Saturday 12 September 2015

ಆಗಸವ ನೋಡುತ್ತ…

ಹೀಗೇ ಒಂದ್ಹತ್ತು ನಿಮಿಷಗಳಿಂದ ಆಕಾಶವನ್ನೇ ನೋಡುತ್ತ ಕುಳಿತಿದ್ದೆ. ತೆರೆಯ ಮೇಲಿನ ಚಿತ್ರಗಳಂತೆ ಮೋಡಗಳು ಒಂದರ ಹಿಂದೆ ಒಂದು ಸಾಗುತ್ತಿದ್ದವು. ಕೆಲವು ಅಪ್ಪಟ ಬಿಳಿಯವಾದರೆ ಕೆಲವು ಭಾಗಶಃ ಕಪ್ಪಿನ ಛಾಯೆಯವು…
ಆಗಸದ ಹಿನ್ನೆಲೆಯೂ ವರ್ಣರಂಜಿತವಾಗಿಯೇ ಇತ್ತು. ಸ್ವಲ್ಪ ಬಿಳಿ, ಸ್ವಲ್ಪ ನೀಲಿ, ಕಂಡೂ ಕಾಣದಂತೆ ತಿಳಿ ಹಳದಿಯ ಅಥವಾ ತಿಳಿ ಬಂಗಾರದ ಬಣ್ಣ. ಒಂದು ಕಡೆ ದಟ್ಟ ಕೆಂಪಿನ ಬಣ್ಣ.. ಅದರ ಆಚೀಚೆಗೆ ತಿಳಿ ಕೆಂಪು ಅಥವಾ ಗುಲಾಬಿ! ಅಂತೂ ಆ ವಿವಿಧ ವರ್ಣಗಳು ಹಿನ್ನೆಲೆಯಲ್ಲಿರಲು ಈ ಮೋಡಗಳ ಮೆರವಣಿಗೆ ಸಾಗಿತ್ತು.

ಇಲ್ಲಿ, ನನ್ನ ಮನಸೂ ಏನೇನೋ ಯೋಚಿಸುತ್ತಿತ್ತು. ಓಡುತ್ತಿರುವ ಈ ಮೋಡಗಳಂತೆಯೇ ನನ್ನ ಆಲೋಚನೆಗಳೂ ಕೂಡ ಮೂಡಿ ಮರೆಯಾಗುತ್ತ, ಕ್ಷಣಕ್ಷಣಕ್ಕೂ ಬೇರೆಬೇರೆಯಾಗಿ ತೋರಿದವು.

ಹಾಗೇ ಒಮ್ಮೆ ಆದಿಪುರಾಣದ ನೆನಪಾಯಿತು ನನಗೆ. ಅದರಲ್ಲೂ ಇಂಥದ್ದೇ ಒಂದು ಪ್ರಸಂಗ. ಜೈನ ಅರಸನೊಬ್ಬ ಆಗಸದಲ್ಲಿನ ಮೋಡಗಳನ್ನು ನೋಡುತ್ತಿರುವಾಗ ಅವನಿಗೆ ಗೋಪುರದ ರೂಪದಲ್ಲಿರುವ ಮೋಡವೊಂದು ಕಾಣಿಸುತ್ತದೆ. ಅದನ್ನು ಕಂಡ ಅವನ ಮನಸ್ಸು ಆನಂದದಿಂದ ನಲಿಯುತ್ತದೆ.
ಆಹಾ! ಈ ಸುಂದರ ಮೋಡದ ಚಿತ್ರವನ್ನಾದರೂ ರಚಿಸೋಣವೆಂದುಕೊಂಡು ಆತ ಚಿತ್ರ ಬಿಡಿಸುವ ಸಾಮಗ್ರಿಗಳನ್ನು ತರಲು ಆಳುಗಳಿಗೆ ಹೇಳುತ್ತಾನೆ. ಇನ್ನೇನು ಎಲ್ಲ ಸಾಮಗ್ರಿಗಳೂ ಸಿಕ್ಕು ಆತ ಆ ಮೋಡದ ಚಿತ್ರವನ್ನು ಬಿಡಿಸಲು ತೊಡಗಬೇಕು, ಆಗ ಅವನು ಆಗಸದ ಕಡೆಗೆ ನೋಡಿದರೆ ಅಲ್ಲಿ ಆ ಸುಂದರ ರೂಪದ ಮೋಡವೇ ಇಲ್ಲ!
ಅಷ್ಟರಲ್ಲಾಗಲೇ ಆ ಮೋಡದ ಹಿಂದಿನ ರೂಪವು ಹೋಗಿ ಅದು ಗುರುತು ಹಿಡಿಯಲೂ ಆಗದಂತಾಗಿರುತ್ತದೆ.

ಅಯ್ಯೊ, ಒಂದೆರಡು ಕ್ಷಣಗಳಲ್ಲೇ ಎಂತಹ ಬದಲಾವಣೆ. ಮನೋಹರವಾದ ಗೋಪುರವನ್ನು ಹೋಲುವ ಆ ಮೋಡದ ರೂಪ ಅದೆಷ್ಟು ಬೇಗ ಕರಗಿಹೋಯಿತು. ಎಷ್ಟು ಕ್ಷಣಿಕವದು! - ಅವನಿಗೆ ಈ ವಿಚಾರ ಬೋಧೆಯಾಗುತ್ತದೆ. ನರರ ಬಾಳೂ ಅಂತೆಯೇ ಅನಿತ್ಯವಾದದ್ದು ಎಂಬ ಸತ್ಯ ಅವನಿಗೆ ತೋರುತ್ತದೆ. ಮನಸಿನಲ್ಲಿ ವೈರಾಗ್ಯ ಬೇರೂರುತ್ತದೆ.
ತಕ್ಷಣವೇ ಅವನು ಲೌಕಿಕ ವಿಷಯಗಳ ಬಗ್ಗೆ ನಿರ್ಲಿಪ್ತನಾಗಲು ಬಯಸಿ, ತನ್ನ ಮಗುವಿಗೆ ರಾಜ್ಯದ ಪಟ್ಟ ಕಟ್ಟಿ ತಾನು ಜಿನದೀಕ್ಷೆಯನ್ನು ಪಡೆಯುತ್ತಾನೆ.

ಮಾಮೂಲಾಗಿ ಜೈನಪುರಾಣಗಳಲ್ಲಿ ಯಾರಾದರೂ ಅರಸನಲ್ಲಿ ವೈರಾಗ್ಯ ಮೂಡುವ ಪ್ರಸಂಗದ ವಿವರಣೆ - ಆತನಿಗೆ ತನ್ನ ಕೂದಲಿನಲ್ಲಿ ನೆರೆ ಕಂಡಾಗ ಅವನಿಗೆ ವೈರಾಗ್ಯವುದಿಸಿತು - ಎಂಬಂತಿರುತ್ತದೆ. ತೀರ ಇದೇ ಕಾರಣವು ಬಹುತೇಕ ಎಲ್ಲ ಕತೆಗಳಲ್ಲಿ ಬಂದಾಗ ಅದೊಂದು ರೀತಿಯ ಏಕತಾನತೆ ಎನಿಸುತ್ತದೆ. ಕತೆಯಲ್ಲಿ ಅಂಥ ಸ್ವಾರಸ್ಯವೂ ಇರೋಲ್ಲ.

ಅವುಗಳಿಗೆ ಹೋಲಿಸಿದರೆ ಈ ಮೋಡವನ್ನು ಕಂಡು ವೈರಾಗ್ಯವುದಿಸುವ ಪ್ರಸಂಗ ಸ್ವಲ್ಪ ಭಿನ್ನವಾಗಿಯೂ ಹೊಸದಾಗಿಯೂ ತೋರುತ್ತದೆ.

No comments:

Post a Comment