Tuesday 25 November 2014

ಭೂಮಿಪುರದ ಜಾತ್ರೆ

ತನ್ನ ತಂದೆಯ ಜೊತೆಯಲ್ಲಿ ಜಾತ್ರೆಯನ್ನು ನೋಡುವ ಹಿಗ್ಗಿನಿಂದ ಹೊರಟಿದ್ದಾನೆ ಆ ಬಾಲಕ. ಇದೇ ಮೊದಲ ಬಾರಿಗೆ ಜಾತ್ರೆಯನ್ನು ನೋಡುತ್ತಿರುವ ಕಾರಣ ಅವನಿಗೆ ಹೇಳತೀರದ ಸಂಭ್ರಮ.
ಅವೆಷ್ಟು ಅಂಗಡಿಗಳೋ ಅಲ್ಲಿ.! ನೋಡಿದಷ್ಟೂ ದೂರಕ್ಕೆ ವಿವಿಧ ವಸ್ತುಗಳನ್ನು ಅಂದವಾಗಿ ಜೋಡಿಸಿಟ್ಟ ಅಂಗಡಿಗಳು.
ಪ್ರತಿ ಅಂಗಡಿಯಲ್ಲೂ ನೋಡುಗರನ್ನು ಮರುಳುಗೊಳಿಸುವಂತಹ ಬಣ್ಣಬಣ್ಣದ ಬೊಂಬೆಗಳು. ಕೆಲವು ಅಂಗಡಿಗಳಲ್ಲಿ - ನೋಡಿದೊಡನೆ ಬಾಯಲ್ಲಿ ನೀರೂರಿಸುವಂತಹ ತಿಂಡಿ ತಿನಿಸುಗಳು. ಅಲ್ಲಿಯೇ ಹತ್ತಿರದಲ್ಲಿ ಚಿತ್ರವಿಚಿತ್ರ ವೇಷಭೂಷಣಗಳನ್ನು ತೊಟ್ಟು ಆಡುವ/ ಹಾಡುವ ಮಂದಿ. ಎತ್ತರವಾದ ವಿವಿಧ ವಿನ್ಯಾಸದ ಆಟದ ಯಂತ್ರಗಳು. ಅದರಲ್ಲಿ ಕುಳಿತು ಆಡಿ ನಲಿಯುತ್ತಿರುವ ಜನರು.
ಅವನಿಗೆ ಎಲ್ಲವೂ ಕುತೂಹಲಕರವಾಗಿವೆ. ಎತ್ತ ನೋಡಿದರೂ ವಿಚಿತ್ರವೇ! ಎತ್ತ ನೋಡಿದರೂ ವಿಸ್ಮಯವೇ! ಅವನ ಕಣ್ಣುಗಳಲ್ಲಿ ಅಗಾಧ ಕುತೂಹಲವೂ, ಆನಂದವೂ, ಆ ಆಟಪಾಟಗಳಲ್ಲಿ ತಾನೂ ಪಾಲ್ಗೊಳ್ಳಬೇಕೆಂಬ ಅತೀವ ಬಯಕೆಯೂ ತುಂಬಿದೆ.

ನೋಡುವವರ ಮೈಮನಗಳನ್ನು ಬಿಡದೆ ಸೆಳೆಯುವ ಆ ಬೊಂಬೆಗಳ, ಆಟದ ಯಂತ್ರಗಳ ಆಕರ್ಷಣೆಗೆ ಒಳಗಾಗದೆ ಇರುವುದು ಹೇಗೆ! ಅಪ್ಪನನ್ನು ಕೇಳುವ ಆಸೆ - ತಾನು ಅವನ್ನೆಲ್ಲ ಒಮ್ಮೆ ಆಡಿನೋಡಬೇಕೆಂದು. ಅಪ್ಪ ಏನೆಂದಾನೋ ಎಂಬ ಹೆದರಿಕೆಯೂ ಇದೆ. ಆದರೆ ಹಾಗೆಲ್ಲ ಹೆದರಿ ಸುಮ್ಮನಿರಲಾದೀತೆ? ಅಂತೂ ಅಪ್ಪನನ್ನು ಕೇಳಿದ.
ಅಪ್ಪ 'ಮೊದಲು ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯೋಣ. ಬರುವಾಗ ನಿನ್ನ ಮನಸ್ಸು ತಣಿಯುವವರೆಗೂ ಆಡು, ಆಮೇಲೆ ನಿನಗಿಷ್ಟವಾದ ಬೊಂಬೆಗಳನ್ನೂ, ತಿಂಡಿಗಳನ್ನೂ ಕೊಡಿಸುತ್ತೇನೆ, ಆಯಿತಾ?' ಎಂದು ಪ್ರೇಮದಿಂದಲೇ ಹೇಳಿ ಇವನನ್ನು ಮತ್ತೆ ಮುಂದಕ್ಕೆ ಕರೆದುಕೊಂಡು ಹೊರಟ.
ಇವನ ಉತ್ಸಾಹವೆಲ್ಲ ಇಂಗಿಹೋಯಿತು. ಮುಖವು ಬಾಡಿತು. ಕಣ್ಣುಗಳಲ್ಲಿ ನೀರೂರಿತು. ಮೊದಲು ಗುಡಿಗೆ ಹೋಗಿ ದೇವರನ್ನು ಕಂಡು, ಆಮೇಲೆ - ಬರುವಾಗ - ಇವನ್ನೆಲ್ಲ ಆಡಲು ಅಪ್ಪ ಹೇಳುತ್ತಾನೆ. ಆದರೆ ಇವನಿಗೆ ಅಲ್ಲಿಯವರೆಗೂ ಕಾಯಲು ಸಾಧ್ಯವೇ? ಒಂದು ವೇಳೆ ಗುಡಿಯಲ್ಲಿ ದರ್ಶನ ತುಂಬಾ ತಡವಾದರೆ, ಆಗ ಇವರಿಬ್ಬರೂ ಹೊರಗೆ ಬರುವ ವೇಳೆಗೆ ಈ ಅಂಗಡಿಗಳು ಮುಚ್ಚಿರುವುದಿಲ್ಲವೇ? ಈಗಲೇ ಆಡಿದರೆ ತಪ್ಪೇನು? ಅಪ್ಪ ಸುಮ್ಮನೆ ನನಗೆ ಸಮಾಧಾನ ಹೇಳಲು ಹಾಗೆ ಹೇಳಿರಬೇಕು. ಅಪ್ಪ ನನಗೆ ಇವನ್ನೆಲ್ಲ ಆಡಲು ಬಿಡುವುದಿಲ್ಲ - ಇಂಥವೇ ಯೋಚನೆಗಳು ಇವನ ಮನದಲ್ಲಿ.
ಹಾಗೇ ತನ್ನ ಅಪ್ಪನ ಬಗೆಗೆ ಸ್ವಲ್ಪ ಕೋಪವೂ ಉಕ್ಕಿತು ಇವನಲ್ಲಿ. ಅದುವರೆಗೆ ಅಪ್ಪನೇ ಇವನ ಕೈಯನ್ನು ಹಿಡಿದುಕೊಂಡಿದ್ದ. ಅದೇನೆನಿಸಿತೋ ಇವನಿಗೆ, ಕೊಸರಿಕೊಂಡು ತನ್ನ ಕೈಯನ್ನು ಬಿಡಿಸಿಕೊಂಡು ತಾನೇ ಅಪ್ಪನ ಕೈಹಿಡಿದುಕೊಂಡ.
ಅಪ್ಪನೊಡನೆ ಯಾಂತ್ರಿಕವಾಗಿ ಹೆಜ್ಜೆಹಾಕುತ್ತಿದ್ದರೂ ಆಸೆಗಣ್ಣುಗಳಿಂದ ಅವನು ಸುತ್ತಮುತ್ತ ಇದ್ದ ಅಂಗಡಿಗಳನ್ನೂ, ಆಟದ ಯಂತ್ರಗಳನ್ನೂ ನೋಡುತ್ತಾನೆ.
ಅಯ್ಯೋ! ನಾನು ಇವನ್ನೆಲ್ಲ ಆಡಲು ಸಾಧ್ಯವೇ! ಎಂದು ಯೋಚಿಸುತ್ತ, ಭಾರವಾದ ಮನಸಿನಿಂದ -ಆಡದಿದ್ದರೇನಂತೆ, ಅವೆಲ್ಲವನ್ನು ಮತ್ತೊಮ್ಮೆ ಕಣ್ತುಂಬ ನೋಡುವ ಆಸೆಯಿಂದ- ಆ ಕಡೆಗೇ ದೀನದೃಷ್ಟಿಯಿಂದ ನೋಡುತ್ತಿದ್ದಾನೆ. ನೋಡುತ್ತ ನಡೆಯುತ್ತಿದ್ದಾನೆ.

ಅರೆ! ಅಲ್ಲಿ ದೂರದಲ್ಲಿ ಜನಗಳ ನಡುವೆಯಿಂದ ಯಾರೋ ಇವನೆಡೆಗೆ ಬರುತ್ತಿದ್ದಾರೆ. ಮುಖಕ್ಕೆ ಬಗೆಬಗೆಯ ಬಣ್ಣಗಳನ್ನು ಬಳೆದುಕೊಂಡಿದ್ದರೂ ನಗುಮೊಗದಿಂದ ಅವನನ್ನು ಕರೆಯುತ್ತಿದ್ದಾರೆ. ಅದು ಅವನಿಗೂ ಕಂಡಿತು. ಅಷ್ಟರಲ್ಲಿ ಆ ವ್ಯಕ್ತಿ ಇವರನ್ನು ಸಮೀಪಿಸಿ ಇವನೆಡೆಗೆ ಕೈಚಾಚಿದ. ಅವನಿಗೋ ಕುತೂಹಲ - ಇವರು ಯಾರೆಂದು.! ಯಾವುದೋ ಮಾಯೆಗೆ ಸಿಲುಕಿದವನಂತೆ ಅವನೂ ಆತನೆಡೆಗೆ ಕೈಚಾಚಿದ. ಅಪ್ಪನ ಕೈಹಿಡಿತ ಅದಾವಾಗಲೋ ಸಡಿಲವಾಗಿತ್ತು. ಅವನು ಆಗಂತುಕನ ಕೈಹಿಡಿದುಕೊಂಡ... ಅಪ್ಪನ ಕಡೆಗೊಮ್ಮೆ ನೋಡಬೇಕೆಂಬ ಯೋಚನೆಯೂ ಹೊಳೆಯಲಿಲ್ಲ ಅವನಿಗೆ, ಆ ಕ್ಷಣದಲ್ಲಿ.
ಆಗಂತುಕ ಆದರದಿಂದ ಅವನನ್ನು ಕರೆದ. 'ನಮ್ಮೊಡನೆ ಬರುವೆಯಾ? ನೀನೇನನ್ನು ಕೇಳಿದರೂ ಅವೆಲ್ಲವನ್ನೂ ನಾವು ನಿನಗೆ ಕೊಡುತ್ತೇವೆ. ನನ್ನೊಡನೆ ಬಾ' ಎಂದ. ಆಗ ಅವನ ಕಣ್ಣಿನ ಪರದೆಯ ಮೇಲೆ ಅದಾವ ಬೊಂಬೆಯ ಚಿತ್ರವು ಮೂಡಿತೋ! ‘ಸರಿ, ಬರುತ್ತೇನೆ’ ಎಂದ.
ಆಗಂತುಕನು ಅವನನ್ನು ತನ್ನೊಡನೆ ಕರೆದುಕೊಂಡು ಇತ್ತ ಹೊರಟ. ಅತ್ತ, ಅಪ್ಪ ಆ ಜಾತ್ರೆ-ಜಂಗುಳಿಯಲ್ಲಿ ಎಂದೋ ಮರೆಯಾಗಿಹೋಗಿದ್ದ. ಅವನಿಗೆ ಆ ಕ್ಷಣಕ್ಕೆ ಅಪ್ಪನ ನೆನಪೂ ಆಗಲಿಲ್ಲ. ಕಣ್ಣ ಮುಂದೆಲ್ಲ ಬಣ್ಣಬಣ್ಣದ ಲೋಕವಷ್ಟೇ ಕಾಣುತ್ತಿದೆ ಅವನಿಗೆ. ಇನ್ನು ಅಪ್ಪನ ನೆನಪು ಹೇಗಾದೀತು!
 ============================================================================================
ಆಗಂತುಕನು ಅವನನ್ನು ಯಾವುದೋ ಅರಿಯದ ಸ್ಥಳವೊಂದಕ್ಕೆ ಕರೆತಂದ.
ಅಲ್ಲಿ ಎಲ್ಲವೂ ವರ್ಣರಂಜಿತವಾಗಿವೆ. ವಿವಿಧ ಬಣ್ಣದ, ವಿಧವಿಧವಾದ ಸಿಹಿತಿಂಡಿಗಳು ತುಂಬಿರುವ ಅಂಗಡಿಗಳು. ವಿವಿಧಾಕಾರದ, ವಿಚಿತ್ರವಾದ ವಿನ್ಯಾಸವುಳ್ಳ ಬೊಂಬೆಗಳನ್ನು ಜೋಡಿಸಿಟ್ಟಿರುವ ಅಂಗಡಿಗಳು. ಅದೋ ಅಲ್ಲಿ, ಹೆಗ್ಗಾಲಿ! ವರ್ತುಲವಾಗಿ ತಿರುಗುವ ಕುದುರೆಗಳನ್ನುಳ್ಳ ಆಟದ ಯಂತ್ರಗಳು.! ಚಿತ್ರವಿಚಿತ್ರ ವೇಷಗಳನ್ನು ತೊಟ್ಟು ಮಕ್ಕಳೊಡನೆ ಆಡಿ ನಗಿಸುವ ವಿದೂಷಕ ವೇಷದವರು.
ಅಲ್ಲಿ ಬಣ್ಣಬಣ್ಣದ ಬೆಲೆಬಾಳುವ ಬಟ್ಟೆಗಳನ್ನು ತೊಟ್ಟ, ತನ್ನಂತಹ ನೂರಾರು ಮಕ್ಕಳು ಆಡುತ್ತಿದ್ದಾರೆ. ಅವರೆಲ್ಲರ ಮೊಗವೂ ಸಂತೋಷದಿಂದ ತುಂಬಿದೆ. ಅವನಿಗೂ ಅವನ್ನೆಲ್ಲ ಕಂಡು ಎದೆಬಿರಿಯುವಷ್ಟು ಸಂತೋಷವಾಯಿತು.
ಅವನು ಅವನ್ನೆಲ್ಲ ನೋಡುತ್ತ ನಿಂತಿರುವಾಗಲೇ ಅಲ್ಲಿದ್ದ ಮಕ್ಕಳೆಲ್ಲ ಅವನ ಬಳಿ ಬಂದು ಅವನನ್ನೂ ತಮ್ಮೊಡನೆ ಆಟಕ್ಕೆ ಸೇರಿಸಿಕೊಂಡರು.
ಇವನು ಅವರೊಡನೆ ಬೆರೆತು ಮನಸಾರೆ ಎಲ್ಲ ಆಟವನ್ನೂ ಆಡಿದ. ಹೆಗ್ಗಾಲಿಯಲ್ಲಿ ಕುಳಿತು ಆನಂದಿಸಿದ. ತಿರುಗುವ ಕುದುರೆಯ ಸವಾರಿಯನ್ನೂ ಮಾಡಿದ
ವಿದೂಷಕರೊಡನೆ - ಅವರ ಹಾಸ್ಯಚೇಷ್ಟೆಗಳನ್ನು ಕಂಡು - ನಕ್ಕು ನಗಿಸಿದ. ನಂತರ, ಸವಿಸವಿಯಾದ ತಿಂಡಿಗಳನ್ನು ತಿಂದು, ಬೇಕೆನಿಸಿದ ಬೊಂಬೆಗಳನ್ನಾಯ್ದುಕೊಂಡು ಅವುಗಳೊಡನೆ ಆಟವಾಡಿದ..
ಆಡಿಪಾಡಿ ದಣಿವಾಯಿತೋ ಏನೋ, ಅವನಿಗೆ ನಿದಿರೆಯ ಜೊಂಪು ಹತ್ತಿತು. ಕುಳಿತಿದ್ದ ಕಡೆಯಲ್ಲೇ ಸಲ್ಪ ಜಾಗ ಮಾಡಿಕೊಂಡು ಹಾಗೇ ನಿದ್ರೆಗೆ ಜಾರಿದ.
 ============================================================================================
ಸಂಜೆಯಾಯಿತು. ಇವನಿಗೆ ದಿಢೀರನೆ ಎಚ್ಚರವಾಯಿತು.
ಎದ್ದು ಸುತ್ತಲೂ ಒಮ್ಮೆ ನೋಡಿದ. ಅವನಿದ್ದ ಜಾಗ ನಿರ್ಜನವಾಗಿದೆ. ಅಲ್ಲಲ್ಲಿ ಖಾಲಿ ಅಂಗಡಿಗಳು, ಕೆಲವು ಕಡೆ - ಮುರಿದು - ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನಿರ್ಜೀವ ಬೊಂಬೆಗಳು.
ಇನ್ನು ಮಿಕ್ಕ ಕಡೆಯೆಲ್ಲ ಖಾಲಿ ಜಾಗ. ಆದರೂ ಹಿಂದೆ ಅಲ್ಲಿ ಏನೋ ಇತ್ತು ಎಂಬುದಕ್ಕೆ ಕೆಲವು ಕುರುಹುಗಳು.
ಒಂದು ಕ್ಷಣಕ್ಕೆ ತಾನು ಯಾರು, ಇಲ್ಲಿಗೇಕೆ ಬಂದೆ, ಇದು ಯಾವ ಸ್ಥಳ - ಒಂದೂ ಅವನಿಗೆ ಹೊಳೆಯಲಿಲ್ಲ. ಇನ್ನೂ ನಿದ್ರೆಯ ಮಂಪರಿನಲ್ಲಿದ್ದನೇನೋ! ಎದ್ದೊಮ್ಮೆ ಕಣ್ಣುಜ್ಜಿಕೊಂಡು, ತಲೆಕೊಡವಿಕೊಂಡ. ಹಿಂದೆ ಏನು ನಡೆಯಿತೋ ನೆನಪಿಗೆ ತಂದುಕೊಳ್ಳಲು ಪ್ರಯತ್ನಿಸಿದ.
ತಾನು ತನ್ನ ತಂದೆಯೊಡನೆ ಜಾತ್ರೆಗೆಂದು ಬಂದದ್ದು, ಇಲ್ಲಿನ ಬಣ್ಣಬಣ್ಣದ ಬೊಂಬೆಗಳ ಬಿನ್ನಾಣಕ್ಕೆ ತಾನು ಮರುಳಾಗಿದ್ದು, ತಂದೆಯು ದೇವಸ್ಥಾನಕ್ಕೆ ಹೋಗಿ ಬರುವಾಗ ಆಟವಾಡಬಹುದು ಎಂದು ಹೇಳಿದ್ದು, ಯಾರೋ ಇವನನ್ನು ಕರೆದದ್ದು.. .ತಾನು ಇಲ್ಲಿಗೆ ಬಂದು ಆಡಿ ನಲಿದದ್ದು - ಎಲ್ಲವೂ ನೆನಪಾಯಿತು. ಆ ಎಲ್ಲ ದೃಶ್ಯಗಳೂ ಸರಣಿಯಾಗಿ ಅವನ ಕಣ್ಣೆದುರು ಮೂಡಿತು.

ಆದರೆ ಆ ಜನರೆಲ್ಲ ಎಲ್ಲಿ? ತನ್ನನ್ನು ಇಲ್ಲಿಗೆ ಕರೆದುತಂದವನೆಲ್ಲಿ? ತಾನು ಎಲ್ಲಿದ್ದೇನೆ? ಅಪ್ಪ! ಅಯ್ಯೋ, ಅಪ್ಪನೆಲ್ಲಿ....!!
ಎಂತಹ ತಪ್ಪು ಕೆಲಸ ಮಾಡಿಬಿಟ್ಟೆ ನಾನು.! ಕೈಹಿಡಿದು ನನ್ನನ್ನು ಕರೆತಂದ ಅಪ್ಪನನ್ನೇ ಮರೆತು ಯಾರೋ ತಿಳಿಯದವನ ಜೊತೆ ಹೊರಟುಬಂದು ಇಂತಹ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡೆನಲ್ಲ.
ಅಯ್ಯೋ, ಅಪ್ಪಾ! ಎಲ್ಲಿರುವಿ? ನಾನು ತಪ್ಪು ಮಾಡಿದೆ, ಅಪ್ಪಾ.. ನಿನ್ನ ಮಾತನ್ನು ಕೇಳಿ ನಿನ್ನೊಡನೆ ಬರಬೇಕಿತ್ತು. ಯಾರೊಡನೆಯೋ ಬಂದು ಹೀಗೆ ತಿಳಿಯದ ಪ್ರದೇಶದಲ್ಲಿ ಒಬ್ಬಂಟಿಯಾದೆ ನಾನು. ಅಪ್ಪಾ, ಎಲ್ಲಿರುವಿ? ನನ್ನನ್ನು ಈ ಒಂದು ಸಾರಿ ಕ್ಷಮಿಸಿಬಿಡು ಅಪ್ಪಾ, ಇನ್ನೆಂದೂ ಹೀಗೆ ಮಾಡುವುದಿಲ್ಲ ನಾನು. ಬೇಗ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು... ಬೇಗ ನನ್ನ ಬಳಿಗೆ ಬಾ ಅಪ್ಪಾ...
ಅವನ ಎದೆಯು ಒಂದೇ ಸಮನೆ ಹೀಗೆ ದುಃಖದಿಂದ ಕೂಗುತ್ತಿದೆ. ಮೆಲ್ಲಗೆ ಆವರಿಸುತ್ತಿರುವ ಕತ್ತಲು ಅವನ ಭೀತಿಯನ್ನು, ದುಃಖವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಅವನು ತಾನಿದ್ದ ಜಾಗದಿಂದ ಎದ್ದು ಹುಚ್ಚನಂತೆ ಹುಡುಕಾಡಿದ. ಕುರುಡನಂತೆ ಎಡವೆಡವಿ ಬಿದ್ದ. ಎದೆಯೆಲ್ಲ ಬಿರಿಯುವಂತೆ ಜೋರಾಗಿ ಕೂಗಿ ಅಳಲು ಶುರು ಮಾಡಿದ... ಇನ್ನೆಂದೂ ತನ್ನ ಅಪ್ಪನನ್ನು ಕಾಣಲಾರೇನೇನೋ ಎಂಬ ಭೀತಿ ಅವನಿಗೆ... ಇಲ್ಲ, ಅಪ್ಪ ಎಲ್ಲೇ ಇದ್ದರೂ ತನ್ನನ್ನು ಹುಡುಕಿ ಬರುವನೆಂದೂ, ಇಲ್ಲಿಂದ ತನ್ನನ್ನು ಕರೆದೊಯ್ವನೆಂದೂ ಕ್ಷೀಣವಾದ ಆಸೆ... ಹುಡುಕುತ್ತ ಹೊರಟ..
ಬೆಳಿಗ್ಗೆ ಜನರಿಂದ ಕಿಕ್ಕಿರಿದಿದ್ದ ಪ್ರದೇಶವೆಲ್ಲ ಈಗ ಖಾಲಿ ಖಾಲಿ. ಬೆಳಿಗ್ಗೆ ತನ್ನನ್ನು ಮೈಮರೆಸಿ ಮರುಳುಗೊಳಿಸಿದ್ದ ಜಾಗವೇ ಈಗ ತನ್ನಲ್ಲಿ ಅಪಾರವಾದ ಭೀತಿ ಹುಟ್ಟಿಸುತ್ತಿದೆ.
ಅಪ್ಪನೆಲ್ಲಿ? ಅಪ್ಪನೆಲ್ಲಿ? ಅವನ ಮನಸು ಕಂಗಳು ತೀಕ್ಷ್ಣವಾಗಿ ಹುಡುಕುತ್ತಿವೆ.
ಕತ್ತಲು ಈಗ ದಟ್ಟವಾಯಿತು. ಅಲ್ಲೊಂದು ಇಲ್ಲೊಂದು ಬೀದಿದೀಪಗಳ ಬೆಳಕಷ್ಟೇ. ಅವು ಕೂಡ ಮಂದವಾಗಿವೆ. ಇವನಲ್ಲಿ ಭೀತಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಅಪ್ಪನನ್ನು ನೋಡಲೇಬೇಕೆಂಬ ಹಂಬಲ ಕೂಡ ಹೆಚ್ಚುತ್ತಿದೆ.

ಹಾಗೆ ಹುಡುಕುತ್ತ ಅದೆಷ್ಟು ದೂರ ಬಂದಿದ್ದನೋ! ನಡೆದೂ ನಡೆದೂ ಸುಸ್ತಾಗಿತ್ತು.. ಕೂಗಿ ಕೂಗಿ ಇದ್ದ ಶಕ್ತಿಯೆಲ್ಲ ಉಡುಗಿಹೋಗಿತ್ತು... ಕಣ್ಣಿಗೆ ಎಲ್ಲವೂ ಮಂಜುಮಂಜಾಯಿತು... ಅವನು ಇನ್ನೇನು ಕುಸಿದು ಬೀಳುವವನಿದ್ದ.
ಆಗ, ದೂರದಲ್ಲೊಂದು ಸಣ್ಣ ಬೆಳಕಿನ ಕಿಡಿ... ಕ್ಷಣಕ್ಷಣಕ್ಕೂ ಅದರ ಗಾತ್ರ ದೊಡ್ಡದಾಗುತ್ತಿದೆ. ಆ ಬೆಳಕು ತನ್ನೆಡೆಗೇ ಬರುತ್ತಿದೆ. ಇವನು ಆಶ್ಚರ್ಯದಿಂದ ನೋಡಿದ.
ಆಗ ಅವನ ಸುತ್ತಲಿನ ದೃಶ್ಯ ಬದಲಾಯಿತು. ಎಲ್ಲೆಡೆ ಬೆಳಕು ತುಂಬಿತು. ಖಾಲಿಯಾಗಿದ್ದ ಅಂಗಡಿಗಳೆಲ್ಲ ಮತ್ತೆ ಬೊಂಬೆಗಳಿಂದ ತುಂಬಿತು. ಜನ ನೆರೆದರು. ಎಲ್ಲವ ಬೆಳಿಗ್ಗೆ ಹೇಗಿತ್ತೋ ಹಾಗೆಯೇ ಆಯಿತು. ಆದರೆ ಈಗ ಅವನಿಗೆ ಅದಾವುದರ ಬಗೆಗೂ ಗಮನವಿಲ್ಲ. ಅವನು ತನ್ನೆಡೆಗೆ ಬರುತ್ತಿದ್ದ ಬೆಳಕಿನ ರೂಪವನ್ನೇ ರೆಪ್ಪೆ ಬಡಿಯದೆ ನೋಡುತ್ತಿದ್ದಾನೆ.
ಬೆಳಕು ಅವನನ್ನು ಸಮೀಪಿಸಿತು. ಅಲ್ಲಿದ್ದುದು ಬೆಳಕಲ್ಲ. ಬಂದಿದ್ದು ತನ್ನ ಅಪ್ಪ. ಆ ಬೆಳಕು ಅವನ ಸುತ್ತ ಬೆಳಗಿರುವ ಪ್ರಭೆ. ಅವನೊಮ್ಮೆ ನೋಡಿದ. ಅಪ್ಪ ಬದಲಾಗಿದ್ದಾನೆ.! ಮೊದಲು ಇದ್ದುದಕ್ಕಿಂತ ಸೌಮ್ಯವಾದ ಮುಖ. ಆ ಮುಖದಲ್ಲಿ ತಿಳಿಬೆಳಕಿನಂತಹ ಮಂದಹಾಸ. 'ನಿನ್ನ ತಪ್ಪೆಲ್ಲವನ್ನು ನಾನು ಕ್ಷಮಿಸಿದ್ದೇನೆ ಮಗೂ' ಎಂಬಂತಹ ಶಾಂತಭಾವ.
ಇವನಿಗೆ ಹೋದ ಪ್ರಾಣ ಬಂದಂತಾಯಿತು. ಅಳಿದುಳಿದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿಕೊಂಡು ಅಪ್ಪನ ಬಳಿಗೋಡಿ ಅವನನ್ನು ತಬ್ಬಿಕೊಂಡ. 'ಅಪ್ಪ, ತಪ್ಪಾಯಿತು ಅಪ್ಪ, ಇನ್ನೆಂದೂ ನಿನ್ನ ಮರೆತು, ನಿನ್ನ ಬಿಟ್ಟು ಹೋಗುವುದಿಲ್ಲ ಅಪ್ಪಾ....' ಎಂದು ಗೋಳಿಡುತ್ತಾ ಅಪ್ಪನ ಪಾದಕ್ಕೆರಗಿದ.
ಅಪ್ಪ ಅವನನ್ನು ಎತ್ತಿ ತಬ್ಬಿಕೊಂಡು ಹಣೆಯನ್ನೊಮ್ಮೆಮ್ಮೆ ಮುದ್ದಿಸಿದ. 'ಆಡುವುದಿಲ್ಲವೆ ಮಗೂ?' ಎಂದು ಕೇಳಿದ. ಕಣ್ಣೀರೇ ಇವನ ಉತ್ತರವಾಯಿತು. 

3 comments:

  1. ನನ್ನ ಮನಸಿನಲ್ಲಿ ಹೊಳೆದಂತೆ: ಆ ತಂದೆ ಆ ಮಗ ಪರಮಾತ್ಮ-ಜೀವಾತ್ಮ…
    ಭುವಿಯೊಳಗಿನ ಜೀವನಜಾತ್ರೆಯಲ್ಲಿ ಮೊದಮೊದಲು ಅವನ ಕೈಹಿಡಿದೇ ಸಾಗುತ್ತೇವಾದರೂ ಮಧ್ಯದಲ್ಲಿ ಯಾವುದೋ ಆಕರ್ಷಣೆ ಆಮಿಷಗಳಿಗೆ ಸೆರೆಯಾಗಿ ಅವನ ಕೈತಪ್ಪುತ್ತೇವೆ… ತಪ್ಪುತ್ತೇವೆ…
    ನಂತರದಲ್ಲಿ ಈ ಲೌಕಿಕ/ಐಹಿಕ ಭೋಗಗಳ ಸರಣಿ. ಆ ವೈಭವವೆಲ್ಲ ಕಳೆಯುವ ಹೊತ್ತಿಗೆ ಸಂಜೆಯ ಸಮಯ. ನಾವು ದಿಕ್ಕು ತಪ್ಪಿದ್ದರ ಅರಿವು (ಆಗಲಾದರೂ) ಉಂಟಾಗುತ್ತೆ.
    ಹುಡುಕುತ್ತೇವೆ - ಹಿಂದೆ ನಮ್ಮನ್ನು ಕೈಹಿಡಿದು ನಡೆಸಿದವನನ್ನು…ಅವನಿಗಾಗಿ ಹಂಬಲಿಸುತ್ತೇವೆ… ನಮ್ಮ ಆ ಹುಡುಕಾಟದ ಫಲವಾಗಿ ಅವನು ಕಾಣಿಸುತ್ತಾನೆ

    ಆದರೆ ಕೊನೆಯಲ್ಲಿಯೂ ಒಂದು ಪರೀಕ್ಷೆ (ಎಲ್ಲ ಕಡೆಯೂ ಬೆಳಕಾಗಿ ಜಾತ್ರೆ/ಜನ ಮತ್ತೆ ಸೇರಿದರೂ ಅವರ ಕಡೆಗೆ ಗಮನ ಹರಿಯಲಿಲ್ಲ…)… ಮತ್ತೆ ತಂದೆಯು ಕೇಳುವ "ಆಡುವುದಿಲ್ಲವೇ ಮಗೂ?" ಎಂಬ ಪ್ರಶ್ನೆಗೆ ಕಣ್ಣೀರಿನ ಉತ್ತರ…

    ReplyDelete