Saturday 5 December 2015

ಪಂಪಾಕ್ಷೇತ್ರ, ನಾನು ಕಂಡಂತೆ - ೧


ಒಂದೆರಡು ವಾರಗಳ ಹಿಂದೆ ಸ್ನೇಹಿತರೊಬ್ಬರನ್ನು "ಹಂಪಿಯನ್ನ ನೋಡ್ಲಿಕ್ಕೆ ಮೂರು ದಿನಗಳು ಸಾಕಾಗುತ್ತವಾ?" ಅಂತ ಕೇಳಿದ್ದೆ. ನನ್ನ ಆ ಪ್ರಶ್ನೆ ಎಂತಹ ಮಂಕುತನದ್ದಾಗಿತ್ತು ಎಂಬುದರ ಅರಿವು ಈಗ ಆಗಿದೆ, ನನಗೆ. ಕೊನೆಗೂ 'ನಾಲ್ಕು ದಿನಗಳ ಕಾಲ ಅಲ್ಲಿಯೇ ಇದ್ದಾಗಿಯೂ ಕೂಡ ಹಂಪಿಯನ್ನು ಇಡಿಯಾಗಿ ನೋಡಲಾಗಲಿಲ್ಲವಲ್ಲ! ಎಷ್ಟೊಂದು ಗುಡಿ, ಕ್ಷೇತ್ರಗಳನ್ನು ನೋಡಲೇ ಇಲ್ಲವಲ್ಲ..’ ಎಂಬ ನಿರಾಸೆಯಿಂದಲೇ ಮೈಸೂರಿಗೆ ಮರಳಬೇಕಾಯ್ತು.....

ಸಾವಿರಾರು ವರ್ಷಗಳ1 ಇತಿಹಾಸವಿರುವ ಪಂಪಾಕ್ಷೇತ್ರ ಅಥವಾ ಇಂದಿನ ಹಂಪಿಯು ಈಗಿನ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ಸೇರಿದ ಸ್ಥಳ. ಪ್ರಾಚೀನ ಕಾಲದಿಂದಲೂ ಹಂಪೆಯು ಧಾರ್ಮಿಕ, ರಾಜಕೀಯ, ಸಾಹಿತ್ಯಿಕ ಹಾಗೂ ಶಿಲ್ಪಕಲೆಗಳ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಹಿಂದಿನಿಂದಲೂ ಹಂಪಿ ಕ್ಷೇತ್ರಕ್ಕಿದ್ದ ಮಹತ್ವ, ವೈಭವವು ವಿಜಯನಗರದ ಅರಸರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿತೆನ್ನಬಹುದು. ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು ಎಂಬುದೂ ಇದಕ್ಕೆ ಕಾರಣವಿರಬಹುದು.

ವಿಜಯನಗರದ ಅರಸರ ಕಾಲದಲ್ಲಿ ಹಂಪಿಕ್ಷೇತ್ರದ ಸುತ್ತಮುತ್ತ ಹಲವಾರು ಹೊಸ ದೇವಾಲಯಗಳ ನಿರ್ಮಾಣವಾದವು. ಅಂತೆಯೇ ಹಲವು ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವೂ ಈ ಕಾಲದಲ್ಲಾಗಿರುವುದಾಗಿ ಶಾಸನಗಳ ಆಧಾರದಿಂದ ತಿಳಿದುಬರುತ್ತದೆ.

ವಿರೂಪಾಕ್ಷ ದೇವಾಲಯ:

ಶಿವನಿಗೆ ವಿರೂಪ, ವಿಷಮಾಕ್ಷ, ವಿರೂಪಾಕ್ಷ ಎಂಬ ಹೆಸರುಗಳಿರುವುದಾಗಿ ಶಿವನ ಕುರಿತಾಗಿರುವ ಕೆಲವು ಸ್ತೋತ್ರಗಳಿಂದ ತಿಳಿದುಬರುತ್ತದೆ. ಆ ವಿರೂಪಾಕ್ಷನು ಹೇಮಕೂಟ ನಿವಾಸಿ. ಹರಿಹರ ಕವಿಯ ’ಗಿರಿಜಾಕಲ್ಯಾಣ ಮಹಾಪ್ರಬಂಧಂ’ನ ಪ್ರಕಾರ - ಸತೀದೇವಿಯು ದಕ್ಷಯಜ್ಞದ ಸಂದರ್ಭದಲ್ಲಿ ಯೋಗಾಗ್ನಿಪ್ರವೇಶ ಮಾಡಿದ ನಂತರದ ದಿನಗಳಲ್ಲಿ ಶಿವನು ಕೈಲಾಸವನ್ನು ತೊರೆದು ಹೇಮಕೂಟಕ್ಕೆ ಬಂದು ಧ್ಯಾನದಲ್ಲಿ ಮಗ್ನನಾದನು.
ಮುಂದೆ, ಸತಿದೇವಿಯು ಹಿಮವಂತ-ಮೇನಾದೇವಿಯರ ಮಗಳಾಗಿ ಜನಿಸಿ, ಮಹರ್ಷಿ ನಾರದರ ನಿರ್ದೇಶದಂತೆ - ತಂದೆತಾಯಿಯರ ಅಪ್ಪಣೆ ಪಡೆದು - ಹೇಮಕೂಟ ಪರ್ವತಕ್ಕೆ ಬಂದು ಧ್ಯಾನಮಗ್ನನಾಗಿದ್ದ ಶಿವನ ಸೇವೆಯಲ್ಲಿ ತೊಡಗಿರುತ್ತಾಳೆ. ಶಿವನಾದರೋ ಒಮ್ಮೆಯೂ ಆಕೆಯನ್ನು ಕಣ್ತೆರೆದು ನೋಡಲೂ ಇಲ್ಲ.
ಇತ್ತ, ದುಷ್ಟ ತಾರಕಾಸುರನನ್ನು ವಧಿಸಲು ಶಿವತನಯನಿಗೆ ಮಾತ್ರ ಸಾಧ್ಯವಿರುವುದರಿಂದ ದೇವತೆಗಳೂ ಶಿವ-ಪಾರ್ವತಿಯರ ವಿವಾಹವು ಬೇಗ ನಡೆಯಲೆಂದು ಹಾರೈಸಿ, ಶಿವನ ತಪೋಭಂಗಕ್ಕಾಗಿ ಮನ್ಮಥನನ್ನು ಕಳುಹಿಸುತ್ತಾರೆ.
ಮನ್ಮಥನು ಹೇಮಕೂಟದ ಎದುರಿಗಿದ್ದ ಮಾತಂಗಪರ್ವತವನ್ನೇರಿ ಶಿವನ ಕಡೆಗೆ ಒಂದೊಂದಾಗಿ ಪುಷ್ಪಬಾಣಗಳನ್ನು ಪ್ರಯೋಗಿಸುತ್ತಾನೆ. ಆದರೆ ಅವೆಲ್ಲವೂ ಶಿವನ ತಪಕ್ಕೆ ಯಾವ ಮಾತ್ರದ ವಿಘ್ನವನ್ನುಂಟುಮಾಡಲಾರದೆ ಶಕ್ತಿಹೀನವಾಗಿ ಬೀಳುತ್ತವೆ. ಕೊನೆಗೆ ’ಪಂಚಬಾಣ’ನೆಂದೇ ಪ್ರಖ್ಯಾತನಾದ ಮನ್ಮಥನು ತನ್ನ ಐದೂ ಬಾಣಗಳನ್ನು ಒಟ್ಟಿಗೇ ಶಿವನ ಕಡೆಗೆ ಪ್ರಯೋಗಿಸುತ್ತಾನೆ.
ಅದೇ ಸಮಯಕ್ಕೆ ಅಲ್ಲಿಯೇ ಇದ್ದ ಪಾರ್ವತಿಯ ಭಕ್ತಿ-ಪ್ರೇಮಗಳು ಶಿವನ ಮನಸನ್ನು ಮುಟ್ಟಿ - ಶಿವನಿಗೆ ಕನಸಿನಲ್ಲೆಂಬಂತೆ ಕ್ಷೀಣವಾಗಿ ಅಹಂ-ಮಮತೆಗಳು ತಲೆದೋರಿ, ಶಿವನು ಇನ್ನೇನು ಕಣ್ತೆರೆಯಬೇಕು, ಅಷ್ಟರಲ್ಲಿ ಮನ್ಮಥನು ಪ್ರಯೋಗಿಸಿದ ಪಂಚಬಾಣಗಳೂ ಬಂದು ಶಿವನನ್ನು ಕವಿದವು. ಶಿವನಿಗೆ - ಕಣ್ತೆರೆಯುವ ವೇಳೆಗೆ - ತನ್ನ ಎದುರು ಕುಳಿತ ಪಾರ್ವತಿಯನ್ನು ಕಂಡು ಆಶ್ಚರ್ಯವಾಯಿತು. ಆಕೆಯನ್ನು ಕುರಿತು ’ಈಕೆ ಯಾರು’ ಎಂದು ಶಿವನು ಯೋಚಿಸುವ ಮೊದಲೇ ಮಾತಂಗಪರ್ವತದ ಮೇಲಿದ್ದ ಮನ್ಮಥನು ಆತನಿಗೆ ಕಾಣಿಸಿದ. ಅಷ್ಟೆ, ಶಿವ ತನ್ನ ಹಣೆಗಣ್ಣನ್ನು ತೆರೆದು ಕೋಪಾಗ್ನಿಯಿಂದ ಮನ್ಮಥನನ್ನು ಉರುಹಿ, ಅಲ್ಲಿಂದ ಕೈಲಾಸಪರ್ವತಕ್ಕೆ ಹೊರಟುಬಿಡುತ್ತಾನೆ - ಪಾರ್ವತಿಯ ಕಡೆಗೆ ಒಮ್ಮೆಯೂ ತಿರುಗಿ ನೋಡದೆ.

ಪಾರ್ವತಿಗೆ ಶಿವನ ಈ ವರ್ತನೆಯಿಂದ ಬಹಳ ಅಪಮಾನವೂ ದುಃಖವೂ ಉಂಟಾಯಿತು. ಅದಕ್ಕೇ "ತಾನಿರ್ದಲ್ಲಿಗೆ ನಡೆತಂದಾನರ್ಚಿಸೆ ಕಾಮವೈರಿ ನುಡಿಯಿಸದಂತರ್ಧಾನಕ್ಕೆ ಸಂದನದರಿಂದಾನಿರ್ದಲ್ಲಿಗೆ ಸಮಂತು ತನ್ನನೆ ತರ್ಪೆಂ" (ಆತನಿದ್ದಲ್ಲಿಗೇ ಬಂದು ಪ್ರೀತಿಯಿಂದ ಆತನನ್ನು ಅರ್ಚಿಸುತ್ತ ಇದ್ದ ನನ್ನೊಂದಿಗೆ ಒಂದು ಮಾತನ್ನೂ ಆಡದೆ ಕಾಮವೈರಿಯಾದ ಶಿವನು ಅಂತರ್ಧಾನನಾಗಿಹೋದನು. ಇನ್ನು ಇಲ್ಲಿಯೇ ಆತನನ್ನು ಕುರಿತು ತಪಗೈದು ಶಿವನನ್ನೇ ನಾನಿರುವಲ್ಲಿಗೆ ಬರುವಂತೆ ಮಾಡುತ್ತೇನೆ) ಎಂದು ನಿಶ್ಚಯಿಸಿ ಉಗ್ರತಪದಲ್ಲಿ ನಿರತಳಾಗುತ್ತಾಳೆ.  ಹೀಗೆ ಹೇಮಕೂಟದ ಬಳಿಯೇ ಆಕೆಯೂ ತಪೋನಿರತಳಾಗಿ, ಕೊನೆಗೂ ಶಿವನನ್ನು ಮೆಚ್ಚಿಸಿ, ಸರ್ವದೇವತೆಗಳ ಸಮಕ್ಷಮದಲ್ಲಿ ಶಿವನನ್ನೇ ವರಿಸುತ್ತಾಳೆ.

ಪುರಾಣ-ಕಾವ್ಯಗಳ ಪ್ರಕಾರ ಪಾರ್ವತಿಯ ಇನ್ನೊಂದು ಹೆಸರು ಪಂಪಾ2 ಎಂದು. ಆಕೆ ಹರನನ್ನು ಕುರಿತು ಈ ಕ್ಷೇತ್ರದಲ್ಲೇ ತಪಗೈದು, ಆತನನ್ನು ವರಿಸಿದಳೆಂಬುದು ಪುರಾಣದ ಕತೆ (ಹರಿಹರನ "ಗಿರಿಜಾಕಲ್ಯಾಣಮಹಾಪ್ರಬಂಧಂ"ನ ಕತೆಯೂ ಅದೇ). ಮದುವೆಯ ನಂತರ ಶಿವಪಾರ್ವತಿಯರಿಬ್ಬರೂ ಈ ಕ್ಷೇತ್ರದಲ್ಲೇ ನೆಲೆಸಿದ್ದಾರೆಂದು ಜನರ ನಂಬಿಕೆ. ಪಂಪಾದೇವಿಯು ನೆಲೆಸಿರುವ ಕ್ಷೇತ್ರವಾದ್ದರಿಂದ ಇದು ’ಪಂಪಾಕ್ಷೇತ್ರ’ವೆನಿಸಿತು ಎಂಬುದು ಈ ಸ್ಥಳದ ಐತಿಹ್ಯ. ಆ ಪಂಪಾದೇವಿಯ ಪತಿಯಾದ್ದರಿಂದ ವಿರೂಪಾಕ್ಷನಿಗೆ ’ಪಂಪಾಪತಿ’ಯೆಂಬ ಮುದ್ದಿನ ಹೆಸರೂ ಉಂಟು.

ಪೂರ್ವಕಾಲದಿಂದಲೂ ವಿರೂಪಾಕ್ಷ ದೇವಾಲಯವು ಪಂಪಾಪುರದ ಪ್ರಮುಖ ದೇವಾಲಯವಾಗಿದೆ. ದೇವಾಲಯ ನಿರ್ಮಾಣವಾದ ಕಾಲದ ಬಗ್ಗೆ ಸ್ಪಷ್ಟ ಅಭಿಪ್ರಾಯವಿಲ್ಲವಾದರೂ ಹಲವಾರು ಅರಸು ಮನೆತನದವರು ಕಾಲಕಾಲಕ್ಕೆ ಈ ಆಲಯದ ಜೀರ್ಣೋದ್ಧಾರ ಮಾಡಿಸಿರುವುದಾಗಿ ಶಾಸನಗಳಿಂದ3 ತಿಳಿದುಬರುತ್ತದೆ. ಹಾಗೂ ಇಲ್ಲಿನ ವಾಸ್ತು-ಶಿಲ್ಪಗಳನ್ನು ಕಂಡಾಗಲೂ ಈ ವಿಷಯ ಗೋಚರಿಸುತ್ತದೆ. ಬೇರೆಬೇರೆ ದೇವತೆಗಳ ಸಣ್ಣಸಣ್ಣ ಗುಡಿಗಳಿರುವುದರಿಂದ ಈಗಿರುವ ವಿರೂಪಾಕ್ಷ ದೇವಾಲಯವು ಹಲವು ದೇವಾಲಯಗಳ ಸಂಕೀರ್ಣವೆಂದೂ ಹೇಳಬಹುದು.

ಹಂಪೆಯ ವಿರೂಪಾಕ್ಷ ದೇವಾಲಯವು ಗಾತ್ರ-ವಿಸ್ತಾರದಲ್ಲಿ ಅಗಾಧವಾಗಿರುವಂತೆಯೇ ಅದರ ಸೌಂದರ್ಯವೂ ಕೂಡ ಅನುಪಮವಾಗಿದೆ. ಆಲಯದ ಭವ್ಯತೆಯನ್ನು ಕಂಡವರ ಮನಸ್ಸು ಅವ್ಯಕ್ತವಾದ ಆನಂದಭಾವಗಳ ಅಂಗಳದಲ್ಲಿ ವಿಹರಿಸುತ್ತದೆ.

ಆಲಯದ ಮಹಾದ್ವಾರದ ಮೇಲೆ ಒಂಬತ್ತು ಅಂತಸ್ತುಗಳ ಎತ್ತರವಾದ ಗೋಪುರವಿದೆ. ಗೋಪುರದ ಮೇಲೆ ಶಿವ, ವಿಷ್ಣು, ಗಣಪತಿ ಮೊದಲಾದ ದೇವದೇವಿಯರ ಮೂರ್ತಿಗಳೂ, ಸ್ತ್ರೀ-ಪುರುಷರ ವಿವಿಧ ಭಂಗಿಗಳ ಮೂರ್ತಿಗಳೂ, ಬೇಟೆ ಮೊದಲಾದ ಕ್ರೀಡೆಗಳನ್ನು ತೋರುವ ಮೂರ್ತಿಗಳೂ ಇವೆ.

 


ಗೋಪುರದ ದ್ವಾರದ ಇಕ್ಕೆಲಗಳಲ್ಲಿಯೂ ಕೆಲವು ಸೊಗಸಾದ ಕೆತ್ತನೆಗಳಿವೆ

ಗೋಪುರವನ್ನು ದಾಟಿ ಒಳಬಂದ ತಕ್ಷಣ ಮೂರು ಮುಖದ ವೃಷಭನ ಮೂರ್ತಿಯೊಂದು ಕಾಣಿಸುತ್ತದೆ.
 

ಇದರ ಎದುರುಗಡೆಯ ಗೋಡೆಯ ಮೇಲೆ ವಿಜಯನಗರದ ರಾಯರ ರಾಜಲಾಂಛನವು ಕಾಣಬರುತ್ತದೆ. ಇದಕ್ಕೆ ಸ್ವಲ್ಪ ಸಮೀಪದಲ್ಲೇ ನಾಟ್ಯದಲ್ಲಿ ತೊಡಗಿರುವ ದುರ್ಗಾದೇವಿಯ ಶಿಲ್ಪವೊಂದನ್ನು ಕಾಣಬಹುದು.

 
 

ಹೀಗೆ, ಮಹಾದ್ವಾರದಿಂದ ಒಳಗೆ ಬಂದರೆ ಮತ್ತೊಂದು ದ್ವಾರವಿರುವ ಆವರಣವೊಂದು ಕಾಣಿಸುತ್ತದೆ.

ಅದರ ಎಡಬದಿಗೆ ವಿವಿಧ ಶಿಲ್ಪಗಳ ಕೆತ್ತನೆಯಿಂದ ಕೂಡಿದ ಕಂಭಗಳಿರುವ ಮಂಟಪವೊಂದಿದೆ. ಶಿವಲಿಂಗ, ಬಸವ, ಶಿವಶರಣರ, ಗಣಪ್ರಮುಖರ ಶಿಲ್ಪಗಳನ್ನೂ, ರಾಮ-ಹನುಮಂತರ ಶಿಲ್ಪಗಳನ್ನೂ ಈ ಮಂಟಪದಲ್ಲಿ ಕಾಣಬಹುದು.



ಎರಡನೇ ದ್ವಾರವನ್ನು ದಾಟಿ ಒಳಬಂದರೆ ದೊಡ್ಡ ಮಂಟಪವೊಂದು ಕಾಣುತ್ತದೆ. ಮಂಟಪದ ಶಿರೋಭಾಗದಲ್ಲಿರುವ ಮೂರ್ತಿಗಳ ಪೈಕಿ ಶಿವ-ಪಾರ್ವತಿಯರ ವಿವಾಹ ಸಂದರ್ಭದ ಮೂರ್ತಿಯು ಬಹುಸುಂದರವಾಗಿದೆ.
ಮಹಾದ್ವಾರಕ್ಕೆ ಎದುರಿಗಿರುವ ಈ ಮಂಟಪದ ಶಿಲಾಸ್ತಂಭಗಳಲ್ಲಿ ಎರಡು ಕಂಬಗಳಿಗೆ ಚಿನ್ನದ ತಗಡಿನ ಹೊದಿಕೆಯಿತ್ತು (ಉಳಿದ ಎಲ್ಲಾ ಕಂಬಗಳಿಗೆ ತಾಮ್ರದ ತಗಡನ್ನು ಹೊದಿಸಲಾಗಿತ್ತು) ಎಂದು ೧೬ನೇ ಶತಮಾನದಲ್ಲಿ ವಿಜಯನಗರವನ್ನು ಸಂದರ್ಶಿಸಿದ ಡೊಮಿಂಗೊಸ್ ಪೇಯಸ್ ಎಂಬ ಯಾತ್ರಿಕನು ದಾಖಲಿಸಿದ್ದಾನೆ4

ಈ ಮಂಟಪವನ್ನೂ, ಇದರ ಎದುರಿಗಿನ ದ್ವಾರವನ್ನೂ ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕಟ್ಟಿಸಿದುದಾಗಿ ಇಲ್ಲಿನ ಶಾಸನವೊಂದರಿಂದ5 ತಿಳಿದುಬರುತ್ತದೆ.

ಈ ಮಂಟಪಕ್ಕೆ ಹೊಂದಿಕೊಂಡಂತೆಯೇ ಗರ್ಭಗುಡಿಯಿದೆ. ಗರ್ಭಗುಡಿಯ ದ್ವಾರಕ್ಕೆ ಶ್ರೀ ಕೃಷ್ಣದೇವರಾಯನೂ, ಉಳಿದವನ್ನು ಅವನ ಪೂರ್ವಜರೂ ಅಲಂಕಾರ ಮಾಡಿಸಿದ್ದುದಾಗಿ ಪೇಯಸ್ ದಾಖಲಿಸಿದ್ದಾನೆ6. ಆ ಕಾಲದಲ್ಲಿ ಗರ್ಭಗುಡಿಯ ಒಳಭಾವನ್ನೆಲ್ಲಾ ತಾಮ್ರದ ತಗಡುಗಳನ್ನು ಹೊದಿಸಿ ಚಿನ್ನದ ಲೇಪ ಮಾಡಿದ್ದುದಾಗಿಯೂ ದಾಖಲಿಸಿದ್ದಾನೆ. ಗರ್ಭಗುಡಿಯಲ್ಲಿ ಪಂಪಾಪತಿಯಾದ ವಿರೂಪಾಕ್ಷಲಿಂಗವಿದೆ. ಶಿವಲಿಂಗದ ಎದುರಿಗೆ ಎರಡು ಬಸವಮೂರ್ತಿಗಳಿರುವುದರ ಕಾರಣವೇನೊ ಹೊಳೆಯಲಿಲ್ಲ ನನಗೆ.

 

ಮಂಟಪದಲ್ಲಿನ ಕಂಬಗಳ ಮೇಲೆಯೂ ಗರ್ಭಗುಡಿಯ ಹೊರಗೋಡೆಯ ಮೇಲೆಯೂ ಶಿವಶರಣರ ಶಿಲ್ಪಗಳನ್ನೂ, ಶಿವಲೀಲೆಗಳನ್ನು ನಿರೂಪಿಸುವ ಶಿಲ್ಪಗಳಿರುವುದನ್ನೂ ಗಮನಿಸಬಹುದು. ನನಗೆ ಬೇಡರ ಕಣ್ಣಪ್ಪ, ಕೋಳೂರ ಕೊಡಗೂಸು ಮುಂತಾದವರ ಕತೆಯನ್ನು ನಿರೂಪಿಸುವ ಶಿಲ್ಪಗಳು ಅಲ್ಲಲ್ಲಿ ಕಂಡುಬಂದವು. ಶಿಲ್ಪಗಳ ಕೆತ್ತನೆಗೆ ತೊಡಗುವ ಮುನ್ನ ಶಿಲ್ಪಿಗಳು ಆಯಾ ಶಿಲ್ಪಕ್ಕೆ, ಕತೆಗೆ ಸಂಬಂಧಿಸಿದ ಸಾಹಿತ್ಯಿಕ ಆಧಾರಗಳನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದರೆಂದು ತೋರುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶಿವಶರಣ ಶಿಲ್ಪಗಳ ಕೆತ್ತನೆಗಾಗಿ ಯಾವ ಆಧಾರವನ್ನು ಅನುಸರಿಸಿದ್ದರೆಂಬುದರ ಬಗೆಗೆ ವಿಚಾರ ಮಾಡಬೇಕಾಗಿದೆ. ’ರಗಳೆಗಳ ಕವಿ’ ಹರಿಹರನು ಹಂಪೆಯವನೇ ಆದ್ದರಿಂದ, ಶಿವಶರಣರನ್ನು ಕುರಿತು ಅವನು ರಚಿಸಿದ ನೂರಾರು ರಗಳೆಗಳೇನಾದರೂ ಈ ಶಿಲ್ಪಗಳ ಕೆತ್ತನೆಗೆ ಆಧಾರವಾಗಿದ್ದವೋ ಎಂದು ಊಹಿಸಲು ಅವಕಾಶವಿದೆ7

ಕಲ್ಲಿನಲ್ಲೇ ಕೆತ್ತಿ ರೂಪಿಸಲಾದ ಈ ಭಾಂಡವೂ ಅಡ್ಡಣಿಗೆಯೂ ಅವುಗಳ ಸೊಗಸು, ಗಾತ್ರಗಳ ಕಾರಣದಿಂದ ಅಚ್ಚರಿಗೆ ಕಾರಣವಾಯಿತು.


ಮುಂಚೆಯೇ ತಿಳಿಸಿದಂತೆ, ವಿರೂಪಾಕ್ಷ ದೇವಾಲಯವು ಹಲವು ದೇವಾಲಯಗಳನ್ನೊಳಗೊಂಡ ಸಂಕೀರ್ಣವೇ ಆಗಿದೆ. ವಿರೂಪಾಕ್ಷಲಿಂಗದ ಗರ್ಭಗುಡಿಯ ಹಿಂಭಾಗದಲ್ಲಿ (ಎಡಗಡೆಗೆ) ಪಂಪಾದೇವಿಯ, ಭುವನೇಶ್ವರಿಯ ಆಲಯಗಳು ಪಕ್ಕಪಕ್ಕದಲ್ಲೇ ಇವೆ. ಅಲ್ಲಿಯೇ ಸಮೀಪದಲ್ಲಿ ಗುಲಗಂಜಿ ಮಾಧವನ ಆಲಯವೂ ಇದೆ. ಈ ಆಲಯವು ನೆಲಮಟ್ಟಕ್ಕಿಂತ ಸ್ವಲ್ಪ ತಗ್ಗಿನಲ್ಲಿರುವುದರಿಂದ ಮೆಟ್ಟಿಲುಗಳನ್ನಿಳಿದು ಹೋಗಬೇಕಿದೆ. ವಿಷ್ಣು ಹಾಗೂ ಶಿವಲಿಂಗವು ಈ ಆಲಯದಲ್ಲಿರುವುದು ವಿಶೇಷ. ಉಳಿದಂತೆ, ಆಲಯಗಳ ಸಂಕೀರ್ಣದಲ್ಲಿರುವ ಗುಡಿಗಳ ಪೈಕಿ ವಿದ್ಯಾರಣ್ಯರ ಆಲಯವನ್ನೂ, ಸುದರ್ಶನ ಮೂರ್ತಿಯನ್ನೂ, ತಾರಕೇಶ್ವರ, ರತ್ನಗರ್ಭ ಗಣಪತಿಯ ಗುಡಿಗಳನ್ನೂ ಇಲ್ಲಿ ಹೆಸರಿಸಬಹುದು.

ಆಲಯದ ಹಿಂಭಾಗದಲ್ಲೊಂದು ವಿಶೇಷ ದೃಶ್ಯವನ್ನು ಕಾಣಬಹುದು. ಆಲಯದ ಹಿಂಭಾಗದಲ್ಲಿರುವ ಕತ್ತಲೆಕೋಣೆಯೊಂದರಲ್ಲಿ ಸಣ್ಣ ಕಿಂಡಿಯೊಂದಿದೆ. ಅದರಿಂದ ಒಳಬರುವ ಬೆಳಕು ಆ ಕಿಂಡಿಯೆದುರಿನ ಗೋಡೆಯ ಮೇಲೆ ಬೀಳುತ್ತದೆ. ಇಲ್ಲಿ ಆಲಯದ ಮುಖ್ಯಗೋಪುರದ ಛಾಯೆಯು ತಲೆಕೆಳಗಾಗಿ ಕಾಣುತ್ತದೆ. ಬೆಳಗಿನ ಹೊತ್ತು ಈ ಛಾಯೆಯು ಬರಿಯ ಕಪ್ಪು ನೆರಳಿನಂತೆ ಕಂಡುಬಂದರೆ ಸಂಜೆಯ ಹೊತ್ತಿಗೆ ಸಹಜವರ್ಣದ ಬಿಂಬವೇ ತಲೆಕೆಳಗಾಗಿ ಕಾಣುತ್ತದೆ. ನೂರಾರು ವರ್ಷಗಳ ಹಿಂದೆಯೇ ಇಂತಹ ತಂತ್ರವನ್ನು ಅಳವಡಿಸಿರುವುದು ವಿಜಯನಗರದ ವಾಸ್ತುಶಿಲ್ಪಿಗಳ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿದೆ.

ರಂಗಮಂಟಪದ ಎಡಗಡೆಯಿರುವ ದ್ವಾರವನ್ನು ದಾಟಿ ಹೋದರೆ ಶಿಥಿಲವಾಗಿರುವ ಕೆಲವು ಗುಡಿಗಳೂ, ಮನ್ಮಥಕುಂಡವೂ, ಮಹಿಷಮರ್ದಿನಿ ಆಲಯವೂ ಕಾಣಿಸುತ್ತದೆ. ಇದ್ದುದರಲ್ಲಿ ಮಹಿಷಮರ್ದಿನಿ ದೇವಾಲಯವು ಒಳ್ಳೆಯ ಸ್ಥಿತಿಯಲ್ಲಿದ್ದು ಈಗಲೂ ಅಲ್ಲಿ ಪ್ರತಿದಿನದ ಪೂಜಾಕಾರ್ಯಗಳು ನಡೆಯುತ್ತವೆ. ಈ ಆಲಯವು ಇತರ ಆಲಯಗಳಿಗಿಂತ ಪ್ರಾಚೀನ ವಾಸ್ತುಲಕ್ಷಣವನ್ನು ಹೊಂದಿದೆಯೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಗುಡಿಯಲ್ಲಿ ೧೨ನೇ ಶತಮಾನದ ಉತ್ತರಾರ್ಧಕ್ಕೆ ಸೇರಿದ ಶಾಸನವೊಂದು ದೊರೆತಿದೆ8
(ಚಿತ್ರದಲ್ಲಿ ಮಹಿಷಮರ್ದಿನಿ ಆಲಯದ ಸಣ್ಣ ಗೋಪುರವನ್ನೂ, ಮನ್ಮಥಕುಂಡವನ್ನೂ ವಿರೂಪಾಕ್ಷ ದೇವಾಲಯದ ಬೃಹತ್ ಗೋಪುರವನ್ನೂ ಕಾಣಬಹುದು)


(ಬೃಹದ್ಗೋಪುರದ ಪಾರ್ಶ್ವನೋಟ)



(ಈ ಲೇಖನದ ಮೊದಲಲ್ಲಿ ತಿಳಿಸಿದಂತೆ ವಿರೂಪಾಕ್ಷ ದೇವಾಲಯವು ಗಾತ್ರದಲ್ಲಿ ಅಗಾಧವಾಗಿರುವಂತೆ ಅದರ ಸೌಂದರ್ಯದ ವಿಷಯದಲ್ಲೂ ಅಪ್ರತಿಮವಾಗಿದೆ. ಹಲವು ರೀತಿಯ ವಾಸ್ತುಲಕ್ಷಣಗಳೂ, ವೈಶಿಷ್ಟ್ಯಗಳೂ ಆಲಯದ ಆದ್ಯಂತವೂ ಮೇಳೈಸಿರುವುದರಿಂದ ಈ ಆಲಯವೊಂದರ ಬಗ್ಗೆ ತಿಳಿಯಬೇಕಾದುದೇ ಸಾಕಷ್ಟಿದೆ. ನಾನು ಈ ಲೇಖನದಲ್ಲಿ ಹೇಳಿರುವುದು ನನಗೆ ಕಂಡುಬಂದ, ನಾನು ಕಂಡುಕೊಂಡ ವಿಷಯಗಳಷ್ಟೇ)

ಟಿಪ್ಪಣಿಗಳು:
೧. ಶ್ರೀಮದ್ವಾಲ್ಮೀಕಿ ರಾಮಾಯಣ, ಸ್ಕಂದಪುರಾಣಗಳಲ್ಲಿನ ಉಲ್ಲೇಖಗಳು
೨. ಪಂಪಾ ಎಂಬುದು ಪೂರ್ವಕಾಲದಲ್ಲಿ ತುಂಗಭದ್ರಾ ನದಿಗೆ ಇದ್ದ ಹೆಸರೆಂದು ನಂಬಲಾಗಿದೆ. ಇದಕ್ಕೆ ಪೂರಕವಾದ ಆಧಾರಗಳೂ ಉಂಟು.
೩. ವಿಜಯನಗರದ (ಹಂಪೆಯ) ಶಾಸನಗಳು - ೧
೪. 'A Forgotten' Empire, "Narrative of Domingo Paes"
೫. ವಿಜಯನಗರದ (ಹಂಪೆಯ) ಶಾಸನಗಳು - ೧, ಶಾಸನ ಸಂ. ೧೦೪
೬. 'A Forgotten' Empire, "Narrative of Domingo Paes"
. ವಿಜಯನಗರ ಅಧ್ಯಯನದ ಒಂದೆರಡು ಸಂಪುಟಗಳಲ್ಲಿನ ಲೇಖನಗಳ ಆಧಾರದ ಮೇಲೆ ನನಗೆ ಹೀಗೆ ತೋರಿತು.
. ವಿಜಯನಗರ ಅಧ್ಯಯನ’, ಸಂಪುಟ ೧

3 comments:

  1. Waiting for the second part. Adenu part by part release maaDOdu, oTTge fullu baryOdappa!

    References sakkathaagide, and ninna anubhavavoo saha sogasaagittu annOdu gottaagtide..

    Next time aanegondi miss maaDbEDappa!

    ReplyDelete
  2. Waiting for the second part. Adenu part by part release maaDOdu, oTTge fullu baryOdappa!

    References sakkathaagide, and ninna anubhavavoo saha sogasaagittu annOdu gottaagtide..

    Next time aanegondi miss maaDbEDappa!

    ReplyDelete
  3. https://maatu-kathe.blogspot.com/2007/05/blog-post_09.html

    idu gnapaka banthu.

    - Srikanth

    ReplyDelete