Sunday 25 August 2013

ಚಂದ್ರಹಾಸ ಉಪಾಖ್ಯಾನ - ಭಾಗ 1

ಉಪಮಾಲೋಲ, “ಕವಿಚೂತವನಚೈತ್ರ ಎಂಬ ಬಿರುದುಗಳನ್ನು ಪಡೆದಿದ್ದ ದೇವಪುರದ ಲಕ್ಷ್ಮೀಶನು ೧೬ನೇ ಶತಮಾನದಲ್ಲಿ ಜೀವಿಸಿದ್ದ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬ.
ಇವನು ರಚಿಸಿದ ಜೈಮಿನಿ ಭಾರತವು ಒಂದು ಅಪೂರ್ವ ಕೃತಿ. ಇದರಲ್ಲಿ ಕುರುಕ್ಷೇತ್ರಾನಂತರದ ಕಥಾಚಿತ್ರಣವಿದೆ. ಯುಧಿಷ್ಠಿರನು ಸಂಕಲ್ಪಿಸಿದ ಅಶ್ವಮೇಧ ಯಾಗದ ಕಥೆಯ ಹಿನ್ನೆಲೆಯಲ್ಲಿ ಅನೇಕ ಉಪಕಥೆಗಳು ಈ ಕೃತಿಯಲ್ಲಿ ಬರುತ್ತವೆ.

ಅವುಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ಚಂದ್ರಹಾಸನ ಕಥೆ. ಕರುಣೆ ಹಾಗೂ ಭಕ್ತಿರಸ ಪ್ರಧಾನವಾದ ಈ ಕಥೆಯು ಅತಿ  ಸ್ವಾರಸ್ಯಮಯವಾಗಿದೆ. ಇದರ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕ್ಕೊಳ್ಳುವ ಆಸೆ ನನ್ನದು. ಅದಕ್ಕಾಗಿಯೇ ಈ ದೀರ್ಘ ಲೇಖನ!!

ಯಜ್ಞಾಶ್ವಗಳ ರಕ್ಷಣೆಗೆಂದು ಅರ್ಜುನ, ಶ್ರೀ ಕೃಷ್ಣನೇ ಮೊದಲಾದ ಅನೇಕ ವೀರರು ಹೊರಟಿರುತ್ತಾರೆ. ತಮಗೆ ಎದುರಾದ ಅರಸರನ್ನು ಯುದ್ಧದಲ್ಲಿ ಜಯಿಸಿ, ಹಾಗೆ ಅನೇಕ ರಾಜ್ಯಗಳನ್ನು ದಾಟುತ್ತ ಅವರು ಬರುತ್ತಿರಲು ಕುಂತಳನಗರವೆಂಬ ರಾಜ್ಯದ ಸಮೀಪ ಯಾಗದ ಕುದುರೆಗಳು ಕಾಣೆಯಾಗುತ್ತವೆ.

ಕುದುರೆಗಳು ಎಲ್ಲಿ ಹೋದವೆಂದು ಅರ್ಜುನನು ಕಂಗಾಲಾಗಿರುವ ಸಮಯಕ್ಕೆ ನಾರದರು ಅಲ್ಲಿಗೆ ಬರುತ್ತಾರೆ.

ಅರ್ಜುನನ ವ್ಯಥೆಯ ಕಾರಣವನ್ನು ಅರಿತ ನಾರದರು ಕುದುರೆಗಳು ಕುಂತಳನಗರದಲ್ಲಿವೆಯೆಂದೂ, ಅಲ್ಲಿಗೆ ಅರಸನಾದ ಚಂದ್ರಹಾಸನು ಮಹಾಬಲಶಾಲಿ ಹಾಗೂ ಮಹಾ ವಿಷ್ಣುಭಕ್ತನೆಂದೂ ಹೇಳುತ್ತಾರೆ. ಅರ್ಜುನನು ಆತನ ಇತ್ಯೋಪರಿಗಳನ್ನು ವಿವರಿಸಿ ಹೇಳಲು ನಾರದರನ್ನು ಕೇಳುತ್ತಾನೆ.

ನಾರದರು ಚಂದ್ರಹಾಸನ ಕಥೆಯನ್ನು ಅರ್ಜುನನಿಗೆ ವಿಸ್ತರಿಸಿ ಹೇಳುತ್ತಾರೆ :

ಹಿಂದೆ ಕೇರಳವೆಂಬ ರಾಜ್ಯವನ್ನು ಮೇಧಾವಿ ಎಂಬ ಧರ್ಮಾತ್ಮನು ಆಳುತ್ತಿದ್ದ. ಆತನ ಹೆಂಡತಿ ಚಿತ್ರಭಾನುವು ಮಹಾ ಪತಿವ್ರತೆ. ಈ ದಂಪತಿಗಳಿಗೆ ಮೂಲಾ ನಕ್ಷತ್ರದಲ್ಲಿ ಮಗನೊಬ್ಬ ಜನಿಸುತ್ತಾನೆ. ( ಮೂಲಾ ನಕ್ಷತ್ರವು ಕೇಡನ್ನು ತರುತ್ತದೆ ಎಂಬ ನಂಬಿಕೆ ಇದೆ ). ಹುಟ್ಟಿದಾಗ ಆ ಮಗುವಿಗೆ ಎಡಗಾಲಿನಲ್ಲಿ ಆರು ಬೆರಳುಗಳಿರುತ್ತವೆ.

ಮಗುವು ಜನಿಸಿದ ಸ್ವಲ್ಪ ದಿನಗಳಲ್ಲೇ ಮೇಧಾವಿಯು ಶತ್ರುರಾಜರ ದಾಳಿಗೆ ಸಿಲುಕಿ ಸಾವನ್ನಪ್ಪುತ್ತಾನೆ. ಅವನ ಹೆಂಡತಿ ಚಿತ್ರಭಾನುವು ಕೂಡ ಅಗ್ನಿಪ್ರವೇಶ ಮಾಡುತ್ತಾಳೆ. ನಂತರದಲ್ಲಿ ಇವರ ರಾಜ್ಯವನ್ನು ಶತ್ರುಗಳು ಆಕ್ರಮಿಸುತ್ತಾರೆ.
ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ಮಗುವನ್ನು ಶತ್ರುಗಳಿಂದ ರಕ್ಷಿಸುವ ಸಲುವಾಗಿ ಮುದಿ ದಾಸಿಯೊಬ್ಬಳು ಆದನ್ನೆತ್ತಿಕೊಂಡು ಅನೇಕ ಪ್ರಯಾಸಗಳನ್ನು ಪಟ್ಟು ಕುಂತಳನಗರಕ್ಕೆ ಬಂದು ಸೇರುತ್ತಾಳೆ.

ಆ ಪಟ್ಟಣದ ಬೀದಿಬೀದಿಗಳಲ್ಲಿ ಭಿಕ್ಷೆ ಬೇಡಿ, ಅವರಿವರು ನೀಡಿದ ಭಿಕ್ಷಾನ್ನದಿಂದ ಮಗುವಿನ ಆರೈಕೆಗೆ ತೊಡಗುತ್ತಾಳೆ ಆಕೆ. ಯುವರಾಜನಾಗಿ ಬಾಳಬೇಕಾದ ಮಗುವನ್ನು ಸರಿಯಾಗಿ ಪೋಷಣೆ ಮಾಡಲೂ ಆಗದ ತನ್ನ ಅಸಹಾಯಕತೆಗೆ ದಿನವೂ ಮರುಗುತ್ತಿರುತ್ತಾಳೆ - ಆಕೆ :
ಇಡೆ ತೊಟ್ಟಿಲಿಲ್ಲಾಡಿಸುವರಿಲ್ಲ ನಿನಗೆ ಪೊಂ
ದೊಡಿಗೆಯಿಲ್ಲಿರೆ ನಿಳಯಮಿಲ್ಲ ಬಿಡದೆರೆವ ನೀ
ರ್ಕುಡಿವಾಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ್ಗಳಿಲ್ಲ
ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್
ಪಡೆದನಿದಕೀಗ ನಿನ್ನಂ ನೋಡುವೆನ್ನ ಕ
ಣ್ಣೊಡೆಯದಕಟಕಟೆಂದು ಬಿಸುಸುಯ್ದಳಲ್ದು ಮರುಗುವಳಾಕೆ ದಿನದಿನದೊಳು.                    (28.17)

ಹಾಗೆ ಆಕೆ ವ್ಯಥೆಪಡುವ ಬಗೆಯನ್ನು ಕವಿಯು ಅತ್ಯಂತ ಮನೋಜ್ಞವಾಗಿ ವರ್ಣಿಸುತ್ತಾನೆ :

ಮಗುವನ್ನು ಇಡಲು ಒಂದು ತೊಟ್ಟಿಲೂ ಇಲ್ಲ. ತೊಡಿಸಲು ಒಳ್ಳೆಯ ಬಟ್ಟೆಗಳೂ ಇಲ್ಲ. ಎರೆಯಲು ನೀರಿಲ್ಲ. ಮಗುವಿಗೆ ಕೊಡಲು ಹಾಲೂ ಇಲ್ಲ; ಇನ್ನು ಎಣ್ಣೆ-ಬೆಣ್ಣೆಗಳ ಮಾತು ತುಂಬಾ ದೂರ!
ಈ ಮಗುವಿನ ಆಟವನ್ನು ನೋಡಿ ಆನಂದಿಸಲು, ಅದನ್ನು ಲಾಲಿಸಲು ಇದರ ತಂದೆತಾಯಿಗಳೂ ಇಲ್ಲ. ನಮ್ಮ ರಾಜನಾದ ಮೇಧಾವಿಯು ಹೊರಕೆಹೊತ್ತು ಪಡೆದದ್ದು ಈ ಭಾಗ್ಯವನ್ನೇ? ಅಯ್ಯೋ! ನಮ್ಮ ಯುವರಾಜನಿಗೆ ಬಂದಿರುವ ಈ ಸ್ಥಿತಿಯನ್ನು ನೋಡಿಯೂ ನನ್ನ ಕಣ್ಣುಗಳು ಒಡೆದುಹೋಗಲಿಲ್ಲವೇಕೆ" ಎಂದು ಆಕೆ ದಿನದಿನವೂ ಮರುಗುತ್ತಿರುತ್ತಾಳೆ.

ಹೀಗೆ ತನ್ನ ಕೈಲಾದ ಮಟ್ಟಿಗೆ ಆಕೆ ಮಗುವನ್ನು ಕಷ್ಟಪಟ್ಟು ಸಾಕುತ್ತಾಳೆ. ಮಗುವು ಮಾತು, ನಡಿಗೆಯನ್ನು ಕಲಿಯುವ ವೇಳೆಗೆ ಆ ದಾಸಿಯೂ ಅನಾರೋಗ್ಯದಿಂದ ಸಾವನ್ನಪ್ಪುತ್ತಾಳೆ. ಈಗ ಮಗುವು ಸಂಪೂರ್ಣವಾಗಿ ಅನಾಥವಾಗುತ್ತದೆ.
ಆದರೆ, ಆ ನಗರದ ನಾಗರಿಕರು ತುಂಬಾ ಒಳ್ಳೆಯವರು. ಅಲ್ಲಿನ ಹೆಣ್ಣುಮಕ್ಕಳು ಈ ಮಗುವನ್ನು ತಮ್ಮ ಮನೆಗೆ ಕೊಂಡೊಯ್ದು ತಮ್ಮ ಮಕ್ಕಳಿಗೆಂದು ಮಾಡಿದ ತಿಂಡಿ-ತಿನಿಸುಗಳನ್ನು ಕೊಟ್ಟು, ಒಳ್ಳೆಯ ವಸ್ತ್ರವನ್ನು ತೊಡಿಸಿ ಪ್ರೀತಿಯಿಂದ ಸಾಕುತ್ತಾರೆ. ಹೀಗೆ ಬೀದಿಯವರೆಲ್ಲರ ಪ್ರೀತಿಯ ಆಶ್ರಯದಲ್ಲಿ ಆ ಮಗುವು ಬೆಳೆಯುತ್ತದೆ.

ಒಂದು ದಿನ ಮಗುವಿಗೆ ದಾರಿಯಲ್ಲಿ ಪುಟ್ಟ ಸಾಲಿಗ್ರಾಮಶಿಲೆಯೊಂದು ಸಿಗುತ್ತದೆ. ಅದರ ಸುಂದರ ರೂಪಕ್ಕೆ ಮನಸೋತ ಮಗುವು, ಅದನ್ನು ಜೋಪಾನವಾಗಿಡಲು ತನ್ನ ಬಳಿ ಏನೂ ಇಲ್ಲದಿದ್ದುದರಿಂದ ಆ ಶಿಲೆಯನ್ನು ತನ್ನ ಬಾಯಿಯಲ್ಲಿಟ್ಟುಕೊಳ್ಳುತ್ತದೆ.
ಆ ಸಾಲಿಗ್ರಾಮ ಶಿಲೆಯ ಪ್ರಭಾವದಿಂದಲೋ ಏನೋ, ಮಗುವು ತನ್ನ ಗೆಳೆಯರೊಂದಿಗಿನ ಆಟಗಳೆಲ್ಲ ಜಯಶೀಲನಾಗುತ್ತಾನೆ. ಊಟದ ಸಮಯವನ್ನೊಂದು ಬಿಟ್ಟರೆ ಸದಾಕಾಲ ಅದನ್ನು ತನ್ನ ಬಾಯಿಯಲ್ಲಿಯೇ ಇಟ್ಟುಕೊಂಡು ಅದನ್ನು ಜೋಪಾನವಾಗಿರಿಸುತ್ತಾನೆ ಆ ಬಾಲಕ.

ಹೀಗೆ, ಮಗುವಿಗೆ ಸುಮಾರು ಐದು ವರ್ಷ ತುಂಬುವ ವೇಳೆಗೆ, ಒಂದು ದಿನ ಆ ರಾಜ್ಯದ ಮಂತ್ರಿ - ದುಷ್ಟಬುದ್ಧಿಯ - ಮನೆಯಲ್ಲಿ ಯಾವುದೋ ಸಮಾರಂಭ ನಡೆಯುತ್ತಿರುತ್ತದೆ. ಊರಿನ ಎಲ್ಲರಿಗೂ ಅನ್ನದಾನ ನಡೆಯುತ್ತಿರುತ್ತದೆ. ಅಲ್ಲಿಗೆ ಯಾರೋ ಈ ಮಗುವನ್ನೂ ಕರೆತಂದಿರುತ್ತಾರೆ.

ಅಲ್ಲಿ ಇದ್ದ ಬ್ರಾಹ್ಮಣ ಶ್ರೇಷ್ಠರು ಮಗುವಿನ ದಿವ್ಯಲಕ್ಷಣಗಳನ್ನು ಕಂಡು "ಈ ಮಗು ಯಾರದ್ದು?" ಎಂದು ಮಂತ್ರಿ ದುಷ್ಟಬುದ್ಧಿಯನ್ನು ಕೇಳುತ್ತಾರೆ.  ದುಷ್ಟಬುದ್ಧಿಯು ತನಗೆ ಈ ಮಗು ಯಾರದ್ದು ಎಂದು ತಿಳಿದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಬ್ರಾಹ್ಮಣರು ಮುಂದೆ ಎಂದಿದ್ದರೂ ಈ ರಾಜ್ಯಕ್ಕೆ ಅರಸನಾಗುವ ಎಲ್ಲ ಲಕ್ಷಣಗಳು ಈ ಮಗುವಿನಲ್ಲಿ ಕಾಣುತ್ತಿವೆ. ಆದ್ದರಿಂದ ಮಗುವನ್ನು ಜೋಪಾನವಾಗಿ ಬೆಳೆಸಬೇಕೆಂದು ಹೇಳುತ್ತಾರೆ.

ಆದರೆ, ಹೆಸರಿಗೆ ತಕ್ಕಂತೆ ಆ ಮಂತ್ರಿಯು ದುಷ್ಟಬುದ್ಧಿಯವನೇ ಆಗಿರುತ್ತಾನೆ. ಪುತ್ರಸಂತಾನವಿಲ್ಲದ ಆ ರಾಜ್ಯದ ರಾಜನ ಮಗಳಿಗೆ ಎಂದಾದರೂ ತನ್ನ ಮಗನೊಂದಿಗೇ ವಿವಾಹವನ್ನು ನಡೆಸಿ ಅಲ್ಲಿಗೆ ತನ್ನ ಮಗನಾದ ಮದನನ್ನೇ ರಾಜನನ್ನಾಗಿಸಬೇಕೆಂಬ ದುರಾಲೋಚನೆ ಆ ಮಂತ್ರಿಯದು.
ಹೀಗಿರುವಾಗ ದಿಕ್ಕುದೆಸೆಯಿಲ್ಲದ ಯಾವುದೋ ಅನಾಥ ಮಗುವೊಂದು ಆ ರಾಜ್ಯಕ್ಕೆ ಅರಸನಾಗುವನೆಂಬ ಮಾತು ಕೇಳಿ ಅವನು ಸಹಿಸುವುದೆಂತು? ಆದರೆ ಅದನ್ನು ಆತ ತೋರ್ಪಡಿಸದೇ ಮಗುವನ್ನು ಜೋಪಾನವಾಗಿರಿಸುವುದಾಗಿ ಮಾತುಕೊಟ್ಟು ಬ್ರಾಹ್ಮಣರನ್ನು ಕಳುಹಿಸುತ್ತಾನೆ.

ನಂತರದಲ್ಲಿ ನಾಲ್ಕುಜನ ಚಾಂಡಾಲರನ್ನು ಕರೆಸಿ ಆ ಮಗುವನ್ನು ಕೊಲ್ಲಲು ನಿಯೋಜಿಸುತ್ತಾನೆ. ಮಗುವನ್ನು ಕೊಂದದ್ದಕ್ಕೆ ಕುರುಹಾಗಿ ಮಗುವಿನ ಯಾವುದಾದರೊಂದು ಅಂಗವನ್ನು ತಂದು ತೋರಿಸಿ ಹಣವನ್ನೂ, ಬಹುಮಾನವನ್ನೂ ಪಡೆದುಕೊಳ್ಳಬೇಕಾಗಿ ಅವರಿಗೆ ತಿಳಿಸುತ್ತಾನೆ. ಹಾಗೆ ಮಗುವನ್ನು ಕೊಲ್ಲುವ ಆಜ್ಞೆಯನ್ನು ಹೊತ್ತ  ಆ ಚಾಂಡಾಲರು ಮಗುವನ್ನು ಅರಸುತ್ತಾ ಹೊರಡುತ್ತಾರೆ.

(ಮುಂದುವರೆಯುವುದು..)



1 comment:

  1. ಸರ್ ಭಾಗ ೨ ಕಥೆ ಹೇಳಿ ಸರ್

    ReplyDelete