Wednesday 9 September 2015

"ಉದ್ಭಟಕಾವ್ಯ"ವೆಂಬ "ಶೃಂಗಾರಸಾರ"

ಎಷ್ಟೋ ಸಾರಿ ಹಾಗಾಗುವುದುಂಟು, ತೀರ ಅನಿರೀಕ್ಷಿತವಾಗಿ ಯಾವುದೋ ಅಪರೂಪದ ವಸ್ತುವೊಂದು ನಮ್ಮ ಕೈಗೆ ಸಿಕ್ಕುಬಿಡುತ್ತೆ. ಆ ನಂತರ ಅದೆಷ್ಟೋ ದಿನಗಳವರೆಗೂ ಅದರ ಬಗೆಗಿನ ಸೆಳೆತ... ಅದರ ಗುಂಗಿನಲ್ಲೇ ಕಾಲ ಕಳೆಯುವಂತಾಗುತ್ತದೆ. ಇತ್ತೀಚೆಗೆ ನನಗೂ ಹೀಗೆಯೇ ಆಯಿತು.
ಮೊನ್ನೆ ಒಮ್ಮೆ ರ‍್ಯಾಕಿನಲ್ಲಿದ್ದ ಪುಸ್ತಕಗಳನ್ನು ಜೋಡಿಸುತ್ತಿರುವಾಗ ಅವುಗಳಲ್ಲಿ ಒಂದು ಪುಸ್ತಕ ಕೆಳಗೆ ಬಿತ್ತು. ಕೆಳಮುಖವಾಗಿ ಬಿದ್ದಿದ್ದ ಪುಸ್ತಕವನ್ನೆತ್ತಿಕೊಂಡು, ಅರೆತೆರೆದಿದ್ದ ಅದರ ಪುಟವೊಂದನ್ನು ನೋಡಿದಾಗ ಕೆಲವು ಸೊಗಸಾದ ಪದ್ಯಗಳು ಕಂಡವು. ಆಗಷ್ಟೇ ಪುಸ್ತಕದ ಹೆಸರನ್ನು ನೋಡಿದ್ದು - "ಸೋಮರಾಜನ ಉದ್ಭಟಕಾವ್ಯ".!
ಕಳೆದ ವರ್ಷದ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಖರೀದಿಸಿದ್ದೆ ಇದನ್ನು. ಓದಲು ಮಾತ್ರ ಆವರೆಗೆ ಕಾಲ ಕೂಡಿಬಂದಿರಲಿಲ್ಲ. ಪುಸ್ತಕವನ್ನೇ ನೋಡುತ್ತ ನೋಡುತ್ತ - ಯಾರು ಈ ಸೋಮರಾಜ. ಈ ಉದ್ಭಟನಾರು ಎಂಬ ಕುತೂಹಲ ಮೂಡಿದ್ದರಿಂದ ಓದಲು ಶುರು ಮಾಡಿದೆ. ಆ ಕೃತಿಯ ಪರಿಚಯ ಈ ಲೇಖನದಲ್ಲಿ:

ಕವಿ, ಕಾಲ ವಿಚಾರ:
ಉದ್ಭಟಕಾವ್ಯವನ್ನು ರಚಿಸಿದವನು ಸೋಮರಾಜನೆಂಬ ವೀರಶೈವ* ಕವಿ. ಈತ ಬರಿಯ ಕವಿಯಾಗಿರದೆ ಅರಸನೂ ಆಗಿದ್ದಿರಬೇಕು. ಕೃತಿಯ ಆದಿಯಲ್ಲಿ ತನ್ನ ವಂಶದ ಬಗೆಗೆ ಹೇಳಿಕೊಳ್ಳುವಾಗ ಹಾಗೂ ಕೃತಿಯ ಹಲವು ಕಡೆಗಳಲ್ಲಿ ತನ್ನನ್ನು ಸೋಮರಾಜ, ಸೋಮನೃಪ, ಸೋಮಭೂಮೀಶ್ವರ‍, ಸೋಮರಾಜೇಂದ್ರ ಎಂದು ಕರೆದುಕೊಂಡಿದ್ದಾನೆ. 
ತನ್ನ ವಂಶದ ಹಿರಿಮೆಯನ್ನು ಕವಿ ಹೀಗೆ ಹೇಳಿಕೊಂಡಿದ್ದಾನೆ: "ಚಂದ್ರವಂಶದಲ್ಲಿ ಜನಿಸಿದ ತಿರುಮಲ ಮಹಾರಾಜನ ಮಗ ರಾಯಣ. ಈ ರಾಯಣಭೂಪನ ಮಗ ರಾಜಶ್ರೇಷ್ಠನಾದ ಚಂದ್ರಶೇಖರ ಎಂಬುವವನು. ಆ ಚಂದ್ರಶೇಖರ ರಾಜನ ಮಗನೇ ಸೋಮರಾಜ."
ಈ ಪ್ರವರದಲ್ಲಿ ಬರುವ ವಿವರದಿಂದ ಸೋಮರಾಜನು ಚಂದ್ರವಂಶಕ್ಕೆ ಸೇರಿದ ದೊರೆಯೆಂದು ತಿಳಿದುಬರುತ್ತದೆಯಾದರೂ
, ಇವನು ಹಾಗೂ ಇವನ ಪೂರ್ವಿಕರು ಯಾವ ಪ್ರಾಂತವನ್ನು ಆಳುತ್ತಿದ್ದರೆಂದು ತಿಳಿಯುವುದಿಲ್ಲ. ಆ ಬಗ್ಗೆ ಸೋಮರಾಜನು ಹೆಚ್ಚಿಗೆ ಏನನ್ನೂ ಹೇಳಿಕೊಂಡಿಲ್ಲ. ಆದರೂ ಕೃತಿಯಲ್ಲಿ ಕುಂತಳದೇಶವನ್ನೂ, ಪಂಪಾಕ್ಷೇತ್ರದ ಸೌಂದರ್ಯ, ಮಹಿಮೆಯನ್ನೂ ಕುರಿತು ಮನದುಂಬಿ, ಅತಿ ಪ್ರೀತಿ-ಹೆಮ್ಮೆಯಿಂದ ವರ್ಣಿಸಿರುವುದನ್ನು ನೋಡಿದರೆ ಬಹುಶಃ ತುಂಗಾನದಿಯ ಹತ್ತಿರದ್ದೇ ಯಾವುದಾದರೂ ಪ್ರಾಂತವನ್ನು ಸೋಮದೇವನ ವಂಶದವರು ಆಳುತ್ತಿದ್ದಿರಬೇಕೆಂದು ಊಹಿಸಬಹುದಾಗಿದೆ. ("ಈ ವಂಶದ ಅರಸರು ಎಲ್ಲಿ ರಾಜ್ಯವಾಳುತ್ತಿದ್ದರೋ ತಿಳಿಯದು. ಆದರೆ, ಪಶ್ಚಿಮ ತೀರದಲ್ಲಿ ಆಳುತ್ತಿದ್ದ ವೀರಶೈವ ಮತಾವಲಂಬಿಗಳಾದ ಚೌಟರಾಜರಲ್ಲಿ ತಿರುಮಲರಾಯ, ಚಂದ್ರಶೇಖರ ಎಂಬ ಹೆಸರುಗಳು ದೊರೆಯುತ್ತದೆ" ಎಂದು ಕವಿಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ).

ಇನ್ನು, ಕೃತಿಯ ಪೀಠಿಕೆಯಲ್ಲಿ ಸೋಮರಾಜ ತನ್ನ ಪೂರ್ವಸೂರಿಗಳ ಪೈಕಿ ಹರಿಹರನನ್ನೂ, ಕೆರೆಯ ಪದ್ಮರಸನನ್ನೂ ಪ್ರೀತಿಯಿಂದ ಸ್ಮರಿಸಿದ್ದಾನೆ. ಮೇಲಾಗಿ, ಈ ಕೃತಿಯ ಮೂಲ ಕಥೆಯನ್ನೂ ಹಾಗೂ ಕೃತಿಯ ನಡೆಗೆ ಹೊಂದುವಂತೆ ಸಾಂದರ್ಭಿಕವಾಗಿ ಬರುವ ಇತರೆ ಶಿವಶರಣರ ಕಥೆಗಳಿಗೂ ಕೂಡ ಹರಿಹರ ವಿರಚಿತ ರಗಳೆಗಳೇ ಮೂಲವಿರಬೇಕೆಂದು (ನನಗೆ) ತೋರುತ್ತದೆ. *ಹರಿಹರ ಹಾಗೂ ಅಲ್ಲಮಪ್ರಭುದೇವರ ಪ್ರಭಾವ ಈತನ ಮೇಲೆ ಬಹುವಾಗಿ ಇರುವುದನ್ನು ನೋಡಿದರೆ ಈತನೊಬ್ಬ ವೀರಶೈವ ಕವಿ/ ದೊರೆಯಾಗಿದ್ದಿರಬೇಕೆಂದು ಊಹಿಸಬಹುದು.

ಗುರುವಲ್ಲಮಾಂಕ ನಾಮಸ್ಮರಣಮನೊಂದೊಂದು ನೆವದೊಳ್ ಅಭಿನುತಿಗೈವೆಂ "ವರವಾಣಿ ಸೋಮಭೂಮೀಶ್ವರ, ಭಾಪುರೆ!" ಎಂದು ಸುಜನತತಿ ಕೀರ್ತಿಪಿನಂ. (ಗುರುವಾದ ಅಲ್ಲಮಾಂಕನ ನಾಮವನ್ನು ಸ್ಮರಿಸಿ, ಆಹಾ, ವಾಣಿಯ/ವಿದ್ಯಾಧಿದೇವತೆಯ ವರವನ್ನು ಪಡೆದ ಸೋಮರಾಜನೆ, ಭೇಷ್! ಎಂದು ವಿದ್ವಜ್ಜನ ಕೀರ್ತಿಸುವ ಹಾಗೆ ಈ ಕೃತಿಯನ್ನು ರಚಿಸುವೆನು)
ಸೋಮ ಕವಿ ಅಲ್ಲಮನನ್ನು ಗುರುಸ್ಥಾನದಲ್ಲಿಟ್ಟು ಸ್ಮರಿಸಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಮ ಪ್ರಭುವಿನ ಬಗೆಗೆ ಈತನಿಗೆ ಅಪಾರವಾದ ಭಕ್ತಿಯಿತ್ತೆಂಬುದು ಈತ ತನ್ನ ಕೃತಿಯನ್ನು ಅಲ್ಲಮನಿಗೇ ಅರ್ಪಿಸಿ ರಚಿಸಿರುವುದರಿಂದ ಸ್ಪಷ್ಟವಾಗುತ್ತದೆ. ಅದೂ ಅಲ್ಲದೆ ಪ್ರತಿ ಆಶ್ವಾಸದ ಕೊನೆಯ ಪದ್ಯದಲ್ಲಿಯೂ ಅಲ್ಲಮಪ್ರಿಯ ಲಿಂಗದೇವನನ್ನು ಸ್ಮರಿಸಿದ್ದಾನೆ.

ಒಟ್ಟಾರೆಯಾಗಿ, ಈ ಕೃತಿ ಹಾಗೂ ಸೋಮಕವಿಯ ಪಾಂಡಿತ್ಯವು ಪ್ರಶಂಸಾರ್ಹವಾಗಿದೆ. ಅವನ ನಂತರದ ಕೆಲವು ಕವಿಗಳಿಗೆ ಸೋಮರಾಜನ ಈ ಕೃತಿ ಸ್ಫೂರ್ತಿ ನೀಡಿದೆ (ಷಡಕ್ಷರಿ ಹಾಗೂ ವೃತ್ತವಿಲಾಸರ ಕೆಲವು ಪದ್ಯಗಳು ನೇರವಾಗಿ ಈತನ ಪದ್ಯಗಳನ್ನೇ ಅನುಸರಿಸಿದಂತಿವೆ). ಇನ್ನು, ಪೂರ್ವಕವಿಗಳ ಕಾವ್ಯಗಳ ಬಗೆಗೆ ಸೋಮರಾಜನಿಗಿದ್ದ ಆಳವಾದ ಜ್ಞಾನ ಈ ಕೃತಿಯ ಆದ್ಯಂತವಾಗಿ ಕಂಡುಬರುತ್ತದೆ.

ಕೃತಿಯ ಆದಿಯಲ್ಲಿ ತನ್ನ ಕಾವ್ಯದ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾನೆಯಾದರೂ ಕೃತಿಯ ಕೊನೆಯ ಆಶ್ವಾಸದಲ್ಲಿ ಸೋಮ ಕವಿ ವಿನಯದಿಂದ ಹೀಗೆ ಮನವಿ ಮಾಡಿಕೊಂಡಿದ್ದಾನೆ: "ನಾನೇನೂ ಕವಿಯೂ ಅಲ್ಲ, ಶಾಸ್ತ್ರಜ್ಞಾನಿಯೂ ಅಲ್ಲ, ಮಹಾವಾಗ್ಮಿಯೂ ಅಲ್ಲ. ಶಿವಭಕ್ತರ ಪಾದಕಮಲದ ರಜವೆಂಬ ಪವಿತ್ರ ವಿಭೂತಿಯನ್ನು ಧರಿಸಿ ಈ ಕೃತಿಯನ್ನು ನನಗೆ ತಿಳಿದ ಮಟ್ಟಿಗೆ ನಾನು ಹೇಳಿದ್ದೇನೆ/ರಚಿಸಿದ್ದೇನೆ. ವಿದ್ವಜ್ಜನರು ತಮ್ಮ ಕೋಪತಾಪಗಳನ್ನು ಬದಿಗಿಟ್ಟು ಸಂಪ್ರೀತಿಯಿಂದ ಇದನ್ನು ಆಲಿಸಬೇಕು".

ಕೃತಿಯ ಕೊನೆಯ ವೃತ್ತದಲ್ಲಿ

"ಜನನಾಥೋತ್ತಮ-ಸೋಮರಾಜನುಸಿರ್ದೀ ಕಾವ್ಯಂ ವಲಂ ಶಾಲೀವಾ
ಹನಶಾಕಾಬ್ದಮದೈದೆ ಸಾಸಿರದನೂರ್ಸಂದನಾಲ್ವತ್ತನಾ
ಲ್ಕನೆಯಾರಂಜಿತ ಚಿತ್ರಭಾನುವವರಾಶ್ವೀಜೋಚ್ಛಿತೈಕಾದಶೀ
ವನಜಾರಾತಿತನೂಜವಾಸರದೊಳಾದತ್ತಲ್ಲಮಂಗರ್ಪಿತಂ"

ಎಂದಿರುವುದರಿಂದ, ಈ ಕೃತಿಯು "ಜನನಾಥೋತ್ತಮನಾದ ಈ ಸೋಮರಾಜನು ಹೇಳಿದ ಈ ಕಾವ್ಯವು ಶಾಲೀವಾಹನ ಶಕೆ ೧೧೪೪ (ಕ್ರಿ. ಶ ೧೨೨೨)ರ, ಚಿತ್ರಭಾನು ಸಂವತ್ಸರದ ಆಶ್ವೀಜ ಮಾಸದ ಏಕಾದಶಿಯಂದು, (ಬುಧವಾರ?) ಸಮಾಪ್ತಿಯಾಯಿತು"
ಹಾಗಾಗಿ ಸೋಮರಾಜನ ಕಾಲವನ್ನು ೧೨ನೇ ಶತಮಾನದ ಉತ್ತರಾರ್ಧ - ೧೩ರ ಪೂರ್ವಾರ್ಧ ಎಂದು ಭಾವಿಸಬಹುದು.

ಕೃತಿಯ ಬಗ್ಗೆ:
ಮೂಲತಃ ಸೋಮರಾಜನು ಈ ಕೃತಿಯನ್ನು ಉದ್ಭಟಕಾವ್ಯವೆಂದು ಕರೆಯದೆ "ಶೃಂಗಾರಸಾರ"ವೆಂದೇ ಕರೆದಿದ್ದಾನೆ ("ಶೃಂಗಾರಸಾರಮೆಂದೀ ಮಂಗಳಕೃತಿ-ನಾಮಮೀ ಕೃತಿಗೆ ವಲ್ಲಭನುತ್ತುಂಗವಿರೂಪಾಕ್ಷಂ ಸುಧೆಯಂ ಗೆಲಲೀ ಕೃತಿಯನುಸುರಿದಂ ಸೋಮನೃಪಂ). ಅದಾಗಿಯೂ, ಕಥೆಯು ಉದ್ಭಟರಾಜನ ಕುರಿತಾಗಿ ಇರುವುದರಿಂದ ಕನ್ನಡ ಕಾವ್ಯಲೋಕದಲ್ಲಿ ಇದು ಉದ್ಭಟಕಾವ್ಯವೆಂದೇ ಪರಿಚಿತವಾಗಿದೆ.

ಹರಿಹರದೇವ ವಿರಚಿತ ಓಹಿಲಯ್ಯನ ರಗಳೆ ಹಾಗೂ ಉದ್ಭಟಯ್ಯನ ರಗಳೆ ಎಂಬೀ ರಗಳೆಗಳು ಈ ಕೃತಿಗೆ ಮೂಲವಿರಬೇಕೆನಿಸುತ್ತದೆ. ಏಕೆಂದರೆ ಓಹಿಲಯ್ಯ ಹಾಗೂ ಉದ್ಭಟರನ್ನು ಕುರಿತು (ಕನ್ನಡದಲ್ಲಿ) ಮೊದಲು ರಚಿಸಿದವನು ಹರಿಹರನೇ. ಹಾಗಲ್ಲದೆ ಬೇರೆ ಭಾಷೆಯ ಇನ್ನಾವುದಾದರೂ ಕೃತಿಯಿಂದಲೂ ಸ್ಫೂರ್ತಿ ಪಡೆದಿದ್ದಿರಬಹುದು.
ಏಕೆಂದರೆ, ಹರಿಹರನ ಉದ್ಭಟಯ್ಯನ ರಗಳೆ ತೀರ ಸಣ್ಣ ಕೃತಿ. ಅದರ ವಿಸ್ತಾರವಾದರೂ ಕೇವಲ ೨೦೪ ಸಾಲುಗಳಷ್ಟೇ. ಓಹಿಲಯ್ಯನ ರಗಳೆ ವಿಸ್ತಾರವಾಗಿಯೇ ಇದೆಯಾದರೂ, ಹರಿಹರನ ರಗಳೆಗೆ ಹೋಲಿಸಿದರೆ ಓಹಿಲೇಶ್ವರನ ಕಥೆ ಉದ್ಭಟಕಾವ್ಯದಲ್ಲಿ ಸ್ವಲ್ಪ ಭಿನ್ನವಾಗಿಯೇ ಇದೆ. ಇದಕ್ಕೆ ಕಾರಣ ಬೇರೆ ಕೃತಿಯ ಮೂಲವೋ ಅಥವಾ ಸೋಮರಾಜನ ಸ್ವಂತ ಸೃಷ್ಟಿಯೋ ತಿಳಿಯದು. ಇರಲಿ, ಮುಖ್ಯವಾಗಿ, ಹರಿಹರನ ರಗಳೆಯಲ್ಲಿ ಕೇವಲ ೨೦೪ ಸಾಲುಗಳ ವಿಸ್ತಾರವುಳ್ಳ ಉದ್ಭಟನ ಕಥೆಯನ್ನು ಸುಂದರವಾಗಿಯೂ ಸ್ವಾರಸ್ಯಕರವಾಗಿಯೂ ಇರುವ (೧೨ ಆಶ್ವಾಸಗಳನ್ನುಳ್ಳ) ಮಹಾಕಾವ್ಯವನ್ನಾಗಿ ಹೆಣೆದಿರುವ ಸೋಮರಾಜನ ಕಾವ್ಯಶಕ್ತಿಯನ್ನು ಮೆಚ್ಚಲೇಬೇಕು.
ಹೀಗೆ ಕಥೆಯ ವಿಸ್ತಾರವನ್ನು ಹೆಚ್ಚಿಸಲೋಸುಗ ಆತ ಹಲವಾರು ಉಪಾಖ್ಯಾನಗಳನ್ನೂ ಸೇರಿಸಿದ್ದಾನೆ. ಕಥೆಯ ಸ್ವಾರಸ್ಯಕ್ಕೆ ತಕ್ಕಂತೆ ಹೊಸಹೊಸ ಸನ್ನಿವೇಶಗಳನ್ನು ಸೃಷ್ಟಿಸಿದ್ದಾನೆ. ತನ್ನ ತಾಯ್ನಾಡ ಸೊಗಸನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿ ಹೊಗಳಲು ಅನುವಾಗುವಂತೆ, ಕಥಾಸಂದರ್ಭಕ್ಕೆ ಹೊಂದುವಂತೆ - ಘೂರ್ಜರ ದೇಶದ ದೊರೆಯಾದ ಉದ್ಭಟನನ್ನು ನಮ್ಮ ನೆಚ್ಚಿನ ಪಂಪಾಕ್ಷೇತ್ರಕ್ಕೆ ಕರೆತಂದಿದ್ದಾನೆ. ಒಟ್ಟಾರೆಯಾಗಿ, ಮಹಾಕಾವ್ಯದ ೧೮ ಲಕ್ಷಣಗಳೂ ಮೇಳೈಸುವಂತೆ ಈ ಕೃತಿಯನ್ನು ರಚಿಸಿದ್ದಾನೆ.

ಉದ್ಭಟಕಾವ್ಯದ ಮೇಲೆ ಬೇರೆ ಕೃತಿಗಳ ಪ್ರಭಾವ, ಕೃತಿಯ ವಿಶೇಷತೆ:
ಈ ಹಿಂದೆಯೇ ಹೇಳಿದಂತೆ ಹರಿಹರನ ರಗಳೆಗಳ ಪ್ರಭಾವ ಈ ಕೃತಿಯ ಮೇಲೆ ಗಾಢವಾಗಿದೆ. ಕೊನೆಯ ಎರಡು ಆಶ್ವಾಸಗಳಲ್ಲಿ ಬರುವ ಅನೇಕ ಶಿವಶರಣರ ಉಪಕತೆಗಳಿಗೆ ಹರಿಹರ ವಿರಚಿತ ರಗಳೆಗಳೇ ಆಧಾರವಾಗಿರಬೇಕು.
 ಅದಲ್ಲದೆ, ನನಗೆ ಕಂಡುಬಂದಂತೆ - ನಾಗವರ್ಮನ ಕರ್ಣಾಟಕ ಕಾದಂಬರಿಯ ಪ್ರಭಾವ ಸ್ವಲ್ಪಮಟ್ಟಿಗಾದರೂ ಈ ಕೃತಿಯ ಮೇಲಿದೆ. ಕಥೆಗೆ ಪೂರಕವಾಗಿ ಬರುವ ಶಾಪಗ್ರಸ್ತ ಋಷಿಕುವರನ - ಗಿಳಿಯ ಪಾತ್ರ - ಕರ್ಣಾಟಕ ಕಾದಂಬರಿಯನ್ನು ನೆನಪಿಗೆ ತಾರದೇ ಇರದು. ಇನ್ನು ಕಥಾನಾಯಕ-ನಾಯಕಿ ಉದ್ಭಟ-ಸೌಂದರವತಿಯರ ಪ್ರೇಮ-ವಿರಹಾತಿರೇಕಗಳು ಚಂದ್ರಾಪೀಡ-ಕಾದಂಬರಿಯರ ನವಿರಾದ ಪ್ರೇಮ ಸನ್ನಿವೇಶಗಳನ್ನು ನೆನಪಿಸುತ್ತವೆ.

ಕಥೆಯ ಹರಿವಿಗೆ ಪೂರಕವಾಗುವ ಸನ್ನಿವೇಶವೊಂದರಲ್ಲಿ ಸಾಂದರ್ಭಿಕವಾಗಿ ಪಂಚಕರ್ಮವೇ ಮುಂತಾದ ಕೆಲವು ತಾಂತ್ರಿಕ ಆಚರಣೆ-ವಿಧಿಗಳನ್ನು ವರ್ಣಿಸಿದ್ದಾನೆ. ಬಹುಶಃ ಇದು ಕವಿಯ ಸಮಕಾಲೀನವಾದ ಯಾವುದಾದರೂ ಪಂಥದ ಆಚರಣೆಗಳಾಗಿದ್ದಿರಬಹುದು. ಹಾಗೆಯೇ ಸೌಂದರವತಿ-ಉದ್ಭಟದೇವರ ಮದುವೆಯ ಸಂದರ್ಭದಲ್ಲಿ, ಮದುವೆಯಾದ ನಾಲ್ಕನೇ ದಿನ ಕೊಡುವ ನಾಕಬಲಿ, ಕಂಬವಲಿ ಮುಂತಾದ ಬಲಿಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಬಹುಶಃ ಈ ಪದ್ಧತಿಯೂ ಆಗ ಆಚರಣೆಯಲ್ಲಿತ್ತೊ ತಿಳಿಯದು. ಇಂಥವೇ ಹಲವು ಉಲ್ಲೇಖಗಳು ವಿಶೇಷವಾಗಿ ತೋರಿ ನನ್ನ ಗಮನ ಸೆಳೆದವು.

ಇನ್ನು ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ - ಶೃಂಗಾರಸಾರವೆಂಬ ಈ ಉದ್ಭಟಕಾವ್ಯವು ೧೨ ಆಶ್ವಾಸಗಳನ್ನುಳ್ಳ ಒಂದು ಚಂಪೂಕೃತಿ. ಹಿಂದಿನ ಕವಿಗಳಂತೆ ಅತಿಯಾಗಿ ಸಂಸ್ಕೃತಭೂಯಿಷ್ಠವಾಗಿರದ, ಸರಳವಾಗಿಯೂ ಸುಂದರವಾಗಿಯೂ ಇರುವ ವೃತ್ತ-ಕಂದಪದ್ಯಗಳು ಓದಲು ಸೊಗಸೆನಿಸುವವು. ಕನ್ನಡ ಜಾತಿಗೆ ಸೇರಿದ ಹಲವಾರು ವೃತ್ತಗಳಿರುವುದೂ ವಿಶೇಷವೇ. ಸ್ತುತಿ-ಗೀತೆಗಳ ಸಂದರ್ಭದಲ್ಲಿಯಾದರೆ ಮಂದಾನಿಲ, ಲಲಿತ ರಗಳೆಗಳನ್ನು ವಿಪುಲವಾಗಿಯೇ ಬಳಸಿದ್ದಾನೆ ಕವಿ. ಇಂತಹ ಸನ್ನಿವೇಶಗಳಲ್ಲಿ ರಗಳೆಗಳ ಬಳಕೆ ಸಾಮಾನ್ಯವೇ. ಆದರೆ, ಮುಖ್ಯವಾಗಿ ನನ್ನ ಗಮನ ಸೆಳೆದದ್ದು ತ್ರಿಪದಿಗಳು. ವಿಹಾರಕ್ಕೆಂದು ಹೊರಟ ಉದ್ಭಟದೇವನು ವೇಶ್ಯಾವೀಧಿಯ ಕಡೆಯಿಂದ ನಡೆದುಬರುವಾಗಿನ ವರ್ಣನೆಯ ಪಾತ್ರವನ್ನು ಒಂದಷ್ಟು ತ್ರಿಪದಿಗಳು ವಹಿಸಿವೆ. ಇದು ನನಗೆ ಹೊಸತೆನಿಸಿತು.

ಕಥಾಸಾರ:
ಮೇರುಪರ್ವತದ ದಕ್ಷಿಣ ದಿಶೆಯಲ್ಲಿರುವ ಘೂರ್ಜರದೇಶದ ಭಲ್ಲಕೀನಗರದ ಅರಸು ಉದ್ಭಟದೇವ. ಒಂದು ದಿನ ಈತನನ್ನು ಕಾಣಲು ಋಷಿಕುಮಾರನೊಬ್ಬ ಬರುತ್ತಾನೆ. ಆತ ಉದ್ಭಟನನ್ನು - ತನ್ನ ಗುರುಗಳಾದ ದೇವಲ ಮಹರ್ಷಿಗಳು ನಡೆಸುತ್ತಿರುವ ಯಾಗಕ್ಕೆ ತೊಂದರೆ ಕೊಡುತ್ತಿರುವ ನಿಘರ್ಜನೆಂಬ ಅಸುರನನ್ನು ಸಂಹರಿಸಿ, ಯಾಗವನ್ನು ನಿರ್ವಿಘ್ನವಾಗಿ ನೆರವೇರುವಂತೆ ಮಾಡಲು - ಯಾಗದ ರಕ್ಷಣೆಗಾಗಿ - ಪಂಪಾಕ್ಷೇತ್ರಕ್ಕೆ ಬರಬೇಕೆಂದು ಬಿನ್ನವಿಸುತ್ತಾನೆ. ಅದಕ್ಕೆ ಸಮ್ಮತಿಸಿದ ಉದ್ಭಟನು ಪಂಪಾಕ್ಷೇತ್ರಕ್ಕೆ ಬಂದು ನಿಘರ್ಜನನ್ನು ಕೊಂದು, ದೇವಲ ಮಹರ್ಷಿಗಳು ಸಂಕಲ್ಪಿಸಿದ ಯಜ್ಞ ನಿರ್ವಿಘ್ನವಾಗಿ ನೆರವೇರುವಂತೆ ಮಾಡುತ್ತಾನೆ.

ಹಾಗಿರಲು ಒಂದು ದಿನ ಬೇಟೆಗಾರನೊಬ್ಬನ ಬಲೆಯಲ್ಲಿ ಸಿಲುಕಿ ಸಾಯಲಿದ್ದ ಗಿಳಿಯೊಂದನ್ನು ಉದ್ಭಟನು ರಕ್ಷಿಸುತ್ತಾನೆ. ಆ ಗಿಳಿಯಾದರೊ ಮನುಷ್ಯರಂತೆಯೇ ಮಾತನಾಡಬಲ್ಲ ಗಿಳಿಯಾಗಿತ್ತು. ಅದರ ಪೂರ್ವಾಪರಗಳ ಬಗ್ಗೆ ಉದ್ಭಟನು ವಿಚಾರಿಸಿದಾಗ ಗಿಣಿಯು - ತನ್ನ ಹೆಸರು ಶುಕನೆಂದೂ, ತಾನು ಚಿದಂಗ ಮುನಿಯ ಶಿಷ್ಯನೆಂದೂ, ತನ್ನ ಗುರುಭಕ್ತಿಯಲ್ಲಿ ಲೋಪವಾಗಿದ್ದರಿಂದ ’ಗಿಳಿಯಾಗು...’ ಎಂದು ತನ್ನ ಗುರುವು ಶಾಪವಿತ್ತುದಾಗಿಯೂ ತನ್ನ ಕತೆಯನ್ನು ವಿವರಿಸಿತು.
ಶಾಪವಿಮೋಚನೆಯ ಬಗೆ ಹೇಗೆಂದು ಉದ್ಭಟನು ಕೇಳಿದಾಗ - "ಪಾರ್ವತೀ ದೇವಿಯ ವರಪ್ರಸಾದದಿಂದ ಜನಿಸಿದ ಕನ್ಯೆಯು ಅನಿರೀಕ್ಷಿತವಾಗಿ ನಿನ್ನನ್ನು ಮುಟ್ಟಿದಾಗ ಗಿಳಿರೂಪದಲ್ಲಿದ್ದರೂ ನಿನಗೆ ವಾಕ್ಛಕ್ತಿ ಉಂಟಾಗುತ್ತದೆಯೆಂದೂ, ಅದೇ ಕನ್ಯೆಯ ವಿವಾಹದ ನಾಲ್ಕನೆಯ ದಿನದ ಓಕುಳಿಯಾಟದಲ್ಲಿ ನೀನು ಒದ್ದೆಯಾದ ಒಡನೆಯೇ ನಿನಗೆ ಶಾಪವಿಮೋಚನೆಯಾಗುವುದು" ಎಂದೂ ತನ್ನ ಗುರುಗಳು ಉಃಶಾಪವನ್ನು ಸೂಚಿಸಿದ್ದಾರೆಂದು ಗಿಳಿಯು ಹೇಳುತ್ತದೆ.

ತಂಜಾವೂರಿನಲ್ಲಿ ಪಾರ್ವತಿ ದೇವಿಯ ವರಪ್ರಸಾದದಿಂದ ಜನಿಸಿದ - ಸೌಂದರವತಿಯೆಂಬ - ಒಬ್ಬ ಕನ್ಯೆಯಿರುವಳೆಂದೂ, ಹಿಂದೆ ಒಂದು ದಿನ ಆಕೆಯ ಸ್ಪರ್ಶದಿಂದಲೇ ಗಿಳಿಯ ರೂಪದಲ್ಲಿದ್ದ ತನಗೆ ವಾಕ್ಚಾತುರ್ಯ ಶಕ್ತಿಯುಂಟಾಯಿತೆಂದೂ ಗಿಳಿಯು ಹೇಳುತ್ತದೆ. ಅದೂ ಅಲ್ಲದೆ, ಅನುಪಮ ಸೌಂದರ್ಯವುಳ್ಳ ಆ ಸೌಂದರವತಿಗೆ ಉದ್ಭಟನೇ ಸೂಕ್ತ ವರನೆಂದೂ, ಅವನ ಸಮ್ಮತಿಯಿರುವುದಾದರೆ ಅವರಿಬ್ಬರ ವಿವಾಹವನ್ನು ತಾನು ನೆರವೇರುವಂತೆ ಮಾಡುವುದಾಗಿ ಗಿಳಿಯು ತಿಳಿಸುತ್ತದೆ. ಉದ್ಭಟನು ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ. ಮುಂದೆ ಉದ್ಭಟ-ಸೌಂದರವತಿಯರ ವಿವಾಹವಾಗುತ್ತದೆ. ಅವರ ಮದುವೆಯಾದ ನಾಲ್ಕನೆಯ ದಿನ ನಡೆದ ಓಕುಳಿಯಾಟದ ನೀರು ತನ್ನ ಮೈಮೇಲೆ ಬೀಳಲು, ಶುಕನು ಮುಂಚಿನ ರೂಪವನ್ನು ಪಡೆದು, ಎಲ್ಲರನ್ನೂ ಹರಸಿ ತನ್ನ ಗುರುವಿನ ಬಳಿಗೆ ಹೊರಡುತ್ತಾನೆ. ಉದ್ಭಟ-ಸೌಂದರವತಿಯರು ಭಲ್ಲಕೀನಗರಕ್ಕೆ ಬರುತ್ತಾರೆ.
(ಮುಂದಿನ ಕೆಲವು ಆಶ್ವಾಸಗಳಲ್ಲಿ ಕತೆಯ ಹರಿವು ಕೃತಿಯ ಹೆಸರಿಗೆ ತಕ್ಕಂತೆ ಶೃಂಗಾರಸಾರವಾಗಿಯೇ ತೋರುತ್ತದೆ)

ಒಂದು ದಿನ ಉದ್ಭಟ-ಸೌಂದರವತಿಯರು ಪಗಡೆಯಾಡುತ್ತಿದ್ದಾಗ ಉದ್ಭಟನು ಏನನ್ನೋ ನೆನೆದು ನಗುತ್ತಾನೆ. ಆ ನಗುವಿಗೆ ಕಾರಣವೇನೆಂದು ತೋಚದೆ ಸೌಂದರವತಿಗೆ ಉದ್ಭಟದೇವನ ನಗುವಿನ ಹಿಂದಿರುವ ಕಾರಣವನ್ನು ತಿಳಿಯಬೇಕೆಂಬ ಕುತೂಹಲವೂ, ಸ್ವಲ್ಪಮಟ್ಟಿಗೆ ಕೋಪವೂ ಉಂಟಾಗುತ್ತದೆ. ತನ್ನ ಗಂಡ ತನ್ನನ್ನು ನೋಡಿಯೇ ನಗುತ್ತಿದ್ದಾನೆ ಎಂಬ ಶಂಕೆ ಆಕೆಯದು. ಅದಕ್ಕೇ ಮುನಿಸು.
ತಾನು ಸೌಂದರವತಿಯನ್ನು ನೋಡಿ ನಕ್ಕುದಲ್ಲವೆಂದು ಉದ್ಭಟ ತಿಳಿಸುತ್ತಾನೆ. ಹಾಗಿದ್ದರೆ ಆ ನಗುವಿಗೆ ಕಾರಣವೇನೆಂದರೆ - ಶಿವಶರಣ ಓಹಿಲೇಶ್ವರನು ಆ ಸದಾಶಿವನನ್ನು ಮೆಚ್ಚಿಸಿ ತಾನೊಬ್ಬನೇ ಸದೇಹವಾಗಿ ಕೈಲಾಸಕ್ಕೆ ಹೋಗುತ್ತಿದ್ದಾನೆಂದೂ, ಅಂತಹ ಶಿವಭಕ್ತನ ಮರುಳನ್ನು ನೆನೆದು ತಾನು ನಕ್ಕುದಾಗಿಯೂ ಉದ್ಭಟನು ತಿಳಿಸುತ್ತಾನೆ (ಸೌಂದರವತಿಗೆ ಓಹಿಲೇಶ್ವರನ ಕತೆಯನ್ನು ವಿಸ್ತಾರವಾಗಿ ಹೇಳಿದ ನಂತರ). ಓಹಿಲೇಶನ ಕತೆಯನ್ನು ಕೇಳಿ ಸೌಂದರವತಿಗೆ ಅಪಾರವಾದ ಭಕ್ತಿ-ಗೌರವಗಳು ಉಂಟಾಗುತ್ತವೆ. ಹಾಗೆಯೇ, ಅಂತಹ ಶಿವಭಕ್ತನನ್ನು ಕುರಿತು ಅಪಹಾಸ್ಯ ಮಾಡುತ್ತಿರುವರಲ್ಲಾ ಎಂದು ಉದ್ಭಟನ ಮೇಲೆ ಸಿಟ್ಟಾಗುತ್ತಾಳೆ. ಅಂತಹ ಮಹಾವ್ಯಕ್ತಿಯನ್ನು ಕುರಿತು ಅವಹೇಳನ ಮಾಡುವ ನೈತಿಕತೆಯಾದರೂ ನಿಮಗಿದೆಯೇ ಎಂದು ಪ್ರಶ್ನಿಸುತ್ತಾಳೆ. ಮುಂಚೆ ಯಾವೊಬ್ಬ ಶಿವಭಕ್ತನಾದರೂ ಹಾಗೆ ಕೈಲಾಸಕ್ಕೆ ಸಂದಿದ್ದಾರೆಯೇ? ಅಂತಹ ಒಬ್ಬನ ಬಗ್ಗೆಯಾದರೂ ನಿಮಗೆ ಗೊತ್ತಿದ್ದರೆ ಹೇಳಿ ಎಂದೂ ಕೇಳುತ್ತಾಳೆ.

ಅದಕ್ಕೆ ಉದ್ಭಟನು ಮುನ್ನ ಶಿವನನ್ನು ಮೆಚ್ಚಿಸಿ ಸಕಲ ಬಾಂಧವರೊಡನೆ, ರಾಜ್ಯದ ಪ್ರಜೆಗಳೊಡನೆ ಸದೇಹವಾಗಿ ಕೈಲಾಸಕ್ಕೆ ಹೋದ ಹಲವಾರು ಶಿವಶರಣರ ಕತೆಗಳನ್ನು ಹೇಳುತ್ತಾನೆ. ಅಂತಹ ಮಹನೀಯರ ನಿದರ್ಶನಗಳಿರುವಾಗ  ಈ ಓಹಿಲೇಶನಾದರೋ ತಾನೊಬ್ಬನೇ ಕೈಲಾಸಕ್ಕೆ ಹೋಗುತ್ತಿದ್ದಾನಲ್ಲಾ ಎಂದು ನೆನಪಾಗಿ ತಾನು ನಕ್ಕುದಾಗಿ ಹೇಳುತ್ತಾನೆ. ಆ ಶರಣರ ಕಥೆಗಳನ್ನೆಲ್ಲ ಕೇಳಿದ ಸೌಂದರವತಿಯ ಹೃದಯ ಭಕ್ತಿಯಿಂದ ತುಂಬುತ್ತದೆ.

ಆದರೂ, "ಅಂತಹ ಮಹಾಭಕ್ತರನ್ನು ಗೇಲಿಮಾಡುವ ಅರ್ಹತೆ ನಿಮಗೇನಿದೆ. ಸದಾ ಸಪ್ತವ್ಯಸನಗಳಲ್ಲಿ ಮುಳುಗಿರುವ ನೀವೆಲ್ಲಿ, ಅವರೆಲ್ಲಿ..? ನೀವೇನಾದರೂ ಅಂತಹ ಮಹತ್ತರ ಕಾರ್ಯ ಮಾಡಲು ಸಮರ್ಥರೇ, ಇಲ್ಲ ತಾನೆ? ಹಾಗಿದ್ದರೆ ಸುಮ್ಮನಿರಿ.." ಎಂದು ಮುಂತಾಗಿ ಉದ್ಭಟದೇವನನ್ನು ಮೂದಲಿಸುತ್ತಾಳೆ. ಅವಳ ಮಾತಿಗೆ ಪ್ರತಿಯಾಗಿ ಉದ್ಭಟನು "ಹಾಗಿದ್ದರೆ ನನ್ನೊಡನೆ ಈಗ ಶಿವಾಲಯಕ್ಕೆ ಬಾ. ನಾನು ಇಂದು ನಮ್ಮ ಇಡೀ ನಗರವನ್ನೇ ಕೈಲಾಸಕ್ಕೆ ಕರೆದುಕೊಂಡುಹೋಗುವುದನ್ನು ನೀನೂ ನೋಡುವಿಯಂತೆ.." ಎಂದು ನುಡಿದು, ಅವಳನ್ನು ಕರೆದುಕೊಂಡು ಶಿವಾಲಯಕ್ಕೆ ಬರುತ್ತಾನೆ.

ಶಿವಾಲಯವನ್ನು ಹೊಕ್ಕು ಶಿವನನ್ನು ಹೊಸಹೊಸ ಪದ್ಯಗಳಿಂದ ಸ್ತುತಿಸಲು ಶುರು ಮಾಡುತ್ತಾನೆ. ಹಾಗೆ ಅವನು ಒಂದೊಂದು ಪದ್ಯಗಳಿಂದ ಸ್ತುತಿಸಿದಾಗಲೂ ಇಡೀ ನಗರವು ಸಾವಿರ ಯೋಜನದಷ್ಟು ಮೇಲೇರುತ್ತ ಸಾಗಿತು. ಹೀಗೇ ಮೇಲುಮೇಲಕ್ಕೆ ಸಾಗುತ್ತಿರಲು ಸೂರ್ಯನ ಪ್ರಭೆಯು ಕಡಿಮೆಯಾಯಿತು (ಆ ನಗರವು ಸೂರ್ಯನನ್ನೂ ದಾಟಿ ಮುಂದೆ ಹೋಗಿದ್ದರಿಂದ). ಆದರೆ, ಸೂರ್ಯಬಿಂಬವು ಕಣ್ಮರೆಯಾದುದನ್ನು ಕಂಡ ಸೌಂದರವತಿಯು ವಿನೋದದಿಂದ "ಇನ್ನು ಮೇಲೇಳು, ಮನೆಗೆ ಹೋಗೋಣ, ಕತ್ತಲಾಯಿತು" ಎಂದಾಗ, ಉದ್ಭಟನು ಭಕ್ತರ ಮಾತಿನಲ್ಲಿ ಹುಸಿಯುಂಟೆ, ಪ್ರಿಯೆ, ಕಣ್ತೆರೆದು ಮೇಲೆ ನೋಡು ಎಂದು ತೋರಿಸಿದಾಗ ಕೋಟಿ ನಕ್ಷತ್ರಗಳನ್ನು ರಾಶಿಹಾಕಿದಂತೆ ಅತಿಶಯವಾದ ಕಾಂತಿಯನ್ನು ಹರಡುತ್ತ ನಯನಮನೋಹರವಾಗಿದ್ದ ಕೈಲಾಸ ಪರ್ವತವು ಕಂಡಿತು.

ಕೊನೆಗೂ ಉದ್ಭಟನು ತನ್ನ ಇಡೀ ನಗರವನ್ನೇ ಕೈಲಾಸಕ್ಕೆ ಕರೆದುಕೊಂಡುಬಂದಿದ್ದನು. ಆ ನಂತರದಲ್ಲಿ ಶಿವನ ಗಣಸಮೂಹವು ಇವರನ್ನು ಇದಿರ್ಗೊಂಡು ಸ್ವಾಗತಿಸಿ ಶಿವನ ಬಳಿಗೆ ಕರೆದುಕೊಂಡು ಹೋದರು. ಶಿವನು ಅವರೆಲ್ಲರನ್ನೂ ಆಶೀರ್ವದಿಸಿ ಉದ್ಭಟನಿಗೆ ಗಣಪದವಿಯನ್ನು ಅನುಗ್ರಹಿಸಿದನು.

No comments:

Post a Comment