Saturday, 17 August 2013

ದೇವಗೀತೆ

ನೀ ಪ್ರೀತಿಯಿಂದೆನ್ನ ಹಾಡೆಂದು ಶಾಸಿಸಲು
ಆನಂದದಿಂದೆನ್ನ ಹೃದಯವಿದು ಬಿರಿಯುವುದು;
ನಿನ್ನ ಸಿರಿಮೊಗ ಕಂಡು ಸಂತಸವು ತುಂಬಿರಲು
ನನ್ನ ಈ ನಯನಗಳು ಕಂಬನಿಯ ಕರೆಯುವವು.

ತಪ್ಪೊಪ್ಪುಗಳು ಕರಗಿ ಮಧುರ ವಾಹಿನಿಯಾಗಿ
ಮೃದುಲ ಮಂಜುಲ ರವದೆ ಭಾವಗಳು ಹರಿದಿರಲು
ಸ್ವರದ ಹೊನಲೊಳು ನಿನ್ನ ನಾನಿಂದು ಸ್ತುತಿಸಿರಲು
ಎನ್ನಾತ್ಮ ಹಾರುವುದು ಮುದದ ಮುಗಿಲಿನ ಮೇಲೆ.

ನಿನ್ನ ಪ್ರೇಮದ ಪ್ರಭೆಯು ಎನ್ನ ಜೀವವ ಬೆಳಗಿ
ಮನದ ತಿಮಿರವ ಕಳೆದು ಹೊಸತನವ ತುಂಬಿರಲು;
ಅಮಿತ ಪ್ರೀತಿಯೊಳೆನ್ನ ನೀನಿಂದು ಹರಸಿರಲು,
ಜೀವದಾ ಕಣಕಣವು ಸಾಯುಜ್ಯ ಹೊಂದುವುದು.

ಗಾನದೊಳು ಮತ್ತನಹ ನನ್ನ ಮನವಿದು ಪ್ರಭುವೆ
ನಿನ್ನ ಸಾಂಗತ್ಯದೊಳು ತನ್ನ ತಾ ಮರೆಯುವುದು.

Thursday, 8 August 2013

Uttharavirada Prashne

ನಡುರಾತ್ರಿಯೊಳಗಿಂತು ಏಕೆ ನಕ್ಕೆನು ನಾನು?
ಎನಿತೆಷ್ಟು ಕೇಳಿದರು ಉತ್ತರಿಪ ಧ್ವನಿ ಇಲ್ಲ;
ಆವ ದೈವವು ಇಲ್ಲ, ಆವ ಭೂತವು ಇಲ್ಲ –
ಅನುಗ್ರಹಿಸಿ ನುಡಿವ ದನಿ ನರಕ-ನಾಕದೊಳಿಲ್ಲ


ಅವರ ಮೌನಕೆ ಹೆದರಿ ತಿರುಗುವೆನು ಹೃದಯದೆಡೆ                   
ಓ ಎನ್ನ ಹೃದಯವೇ, ನೀನಿರುವೆ ನನ್ನೊಡನೆ ;
ಇರುವೆ ನೀನೆನ್ನೊಡನೆ – ದುಃಖದೇಕಾಂತದೊಳು.
ಹೇಳು, ಏಕೆ ನಕ್ಕೆನು ನಾನು? ಉತ್ತರಿಸು ಹೃದಯವೇ.


ಏಕೆ ಮೌನವ ತಳೆದೆ, ಓ ಕುರುಡು ಕತ್ತಲೆಯೆ?
ನೀನಾದರುತ್ತರಿಸು – ಮರ್ತ್ಯದೊಡಲಿನ ನೋವೆ.
ಕೊನೆವರೆಗು ಹೀಗೆಯೇ ನರಳಬೇಕೆ ? – ನಾನು –
ನರಕ-ನಾಕದ ಧ್ವನಿಗೆ ವ್ಯರ್ಥದೊಳು ಕಾಯುತ್ತ?


ಏಕೆ ನಕ್ಕೆನು ನಾನು? ಭೋಗ್ಯದೊಡಲನು ತಿಳಿದು;
ಎಂತು ಮರೆತೆನು ನಾನು? ಭಾವದೊಳು ಮುದ ತಳೆದು.
ಜಗದೆ ಮೆರೆಯುವ ಸಿರಿಯು ಕೊನೆಬರಲು ಕುಸಿಯುವುದು.
ಇಂದು-ನೆನ್ನೆಯ ಕನಸು ನಾಳೆಯೊಳಗಳಿಯುವುದು;


ಈಗ - ನಡುರಾತ್ರಿಯೊಳು ಮುಗಿಯುವುದೆ ಈ ಬದುಕು?
ಕಾಣವೇ ಕಣ್ಣುಗಳು ನನ್ನ ನಾಳೆಯ ಬೆಳಕು?
ಪದ, ಪದವಿ, ಸೌಂದರ್ಯ - ಬಲು ಕ್ರೂರ ಸತ್ಯದೊಳು;
ಸಾವು ಎಲ್ಲಕು ಕ್ರೂರ - ಬಹುಮಾನ ಬದುಕಿನೊಳು.

Wednesday, 7 August 2013

ಜನಪದ ಸಾಹಿತ್ಯದಲ್ಲಿ ಮಾತೃಪ್ರೇಮ


ನಾವು ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ, ಶಿಷ್ಟ ಸಾಹಿತ್ಯದ ಜೊತೆಜೊತೆಗೇ ತನ್ನದೇ ಆದ ವಿಶಿಷ್ಟತೆಗಳೊಂದಿಗೆ ಬೆಳೆದು ಬಂದ ಜನಪದ ಸಾಹಿತ್ಯವನ್ನು ಕಾಣುತ್ತೇವೆ. ಜನಪದ ಸಾಹಿತ್ಯವೂ ಕೂಡ ಯಾವುದೇ ಭಾಷೆಯ ಅಮೂಲ್ಯವಾದ ಆಸ್ತಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಆದರೆ ಬಹಳ ಕಾಲದವರೆಗೂ ಜನಪದ ಸಾಹಿತ್ಯವನ್ನು ಕೇವಲ ನಿರಕ್ಷರಸ್ತರ ಕಾವ್ಯ(!)ಸೃಷ್ಟಿಯೆಂದು ನಿರ್ಲಕ್ಷ್ಯ ಮಾಡಲಾಗಿತ್ತು. ಪುಣ್ಯವಶಾತ್, ಸ್ವಾತಂತ್ರಪೂರ್ವದಲ್ಲಿ ಕೆಲವು ಭಾಷಾಶಾಸ್ತ್ರಜ್ಞರು ಜನಪದ ಸಾಹಿತ್ಯದ ಮಹತ್ವವನ್ನು ಮನಗಂಡು ಅದರ ಕುರಿತಾದ ಸಂಶೋಧನೆ-ಸಂಗ್ರಹಣೆಗಳಲ್ಲಿ ತೊಡಗಿದರು. ಅಂದಿನಿಂದ ಶಿಷ್ಟ ಸಾಹಿತ್ಯದಂತೆಯೇ ಜನಪದ ಸಾಹಿತ್ಯಕ್ಕೂ ಮನ್ನಣೆ ದೊರೆಯಿತು.

ಇಷ್ಟಕ್ಕೂ ಈ ಜನಪದ ಸಾಹಿತ್ಯವೆಂದರೇನು? ಇದು ತನ್ನದೇ ಹಾದಿಯಲ್ಲಿ ಹುಟ್ಟಿ-ಬೆಳೆದು-ಉಳಿದು ಬಂದಿರುವ ಬಗೆ ಹೇಗೆ?

ಯಾವುದೇ ಒಂದು ಪ್ರದೇಶದ ಜನಸಮುದಾಯದಲ್ಲಿ - ಅವರ ಜೀವನ ಪದ್ಧತಿ, ಆಚರಣೆ, ನಂಬಿಕೆ, ಸಂಪ್ರದಾಯಗಳೂ ಸೇರಿದಂತೆ ಇತರ ವಿಚಾರಗಳನ್ನು ಕುರಿತಾದ - ಅಗಾಧವಾದ ಜ್ಞಾನವು ಮೌಖಿಕ ಪರಂಪರೆಯ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಬಂದಿರುತ್ತದೆ. ಹೀಗೆ ಅದು ಸಾಗಿಬರಲು ಜನಪದ ಸಾಹಿತ್ಯವೂ ಒಂದು ಮಾಧ್ಯಮ.

ಹಿಂದೆಯೇ ಹೇಳಿದಂತೆ, ಇದು ಒಬ್ಬರಿಂದ ಒಬ್ಬರಿಗೆ - ಮೌಖಿಕ ರೂಪದಲ್ಲಿ ಹರಿದುಬಂದ ಜ್ಞಾನ. ಭಾಷೆಗೆ ಲಿಪಿಯು ಕಾಣಿಸಿಕೊಳ್ಳುವ ಪೂರ್ವದಿಂದಲೇ ಮೌಖಿಕ ಅಭಿವ್ಯಕ್ತಿಯ ರೂಪದಲ್ಲಿ ಇಂತಹ ಜ್ಞಾನವು ಸೃಷ್ಟಿಗೊಂಡು ಪ್ರಸಾರಗೊಂಡಿತ್ತು. ಅಂದರೆ, ಶಿಷ್ಟ ಸಾಹಿತ್ಯ ರೂಪ ಪಡೆಯುವ ಮುಂಚೆಯೇ ಜನಪದ ಸಾಹಿತ್ಯವು ಅಸ್ತಿತ್ವದಲ್ಲಿತ್ತು. ಶಿಷ್ಟ ಸಾಹಿತ್ಯವು ಉದಯಗೊಂಡ ನಂತರ ಅವರೆಡೂ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡು, ಒಮ್ಮೊಮ್ಮೆ ಪರಸ್ಪರ ಪೂರಕವಾಗಿ ವಿಕಾಸಗೊಂಡು ಬೆಳೆದು ಬಂದಿವೆ."ಜನವಾಣಿ ಬೇರು, ಕವಿವಾಣಿ ಹೂವು" ಎಂಬ ಮಾತನ್ನು ನಾವಿಲ್ಲಿ ನೆನೆಯಬಹುದು.

ಜನಪದ ಸಾಹಿತ್ಯದ ಅನೇಕ ಪ್ರಕಾರಗಳ ಪೈಕಿ (ಒಗಟು, ಗಾದೆ, ಕಥೆ, ಗೀತೆ ಇತ್ಯಾದಿ) ಜನಪದ ಗೀತೆಗೇ ಅಗ್ರಸ್ಥಾನ ಸಲ್ಲುತ್ತದೆ. ಜನಪದರು ತಮ್ಮ ಸಂತೋಷ, ದುಃಖ ಅಶ್ಚರ್ಯಾದಿ ಭಾವಗಳನ್ನು ಅಭಿವ್ಯಕ್ತಗೊಳಿಸಲು ಜನಪದ ಗೀತೆಗಳು ಒಂದು ಪ್ರಶಸ್ತ ಮಾಧ್ಯಮವಾಗಿ ಅವರಿಗೊಲಿದಿದೆ. ಮೂಲತಃ ಭಾವಜೀವಿಗಳಾದ ಜನಪದರ ಭಾವೋದ್ಗಾರಗಳು ರಾಗವಾಗಿ ಪರಿಣಮಿಸಿ ಲಯಬದ್ಧವಾಗಿ ಹೊರಹೊಮ್ಮಿದಾಗ ಗೀತೆಗಳ ಉಗಮವಾಗುತ್ತದೆ. ಇಲ್ಲಿ ಅವರ ಜೀವನಾನುಭವಗಳು, ನೋವು-ನಲಿವುಗಳು, ಆಸೆ-ಕನಸುಗಳು ಸ್ವರ ಸ್ವರದಲ್ಲೂ ಜೀವ ತಳೆದು ನಿಲ್ಲುತ್ತವೆ. ಅವರ ಜೀವನದ ಪ್ರತಿ ಘಟ್ಟಗಳಲ್ಲೂ ಜನಪದ ಗೀತೆಗಳು ಇದ್ದೇ ಇರುತ್ತವೆ - ಬೆಳಿಗ್ಗೆ ಎದ್ದು ರಾಗಿ ಬೀಸಲು ತೊಡಗುವ ಹೆಣ್ಣುಮಗಳು ಗೀತೆಯನ್ನು ಹಾಡುತ್ತಲೇ ತನ್ನ ಕೆಲಸದಲ್ಲಿ ತೊಡಗುತ್ತಾಳೆ.ಭತ್ತ ಕುಟ್ಟುವಾಗ, ಅಕ್ಕಿ ಆರಿಸುವಾಗ, ಹೊಲದಲ್ಲಿ ಕೆಲಸ ಮಾಡುವಾಗ - ಹೀಗೆ ದಿನನಿತ್ಯದ ಪ್ರತಿ ಕಾರ್ಯದಲ್ಲೂ ಅವರಿಗೆ ಗೀತೆಗಳ ಸಾಂಗತ್ಯವಿದ್ದೇ ಇರುತ್ತದೆ. ಅದು ಅವರಿಗೆ ಕೆಲಸದ ಶ್ರಮವನ್ನು ಕಡಿಮೆಗೊಳಿಸಲೂ ಸಹಕರಿಸುತ್ತದೇನೋ!! ಅಂತೂ ಜನಪದ ಗೀತೆಯು ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ.

ಜನಪದ ಸಾಹಿತ್ಯದಲ್ಲಿ ಮಾತೃಪ್ರೇಮ


ಜನಪದ ಗೀತೆಗಳಲ್ಲಿ ಅಭಿವ್ಯಕ್ತಗೊಳ್ಳದ ಯಾವುದೇ ವಿಚಾರವೂ,ಭಾವವೂ ಇಲ್ಲವೇ ಇಲ್ಲವೆಂದು ಹೇಳಬಹುದು.
ಮುಖ್ಯವಾಗಿ ಮಾನವೀಯ ಸಂಬಂಧಗಳ ಕುರಿತಾದ ಗೀತೆಗಳು ನಮ್ಮನ್ನು ಬಹುವಾಗಿ ಸೆಳೆಯುತ್ತವೆ. ಅದರಲ್ಲೂ ತಾಯಿ/ತವರನ್ನು ಕುರಿತಾದ ಗೀತೆಗಳು - ಅತ್ಯಂತ ಸುಂದರವಾಗಿರುತ್ತವೆ.
ಭಾರತೀಯ ಹೆಣ್ಣುಮಕ್ಕಳಿಗೆ ತಮ್ಮ ತಾಯಿಯ ಬಗ್ಗೆ, ತಾನು ಹುಟ್ಟಿದ ಮನೆಯ ಬಗ್ಗೆ ಅಪಾರವಾದ ಮಮಕಾರವಿರುತ್ತದೆ. ಆ ಮಮಕಾರದ ಮೂರ್ತರೂಪವೇನೋ ಎನಿಸುವ ಈ ಗೀತೆಗಳು ತಮ್ಮ ಮಾಧುರ್ಯದಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಅವರ ಸರಳ ಭಾಷೆ, ಸರಳವಾದ ಭಾವ - ಅದನ್ನು ಅಷ್ಟೇ ಸರಳವಾಗಿ ವ್ಯಕ್ತಗೊಳಿಸುವ ರೀತಿ ನಿಜಕ್ಕೂ ತುಂಬ ಸೊಗಸಾಗಿರುತ್ತದೆ. ಅಂತಹ ಮಧುರ ಅಭಿವ್ಯಕ್ತಿಯ ಕೆಲ ಉದಾಹರಣೆಗಳು :

"ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಯಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ"

ತನ್ನ ತವರನ್ನು ಕುರಿತ ಹೆಣ್ಣೊಬ್ಬಳ ಹಾರೈಕೆಯಿದು. ಸಾಮಾನ್ಯವಾಗಿ, ಗರಿಕೆಯ ಹುಲ್ಲು ಯಾವಾಗಲೂ ಹಸಿರಾಗೇ ಇರುತ್ತದೆ(ನೀರಿನ ಅಭಾವದ ಕಾಲದಲ್ಲೂ). ಇಲ್ಲಿ ಈಕೆ, ತನ್ನ ತವರುಮನೆ 'ಹೊಳೆದಂಡಿಯಲ್ಲಿರುವ ಗರಿಕೆ'ಯ ಹಾಗೆ ಇರಲೆಂದು ಹಾರೈಸುತ್ತಿದ್ದಾಳೆ. ನಿತ್ಯವೂ ನೀರು ಹರಿಯುವ ಹೊಳೆಯ ದಡದಲ್ಲಿರುವ ಗರಿಕೆಯ ಹುಲ್ಲು ಎಂದೆಂದಿಗೂ ಹಸಿರಾಗೇ ಇರುತ್ತದೆಯಲ್ಲವೆ? ತನ್ನ ತವರುಮನೆಯ ಸಿರಿಯೂ ಹಾಗೆಯೇ ನಿತ್ಯ ಹಸಿರಾಗಿರಲೆಂದು ಆಕೆ ಹಾರೈಸುತ್ತಾಳೆ.

"ತವರೂರು ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ, ಬಾನಲ್ಲಿ
ಬಿಸಲೀನ ಬೇಗೆ ಸುಡಲಿಲ್ಲ"

ತನ್ನ ತವರನ್ನು ಕಾಣಲು ಹೊರಟಿರುವ ಹೆಣ್ಣುಮಗಳೊಬ್ಬಳ ಮಾತಿದು. ತವರಿಗೆ ಹೊರಟಿರುವ ಖುಷಿಯಲ್ಲಿ ಆಕೆಗೆ ಹಾದಿಯಲ್ಲಿ ಎದುರಾಗುವ ಕಷ್ಟಗಳ ಪರಿವೆಯೇ ಇಲ್ಲ. ಬಿಸಿಲಿನ ಬೇಗೆಯೂ ಆಕೆಯನ್ನು ಕಾಡಲಿಲ್ಲ.ಆಕೆಗೆ ತನ್ನ ತವರನ್ನು ಕಾಣುವ ಸಂತಸದಲ್ಲಿ ಮಾರ್ಗಮಧ್ಯದ ಈ ಯಾವ ಎಡರು-ತೊಡರುಗಳೂ ಲೆಕ್ಕಕ್ಕೆ ಬರಲಿಲ್ಲ. ಹೀಗಿದೆ ಆಕೆಯ ತವರಿನ ಪ್ರೇಮ.

"ತೊಟ್ಟೀಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತೌರೂರ
ತಿಟ್ತತ್ತಿ ತಿರುಗಿ ನೋಡ್ಯಾಳೊ"

ತನ್ನ ಚೊಚ್ಚಲ ಬಾಣಂತನವನ್ನು ಮುಗಿಸಿಕೊಂಡು ತನ್ನ ಗಂಡನ ಮನೆಗೆ ಹೊರಟಿರುವ ಹೆಣ್ಣೊಬ್ಬಳ ಚಿತ್ರಣವನ್ನು ಕೊಡುತ್ತದೆ - ಈ ಗೀತೆ.
ತಾಯಿಯ ಮನೆಯವರು ಕೊಟ್ಟ ಸೀರೆಯನ್ನುಟ್ಟು, ಅಪ್ಪ ಕೊಟ್ಟ ಎಮ್ಮೆಯನ್ನು ಹೊಡಕೊಂಡು ಹೊರಟಿದ್ದಾಳೆ - ಒಂದು ದಿಬ್ಬದ ಮೇಲೆ. ಆ ದಿಬ್ಬದ ಮೇಲೆ ನಿಂತು ತನ್ನ ತವರುಮನೆಯ ಕಡೆಗೆ ಒಮ್ಮೆ ನೋಡುತ್ತಿದ್ದಾಳೆ.. ದಿಬ್ಬವನ್ನು ಇಳಿದುಬಿಟ್ಟರೆ ಮತ್ತೆ ತವರುಮನೆ ಕಾಣಿಸದು, ಅದಕ್ಕೇ ಮುಂದೆ ಹೊರಡುವ ಮುಂಚೆ ಇನ್ನೊಮ್ಮೆ ಎನ್ನುವಂತೆ ತವರನ್ನು ನೋಡುತ್ತಿದ್ದಾಳೆ ಆಕೆ. ಎಷ್ಟು ಸುಂದರವಾದ, ಮನಮುಟ್ಟುವ ನಿರೂಪಣೆ!

ಇನ್ನು, ಆಕೆಗೆ ತನ್ನ ತಾಯಿಯ ಬಗೆಗಿರುವ ಪ್ರೀತಿ, ಭಕ್ತಿ ಅಷ್ಟಿಷ್ಟಲ್ಲ,

"ತೌರು ಮನೆಯ ಜ್ಯೋತಿ ತಣ್ಣಾಗೆ ಉರಿಯವ್ವ
ತಣ್ಣೀರಾಗೆ ಮಿಂದು ಮಡಿಯುಟ್ಟು ಬರುತೀನಿ
ತಣ್ಣಾಗೆ ಉರಿಯೆ ಜಗಜೋತಿ"

ಇಲ್ಲಿ ಆಕೆ ತನ್ನ ತಾಯಿಯನ್ನು ತವರಿನ ಮನೆಯ ಜ್ಯೋತಿ ಎಂದು ಕರೆದಿರುವುದು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ?

"ಕಾಶೀಗೆ ಹೋಗಲಿಕೆ ಏಸೊಂದು ದಿನ ಬೇಕು
ತಾಸ್ಸೊತ್ತಿನ ಹಾದಿ ತೌರೂರು ಮನೆಯಲ್ಲಿ
ಕಾಶಿ ಕುಂತವಳೆ ಹಡೆದವ್ವ"

"ಎಲ್ಲೋ ಇರುವ ಕಾಶಿಗೆ ಹೋಗಬೇಕೆಂದರೆ ಎಷ್ಟೋ ದಿನಗಳು ಬೇಕು. ಅಲ್ಲಿಗೆ ಹೋಗಲು ನನ್ನಿಂದ ಆಗುತ್ತದೋ ಇಲ್ಲವೋ, ಆದರೆ ತವರಿನ ಮನೆಯಂತೂ ಒಂದು ತಾಸು ಹೊತ್ತಿನ ಹಾದಿಯಷ್ಟೇ. ಅಲ್ಲಿಗೆ ಹೋದರೆ ಸಾಕು, ಅಲ್ಲಿ ನನ್ನ ತಾಯಿ ಇರುತ್ತಾಳೆ..." ಇಲ್ಲಿ ತನ್ನ ತಾಯಿಯನ್ನು ಕಾಶಿಯಂತಹ ಪುಣ್ಯಕ್ಷೇತ್ರಕ್ಕೆ ಹೋಲಿಸಿದ್ದಾಳೆ - ಈ ಹೆಣ್ಣುಮಗಳು, ಎಂತಹ ಉನ್ನತವಾದ ಕಲ್ಪನೆ.!

"ಯಾರು ಆದರೂ ಹೆತ್ತ ತಾಯಂತೆ ಆದಾರೋ
ಸಾವಿರ ಸೌದೆ ಒಲೆಯಲ್ಲಿ ಉರಿದಾರೂ
ದೀವಿಗೆಯಂತೆ ಬೆಳಕುಂಟೆ"

ಎಂತಹ ಅದ್ಭುತವಾದ ಹೋಲಿಕೆಯನ್ನು ಕೊಟ್ಟು ತಾಯಿಯ ಬಗೆಗೆ ಹೇಳುತ್ತಾಳೆ ಈ ಮಾತನ್ನು - "ಯಾವ ಬಂಧುಗಳು, ಆಪ್ತರೇ ಇದ್ದರೂ ಅವರಲ್ಲಿ ಯಾರೂ ಹೆತ್ತ ತಾಯಿಯನ್ನು ಸರಿಗಟ್ಟಲಾರರು. ತಾಯಿಗೆ ತಾಯಿಯೇ ಸಾಟಿ.
ಸಾವಿರ ಸೌದೆ ಉರಿಯಬಹುದು, ಅದು ಕೂಡ ಬೆಳಕು ಕೊಡುತ್ತದೆ. ಆದರೆ ಒಂದು ದೀಪವು ಕೊಡುವ ಸೌಮ್ಯವಾದ ಬೆಳಕಿಗೆ ಈ ಬೆಳಕು ಸರಿಹೋದೀತೆ?" ಇಲ್ಲ, ಖಂಡಿತ ಇಲ್ಲ. ಇಲ್ಲಿ, ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ದೀಪವು ಶುಭಸೂಚಕ. ಉರಿಯುವ ಸೌದೆಯಾದರೋ ಆಮಂಗಳವನ್ನು ಸೂಚಿಸುತ್ತದೆ.

"ಮೊಲೆಹಾಲ ಕುಡಿಸಿದ್ದಿ ಕಲಸಕ್ರಿ ತಿನಿಸಿದ್ದಿ
ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ
ಅಳುವುದೀಗೆಷ್ಟು ಹಡೆದವ್ವ"

ಯಾವುದೋ ದುಃಖದ ಸಂದರ್ಭದಲ್ಲಿ ಹೇಳುತ್ತಿರುವ ಮಾತಿನಂತಿದೆ - ಈ ಗೀತೆ. ತಾಯಿಯ ಪ್ರೇಮದ ಪರಾಕಾಷ್ಟತೆಯನ್ನು ಈ ಸಾಲುಗಳು ಕಣ್ಣಿಗೆ ಕಟ್ಟಿಕೊಡುತ್ತವೆ.
"ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ" -- ತಾಯಿಗೆ ತನ್ನ ಮಗುವಿನ ಮೇಲೆ ಅದೆಷ್ಟು ಪ್ರೀತಿ ಎಂದರೆ, ಬೆಳದಿಂಗಳ ಕಿರಣಗಳು ಸೋಕಿ ಎಲ್ಲಿ ತನ್ನ ಕಂದನ ಮೊಗವು ಕಂದುವುದೋ ಎಂದು ಆಕೆ ತನ್ನ ಸೆರಗನ್ನು ಮರೆಹಿಡಿಯುತ್ತಾಳೆ. ತನ್ನ ಮಗುವಿಗೆ ಅಷ್ಟು ಮಾತ್ರವೂ ನೋವಾಗಬಾರದೆಂದು ಆಕೆಯ ಕಾಳಜಿ. ಅಂತಹ ಅನನ್ಯ ಮಾತೃಪ್ರೇಮವನ್ನು ಎಷ್ಟು ಸರಳವಾಗಿ ಚಿತ್ರಿಸಿಕೊಡುತ್ತವೆ ಈ ಸಾಲುಗಳು.!!

“ಕಣ್ಣೀಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ
ಹೆಣ್ಣುಮಕ್ಕಳಿಗೆ ತವರಾಸೆ ತಾಯವ್ವ
ನಿಮ್ಮದೆ ನಮಗೆ ಅನುಗಾಲ.”

               “ಕಲ್ಲಾಸೆ ಕಟ್ಟೀಗಿ ಮುಳ್ಳಾಸೆ ಬೇಲೀಗಿ
                ಬಲ್ಲಿದರಾಸೆ ಬಡವರಿಗೆ ನನಕಂದಾ
                ನಿನ್ನಾಸೆ ನನಗೆ ಅನುಗಾಲ.”

ತಾಯಿ-ಮಗಳ ಸಂಭಾಷಣೆಯ ಪರಿಯಿದು. ತಾಯಿಗೆ ಯಾವಾಗಲೂ ತನ್ನ ಮಗಳದೇ ನೆನಪು, ಮಗಳಿಗೂ ಕೂಡ ತನ್ನ ತಾಯಿಯನ್ನು ನೋಡುವ ಹಂಬಲ - ಯಾವಾಗಲೂ.

'ಆಕಳ ಕರು ಬಂದು ಅಂಬಾ ಅಂಬಾ ಎಂದು
ತಮ್ಮವ್ವನ ಮೊಲೆಯ ನಲಿನಲಿದು ಉಂಬಾಗ
ನಮ್ಮವ್ವನ ಧ್ಯಾನ ನನಗಾಗಿ'

ಈ ಸಾಲುಗಳು ಸರಳವಾಗಿದ್ದರೂ ಅದರಲ್ಲಿ ವ್ಯಕ್ತವಾಗಿರುವ ಭಾವ ತುಂಬ ಆಳವಾದದ್ದು. ಅದನ್ನು ಮಾತುಗಳಲ್ಲಿ ವಿವರಿಸಿ ಹೇಳುವುದು ಕಷ್ಟವೇ...

ಇಂತಹ ಸಾವಿರಾರು ಸುಂದರವಾದ ಹಾಡುಗಳು ನಮ್ಮ ಜನಪದ ಸಾಹಿತ್ಯದಲ್ಲಿವೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಗೀತೆಗಳ ಸೃಷ್ಟಿಕರ್ತರು ಯಾರೋ ತಿಳಿಯದಾದರೂ ಈ ಗೀತೆಗಳು ಇರುವವರೆಗೂ, ಕನ್ನಡ ಭಾಷೆಯಿರುವವರೆಗೂ ಅವರು ಪ್ರತಿ ಗೀತೆಯಲ್ಲಿಯೂ ಜೀವಂತವಿರುತ್ತಾರೆ ಎಂದು ನನ್ನ ಭಾವನೆ.

Monday, 5 August 2013

ಕವಿರಾಜಮಾರ್ಗ - ಕೃತಿ ಪರಿಚಯ

"ಕವಿರಾಜಮಾರ್ಗ" – ಈ ಹೆಸರನ್ನು ಒಂದಲ್ಲ ಒಮ್ಮೆ ನಾವು ಕೇಳಿಯೇ ಇರುತ್ತೇವೆ.ಆದರೆ ಇದರ ಬಗ್ಗೆ ನಮಗೆ ಹೆಚ್ಚಾಗಿ ಏನೂ ತಿಳಿದಿರುವುದಿಲ್ಲ.! ಹಾಗಾಗಿ ಈ ಕೃತಿಯನ್ನು ಪರಿಚಯಿಸಲು ನನ್ನದೊಂದು ಪ್ರಯತ್ನ - ಈ ಲೇಖನ.

ಕನ್ನಡದ ಇತಿಹಾಸದಲ್ಲಿ ಕವಿರಾಜಮಾರ್ಗಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಕನ್ನಡದ ಪ್ರಾಚೀನತೆಗೆ ಸಾಕ್ಷಿಯಾದ ಶಾಸನಗಳ ಪೈಕಿ ಹಲ್ಮಿಡಿ ಶಾಸನವು(೫ನೇ ಶತಮಾನ) ಮೊದಲನೆಯದೆನಿಸಿದರೆ*, ಕನ್ನಡದಲ್ಲಿ ಉಪಲಬ್ಧವಿರುವ ಗ್ರಂಥಗಳ ಪೈಕಿ ಕವಿರಾಜಮಾರ್ಗವು ಅತ್ಯಂತ ಹಳೆಯದು. ಈಗಿನ ಮಟ್ಟಿಗೆ ಇದೇ ಮೊದಲನೆಯದು ಎಂದರೂ ತಪ್ಪಲ್ಲ.!

ಮೂಲತಃ ಕವಿರಾಜಮಾರ್ಗವು ಒಂದು ಲಕ್ಷಣ ಗ್ರಂಥ (ವ್ಯಾಕರಣ, ಅಲಂಕಾರ ಹಾಗೂ ಭಾಷೆಯ/ಧ್ವನಿರಚನೆಯ ಬಗೆಗೆ ರಚಿತವಾದ ಗ್ರಂಥ). ಇದನ್ನು ಕನ್ನಡ ಕಾವ್ಯಮೀಮಾಂಸೆಯ ತಲಕಾವೇರಿ ಎನ್ನಬಹುದು. ಇದರ ಮುಂದಿನ ಕನ್ನಡ ಲಕ್ಷಣ ಗ್ರಂಥಗಳಿಗೆ ಈ ಗ್ರಂಥವೇ ಮಾರ್ಗದರ್ಶಿ. ಹಾಗಾಗಿ ಈ ಗ್ರಂಥವು ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವವನ್ನು ಪಡೆದಿದೆ.

ಕವಿಗಳ+ರಾಜಮಾರ್ಗ, ಕವಿರಾಜರ+ಮಾರ್ಗ ಅಥವ ಕವಿರಾಜನ+ಮಾರ್ಗ ಎಂದು ಇದನ್ನು ಬಿಡಿಸಿ ಅರ್ಥ ಮಾಡಬಹುದು.
ಕವಿರಾಜರು(ಅಂದರೆ ಕವಿಶ್ರೇಷ್ಠರು) ಅನುಸರಿಸುವ ಮಾರ್ಗ ಎಂದು, ಅಥವಾ ಮಾರ್ಗಕಾವ್ಯವನ್ನು ರಚಿಸಲು ಕವಿಶ್ರೇಷ್ಠರಿಗೆ ದಾರಿದೀಪವಾಗಲಿ ಎಂದು ಕವಿಯು ಇದನ್ನು ರಚಿಸಿದನೆಂದು ಭಾವಿಸಬಹುದಾಗಿದೆ.

ಕೃತಿಯ ವಿಚಾರ :

ಕವಿರಾಜಮಾರ್ಗವು ೯ ನೇ ಶತಮಾನದಲ್ಲಿ - ಸುಮಾರು ೮೪೦-೮೫೦ರ ಮಧ್ಯಕಾಲದಲ್ಲಿ - ರಚಿತವಾಗಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ (ಕೆಲವು ಶಾಸನಗಳೂ ಈ ಊಹೆಯನ್ನೇ ಸಮರ್ಥಿಸುತ್ತವೆ).

ಈ ಅಮೂಲ್ಯ ಕೃತಿಯ ಕರ್ತೃ ಯಾರು ಎಂಬುದರ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಕೆಲವರು ರಾಷ್ಟ್ರಕೂಟ ವಂಶದ ಅರಸನಾದ ಅಮೋಘವರ್ಷ ನೃಪತುಂಗನೇ ಇದರ ಕರ್ತೃ ಎಂದು ವಾದಿಸುತ್ತಾರೆ. ಇನ್ನು ಕೆಲ ವಿದ್ವಾಂಸರು ಇದನ್ನು ರಚಿಸಿದವನು ಶ್ರೀ ವಿಜಯನೆಂಬ ಜೈನ ಕವಿ ಎಂದು ಅಭಿಪ್ರಾಯ ಪಡುತ್ತಾರೆ. ಈ ಎರೆಡು ವಾದಗಳಿಗೂ ಪ್ರತಿಯಾಗಿ ಇನ್ನೊಂದು ಗುಂಪು ಈ ಕೃತಿಯನ್ನು ರಚಿಸಿದವನು 'ಕವೀಶ್ವರ'ನೆಂದು ವಾದಿಸುತ್ತಾರೆ.

ಆದರೆ ಗ್ರಂಥದಲ್ಲಿ ಉಕ್ತವಾಗಿರುವಂತೆ ಇದು "ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗ.."ವಷ್ಟೇ ಹೊರತು ನೃಪತುಂಗನೇ ಸ್ವತಃ ಬರೆದದ್ದಲ್ಲ. ಅಂದರೆ ಇದು ಬೇರೊಬ್ಬರು ಬರೆದದ್ದು, ನೃಪತುಂಗ ಬರೆದದ್ದಲ್ಲ. ಅಷ್ಟೇ ಅಲ್ಲದೆ ಗ್ರಂಥದ ಮೊದಲ ಪದ್ಯದಲ್ಲಿ ಶ್ರೀವಿಷ್ಣುವಿಗೂ ನೃಪತುಂಗನಿಗೂ ಅಬೇಧ ಕಲ್ಪಿಸಿ ಸ್ತುತಿಸಲಾಗಿದೆ. ನೃಪತುಂಗನೇ ಇದನ್ನು ರಚಿಸಿದ್ದಾದರೆ ತನ್ನನ್ನು ತಾನು ಮಹಾವಿಷ್ಣುವಿಗೆ ಹೋಲಿಸಿಕೊಳ್ಳುವಷ್ಟು ಧೈರ್ಯ ಆತ ಮಾಡುತ್ತಿರಲಿಲ್ಲ ಎನಿಸದೆ ಇರದು (ತನ್ನನ್ನು ತಾನೇ - ಅದೂ ತನ್ನನ್ನು ವಿಷ್ಣುವಿಗೆ ಹೋಲಿಸಿಕೊಂಡು ಆತ ಏಕೆ ಸ್ತುತಿಸಿಕೊಳ್ಳುತ್ತಾನೆ?). ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ಕಾರಣಗಳಿಗೆ ಇದರ ಕರ್ತೃ ನೃಪತುಂಗನೆಂಬ ವಾದವನ್ನು ಕೈಬಿಡಬೇಕಾಗುತ್ತದೆ.

ಇನ್ನು,'ಕವೀಶ್ವರ' ಎಂಬುದು ನೃಪತುಂಗನ ಆಸ್ಥಾನದಲ್ಲಿದ್ದ ಶ್ರೀವಿಜಯನಿಗೆ ಇದ್ದ ಬಿರುದಷ್ಟೆ ಹೊರತು ಆ ಹೆಸರಿನ ವ್ಯಕ್ತಿಯೇ ಇರಲಿಲ್ಲವೆಂದು 'ಶ್ರೀ ವಿಜಯ'ನ ಪಕ್ಷದವರು ಪ್ರತಿಪಾದಿಸಿದ್ದಾರೆ.

ಇನ್ನುಳಿದಂತೆ, ಗ್ರಂಥದಲ್ಲಿ ಕವಿಯೇ ಹೇಳಿಕೊಂಡಿರುವುದರಿಂದಲೂ, ಹಾಗೂ ನಂತರದ ಕವಿಗಳು ತಮ್ಮ ಕಾವ್ಯ/ಗ್ರಂಥಗಳಲ್ಲಿ 'ಶ್ರೀವಿಜಯನ ಕವಿರಾಜಮಾರ್ಗ'ವೆಂದೂ ಉಲ್ಲೇಖಿಸಿರುವುದರಿಂದಲೂ ಇದರ ಕರ್ತೃ ಶ್ರಿವಿಜಯನೇ ಎಂಬುದು ನಿರ್ವಿವಾದವಾಗಿ ಒಪ್ಪಬಹುದಾಗಿದೆ.

ಈ ಕೃತಿಯ ಒಳಗೇನಿದೆ?

ಈ ಮೊದಲೇ ಹೇಳಿದಂತೆ ಇದೊಂದು ಲಕ್ಷಣ ಗ್ರಂಥ. ಕಾವ್ಯರಚನೆ, ಅಲಂಕಾರ, ವ್ಯಾಕರಣ ಮುಂತಾದ ವಿಷಯಗಳು ಇಲ್ಲಿ ಪ್ರತಿಪಾದಿತವಾಗಿವೆ. ‘ಕವಿರಾಜಮಾರ್ಗ’ದಲ್ಲಿ ಮೂರು ಪರಿಚ್ಛೇದಗಳಿವೆ.
ಮಹಾವಿಷ್ಣು ಹಾಗೂ ಸರಸ್ವತಿ ದೇವಿಯ ಸ್ತುತಿಯಿಂದ ಪ್ರಾರಂಭವಾಗುವ ಮೊದಲನೆಯ ಪರಿಚ್ಛೇದದಲ್ಲಿ ಕನ್ನಡ ಕಾವ್ಯಗಳಲ್ಲಿ ಕಂಡುಬರುವ (ಆ ಕಾಲಕ್ಕೆ) ದೋಷಾದೋಷಗಳ ವಿವೇಚನೆಯಿದೆ. ಸಂಸ್ಕೃತವನ್ನು ಕನ್ನಡ ಕಾವ್ಯದಲ್ಲಿ ಹೇಗೆ - ಯಾವ ಪ್ರಮಾಣದಲ್ಲಿ ಬೆರೆಸಿ ಹೇಳಬೇಕೆಂಬ ನಿರ್ದೇಶನವಿದೆ. ಅಷ್ಟೇ ಅಲ್ಲದೆ, ಕನ್ನಡದಲ್ಲಿ ( ಆ ಕಾಲಕ್ಕೆ) ಇದ್ದ ಅನೇಕ ಉಪಭಾಷೆಗಳ ಬಗ್ಗೆ ಪ್ರಸ್ತಾಪವಿದೆ - ಇಲ್ಲಿ. ಹಾಗೆಯೇ, ಈ ಪರಿಚ್ಛೇದದಲ್ಲಿ ಕವಿಯು ಕನ್ನಡಕ್ಕೆ ಮಾತ್ರ ಸೇರಿದ ಚತ್ತಾಣ, ಬೆದಂಡೆ, ಒನಕೆವಾಡು, ಬಾಜನೆಗಬ್ಬ ಮುಂತಾದ ಸಾಹಿತ್ಯರೂಪಗಳ ಪರಿಚಯ ಮಾಡಿಕೊಡುತ್ತಾನೆ.

ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರವನ್ನು ಕುರಿತಾದ ವ್ಯಾಖ್ಯಾನಗಳಿವೆ. ಪದ ಪ್ರಯೋಗ ನಿಯಮಗಳು, ಪ್ರಾಸಗಳು - ಅವುಗಳ ಪ್ರಬೇಧಗಳು, ಅವಕ್ಕೆ ಪೂರಕವಾದ ಲಕ್ಷಣ ಪದ್ಯಗಳನ್ನು ಈ ಪರಿಚ್ಛೇದದಲ್ಲಿ ಕಾಣಬಹುದು. ಅಷ್ಟೇ ಅಲ್ಲ, ವಿಶಿಷ್ಟವಾದ 'ದಕ್ಷಿಣೋತ್ತರ ಮಾರ್ಗ'ವೆಂಬ ಮಾರ್ಗದ ಪ್ರಸ್ತಾಪವೂ, ನಿರೂಪಣೆಯೂ ಈ ಪರಿಚ್ಛೇದದಲ್ಲಿದೆ.

ಮೂರನೆಯ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳ ನಿರ್ದೇಶನವಿದೆ. ಮತ್ತು ಮಹಾಕಾವ್ಯ ಲಕ್ಷಣವನ್ನು ಕುರಿತಾದ ಪದ್ಯಗಳಿವೆ.

ಕೃತಿಯ ಬಗ್ಗೆ ಇನ್ನಷ್ಟು :

ಕವಿಯು ಈ ಗ್ರಂಥದಲ್ಲಿ ತನಗಿಂತ ಹಿಂದೆಯೇ ಇದ್ದು ಆ ಕಾಲಕ್ಕೆ ಮುಗಿಯುತ್ತಾ ಬಂದಿದ್ದ 'ಹಳೆಗನ್ನಡ'ವನ್ನು ಕುರಿತು ಹೇಳುತ್ತಾನೆ. ಅಂದರೆ, ಇದರಿಂದ ನಮಗೆ ೯ನೇ ಶತಮಾನಕ್ಕೆ ಹಿಂದೆಯೇ ಒಂದು ಬಗೆಯ ಕನ್ನಡವು(ಹಳಗನ್ನಡವು) ಇತ್ತೆಂದು ತಿಳಿದುಬರುತ್ತದೆ. ಆ ಕಾಲಕ್ಕೆ ಈ ಕವಿಯ ಕನ್ನಡವೇ ಹೊಸಗನ್ನಡ!!

ಆ ಹಿಂದೆ ಇದ್ದ ಕನ್ನಡದ ಕವಿಗಳು ತಮ್ಮ ಕಾವ್ಯಗಳಲ್ಲಿ ಸಂಸ್ಕೃತವನ್ನು ಮಿತಿಮೀರಿ ಬಳಸಿರುವುದನ್ನು ಕುರಿತು ಕವಿಯು ಹೇಳುತ್ತಾನೆ. ಈ ರೀತಿಯ ಸೇರಿಸುವಿಕೆಯಿಂದ ಕನ್ನಡದಲ್ಲಿ ದೋಷಗಳು ಉಂಟಾಗಿ ಕನ್ನಡವು ಹದಗೆಟ್ಟಿತ್ತು ಎಂದು ಕವಿಯು ಅಭಿಪ್ರಾಯಪಡುತ್ತಾನೆ. ಇಂತಹ ದೋಷಗಳು ಕನ್ನಡದಲ್ಲಿ ಎಷ್ಟಿದ್ದವು ಎಂದರೆ :

ದೋಸಮಿನಿತೆಂದು ಬಗೆದು
ದ್ಭಾಸಿಸಿ ತಱಿಸಂದು ಕನ್ನಡಂಗಳೊಳೆಂದುಂ
ವಾಸುಗಿಯುಮಱಿಯಲಾಱದೆ
ಬೆಸಱುಗುಂ ದೇಶೀ ಬೇಱೆವೇಱಪ್ಪುದರಿಂ (ಕ.ಮಾ – ೪೬)

"ದೋಷಗಳು ಎಷ್ಟಿವೆ ಎಂದು ವಿವರಿಸಿ ಹೇಳು" ಎಂದು ಕೇಳಿದರೆ ಅದನ್ನು ಹೇಳಲು ಸಾವಿರ ತಲೆಯ ವಾಸುಕಿಯೂ ಬೇಸರಿಸಿಕೊಳ್ಳುತ್ತಾನಂತೆ.
“ಕಾವ್ಯಗಳಲ್ಲಿ ಕಂಡುಬರುತ್ತಿರುವ ಈ ರೀತಿಯ ದೋಷಗಳಲ್ಲಿ ಹಲವನ್ನು ಕುರಿತು ಹೇಳಲು ಪ್ರಯತ್ನಿಸುತ್ತೇನೆ” ಎಂದು ಹೇಳುತ್ತ ಕವಿಯು ದೋಷಾದೋಷಗಳ ನಿರೂಪಣೆಗೆ ತೊಡಗುತ್ತಾನೆ.

ಈ ಕೃತಿಯಲ್ಲಿ ಆಗಿನ ಕನ್ನಡ/ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನೂ ನಾವು ಕಾಣಬಹುದು. ಮುಖ್ಯವಾಗಿ ಕವಿಯು ಕನ್ನಡ ನಾಡನ್ನೂ, ಕನ್ನಡದ ಜನರನ್ನೂ ಕುರಿತು ಹೇಳಿರುವ ಈ ಎರೆಡು ಪದ್ಯಗಳನ್ನು ಗಮನಿಸಬಹುದು :

ಕಾವೇರಿಯಿಂದಮಾ ಗೋದಾ
ವರಿವರೆಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯವಿಲೀನವಿಶದ ವಿಷಯ ವಿಶೇಷಂ (ಕ.ಮಾ – ೩೬)

ಆ ಕಾಲಕ್ಕೆ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿಯಿಂದ ಹಿಡಿದು ಉತ್ತರದಲ್ಲಿ ಗೋದಾವರಿಯವರೆಗೂ ಹಬ್ಬಿತ್ತು ಎಂದು ತಿಳಿದುಬರುತ್ತದೆ. ('ಕನ್ನಡ' - ಈ ಪದವು ಆಗ ಭೌಗೋಳಿಕ ಪ್ರದೇಶವನ್ನು ನಿರ್ದೇಶಿಸುವ ಸಲುವಾಗಿಯೂ ಉಪಯೋಗಿಸಲ್ಪಡುತ್ತಿತ್ತು)

ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ (ಕ.ಮಾ – ೩೮)

ಕನ್ನಡಿಗರು 'ಹದವರಿತು ನುಡಿಯಬಲ್ಲವರೂ, ನುಡಿದಂತೆ ನಡೆಯಬಲ್ಲವರೂ ಆಗಿದ್ದರು. ಅವರು ಎಷ್ಟು ಪ್ರತಿಭಾವಂತರೂ, ಕೌಶಲ್ಯಮತಿಗಳೂ ಆಗಿದ್ದರು ಎಂದರೆ 'ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ' -- ಓದು ಬರಹ ಬರದವರೂ ಸಹ ಕಾವ್ಯ ರಚನೆಯಲ್ಲಿ ನಿಷ್ಣಾತರಾಗಿದ್ದರು. ಕರ್ನಾಟಕದಾದ್ಯಂತ ಪ್ರಸಿದ್ಧವಾಗಿರುವ ಜಾನಪದ ಗೀತೆಗಳು ಈ ರೀತಿಯ ರಚನೆಗಳಿಗೆ ಒಂದು ಉತ್ತಮ ಉದಾಹರಣೆ.

ಕವಿರಾಜಮಾರ್ಗವು ಕನ್ನಡ ಕಾವ್ಯರಚನೆಗೆ ಕೈದೀವಿಗೆಯಾಗಲಿ ಎಂದು ರಚಿತವಾಗಿದ್ದರೂ ಇದನ್ನು ರಚಿಸಲು ಕವಿಯು ಸಂಸ್ಕೃತ ಗ್ರಂಥಗಳನ್ನೇ ಆಶ್ರಯಿಸಿದ್ದಾನೆ.

ಈ ಕೃತಿಗೆ ಸಂಸ್ಕೃತ ಕವಿಗಳಾದ ದಂಡಿ ಹಾಗೂ ಭಾಮಹರ 'ಕಾವ್ಯಾದರ್ಶ' ಹಾಗೂ 'ಕಾವ್ಯಾಲಂಕಾರ'ಗಳು ಕ್ರಮವಾಗಿ ಆಕರಗಳು. ವಾಸ್ತವವಾಗಿ ಕವಿಯು ಸಂಸ್ಕೃತ ಆಕರಗಳ ನೇರ ಅನುವಾದಕ್ಕೆ ತೊಡಗದೆ ಕನ್ನಡಕ್ಕೆ ಒಪ್ಪುವ ರೀತಿಯಲ್ಲಿ ತನ್ನದೇ ಧಾಟಿಯಲ್ಲಿ ಅವುಗಳ ಭಾವಾನುವಾದವನ್ನಷ್ಟೆ ಮಾಡಿದ್ದಾನೆ.

ಹಾಗೂ ಕವಿಯ ಸ್ವತಂತ್ರ ಸೃಷ್ಟಿಯು ಕೂಡ ಈ ಗ್ರಂಥದಲ್ಲಿದೆ. ಒಟ್ಟು ೫೩೬ ಪದ್ಯಗಳಿರುವ ಈ ಗ್ರಂಥದಲ್ಲಿ ೨೭೫ ಸಂಸ್ಕೃತ ಗ್ರಂಥಗಳ ನೆರಳಿನಲ್ಲಿ ರಚನೆಯಾದವು. ಇನ್ನುಳಿದ ಪದ್ಯಗಳು ಶ್ರೀವಿಜಯನ ಸ್ವತಂತ್ರ ಸೃಷ್ಟಿ.
ಕೃತಿಯಲ್ಲಿನ ಹಲವು ಲಕ್ಷಣ ಪದ್ಯಗಳಲ್ಲಿ(illustrative poems) ಕವಿಯು ಅಂದಿನ ರಾಜಕೀಯ ಸ್ಥಿತಿಗತಿಗಳ ಬಗೆಗೂ ನಮಗೆ ಮಾಹಿತಿ ಕೊಡುತ್ತಾನೆ. ಒಟ್ಟಿನಲ್ಲಿ 'ಕವಿರಾಜಮಾರ್ಗ'ವು ಹಲವಾರು ದೃಷ್ಟಿಕೋನಗಳಿಂದ ಅತ್ಯಂತ ಮಹತ್ವಪೂರ್ಣ ಗ್ರಂಥವಾಗಿದೆ.
ಇಂತಹ ಅಪೂರ್ವ ಕೃತಿಯನ್ನು ನೀಡಿದ ಶ್ರೀವಿಜಯ ನಿಜಕ್ಕೂ ಕನ್ನಡದ ಕವಿಗಳಿಗೆ ಹೊಸ ಮಾರ್ಗವನ್ನೇ ತೋರಿದ್ದಾನೆ.

ಇಲ್ಲಿಗೆ ಶ್ರೀವಿಜಯನಿಂದ ರಚಿತವಾದ "ಪರಮ ಶ್ರೀ ನೃಪತುಂಗದೇವಾನುಮತಮಪ್ಪ 'ಕವಿರಾಜಮಾರ್ಗ'ದ" ಪರಿಚಯ ಲೇಖನವು ಸಮಾಪ್ತಿಯಾಯ್ತು. :)


------------------------------------------------------------------------------------------------------------------- *ಇತ್ತೀಚೆಗೆ ಸುಮಾರು ೩ನೇ ಶತಮಾನಕ್ಕೆ ಸೇರಿದ ಕನ್ನಡ ಶಾಸನವೊಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಆದರೆ ಅದರ ಖಚಿತತೆಯ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. (FYI)

ಗ್ರಂಥ ಋಣ : 'ಕನ್ನಡ ಸಾಹಿತ್ಯ ಪರಿಷತ್'ನಿಂದ ಪ್ರಕಟಿತವಾದ "ಕವಿರಾಜಮಾರ್ಗ" ಹಾಗೂ "ಶಬ್ದಮಣಿದರ್ಪಣಂ" ಗ್ರಂಥಗಳು.

Thursday, 18 July 2013

ಪಾಲಿಸೆನ್ನನು ಹರಿಯೆ

ಪಾಲಿಸೆನ್ನನು ಹರಿಯೆ; ಪಾಲಿಸೆನ್ನನು ದೊರೆಯೆ.
ಬಿಡದೆನ್ನ ಬೆಂಬತ್ತಿ ಬಗೆಗೆಡಿಸಿ ಕಾಡುತಿಹ,
ಹೊಡೆಹೊಡೆದು ಕೆಡೆಗೆಡೆದು ಛಲದಿಂದ ಬಂಧಿಸಿಹ -
ಆರು ಪಾಶದೆ ಸಿಲುಕಿ ನರಳುತಿಹುದೆನ್ನಾತ್ಮ;
ಅದನು ಪೊರೆದುದ್ಧರಿಸಿ ಸಲಹೆನ್ನ ಶ್ರೀ ಹರಿಯೆ.


ಅನ್ಯರುತ್ತಮಿಕೆಯೊಳು ಕರುಬುವುದು ಈ ಮನವು,
ಅನ್ಯರಾ ಅವನತಿಗೆ ಮೂಡುವುದು ಸಂತಸವು,
ಆನ್ಯರೇಳ್ಗೆಯ ಕಂಡು ಮೊರೆಯುವುದು ಮತ್ಸರವು;
ಇದರ ದೆಸೆಯೊಳು ನನ್ನ ಜೀವನವು ನಿಷ್ಫಲವು.
ಈ ದ್ವೇಷದುರಿ ಹರಿಸಿ ಕಾಯೆನ್ನ ಶ್ರೀ ಹರಿಯೆ.


ನಾನೆಂಬಹಂಕಾರ ತುಂಬಿಹುದು ಎದೆಯೊಳಗೆ,
ತಾತ್ಸಾರದಾ ಪೊರೆಯು ಮೂಡಿಹುದು ಕಣ್ಣೊಳಗೆ,
ಅಧಿಕರಣದಾ ಅಮಲು ಏರಿಹುದು ತಲೆಯೊಳಗೆ,
ಮದದ ಭೂತವು ಹೊಕ್ಕು ಮೆರೆಯುತಿಹುದೆನ್ನೊಳಗೆ;
ಅದರ ಚೇಷ್ಟೆಯ ಕಳೆದು ಕಾಯೆನ್ನ ಶ್ರೀ ಹರಿಯೆ.


ನನದೆಂಬ ಮಮಕಾರ - ಅಜ್ಞಾನದಾವಾರ;
ಮುಗಿಯದೆಂದಿಗು ಅದರ ಪಾಶದಾ ವಿಸ್ತಾರ –
ಸುಖದ ನೇಣಿನೊಳೆನ್ನ ಬಂಧಿಸಿದ ಹುನ್ನಾರ ;
ಮೋಹಸೆರೆಯೊಳು ಸಿಕ್ಕ ಜೀವವಿದು ನಿಸ್ಸಾರ.
ಇದರ ಬಂಧವ ಬಿಡಿಸಿ ಕಾಯೆನ್ನ ಶ್ರೀ ಹರಿಯೆ.


ಇರುವುದನು ಕಡೆಗಣಿಸಿ ಇರದುದನು ಧ್ಯಾನಿಸುವ
ಎನಿತೆಷ್ಟು ಪಡೆದರೂ ಮತ್ತಷ್ಟಿಗಾಶಿಸುವ
ಪರರ ಸೊತ್ತನು ಕಸಿದು ತನದೆಂದು ವಾದಿಸುವ
ತನ್ನ ಲಾಭವ ಮಾತ್ರ ನೆನೆನೆನೆದು ಸಾಧಿಸುವ
ಲೊಭದುಪಟಳ ಹರಿಸಿ ಕಾಯೆನ್ನ ಶ್ರೀ ಹರಿಯೆ.


ಆವ ಕಾರಣವಿರದೆ ಉದಿಸುವುದು ತಾಮಸವು –
ತನುಮನವ ಕೆಡಿಸುತ್ತ ಭ್ರಮೆಗೆಳೆಸುವಾವಹವು,
ಹೃದಯವನು ಕುದಿಸುತ್ತ ಮತಿಗೆಡಿಸುವಾನಲವು,
ಉರಿದುರಿದು ಕೊಲ್ಲುವ ಮಹದ್ವಿಲಯ ಕಾರಣವು;
ಈ ಕ್ರೋಧವನು ದಹಿಸಿ ಕಾಯೆನ್ನ ಶ್ರೀ ಹರಿಯೆ.


ಸುಖದ ಸಿರಿಯನು ಕುರಿತು ಸರ್ವಥಾ ಧ್ಯಾನಿಸಿಹ,
ಸಂಗಕ್ಕೆ ಹಾತೊರೆದು ಸಕಲವನ್ನಾರ್ಥಿಸಿಹ,
ಭೋಗದಾಸೆಗೆ ಸೋತು ಮೈಮರೆತು ಬಾಗುತಿಹ,
ವಿಷಯ ವಾಂಛೆಯ ಸುಳಿಗೆ ಮರಮರಳಿ ಬೀಳುತಿಹ –
ಮನವ ಕಾಮದಿಂ ಬಿಡಿಸಿ ಕಾಯೆನ್ನ ಶ್ರೀ ಹರಿಯೆ.


ಧೃಡದ ಭಕುತಿಯನಿತ್ತು; ಚಿತ್ತ ಶುದ್ಧಿಯನಿತ್ತು,
ನಿನ್ನ ನಾಮವ ನಂಬಿ ಬಾಳುವಾಸೆಯನಿತ್ತು,
ಮತಿಗೆಡದೆ ತೊಡಕುಗಳ ದಾಟುವಾ ಬಲವಿತ್ತು,
ಧೃತಿಗೆಡದೆ ಕಷ್ಟಗಳ ಸೈರಿಸುವ ಛಲವಿತ್ತು,
ದಯೆಯಿರಿಸಿ ನೀನಿನ್ನು ಕಾಯೆನ್ನ ಶ್ರೀ ಹರಿಯೆ.

Samharisu deva

ಇವರ ಸಂಹರಿಸು ದೇವ –
ನಿನ್ನ ಮರೆತವರನ್ನು,
ಮಲಿನ ಕಲೆತವರನ್ನು,
ಮೋಹ ಬೆರೆತವರನ್ನು,
ಸುಖದೆ ಮಲೆತವರನ್ನು –
ಬಿಡದೆ ನೀ ಸಂಹರಿಸು ದೇವ.


ಕಾಮ-ಲಾಲಸೆ ತುಂಬಿ,
ಅಚಿರ ದೇಹವ ನಂಬಿ,
ಪಾಪ ಕಾರ್ಯವ ಗೈದು
ಗರ್ವದಿಂದಲಿ ಮೆರೆವ
ಈ ದುರುಳರೆಲ್ಲರನು –
ಹರಿದು ನೀ ಸಂಹರಿಸು ದೇವ.


ಮಾನವತ್ವವ ಮರೆತು
ಮೃಗವು ನಾಚುವ ತೆರದಿ
ನೀಚ ಕೃತ್ಯವನೆಸಗಿ
ಮರೆಯೊಳಗೆ ಹುದುಗಿರುವ
ಈ ಘೋರ ರಕ್ಕಸರ –
ಸಿಗಿದು ನೀ ಸಂಹರಿಸು ದೇವ

Saturday, 6 July 2013

Shiva kathana - saraLa ragaLe

ಬ್ರಹ್ಮನ ಹೃತ್ಸರಸಿಯೊಳುದಿಸಿದಾ ಶಾರದೆಯೆ
ವಾಣಿ; ದಿವ್ಯಕಾವ್ಯದ ರಾಣಿ, ವರದೆ ಕಲ್ಯಾಣಿ
ಹರಸೆನ್ನ ಭಾರತಿಯೆ, ರಜತ ವೀಣಾ ಪಾಣಿ.
ತೊದಲನುಡಿಯೊಳು ನಿನ್ನ ನುತಿಸುವೆನು ವಾಗ್ದೇವಿ
ಬಿಡದೆ ಕೈಯನು ಹಿಡಿದು ನಡೆಸೆನ್ನ ಸರಸತಿಯೆ
ಹೃದಯದೊಳು ನೀ ಬಂದು ನೆಲೆಸಮ್ಮ ಸ್ವರವನಿತೆ
ನಿನ್ನ ಕಂದನ ಹರಸಿ ನುಡಿಸಮ್ಮ ಸುರ ವಿನುತೆ
ಬಾ ಎನ್ನ ಕಾಮಿನಿಯೆ, ಆವರಿಸು ಹೃದಯವನು
ಬಾ ತಾಯೆ ಭಾರತಿಯೆ ತುಂಬೆನ್ನ ಆತ್ಮವನು
ನಲಿದು ನರ್ತಿಸು ಎನ್ನ ಜಿಹ್ವೆಯಾ ತುದಿಯಲ್ಲಿ (10)
ತುಂಬಿ ಪ್ರವಹಿಸು ತಾಯೆ ಭಾವದs ಕಡಲಿನಲಿ
ನುಡಿ ತಾಯೆ ನಡೆ ತಾಯೆ ಎನ್ನ ಜೀವವ ತುಂಬಿ
ನೆರೆದು ನೆಚ್ಚಿದೆ ತಾಯೆ ನಿನ್ನ ಕರುಣೆಯ ನಂಬಿ
ಭಾವಾಬ್ಧಿಯನು ಮಥಿಸಿ ಕಾವ್ಯಸುಧೆ ಹೊಮ್ಮಲಿs
ಶಬ್ಧಾರ್ಥ ಭಾವದೊಳು ನಿನ್ನ ಸೆಲೆ ತುಂಬಲಿ
ಪ್ರೇಮದಿಂದಲಿ ಹರಸಿ ಪೊರೆ ತಾಯೆ ಹರುಷದಲಿ
ಭಾಳನೇತ್ರನ ಕಥೆಯ ಪೇಳುವೆನು ವಿನಯದಲಿ :-


ಕಲ್ಪಾದಿಯೊಳು ಹರಿಯು ಯೋಗನಿದ್ರೆಯೊಳಿರಲು
ಅವನ ನಾಭಿಯೊಳಿಂದ ಶತಪತ್ರ ಹೊರಬರಲು
ಮೂಡಿದನು ನಾಲ್ಮುಖನು ಕಮಲದಳಗಳ ನಡುವೆ (20)
ಭಯಗೊಂಡ ನೆಲ್ಲೆಲ್ಲು ಕತ್ತಲೆಯು ತಾನ್ ಮೆರೆಯೆ
ತನ್ನ ಮೂಲವ ಹುಡುಕಿ ಬ್ರಹ್ಮ ನಡೆಯುತ ಬರಲು
ಕಂಡನೌ ಹರಿಯನ್ನು ನಾರ ಶಯನದೊಳಿರಲು
ಅಜನ ಬರವಂ ಕಂಡು ಹರಿಯು ತಾನೆಚ್ಚೆತ್ತು
"ಬಾ ಮಗನೆ, ಬಾ" ಎನಲು ಬಹು ಕೋಪವೇರಿತ್ತು
"ಎನ್ನ ಮಗನೆನುವೆ ಮರುಳೆ, ಭ್ರಾಂತಿಯೈಸಲೆ ನಿನಗೆ
ಹಿರಿಯ ನಾನಹೆನಯ್ಯ, ಮಗನಹೆಯೊ ನೀನೆನಗೆ"
ಎಂದು ಬ್ರ ಹ್ಮನು ನುಡಿಯೆ ಹರಿಯು ಮುನಿಸನು ತಳೆದು
"ಮರುಳು ನೀನಹೆ ಮಗನೆ ,ನೋಡು ಭ್ರಾಂತಿಯ ಕಳೆದು
ನಾಭಿಕಮಲದೊಳಿಂದ ಜನಿಸಿರುವೆ ನೀ ಮಗುವೆ (30)
ಪಿತನೆಂಬ ಗೌರವವ ಮರೆತು ಹರಟುವೆಯೇಕೆ"
ಎಂದು ಹರಿ ತಾನ್ ನುಡಿಯೆ ಉದಿಸಿತೀರ್ವರ ನಡುವೆ
ಬಹು ಘೋರ ತಾಮಸವು - ಮನಸು ರೋಷದ ಮಡುವೆ.
ಹೊರಳಿ ಹೊಯ್ದರು ಅವರು ನಾ ಮೇಲು ಮೇಲೆಂದು
ಕೆರಳಿ ಬಯ್ದರು ಕೆಲರ ನೀನು ಬಹು ಕೀಳೆಂದು
ಆನು ತಾನೆಂತೆಂದು ಕಾದು ಕಾದಿದರವರು -
ತಮ್ಮಲ್ಲಿ ತಾವೇ ಬಹುಶ್ರೇಷ್ಠರೆಂತೊರೆದು.
ದೃಷ್ಟಿ ಯುದ್ಧವ ಮಾಡಿ, ಮುಷ್ಠಿ ಯುದ್ದವ ಮಾಡಿ
ವಿಧವಿಧದಿ ಸೆಣೆಸುತ್ತ ಬಲು ನೊಂದರೀರ್ವರೂ;
ಮೇರುಗಿರಿ ಮಂದರವು ಕೆಣಕಿ ಹೋರುವ ತೆರದಿ (40)
ಬಡಿದು ಹೊಡೆದಾಡಿದರು ಆವ ಪರಿವೆಯು ಇರದೆ.
ಇಂತು ಇವರೀರ್ವರೂ ಹೊಯ್ದಾಡುತಿರಲಲ್ಲಿ
ಮೂಡಿತೈ ಕಾಂತಿಮಯ ಅಗ್ನಿಲಿಂಗವದೊಂದು -
ತುದಿಯಿರದೆ ಮೊದಲಿರದೆ ಆವ ಪರಿಧಿಯು ಇರದೆ -
ಮೂಡಿ ನಿಂತಿತು ತಾನು ಇವರ ಕಾದಿನ ನಡುವೆ.
ಆದಿ ಅಂತವದಿರದ ಜ್ಯೋತಿ ಲಿಂಗವ ಕಂಡು
ಕೌತಕದಿ ಮೈಮರೆತು ನಿಂತರೈ ಹರಿಯಜರು -
"ಏನಿದೀ ವಿಸ್ಮಯವು ಏನಿದೀ ವಿಭ್ರಮೆಯು
ಇನಿತು ಹಿರಿದಾದ ಲಿಂಗರೂಪವಿದೇನೆಂದು".


“ಅಹಹಹಾ!! ಇದೇನಿದು!! ಏನಿದೆತ್ತಣ ಬರವು!! (50)
ಏನಿದರ ಹೊಳಹೇನಿದರೆತ್ತರದೀ ನಿಲುವು!!
ಆವ ಮಾಯೆಯಿದಾವ ಛಾಯೆಯಿದು !! ಆವುದೀ
ತಂತ್ರಮಾವುದೀ ಮಂತ್ರಮಿದಾವುದೀ ಸೂತ್ರ!!
ಆರರೂಪವಿದಾರ ಬಲವೇನಿದೀ ಗಾತ್ರ!!”
ಎಂದು ಚೋದ್ಯಂಬಟ್ಟು ಬಹುವಾಗಿ ಚಿಂತಿಸುತ
ಹೋರುವುದ ಕಡೆಗಣಿಸಿ ತಿಳಿಯಲೆಂದೆಳಸಿದರು .
"ಏನಿದರ ಒಳ್ಮೆಯೋ! ಏನಿದರ ಮರ್ಮವೋ!" -
ಎಂದು ಪರಿಪರಿಯಾಗಿ - ಜಿಜ್ಞಾಸೆ ನಡೆಸುತ್ತ,
ತಳಹಿ ನಿಂತರು - ಅವರು - ಲಿಂಗವನು ನೋಡುತ್ತ.
"ತಿಳಿಯಬೇಕಿದರ ಹದನವನರಿಯಬೇಕಿದರ (60)
ನಿಯಮವನು, ಕಾಣಬೇಕಿದರ ಮೂಲವನೆಂದು"
ಇಬ್ಬರೂ ನಿಶ್ಚಯಿಸಿ ಹುಡುಕಿಬರಲೊಪ್ಪಿದರು.
ಮುನ್ನದೊಳಗಾವನಿದರಾದ್ಯಂತದೊಳೊಂದಂ
ಕಂಡುಬಂದರುಹುವನವನೇ ಎಮ್ಮೊಳಧಿಕಂ,
ಆತನಹನೆಮ್ಮೊಳಗೆ ಉತ್ತಮನೆಂದೊಪ್ಪಿದರು .


ನಂತರದೆ ಕಮಲಜನು ಹಂಸರೂಪವ ತಳೆಯೆ,
ಕಮಲಾಕ್ಷ ತಾನೊಂದು ವಿಶದಸೂಕರನಾಗೆ;
ಬ್ರಹ್ಮ ಮೇಲಕೆ ಹಾರೆ; ಹರಿಯು ತಳದೆಡೆ ಹೋರೆ,
ಈರ್ವರಿರುದಿಕ್ಕಿನೊಳು ಅರಸಿಬರಲೈದಿದರು.
ಅರಸುತ್ತಲರಸುತ್ತ ಬಹುದೂರ ಸಾರಿದರು; (70)
ತುದಿ-ಮೊದಲ ಕಾಣದೆಯೆ ಬಳಲುತ್ತ ಸಾಗಿದರು.
ಎನಿತು ದೂರವ ಕ್ರಮಿಸಿ ಎನಿತು ನೊಂದರು ಏನು?
ಕಾಣದಾಯಿತು ತಮಗೆ ಲಿಂಗಮೂಲವು ತಾನು.
"ಕಣ್ಣು ಕಾಣುವವರೆಗೆ ಕಾಣುವುದು ವಿಸ್ತರವು;
ಮತ್ತೆ ಮುಂದಕೆ ಹಾಯೆ ಇನ್ನಷ್ಟು ಕಾಣುವುದು.
ಇದರ ಕೊನೆಯದು ಎಲ್ಲಿ? ಇದರ ತುದಿಯಿಹುದೆಲ್ಲಿ?"
ಎನ್ನುತ್ತಲಿಬ್ಬರೂ ಬಳವಳಿಸಿ ಬಾಡಿದರು.
ಎನಿತಿವರು ಹಾರಿದರು ಅವಧಿ ತಿಳಿಯದೆಹೋಯ್ತು -
ಹರಿಗೆ ಕಾಣದೆಹೋಯ್ತು, ವಿಧಿಗೆ ಎಟುಕದೆಹೋಯ್ತು.


(to be continued..)