೇ ಇರಲಾಗದು.
ಗುಂಗುರು ಗುಂಗುರಾದ ಕೂದಲು, ದುಂಡಗಿನ ಮುಖ, ಮುಖದಲ್ಲಿ ಕಾಣುವ ಶಾಂತಭಾವ, ದಿವ್ಯ ತೇಜಸ್ಸು. ನಾವು ಕಷ್ಟಪಟ್ಟು ಅಷ್ಟು ಮೆಟ್ಟಿಲುಗಳನ್ನು ಹತ್ತಿಬಂದದ್ದು ಸಾರ್ಥಕವಾಯಿತು ಎನ್ನುವಂತಹ, ಧನ್ಯತೆಯ ಭಾವ ನಮ್ಮಲ್ಲಿ ಮೂಡದೇ ಇರದು.



                            ದಳಿತಾಂಭೋಜಾಸ್ಯನಿಂದೀವರದಳನಯನಂ ಪಕ್ವಬಿಂಭಾಧರಂ ಕೋ
                            ಮಳವಂಶಶ್ಯಾಮನಂಭೋಧರರವನಳಿನೀಕುಂತಳಂ ವ್ಯೂಢವಕ್ಷ
                            ಸ್ಸ್ಥಳನಾಜಾನುಪ್ರಲಂಬ ಪ್ರಬಲ ಭುಜಯುಗಂ ಚಾರುವೃತ್ತೋರುಯುಗ್ಮಂ
                            ಕುಳಶೈಲೇಂದ್ರೋನ್ನತಂ ಬಾಹುಬಲಿ ಸಕಲ ಸೌಂದರ್ಯಸಂಪನ್ನನಾದಂ                                                                                                                           - (ಪಂಪನಆದಿಪುರಾಣ.೫೧)

"ಅರಳಿದ ಕಮಲದಂತಹ ಮುಖವನ್ನೂ, ನೈದಿಲೆಯಂತಹ ಕಣ್ಣುಗಳನ್ನೂ, ಕಳಿತ ತೊಂಡೆಹಣ್ಣುಗಳಂತಿರುವ ತುಟಿಗಳನ್ನೂ ಹೊಂದಿದ್ದ ಬಾಹುಬಲಿಯು ಕೋಮಲವಾದ ಬಿದಿರಿನಂತೆ ಶ್ಯಾಮಲನಾಗಿದ್ದನು. ಅವನು ಕಾಳಮೇಘದಂತಹ ಗಂಭೀರ ಧ್ವನಿಯನ್ನು ಹೊಂದಿದ್ದನು. ಅವನ ಕೂದಲು ಕಪ್ಪಗಿದ್ದವು, ಎದೆಯು ಅತಿ ವಿಶಾಲವಾಗಿತ್ತು. ತೋಳುಗಳು ಮಂಡಿಯವರೆಗೆ ನೀಳವಾಗಿದ್ದವು, ತೊಡೆಗಳು ದುಂಡಾಗಿಯೂ ಸುಂದರವಾಗಿಯೂ ಇದ್ದವು. ಕುಲಶೈಲದಂತೆ ಉನ್ನತವಾಗಿದ್ದ ಬಾಹುಬಲಿಯು ಹೀಗೆ ಸಕಲ ಸೌಂದರ್ಯ ಸಂಪನ್ನನಾದನು"

ಪಂಪನು ಮಾಡಿರುವ ಬಾಹುಬಲಿಯ ವರ್ಣನೆಯೇ ಮೈವೆತ್ತು ನಿಂತಂತೆನಿಸಿತು - ಬಾಹುಬಲಿಯ ಮೂರ್ತಿಯನ್ನು ನೋಡಿ. ಬಹುಶಃ ಪದ್ಯವನ್ನೇ ಆಧರಿಸಿ ಚಾವುಂಡರಾಯನು ಮೂರ್ತಿಯನ್ನು ಕೆತ್ತಿಸಿದ್ದಿರಬೇಕು.

ಹೌದುಸುಂದರವಾದ   ಬಾಹುಬಲಿಯ ಮೂರ್ತಿಯ ಬಗ್ಗೆ ಹೇಳುವಾಗ ಅದನ್ನು ಕೆತ್ತಿಸಿದ ಚಾವುಂಡರಾಯನ ಬಗೆಗೂ ಹೇಳಲೇಬೇಕುವಂಶದ ಮೂಲದಿಂದ ಬ್ರಹ್ಮ-ಕ್ಷತ್ರಿಯನಾಗಿದ್ದ ಇವನು ಹುಟ್ಟು ಮತ್ತು ಆಚರಣೆಯಿಂದ ಜೈನಧರ್ಮಕ್ಕೆ ಸೇರಿದವನುಗಂಗವಂಶದ ದೊರೆಗಳ ಬಳಿ ಸೇನಾಧಿಪತಿಯಾಗಿದ್ದ ಚಾವುಂಡರಾಯನು ಸಾಹಿತ್ಯ ಹಾಗೂ ಸಂಸ್ಕೃತಿಗಳಿಗೆ ಪೋಷಕನಾಗಿದ್ದವನುಅಷ್ಟೇ ಅಲ್ಲಈತ ಸ್ವತಃ ಕವಿ   ಕೂಡ'ತ್ರಿಷಷ್ಠಿಲಕ್ಷಣಮಹಾಪುರಾಣ','ಚಾಮುಂಡರಾಯ ಪುರಾಣ', ಹಾಗೂ 'ಗೊಮ್ಮಟ ಸಾರಇವನ ಕೃತಿಗಳುಇವುಗಳಲ್ಲಿ ತ್ರಿಷಷ್ಠಿಲಕ್ಷಣಮಹಾಪುರಾಣ  ಗದ್ಯ_ಪದ್ಯ ಮಿಶ್ರಿತವಾದ ಕೃತಿಜಿನಸೇನಾಚಾರ್ಯ ಹಾಗೂ ಗುಣಭದ್ರಾಚಾರ್ಯರು ಸಂಸ್ಕೃತದಲ್ಲಿ ರಚಿಸಿದ್ದ 'ಮಹಾಪುರಾಣ' ಕನ್ನಡ ಅವತರಣಿಕೆ  ಕೃತಿ ಕೃತಿಯ ರಚನೆಯಲ್ಲಿ ಪಂಪನಿಂದಲು ಬಹಳವಾಗಿ ಪ್ರಭಾವಕ್ಕೊಳಗಾಗಿದ್ದಾನೆ ಚಾವುಂಡರಾಯ.

ವೃಷಭನಿಂದ ಹಿಡಿದು ಮಹಾವೀರನವರೆಗೆ ೨೪ ಜನ ತೀರ್ಥಂಕರರ ಜೀವನವನ್ನೂ ಸೇರಿದಂತೆ ೬೩ ಜೈನ ಮಹನೀಯ  ವ್ಯಕ್ತಿಗಳ ಜೀವನವನ್ನು ಕುರಿತು ಕನ್ನಡದಲ್ಲಿ ಸಮಗ್ರವಾಗಿರುವ ಕೃತಿ ಇದೊಂದೇ.

ಸುಮಾರು ೯೭೩ರ ವೇಳೆಗೆ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಮೂರ್ತಿಯನ್ನು ಕೆತ್ತಿಸಿದನೆಂದು ಅಂದಾಜಿಸಲಾಗಿದೆ. ರನ್ನ, ನಾಗಚಂದ್ರ, ನೇಮಿಚಂದ್ರ ಮುಂತಾದವರ ಕೃತಿಗಳಲ್ಲಿ ಚಾವುಂಡರಾಯನ ಧರ್ಮ ಪಾರಾಯಣತೆ ಹಾಗೂ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಬಗೆಗೆ ಉಲ್ಲೇಖವಿದೆ.
ಚಾವುಂಡರಾಯನ ತಾಯಿಯು ತನ್ನ ಮಗನನ್ನು ಪ್ರೀತಿಯಿಂದ ಗೊಮ್ಮಟನೆಂದು ಕರೆಯುತ್ತಿದ್ದಳೆಂದೂ , ಹಾಗಾಗಿ ಚಾವುಂಡರಾಯನು ಕೆತ್ತಿಸಿದ    ಬಾಹುಬಲಿಯ ಮೂರ್ತಿಗೆ ಗೊಮ್ಮಟೇಶ್ವರ ಎಂಬ ಹೆಸರೂ ಬಂದಿತೆಂದೂ ಆಲಯದ ಬಳಿಯಲ್ಲಿನ ಬರಹಗಳಿಂದ ತಿಳಿದುಬರುತ್ತದೆ. ಹನ್ನೆರೆಡು ವರ್ಷಗಳಿಗೆ ಒಮ್ಮೆ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ಮಹೋತ್ಸವು ನಡೆಯುತ್ತದೆ.
೫೮. ಅಡಿ ಎತ್ತರದ ಸುಂದರ ಮೂರ್ತಿಯನ್ನು ಕೆತ್ತಿದ ಶಿಲ್ಪಿಯ ಹೆಸರು ಅರಿಷ್ಟನೇಮಿ ಎಂದು ಕೆಲವರ ಅಭಿಪ್ರಾಯ.

ಗೊಮ್ಮಟನ ಮೂರ್ತಿ ಇರುವ ವಿಂಧ್ಯ ಗಿರಿಯ ಎದುರಿನಲ್ಲಿಯೇ ಸ್ವಲ್ಪ ದೂರಕ್ಕೆ ಚಂದ್ರಗಿರಿ ಎಂಬ ಚಿಕ್ಕದೊಂದು ಬೆಟ್ಟವಿದೆ. ಅದರ ಮೇಲೆ ಕೂಡ ಪ್ರಾಚೀನವಾದ ಜೈನ ಬಸದಿಯೊಂದಿದೆ. ಇದು ಬ್ರಹ್ಮದೇವನ ಬಸದಿ ಎಂದೇ ಪ್ರಖ್ಯಾತವಾಗಿದೆ.

ಇವಿಷ್ಟೇ ಅಲ್ಲದೆ ಶ್ರವಣಬೆಳಗೊಳದಲ್ಲಿ ಒಂದು ಜೈನ ಮಠವೂ ಇದ್ದು ಮಠವು ಕ್ಷೇತ್ರದಲ್ಲಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.
ಇಷ್ಟು ವಿಶಿಷ್ಟ ಮಹತ್ವಗಳನ್ನುಳ್ಳ  ಶ್ರವಣಬೆಳಗೊಳ ಕ್ಷೇತ್ರವು ಜೈನರ ಕಾಶಿ ಎಂದೇ ಪ್ರಸಿದ್ಧವಾಗಿದೆ.