Monday 13 May 2013

ನಾನೆಂಬ ಭ್ರಮೆಯಲ್ಲಿ

ಎಲ್ಲದಕು ನಾನು ನಾನೆಂಬೆವು;
ನಮ್ಮ ನೆಲೆ ಅರಿಯದೆಯೆ
ಭ್ರಮೆಯಲ್ಲಿ ಬಾಳುವೆವು.


ನಾವು ಯಾರೆಂದು ಹುಡುಕಿದರೆ
ಸಿಗುವುದೆಲ್ಲವು ಶೂನ್ಯವೇ; ಬರಿ ಶೂನ್ಯವೇ!
ಹೌದು,ಶೂನ್ಯರೆ ನಾವು .


ಈ ಸಿರಿಯು ನಾನಲ್ಲ
ಐಸಿರಿಯು ನಾನಲ್ಲ
ಈ ಬಡವ ನಾನಲ್ಲ
ಬಡತನವು ನಾನಲ್ಲ
ಈ ಮೋಹ ನಾನಲ್ಲ
ಸಮ್ಮೋಹ ನಾನಲ್ಲ
ಈ ಅಂದ ನಾನಲ್ಲ
ಆನಂದ ನಾನಲ್ಲ
ಈ ಬಂಧ ನಾನಲ್ಲ
ಸಂಬಂಧ ನಾನಲ್ಲ
ಈ ದೇಹ ನಾನಲ್ಲ
ಸಂದೇಹ ನಾನಲ್ಲ


ನಾನು ಏನೂ ಅಲ್ಲ
ನಾನು ಯಾರೂ ಅಲ್ಲ


ಬರಿ ಶೂನ್ಯವೇ ನಾನು ;
ಹೌದು, ಶೂನ್ಯವೆ ನಾನು.
ಇದುವೆ ಸತ್ಯ ; ಇದುವೆ  ಪರಮ ಸತ್ಯ !!


ಶೂನ್ಯದಿಂದುದಿಸಿತು ಈ ಸೃಷ್ಟಿ ಸಂಪದವು,
ಮರಳಿ ಲಯ ಹೊಂದುವುದು
ಶೂನ್ಯ ತಾನಾಗಿಯೇ.,


ಈ ಸತ್ಯ ತಿಳಿಯದೆಯೆ
ಬಹುವಾಗಿ ಮೆರೆಯುವೆವು ;
ನಾನೆಂಬ ಭ್ರಮೆಯಲ್ಲಿ
ಮರಮರಳಿ ಹೊರಳುವೆವು.


ಎಲ್ಲಿಯ ನಾನು , ಎಲ್ಲಿಯ ನೀನು
ಸೃಷ್ಟಿಲೀಲೆಗೆ ಎಲ್ಲರೊಂದೆ ಕಣಾ!
ಎಲ್ಲರೊಂದೇ ಕಣಾ!

No comments:

Post a Comment