Sunday 13 September 2015

ಬಾಹುಬಲಿಯ ನೆನಪು...

ಆದಿನಾಥನ ಮಗನಾದ ಭರತನು ತನ್ನ ಆಯುಧಾಗಾರದಲ್ಲಿ ಉದಿಸಿದ ಚಕ್ರರತ್ನವನ್ನು ಮುಂದಿಟ್ಟುಕೊಂಡು ಇಡೀ ಭೂಮಂಡಲದ ಅರಸರೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿ, 'ಚಕ್ರವರ್ತಿ', 'ಚಕ್ರಿಎಂಬ ಬಿರುದನ್ನು ಪಡೆದುತನ್ನ ವಿಜಯಯಾತ್ರೆಯನ್ನು ಮುಗಿಸಿ ಇನ್ನೇನು ರಾಜಧಾನಿಯಾದ ಅಯೋಧ್ಯಾಪುರವನ್ನು ಹುಗಬೇಕುಆಗ ಆ ಚಕ್ರರತ್ನವು ನಗರವನ್ನು ಪ್ರವೇಶಿಸದೆ ಹೊರಗೇ ನಿಂತುಬಿಡುತ್ತದೆ.
ಅದಕ್ಕೆ ಕಾರಣವೇನೆಂದು ಭರತನು ಕೇಳಲುಪುರೋಹಿತನು 'ನಿನ್ನ ತಮ್ಮಂದಿರೇ ನಿನ್ನ ಹಿರಿಮೆಯನ್ನೊಪ್ಪಿ ತಲೆಬಾಗದಿರುವುದರಿಂದ ಹೀಗೆ ಚಕ್ರರತ್ನವು ಊರ ಹೊರಗೇ ನಿಂತಿದೆ. ಮೊದಲು ಅವರು ನಿನಗೆ ಶರಣಾಗುವಂತೆ ಮಾಡುಅವರನ್ನು ನಿಗ್ರಹಿಸುಎಂದು ಸೂಚಿಸುತ್ತಾನೆ. ಭರತನಿಗೆ ಈ ವಿಷಯ ಕೇಳಿ ಅಸಾಧ್ಯ ಕೋಪವುಂಟಾಗುತ್ತದೆ.
ತಾನು ಚಕ್ರವರ್ತಿಯೆಂದು ಅನ್ಯ ರಾಜರೆಲ್ಲರೂ ಒಪ್ಪಿ ತನಗೆ ತಲೆಬಾಗಿದ್ದಾರೆ. ಆದರೆ ಸ್ವತಃ ತನ್ನ ತಮ್ಮಂದಿರೇ ತನ್ನ ಸಾರ್ವಭೌಮತ್ವವನ್ನು ಒಪ್ಪದಿದ್ದರೆ ಹೇಗೆ.!  ಶೀಘ್ರವೇ ತನ್ನ ತಮ್ಮಂದಿರೆಲ್ಲ ಬಂದು ತನಗೆ ತಲೆಬಾಗಬೇಕೆಂದು ಒಂದು ಪತ್ರವನ್ನು ಬರೆಸಿ ಅವರಲ್ಲಿಗಟ್ಟುತ್ತಾನೆ.

ಭರತನ ಇತರ ತಮ್ಮಂದಿರು ಭರತನಿಗೆ ತಲೆಬಾಗಲೊಪ್ಪದೆ, ಅಣ್ಣತಮ್ಮಂದಿರ ನಡುವೆಯೇ ಜಗಳ ತಂದಿಡುವ ತಮ್ಮ ರಾಜ್ಯದ ಮೇಲೆ ವೈರಾಗ್ಯವನ್ನೇ ತಳೆದು ಜಿನದೀಕ್ಷೆಯನ್ನು ಪಡೆಯುತ್ತಾರೆ. 
ಆದರೆ ಭರತನ ಮಲತಮ್ಮನಾದ ಬಾಹುಬಲಿಯು "ಹಿರಿಯಣ್ಣನಿಗೆ ನಮಿಸುವುದು ತಪ್ಪೇನಲ್ಲ. ಆದರೆ, ಹೀಗೆ ಖಡ್ಗವನ್ನು ತಲೆಯ ಮೇಲಿಟ್ಟು 'ನನಗೆ ತಲೆಬಾಗು' ಎಂದು ಹೇಳುವಾಗ ಅಂಥವನಿಗೆ ತಲೆಬಾಗುವುದು ಹೇಡಿತನ. ಬೇಕಿದ್ದರೆ ಭರತ ನನ್ನೊಡನೆ ಕಾದಿ ತನ್ನ ಶಕ್ತಿಯನ್ನು ನಿರೂಪಿಸಿಕೊಳ್ಳಲಿ" ಎಂದು ಉತ್ತರಿಸಿ ಕಳುಹಿಸುತ್ತಾನೆ. ಮುಂದೆ ಭರತ-ಬಾಹುಬಲಿಯರ ನಡುವಿನ ಕಾಳಗಕ್ಕೆ ಸಿದ್ಧತೆಗಳು ಶುರುವಾಗುತ್ತವೆ.

ಆದರೆ, ಮುಂದೆ, ಯುದ್ಧದ ಹೆಸರಿನಲ್ಲಿ ನಡೆಯುವ ರಕ್ತಪಾತವನ್ನು ತಡೆಗಟ್ಟಲೆಂದು, ಕೇವಲ ಭರತ-ಬಾಹುಬಲಿ - ಇವರುಗಳು ಮಾತ್ರ ಒಬ್ಬರೊಡನೊಬ್ಬರು ಕಾದಬೇಕೆಂದು ನಿಶ್ಚಯಿಸುತ್ತಾರೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ - ಈ ಮೂರರಲ್ಲೂ ಯಾರು ಗೆಲ್ಲುತ್ತಾರೋ ಅವರೇ ವಿಜೇತರೆಂಬ ಮಾತಿಗೆ ಒಪ್ಪುತ್ತಾರೆ.
ಧರ್ಮಯುದ್ಧ ಶುರುವಾಗುತ್ತದೆ. ದೃಷ್ಟಿಯುದ್ಧ, ಜಲಯುದ್ಧಗಳಲ್ಲಿ ಭರತನಿಗೆ ಸೋಲುಂಟಾಗುತ್ತದೆ. ಮಲ್ಲಯುದ್ಧದಲ್ಲಿಯೂ ಬಾಹುಬಲಿಯೇ ಮೇಲುಗೈ ಸಾಧಿಸುತ್ತಾನೆ.  ಒಂದು ಹಂತದಲ್ಲಿ ಬಾಹುಬಲಿಯು ಭರತನನ್ನು ಅನಾಮತ್ತಾಗಿ ಮೇಲಕ್ಕೆತ್ತಿ ಹಿಡಿದರೂ ನೆಲದ ಮೇಲಕ್ಕೆ ಅವನನ್ನು ಅಪ್ಪಳಿಸಿ ಎಸೆಯಲು ಮನಸ್ಸು ಬಾರದೇ ಅಣ್ಣನೆಂಬ ಗೌರವದಿಂದ ಭರತನನ್ನು ಮೆಲ್ಲಗೆ ನೆಲದ ಮೇಲಿಳಿಸುತ್ತಾನೆ. ಅಲ್ಲಿಗೆ ಮಲ್ಲಯುದ್ಧದಲ್ಲಿಯೂ ಬಾಹುಬಲಿಯೇ ಗೆಲ್ಲುತ್ತಾನೆ.

ತನಗೆ ಪರಾಭವವಾದ್ದರಿಂದ - ಅವಮಾನದಿಂದಲೂ ಕೋಪದಿಂದಲೂ ಕೂಡಿದ ಭರತನು ಬಾಹುಬಲಿಯೆಡೆಗೆ ಚಕ್ರವನ್ನು ಪ್ರಯೋಗಿಸುತ್ತಾನೆ. ಆದರೆ ಚಕ್ರವು ಬಾಹುಬಲಿಗೆ ಯಾವ ಹಾನಿಯನ್ನೂ ಮಾಡದೆ, ಅವನಿಗೆ ಪ್ರದಕ್ಷಿಣೆ ಬಂದು, ಅವನ ಬಲಪಕ್ಕದಲ್ಲಿ ಕಾಂತಿಹೀನವಾಗಿ ನಿಲ್ಲುತ್ತದೆ.
ಅಷ್ಟರಲ್ಲಿ ಬಾಹುಬಲಿಗೆ 'ರಾಜ್ಯಕ್ಕಾಗಿ ತನ್ನ ಅಣ್ಣನೊಡನೆಯೇ ತಾನು ಕಾದಿದೆನಲ್ಲ' ಎಂದು ನೆನೆದು ಬಹಳ ವೇದನೆಯಾಗುತ್ತದೆ. ಮೂರೂ ಯುದ್ಧಗಳಲ್ಲಿಯೂ ತಾನೇ ಗೆದ್ದಿದ್ದರೂ ತನ್ನ ರಾಜ್ಯವನ್ನು ಭರತನಿಗೇ ಒಪ್ಪಿಸಿ, ತಾನು ತಪಶ್ಚರ್ಯೆಯಲ್ಲಿ ತೊಡಗಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಅದನ್ನೇ ಭರತನಿಗೂ ವಿನಯದಿಂದ ತಿಳಿಸುತ್ತಾನೆ.
ಅಷ್ಟರಲ್ಲಾಗಲೇ ಭರತನಿಗೂ ತನ್ನ ತಪ್ಪಿನ ಅರಿವಾಗಿರುತ್ತದೆ. ಅವನು ಬಾಹುಬಲಿಯನ್ನು ತಪಸ್ಸಿಗೆ ಹೊರಡಬೇಡವೆಂದು ಪ್ರಾರ್ಥಿಸುತ್ತಾನೆ. ಆದರೆ ಬಾಹುಬಲಿಯ ನಿರ್ಧಾರ ದೃಢವಾಗಿರುತ್ತದೆ. ಅವು ಭರತನಿಗೆ ಹೇಳುತ್ತಾನೆ :-

"ನೆಲಸುಗೆ ನಿನ್ನ ವಕ್ಷದೊಳೆ ನಿಚ್ಚಳಮೀಭಟಖಡ್ಗಮಂಡಲೋ
ತ್ಪಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ"
                                                                        - ಆದಿಪುರಾಣ ೧೪.೧೩೦

'ಅಣ್ಣವೀರಭಟರ ಖಡ್ಗಗಳೆಂಬ ಕಮಲವನದಲ್ಲಿ ವೈಭವದಿಂದ ವಿಹರಿಸುವ ದುಂಬಿಯಾದ ಈ ರಾಜ್ಯಲಕ್ಷ್ಮಿಯು ನಿನ್ನೆದೆಯಲ್ಲಿಯೇ ನಿತ್ಯವೂ ನೆಲೆಸಲಿ. ನಮ್ಮ ತಂದೆಯು ನನಗೆ ಕೊಟ್ಟ ಈ ಭೂಮಿಯನ್ನು ನಿನಗೇ ಕೊಡುತ್ತಿದ್ದೇನೆತೆಗೆದುಕೋ ಅಣ್ಣ. ನೀನು ಬಯಸಿದ ಹೆಣ್ಣಿಗೂ ಮಣ್ಣಿಗೂ ನಾನೂ ಆಶಿಸಿದೆನಾದರೆ ನನ್ನಯ ಕೀರ್ತಿ ಮಾಸದೇ.?'

"ನಾನು ನಿನ್ನ ವಿಷಯದಲ್ಲಿ ತೋರಿದ ಅವಿನಯ ಪ್ರಯುಕ್ತವಾದ ದೋಷವನ್ನು ಇನ್ನು ಮುಂದೆ ತಪಸ್ಸನ್ನಾಚರಿಸುವ ಮೂಲಕ ನಿವಾರಿಸಿಕೊಳ್ಳುತ್ತೇನೆ. ನನ್ನ ಬಗೆಗಿನ ಆಗ್ರಹವನ್ನು ತೊರೆಅಣ್ಣ. ನನ್ನ ದುಶ್ಚೇಷ್ಟೆಯನ್ನು ಕ್ಷಮಿಸು."

ಬಾಹುಬಲಿಯೆಂದಾಕ್ಷಣಎಷ್ಟೋ ಸಾರಿ ಈ "ನೆಲಸುಗೆ ನಿನ್ನ ವಕ್ಷದೊಳೆ...." ಪದ್ಯ ನೆನಪಾಗುತ್ತದೆ.






No comments:

Post a Comment