Friday 3 May 2013

Dakshaadhvara dhwamsa prakaranam

|| ಓಂ ನಮಃ ಶಿವಾಯ ||

1. ಕಥಾ ಪೀಠಿಕಾ ಸಂಧಿ

ಶ್ರೀಮದ್ಗಿರಿಜಾ ಹೃದಯವಾರಾಶಿ ಚಂದ್ರಂ
ಚಂದ್ರಾನನಂ ಚಂದ್ರಧರಂ ಚಂದ್ರಾರ್ಕನೇತ್ರಂ
ಚಂದ್ರಪ್ರಭಾಸುಶೋಭಿತ ಚಿದಾನಂದರೂಪಂ
ಸದಾಶಿವನನುಗ್ರಹಿಸಿ ಪೊರೆವುದೆಮ್ಮನು ಸತತಂ

ಸರ್ವೇಶನಭಯಕರಂ ಆತ್ಮಾನಂದಪ್ರದಂ
ಅಕ್ಷರನನನ್ಯನಚಿಂತ್ಯನಪ್ರಮೇಯನಭವಂ
ನಿರತಂ ಹೃದಯಾಂತರಾಳದೊಳ್ ನೆಲೆಸಿ
ಸದ್ಭಕ್ತಿಯನಿತ್ತು ಸಲಹುಗೆಮ್ಮನು ಸತತಂ

ಸದಾ ಶಂಕರಮನೋವಿಹಾರಿಣಿಂ
ಭವಾನೀಂ ಅಖಿಲಲೋಕಪಾವನಿಂ
ಸುಮಂಗಲಿಂ ಸರ್ವಮಂಗಳದಾಯಿನಿಂ
ಶಕ್ತಿಯನೆಮಗಿತ್ತು ಕಾವುದು ಮದನುಗ್ರಹಕಾರಿಣಿಂ

ಪಾರ್ವತೀ ಪ್ರಿಯಸುತನು ವರಸಿದ್ಧಿದಾಯಕನು
ವಿನಾಯಕನತಿಬಲನು ದೇವಾಗ್ರಪೂಜಿತನು
ಸಪ್ರೇಮವಂ ತಳೆದು ಕರುಣೆಯಿಂದಲಿ ಹರಸಿ
ಸಕಲವಿಘ್ನವ ಹರಿಸಿ ನಿರತ ಕಾಯ್ವುದು ನಮ್ಮನು

ವಾರಿಧಿ ಮಥನದೊಳುದಿಸಿದ ಮಣಿಕೌಸ್ತುಭವ ಧರಿಸಿ
ಚಂದಿರನ ತಂಗಿಯಹ ಸಿರಿದೇವಿಯನು ವರಿಸಿ
ಹಾಲ್ಗಡಲ ಮಧ್ಯದೊಳು ಶೇಷತಲ್ಪದ ಮೇಲೆ
ಪವಡಿಸಿಹ ಪರಮನಿಗೆ ವಿಷ್ಣುವಿಗೆ ವಂದಿಸುವೆ

ವಿಶದಾಂಬರವ ಧರಿಸಿ ವರಹಂಸವನೇರಿ
ರಜತವೀಣೆಯ ನುಡಿಸಿ ಶ್ವೇತಪದ್ಮದ ತೆರದಿ
ವಿರಾಜಿಸಿಹ ಶಾರದೆಗೆ ವಿದ್ಯಾ ವಿಶಾರದೆಗೆ
ವಿಧಿಸಹಿತ ಸುರವಂದ್ಯೆ ವಾಣಿಗಭಿವಂದಿಸುವೆ

ಶ್ರೀ ವಿಜಯಾದಿಕವಿ ವಿನುತೆ ವಿಶ್ವವಿಖ್ಯಾತೆ
ಮೃದುಮಧುರ ಸ್ವರ ಚರಿತೆ ದ್ರವಿಡಸಂಜಾತೆ
ಕಾವ್ಯ ಸಾಲಂಕೃತೆಯೆ ಕನ್ನಡದ ಮಾತೆ
ವಂದಿಸುವೆ ನಿನಗೆ, ಲೋಕ ಸಂಪ್ರೀತೆ

ಜ್ಞಾನದನಂತತೆಯ ತಿಳುಹುವೆಡೆ ಆಗಸವು ಗುರುವಹುದು
ಜ್ಞಾನದಾಳವ ತಿಳುಹುವೆಡೆ ಜಲವೆನಗೆ ಗುರುವಹುದು
ಜ್ಞಾನದೀಪ್ತಿಯ ಬೆಳಗುವೆಡೆ ತೇಜವದು ಗುರುವಹುದು
ಜ್ಞಾನಸೌರಭವ ಹರಿಸುವೆಡೆ ಗಾಳಿಯದು ಗುರುವಹುದು
ಜ್ಞಾನಸಂಪದವ ಬಿತ್ತಿ-ಬೆಳೆಯುವೆಡೆ ಭುವಿಯೆನಗೆ ಗುರುವಹಳು 
ಜ್ಞಾನರೂಪದಿ ನೆಲೆಸಿಹನಾತ್ಮನು ದೇಹದೊಳಾತನೆನಗೆ ಗುರುವಹನು
ಈ ನಿಖಿಲ ಗುರುಗಳ ನಮಿಸಿ ಹೇಳ್ವೆನೀ ಕಾವ್ಯವನು ಶಾಂಭವನ ಕೃಪೆಯಿಂ

ಕಾವ್ಯವಿದು ಶಿವಕಥೆಯು ಶಿವನಿದಕೆ ನಾಯಕನು
ಕಾವ್ಯನಾಯಕಿ ಶಿವೆಯು, ಖಳನಿಹನಾತನಶಿವನು
ಆದರಿಸಿ ಕೇಳ್ವುದೀ ಕಥೆಯನು ಬುಧರು - ಶಿವಭಕ್ತಿಯಿಂ
ಸಾರ್ವುದೀ ಕಾವ್ಯವು ಶಿವಪಾರಮ್ಯವಂ ಶಿವನ ಕಾರುಣ್ಯವಂ

2. ಕಥಾ ಪ್ರಾರಂಭ ಸಂಧಿ

ಸೃಷ್ಟ್ಯಾದಿಕಾಲದೊಳ್ ವಿರಿಂಚಿಯು
ಪ್ರಜಾಭಿವೃದ್ಧಿ ಕಾರ್ಯಾರ್ಥದಿಂ
ಸರ್ವಗುಣಸಂಪನ್ನರನನೇಕ ಜನ
ಪುತ್ರರನು ಸಂಕಲ್ಪಮಾತ್ರದಿಂ ಸೃಜಿಸಿದನು

ಅವರೊಳ್ ಅತ್ರಿ ಮರೀಚಿಯೂ
ಪುಲಹ ಪುಲಸ್ತ್ಯರೂ ಭೃಗು ಕ್ರತುವೂ
ಅಂಗೀರ ವಸಿಷ್ಠರೂ ದಕ್ಷ ನಾರದರೂ
ಬ್ರಹ್ಮಪುತ್ರರೊಳಗತಿಶ್ರೇಷ್ಠರೆನಿಸಿದರು

ಇವರೊಳ್ ದಕ್ಷನತಿದಕ್ಷನಿಹನೀತ
ನತಿ ಸಮರ್ಥನಿಹನೀತನಿಂದೀ ಸೃಷ್ಟಿ ಸಂಪದವು
ವೃದ್ಧಿಯಹುದೆಂದಾತಂಗೆ ಪ್ರಜಾಪತಿ
ಎಂಬಭಿದಾನವನಿತ್ತು ಹರಸಿದನಾ ಸೃಷ್ಟಿಕರ್ತನು

ಕಾಲಾಂತರದೊಳಾತಂ ಸ್ವಯಂಭೂ ಮನು ತನಯೆ
ಪ್ರಸೂತಿಯಂ ಮತ್ತು ಪಂಚಜನ ಮುನಿ ತನುಜೆ
ವೀರಿಣಿಯ ಪರಿಗ್ರಹಿಸಿ ಅವರೀರ್ವರೊಳು
ಸಹಸ್ರಾನೇಕ ಸುತ-ಸುತೆಯರಂ ಪಡೆದನು

ದಕ್ಷನಾ ಸುತರಿಂದ ಆ ಸುತರ ಸುತರಿಂದ
ಬೆಳೆದುದು ಪ್ರಜಾಸಂತತಿಯು ಬಹುಬೇಗದಿಂದ
ಅದ ಕಂಡು ಮುದಗೊಂಡು ಸಂತೋಷವಂ ತಾಳ್ದು
ಲೇಸಾಯ್ತು ಜಗಕೆಂದು ಸಂತುಷ್ಟನಾದನು ವಿಧಿಯು

ಇಂತು ಸಂಪ್ರೀತಿಯನು ತಳೆದು ದಕ್ಷನನು ಕರೆದು 
ನಿನಗಿತ್ತ ಪದವಿಯದು ಸಾರ್ಥಕವು ತಾನಾಯ್ತು
ತನಯ, ನಿನ್ನೀ ದಕ್ಷತೆಗೆ ಬಹುವಾಗಿ ಮೆಚ್ಚಿದೆನೆಂದು
ಅಜನು ತಾನ್ ಪ್ರಜಾಪತಿಯನ್ನು ಮನ್ನಿಸಿದನು

ನಂತರದೊಳಾತನು ತನ್ನ ಮಗನನು ಕುರಿತು - ಮುಂದಾಗಬೇಕಿಹುದು ಮಹತ್ಕಾರ್ಯವದೊಂದು; ನಿನ್ನಿಂದ ಸಾಧ್ಯವದು ಮಗನೆ, ಆದ್ದರಿಂ ನೀನದರ ಸಕಲ ಭಾರವ ಹೊತ್ತು ನಡೆಸಿಕೊಡುವುದು ತನಯ ಕೇಳೆಂದನು.

(to be continued..)

No comments:

Post a Comment