Saturday 28 June 2014

ಆವ ಸಿರಿ ರಾಗವಿದು?

ಆವ ಸಿರಿ ರಾಗದೊಳು ಹಾಡುತಿಹೆ ದೊರೆಯೇ?
ಬಗೆಯಲೆನ್ನಳವಲ್ಲ, ಕೇಳುವೆನು ಮೌನದಲಿ.!

ನಿನ್ನ ಗಾನದ ಬೆಳಕು ಜಗವೆಲ್ಲ ತುಂಬಿಹುದು,
ಮಧುರತೆಯು ಮೈತುಂಬಿ ಜಡತೆಯದು ಅಳಿದಿಹುದು;
ಹರಿಯುತಿರೆ ಹೊನಲ ಸೊದೆ ಜೀವಜೀವವ ಮೀಟಿ,
ನಿನ್ನುಸಿರು ಪ್ರವಹಿಸಿದೆ ಗಗನದಾಚೆಯ ದಾಟಿ.

ಹೃದಯವಿದು ನಿನ್ನೊಡನೆ ತಾ ಹಾಡಬಯಸುವುದು!
ಚರಣಗಳನನುಕರಿಸಿ ಹಾಡಲೆಂದೆಳಸುವುದು,
ಮರುಕ್ಷಣದೆ ಪದ ಮರೆತು ದನಿ ಬರದೆ ತೊದಲುವುದು;
ನುಡಿಯಲಾರದೆ ಸೋತು ಕಂಬನಿಯ ಮಿಡಿಯುವುದು.

ನಿನ್ನ ಗಾನದ ಬಲೆಯ ಹೆಣೆದು, ನನ್ನನು ಸೆಳೆದು -
ಬಂಧಿಸಿಹೆ ಹೃದಯವನು ಎದೆಯ ಸೆರೆಮನೆಯೊಳಗೆ;
ರಾಗದಲೆಗಳ ಮೇಲೆ ತೇಲುತೇಳುತ ಸಾಗಿ
ಅರಮನೆಯೊ ಸೆರೆಮನೆಯೊ ಎಲ್ಲ ಮರೆತಿಹುದೆನಗೆ.

No comments:

Post a Comment