Sunday 15 December 2013

ಕಳೆದುಹೋಗಬೇಕು 'ನಾನು'

ಕಳೆದುಹೋಗಬೇಕು ನಾನು ಕಳೆದುಹೋಗಬೇಕು ನಾನು ;
ಜೀವನದs ಜಾತ್ರೆಯಲ್ಲಿ ಕಳೆದುಹೋಗಬೇಕು 'ನಾನು'.

ಎಲ್ಲರ ಜೊತೆ ನಡೆಯುವಾಗ ಕಳೆದುಹೋಗಬೇಕು ನಾನು 
ಎಲ್ಲರ ಜೊತೆ ನುಡಿಯುವಾಗ ಕಳೆದುಹೋಗಬೇಕು ನಾನು 
ಎಲ್ಲರ ಜೊತೆ ದುಡಿಯುವಾಗ ಕಳೆದುಹೋಗಬೇಕು ನಾನು 
ಎಲ್ಲರಲ್ಲಿ ಒಬ್ಬನಾಗಿ ಕಳೆದುಹೋಗಬೇಕು ನಾನು.

ಎಲೆಮರೆಯs ಧ್ವನಿಯ ಹಾಗೆ ಕಳೆದುಹೋಗಬೇಕು ನಾನು
ಧರೆಗಿಳಿವಾ ಹನಿಯ ಹಾಗೆ ಕಳೆದುಹೋಗಬೇಕು ನಾನು
ಹೆಸರಿರದಾ ಝರಿಯ ಹಾಗೆ ಕಳೆದುಹೋಗಬೇಕು ನಾನು
ಸಾಗರದಾ ಅಲೆಯ ಹಾಗೆ ಕಳೆದುಹೋಗಬೇಕು ನಾನು.

ಧಾನ್ಯದಲ್ಲಿ ವೃಕ್ಷದಂತೆ ಕಳೆದುಹೋಗಬೇಕು ನಾನು
ಹಾಲಿನಲ್ಲಿ ಬೆಣ್ಣೆಯಂತೆ ಕಳೆದುಹೋಗಬೇಕು ನಾನು 
ಜಲದೊಳಗಣ ಜೀವದಂತೆ ಕಳೆದುಹೋಗಬೇಕು ನಾನು
ಜೀವನೊಳಗೆ ದೇವನಂತೆ ಕಳೆದುಹೋಗಬೇಕು "ನಾನು"

ಯಾವುದೋ ಸಭೆಯೊಂದರಲ್ಲಿ ಒಬ್ಬರು ಕನಕದಾಸರನ್ನು ಕೇಳಿದರಂತೆ "ಸ್ವಾಮಿ, ಪ್ರಪಂಚದಲ್ಲಿ ಇಷ್ಟೊಂದು ಜನ ಮೋಕ್ಷಪದವನ್ನು ಹೊಂದಲು ಪ್ರಯತ್ನಿಸುತ್ತ ಇರುತ್ತಾರಲ್ಲ, ಅವರಲ್ಲಿ ಯಾರುಯಾರು(ಎಂಥವರು) ಮೋಕ್ಷಪದವನ್ನು ತಲುಪುತ್ತಾರೆ?" ಅಂತ.ಅದಕ್ಕೆ ಕನಕದಾಸರು "ಗೊತ್ತಿಲ್ಲಪ್ಪ, ನಾನು ಹೋದ್ರೆ ಹೋಗಬಹುದು" ಅಂದರಂತೆ.
ಪ್ರಶ್ನೆ ಕೇಳಿದವನಿಗೆ ಆಶ್ಚರ್ಯ! ಜೊತೆಗೆ ಸ್ವಲ್ಪ ಅಸಮಾಧಾನ - "ಅಲ್ಲ, ಈತ ತಾನೊಬ್ಬ ಮಾತ್ರ ಮೋಕ್ಷ ಹೊಂದಬಹುದು ಅಂತಿದಾನಲ್ಲ. ಹಾಗಿದ್ರೆ ಮಿಕ್ಕವರೆಲ್ಲ ಅದಕ್ಕೆ ಅನರ್ಹರು ಎಂದು ಇವರ ಅಭಿಪ್ರಾಯವೇನು??" - ಅಂತ. ಅದನ್ನೇ ಆತ ಕನಕದಾಸರನ್ನು ಕೇಳುತ್ತಾನೆ.
ಅದಕ್ಕೆ ಕನಕದಾಸರು ಹೇಳಿದರಂತೆ "ನಾನು ಹೇಳಿದ್ದು ನಾನೊಬ್ಬ ಮಾತ್ರ ಹೋಗ್ತೀನಿ ಅಂತ ಅಲ್ಲಪ್ಪ, ಈ 'ನಾನು' ಅನ್ನೋ ಭಾವನೆ ನಮ್ಮಿಂದ ಹೋದ್ರೆ ಮೋಕ್ಷಪದಕ್ಕೆ ಹೋಗಬಹುದು" ಅಂತ. (ಕನಕದಾಸರ ಮಾತು/ದಾಸಪದಗಳಲ್ಲಿ ಯಾವಾಗಲೂ ಒಂದಲ್ಲ ಒಂದು ಗೂಢಾರ್ಥ ಇರುವುದು ನಮಗೆಲ್ಲ ಬಹುಶ ಗೊತ್ತಿರುವ ವಿಷಯವೇ). ಅದಕ್ಕೇ ಒಂದು ನುಡಿ ಇದೆ "ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ" ಅಂತ.
ಅದೇನೇ ಇರಲಿ, ಅವರ ಆ ಮಾತು ನಮಗೆಲ್ಲ ಸರ್ವಥಾ ಮನನೀಯ. 'ನಾನು' ಅನ್ನೋ ಸ್ವಾರ್ಥ ಭಾವನೆ ಹೋದ್ರೆ ಕಾಣದ ಮೋಕ್ಷ ನಮಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ನಿಸ್ವಾರ್ಥ,ನಿರಹಂಕಾರದಿಂದ ಭೂಮಿಯ ಮೇಲಿರುವಾಗಲೇ ನಮಗೆ ಒಂದು ಬಗೆಯ ಆನಂದದ ಅನುಭವ ಆಗದೇ ಇರದು. ಅದನ್ನು ಕುರಿತೇ ಬರೆದದ್ದು ಈ ಕವನ - ಕಳೆದುಹೋಗಬೇಕು "ನಾನು"

"ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇ
sಸ್ತಂ ಗಚ್ಛಂತಿ ನಾಮರೂಪೇ ವಿಹಾಯ|
ತಥಾ ವಿದ್ವಾನ್ನಾಮರೂಪಾದ್ವಿಮುಕ್ತಃ
ಪರಾತ್ ಪರಂ ಪುರುಷಮುಪೈತಿ ದಿವ್ಯಂ"                                              -- ಮುಂಡಕ ಉಪನಿಷದ್ ೩.೨.೮

'ಹೇಗೆ ಹರಿಯುತ್ತಿರುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಅದೃಶ್ಯವಾಗುವವೋ, ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರತ್ಪರನೂ ದಿವ್ಯನೂ ಆದ ಪುರುಷನನ್ನು ಹೊಂದುವನು.'
ಈ ಉಪನಿಷದ್ವಾಕ್ಯ ಪ್ರೇರಣೆಯಿಂದ ಬರೆದದ್ದು ಮೊದಲ ಚರಣ - ನಾವು ನಮ್ಮ ಅಹಂ ಅನ್ನು ತೊರೆದು ಎಲ್ಲರಲ್ಲಿ ಒಂದಾಗಿ ಬೆರೆಯಬೇಕು - ಸಮುದ್ರದಲ್ಲಿ ಬೆರೆವ ನದಿಯ ಹಾಗೆ. ಅಲ್ಲಿ 'ನಾನು-ತಾನು' ಎಂಬ ಭಾವವಿರಬಾರದು.

ಪೊದೆಗಳ ನೇಪಥ್ಯದಿಂದ ಕೇಳಿಬರುವ ಮಧುರಗೀತೆಯನ್ನು ನಾವು ಕೇಳಿ ಬಲ್ಲೆವೇ ಹೊರತು ಯಾವ ಹಾಡನ್ನು ಯಾವ ಹಕ್ಕಿ ಹಾಡುತ್ತಿದೆ ಎಂದೇನೂ ನಾವು ಹುಡುಕಾಡುವುದಿಲ್ಲ. ಹಾಡುತ್ತಿರುವ ಹಕ್ಕಿಗೂ 'ಹಾಡಿದ್ದು ತಾನೇ' ಎಂದು ತೋರಿಸಿಕೊಳ್ಳುವ ಹಂಬಲವೇನೂ ಇರುವುದಿಲ್ಲ. ಅಂತೆಯೇ ಆಗಸದಿಂದ ಧರೆಗಿಳಿವ ಮಳೆಹನಿ ಕೂಡ - ತನ್ನ ಅಸ್ತಿತ್ವವನ್ನು ಪ್ರತ್ಯೇಕವಾಗಿ ತೋರ್ಪಡಿಸಿಕೊಳ್ಳುವ ಇಚ್ಛೆ ಅದಕ್ಕಿರುವುದಿಲ್ಲ. ಹೆಸರೇ ಇಲ್ಲದೆ ಕಾಡು-ಮೇಡುಗಳ ನಡುವೆ ಹರಿದು ನದಿಯನ್ನು ಕೂಡಿಕೊಳ್ಳುವ ಝರಿಗಳೆಷ್ಟೋ! ನೌಕಾಯಾನದಲ್ಲಿ ಹಡಗಿಗೆ ಸಹಕರಿಸಿ ಸಾಗುವ ಸಾಗರದ ಅಲೆಗಳು ಅದೆಷ್ಟೋ! ಅವು ಯಾವೂ ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಹಂಬಲಿಸುವುದಿಲ್ಲ.

ಪ್ರತಿ ಬೀಜವೂ ವೃಕ್ಷವಾಗಬಲ್ಲ ಸಂಭವನೀಯತೆ ಇದೆ. ಆದರೆ ಅದು ತತ್ ಕ್ಷಣಕ್ಕೆ ಆಗುವಂಥದ್ದದಲ್ಲ, ಬೀಜವೊಂದು ವೃಕ್ಷವಾಗಿ ಬೆಳೆಯಲು ಸಾಕಷ್ಟು ಸಮಯ ಬೇಕು. ಹಾಗೆ ಬೆಳೆಯಲು ಅದಕ್ಕೆ ತಾಳ್ಮೆಯೂ ಇರಬೇಕು. ಹಾಲಿನೊಳಗಿನ ಬೆಣ್ಣೆ ಪ್ರಕಟವಾಗಬೇಕಾದರೂ ಹಾಗೆಯೇ, ಅದು ತಕ್ಷಣಕ್ಕೆ ಕಾಣುವುದಿಲ್ಲ. ಸಂಸ್ಕರಣೆ ಹೊಂದುವವರೆಗೂ ಬೆಣ್ಣೆ ಆಗೋಚರವಾಗಿಯೇ ಇರುತ್ತದೆ. ತಕ್ಕ ಸಮಯದಲ್ಲಿಯೇ ಅದು ನಮಗೆ ಸಿಗುವುದು. ಇಲ್ಲಿ ಕೂಡ ತಾಳ್ಮೆಯ ಅವಶ್ಯಕತೆಯಿದೆ. ಇನ್ನು, ಪ್ರತಿಯೊಬ್ಬರಲ್ಲೂ ಪರಮಾತ್ಮನಿದ್ದಾನೆ. ಅವನು ಕೂಡ ತಕ್ಷಣಕ್ಕೆ ನಮಗೆ ಸಾಕ್ಷಾತ್ಕಾರವಾಗುವುದಿಲ್ಲ, ನಮ್ಮೊಳಗಿನ ಅವನನ್ನು ಅರಿಯಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ - ಆ ಯತ್ನಕ್ಕೆ ಫಲವಾಗಿ - ಅವನು ನಮಗೆ ಗೋಚರಿಸುತ್ತಾನೆ.

No comments:

Post a Comment