Friday 18 October 2013

ಚಂದ್ರಹಾಸ ಉಪಾಖ್ಯಾನ - ಭಾಗ ೩

ಚಂದ್ರಹಾಸನು ನಾಲ್ಕು ಜನ ಸೇವಕರೊಡಗೂಡಿ ಕುಂತಳನಗರದ ಹೊರವಲಯವನ್ನು ತಲುಪುತ್ತಾನೆ. ಅಲ್ಲಿ ತೊರೆಯೊಂದರ ಬಳಿ ಕುದುರೆಗಳನ್ನು ನಿಲ್ಲಿಸಿ, ಅವಕ್ಕೆ ಮೇವನ್ನು ಕೊಟ್ಟು ಅಲ್ಲಿಯೇ ಇರಲೆಂದು ತನ್ನ ಸೇವಕರಿಗೆ ತಿಳಿಸಿ ತಾನು ಹರಿಯ ಪೂಜಾರ್ಥವಾಗಿ ಹತ್ತಿರದಲ್ಲಿದ್ದ ಒಂದು ಉಪವನಕ್ಕೆ ಬರುತ್ತಾನೆ.
ಅಲ್ಲಿದ್ದ ಹೂಗಳಿಂದ ಹರಿ ಪೂಜೆಯನ್ನು ಮಾಡಿತಾನು ತಂದ ಬುತ್ತಿಯ ಆಹಾರವನ್ನು ತಿಂದ ಬಳಿಕ ಚಂದ್ರಹಾಸನು ಅಲ್ಲಿಯೇ ಹತ್ತಿರವಿದ್ದ ಮಾವಿನ ಮರವೊಂದರ ನೆರಳಿನಲ್ಲಿ ಮಲಗುತ್ತಾನೆ.

ಹೀಗೆ ಅವನು ಮಾರ್ಗಾಯಾಸದಿಂದ ಮಲಗಿ ನಿದ್ರಿಸುತ್ತಿರಲು ಅಲ್ಲಿಗೆ ದುಷ್ಟಬುದ್ಧಿಯ ಮಗಳಾದ ವಿಷಯೆಯು ಬರುತ್ತಾಳೆ. ಮಾವಿನ ಮರದ ತಡಿಯಲ್ಲಿ ಹಾಯಾಗಿ ಮಲಗಿ ನಿದ್ರಿಸುತ್ತಿದ್ದ ಸುಂದರ ರೂಪದ ಚಂದ್ರಹಾಸನನ್ನು ಕಂಡು ಮನಸೋತು ಅಲ್ಲಿಯೇ ನಿಲ್ಲುತ್ತಾಳೆ.
"ಯಾರೀತಯಕ್ಷನೋಗಂಧರ್ವನೋ,  ಅಥವಾ ಕಿನ್ನರ-ಕಿಂಪುರುಷನೋಯಾರಿವನು..ಮಾನವರಂತು ಇಷ್ಟು ಸುಂದರವಾಗಿರುವರೆಂದು ನಾನರಿಯೆ.. ಈತ ಯಾರೋ ದೇವಚರನೇ ಇರಬೇಕು" ಎಂದು ಯೋಚಿಸಿಮುಂದೇನು ಮಾಡಬೇಕೋ ತಿಳಿಯದೆ ಆತನನ್ನೇ ನೋಡುತ್ತ ನಿಂತಿರುತ್ತಾಳೆ.
ಆಗ ಆತನ ಸೆರಗಿನಂಚಿನಲ್ಲಿದ್ದ ಪತ್ರವೊಂದು ಆಕೆಯ ಕಣ್ಣಿಗೆ ಬೀಳುತ್ತದೆ. “ಈತ ಸುಖನಿದ್ರೆಯಲ್ಲಿದ್ದಾನೆ. ಇವನು ಎಚ್ಚರಗೊಳ್ಳುವ ಮುನ್ನ ಪತ್ರದೊಳಗೆ ಏನಿದೆಯೆಂದು ನೋಡುವ ವಿಪರೀತ ಕುತೂಹಲದಿಂದ ಅದನ್ನು ತೆಗೆದುಕೊಂಡು ನೋಡುತ್ತಾಳೆ.
ಅರೆ! ಇದರ ಮೇಲೆ ತನ್ನ ತಂದೆ ದುಷ್ಟಬುದ್ಧಿಯ ಮುದ್ರೆಯಿದೆ!’.  ಸರಿಈಗ ಆಕೆ ಪತ್ರವನ್ನು ತೆರೆದು ಓದುತ್ತಾಳೆ :


ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು
ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ
ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆಮೇಲೆ ನಮ್ಮ
ಸೀಮೆಗರಸಾದಪಂ ಸಂದೇಹಮಿಲ್ಲಿದಕೆ,
ಸಾಮಾನ್ಯದವನಲ್ಲನಮಗೆ ಮುಂದಕೆ ಸರ್ವ
ಥಾಮಿತ್ರನಹವನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು.

ಹೊತ್ತುಗಳೆಯದೆ ಬಂದ ಬಳಿಕಿವನ ಕುಲಶೀಲ
ವಿತ್ತ ವಿದ್ಯಾವಯೋ ವಿಕ್ರಮಂಗಳನೀಕ್ಷಿ
ಸುತ್ತಿರದೆ ವಿಷವ” ಮೋಹಿಸುವಂತೆ ಕೊಡುವುದೀತಂಗೆ ನೀನಿದರೊಳೆಮಗೆ
ಉತ್ತರೋತ್ತರಮಪ್ಪುದೆಂದು” ಬರೆದಿಹ ಲಿಪಿಯ
ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ
ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು!"

ವಾಸ್ತವವಾಗಿ ದುಷ್ಟಬುದ್ಧಿಯು ಬರೆದ ಪತ್ರದ ಅರ್ಥ ಇದು : " ಪತ್ರವನ್ನು ತಂದಿರುವ ಚಂದ್ರಹಾಸ ಮಹಾ ಅಹಿತ ನಮಗೆ(ಮಹಾ+ಅಹಿತ)ಇವನು ಮುಂದೆ ನಮ್ಮ ರಾಜ್ಯಕ್ಕೆ ಅರಸನಾಗುವವನುಇದರಲ್ಲಿ ಸಂದೇಹವಿಲ್ಲ. ಇವನು ಮುಂದೆ ನಮಗೆ ಎಂದಿಗೂ ಅಮಿತ್ರನಾಗಿರುತ್ತಾನೆ(ಸರ್ವಥಾ+ಅಮಿತ್ರ). ಅದಕ್ಕಾಗಿಯೇ ನಾನು ಇವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ.
ಸುಮ್ಮನೆ ಇವನ ಕುಲ-ಗೋತ್ರ ವಿದ್ಯೆ-ವಿತ್ತಗಳ ಬಗೆಗೆ ಪ್ರಶ್ನಿಸುತ್ತ ಕಾಲವ್ಯಯ ಮಾಡದೆ ಇವನು ಈ ಪತ್ರವನ್ನು ನಿನಗೆ ತಲುಪಿಸಿದ ಕೂಡಲೆ ಇವನಿಗೆ "ವಿಷವನ್ನು" ಕೊಟ್ಟು ಕೊಂದುಬಿಡು...

ಆದರೆ ವಿಧಿಲಿಖಿತವನ್ನು ಬದಲಾಯಿಸಲಾಗುವುದೇ? ಈ ಪತ್ರವನ್ನು ಚಂದ್ರಹಾಸ ಮದನನಿಗೆ ತಲುಪಿಸುವ ಮುನ್ನವೇ ವಿಷಯೆ ಇದನ್ನು ಓದಿಬಿಟ್ಟಿದ್ದಾಳೆ . ತನ್ನ ತಂದೆಯ ಕುಟಿಲತೆಯನ್ನರಿಯದ ವಿಷಯೆ ಆ ಪತ್ರದ ಅರ್ಥವನ್ನು ಬೇರೆ ರೀತಿಯಾಗಿಯೇ ಗ್ರಹಿಸುತ್ತಾಳೆ.

"ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ
ಗೀತನರಸಹನೆಂದು ಕುಲಶೀಲ ವಿದ್ಯೆಗಳ
ನೀತನೊಳರಸಬೇಡವೆಂದು ಮುಂದಕೆ ಸರ್ವಥಾ ಮಿತ್ರನಹವನೆಂದು
ಈತಂಗೆ "ವಿಷಯೆ" ಮೋಹಿಸುವಂತೆ ಕೊಡುವುದೆಂ
ದಾ ತಾತನಣ್ಣಂಗೆ ಬರೆಸಿ ಕಳುಹಿದ ಪತ್ರ
ವೇ ತಪ್ಪದಿದು ವರ್ಣಪಲ್ಲಟ ಮೋಸವೆಂದಬಲೆ ಭಾವಿಸುತಿರ್ದಳು."

"ಈತನು ನಮಗೆ ಮಹಾ-ಹಿತನಾದವನು, ಮುಂದೆ ಈ ಧರೆಗೆ ಅರಸನಾಗುವವನು.. ಇವನು ಮುಂದೆ ನಮಗೆ ಸರ್ವಥಾ ಮಿತ್ರನಾಗಿರುತ್ತಾನೆ.. ಆದರಿಂದ ಈತನ ಕುಲಶೀಲಗಳ ಬಗ್ಗೆ ಪ್ರಶ್ನಿಸುತ್ತ ಕಾಲಹರಣ ಮಾಡದೆ ಬೇಗ ಈತನಿಗೆ ನಮ್ಮ 'ವಿಷಯೆ'ಯನ್ನು ಕೊಟ್ಟು ಮಾಡುವೆ ಮಾಡು " ಎಂದು ತನ್ನ ತಂದೆ ಬರೆಸಿದ ಪತ್ರವಿದು.. ವರ್ಣಪಲ್ಲಟದಿಂದ 'ವಿಷಯೆ' ಎನ್ನುವುದು 'ವಿಷವ' ಎಂದು ತಪ್ಪಾಗಿದೆ ಅಷ್ಟೇ, ಎಂದು ವಿಷಯೆ ಭಾವಿಸುತ್ತಾಳೆ.

ಕಡು ಚೆಲುವನಾದ ಈತನನ್ನು ನನಗೆ ವರನನ್ನಾಗಿ ನಿಶ್ಚೈಸಿ ಶೀಘ್ರವೇ ಈತನೊಂದಿಗೆ ನನ್ನ ವಿವಾಹವನ್ನು ನೆರವೇರಿಸಲೆಂದು ತನ್ನ ತಂದೆಯು ಇವನನ್ನು ಅಣ್ಣನ ಬಳಿಗೆ ಕಳುಹಿಸಿದ್ದಾನೆ ಅಷ್ಟೇ, ಇದರಲ್ಲಿ ಸಂದೇಹವಿಲ್ಲ.. ಆದ್ದರಿಂದ ಈ ಪತ್ರದಲ್ಲಿರುವ ದೋಷವನ್ನು ನಾನು ಸರಿಪಡಿಸುತ್ತೇನೆ ಎಂದಾಕೆ ಯೋಚಿಸುತ್ತಾಳೆ.

"ತರ್ಪಿದ್ದ ಲಿಪಿಯೊಳ್ 'ವ'ಕಾರಮಂ ತೊಡೆದಲ್ಲಿ
ಗೊಪ್ಪುವ 'ಯ'ಕಾರಮಂ ಕೆಲಬಲದ ಮಾಮರದೊ
ಳಿಪ್ಪ ನಿರ್ಯಾಸಮಂ ತೆಗೆದು ಕಿರುವೆರಳುಗುರ್ಗೊನೆಯಿಂದ ತಿದ್ದಿ ಬರೆದು
ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ
ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ
ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು."


ಹಾಗೆ ಆಲೋಚಿಸಿ ಆಕೆ ಪತ್ರದಲ್ಲಿದ್ದ 'ವ'ಕಾರದ ಬದಲಿಗೆ 'ಯ'ಕಾರವನ್ನು ತಿದ್ದಿ ಬರೆದು, ಪತ್ರವನ್ನು ಮುಂಚೆ ಇದ್ದಂತೆಯೆ ಇರಿಸಿ ಸದ್ದಾಗದಂತೆ ಅಲ್ಲಿಂದ ಹೊರಟುಹೋಗುತ್ತಾಳೆ.
---------------------------------------------------------------------------------------------
ಇತ್ತ ಮಧ್ಯಾಹ್ನದ ವೇಳೆಗೆ ಚಂದ್ರಹಾಸನು ನಿದ್ದೆಯಿಂದೆದೆಚ್ಚೆತ್ತು ಕುದುರೆಗಳನ್ನು ನಿಲ್ಲಿಸಿದ್ದ ಜಾಗಕ್ಕೆ ಬರುತ್ತಾನೆ. ನಂತರ ತನ್ನ ಅನುಚರರೊಡನೆ ಹೊರಟು ಮಂತ್ರಿಯ ಮನೆಯನ್ನು ತಲುಪುತ್ತಾನೆ. ಅಲ್ಲಿ ಮದನನು ಚಂದ್ರಹಾಸನನ್ನು ಆದರಿಸಿ ಬರಮಾಡಿಕೊಂಡು ಕುಶಲ ಪ್ರಶ್ನೆಗಳನ್ನು ಕೇಳಿ ನಂತರ ಬಂದ ಕಾರಣವನ್ನು ಕೇಳುತ್ತಾನೆ.
ಚಂದ್ರಹಾಸನು ದುಷ್ಟಬುದ್ಧಿಯು ಕೊಟ್ಟ ರಹಸ್ಯಪತ್ರವನ್ನು ಮದನನಿಗೆ ಒಪ್ಪಿಸಿ ಅದನ್ನು ಏಕಾಂತದಲ್ಲಿ ಓದಬೇಕೆಂದು ತಿಳಿಸುತ್ತಾನೆ. ಮದನನು ಅಂತೆಯೇ ಅದನ್ನು ಏಕಾಂತ ಪ್ರದೇಶದಲ್ಲಿ ಓದಿಕೊಂಡು, "ಚಂದ್ರಹಾಸನಿಗೆ ತನ್ನ ತಂಗಿಯನ್ನು ಕೊಟ್ಟು ವಿವಾಹ ನೆರವೇರಿಸುವ ಉತ್ತಮ ಕಾರ್ಯವನ್ನು ತಂದೆಯು ನನಗೆ ಒಪ್ಪಿಸಿದ್ದಾನೆ" ಎಂದು ಸಂತಸಪಡುತ್ತಾನೆ.

ನಂತರ ರಾಜ ಪುರೋಹಿತರನ್ನು ಕರೆಸಿ ಒಳ್ಳೆಯ ಮುಹೂರ್ತವನ್ನು ನಿಶ್ಚೈಸಿ ತನ್ನ ತಾಯಿ ತಾರಕಾಕ್ಷಿಗೂ, ತಂಗಿ ವಿಷಯೆಗೂ  ಮದುವೆಯ ವಿಷಯವನ್ನು ತಿಳಿಸಿ ಮುಂದಿನ ಏರ್ಪಾಟುಗಳಲ್ಲಿ ತೊಡಗುತ್ತಾನೆ.
ಮುಂದಿನ ಮೂರು ದಿನಗಳಲ್ಲಿ ದಿವ್ಯ ಮುಹೂರ್ತವೊಂದರಲ್ಲಿ ಚಂದ್ರಹಾಸ ಹಾಗು ವಿಷಯೆಯರ ವಿವಾಹ ಬಹು ವೈಭವದಿಂದ ನೆರವೇರುತ್ತದೆ.
---------------------------------------------------------------------------------------------

ಇತ್ತ ದುಷ್ಟಬುದ್ಧಿಯು ಚಂದನಾವತಿಯಲ್ಲಿ ಕುಳಿಂದಕನನ್ನು ಸೆರೆಯಲ್ಲಿರಿಸಿ ಕೂಡಲೆ ಕುಂತಳನಗರಕ್ಕೆ ಹೊರಟುಬರುತ್ತಾನೆ.

ತನ್ನ ಮಗ ಮದನನು ಈ ಹೊತ್ತಿಗಾಗಲೇ ತನ್ನ ಆದೇಶದಂತೆ ಚಂದ್ರಹಾಸನನ್ನು ಮುಗಿಸಿರುತ್ತಾನೆ ಎಂದು ಯೋಚಿಸುತ್ತ ಬಂದ ದುಷ್ಟಬುದ್ಧಿಗೆ ನಗರದಲ್ಲಿನ ಉತ್ಸವ-ವೈಭವಗಳನ್ನು ಕಂಡು ಆಶರ್ಯವಾಗುತ್ತದೆ. ಮದನನು ಚಂದ್ರಹಾಸ-ವಿಷಯೆಯರ ವಿವಾಹವನ್ನ್ನು ನೆರವೇರಿಸಿದ್ದನ್ನು ತಿಳಿದು ಅತ್ಯಂತ ಕ್ರುದ್ಧನಾಗುತ್ತಾನೆ.
ತನಗೆ ನಮಸ್ಕರಿಸಲು ಬಂದ ಮದುಮಕ್ಕಳನ್ನು ಉಪೇಕ್ಷಿಸಿ ನಡೆದು, ನಂತರದಲ್ಲಿ ಮದನನ್ನು ಏಕಾಂತದಲ್ಲಿ ಕರೆದು "ನಿನ್ನ ಒಳಿತನ್ನು ಬಯಸಿ ನಾನು ನಿನಗೆ ಒಪ್ಪಿಸಿದ ಕಾರ್ಯವನ್ನು ಸರಿಯಾಗಿ ಮಾಡದೆ ಹೀಗೆ ಎಲ್ಲವನ್ನು ಹಾಳುಮಾಡಿದೆ. ನಿನಗಿನ್ನು ವನವಾಸವೇ ಗತಿ ಹೋಗು, ಮೂಢ.." ಎಂದು ನಾನಾ ತರವಾಗಿ ಬಯ್ಯುತ್ತಾನೆ.
ತಂದೆಯು ಈ ರೀತಿ ಕೋಪಗೊಳ್ಳಲು ಕಾರಣವನ್ನು ಅರಿಯದ ಮದನನು "ನನ್ನಿಂದಾದ ಅಪರಾಧವೇನು ತಂದೆ? ನೀವು ಪತ್ರದಲ್ಲಿ ಬರೆದಿದ್ದಂತೆಯೇ ಚಂದ್ರಹಾಸ-ವಿಷಯೆಯರ ವಿವಾಹವನ್ನು ನೆರವೇರಿಸಿದೆನಲ್ಲ.." ಎಂದು ನುಡಿಯುತ್ತಾನೆ.
ದುಷ್ಟಬುದ್ಧಿಯು ಮತ್ತೆ ಮಗನನ್ನು ಬಯ್ದು ತಾನು ಬರೆದಿದ್ದ ಪತ್ರವನ್ನು ತರಿಸಿ ನೋಡುತ್ತಾನೆ. "ಅರೆ! ಇವನೆಂದಂತೆ ಈ ಪತ್ರದಲ್ಲಿ 'ವಿಷಯೆ ಮೊಹಿಸುವಂತೆ ಕೊಡುವುದು' ಎಂದೇ ಇದೆ.." ಹೇಗೆ! ಎಂದು ಅಚ್ಚರಿ ಪಡುತ್ತಾನೆ.
---------------------------------------------------------------------------------------------

'ವಿಧುಹಾಸನಂ ಪಲವುಪಾಯದಿಂದೀಗ ನಾಂ
ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ
ಳ್ವಧಿಕ ಸಂಪದಮಾಗದದರಿಂದ ಕುಲಘಾತಕಗೆ ಮದುವೆಯಾದ ವಿಷಯೆ
ವಿಧವೆಯಾಗಿರಲೆಂದು' ಹೃದಯದೊಳ್ ನಿಶ್ಚೈಸಿ
ಮಧುರೋಕ್ತಿಯಿಂದ ಮದುಮಕ್ಕಳಂ ಮನ್ನಿಸಿ ವಿ
ವಿಧ ವೈಭವಂಗಳಂ ನಡೆಸಿ ಜಾಮಾತನಂ ಮಂತ್ರಿ ಕರೆದಿಂತೆಂದನು -

          "ವೀರ ಬಾರೈ ಚಂದ್ರಹಾಸ ನೀನಿನ್ನೆಗಂ
          ದೂರಮಾಗಿರ್ದೆ ನಮಗಿನ್ನಳಿಯನಾದ ಬಳಿ
          ಕೂರ ಹೊರ ಬನದೊಳಿಹ ಚಂಡಿಕಾಲಯಕೆ ಮದುವೆಯ ನಾಲ್ಕನೆಯ ದಿನದೊಳು
          ನೀರಜಸಖನಸ್ತಮಯದೊಳೊರ್ವನೇ ಪೋಗಿ
          ಗೌರಿಯಂ ಪೂಜಿಸಿ ಬಹುದು ನಮ್ಮ ವಂಶದಾ
          ಚಾರಮಿದು ವರನಾದವಂಗೆ ನೀನಿಂದಿದಂ ಮಾಡೆಂದು" ನೇಮಿಸಿದನು.

ಆದದ್ದಾಯಿತು,. ಕುಲಘಾತಕನನ್ನು ಮದುವೆಯಾದ ನನ್ನ ಮಗಳು ವಿಧವೆಯಾದರೂ ಸರಿ , ಈಗಲಾದರೂ ಏನಾದರೊಂದು ಉಪಾಯದಿಂದ ಈ ಚಂದ್ರಹಾಸನನ್ನು ಮುಗಿಸಬೇಕು..... ಎಂದು ಬಗೆದು ದುಷ್ಟಬುದ್ಧಿಯು ಮದುಮಕ್ಕಳನ್ನು ಕರೆದು ಮನ್ನಿಸಿ ಮಾತನಾಡುತ್ತಾನೆ.
ಚಂದ್ರಹಾಸನನ್ನು ಕರೆದು "ಬಾರಯ್ಯ ಚಂದ್ರಹಾಸ, ಈಗ ನೀನು ನಮ್ಮ ಅಳಿಯ - ಅಂದರೆ ನಮ್ಮವನೇ ಆಗಿದ್ದೀಯೇ,. ಮದುವೆಯಾದ ನಾಲ್ಕನೆಯ ದಿನದಂದು ವರನು ಊರ ಹೊರಗಿನ ಚಂಡಿಕಾಲಯಕೆ ಒಬ್ಬನೇ ಹೋಗಿ ಪೂಜೆಗೈದು ಬರುವುದು ನಮ್ಮ ವಂಶದ ಆಚಾರ. ಆದರಿಂದ ನೀನಿಂದು ಸೂರ್ಯಾಸ್ತದ ನಂತರ ಒಬ್ಬನೇ ಆಲಯಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಾ" ಎಂದು ಹೇಳುತ್ತಾನೆ. ಚಂದ್ರಹಾಸನು ಅಂತೆಯೇ ಮಾಡುವೆನೆಂದು ಹೊರಡುತ್ತಾನೆ.

ಇತ್ತ ದುಷ್ಟಬುದ್ಧಿಯು ಗೂಢವಾಗಿ ಚಂಡಾಲರನ್ನು ಕರೆದು "ಈ ದಿನ ಸೂರ್ಯಾಸ್ತದ ಸಮಯಕ್ಕೆ ಒಬ್ಬನು ಪೂಜೆಗೈಯಲೆಂದು ಚಂಡಿಕಾಲಯಕ್ಕೆ ಬರುತ್ತಾನೆ. ನೀವು ಆಲಯದಲ್ಲಿ ಅಡಗಿಕೊಂಡಿದ್ದು ಅವನು ಬಂದ ತಕ್ಷಣವೇ ಅವನನ್ನು ಕೊಂದುಬಿಡಿ.. ಹಿಂದೆ ಮಾಡಿದಂತೆ ಮೋಸದಿಂದ ಅವನನ್ನು ಕೊಲ್ಲದೇ ಉಳಿಸದಿರಿ.." ಎಂದು ಹೇಳಿ ಅವರನ್ನು ಕಳಿಸುತ್ತಾನೆ.

(ಮುಂದುವರೆಯುವುದು..)


1 comment:

  1. (ಇಲ್ಲಿಯವರೆಗೆ ..)

    "ಈ ಪತ್ರವನ್ನು ತಂದಿರುವ ಚಂದ್ರಹಾಸನನ್ನು ಕೂಡಲೇ ವಿಷವೂಡಿಸಿ ಕೊಲ್ಲು" ಎಂಬ ಗೂಢ ಅರ್ಥವುಳ್ಳ ಓಲೆಯೊಂದನ್ನು ಬರೆದು, ಅದನ್ನು ತೆಗೆದುಕೊಂಡು ಹೋಗಿ ಕುಂತಳನಗರದಲ್ಲಿರುವ ತನ್ನ ಮಗ ಮದನನಿಗೆ ಏಕಾಂತದಲ್ಲಿ ಕೊಡಬೇಕೆಂದು ಮಂತ್ರಿ ದುಷ್ಟಬುದ್ಧಿಯು ಚಂದ್ರಹಾಸನನ್ನು ಕಳುಹಿಸುತ್ತಾನೆ.


    ಭಾಗ - ೨ರ ಲಿಂಕ್ http://acharya1989.blogspot.in/2013/09/1.html

    ReplyDelete