Thursday 23 April 2015

ನಾನೂ... ನನ್ನ ಕನಸೂ...

ನನಗೂ ಕನಸುಗಳಿಗೂ ಬಹಳ ವಿಚಿತ್ರವಾದ ನಂಟು.
ಸುಮಾರು ಹತ್ತು ವರ್ಷಗಳಿಂದ ನನಗೆ ಯಾವುದಾದ್ರೂ ಕನಸಿನಿಂದ ಎಚ್ಚರಾದ ತಕ್ಷಣ ಆ ಕನಸಿನ ಕುರಿತು - ಏನು ನೆನಪಿದ್ದರೆ ಅದು, ಎಷ್ಟು ನೆನಪಿದ್ದರೆ ಅಷ್ಟು - ನನ್ನ ದಿನಚರಿಯಲ್ಲಿ ಬರೆದುಕೊಂಡುಬಿಡುತ್ತೇನೆ. ಆಮೇಲೆ ಆ ಕನಸನ್ನು ಓದಲು ಮಜವಾಗಿರುತ್ತೆ. 
ನಾವು ಕಾಣುವ ಕನಸುಗಳಿಗೆಲ್ಲ ಲಾಜಿಕ್ಕು ಇರಬೇಕೆಂದೇನೂ ಇಲ್ಲ. ಹಾಗಂತ ಯಾವುದೇ ಲಾಜಿಕ್ಕೂ ಇಲ್ಲದ ಕನಸುಗಳಷ್ಟೇ ಕಾಣುತ್ತವೆಂದೂ ಅಲ್ಲ (ನನ್ನ ಅನುಭವದ ಮಟ್ಟಿಗೆ ಈ ಮಾತುಗಳನ್ನು ಹೇಳುತ್ತಿದ್ದೇನಷ್ಟೇ!).
ಕೆಲವು ಕನಸುಗಳು ನಮಗೆ ನೆನಪಿನಲ್ಲಿ ಉಳಿಯುವುದೂ ಇಲ್ಲ. ನಾನು ಕೇಳಿರುವ ಮಟ್ಟಿಗೆ ನಮಗೆ ಕನಸಿನಿಂದ ಎಚ್ಚರಾದ ಸ್ವಲ್ಪ ಹೊತ್ತಿನವರೆಗು ಮಾತ್ರ ನಾವು ಕಂಡ ಕನಸುಗಳು ನಮಗೆ ನೆನಪಿರುತ್ತವಂತೆ.
ಅದಕ್ಕೇ ನನಗೆ ಎಚ್ಚರಾದ ತಕ್ಷಣ -ಅದು ಯಾವ ಜಾವವಾಗಿದ್ದರೂ- ಆಗಲೇ ಅಂದಿನ ಕನಸನ್ನು ಕುರಿತು ಬರೆದುಕೊಂಡುಬಿಡುತ್ತೇನೆ. ಈಗಲೂ ಒಮ್ಮೊಮ್ಮೆ ನನ್ನ ದಿನಚರಿಯಿಂದ ನಾನು ಕಂಡ ಕೆಲವು ಕನಸುಗಳನ್ನು ಕುರಿತು ಓದಿದಾಗ - ’ನಿಜಕ್ಕೂ ಹೀಗೆಲ್ಲ ಕನಸು ಕಂಡಿದ್ದೆನೆ ನಾನು!’ ಅಂತ ಅನಿಸಿದ್ದುಂಟು :)

ಎಷ್ಟೋ ಬಾರಿ ನಿಜಜೀವನದ ಹಲಾವರು ಸಣ್ಣಪುಟ್ಟ ವಿಷಯಗಳೆಲ್ಲ ಕಲೆತು ಹೊಸತೊಂದು ಕತೆಯಂತೆ ಕನಸಿನಲ್ಲಿ ಕಂಡದ್ದೂ ಇದೆ. ಆಗೆಲ್ಲ ಬಹಳ ಆಶ್ಚರ್ಯವಾಗುತ್ತೆ - "ನಮ್ಮ ಸುಪ್ತಮನಸ್ಸು ಈ ಎಲ್ಲ ವಿಷಯಗಳನ್ನೂ ಸೇರಿಸಿ ಅದೆಷ್ಟು ಅದ್ಭುತವಾಗಿ, ಕ್ರಿಯಾತ್ಮಕವಾಗಿ ಚಿತ್ರ-ವಿಚಿತ್ರ ಕತೆಗಳ ಕನಸನ್ನು ಹೆಣೆದು ನಮಗೆ ತೋರಿಸುವುದಲ್ಲ!" ಅಂತ

ಅಂದ್ಹಾಗೆ, ಇವತ್ತು ಬೆಳಿಗ್ಗೆ ನಾನು ಕಂಡ ಕನಸಿದು:

"ಯಾವುದೋ ಹೊಸ ಜಾಗ. ದೇವಾಲಯಗಳೇ ತುಂಬಿವೆ ಅಲ್ಲಿ. ಒಂದು ಕಾಲೋನಿಯಂತೆ ಅಥವಾ ಕಾಂಪ್ಲೆಕ್ಸಿನಂತೆ, ಎಲ್ಲಿ ನೋಡಿದರಲ್ಲಿ ದೇವಾಲಯಗಳು, ಅಲ್ಲಿ. ಎಲ್ಲವೂ ಬಹಳ ಹಳೆಯ ಕಾಲದವು…

(ನಾನು ಇದ್ದೆ ಅನ್ನೋದು ಕನಸಿನ ಮಧ್ಯಭಾಗದಲ್ಲಷ್ಟೇ ತಿಳಿದಿದ್ದು ನನಗೆ. ನಾನು ಏನಾಗಿದ್ದೆ ಅನ್ನೋದು ಮುಂದೆ ತಿಳಿಯಿತು…)
ಬಹುಶಃ ಮಣ್ಣಿನಲ್ಲಿ ಅಲ್ಲಿನ ದೇವಾಲಯಗಳ ಸಣ್ಣಸಣ್ಣ ಮೂರ್ತಿಗಳನ್ನು ಮಾಡುತ್ತಿದ್ದೆ ಅನಿಸುತ್ತೆ. ಅಪ್ಪ ಅವುಗಳನ್ನ ಹೊರಗೆಲ್ಲೋ ಮಾರುತ್ತಿದ್ರು ಅನ್ಸುತ್ತೆ.
ಒಂದ್ ದಿನ ಅಪ್ಪ ಭಾರೀ ಖುಷಿಯಾಗಿದ್ದಂತೆ ತೋರಿತು. ಮನೆಗೆ ಬಂದ್ಮೇಲೆ ತುಂಬ ಆಸಕ್ತಿಯಿಂದ ಅವರೇ ತಮ್ಮ ಕೈಯಾರೆ ಇಲ್ಲಿಯದ್ದೇ (ಬಹುಶಃ ನನಗೆ ಇಷ್ಟವಾದ) ದೇವಾಲಯವೊಂದರ ಮೂರ್ತಿಯನ್ನ ಮಾಡಿ, ಬಣ್ಣ ಹಚ್ಚಿದ್ದೆಲ್ಲ ಆದ ನಂತರ ನನಗೆ ಕೊಟ್ರು. ಅದರ ಜೊತೆಗೆ ಒಂದಷ್ಟು ದುಡ್ಡು ಕೂಡ!

ನಾನು ತುಂಬ ಸಂತೋಷಗೊಂಡಿದ್ದೆ. ದುಡ್ಡು ಹಾಗೂ ದೇವಳದ ಮೂರ್ತಿಯನ್ನ ತಗೊಂಡು ಎಲ್ಲಿಗೋ ಹೊರಟೆ
ಸಣ್ಣ ಸಂದುಗೊಂದುಗಳಲ್ಲಿ ಸಾಗಿ ಹೋದೆ. ಕೊನೆಗೂ ಯಾವುದೋ ಸಣ್ಣ ದೇವಾಲಯವನ್ನು ತಲುಪಿದೆ. ಅಲ್ಲಿಗೆ ಅವಳಲ್ಲದೆ ಬೇರೆ ಯಾರೂ ಬರುವುದಿಲ್ಲ, ಗೊತ್ತು ನನಗೆ.
ಬಹಳ ಹೊತ್ತು ಅವಳು ಬಂದಾಳೆಂದು ಕಾದೆ. ಎಷ್ಟು ಹೊತ್ತಾದರೂ ಅವಳ ಸುಳಿವೇ ಇಲ್ಲ! ಕೊನೆಗೆ ದೇವಾಲಯದ ಮೂರ್ತಿಯನ್ನ ಅಲ್ಲೇ ಇಟ್ಟು - ಅಲ್ಲಿಗೆ ಬರುವುದು ಅವಳೊಬ್ಬಳೇ! ಬಂದಾಗ ಅವಳದನ್ನು ನೋಡಿಯೇ ನೋಡುತ್ತಾಳೆಂಬ ನಂಬಿಕೆಯಿದ್ದಿರಬಹುದು - ಹೊರನಡೆದೆ

ಬಹುಶಃ ಬೇಸರವಾಗಿತ್ತು ಅನಿಸುತ್ತೆ, ನನಗೆ - ಅವಳನ್ನು ಭೇಟಿಯಾಗಲಿಲ್ಲ ಅಂತ… ಬರಿದೇ ನಡೆದು ಸಾಗಿದ್ದೆ. ನನ್ನಲ್ಲಿ ದುಡ್ಡಿದ್ದುದು ನೆನಪಾಗಿರಬೇಕು. ಹಸಿವೂ ಆಗಿದ್ದಿರಬಹುದು. ಯಾವುದೋ ಹೋಟೆಲಿನತ್ತ ಹೊರಟೆ.
ಅಹ್! ಅವಳಿಗೆ ಫೋನ್ ಮಾಡೋಣವೆನಿಸಿತು. ನನ್ನ Moto-G ಫೋನನ್ನು ತೆಗೆದು ಅವಳ ನಂಬರಿಗೆ ಕರೆ ಮಾಡಿದೆ (ಅದೇಕೊ ಆಗ ಮೋಟೊ-ಜಿ ಫೋನ್ ಸ್ಪಷ್ಟವಾಗಿ ಕಾಣಿಸಿತು. ಅದು ನನ್ನದೆಂದೇ ಅನಿಸ್ತು. ಈ ಹಂತದಲ್ಲೇ ಈ ಕನಸಿನಲ್ಲಿದ್ದವನು ನಾನೇ ಅಂತ ತಿಳಿದಿದ್ದು)
ಒಂದೆರಡು ಸಾರಿ ಪ್ರಯತ್ನಿಸಿದರೂ ನೋ ರೆಸ್ಪಾನ್ಸ್...! ಮತ್ತೆ ಬೇಸರವಾಗಿರಬೇಕು.. ಮುಂದೆ ಹೆಜ್ಜೆ ಹಾಕುತ್ತ ಹೊರಟೆ.

ಸ್ವಲ್ಪ ದೂರ ಸಾಗುತ್ತಿದ್ದಂತೆ ಯಾರೋ ನನ್ನ ಹಿಂಬಾಲಿಸುತ್ತಿರುವಂತೆ ತೋರಿತು. ಹಿಂತಿರುಗಿ ನೋಡಿದೆ. ಯಾರೋ ಹುಡುಗ, ಒಂದಿಪ್ಪತ್ಮೂರು ಹರೆಯದವನಿರಬಹುದು, ಬರುತ್ತಿದ್ದ... ನೋಡಲು ಕಳ್ಳನಂತೇನೂ ಕಾಣಿಸಲಿಲ್ಲವಾದರೂ ನನಗೇಕೊ ಅವನ ಮೇಲೆ ಅನುಮಾನ ಮೂಡಿತು. ಸ್ವಲ್ಪ ತ್ವರೆಯಾಗಿ ಹೆಜ್ಜೆ ಹಾಕಿದೆ. ಅವನೂ ಹಿಂದೆಯೇ ಬಂದಂತೆನಿಸಿತು.
ನಾನು ಇದುವರೆಗೂ ಫೋನನ್ನು ಕೈಯಲ್ಲೇ ಹಿಡಿದಿದ್ದೆ. ಈಗ ಭದ್ರವಾಗಿ ಜೇಬಿನೊಳಗಿಟ್ಟು ನಡೆಯೋಣವೆಂದುಕೊಂಡೆ. ನೋಡಿದರೆ ನಾನು ಉಟ್ಟಿದ್ದುದು ಪಂಚೆ. ಅದರಲ್ಲಿ ಜೇಬು ಎಲ್ಲಿಂದ ಬಂದೀತು! ಸರಿ ಕೈಯಲ್ಲೇ ಆದಷ್ಟೂ ಭದ್ರವಾಗಿ ಹಿಡಿದು, ಎದೆಗೆ ಅವಿಚಿಕೊಂಡು ನಡೆಯತೊಡಗಿದೆ...

ಹಠಾತ್ತಾಗಿ ಅವನು ಹತ್ತಿರ ಬಂದು ನನ್ನ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಳ್ಳಲು ಪ್ರಯತ್ನಿಸಿದ. ನಾನು ಮೊಬೈಲನ್ನು ಗಟ್ಟಿಯಾಗಿ ಹಿಡಿದಿದ್ದೆ. ಅಷ್ಟು ಬೇಗ ಅವನಿಗದು ದಕ್ಕುವಂತಿರಲಿಲ್ಲ
ಬಲವೆಲ್ಲ ಬಿಟ್ಟು ಕಾಲಿನಲ್ಲೊಮ್ಮೆ ಜಾಡಿಸಿ ಹೊಡೆದೆ ಅವನಿಗೆ. ಆತ ಹೇಗೋ ಸಂಭಾಳಿಸಿಕೊಂಡು ಮತ್ತೂ ಪ್ರಯತ್ನಿಸುತ್ತಿದ್ದ - ಮೊಬೈಲ್ ಕಿತ್ತುಕೊಳ್ಳಲು.
ನಾನು ಬಹುಶಃ ಸಹಾಯಕ್ಕಾಗಿ ಅರಚಾಡಿದೆ ಅನ್ಸುತ್ತೆ.. ಆ ಕ್ಷಣಕ್ಕೆ ಸುತ್ತಮುತ್ತಲಿದ್ದ ಅಂಗಡಿಗಳ ಸಾಲು, ಅಲ್ಲಿ ಹತ್ತಿರದಲ್ಲಿ ಓಡಾಡುತ್ತಿದ್ದ ಜನ - ಎಲ್ಲ ಸ್ಪಷ್ಟವಾಗಿ ಕಾಣುತ್ತಿತ್ತು ನನಗೆ.
ಸುಮಾರು ಜನ ಸೇರಿದರು ಅಲ್ಲಿ. ಅವರಲ್ಲಿ ಕೆಲವರು ಅವನನ್ನು ಹಿಡಿದುಕೊಳ್ಳಲು ಬಂದರು. ಆದರೂ ಮೊಬೈಲಿಗಾಗಿ ನಮ್ಮಿಬ್ಬರ ಸೆಣಸಾಟ ನಡೆದೇ ಇತ್ತು…
ಅಷ್ಟರಲ್ಲಿ, ಕಿವಿಗಡಚಿಕ್ಕುವಂತೆ ಯಾವುದೋ ಸದ್ದು… ನಿಲ್ಲದೆ ಮೊಳಗುತ್ತಿದೆ… ಅದು ನಿಲ್ಲುವ ಲಕ್ಷಣವೇ ಕಾಣಿಸದು! ಅಬ್ಬ! ಎಂತಹ ಕರ್ಕಶ ಶಬ್ದ...!!!

ಎಚ್ಚರಾಯಿತು ನನಗೆ. ಸದ್ದು ಮಾಡುತ್ತಿದ್ದದ್ದು ೬:೧೫ರ alarm.!
ಹಾಸಿಗೆಯ ಮೇಲೆ ಹಾಗೇ ಕೈಯಾಡಿಸಿದೆ. ಮೊಬೈಲು ತಕ್ಷಣಕ್ಕೆ ಕೈಗೆ ಸಿಗಲಿಲ್ಲ...
ಕನಸು ಕೂಡ ಮೊಬೈಲಿನ ಬಗೆಗೇ ಇದ್ದುದರಿಂದ ನನ್ನ ಮೊಬೈಲನ್ನು ತಕ್ಷಣವೇ ನೋಡಬೇಕೆನಿಸಿತು. ಅದನ್ನು ಹುಡುಕಿ, alarmಅನ್ನು off ಮಾಡಲು ಏಳಲೇಬೇಕಾಯಿತು."

Tuesday 14 April 2015

ಬೀಸಿತು ಸುಖಸ್ಪರುಶವಾತಂ – ೧


ದೃಶ್ಯ ೧

ಅಂತಃಪುರದಲ್ಲಿನ ವಾತಾಯನವೊಂದರ ಬಳಿ ನಿಂತು ರಾಮನು ಹೊರಗಿನ ದೃಶ್ಯವನ್ನು ನೋಡುತ್ತಿದ್ದಾನೆ. ದೂರದಲ್ಲೆಲ್ಲೋ ಮೊಳಗುತ್ತಿರುವ ವಾದ್ಯಗಳ ಸದ್ದು ಸಣ್ಣದಾಗಿ ಕೇಳುತ್ತಿದೆ.  ಅದೊ ಅಲ್ಲಿ, ಅಯೋಧ್ಯೆಯ ಜನರು ನಾಟ್ಯ, ಕವಿಗೋಷ್ಠಿ ಮುಂತಾದ ಕಲಾಪಗಳಲ್ಲಿ ತೊಡಗಿರುವ ದೃಶ್ಯವೂ ಅಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲಿ ನೆರೆದ ಆ ಜನರ ಪ್ರತಿ ಚರ್ಯೆಯಲ್ಲೂ ಅವರಲ್ಲಿ ಮನೆಮಾಡಿರುವ ಸಂತಸ ಸಂಭ್ರಮಗಳು ಅದೆಷ್ಟೇ ದೂರದಿಂದ ನೋಡಿದರೂ ಅರಿಯಬಹುದಾದಷ್ಟು ಸ್ಪಷ್ಟವಾಗಿದೆ. ಜನರ ಆ ಸಂಭ್ರಮ ಸಂತೋಷಗಳನ್ನು ಕಂಡು ರಾಮನಿಗೂ ಹಿಗ್ಗು.

ಈ ದಿನವಷ್ಟೇ ದೇವತೆಗಳೂ, ಬ್ರಾಹ್ಮಣಶ್ರೇಷ್ಠರೂ, ಹನುಮ-ಸುಗ್ರೀವ-ಜಾಂಬವಂತನೇ ಮೊದಲಾದ ವಾನರ ವೀರರೂ, ವಿಭೀಷಣಾದಿ ಪಮುಖರೂ, ನೂರಾರು ಸಾಮಂತ ಅರಸರೂ, ನಾನಾ ದೇಶದ ಜನರೂ ಉತ್ಸವದಲ್ಲಿ ಭಾಗವಹಿಸಿರಲಾಗಿ, ಅವರೆಲ್ಲರ ಸಮಕ್ಷಮದಲ್ಲಿ - ವಸಿಷ್ಠ-ವಿಶ್ವಾಮಿತ್ರರಂತಹ ಮುನಿವರರ ಪೌರೋಹಿತ್ಯದಲ್ಲಿ - ಸೀತಾದೇವಿಯ ಪುಂಸವನ ಸೀಮಂತ ಮಹೋತ್ಸವವು ಬಹು ವೈಭವದಿಂದ ನೆರವೇರಿತ್ತು.

ಆ ನಂತರದಲ್ಲಿ ರಾಮನು ಉತ್ಸವಕ್ಕೆ ಆಗಮಿಸಿದ್ದವರೆಲ್ಲರನ್ನೂ ಉಚಿತ ರೀತಿಯಲ್ಲಿ ಸತ್ಕರಿಸಿ, ಸುಗಂಧ ತಾಂಬೂಲ ಪುಷ್ಪಾಕ್ಷತೆ ವಸ್ತ್ರಾಭರಣಗಳ ಉಡುಗೊರೆಗಳನ್ನಿತ್ತು ಸತ್ಕರಿಸಿದ್ದನು. ಅಲ್ಲಿ ನೆರೆದಿದ್ದವರೆಲ್ಲರೂ ಉಡುಗೊರೆ-ದಾನ-ಸತ್ಕಾರಾದಿಗಳಿಂದ ಸಂತೃಪ್ತರಾಗಿ ಮನಸಾರೆ ಸೀತಾರಾಮರಿಗೆ ಶುಭವನ್ನು ಹಾರೈಸಿ ಬೀಳ್ಕೊಂಡಿದ್ದರು.

ಈಗ, ಅಯೋಧ್ಯೆಯ ಜನರು ಇನ್ನೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅವರನ್ನು ನೋಡುತ್ತ ನೋಡುತ್ತ ರಾಮನೂ ಸಂತಸದಲ್ಲಿ ಮೈಮರೆತು ನಿಂತಿದ್ದಾನೆ. ಅಷ್ಟರಲ್ಲಿ ರಾಮನಿದ್ದ ಸ್ಥಳಕ್ಕೆ ಯಾರೋ ಬಂದ ಸದ್ದಾಯಿತು. ಬಂದವರು ಯಾರೆಂದು ರಾಮನು ತಿರುಗಿನೋಡಿದಾಗ ಕಂಡದ್ದು ಸಂತಸದಿಂದ ತುಂಬಿ, ಲಜ್ಜೆಯಿಂದ ಕೂಡಿದ ಮೈಥಿಲಿಯ ಮುಖ.
ಅದೇನು ಕಳೆ ತುಂಬಿದೆ ಈಗ ಆಕೆಯ ಮೊಗದಲ್ಲಿ! ಲೋಕೋದ್ಧಾರಕನಾದ ರಾಮಚಂದ್ರನ ಅಂಶವಾದ ಶಿಶುಚಂದ್ರನನ್ನು ತನ್ನ ಗರ್ಭದಲ್ಲಿ ಧರಿಸಿರುವ ಚಂದ್ರಿಕೆಯೀಕೆ ಎಂಬ ಭಾವ ಮೂಡಿಸುವಂತೆ ಹೊಸಕಾಂತಿಯೊಂದನ್ನು ಹೊರಸೂಸುತ್ತಿದೆ ಸೀತೆಯ ನವಸೌಂದರ್ಯ. ರಾಮನು ಸೀತೆಯ ಆ ಅನುಪಮ ಸೌಂದರ್ಯವನ್ನು ಮನದಣಿಯೆ ಕಂಡು ಮುದಗೊಂಡನು.

ಇಂದಿನ ಉತ್ಸವದ ಸಲ್ಲಾಪಗಳ ನಡುವೆ ಇಬ್ಬರಿಗೂ ಪರಸ್ಪರ ಮಾತನಾಡಲೂ ಅವಕಾಶ ಸಿಕ್ಕಿರಲಿಲ್ಲ. ಈಗಲಾದರೂ ಸೀತೆಯೊಡನೆ ಮಾತನಾಡಬೇಕೆಂಬ ಹಂಬಲ ರಾಮನದು. ಆಕೆಗೂ ಅಷ್ಟೇ, ತನ್ನ ಬಯಕೆಯೊಂದನ್ನು ರಾಮನಲ್ಲಿ ಬಿನ್ನವಿಸಬೇಕೆಂಬ ಆಸೆ ಆಕೆಯದು. ಗರ್ಭಿಣಿ ಹೆಂಡತಿಯ ಬಯಕೆಯನ್ನರಿತು ಅದನ್ನು ಈಡೇರಿಸುವುದು ಪತಿಯಾದವನ ಧರ್ಮ. ರಾಮನೂ ಇದಕ್ಕೆ ಹೊರತಲ್ಲವಲ್ಲ! ತನ್ನ ಮುದ್ದಿನ ಮಡದಿಯ ಮನದಾಳದ ಬಯಕೆಯನ್ನು ತಿಳಿದು ಅದನ್ನು ನಡೆಸಿಕೊಡಬೇಕೆಂಬ ತವಕ ಆತನಿಗೂ ಇದೆ. ಅದಕ್ಕೆಂದೇ ಸೀತೆಯನ್ನು ಕೇಳಿದ - ನಿನ್ನ ಯಾವುದೇ ಬಯಕೆಯಿದ್ದರೂ ತಿಳಿಸು, ಮೈಥಿಲಿ. ಅದನ್ನು ತಪ್ಪದೆ ನಡೆಸಿಕೊಡುವ ಹೊಣೆ ನನ್ನದು, ಎಂದು.

ಅದಕ್ಕೆ ಸೀತೆಯು - ಕುತ್ಸಿತಂ ಪೊರ್ದದಾಶ್ರಮದ ಋಷಿಪತ್ನಿಯರ ಸತ್ಸಂಗದೊಳ್ ತನ್ನ ಬೇಸರಂ ತವಿಸುವೆನಿದುತ್ಸಕಂ ತನಗದರಿನಿನ್ನೊಮ್ಮೆ ಬನಕೆ ತನ್ನಂ ಕಳುಹಬೇಕೆಂದಳು

ರಾಮನು ಸೀತೆಯ ಬಯಕೆಯನ್ನು ಕೇಳಿ, ಅದಕ್ಕೆ ಒಪ್ಪಿ ಶೀಘ್ರದಲ್ಲೇ ಗಂಗಾತೀರದ ಋಷ್ಯಾಶ್ರಮಕ್ಕೆ ಸೀತೆಯನ್ನು ಕಳುಹಿಸುವ ಭರವಸೆಯನ್ನಿತ್ತನು. ಸೀತೆಯ ಮುಖವು ಅಮಿತವಾದ ಸಂತಸದಿಂದ ಇನ್ನಷ್ಟು ಹೊಳಪೇರಿತು.

ದೃಶ್ಯ ೨
ರಾಮ ವಸಿಷ್ಠರೊಡನಿದ್ದಾನೆ. ಆತನ ಮುಖದಲ್ಲಿ ಯಾವುದೋ ಆತಂಕ, ಕಳವಳ.
ನೆನ್ನೆ ರಾತ್ರಿಯ ಕನಸಿನಲ್ಲಿ ತನ್ನ ಸೀತೆಯು ಗಂಗೆಯಂ ಕಳೆದು, ಕಾಡೊಳ್ ಮಹಾ ಕ್ಷೀಣೆಯಾಗಿ, ದೇಸಿಗರಂತೆ ದೆಸೆದೆಸೆಯನ್ ಈಕ್ಷಿಸುತ ಮರುಗುತ್ತಳಿರ್ದುದನ್ನು ಕಂಡಾಗಿನಿಂದ ರಾಮನಿಗೆ ಒಂದು ಬಗೆಯ ಆತಂಕ ಮೂಡಿದೆ. ಆ ಕನಸಿನ ಬಗೆಗೆ ಕೇಳಲೆಂದೇ ಕುಲಗುರುಗಳಾದ ವಸಿಷ್ಠರನ್ನು ಕಂಡು, ಅವರೊಡನೆ ತನ್ನ ಕನಸಿನ ಶುಭಾಶುಭ ಫಲದ ಬಗ್ಗೆ ಕೇಳಿದ್ದು. ವಸಿಷ್ಠರೂ ಈ ಕನಸಿನ ಶಕುನ ಅಷ್ಟು ಒಳ್ಳೆಯದಲ್ಲವೆಂದು ಅಭಿಪ್ರಾಯ ಪಟ್ಟು, ತಮ್ಮ ಕೈಲಾದ ಮಟ್ಟಿಗೆ ಅದರ ಪರಿಣಾಮವನ್ನು ಕಡಿಮೆಗೊಳಿಸಲು ಶಾಂತಿಯನ್ನು ಮಾಡಿಸುವುದಾಗಿ ಹೇಳಿ ಬೀಳ್ಕೊಂಡರು.

ದೃಶ್ಯ ೩
ಕಗ್ಗತ್ತಲ ರಾತ್ರಿ! ರಾಮನು ನಗರಶೋಧನೆಯ ಚಾರನೊಬ್ಬನನ್ನು ಕರೆದು ರಾಜ್ಯದ ಸದ್ಯದ ಸ್ಥಿತಿಗತಿಗಳನ್ನೂ, ತನ್ನ ನಾಡಿನ ಪ್ರಜೆಗಳು ತನ್ನ ಬಗ್ಗೆ ಹೊಂದಿರುವ ಅಭಿಪ್ರಾಯವನ್ನೂ ಕುರಿತು ಹೇಳಲು ಆದೇಶಿಸುತ್ತಾನೆ.
ಅದಕ್ಕೆ ಅವನು - "ದೇವ, ನಿನ್ನಂ ಪೆಸರಿಸಿದನ್ ಈಶನಾದಪಂ, ಸೇವಿಸಿದವಂ ಚತುರ್ಮುಖನಾಗಲುಳ್ಳವಂ , ಕಾವುದೆಂದೈಸೆ ಮೊರೆವೊಕ್ಕವಂ ಜಗದೊಳ್ ಆಚಂದ್ರಾರ್ಕಮಾಗಿ ಬಾಳ್ವಂ ಶ್ರೀವಿಭವದಿಂ, ಶಕ್ರಪದವಿಯಂ ಜರೆದಪಂ. ಭೂವಲಯದೊಳ್ ನಿಂದಿಸುವರುಂಟೆ, ತರಣಿಯಂ ಕಾವಳಂ ಮುಸುಕಿರ್ದೊಡೇನಾದುದು!" ಎಂದು ಬಿನ್ನೈಸಿ ಕೈಮುಗಿದನು.

ರಾಮನಿಗೇಕೋ ಈ ಚಾರನು ಯಾವುದೋ ವಿಷಯವನ್ನು ಹೇಳಲು ಹಿಂಜರಿಯುತ್ತಿದ್ದಾನೆ ಅನಿಸಿತು. ಇಲ್ಲದಿದ್ದರೆ ಇದೇಕೆ ಇವನುಸೂರ್ಯನನ್ನು ಮುಸುಕಿದ ಮಂಜುಎಂಬ ಹೋಲಿಕೆ ಕೊಟ್ಟು ಹೇಳಿದ ಎಂದು ಬಗೆದು ಮತ್ತೆ ತನ್ನರಸುತನಕಾವುದು ಊಣೆಯವೆಂಬರು (ನನ್ನ ಅರಸುತನಕೆ ಯಾವುದು ಕೊರತೆ ಎಂದು ಜನರ ಅಭಿಪ್ರಾಯ)?’ ಎಂದು ಚಾರನನ್ನು ಪ್ರಶ್ನಿಸುತ್ತಾನೆ.

ಅದಾಗಿಯೂ ಆ ಚಾರನಿಗೆ ವಿಷಯ ಹೇಗೆ ತಿಳಿಸುವುದೋ ತೋಚದೆ ಜಗದೊಳ್ ಅಜ್ಞಾನಿಗಳ್ ನುಡಿದ ನಿಂದೆಯನ್ ಉಸಿರಲಮ್ಮೆನ್ ಎಂದು ಹೇಳಿ ರಾಮನ ಪದಕ್ಕೆರಗಿದನು. ರಾಮನು ಅವನನ್ನೆಬ್ಬಿಸಿ ಅಯ್ಯಾ, ಅಂಜಬೇಡ , ವಿಷಯವೇನೇ ಇದ್ದರೂ ಯಾವ ಅಂಜಿಕೆಯನ್ನೂ ಇಟ್ಟುಕೊಳ್ಳದೆ ನನ್ನಲ್ಲಿ ಹೇಳುಎಂದು ಒತ್ತಾಯಪಡಿಸಲಾಗಿ ಆ ಚಾರನು - "ಸ್ವಾಮಿ, ಒಬ್ಬ ಮಡಿವಾಳಿಯು ನಿನ್ನ ಬಗೆಗೆ ಲಘುವಾಗಿ ಮಾತಾಡಿದ. ನಿನ್ನ ಘನತೆ ಎಂತಹುದೆಂಬುದು ಆ ಅಜ್ಞಾನಿಗೇನು ತಿಳಿಯಬೇಕು...

ಪೆಂಡತಿ ತವರ್ಮನೆಗೆ ಪೇಳದೆ ಪೋದ
ಚಂಡಿತನಕವಳ ತಾಯ್ತಂದೆಗಳ್ ಕಳುಹಬಂ
ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ
ಕೊಂಡಾಳುವವನಲ್ಲ ತಾನೆಂದು ರಜಕನು
ದ್ದಂಡದೊಳ್ ನುಡಿಯೆ ಕಿವಿಮುಚ್ಚಿಕೊಳುತೆಯ್ದಿದೆನ್" ಎಂದು ಬಿನ್ನೈಸಿದನು. (ರಜಕ - ಅಗಸ)

ರಾಮನು ಆ ಚಾರನು ನುಡಿದುದೆಲ್ಲವನ್ನೂ ಕೇಳಿ, ಅವನನ್ನು ಕಳುಹಿಸಿದ ನಂತರ ..ಮೌನದಿಂದ ನಿಂದು ಸೈವೆರಗಾಗಿ, ನೆನೆನೆನೆದು ಚಿತ್ತದೊಳ್ ನೊಂದು, ಬಿಸುಸುಯ್ದು, ಕಡುವಳಿದು, ಕಾತರಿಸಿ, ಕಳೆಗುಂದಿ, ದುಮ್ಮಾನದಿಂ ಪೊಕ್ಕನ್ ಅಂತಃಪುರವ.

ದೃಶ್ಯ ೪
ಹೀಗೆ ರಾಮನು ಚಿಂತಾಕುಲನಾಗಿ ಅಂತಃಪುರವನ್ನು ಹೊಕ್ಕ ವಿಷಯವನ್ನು ಕೇಳಿದ ಲಕ್ಷ್ಮಣ ಭರತ ಶತ್ರುಘ್ನರು ಏನಾಯಿತೊ ಎಂಬ ಭೀತಿಯಿಂದ ರಾಮನಿದ್ದೆಡೆಗೆ ಧಾವಿಸಿ ಬಂದರು. ಹಾಗೆ ಅವರು ಬಂದು ರಾಮನ ಪಾದಕ್ಕೆರಗಿದರೂ ರಾಮನು ಇನ್ನೂ ಯಾವುದೋ ಚಿಂತೆಯಲ್ಲಿದ್ದುದರಿಂದ ಅವನನ್ನು ಮಾತನಾಡಿಸುವ ಬಗೆಯನ್ನೂ ತಿಳಿಯದೆ ಮೌನವಾಗಿ ನಿಂತರು.
ಸ್ವಲ್ಪ ಸಮಯದ ನಂತರ ರಾಮನೇ ಅವರನ್ನು ಕರೆದು ಕುಳ್ಳಿರಿಸಿ ವಿಷಯವನ್ನರುಹಿದನು - ".. ಇಳೆಯೊಳ್ ಇಂದು ಎನಗಾದ ಅಪವಾದಮಂ ನೀವ್ ಅರಿದುದಿಲ್ಲ, ಅಕಟ! .. ನೆರವಿಗಳೊಳು ಕದ್ದ ಕಳ್ಳನವೊಲ್ ಆಡಿಸಿಕೊಳ್ಳಲಾರೆನ್, ಒಡಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ. ತಿದ್ದಿ ತೀರದ ವಿಲಗಕ್ಕಂಜುವೆಂ, ಸೀತೆಯಂ ಬಿಟ್ಟಿಲ್ಲದಿರೆನೆಂ"ದನು.
ಇವಳಯೋನಿಜೆ, ರೂಪಗುಣ ಶೀಲಸಂಪನ್ನೆ, ಭುವನಪಾವನೆ, ಪುಣ್ಯಚರಿತೆ ಮಂಗಳಮಹೋತ್ಸವೆ, ಪತಿವ್ರತೆಯೆಂಬುದಂ ಬಲ್ಲೆನ್. ಆದೊಡಂ, ನಿಂದೆಗೊಳಗಾದ ಬಳಿಕ ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ. ರವಿಕುಲದ ರಾಯರ್ ಅಪಕೀರ್ತಿಯಂ ತಾಳ್ದಪರೆ? ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ?(ತಾತ - ತಂದೆ)
ರಾಮನು ಕಲಿಯುಗದ ವಿಪ್ರರ್ ಆಚಾರವಂ ಬಿಡುವಂತೆ, ಪಲವು ಮಾತೇನಿನ್ನು, ಸೀತೆಯಂ ಬಿಟ್ಟೆನೆನೆ, "ಬಲುಗರಂ [ಗರ - ದುಷ್ಟಶಕ್ತಿ, ಗ್ರಹ] ಇದೆತ್ತಣಿದೊ ಕರುಣ್ಯನಿಧಿಗೆ" ಎನುತ ನಡುನಡುಗಿ ಭೀತಿಯಿಂದ "ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ ಸಲೆ ನಿಂದಿಸಿದೊಡದಂ ಮಾಣ್ದಪರೆ ದ್ವಿಜರ್? ಅಕಟ! ಕುಲವರ್ಧಿನಿಯನ್ ಎಂತು ಬಿಡುವೆ ನೀಂ, ಪೇಳ್?" ಎಂದರ್ ಅನುಜಾತರ್ ಅಗ್ರಜಂಗೆ. 

ಭರತನು ಅತಿ ಶೋಕಾಕುಲಿತನಾಗಿ "ಅಣ್ಣ, ನೀತಿವಂತರಾರಾದರೂ ಹಾಲ್ಗರೆಯುವ ಕಪಿಲೆಯನ್ನು ಹೊಡೆದು ಅಡವಿಗಟ್ಟುವರೇ? ನಿನಗೆ ಈ ಆಲೋಚನೆಯೇಕೆ ಬಂತು? ಅಂದು ಆ ಪಾವನಮೂರ್ತಿ ತನ್ನ ಪಾವಿತ್ರ್ಯತೆಯನ್ನು ನಿರೂಪಿಸಿಕೊಳ್ಳಲು ಅಗ್ನಿಪ್ರವೇಶವನ್ನೇ ಮಾಡಲಿಲ್ಲವೆ, ಆಕೆ ಪರಿಶುದ್ಧಳೆಂದು ಎಲ್ಲರೆದುರು ನೀನೂ ಒಪ್ಪಲಿಲ್ಲವೇ?

ಅದನೆಲ್ಲಮಂ ಮರೆದು ಹುಲುಮನುಜ ರಜಕನಾ
ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ
ಹದನಾವುದಕಟ ಗುರು-ಲಘುವಿನಂತರವನೆಣಿಸದೆ ಬರಿದೆ ಮೂಢರಂತೆ
ಎದೆಗೆಟ್ಟು ದೇವಿಯಂ ದೋಷಿಯೆಂಬರೆ?" (ದೂಸರಂ - ಅಪವಾದ, ಕಾರಣ, ನಿಂದೆ)

ಅದಕ್ಕೆ ರಾಮನು - "ತಮ್ಮ ನೀನಾಡಿದಂತೆ ಅವನಿಸುತೆ(ಜಾನಕಿ) ನೀರಜೆಯಹುದು. ಉಮ್ಮಳಿಸಬೇಡ; ಸೈರಿಸಲಾರೆನ್ ಈ ದೂಸರಂ. ಮಹಿಯೊಳ್ ಉಳಿದರೇ ಪೃಥು-ಪುರೂರವ-ಹರಿಶ್ಚಂದ್ರಾದಿ ನರಪತಿಗಳು? ಸುಮ್ಮನೆ ಅಪಕೀರ್ತಿಗೆ ಒಳಗಾಗಲೇತಕೆ, ಮಮತೆಯನ್ ಮಹಾಯೋಗಿ ಬಿಡುವಂತೆ ಇವಳನ್ ಉಳಿವೆನ್" ಎನೆ, ಹಮ್ಮೈಸಿ ಲಕ್ಷ್ಮಣಂ ಕಂಪಿಸುತ ಕಿವಿ ಮುಚ್ಚುತ ಅಗ್ರಜಂಗೆ ಇಂತೆಂದನು –
"ಕಾಯಸುಖಕೋಸುಗಂ ಕೃತಧರ್ಮವಂ ಬಿಡುವೊ
ಲಾಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು
ವಾಯದಪವಾದಕಿಂತರಸಿಯಂ ತೊರೆಯಬೇಕೆಂಬರೆ, ಕರುಣಮಿಲ್ಲದೆ?
ಜೀಯ, ತುಂಬಿದ ಬಸುರ್ ಬೆಸಲಾದ ದೇವಿಯಂ
ಪ್ರೀಯದಿಂದಾರೈದು ಸಲಹಬೇಕೆಂ"ದು ರಘುರಾಯಂಗೆ ಬಿನ್ನೈಸಿದನು. ಶತ್ರುಘ್ನನೂ ಸೀತಾಪರಿತ್ಯಾಗಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದನು.

ರಾಮನು ತಮ್ಮಂದಿರಾಡಿದ ಮಾತುಗಳನ್ನು ಕೇಳಿ ತರಹರಿಸಬಾರದ ಅಪವಾದ ಹೃಚ್ಛೂಲಮಂ ತನಗೆ ಜಾನಕಿಯನ್ ಉಳಿದು ಪೊರೆಯುರ್ಚಿದ ಉರಗನಂತಿರ್ಪೆಂ, ಸಾಕು ನಿಮಗೊರೆದೊಡೇನಹುದುಎಂದು ಬೇಸರೊಳ್ ಭರತ-ಶತ್ರುಘ್ನರಂ ಮನೆಗಳ್ಗೆ ಕಳುಹುತ ಏಕಾಂತದೊಳ್ ಸೌಮಿತ್ರಿಗೆ ಇಂತೆಂದನು -

ತಮ್ಮ ಬಾ, ನೀನಿಂದುವರೆಗೆ ನಾನೆಂದ ಮಾ
ತಮ್ಮೀರಿದವನಲ್ಲ. ಕೆಲಬಲವನಾರೈವು
ತಮ್ಮರುಗದಿರು ತನ್ನ ಕೊರಳಿಗಿದೆ ಖಡ್ಗಮಲ್ಲದೊಡೀಗ ಜಾನಕಿಯನು
ಉಮ್ಮಳಿಸದೊಯ್ದು ಗಂಗೆಯ ತಡಿಯರಣ್ಯದೊಳ್
ಸುಮ್ಮನೆ ಕಳುಹಿಬರ್ಪುದವಳೆನ್ನೊಳಾಡಿರ್ಪ
ಳೊಮ್ಮೆ ಕಾನನಕೈದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು      -೧೮.೫೮

ಲಕ್ಷ್ಮಣನು ಅಣ್ಣ, ನಿನ್ನಾಜ್ಞೆಯನ್ನು ಮೀರಿದರೆ ನನಗೆ ರೌರವ ನರಕವೇ ಗತಿ. ಆದರೆ ನೀನೆಂದಂತೆ ಮಾಡಿದೆನಾದರೆ ಮಾತೃಹತ್ಯೆ ಗೈದವನಿಗೆ ದೊರೆಯುವಂತಹ ಘೋರ ಗತಿ ಉಂಟಾಗುತ್ತದೆ...ಎಂದು ದುಃಖಿಸುತ್ತಿರಲು, ರಾಮನು ನಿನಗೆ ದೋಷಮೆ ನಾನಿರಲ್ಕೆ? ನಡೆ, ಕಳುಹುಎಂದನು. ಆಹಾ! ಅರಸನದೇಂ ದಯೆದೊರೆದನೋ!! 

ದೃಶ್ಯ ೫
ಅಣ್ಣನ ಮೇಲಿನ ವಾತ್ಸಲ್ಯಕ್ಕೂ ಅಭಿಮಾನಕ್ಕೂ ಕಟ್ಟುಬಿದ್ದು ಅವನ ಮಾತನ್ನು ಮೀರಲಾರದೆ ಕೊನೆಗೂ ಲಕ್ಷ್ಮಣನು ಮುಂದಿನ ಕಾರ್ಯಕ್ಕೆ ಸಜ್ಜಾದನು. ತುರಗ ಸಾರಥಿ ಕೇತನಂಗಳಿಂದ ಹಣ್ಣಿದ ವರೂಥಮಂ ತರಿಸಿ ಪೊರಗಿರಿಸಿ ನೆಲವೆಣ್ಣ ಮಗಳಿರುತಿರ್ದ ರಾಜಮಂದಿರಕೈದಿ ಕಣ್ಣೊಳೀಕ್ಷಿಸದೆ ತಲೆವಾಗಿ ದೂರದೊಳೆ ನಿಂದು ಆ ಸೀತೆಗಿಂತೆಂದನು -

"ತಾಯೆ, ನೀನೇತಕೆಳಸಿದೆ ನಿನ್ನನೀಗ ರಘು
ರಾಯಂ ತಪೋವನಕೆ ಕಳುಹಿಬರಹೇಳಿದಂ
ಪ್ರೀಯಮುಳ್ಳೊಡೆ ರಥಂ ಪಣ್ಣಿಬಂದಿದೆಕೊ, ಬಿಜಯಂಗೈವುದೆಂದು" ಮರುಗಿ
ಛಾಯೆಗಾಣಿಸಿ ಸುಮಿತ್ರಾತ್ಮಜಂ ನುಡಿದಅಭಿ
ಪ್ರಾಯಮಂ ತಿಳಿಯದೆ ಅತಿ ಸಂಭ್ರಮಾನ್ವಿತೆಯಾದ
ಳಾಯತಾಂಬಕಿ ತನ್ನ ಅಭೀಷ್ಟಮಂ ಸಲಿಸುವಂ ಕಾಂತನ್ ಎಂಬುತ್ಸವದೊಳು.

(ಮುಂದುವರೆಯುವುದು..)

ಉಪಮಾಲೋಲ ಕವಿ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬರುವ ರಾಮಾಯಣದ (ರಾಮ-ಲವಕುಶರ ಯುದ್ಧವನ್ನು ಕುರಿತಾದ) ಆಖ್ಯಾನವನ್ನು ಸರಳವಾಗಿ, ಸ್ವಲ್ಪ ಮಾರ್ಪಾಟುಗಳೊಂದಿಗೆ ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಮೂಲ ಕೃತಿಯಲ್ಲಿನ ಷಟ್ಪದಿಗಳನ್ನು/ಅವುಗಳ ಭಾಗಗಳನ್ನು ಸರಳ ಓದಿಗೆ ಅನುವಾಗುವಂತೆ ಅಗತ್ಯವಿದ್ದ ಕಡೆಗಳಲ್ಲಿ ವಿಂಗಡಿಸಿ ಬರೆದಿದ್ದೇನೆ. ಆದ್ದರಿಂದ ಗಣಗಳ ರೂಪದಲ್ಲಿ, ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸಗಳು ಗೋಚರಿಸಬಹುದು.

Wednesday 8 April 2015

ಚಂದ್ರಗಿರಿಯ ಮೇಲೊಂದು ಸಂಜೆ

ನಾನು ಈ ಹಿಂದೆ ಹಲವಾರು ಸಾರಿ ಶ್ರವಣಬೆಳಗೊಳಕ್ಕೆ ಹೋಗಿದ್ದೆನಾದರೂ 'ಚಿಕ್ಕಬೆಟ್ಟ'ವೆಂಬ ಕಾರಣಕ್ಕೊ ಏನೊ, ಚಂದ್ರಗಿರಿಯನ್ನು ಈವರೆಗೆ ಹತ್ತಿರಲಿಲ್ಲ…
ಆದರೆ ಈ ಸಾರಿ ಮೊದಲು ಹೋದದ್ದು ಅಲ್ಲಿಗೇ… ಬೆಟ್ಟದ ತುದಿ ತಲುಪಿದ ತಕ್ಷಣ ನನ್ನನ್ನು ನಾನು ಹಳಿದುಕೊಂಡೆ - ಇಲ್ಲಿಯವರೆಗೂ ಇಲ್ಲಿಗೆ ಬರದೇ ಇದ್ದುದರ ಬಗ್ಗೆ.

ಸಂಜೆಯ ಹೊತ್ತು, ಅಷ್ಟೇನೂ ಜನರಿರಲಿಲ್ಲ… ಬಸದಿಯಲ್ಲಿ ನಾನು - ಜಿನಬಿಂಬಗಳಷ್ಟೇ.!
ಹಿಂದೆಲ್ಲ ಜೈನದೇವತೆಗಳ ಬಗ್ಗೆ ಒಂದು ಬಗೆಯ ತಾತ್ಸಾರವಿತ್ತು ನನ್ನಲ್ಲಿ. ಆದರೆ ಅಂದೇಕೊ ಆ ಬಿಂಬಗಳು ಹೊಸತಾಗಿ ಕಂಡವು. ಒಂದೊಂದು ಬಿಂಬವೂ ಜೀವಂತಿಕೆಯಿಂದ ತುಂಬಿರುವಂತೆ, ಮೌನವಾಗಿಯೇ ಏನನ್ನೋ ಹೇಳುತ್ತಿರುವಂತೆ ಕಂಡವು...

ಪಾರ್ಶ್ವನಾಥನ ಬಸದಿಯನ್ನು ಹೊಕ್ಕಾಗಲಂತೂ ಮಾತೇ ಹೊರಡಲಿಲ್ಲ ನನಗೆ… ಎದೆಯು ಭಾರವಾಗಿ, ಕಣ್ತುಂಬಿ ಬಂತು.. ಆತನ ಎದುರು ಕುಳಿತು ಮನಸಾರೆ ಅತ್ತುಬಿಟ್ಟೆ.. ದುಃಖದಿಂದಲ್ಲ, ಯಾವುದೊ ಹೇಳಲಾಗದ ಆನಂದಭಾವನೆಯು ತುಂಬಿಬಂದುದರಿಂದ.

ಈ ಬಾರಿ ಹೀಗೇಕಾಯಿತೊ ಗೊತ್ತಿಲ್ಲ.. ಹಿಂದೆಲ್ಲ ಬಾಹುಬಲಿಯನ್ನು ಕಂಡಾಗಲೂ ಇಂತಹ ಅನುಭವವಾಗಿರಲಿಲ್ಲ ನನಗೆ…
ಅಂದು ನನಗಾದ ಪ್ರತಿಯೊಂದು ಅನುಭವವೂ ಹೊಸತೆನಿಸುತ್ತಿತ್ತು. ಶಾಂತಲೆಯು ಕಟ್ಟಿಸಿದ ಬಸದಿ, ಆಕೆಯ ಹೆಸರಿನ ಶಾಸನಗಳು ಅವಳ ರೂಪವೊಂದನ್ನು ಕಣ್ಣೆದುರು ತಂದಂತಾಯಿತು. ಆಕೆಯ ಬಗ್ಗೆ ಮುಂಚಿನಿಂದಲೂ ಒಂದು ಬಗೆಯ ಆಪ್ಯಾಯತೆಯಿತ್ತು, ಅಂದು ಅದು ತುಸು ಹೆಚ್ಚಾದಂತೆನಿಸಿತು.

ಇನ್ನು ಅಂದು ಕಂಡ ಶಿಲ್ಪಗಳ ಬಗ್ಗೆಯೂ ಅಷ್ಟೇ. ಮುಂಚೆ ಕೇವಲ ಶಿಲೆಯಾಗಿ, ಕಲೆಯಾಗಿ ಕಂಡದ್ದು ಅಂದು ಬೇರೆಯದೇ ರೀತಿಯಲ್ಲಿ ಕಂಡವು:
"ಇಂದು ನಾನು ನೋಡುತ್ತಿರುವ ಇದೇ ಶಿಲ್ಪವನ್ನು ನೂರಾರು ವರ್ಷಗಳ ಹಿಂದೆ ಅದಾರೋ ಶಿಲ್ಪಿಯೊಬ್ಬ - ಇದನ್ನು ಕೆತ್ತಿದವನು - ಅದೆಷ್ಟು ಸಾರ್ಥಕತೆಯ ಭಾವದಿಂದ ನೋಡಿರಲಿಕ್ಕಿಲ್ಲ.! ಅಂದು ಅವನಿಗಾದ ಆನಂದ ಅದೆಂಥದ್ದಿರಬಹುದು!
ನಾವು ಈಗ ಮುಟ್ಟುವ ಈ ಶಿಲ್ಪಗಳನ್ನೇ ಅವನೂ ಅದೆಷ್ಟು ಮುದ್ದಿನಿಂದ ನೇವರಿಸಿರಬಹುದು…"
ಇಂಥವೇ ಭಾವನೆಗಳು.. ಒಂದು ಬಗೆಯಲ್ಲಿ ಆ ಶಿಲ್ಪಗಳು ನಮ್ಮನ್ನು ಆ ಶಿಲ್ಪಿಯೊಡನೆ ಸಂಭಾಷಣೆಗೆ ತೊಡಗಿಸುವ ಮಾಧ್ಯಮವಾಗಿ ಕಂಡವು.

ಕಾವ್ಯ ಮೀಮಾಂಸೆಯಲ್ಲಿ ಬರುತ್ತದೆ - ಒಬ್ಬ ಕವಿಯು ತಾನು ಕಂಡ ಯಾವುದೋ ದೃಶ್ಯವನ್ನು, ತಾನು ಪಡೆದ ಆನಂದಾನುಭವವನ್ನು ತನ್ಮ ಕೃತಿಯಲ್ಲಿ ಸೆರೆಹಿಡಿದಿಡುತ್ತಾನೆ. ಮುಂದೆ ಆ ಕೃತಿಯನ್ನೋದುವ ಸಹೃದಯನೂ ಆ ಆನಂದವನ್ನೇ ಪಡೆದು, ಕವಿಯು ಕಂಡ ಅದೇ ದೃಶ್ಯವನ್ನು ಕಲ್ಪಿಸಿಕೊಳ್ಳಬಲ್ಲನಾದರೆ ಅಲ್ಲಿಗೆ ಆ ಕೃತಿಯನ್ನು ರಚಿಸಿದ ಕವಿಯೂ ಧನ್ಯ, ಆ ಕೃತಿಯೂ ಧನ್ಯ.

ಹೀಗೆ ಈ ಶಿಲ್ಪಗಳೂ ಅಂದು ಬಹುಶಃ ಆ ಶಿಲ್ಪಿಯು ಅನುಭವಿಸಿದ ಆನಂದವನ್ನೇ ನನ್ನಲ್ಲೂ ಉಂಟುಮಾಡಿದುವೇನೊ…
ಅಂತೂ ಆ ದಿನ ಹೊಸ ಲೋಕವೊಂದು ನನ್ನೆದುರು ಅನಾವರಣಗೊಂಡಿತ್ತು..

Thursday 2 April 2015

ಇಮ್ಮಡಿ ಗುಣವರ್ಮ


ಒಂಭತ್ತನೆಯ ಶತಮಾನದಲ್ಲಿದ್ದ ಕವಿ ಶ್ರೀವಿಜಯನಾದಿಯಾಗಿ ಹದಿನೆಂಟನೇ ಶತಮಾನದ ದೇವಚಂದ್ರನವರೆಗೆ ನೂರಾರು ಜೈನಕವಿಗಳು ಕನ್ನಡದಲ್ಲಿ ಅಮೂಲ್ಯವಾದ ಹಲವಾರು ಕೃತಿಗಳನ್ನು ರಚಿಸಿ ಕನ್ನಡಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನಿತ್ತಿದ್ದಾರೆವೈದಿಕ ಪುರಾಣ, ಮಹಾಕಾವ್ಯಗಳು ಪ್ರಧಾನವಾಗಿ ಸಂಸ್ಕೃತ ಭಾಷೆಯಲ್ಲಿಯೂ, ಜೈನಪುರಾಣ-ಕಾವ್ಯಗಳು ಪ್ರಾಕೃತಭಾಷೆಯಲ್ಲಿಯೂ ಮಾತ್ರ ರಚನೆಯಾಗುತ್ತಿದ್ದ ಕಾಲದಲ್ಲಿ ಅವಕ್ಕೆ ಸಂವಾದಿಯಾಗುವಂತಹ ಮಹತ್ತರ ಕೃತಿಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿಯೇ ರಚಿಸುವ ಕಾರ್ಯಕ್ಕೆ ನಾಂದಿ ಹಾಡಿದವರಲ್ಲಿ ಜೈನಕವಿಗಳೇ ಅಗ್ರಗಣ್ಯರೆಂದರೆ ತಪ್ಪಾಗಲಾರದು. ಹೀಗೆ ಕನ್ನಡಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ನೀಡಿದ ನೂರಾರು ಕವಿಗಳ ಪೈಕಿ ಇಮ್ಮಡಿ ಗುಣವರ್ಮನೂ ಒಬ್ಬ.
(*ಪ್ರಾಚೀನ ಕನ್ನಡಸಾಹಿತ್ಯದಲ್ಲಿ ಇಬ್ಬರು ಗುಣವರ್ಮರು ಕಂಡುಬರುತ್ತಾರೆ. ಮೊದಲನೆಯ ಗುಣವರ್ಮ ಸುಮಾರು ಹತ್ತನೇ ಶತಮಾನದಲ್ಲಿದ್ದವನು. ಶೂದ್ರಕ ಹಾಗೂ ಹರಿವಂಶವೆಂಬ ಕೃತಿಗಳನ್ನು ರಚಿಸಿದ್ದಾನೆ ಈತ.)

ಪ್ರಸ್ತುತ ನಾವು ಪರಿಚಯಿಸಿಕೊಳ್ಳಲಿರುವ ಕವಿ ಇಮ್ಮಡಿ ಗುಣವರ್ಮನುಪುಷ್ಪದಂತ ಪುರಾಣವೆಂಬ ಚಂಪೂಕಾವ್ಯವನ್ನೂ, ಚಂದ್ರನಾಥಾಷ್ಟಕವೆಂಬ ಕಿರುಕೃತಿಯೊಂದನ್ನೂ ರಚಿಸಿದ್ದಾನೆ. ಈತ ರಾಷ್ಟ್ರಕೂಟರ ಅರಸು ೪ನೇ ಕಾರ್ತವೀರ್ಯಾರ್ಜುನನ ಕೈಕೆಳಗೆ ನಾೞ್ಪ್ರಭುವಾಗಿದ್ದ ಶಾಂತಿವರ್ಮನೆಂಬುವವನ ಆಶ್ರಯದಲ್ಲಿದ್ದವನೆಂದು ತಿಳಿದುಬರುತ್ತದೆ. ಕಾರ್ತವೀರ್ಯಾರ್ಜುನನ ಗುರುವಾಗಿದ್ದ ಮುನಿಚಂದ್ರಪಂಡಿತನೇ ಇಮ್ಮಡಿ ಗುಣವರ್ಮನಿಗೂ ಗುರುವಾಗಿದ್ದವನು. ಕವಿಯ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ ವ್ಯಕ್ತಿಯೀತ. ಅದಕ್ಕೆಂದೇ ಗುಣವರ್ಮನು ತನ್ನ ಕೃತಿಯ ಪ್ರತಿ ಆಶ್ವಾಸದ ಅಂತ್ಯದಲ್ಲೂಮುನಿಚಂದ್ರಪಂಡಿತದೇವನನ್ನು ಸ್ತುತಿಸಿದ್ದಾನೆ. ಇವಿಷ್ಟು ವಿಷಯಗಳನ್ನಲ್ಲದೆ ಕವಿಯು ತನ್ನ ಬಗ್ಗೆ ಹೆಚ್ಚಾಗಿ ಏನನ್ನೂ ಹೇಳಿಕೊಂಡಿಲ್ಲ. ಈತನ ಕಾಲದ ಬಗೆಗೂ ಹಲವಾರು ಚರ್ಚೆಗಳು ನಡೆದಿವೆ. ಚರ್ಚೆಗಳೆಲ್ಲದರ ಒಟ್ಟು ಅಂಶವಿಷ್ಟು:
. ಈತನ ನಂತರದ ಕವಿಯಾದ ಮಲ್ಲಿಕಾರ್ಜುನ (೧೨೪೫) ’ಪುಷ್ಪದಂತಪುರಾಣವನ್ನು ಉಲ್ಲೇಖ ಮಾಡಿರುವುದರಿಂದ ಈತ ಮಲ್ಲಿಕಾರ್ಜುನನಿಗಿಂತ ಹಿಂದಿನವನಾಗಿರಬೇಕು. ಹಾಗೂ ಕೃತಿಯ ನಾಯಕನಾದ ಮಹಾಪದ್ಮನನ್ನು ಶಾಂತಿವರ್ಮನೊಡನೆ ಸಮೀಕರಿಸಿ ಕೃತಿಯನ್ನು ರಚಿಸಿರುವುದರಿಂದ ಈತನ ಕಾಲ ೧೩ನೇ ಶತಮಾನವೆಂದು ಹೇಳಬಹುದು (೧೨೦೯ರಿಂದ ೧೨೨೫ರ ನಡುವೆ ಕೃತಿಯ ರಚನೆಯಾಗಿರಬೇಕೆಂದು ವಿದ್ವಾಂಸರ ಊಹೆ). . ನಾಲ್ಕನೇ ಕಾರ್ತವೀರ್ಯನು ಕುಂತಳದೇಶದ ಕೂಂಡಿಯನ್ನು ಆಳುತ್ತಿದ್ದುದರಿಂದ ಕೂಂಡಿಯೇ ಈತನ ಸ್ಥಳವೂ ಆಗಿದ್ದಿರಬೇಕೆಂದು ಊಹಿಸಲಾಗಿದೆ. ( ಬಗ್ಗೆ ಯಾವ ಪುರಾವೆಯೂ ಇಲ್ಲ)

ಕವಿ ಗುಣವರ್ಮನು ಪಂಪನಿಂದ ನೇರವಾಗಿ ಪ್ರಭಾವಿತನಾಗಿದ್ದಾನೆ. ಪಂಪ ರನ್ನರ ಪರಂಪರೆಯಂತೆ ಈತನೂ ಕೂಡ ತನ್ನ ಪೋಷಕನಾದ ಶಾಂತಿವರ್ಮನನ್ನು ಕಥಾನಾಯಕನಾದ ಮಹಾಪದ್ಮನೊಡನೆ ಅಭೇದ ಕಲ್ಪಿಸಿ ಕೃತಿಯನ್ನು ರಚಿಸಿದ್ದಾನೆ. ಮಹಾಪದ್ಮನೇ ತನ್ನ ಮುಂದಿನ ಜನ್ಮದಲ್ಲಿ ಪುಷ್ಪದಂತನಾಗಿ ಜನಿಸಿ ತೀರ್ಥಂಕರನಾಗುವುದು ಕಾವ್ಯದ ಕಥಾವಸ್ತು. ಕಾವ್ಯಭಾಗದಲ್ಲಿ ಬರುವ ಕೆಲವು ವರ್ಣನೆಗಳಿಂದ ಗುಣವರ್ಮನು ಎಷ್ಟರ ಮಟ್ಟಿಗೆ ಪಂಪನಿಂದ ಪ್ರಭಾವಿತನಾಗಿದ್ದಾನೆ ಎಂದು ತಿಳಿದು ಬರುತ್ತದೆ. ಅದೂ ಅಲ್ಲದೆ, ”ಪಂಪನ ಕಾವ್ಯದಲ್ಲಿನ ಓಜೆ ತನ್ನ ಕಾವ್ಯದಲ್ಲಿಯೂ ಮೈಗೂಡಲಿ’ - .೩೬, ಎಂದು ಮನಸಾರೆ ಪಂಪ, ಪೊನ್ನ ಮುಂತಾದ ಪೂರ್ವಸೂರಿಗಳನ್ನು ನೆನೆದಿದ್ದಾನೆ. 

ಕಥಾವಸ್ತು: 
ಪುಂಡರೀಕಿಣಿಪುರದ ಅರಸು ಪದ್ಮ. ರಾಜಾ ಪದ್ಮನು ನೀತಿಮಾರ್ಗದಿಂದ ರಾಜ್ಯವಾಳುತ್ತಿದ್ದ. ಆತನ ಆಳ್ವಿಕೆಯಲ್ಲಿ ದೇಶವು ಸುಭಿಕ್ಷವಾಗಿತ್ತು. ಆತನ ಕೀರ್ತಿ ಲೋಕಪ್ರಸಿದ್ಧವಾಗಿತ್ತು. ಆತನಿಗೆ ಅನುರೂಪಳಾದ ಮಡದಿ ವನಮಾಲಾ. ಅವರಿಬ್ಬರಿಗೂ ಮಕ್ಕಳಾಗಲಿಲ್ಲ ಎಂಬ ಚಿಂತೆ ಬಹುವಾಗಿ ಕಾಡುತ್ತಿರಲು, ಒಮ್ಮೆ ಪದ್ಮನಿಗೆ ಶುಭ ಶಕುನಗಳು ಕಂಡುಬಂದುದರಿಂದ ಇನ್ನು ತಮಗೆ ಮಕ್ಕಳಾಗುವುದು ಖಂಡಿತ ಎಂದು ಸಂತಸ ಹೊಂದುತ್ತಾನೆ. ವಿಷಯವನ್ನು ರಾಣಿಗೂ ತಿಳಿಸುತ್ತಾನೆ. ಮುಂದೆ ಕೆಲವು ಕಾಲಕ್ಕೆ ರಾಣಿಯು ಗರ್ಭವತಿಯಾಗಿ ಶುಭಮುಹೂರ್ತದಲ್ಲಿ ಮುದ್ದಾದ ಗಂಡುಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಮಗುವಿಗೆಮಹಾಪದ್ಮಎಂದು ನಾಮಕರಣ ಮಾಡುತ್ತಾರೆ. ಕಾಲಾಂತರದಲ್ಲಿ ಮಹಾಪದ್ಮನಿಗೆ ಯುವರಾಜ ಪಟ್ಟ ಕಟ್ಟುತ್ತಾರೆ. ಮುಂದೆ ಆತನಿಗೆ ಹಲವಾರು ವಿವಾಹಗಳೂ ಆಗುತ್ತವೆ.
ಮಹಾಪದ್ಮನು ಒಮ್ಮೆ ಜಿನಮುನಿಗಳ ದರ್ಶನವನ್ನು ಪಡೆದು, ಅವರ ಮಾರ್ಗದರ್ಶನದಂತೆ ಜಿನದೀಕ್ಷೆಯನ್ನು ಪಡೆದು, ಕಾಲಾಂತರದಲ್ಲಿ ದೇಹತ್ಯಾಗ ಮಾಡಿ ಪ್ರಾಣತಕಲ್ಪವೆಂಬ ಸ್ವರ್ಗದಲ್ಲಿ ಜನಿಸುತ್ತಾನೆ. ಮುಂದೆ ಈತನೇ ಕಾಶೀ ವಿಷಯದ ರಾಜಧಾನಿಯಾದ ಕಾಕಂದಿಪುರವೆಂಬ ನಗರದ ಅರಸ ಸುಗ್ರೀವನಿಗೆ - ರಾಣಿ ಜಯರಾಮೆಯೆಂಬ ರಾಣಿಯಲ್ಲಿ ಪುಷ್ಪದಂತನೆಂಬ ಹೆಸರಿನ ಮಗನಾಗಿ ಜನಿಸುತ್ತಾನೆ. ಮುಂದೆ ಪುಷ್ಪದಂತನಿಗೆ ಯುವರಾಜ ಪಟ್ಟಾಭಿಷೇಕವೂ, ಅನೇಕ ವಿವಾಹಗಳೂ ಸಾಂಗವಾಗಿ ನೆರವೇರುತ್ತದೆ. ಪುಷ್ಪದಂತನಿಗೆ ಪಟ್ಟಮಹಿಷಿ ಚಂದ್ರಿಕಾದೇವಿಯಲ್ಲಿ ಕೀರ್ತಿಧರ ಜನಿಸಿದನು. ಅಂತೆಯೇ ಇತರ ಪತ್ನಿಯರಲ್ಲಿಯೂ ಹಲವಾರು ಪುತ್ರರು ಜನಿಸಿದರು.
ಮುಂದೊಮ್ಮೆ ಆಕಾಶದಿಂದ ಬೀಳುವ ಉಲ್ಕೆಯೊಂದನ್ನು ಕಂಡು ಪುಷ್ಪದಂತನಿಗೆ ವೈರಾಗ್ಯವುದಿಸುತ್ತದೆ. ರಾಜ್ಯಭಾರವನ್ನು ಮಗನಿಗೆ ವಹಿಸಿಕೊಟ್ಟು ತಾನು ಜಿನದೀಕ್ಷೆಯನ್ನು ಪಡೆದು, ಮುಂದೆ ಕೈವಲ್ಯಜ್ಞಾನವನ್ನು ಪಡೆದು, ನಂತರ ಮುಕ್ತಿಯನ್ನು ಹೊಂದಿ ತೀರ್ಥಂಕರನಾಗುತ್ತಾನೆ
ಶಿಶುವು(ಪುಷ್ಪದಂತ) ಜನಿಸಿದಾಗಿನಿಂದ ಹಿಡಿದು ಅವನು ತೀರ್ಥಂಕರನಾಗುವವರೆಗೂ ಕಾಲಕಾಲಕ್ಕೆ ಸ್ವತಃ ಇಂದ್ರನೇ ಧರೆಗಿಳಿದು ಬಂದು ನಾಮಕರಣವೇ ಮುಂತಾದ ಪಂಚಕಲ್ಯಾಣ ಮಹೋತ್ಸವಗಳನ್ನೂ ವೈಭವದಿಂದ ನೆರವೇರಿಸುತ್ತಾನೆ.

ಕಾವ್ಯದ ವೈಶಿಷ್ಟ್ಯತೆ: 
"ಪುಷ್ಪದಂತ ಪುರಾಣಂ" ಒಂಭತ್ತನೇ ತೀರ್ಥಂಕರನಾದ ಪುಷ್ಪದಂತನ ಚರಿತವನ್ನು ನಿರೂಪಿಸುವ - ೧೪ ಆಶ್ವಾಸಗಳಲ್ಲಿ, ೧೩೬೫ ಪದ್ಯಗಳನ್ನುಳ್ಳ ಚಂಪೂ ಕಾವ್ಯ. ಮೂಲದಲ್ಲಿ ಗುಣಭದ್ರಾಚಾರ್ಯರ ಉತ್ತರಪುರಾಣದಲ್ಲಿ ಪುಷ್ಪದಂತನ ಕಥೆ ಪ್ರಾಸಂಗಿಕವಾಗಿ ಬರುತ್ತದೆಯಷ್ಟೇ. ಕೇವಲ ೬೨ ಶ್ಲೋಕಗಳನ್ನುಳ್ಳ ಕತೆಯ ಎಳೆಯನ್ನು ಬಳಸಿಕೊಂಡು ೧೪ ಆಶ್ವಾಸಗಳ ದೀರ್ಘಕೃತಿಯನ್ನು ರಚಿಸಿದ್ದಾನೆ ಕವಿ ಇಮ್ಮಡಿ ಗುಣವರ್ಮ.
ಅಥವಾ, ಗುಣಭದ್ರರ ಉತ್ತರಪುರಾಣವಲ್ಲದೆ ಬೇರೆ ಯಾವುದಾದರೂ ಕೃತಿಯಿಂದ ಪ್ರೇರಿತನಾಗಿ ಕೃತಿಯನ್ನು ರಚಿಸಿದ್ದಾನೊ ಎಂಬುದು ವಿಚಾರಿಸಬೇಕಾದ ವಿಷಯ. ಆದರೆ, ಸಂಸ್ಕೃತ, ಪ್ರಾಕೃತ, ಅಪಭ್ರಂಶ ಭಾಷೆಗಳಲ್ಲಿನ ಜೈನಪುರಾಣಗಳಲ್ಲಿ ಪುಷ್ಪದಂತನ ಕಥೆಯು ಪ್ರಾಸಂಗಿಕವಾಗಿ ಮಾತ್ರ ಬರುತ್ತದೆಯಷ್ಟೇ ಹೊರತು ಸ್ವತಂತ್ರವಾಗಿ, ಸಮಗ್ರವಾಗಿ ಪುಷ್ಪದಂತನ ಚರಿತೆಯನ್ನೇ ಕುರಿತಾದ ಬೇರೆ ಯಾವ ಕೃತಿಯೂ ಲಭ್ಯವಿಲ್ಲ. ನಿಟ್ಟಿನಲ್ಲಿ ಗುಣವರ್ಮನ "ಪುಷ್ಪದಂತಪುರಾಣ"ವು ಮಹತ್ವವನ್ನು ಪಡೆದುಕೊಳ್ಳುತ್ತದೆ. (ಚಾವುಂಡರಾಯನಚಾವುಂಡರಾಯ ಪುರಾಣದಲ್ಲಿ ಪುಷ್ಪದಂತನ ಕತೆ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಕಂಡುಬರುತ್ತದೆಯಾದರೂ ಅಲ್ಲಿ ಕೂಡ ಅದು ಒಂದು ಕತೆಯಾಗಿ ಬರುತ್ತದೆ, ಅಷ್ಟೇ.)
ಮೂಲತಃ ಪುಷ್ಪದಂತ ತೀರ್ಥಂಕರನ ಕಥೆ ತೀರ ಸರಳವಾಗಿಯೇ ಇದೆ. ಆದ್ದರಿಂದಲೇ, ಸಾಮಾನ್ಯವಾಗಿ ಇತರೆ ಜೈನಪುರಾಣಗಳಲ್ಲಿ ಕಾಣಬರುವ ಭವಾವಳಿಗಳ ತೊಡಕುಗಳು ಕೃತಿಯಲ್ಲಿಲ್ಲ. ಹಾಗಾಗಿ ಕಥೆಯ ಹರಿವು ಅತಿ ಸರಳವಾಗಿ ಸಾಗಿಹೋಗುತ್ತದೆ. ಆದರೆ ಗುಣವರ್ಮನ ಕಾವ್ಯಶೈಲಿಯ ವೈಶಿಷ್ಟ್ಯವಿರುವುದು ಕಥೆಯ ನಿರೂಪಣೆಯಲ್ಲಿಯೇ. ಕಾವ್ಯದಲ್ಲಿ ಬರುವ ಪ್ರತಿಯೊಂದು ದೃಶ್ಯವೂ ಕಣ್ಣಿಗೆ ಕಟ್ಟಿದಂತೆ, ಮನಸಿಗೆ ನಾಟುವಂತೆ ಚಮತ್ಕಾರಯುತವಾಗಿ ವರ್ಣಿಸುವ ಆತನ ಶೈಲಿ ಮೆಚ್ಚಬೇಕಾದುದೇ!

ಮುಂಚೆ ತಾನು ಪ್ರೀತಿಯಿಂದ ಸಾಕಿ ಬೆಳೆಸಿದ್ದ ಜಿಂಕೆಯೊಂದು ಮರಿ ಹಾಕಿದೆ. ಹಿಂದೆಲ್ಲ ರಾಣಿ ವನಮಾಲೆಯನ್ನು ಕಂಡ ತಕ್ಷಣ ಓಡಿಬಂದು ಅವಳೊಂದಿಗೆ ಮುದ್ದುಗರೆಯುತ್ತಿದ್ದ ಜಿಂಕೆ ಇಂದು ತನ್ನ ಮರಿಯ ಆರೈಕೆಯಲ್ಲಿ ಮೈಮರೆತು ಈಕೆ ಬಂದುದನ್ನೂ ಗಮನಿಸದೆ ತನ್ನ ಮರಿಯನ್ನು ಮುದ್ದಾಡುವುದರಲ್ಲಿ ತಲ್ಲೀನವಾಗಿದೆ. ವಿಸ್ಮಯದ ಸಂಗತಿಯನ್ನು ನೋಡಿ ರಾಣಿಗಾಗುವ ಆಶ್ಚರ್ಯವನ್ನೂ, ತನಗೂ ಒಂದು ಮಗುವಾಗಲಿಲ್ಲವಲ್ಲ ಎಂಬ ಕೊರಗನ್ನೂ ಬಹಳ ಮನೋಜ್ಞವಾಗಿ ಚಿತ್ರಿಸುತ್ತಾನೆ ಕವಿ : 'ಎನ್ನಯ ನಡಪಿದ ಪುಲ್ಲೆಯಿಂದೆನ್ನಂ ಕಾಣುತ್ತೆ ಪರಿದು ಬರುತಿರ್ಪುದು ದಲ್ ಮುನ್ನೀಗಳ್ ಸಖಿ ಕೊಣಸಂ ನಿಲ್ಲದು ತಾಂ ಬಿಟ್ಟು ಪುತ್ರಸುಖಮೇಂ ಪಿರಿದೋ!’ ಎಂದುಕೊಳ್ಳುತ್ತಾಳೆ ರಾಣಿ ವನಮಾಲಾ.
ತಾನು ಸಾಕಿ ಬೆಳೆಸಿದ ಜಿಂಕೆಯೂ ಮುದ್ದಾದ ಮರಿಯೊಂದಕ್ಕೆ ಜನ್ಮ ನೀಡಿದೆ. ತನ್ನ ಆರೈಕೆಯಲ್ಲಿ ಬೆಳೆದ ಹಕ್ಕಿಗಳೂ ಕೂಡ ತಮ್ಮ ನವಿರಾದ ಗರಿಗಳ ಅಪ್ಪುಗೆಯಲ್ಲಿ ತಮ್ಮತಮ್ಮ ಮರಿಗಳನ್ನು ಆರೈಕೆ ಮಾಡುವುದರಲ್ಲಿ ತಲ್ಲೀನವಾಗಿವೆ. ಇನ್ನು ಬಳ್ಳಿಗಳಾದರೋ, ಹಲವಾರು ಸಾರಿ ಸುಫಲಗಳನ್ನು ತಳೆದು ಪ್ರಸವಸುಖವನ್ನು ಅನುಭವಿಸಿವೆ. ಇವುಗಳನ್ನೆಲ್ಲ ನೋಡಿ 'ಲೋಕಹಿತಕರನಾದ ಮಗನೊಬ್ಬನು ನನಗೆಂದು ಜನಿಸುವನೊ' ಎಂದು ಹಂಬಲಿಸುತ್ತಾಳೆ ಆಕೆ. ಸನ್ನಿವೇಶದ ವರ್ಣನೆ ಬಹಳ ಸೊಗಸಾಗಿ ಮೂಡಿಬಂದಿದೆ.
ಸಂಸ್ಕೃತಭೂಯಿಷ್ಠವಾದ, ಪಾಂಡಿತ್ಯಪ್ರಧಾನ ಪದ್ಯಗಳಷ್ಟೇ ಅಲ್ಲದೆ ದೇಸೀ ಸೊಗಡಿನ ಪದ್ಯಗಳೂ ಸುಮಾರಿವೆ ಕೃತಿಯಲ್ಲಿ. ಕಾಲಕ್ಕೆ ಪ್ರಚಲಿತವಿದ್ದ ಹಲವು ನಾಣ್ನುಡಿಗಳೂ ಸಾಂದರ್ಭಿಕವಾಗಿ ಬರುತ್ತವೆ.
ಒಟ್ಟಿನಲ್ಲಿ ಗುಣವರ್ಮ ಉತ್ತಮ ಕೃತಿರಚನಾ ಸಾಮರ್ಥ್ಯವುಳ್ಳ ಪ್ರೌಢಕವಿ. ಈತನ ಪದ್ಯಗಳು ಸೂಕ್ತಿಸುಧಾರ್ಣವ ಹಾಗೂ ಇತರೆ ಕೃತಿಗಳಲ್ಲಿಯೂ ಉದಾಹೃತವಾಗಿರುವುದೇ ಇದಕ್ಕೆ ಸಾಕ್ಷಿ. ಪುಷ್ಪದಂತ ತೀರ್ಥಂಕರನ ಬಗೆಗೆ ಬೇರೆ ಯಾವ ಭಾಷೆಯಲ್ಲಿಯೂ ಸ್ವತಂತ್ರ ಕಾವ್ಯವೇ ಇಲ್ಲದಿರುವಾಗ ಗುಣವರ್ಮನು ಪ್ರೌಢಕಾವ್ಯವನ್ನು ರಚಿಸಿ ಕನ್ನಡಕ್ಕೆ ಕೀರ್ತಿಯನ್ನು ತಂದುಕೊಟ್ಟ ಕಾರಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಈತನಿಗೊಂಡು ವಿಶಿಷ್ಟ ಸ್ಥಾನವಿದೆ. ಅಷ್ಟೇ ಅಲ್ಲದೆ, ತನ್ನ ಆಶ್ರಯದಾತನಾದ ಶಾಂತಿವರ್ಮನನ್ನು ಕಥಾನಾಯಕನಿಗೆ ಸಮೀಕರಿಸಿ ಕೃತಿರಚನೆ ಮಾಡಿರುವುದರಿಂದ ಕೃತಿಯ ಚಾರಿತ್ರಿಕ ಮೌಲ್ಯವೂ ಹೆಚ್ಚಿದೆ.