Saturday 1 November 2014

ಕನಕದಾಸರ "ರಾಮಧಾನ್ಯ ಚರಿತ್ರೆ" - ೩

ಹರುಷ ಹೆಚ್ಚಿದ ಮನದಿ ತಮ್ಮನ
ಕರೆದು ಶತ್ರುಘ್ನನನಯೋಧ್ಯಾ
ಪುರಿಗೆ ಕಳುಹಿದ - "ಜನನಿಯರಿಗೀ ವಾರ್ತೆಯೆಲ್ಲವನು
ಅರುಹಿ ಬಾ"ಯೆನಲಗ್ರಜನ ಸಿರಿ
ಚರಣಕಭಿಮುಖನಾಗಿ ವಂದಿಸಿ
ಹರುಷ ಮಿಗೆ ಹೊರವಂಟು ಹೊಕ್ಕನಯೋಧ್ಯಾಪುರವರವ       -೮೦

ಹನುಮಂತನ ಮಾತನ್ನು ಕೇಳಿದ ಭರತನು ಅತಿ ಸಂತಸಗೊಂಡು ಶತ್ರುಘ್ನನನ್ನು ಕರೆದು ಈಗಲೇ ಅಯೋಧ್ಯೆಗೆ ಹೋಗಿ ತಾಯಿಯರಿಗೆ ರಾಮನ ಆಗಮನದ ವಿಷಯವನ್ನು ತಿಳಿಸಿ ಬಾ ಎಂದು ಹೇಳುತ್ತಾನೆ. ಅಂತೆಯೇ ಆಗಲೆಂದು ಶತ್ರುಘ್ನನು ಭರತನ ಕಾಲುಗಳಿಗೆ ನಮಸ್ಕರಿಸಿ ಅಯೋಧ್ಯೆಗೆ ಹೊರಡುತ್ತಾನೆ.

ಜನನಿಯರು ಮೂವರಿಗೆ ನಮಿಸಿದ
ತನುಜನನು ತಕ್ಕೈಸಿ ಪೇಳಿದ
ನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆ
ಎನಲು ಹರುಷಾನಂದಮಯರಸ
ಹೊನಲಿನೊಳಗೋಲಾಡಿದರು ಮುಖ
ವನಜವರಳಿತು ಜನನಿಯರಿಗವನೀಶ ಕೇಳೆಂದ                  -೮೨

ಶತ್ರುಘ್ನನನು ಅಯೋಧ್ಯೆಯನ್ನು ತಲುಪಿ, ಕೌಸಲ್ಯೆ-ಸುಮಿತ್ರೆ-ಕೈಕೆಯರಿಗೆ ನಮಿಸಿ ಶ್ರೀರಾಮನು ಭಾರದ್ವಾಜ ಋಷಿಯ ಆಶ್ರಮದಲ್ಲಿರುವನೆಂದೂ, ಶೀಘ್ರದಲ್ಲೇ ಸೀತಾರಾಮ ಲಕ್ಷ್ಮಣರೆಲ್ಲರೂ ಅಯೋಧ್ಯೆಗೆ ಬರಲಿರುವರೆಂದೂ ತಿಳಿಸಿದನು. ಈ ಶುಭ ಸಮಾಚಾರವನ್ನು ಕೇಳಿದ ಆ ಮೂರೂ ಜನರೂ ಸಂತಸದ ಸಾಗರದಲ್ಲಿ ತೇಲಾಡಿದರು.

ಕರೆಸಿದನು ಶತ್ರುಘ್ನ ಮಂತ್ರೀ
ಶ್ವರ ಸುಮಂತನ ಕೂಡೆ ನುಡಿದನು
ತರಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು
ಪುರವ ಶೃಂಗರಿಸಲ್ಲಿ ಕರಿ ರಥ
ತುರಗ ಮೇಳೈಸಿರಲಿ ಮೋದದ
ತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ          -೮೩

ಎಂದು ಮಂತ್ರಿಯೊಳರುಹಿ ತಾ ನಿಜ
ಮಂದಿರಕೆ ನಡೆತಂದು ಪಯಣವ
ನಂದು ಮಾಡಿದ ಜನನಿ ಕೌಸಲದೇವಿ ಮೊದಲಾದ
ಇಂದುವದನೆಯರೇರುತಿರ್ದರು
ಅಂದಣವ ಸೊಸೆಯರು ವರೂಥದಿ
ಹಿಂದುಮುಂದಿಟ್ಟಣಿಸಿ ನಡೆದುದು ಸತಿಯರೊಗ್ಗಿನಲಿ             -೮೪

ಆ ನಂತರ ಶತ್ರುಘ್ನನನು ಮಂತ್ರಿ ಸುಮಂತನನ್ನು ಕರೆಸಿ, ರಾಮನು ಅಯೋಧ್ಯೆಗೆ ಬರುತ್ತಿರುವುದನ್ನು ತಿಳಿಸಿ, ಅವರೆಲ್ಲ ಬರುವ ವೇಳೆಗೆ ಅಯೋಧ್ಯೆಯು ಸರ್ವವಿಧದಲ್ಲಿಯೂ ಸಿಂಗಾರಗೊಂಡಿರಬೇಕೆಂದು ತಿಳಿಸಿದನು.
ಹೀಗೆ, ಮಂತ್ರಿ ಸುಮಂತನೊಡನೆ ಮುಂದೆ ನಡೆಯಬೇಕಾದ ಕಾರ್ಯಗಳೆಲ್ಲದರ ಬಗ್ಗೆ ಚರ್ಚಿಸಿದ ನಂತರ ಶತ್ರುಘ್ನನು ತನ್ನ ಮಂದಿರಕ್ಕೆ ತೆರಳಿದನು. ರಾಮನನ್ನು ಕಾಣುವ ತವಕದಿಂದ ಎಲ್ಲರೂ ಅವನನ್ನು ಬರಮಾಡಿಕೊಳ್ಳಲು ಹೊರಟರು. ಕೌಸಲ್ಯೆ ಮುಂತಾದವರೆಲ್ಲ ಅಂದಣವನ್ನೇರಿದರು(ಪಲ್ಲಕ್ಕಿ). ಸೊಸೆಯಂದಿರು ರಥದಲ್ಲಿ ಕುಳಿತರು. ಇವರಷ್ಟೇ ಅಲ್ಲದೇ ಹಲವಾರು ಸಾಮಂತ ಅರಸರೂ, ಪುರಪ್ರಮುಖರೂ ರಾಮನನ್ನು ಎದಿರುಗೊಳ್ಳಲು ಹೊರಟರು.

ವಿವಿಧ ವಾದ್ಯ ಧ್ವನಿಯ ಕಹಳಾ
ರವದ ಸನ್ನೆಯೊಳೈದಿಬಹ ನೃಪ
ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ
ಭುವನವಾಕಾಶವನು ಮುಸುಕಿದ
ಡವನಿ ನೆಗ್ಗಲು ಬಲವು ಭಾ
ರವಣೆಯಲಿ ಹೊರವಂಟನಾ ಶತ್ರುಘ್ನನೊಲವಿನಲಿ               -೮೬

ವಿವಿಧ ವಾದ್ಯಗಳ, ಕಹಳೆಗಳ ಧ್ವನಿಯು ಮೊಳಗುತ್ತಿರಲು, ಚತುರಂಗ ಸೇನೆಯ ನಡಿಗೆಯಿಂದೆದ್ದ ಕೆಂಧೂಳು ಆಕಾಶವೆಲ್ಲವನ್ನೂ ತುಂಬಿತೋ.! ಅವರೆಲ್ಲರ ಭಾರಕ್ಕೆ ಭೂಮಿಯೇ ಕುಗ್ಗಿತೇನೋ ಎನ್ನುವಂತೆ ಭಾಸವಾಗುತ್ತಿರಲು,  ಸಮಸ್ತ ಪರಿವಾರದವರೊಡನೆ ಶತ್ರುಘ್ನನು ಹೊರಟನು.

ಪುರವ ಕಳೆದರು ಮುಂದೆ ಯಮುನಾ
ವರನದಿಯನುತ್ತರಿಸೆ ಪಯಣದಿ
ಮೆರೆವ ನಂದೀಗ್ರಾಮವನು ಕಂಡಲ್ಲಿಗೈತಂದು
ಭರತನೊಡಗೊಂಡಲ್ಲಿ ಹನುಮನ
ಕರುಣದಲಿ ಸತ್ಕರಿಸಿ ಮುಂದಕೆ
ತೆರಳಿದರು ಕೌಸಲ್ಯರಾಮನ ಕಾಣ್ಬ ತವಕದಲಿ                   -೮೮
---------------------------------------------------

ಇತ್ತ ಕೇಳೈ ಪಾಂಡವಾಗ್ರಜ
ಸತ್ವ ಗುಣನಿಧಿ ರಾಮಚಂದ್ರನು
ವತ್ತರಿಸಿಬರೆ ಕಂಡು ನಲಿಯುತ ಜಾನಕಿಯ ಕರೆದು
ಇತ್ತ ನೋಡೆಲೆ ದೇವಿ ಭರತನ
ಶತ್ರುಹರ ಶತ್ರುಘ್ನರಿವರು ಸ
ಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ             -೮೯

ಎಂದು ತೋರಿಸಿ ಮನದ ಹರುಷದಿ
ಮಿಂದು ಲಕ್ಷ್ಮಣನೊಡನೆ ಸತಿಸಹಿ
ತಂದು ರಥವೇರಿದನು ರಾಮನೃಪಾಲನಾಕ್ಷಣಕೆ
ಮುಂದೆ ನೆರೆದುದು ಬನದೊಳಗೆ ಮುದ
ದಿಂದ ಪಾಠಕರುಗ್ಘಡಿಸೆ ನಲ
ವಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ            -೯೦

ಶಾಂಡಿಲ್ಯ ಮುನಿಯು ಧರ್ಮರಾಯನಿಗೆ ಮುಂದೆ ನಡೆದ ಕಥೆಯನ್ನು ಹೇಳಿದರು - "ಇತ್ತ, ರಾಮನು ಭರತ-ಶತ್ರುಘ್ನರು ಸಮಸ್ತ ಪರಿವಾರದೊಡನೆ ಬರುತ್ತಿರುವುದನ್ನು ದೂರದಿಂದಲೇ ಕಂಡು, ಸೀತೆಯನ್ನು ಕರೆದು ಅವಳಿಗೂ ತೋರಿಸಿದನು"
ಆ ನಂತರ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ರಥವನ್ನೇರಿ ಭರತ-ಶತ್ರುಘ್ನರು ಬರುತ್ತಿದ್ದ ಕಡೆಗೆ ಹೊರಟನು. ವಿಭೀಷಣನ ದಾನವ ಸೇನೆಯೂ, ಸುಗ್ರೀವಾದಿ ವಾನರ ಸೇನೆಯೂ, ಹಾಗೂ ಅಲ್ಲಿದ್ದ ಮುನಿಗಳೂ ರಾಮನೊಂದಿಗೇ ಹೊರಟರು.
ಮುಂದೆ ರಾಮನ ಪರಿವಾರವೂ ಭರತನ ಪರಿವಾರವೂ ಎದುರಾದವು.

ಇಳಿದು ರಥವನು ನೃಪತಿ ಸೀತಾ
ಲಲನೆ ಲಕ್ಷ್ಮಣಸಹಿತ ತಾ ಕೌ
ಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿ
ತೊಲಗಿದಸು ಬಂದಂತೆ ತನಯರ
ಚೆಲುವನೀಕ್ಷಿಸಿ ಜನನಿಯರು ಕಂ
ಗಳಲಿ ಜಲತುಂಬಿ ನೆರೆ ಬಿಗಿಯಪ್ಪಿದರು ನಂದನರ               -೯೩

ವಿಮಲಮತಿ ಶತೃಘ್ನ ಭರತರು
ನಮಿಸಿದರು ರಘುಪತಿಗೆ ಲಕ್ಷ್ಮಣ
ನಮಿಸಿದನು ಭರತಂಗೆ ಭರತಾನುಜನ ಸಂತೈಸೆ
ಸಮತೆಯಲಿ ಸುಗ್ರೀವ ಜಾಂಬವ
ರಮಿತ ಬಲವನು ಜನನಿಯ ಚರಣ
ಕಮಲವನು ಕಾಣಿಸಿದ ಸುಕರದೊಳೂರ್ಮಿಳಾರಮಣ           -೯೪

ಸೀತಾ ರಾಮ ಲಕ್ಷ್ಮಣರು ರಥದಿಂದಿಳಿದು ಕೌಸಲ್ಯೆ-ಸುಮಿತ್ರೆ-ಕೈಕೆಯರ ಕಾಲಿಗೆ ನಮಸ್ಕರಿಸಿದರು. ಅವರಾದರೋ ಹೋಗಿದ್ದ ಪ್ರಾಣವು ಮರಳಿ ಬಂದಿತೆಂಬ ಸಂತಸದಲ್ಲಿ ಮಕ್ಕಳನ್ನು ಹರಸಿ ತಬ್ಬಿದರು. ಭರತ-ಶತೃಘ್ನರು ರಾಮನಿಗೆ ನಮಿಸಿದರು. ಲಕ್ಷ್ಮಣನು ಭರತನಿಗೆ ನಮಿಸಿ ಶತೃಘ್ನನನ್ನು ಸಂತೈಸಿದನು. ಸುಗ್ರೀವ-ಜಾಂಬವಂತ ಮುಂತಾದವರೆಲ್ಲರೂ ರಾಜಮಾತೆಯರಿಗೆ ನಮಿಸಿದರು.
ದಶರಥನ ಮಡದಿಯರು ಸೀತೆಯನ್ನು ಕರೆದು ಪ್ರೀತಿಯಿಂದ ತಕ್ಕೈಸಿ "..ಬನದೊಳಗೆ ಬಲುನೊಂದಲಾ ಮಾನಿನಿಯೆ ಬಾರೌ ತಾಯೆ ಬಾರೆಂದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ."
ಭರತನು ಸೀತಾರಾಮ ಲಕ್ಷ್ಮಣಾದಿಯಾಗಿ ಎಲ್ಲರಿಗೂ ಮಣಿಭೂಷಣಾದಿಗಳನ್ನೂ, ರೇಷಿಮೆಯ ವಸ್ತ್ರಗಳನ್ನೂ ಕೊಟ್ಟು ಉಪಚರಿಸಿದನು. ವಿಭೀಷಣಾದಿಗಳಿಗೆ ಯುಕ್ತವಾದ ಕಾಣಿಕೆಗಳನ್ನು ಕೊಟ್ಟು ಸತ್ಕರಿಸಿದನು.

ಅರಸ ಕೇಳಲ್ಲಿಂದಯೋಧ್ಯಾ
ಪುರಿಗೆ ಬಂದನು ರಾಮನೃಪ ತ
ನ್ನರಸಿ, ಲಕ್ಷ್ಮಣ, ಭರತ-ಶತೃಘ್ನಾದಿ ಬಾಂಧವರ
ಪರುಠವಣೆಯಲಿ ರಾಜ ತೇಜದಿ
ಸುರರು ದುಂದುಭಿ ಮೊಳಗೆ ನಿಜಮಂ
ದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ            -೯೯

"..ರಥದಿಂದಿಳಿದು ರಘುನಂದನನು ಹೊಕ್ಕನು ರಾಜಭವನವ ತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು".
ಅಲ್ಲಿಂದ ರಾಮನು ಎಲ್ಲರೊಡಗೂಡಿ ಅಯೋಧ್ಯೆಯನ್ನು ತಲುಪಿ, ಪುರಜನರು ಕೊಟ್ಟ ಕಾಣಿಕೆಗಳನ್ನೆಲ್ಲ ಸ್ವೀಕರಿಸಿ ಅರಮನೆಗೆ ಬಂದನು. ಮಂಗಲಸ್ನಾನಾದಿಗಳನ್ನು ಮುಗಿಸಿ ರಾಮನು ತನ್ನ ತಮ್ಮಂದಿರೊಡಗೂಡಿ ಓಲಗಕ್ಕೆ ನಡೆತಂದನು

ಆಗ ಮಂತ್ರಿ ಸುಮಂತ್ರನು ಅಲ್ಲಿದ್ದ ಕುಲಗುರುವಾದ ವಸಿಷ್ಠರಿಗೆ ನಮಿಸಿ "ರಾಮನೃಪಾಲನಿಗೆ ರಾಜಪಟ್ಟವನ್ನು ಕಟ್ಟಬಹುದಲ್ಲವೆ?" ಎಂದು ಕೇಳಲು, ವಸಿಷ್ಠರು ಅದಕ್ಕೆ ತಮ್ಮ ಸಮ್ಮತಿ ಸೂಚಿಸಿದರು. ಸುಮಂತ್ರನು ಸಂತಸಗೊಂಡು ರಾಮ ಪಟ್ಟಾಭಿಷೇಕಕ್ಕೆ ಮಾಡಬೇಕಾದ ಸಿದ್ಧತೆಗಳಲ್ಲಿ ತೊಡಗಿದನು. ಸಾಮಂತ ಅರಸುಗಳನ್ನೆಲ್ಲ ಆಮಂತ್ರಿಸಿ ಎಲ್ಲ ದಿಕ್ಕುಗಳ ಕಡೆಗೂ ಓಲೆಗಳನ್ನು ಬರೆಸಿ ಕಳುಹಿಸಿದನು.

ರಾಮ ಪಟ್ಟಾಭಿಷೇಕದ ವಿಷಯವನ್ನು ತಿಳಿದು ಅಯೋಧ್ಯೆಯು ನವವಧುವಿನಂತೆ ಸಿಂಗಾರಗೊಂಡಿತು. ಎಲ್ಲೆಡೆಯೂ ಸಂಭ್ರಮವೋ ಸಂಭ್ರಮ!
ವಿವಿಧ ದೇಶಗಳಿಂದ ಜನರು, ಪಂಡಿತರು, ಕವಿಗಳು, ಗಾಯಕ, ನರ್ತಕರು, ದೈವಜ್ಞರು ಅಯೋಧ್ಯೆಗೆ ಬಂದು ಸೇರಿದರು. ಸನಕ ಸನಂದಾದಿ ತಪಸ್ವಿಗಳು ಅಯೋಧ್ಯೆಗೆ ದಯಮಾಡಿಸಿದರು. ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ ವಾಮದೇವಾದಿ ಮಹಾಮುನಿಗಳೂ ಬಂದರು.
ಚೋಳ, ಗುರ್ಜರ, ದ್ರವಿಡ, ವಂಗ, ಸಿಂಧು, ನೇಪಾಳ, ವಿದರ್ಭ, ಮಲೆಯಾಳ, ಆಂಧ್ರ, ಮರಾಟ, ಕರ್ಣಾಟ, ಕುಂತಳ - ಹೀಗೆ ಹಲವಾರು ದೇಶದ ಅರಸರು ಅಯೋಧ್ಯೆಗೆ ಆಗಮಿಸಿದರು.
ಹೀಗೆ ಎಲ್ಲ ದಿಕ್ಕುಗಳಿಂದಲೂ ಮುಖ್ಯಜನರೆಲ್ಲರೂ ಬಂದು ಕೂಡಿದರು. ಪಟ್ಟಾಭಿಷೇಕ ಮಹೋತ್ಸವದ ದಿನವೂ ಬಂತು. ಸಭಾಸದರೆಲ್ಲರೂ ತವಕದಿಂದ ನೋಡುತ್ತಿರಲಾಗಿ -

ಭರತ ಭಾರಿಯ ಸತ್ತಿಗೆಯ ಚಾ
ಮರವ ಲಕ್ಷ್ಮಣ ದೇವ ಚಿಮ್ಮಲು
ಧರಿಸಿದನು ಶತೃಘ್ನ ಗಿಂಡಿಯ ಹೆಗಲ ಹಡಪದಲಿ
ಮರುತಸುತ ಸೇವಿಸಲು ಚರಣದಿ
ಗುರು ವಸಿಷ್ಠನ ಸಮ್ಮುಖದಿ ರಘು
ವರನು ನಿಜಸತಿ ಸಹಿತ ಸಿಂಹಾಸನದಿ ರಂಜಿಸಿದ                -೧೧೪

ನಂತರದಲ್ಲಿ - "ಅಲ್ಲಿ ನೆರೆದ ಮುನೀಶ್ವರರೆಲ್ಲರು ಬಲ್ಲ ಭೂಸುರನಿವಹ ಮಂತ್ರಿಗಳಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆ......"

ಭರತನು ಭಾರಿಯಾದ ಒಂದು ಛತ್ರಿಯನ್ನು ಹಿಡಿದಿರಲು, ಲಾಕ್ಷ್ಮಣನು ಚಾಮರವನ್ನು ಬೀಸುತ್ತಿರಲು, ಶತೃಘ್ನನು ಗಿಂಡಿಯನ್ನು ಧರಿಸಿರಲು, ಹನುಮಂತನು ಸೇವಿಸುತ್ತಿರಲಾಗಿ ಸೀತಾದೇವಿಯ ಸಹಿತ ರಾಮನು ಸಿಂಹಾಸನದಲ್ಲಿ ಕುಳಿತು ಶೋಭಿಸಿದ.
ಮುಂದೆ ಅಲ್ಲಿ ಸೇರಿದ್ದ ಮುನೀಶ್ವರರೆಲ್ಲರ ಸಮಕ್ಷಮದಿ ಸುಮುಹೂರ್ತವೊಂದರಲ್ಲಿ ರಾಮನಿಗೆ ಪಟ್ಟಾಭಿಷೇಕವಾಯಿತು.


(ಮುಂದುವರೆಯುವುದು...)

No comments:

Post a Comment