Monday, 18 May 2015

ಗಂಗೆ-ಗೌರಿ ಜಗಳ

ಬಹಳಷ್ಟು ಸಾರಿ ಜನಪದ ಸಾಹಿತ್ಯದಲ್ಲಿ ಕಂಡುಬರುವ ದೇವ-ದೇವಿಯರ ಚಿತ್ರಣ ಶಿಷ್ಟಸಾಹಿತ್ಯದಲ್ಲಿ ಕಂಡುಬರುವ ವರ್ಣನೆಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಏನೆಂದರೂ ಶಿಷ್ಟಸಾಹಿತ್ಯದಲ್ಲಿ ದೇವತೆಗಳಿಗೂ ನಮಗೂ ನಡುವೆ ಒಂದು ಮಟ್ಟಿನ ಅಂತರವಿದ್ದೇ ಇರುತ್ತದೆ. ರವೀಂದ್ರರು ಗೀತಾಂಜಲಿಯ ಗೀತೆಯೊಂದರಲ್ಲಿ ಹೇಳುವಂತೆ "Drunk with the joy of singing, I forget myself and call thee a friend who art my lord", ಒಮ್ಮೊಮ್ಮೆ ಭಕ್ತಿ ಪರವಶತೆಯಲ್ಲಿ ಹಾಗೆ ಆ ಅಂತರವನ್ನು ಮರೆತು ಏನನ್ನಾದರೂ ನುಡಿದುಬಿಟ್ಟರೂ ಕೂಡ ’ಆತ ದೇವರು, ನಾನು ಭಕ್ತ’ ಎನ್ನುವ ಸಂಗತಿ ಗೌಣವಾಗಿಯಾದರೂ ಕಂಡೇ ಕಾಣಿಸುತ್ತದೆ.  ಆದರೆ ಬಹುತೇಕ ಜನಪದ ಗೀತೆಗಳಲ್ಲಿ ಆ ಭೇದ ಕಾಣಿಸದು.! ಅವರಿಗೆ ದೇವತೆಗಳು ಎಲ್ಲೋ ದೂರದಲ್ಲಿದ್ದಂತೆನಿಸುವುದಿಲ್ಲ. ತಾವು ಆರಾಧಿಸುವ ಆ ದೈವಗಳು ತಮ್ಮ ದಿನನಿತ್ಯದ ಬದುಕಿನ ಒಂದು ಭಾಗವಾಗಿಯೇ ಕಾಣುತ್ತಾರೆ, ಅವರಿಗೆ. ರಾಗಿ ಬೀಸುವಾಗ, ಕಣ ಮಾಡುವಾಗ... ಅಷ್ಟೇಕೆ, ಮರದ ನೆರಳಿನಲ್ಲಿ ಆರಾಮವಾಗಿ ಕುಳಿತಾಗ ಕೂಡ ಅವರ ಅವರ ಪದಗಳೂ, ಆ ಪದಗಳಲ್ಲಿ ಬರುವ ಅವರ ದೇವತೆಗಳೇ ಅವರಿಗೆ ಜೊತೆಗಾರರು.
ತಾವು ಪೂಜಿಸುವ ದೇವದೇವಿಯರೂ ಕೂಡ ತಮ್ಮಲ್ಲಿ ಒಬ್ಬರಂತೆಯೇ ಕಾಣುತ್ತಾರೆ. ತಮ್ಮ ಮನೆಯ ಮಗನನ್ನೊ, ಅಣ್ಣತಮ್ಮಂದಿರನ್ನೊ  ಮಾತಾಡಿಸಿದಂತೆ ಮಾತಾಡುವಷ್ಟು ಸಲುಗೆ ಕಾಣುತ್ತದೆ ಅವರ ಪದಗಳಲ್ಲಿ. ಶಿಷ್ಟಸಾಹಿತ್ಯದಲ್ಲಿ ಅಂತಹ ರಚನೆಗಳೇ ಇಲ್ಲವೆಂದಲ್ಲ. ಆದರೆ, ಆ ಬಗೆಯ ಭಾವದ ಸೊಬಗು ಜನಪದ ಸಾಹಿತ್ಯದಲ್ಲಿ ಸರಳವಾಗಿ, ಸಹಜವಾಗಿ, ಅಷ್ಟೇ ಸೊಗಸಾಗಿ ವ್ಯಕ್ತವಾಗುತ್ತದೆ ಎಂದರೆ ತಪ್ಪಾಗಲಾರದು.

ಅವರು ತಮ್ಮ ದೇವರನ್ನು "ನಂಜನಗೂಡಲ್ಲಿ ನೆಂಟ ನೀನಿರುವಾಗ | ಎಂಟೆಂಟು ದಿನಕ ಬರುವೇನು ನಂಜುಂಡ | ಸೋಲಿಸಬೇಡ ಗೆಲಿಸಯ್ಯ||" ಎಂದು ಪ್ರಾರ್ಥಿಸುವುದೂ ಉಂಟು. "ಯಾಕೊ ಲಿಂಗಯ್ಯ ಮುಖನೆಲ್ಲ ಸಪ್ಪಗೆ | ನೋಡೋಕೆ ಬಂದೋರು ನಗುತಾರೆ ಲಿಂಗಯ್ಯ | ಕಾಲೀಗೆ ಬಿದ್ದೇವು ಕಲಿಯಾಗೊ ||" ಎಂದು ದೇವರಿಗೇ ಧೈರ್ಯ ಹೇಳುವುದೂ ಉಂಟು. ’ಅಲ್ಲಪ್ಪ, ಲಿಂಗಯ್ಯ, ನೀನೇ ಹೀಗೆ ಸಪ್ಪೆ ಮೋರೆ ಹಾಕ್ಕೊಂಡು ಕೂತುಬಿಟ್ರೆ ಹೇಗೆ. ನಿನ್ನ ನೋಡೋಕೆ ಬಂದವರಾದರೂ ಎನಂದುಕೊಂಡಾರು? ನಿನ್ನ ಕೊರಗು ಏನೇ ಇದ್ದರೂ ಅದನ್ನೆಲ್ಲ ಮರೆತು ಕಲಿಯಾಗು’ ಅಂತ ಬುದ್ಧಿ ಹೇಳುವಷ್ಟು ಸಲುಗೆ ಅವರಿಗೆ. ಸಾಮಾನ್ಯವಾಗಿ ಮಕ್ಕಳು ಅತ್ತಾಗ ಹೇಳುತ್ತೇವಲ್ಲ, "ಅಯ್ಯೊ, ಇಷ್ಟು ದೊಡ್ಡೋನಾಗಿ ಹೀಗೆಲ್ಲ ಅಳ್ತಾರಾ. ನೋಡ್ದೋರು ನಗ್ತಾರೆ ಅಷ್ಟೇ..", ಹಾಗೆ..

ಇನ್ನು, ಹಾಸ್ಯಕ್ಕೆಂದೊ ಅಥವಾ ಭಕ್ತಿಯಿಂದಲೊ, ಹಿಂದೆ ತಮ್ಮ ನೆಚ್ಚಿನ ದೇವತೆಗಳು ಮಾಡಿದ ಕೆಲಸಗಳನ್ನು ಕುರಿತು ಆಡುವುದೂ (ಆಡಿಕೊಳ್ಳುವುದೂ ಉಂಟು): "ಇಬ್ಬರ‍್ಹೆಂಡಿರ ಮೇಲೆ ಕದ್ದು ಸೂಳೆ ನೋಡಿದ | ಕಬ್ಬಿಣದ ಕದವ ಮುರಕೊಂಡು ವರದಯ್ಯ | ಎದ್ದಾನೆ ಸೂಳೆ ಮನೆಯಾಗೆ ||"
"ಹಾಲು ಅನ್ನಕೆ ಒಲಿದು ಜೇನು ಸಕ್ಕರೆಗೊಲಿದು | ಸೋಲಿಗರ ಹೆಣ್ಣೀಗೆ ಮನಸಾಗಿ - ಒಲಕೊಂಡು | ನೆಲೆಗೊಂಡ ಗಿರಿಯಲ್ಲಿ ಗೋಪಾಲ ||"

'ಗಂಗೆಗೂ ಗೌರೀಗೂ ಹತ್ತೀತು ಜಗಳ'

ಸವತಿ ಮತ್ಸರವೆನ್ನುವುದು ಆ ಗಂಗೆ-ಗೌರಿಯರನ್ನೂ ಬಿಟ್ಟಿದ್ದಲ್ಲ.! ಹರಿಹರನ "ಗಿರಿಜಾಕಲ್ಯಾಣ ಮಹಾಪ್ರಬಂಧ"ದಲ್ಲಿನ ಒಂದು ಸನ್ನಿವೇಶ:
ಅದು ಗಿರಿಜಾ-ಶಂಕರರ ವಿವಾಹ ಮಹೋತ್ಸವ .. ಮದುಮಗ ಮದುಮಗಳು ಎದುರುಬದುರಾಗಿ ನಿಂತಿದ್ದಾರೆ. ಶಾಸ್ತ್ರದಂತೆ ಗಿರಿಜೆ ಈಗ ಜೀರಿಗೆ-ಬೆಲ್ಲವನ್ನು ಶಿವನ ತಲೆಯ ಮೇಲಿಡಬೇಕು. ಆ ಕ್ಷಣಕ್ಕೆ ಶಿವನ ಜಟೆಯಲ್ಲಿನ ಗಂಗೆ ಕಾಣಿಸುತ್ತಾಳೆ ಆಕೆಗೆ. ಅದ್ದೆಲ್ಲಿತ್ತೊ, ಮತ್ಸರ ಜಾಗೃತವಾಗುತ್ತದೆ ಗಿರಿಜೆಗೆ:

"ಆನಿರಲ್ ಮತ್ತೊರ್ವಳ್ ಗಡ
ತಾನಿರ್ಪಳ್ ಜಡೆಯೊಳೆನುತೆ ಮುಳಿದಿಡುವಂತಾ
ಮಾನಿನಿ ಜೀರಿಗೆ ಬೆಲ್ಲದೊ
ಳಾನುತೆ ಶಿವನುತ್ತಮಾಂಗಮಂ ಪದೆದಿಟ್ಟಳ್" (೧೦.೯೧)

"ನಾನು ಇಲ್ಲೇ ಇರುವಾಗ ಇವಳಾರೊ ಶಿವನ ತಲೆಯನ್ನೇರಿ ಕುಳಿತುಬಿಟ್ಟಿದ್ದಾಳಲ್ಲ!" ಎಂದು ಮುನಿದಿಟ್ಟಳೋ ಎಂಬಂತೆ ಗಿರಿಜೆಯು ಜೀರಿಗೆ-ಬೆಲ್ಲವನು ಶಿವನ ಉತ್ತಮಾಂಗದ ಮೇಲಿರಿಸಿದಳು.

ಇಂತಹ ಸನ್ನಿವೇಶಗಳು ಜನಪದ ಸಾಹಿತ್ಯದಲ್ಲೂ ಇಲ್ಲದಿಲ್ಲ. ಹರಿಹರನ "ಗಿರಿಜಾಕಲ್ಯಾಣ"ದಲ್ಲಿನ ಗಿರಿಜೆಯು ತಪಸ್ಸು ಮಾಡಿ ಶಿವನನ್ನು ವರನನ್ನಾಗಿ ಪಡೆದಂತೆಯೇ "ಶ್ರೀ ಗೌರಿಯ ಮದುವೆ" ಲಾವಣಿಯಲ್ಲಿನ ಗೌರಿ ಕೂಡ ಬಹುಕಠಿಣ ತಪಸ್ಸನ್ನು ಮಾಡಿ ಶಿವನನ್ನು ಗಂಡನನ್ನಾಗಿ ಪಡೆದವಳು. ಅಂತಹ ಶಿವನು ಗಂಗೆಯನ್ನು ತನಗೆ ಸವತಿಯನ್ನಾಗಿ ತಂದಿಟ್ಟರೆ, ಪಾಪ, ಗೌರಿಗೆ ಹೇಗಾಗಬೇಡ! ಅದಕ್ಕೇ ಆಕೆ "ನಮ್ಮ ಅರಮನೆಗೆ ಬರಬೇಡಿ ಶಿವನೆ, ನಮ್ಮ ಮಂಚಕೆ ನೀವು ಹತ್ತಬೇಡಿ ಶಿವನೆ.." ಎಂದು ತನ್ನ ಪ್ರತಿರೋಧವನ್ನು ಪ್ರದರ್ಶಿಸಿದ್ದುಂಟು.

ಇನ್ನು, ಸವತಿ ಬಂದ ಮೇಲೆ ಅವರಿಬ್ಬರ ನಡುವೆ ಆಗಾಗ ನಡೆಯುವ ಜಗಳದ ಮಾತಂತೂ ಹೇಳುವುದೇ ಬೇಡ. ಇವರಿಬ್ಬರ ಜಗಳವನ್ನು ನೋಡಲಾರದೆ ಶಿವನು ಅವರಿಬ್ಬರನ್ನೂ ಭೂಮಿಯ ಮೇಲೆ ಬಿಟ್ಟು ತಾನು ಮಾತ್ರ ಹಾಯಾಗಿ ಕೈಲಾಸಕ್ಕೆ ಹೋಗಿ ಸೇರಿಕೊಂಡ. ಪಾಪ, ಇಲ್ಲಿ ದಿನವೂ ಇವರ ನಡುವೆ ಕಿತ್ತಾಟ...
ಆ ಜಗಳಗಳಲ್ಲಿ ಒಂದರ ಕತೆಯನ್ನು ಈ ಲಾವಣಿಯೊಂದು ಬಹಳ ಸುಂದರವಾಗಿ ಸೆರೆಹಿಡಿದಿದೆ

ಜಿ.ಶಂ.ಪರಮೇಶ್ವರಯ್ಯನವರು ಸಂಪಾದಿಸಿರುವ "ಜಾನಪದ ಖಂಡಕಾವ್ಯಗಳು" ಕೃತಿಯಲ್ಲಿನ "ದೊಂಬಿದಾಸರ ಲಾವಣಿಗಳು" ಎಂಬ ಶೀರ್ಷಿಕೆಯಡಿಯಲ್ಲಿ ಸಂಗ್ರಹಿಸಲ್ಪಟ್ಟ ಲಾವಣಿ ಈ ’ಗಂಗೆಗೂ ಗೌರೀಗೂ ಹತ್ತೀತು ಜಗಳ’

ಗಂಗೆ-ಗೌರಿ ಜಗಳ

ಒಂದು ದಿನ ಪಾರ್ವತಿಯು ತನ್ನ ಮಗ ಈರಣ್ಣ(ವೀರಭದ್ರ) ಬೆಳೆಸಿದ ಹೂದೋಟದಲ್ಲಿ ಅರಳಿದ ಮಲ್ಲಿಗೆ, ಸಿರಿಜಾಜಿ, ಸಂಪಿಗೆ ಹೂಗಳನ್ನೆಲ್ಲ ಕೊಯ್ದಳು. ಅವುಗಳಲ್ಲಿ ಚೆನ್ನಾಗಿದ್ದ ಹೂಗಳನ್ನೆಲ್ಲ ಆರಿಸಿಕೊಂಡು ಅವನ್ನು ತನಗೇ ಇಟ್ಟುಕೊಂಡು, ಒಣಗಿದ , ಬಾಡಿದ ಹೂಗಳನ್ನೆಲ್ಲ ಒಂದು ತಟ್ಟೆಯಲ್ಲಿ ಸುರಿದು ಅವನ್ನು ತನ್ನ ಸವತಿಯಾದ ಗಂಗೆಗೆ ಕೊಟ್ಟು ಬಾ ಎಂದು ಈರಣ್ಣನನ್ನು ಕಳಿಸಿದಳು.

ಸರಿ, ಈರಣ್ಣ ಆ ಹೂಗಳನ್ನು ಗಂಗೆಯ ಮನೆಗೆ ತಂದುಕೊಟ್ಟ. ಗಂಗೆ ಈರಣ್ಣ ತಂದ ಹೂಗಳನ್ನು ನೋಡುತ್ತಾಳೆ! ಎಲ್ಲ ಬಾಡಿದ ಹೂಗಳು. ಅವಳಿಗೆ ಕೋಪ ಬಂದು :-
"ಒಳ್ಳೊಳ್ಳೆ ಹುವ್ವನೆಲ್ಲ ನಿಮ್ಮವ್ವ ಮುಡಿದು
ಸಂಪಾಗೆ ಸಿರುಜಾಜಿ ಪಾರ್ವತಿ ಮುಡಿದು
ಮುಡಿದು ಮಿಕ್ಕ ಹೂವ ನನಗೆ ಕಳಿಸ್ಯಾಳು
ಬಾಡಿ ಬತ್ತಿದ ಹೂವು ಬೇಡಾವು ನನಗೆ
ಒಣಗೀ ಹೋದಾ ಹೂವು ಏಕಯ್ಯ ನನಗೆ" ಎನ್ನುತ್ತ ಆ ಹೂಗಳನ್ನೆಲ್ಲ ಚೆಲ್ಲಿ ಬಿಸಾಡುತ್ತಾಳೆ.

ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಗೌರಿ ಅದನ್ನು ಕಂಡು "ಏನೆ ಹಿರಿಗಂಗೆ ಹೂವ ಚೆಲ್ಲಿದೆಯಾ?" ಅಂತ ಕೇಳುತ್ತಾಳೆ. ಅದಕ್ಕೆ ಆಕೆ :-
ಗಂಗೆ : ಸಾಲಾದಂತಲು ನಾನು ಚೆಲ್ಲೀದೆ ಕಾಣೆ
ಗೌರಿ: ಸಾಲಾದೆ ನನ ಕೂಡೆ ಸರಿ ಬಂದೀಯೇನೆ?
ಗಂಗೆ: ಸರಿಯವ್ಳು ನಾನಲ್ದೆ ಸವತಿಯಾಗಾದೆ?
ಗೌರಿ: ಈಡು ಸಮನವಳಲ್ಲ ಶಿವನಂಗೆ ತಂದ..
ಹೀಗೇ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಭಾರೀ ಜಗಳವೇ ಶುರುವಾಗುತ್ತದೆ.

"ಜಡೆ ಜಡೆ ಹಿಡಕೊಂಡು ಜಗಳವಾಡಿದರು
ಹೊರಸೆರಗ ಹಿಡಕೊಂಡು ವೈರವಾಡಿದರು
ಮುಂದಲೆ ಹಿಡಕೊಂಡು ತರದಾಡಿದರು
ಎರಡು ಮೂರು ಪೆಟ್ಟೆ ಹೊಡೆದಾಳೆ ಗೌರಿ...."

ಹೀಗೆ ಗಂಗೆಗೂ ಗೌರಿಗೂ ಮಾರಾಮಾರಿ ಶುರುವಾಗುತ್ತದೆ. ಅವರು ಜಗಳವಾಡುವ ಚಿತ್ರಣವಾದರೂ ಎಷ್ಟು ನೈಜವಾಗಿದೆ ನೋಡಿ. ಹೆಂಗಸರ ಜಗಳವೆಂದರೆ ಬೇರೆ ಹೇಳಬೇಕೆ. ಮಾತಿಗೂ ಸೈ, ಹೊಡೆದಾಡಲೂ ಸೈ. ಸಾಮಾನ್ಯವಾಗಿ ಹೆಂಗಸರು ಹೀಗೆ ಜಗಳವಾಡುವಾಗ ಹಿಂದಿನ ಸಂಗತಿಗಳನ್ನು ಎತ್ತಿ ಆಡುವುದು ಸಹಜವೇ. ಇಲ್ಲಿ ಕೂಡ ಅದೇ ಕಾಣುತ್ತೇವೆ:
"ಬೇಟೇಗೆ ಹೋದ ಶಿವನ ಬೆನ್ನಾಡಿ ಬಂದೆ .... ಕೂಡಿ ನೀ ಬಂದಲ್ಲೆ ಕುಲಗೆಟ್ಟ ಗಂಗೆ" ಎಂದು ಗೌರಿ ಗಂಗೆಯನ್ನು ಆಡಿಕೊಳ್ಳುತಾಳೆ. ಗಂಗೆಯೂ ದಿಟ್ಟೆಯೇ, "ಕೂಡಿ ನಾ ಬಂದಾರೆ ಕುಲವಿಲ್ಲವೇನೆ?" ಎಂದು ಗೌರಿಗೆ ಸವಾಲು ಹಾಕುತ್ತಾಳೆ ಆಕೆ.
ಮಾತು ಅಲ್ಲಿಗೇ ನಿಲ್ಲದೆ, ಗಂಗೆ ಗೌರಿಯನ್ನು "ಎಲೆಯ ಮಾರುವರಲ್ಲೆ ಎಡ್ದ ನನ ಸವತಿ.... ಎಲೆಯ ಕಟ್ಟುವರಲ್ಲೆ ನಿಮ್ಮಪ್ಪದೀರು..." ಅಂತ ಹೇಳಿ ಹಂಗಿಸುತ್ತಾಳೆ. ಅದಕ್ಕೆ ಪ್ರತಿಯಾಗಿ ಗೌರಿ "ಮೀನು ಮಾರುವರಲ್ಲೆ ನಿಮ್ಮಣ್ಣದೀರು... ತೆಪ್ಪ ಕಟ್ಟುವರಲ್ಲೆ ನಿಮ್ಮಪ್ಪದೀರು..." ಎಂದು ಆಡಿತೋರಿಸುತ್ತಾಳೆ.
ನೋಡಿ, ಎಲ್ಲಿಂದ ಎಲ್ಲಿಗೆ ಹೋಯಿತು ಜಗಳ. ಪರಸ್ಪರರ ಅಪ್ಪ ಅಣ್ಣ, ಕುಲ ಗೋತ್ರಗಳನ್ನೂ ಆಡಿಕೊಂಡು ಜಗಳಕ್ಕಿಳಿಯುತ್ತಾರೆ.
ಅಷ್ಟು ಸಾಲದೆಂಬಂತೆ, ಪಾಪ, ಅಲ್ಲೇ ಇದ್ದ ಈರಣ್ಣನನ್ನು "ನೋಡಿದ ನನ ಕಂದ ಗಂಗೆ ಮಾತುಗಳ...." "ನೋಡಿದ ನನ ಕಂದ ಗೌರಿ ಮಾತುಗಳ.." "ಬೆಸ್ತಾರ ಹುಡಿಗ್ಯಾಡೊ ಮಾತ ಕೇಳಯ್ಯ.." "ಶಿವಭದ್ರನ ಹುಡಿಗ್ಯಾಡೊ ಶೀಲ ನೋಡಯ್ಯ.." ಎನ್ನುತ್ತ ಒಬ್ಬರನ್ನೊಬ್ಬರು ಅಣಕಿಸಿಕೊಂಡು ಅವನಿಗೆ ನ್ಯಾಯವನ್ನೊಪ್ಪಿಸುತ್ತಾರೆ.
ಪಾಪ, ಅವನಾದರೂ ಏನು ಮಾಡಿಯಾನು. ಇಬ್ಬರು ಹೆಂಗಸರು ಜಗಳವಾಡುವಾಗ ಹೀಗೆ ಮಧ್ಯೆ ನ್ಯಾಯ ಹೇಳಲು ಹೋದವನಿಗೆ ಗತಿಯುಂಟೇ?
ಅದೂ ಸಾಲದೆಂಬಂತೆ ಗೌರಿಯ "ಬಾರೆಲ್ಲ ಈರಣ್ಣ ಗುಂಡಿಗೆ ಮುರಿಯೋ.." ಎಂಬ ಆದೇಶ ಬೇರೆ. ಅದಕ್ಕೆ ಗಂಗಮ್ಮನ "ಈರಣ್ಣ ಒದೆಯಾಕೆ ಹಿಡಿದು ಕಟ್ಟಿಸುವೆ.." ಅನ್ನೋ ಉತ್ತರ. ಪಾಪ, ಈರಣ್ಣನ ಪಾಡು ಕಷ್ಟವೇ!

ಜಗಳ ಮತ್ತೆ ಮುಂದುವರೆಯುತ್ತದೆ. ಈಡು ಸರಿಯಿಲ್ಲದವಳನ್ನು ಶಿವನು ಯಾಕಾದರೂ ತಂದನೋ ಎಂದು ಗೌರಿ ಮತ್ತೊಮ್ಮೆ ಆಡಿಕೊಳ್ಳುತ್ತಾಳೆ ಕೂಡ.
ಮತ್ತೆ "ಜಡೆ ಜಡೆ ಹಿಡಕೊಂಡು ಜಗಳವಾಡಿದರು
        ಮುಂದಲೆ ಹಿಡಕೊಂಡು ಕದನವಾಡಿದರು"
ಒಬ್ಬರನ್ನೊಬ್ಬರು ಹೊಡೆದಾಡುವುದೂ ನಡೆಯುತ್ತದೆ. "ನನ ಕೈ ಬರುತದೆ ತಪ್ಪಿಸಿಕೊಳ್ಳೆ" ಎಂದು ಗಂಗಮ್ಮ ಕೈಯೆತ್ತಿ ಗೌರಿಯನ್ನು ಹೊಡೆಯಬೇಕು, ಆ ಹೊತ್ತಿಗೆ ಗೌರಿ ಬಹಿಷ್ಟೆಯಾಗುತ್ತಾಳೆ.

ಇಲ್ಲಿಗೆ ಲಾವಣಿಯ ಒಂದು ಮಜಲು ಮುಗಿಯುತ್ತದೆ. ಮುಂದಿನ ಕಥೆಯಲ್ಲಿ ಗಂಗೆಯದೇ ಮೇಲುಗೈ.

ಗೌರಿ ಬಹಿಷ್ಟೆಯಾದ ಸುದ್ದಿ ತಿಳಿದ ಗಂಗೆ ಇದೇ ಅವಳಿಗೆ ಬುದ್ಧಿ ಕಲಿಸಲು ಸರಿಯಾದ ಸಂದರ್ಭವೆಂದು ಬಗೆದು ಭೂಮಿಯ ಮೇಲೆ ಎಲ್ಲಿಯೂ ನೀರೇ ಸಿಗದಂತೆ ಮಾಡಿಬಿಡುತ್ತಾಳೆ.
"ಉಗರಷ್ಟೆ ವಿಭೂತಿ ಭೂಮಿ ಮ್ಯಾಲ್ಹಾಕಿ
ಸುತ್ತೇಳು ಸಮುದ್ರವೆ ಬತ್ತೋಗಲೆಂದು
ಹಕ್ಕಿ ಕುಡಿಯೋಷ್ಟು ನೀರಿಲ್ಲ ಗಂಗೆ
ನೀರು ಮಾಯಮಾಡಿ ನಿಜವಾದ ಗಂಗೆ.."

ಇತ್ತ ಗೌರಿ ಮನೆಯ ಹೊರಗೆ ಕುಳಿತಿದ್ದಾಳೆ. ಈರಣ್ಣನನ್ನು ಕರೆದು ತನ್ನ ಸ್ನಾನಕ್ಕೆ ನೀರನ್ನಿಡಲು ಹೇಳಿದಾಗ ಈರಣ್ಣ ಮನೆಯಲ್ಲಿ ನೀರಿಲ್ಲವೆಂದು ತಿಳಿಸುತ್ತಾನೆ. ’ಸರಿ, ಕೊಳಕ್ಕೆ ಹೋಗಿ ನೀರು ತಾ ಮಗನೆ’ ಎಂದು ಸುತ್ತಮುತ್ತ ಇರುವ ಕೊಳಗಳಿಗೆಲ್ಲ ಕಳುಹಿಸುತ್ತಾಳೆ. ಈರಣ್ಣ ಯಾವ ಕೊಳಕ್ಕೆ ಹೋದರೂ ಎಲ್ಲಿಯೂ ಅವನಿಗೆ ನೀರೇ ಇರುವುದಿಲ್ಲ!

ಗೌರಿ: ಕಾವೇರಿ ಕಪಿನೀಲಿ ನೀರ ತಾ ಕಂದ
ಈರಣ್ಣ: ಕಾವೇರಿ ಕಪಿನೀಲಿ ಕಾಣಬರಲಿಲ್ಲ
ಗೌರಿ: ಯಮುನಾ ತುಂಗಭದ್ರಾ ನೀರ ತಾ ಮಗನೆ
ಈರಣ್ಣ: ಯಮುನಾ ತುಂಗಾದಲ್ಲಿ ಹೆಸರಿಗಿಲ್ಲಮ್ಮ
ಗೌರಿ: ಇನ್ನೇಕೆ ನನ ಕಂದ ನಾನು ಬಾಳುವುದು
ಈರಣ್ಣ: ನಾನೇನು ಮಾಡಲಮ್ಮ ನನ್ನೆತ್ತ ತಾಯಿ
ಗೌರಿ: ಇದೆಲ್ಲ ನನ ಸವತಿ ಗಂಗೆ ಮಾಯಗಳು

ಕೊನೆಗೆ ಪ್ರಯಾಣಕ್ಕೆ ಬೇಕಾದಷ್ಟು ರೊಕ್ಕವನ್ನು ಕೊಟ್ಟು ಈರಣ್ಣನನ್ನು ಕಾಶಿಗೆ ಕಳುಹಿಸುತ್ತಾಳೆ ಗೌರಿ, ನೀರು ತರಲೆಂದು. ಈರಣ್ಣ ಕಾಶಿಗೆ ಹೋದರೂ ಅಲ್ಲಿಯೂ ನೀರು ಸಿಗುವುದಿಲ್ಲ. ಸರಿ, ಅಷ್ಟು ದೂರದ ಪ್ರಯಾಣದಿಂದ ಬಳಲಿ ಬೆಂಡಾಗಿ, ತಂದಿದ್ದ ರೊಕ್ಕವೆಲ್ಲ ವ್ಯಯವಾಗಿಹೋದರೂ, ಕೊನೆಗೂ ನೀರು ಸಿಗದೇ ಇದ್ದ ಕಾರಣ ಬೇಸರದಿಂದ ಈರಣ್ಣ ಮತ್ತೆ ಮನೆಯ ಕಡೆಗೆ ಹೊರಟ.
ಈರಣ್ಣ ಬರುವ ದಾರಿಯನ್ನು ಮರೆಯಲ್ಲಿದ್ದ ಗಂಗೆ ನೋಡುತ್ತಾಳೆ. ಪಾಪ, ಈರಣ್ಣ ಬಹಳ ಸೊರಗಿದ್ದಾನೆ, ಬಳಲಿದ್ದಾನೆ.
"ನನ ಸವತಿ ಗೌರಿ ಮಗ ಹಸಿದು ಹೋಗುತವನೆ
ನೀರು ಇಲ್ಲದೆ ಕಂದ ಬಳ್ಳೋಗುತಾನೆ
ಹಸ್ತು ಹೋಗುವನಿಗೆ ನೀರ ಕೊಟ್ಟರೆ
ನೀರ ಕುಡಿದು ಕಂದ ಊರಿಗೋಗುತಾನೆ"
ಎಷ್ಟೆಂದರೂ ಗಂಗೆಗೂ ಈರಣ್ಣ ವರಸೆಯಲ್ಲಿ ಮಗನೇ ಅಲ್ಲವೆ. ಅದಕ್ಕಾಗಿ ಅವಳ ಕರುಳೂ ಮಿಡಿಯುತ್ತದೆ - ’ಅಯ್ಯೊ, ಮಗು ಹಸಿದುಕೊಡು ಹೊರಟಿದ್ದಾನಲ್ಲ’ ಅಂತ. ಅವನ ಬಾಯಾರಿಕೆಯನ್ನು ತೀರಿಸಲೆಂದು ಅವನಿಗೆ ಸಣ್ಣದೊಂದು ಹಳ್ಳದಲ್ಲಿ ನೀರು ಕಾಣಿಸುವಂತೆ ಮಾಡುತ್ತಾಳೆ, ಗಂಗೆ. ತನ್ನ - ಗೌರಿಯ ನಡುವೆ ಪರಸ್ಪರ ಮನಸ್ತಾಪಗಳು ಎಷ್ಟೇ ಇದ್ದರೂ ಮಗನ ಮೇಲೆ ಆ ಕೋಪವನ್ನು ತೋರಿಸಬಾರದೆಂದು ತಿಳಿದಿದೆ ಆಕೆಗೆ.

ನೀರನ್ನು ನೋಡಿ ಈರಣ್ಣನಿಗೆ ಸಂತೋಷವಾಯಿತು. ತಣ್ಣೀರ ಸ್ನಾನ ಮಾಡಿ, ಸುತ್ತಲಿದ್ದ ಹೂಗಳನ್ನು ತಂದು ಹತ್ತಿರವಿದ್ದ ಶಿವಲಿಂಗಕ್ಕೆ ಪೂಜೆ ಮಾಡಿದ. ನಂತರ ತನ್ನ ತಾಯಿ ಪಾರ್ವತಿಗಾಗಿ ಹಳ್ಳದಿಂದ ಐದು ತಂಬಿಗೆ ನೀರನ್ನು ತೆಗೆದುಕೊಂಡು ಹೊರಟ. ವೀರಣ್ಣ ಬರೋ ದಾರಿಯನ್ನು ನೋಡಿದ ಗಂಗೆಯು - "ನೀರೋದರಲ್ಲಿನ್ನ ಪಂಥವೆಲ್ಲುಳಿತು, ನೀರ ಕೊಟ್ಟ ಮೇಲೆ ಜಗಳವೆಲ್ಲುಳಿತು.." ಎಂದು ಬಗೆದು, ವೀರಣ್ಣ ಬರುವ ದಾರಿಯಲ್ಲಿ ಅವನು ಕಲ್ಲೊಂದನ್ನು ಎಡವಿ ಬೀಳುವಂತೆ ಮಾಡಿದಳು. ಅಲ್ಲಿಗೆ ಅವನು ಹೊತ್ತು ತರುತ್ತಿದ್ದ ನೀರೂ ಭೂಮಿಪಾಲಾಯಿತು.

ಈರಣ್ಣ ಬರಿಗೈಲಿ ಮನೆ ತಲುಪಿದ. ಪಾರ್ವತಿಯ ಗೋಳು ಮತ್ತೆ ಹೆಚ್ಚಾಯಿತು. ಹೇಗಾದರೂ ಮಾಡಿ ನೀರನ್ನು ತಾ.. ಎಂದು ಮಗನನ್ನು ಬೇಡಿದಳು. ’ಕೈಲಾಸಕ್ಕೆ ಹೋಗಿ ನಿನ್ನ ತಂದೆಯನ್ನೇ ಕೇಳಿ ನೀರನ್ನು ತಾ’ ಎಂದು ಅವನನ್ನು ಕೈಲಾಸಕ್ಕಟ್ಟಿದಳು.
ಸರಿ, ಈರಣ್ಣ ಕೈಲಾಸಕ್ಕೆ ಹೋಗಿ ಶಿವನಿಗೆ ನಡೆದ ಸಂಗತಿಯನ್ನೆಲ್ಲ ಅರುಹಿದ. ಶಿವನು ’ಅಯ್ಯೊ, ಗಂಗೆಗೆ ಜಗಳವಾಡಬೇಡ ಎಂದು ಹೇಳಿದ್ದೆನಲ್ಲ...’ ಎಂದು ಯೋಚಿಸಿ, ’ಸರಿ, ನಡಿ ಈರಣ್ಣ, ನಾನೂ ಬರುತೀನಿ. ಅವರ ಜಗಳವನ್ನು ಬಿಡಿಸೋಣ’ ಅಂತ ಪಾರ್ವತಿಯ ಮನೆಗೆ ಬಂದ. ಶಿವನು ಬರುವ ಹೊತ್ತಿಗೆ ಗೌರಿ ಇನ್ನೂ ಮನೆಯ ಹೊರಗೇ ಕುಳಿತಿದ್ದಾಳೆ.

ಎಲ್ಲವನ್ನೂ ಬಲ್ಲ ಶಿವನಿಗೆ ಇಲ್ಲಿ ನಡೆದ ರಾದ್ಧಾಂತದ ಬಗ್ಗೆ ತಿಳಿಯದೇ? ಆದರೂ, ಪಾರ್ವತಿಯನ್ನು ಕೆಣಕಲೆಂದೊ ಏನೊ, "ಅದು ಏನೆ ಎಲೆ ಗೌರಿ ಹೊರಗೆ ಕುಳಿತಿದ್ದಿ?" ಎಂದು ಕೇಳಿಯೇ ಬಿಟ್ಟ.
ಗೌರಿಗೆ ಇಷ್ಟು ಹೊತ್ತೂ ಗಂಗೆಯ ಮೇಲಿದ್ದ ಸಿಟ್ಟು ಶಿವನ ಮೇಲೆ ತಿರುಗಲು ಇಷ್ಟೇ ಸಾಕಾಯಿತು.
"ಅರಿತೆಂಗೆ ಕೇಳೀರಿ ಅರಿಯೇನು ಶಿವನೆ?
ನನ ಮೇಲೆ ಪ್ರತಿಯಾಗಿ ಗಂಗೆಯನ ತಂದೆ
ಗಂಗೆಗೂ ನನಗಿನ್ನು ಜಗಳ ತಂದಿಟ್ಟೆ
ಕಾಣದಂಗೋಗಿ ಕೈಲಾಸ ಸೇರಿದೆ
ದೆವ್ವ ಹಿಡಿದೋರಂಗೆ ಸುಮ್ಮನಿದ್ದೀರ..." ಎಂದು ಶಿವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ ಆಕೆ. ಪಾಪ, ಸವತಿಯ ಮೇಲಿನ ಸಿಟ್ಟೂ, ಅವಳ ಈ ಮಾಯದಾಟಗಳಿಂದ ತಾನು ಅನುಭವಿಸುತ್ತಿರುವ ದುಃಖವೂ ಆಕೆಯನ್ನು ಅದೆಷ್ಟು ಕಂಗೆಡಿಸಿದೆ ಎಂದರೆ ಶಿವನನ್ನೂ ಬಾಯಿಗೆ ಬಂದಂತೆ ಬೈದುಬಿಡುತ್ತಾಳೆ ಆಕೆ. ಅಂತಹ ಮಾಯಗಾತಿ ಸವತಿಯನ್ನು ತಂದಿಟ್ಟ ಶಿವನ ಬಗೆಗೆ ಆಕೆಗೆ ಅಷ್ಟಾದರೂ ಸಿಟ್ಟು ಇರಬೇಕಾದ್ದು ಸಹಜವೇ.!

ಶಿವನು ಅವಳ ಬೈಗುಳಗಳನ್ನು ಕೇಳಿ, ನಕ್ಕು, ’ಸುಮ್ಮನಿರು ಗೌರಿ. ಈಗೇನು, ನಿನ್ನ ಸ್ನಾನಕ್ಕೆ ಹಾಲು ತಂದುಕೊಡಲೇ? ಮೊಸರನ್ನು ತರಿಸಲೇ? ತುಪ್ಪವೇನಾದರೂ ಬೇಕೇ? ಜೇನುತುಪ್ಪವನ್ನು ತರಿಸಿಕೊಡಲೇ?’ ಎಂದು ಮುಂತಾಗಿ ಕೇಳುತ್ತಾನೆ. ಗೌರಿ ’ಅವು ಯಾವುದರಿಂದಲೂ ಸೂತಕ ತೀರದು, ನೀರನ್ನಾದರೆ ತರಿಸಿ ಕೊಡಿ’ ಎನ್ನುತ್ತಾಳೆ. ಅದಕ್ಕೆ ಶಿವನು ’ನೀರೇ ಬೇಕೆಂದಾದರೆ ನೀನು ನಿನ್ನ ತಂಗಿಯನ್ನು ಬೇಡಿಕೊ, ಅವಳು ಕೊಡುತ್ತಾಳೆ’ ಎಂದಾಗ ಗೌರಿಗೆ ಮತ್ತೆ ರೋಷವುಕ್ಕುತ್ತದೆ.
ಆಕೆ "ಸತ್ತು ಮಣ್ಣಾದರು ಸವತಿ ಕೇಳೇನೆ... ಮರೆತು ಮಣ್ಣಾದರು ಸವತಿ ಕೇಳೇನೆ.." ಎಂದು ಪ್ರತಿ ನುಡಿಯುತ್ತಾಳೆ. ಶಿವನಿಗೆ ಇದರಿಂದ ರೋಸಿಹೋಗುತ್ತದೆ.
"ನೀನೂ ಸಾಯಲಿ ಗಂಗೆ ಸಾಯಲಿ
ನನ ಕೈಲಿ ಈ ಜಗಳ ತೀರಾದು ಕೇಳೆ
ನೀನೋಗದಿದ್ದರೆ ಈರಣ್ಣನ ಕಳುಹು" ಎಂದು ಈ ಮೂರು ಮಾತುಗಳನ್ನಾಡಿ ಮಾಯವಾಗಿಬಿಡುತ್ತಾನೆ. ಕೊನೆಗೆ ವಿಧಿಯಿಲ್ಲದೆ ಗೌರಿ ಗಂಗೆಯ ಬಳಿ ನೀರನ್ನು ಬೇಡಿ ತರಲೆಂದು ಈರಣ್ಣನನ್ನು ಕಳುಹಿಸುತ್ತಾಳೆ.

ಈರಣ್ಣ ಗಂಗೆಯ ಮನೆಬಾಗಿಲಿಗೆ ಬಂದು "ಚಿಕತಾಯಿ ಗಂಗಮ್ಮ ಕೇಳೆ ನನ ಮಾತ.. ನಿಮಗೊಂದು ಸಮಯವು, ನಮಗೊಂದು ಸಮಯ.. ಇಂಥ ಸಮಯದಲಿ ನೀರ ಕೊಡಮ್ಮ. ನೀರ ಕೊಡುವುದು ತಾಯಿ ನಿನಗೆ ಧರ್ಮ.." ಎಂದು ಮುಂತಾಗಿ ಬೇಡಿಕೊಳ್ಳುತ್ತಾನೆ.
ಅದಕ್ಕೆ ಗಂಗೆ:
"ನೀವು ಉತ್ತಮರಲ್ಲೊ, ನಾವು ಬೆಸ್ತಾರು
ಬೆಸ್ತಾರ ಮನೆಗೆ ನೀ ಬರಬಹುದೆ ಕಂದ
ನಮ್ಮೂರ ಬಾವೀಲಿ ಮೀನು ಇರ್ತಾವೆ
ಮೀನು ಇರುವ ನೀರು ಹೊಲಸು ಕಾಣಯ್ಯ...
ಬೆಸ್ತಾರ ಮನೆ ನೀರು ಬೇಡೋಗೊ ಕಂದ.." ಎಂದು ಹಂಗಿಸಿ ನುಡಿಯುತ್ತಾಳೆ.

ಈರಣ್ಣ ’ಅವ್ವ, ಹಿಂದೆ ಆಡಿದ ಮಾತನ್ನು ಎತ್ತಾಡಬೇಡ. ನೀರನ್ನು ಕೊಡುವುದು ನಿನಗೆ ಧರ್ಮ. ದಯವಿಟ್ಟು ನೀರು ಕೊಡು’ ಎಂದು ಬೇಡಿಕೊಂಡಾಗ, ’ನಿನಗೆ ಬೇಕಾದರೆ ಒಂದು ತಂಬಿಗೆ ನೀರು ಕೊಡುತ್ತೇನೆ. ಆದರೆ ನನ್ನ ಆ ಸವತಿಗೆ ಎಂದಾದರೆ ನೀರೂ ಇಲ್ಲ ಏನೂ ಇಲ್ಲ’ ಎಂದು ಅವನನ್ನು ಕಳುಹಿಸುತ್ತಾಳೆ. ಪಾಪ, ಮತ್ತೆ ಈರಣ್ಣ ಬರಿಗೈಲಿ ವಾಪಸಾಗುತ್ತಾನೆ.
ಈರಣ್ಣ ಮನೆಗೆ ಬಂದು ನಡೆದದ್ದೆಲ್ಲವನ್ನೂ ತಿಳಿಸಿ ಗಂಗೆ ತಮ್ಮ ಜಾತಿನೀತಿಯನೆಲ್ಲ ಎತ್ತಾಡಿದ್ದನ್ನೂ ತಿಳಿಸಿ ಮುಂದೇನು ಮಾಡುವುದೊ ಎನ್ನುತ್ತಾನೆ.

ಇಷ್ಟೆಲ್ಲ ಆದಮೇಲೆ ಕೊನೆಗೂ ಗೌರಿ ತನ್ನ ಪಂತವನ್ನು ಬಿಡಲೇಬೇಕಾಯಿತು. ತನ್ನ ಐದು ಜನ ಮಕ್ಕಳನ್ನೂ ಕರೆದುಕೊಂಡು ಗಂಗೆಯ ಮನೆಬಾಗಿಲಿಗೆ ಬಂದು ಎಷ್ಟು ಸಾರಿ ಕೂಗಿ ಕರೆದರೂ ಮೊದಮೊದಲು ಗಂಗೆ ಗೌರಿಯ ಕರೆಗೆ ಓಕೊಳ್ಳಲಿಲ್ಲ.
ಕೊನೆಗೊಮ್ಮೆ , "ಅಂಗ್ಯಾಕೆ ಕೂಗೀಯೆ ಬಂಡ ನನ ಸವತಿ" ಎಂದುತ್ತರಿಸಿದಳು.
ಸಹಾಯ ಮಾಡಬಲ್ಲವಳು ಅವಳೇ ಅಲ್ಲವೇ? ಪಾಪ, ಗಂಗೆ ಏನೇನು ಬೈದರೂ ಪಾರ್ವತಿ ಈಗ ಅದೆಲ್ಲವನ್ನೂ ಕೇಳಿ ಸಹಿಸಿಕೊಳ್ಳಲೇಬೇಕು.
ಗೌರಿ: ಏನಾದರನ್ನಮ್ಮ ನೀರು ಕೊಡು ತಂಗಿ
ಗಂಗೆ: ಏನಾದರಾಗಲಿ ನೀರಿಲ್ಲ ಕಾಣೆ
ನೀವು ಉತ್ತಮರಲ್ಲೆ! ನಾವು ಬೆಸ್ತಾರು
ಬೆಸ್ತಾರ ಮನೆಗೆ ನೀ ಬರಬಹುದೆ ಗರತಿ
ಬೆಸ್ತಾರ ಮನೆ ನೀರು ಬೇಡೋಗೆ ನಿನಗೆ
ಗೌರಿ: ಜಾತಿನೀತಿನೆಲ್ಲ ಎತ್ತಾಡಬೇಡ
ಕುಲವು ಗೋತ್ರಾನೆಲ್ಲ ಬೈದಾಡಬೇಡ
ಹನ್ನೊಂದು ದಿನದಿಂದ ಅನ್ನಾ ನೀರಿಲ್ಲ
ಶಿವನಿಗೆ ಶಿವಪೂಜೆ ಮಾಡಲಿಲ್ಲಮ್ಮ
ನೀರು ಕೊಡುವುದು ತಂಗಿ ನಿನಗೆ ಧರ್ಮವು.... ಎಂದು ಹೀಗೆ ನಾನಾ ಪರಿಯಾಗಿ ಬೇಡಿಕೊಂಡಳು.
ಎಷ್ಟು ಕೇಳಿದರೂ ಗಂಗೆ ತನ್ನ ಪಟ್ಟನ್ನು ಬಿಡಲೊಲ್ಲಳು. ಪಾರ್ವತಿ ತನ್ನ ಮಕ್ಕಳೈವರನ್ನೂ ಗಂಗೆಗೇ ಕೊಡುವುದಾಗಿಯೂ, ಅದಕ್ಕೆ ಪ್ರತಿಯಾಗಿ ನೀರು ಕೊಡಬೇಕೆಂದೂ ಕೇಳಿದಳು. ಅದಕ್ಕೆ ಗಂಗೆ ’ನಿನಗೆ ಮಕ್ಕಳಾದವರು ನನಗೂ ಮಕ್ಕಳಲ್ಲವೇನೆ. ನನ್ನ ಮಕ್ಕಳನ್ನು ನನಗೇ ಕೊಡೋದೂ ಅಂದ್ರೇನು, ನೀರು ಕೊಡುವುದಿಲ್ಲ ಹೋಗು’ ಎಂದು ಉತ್ತರಿಸುತ್ತಾಳೆ.
ಗೌರಿ ತನ್ನ ಒಡವೆ ವಸ್ತ್ರಗಳನ್ನೂ, ಭೂಮಿಯನ್ನೂ ಶಿವನು ಮಲಗುವ ಮಂಚವನ್ನೂ ಕೊಡುವುದಾಗಿ ಹೇಳಿದರೂ ಗಂಗೆ ಒಪ್ಪುವುದಿಲ್ಲ. ’ಶಿವನ ಮಂಚವನ್ನು ಮಾತ್ರ ಇಟ್ಟುಕೊಂಡು ನಾನೇನು ಮಾಡಲಿ, ಅದಾವುದೂ ಬೇಡ, ನಾನು ನಿನಗೆ ನೀರು ಕೊಡುವುದಿಲ್ಲ’ - ಗಂಗೆಯದು ಮತ್ತೆ ಅದೇ ಪಟ್ಟು.
ಕೊನೆಗೆ ಗೌರಿ "ಗಟ್ಟಿಯಾಗಿ ನನ್ನ ಭಾಗದ ಶಿವನ ಕೊಡುತೀನಿ" ಎಂದು ಹೇಳಿದಾಗ ಗಂಗೆ ಆ ಕರಾರಿಗೆ ಒಪ್ಪಿ ನೀರು ಕೊಡುವೆನೆಂದು ಹೇಳುತ್ತಾಳೆ. ಅಲ್ಲಿಯವರೆಗೂ ಗಂಗೆ ತನ್ನ ಮನೆಯ ಬಾಗಿಲನ್ನೂ ತೆರೆಯದೆ ಗೌರಿಯನ್ನು ಹೊರಗೆ ನಿಲ್ಲಿಸಿಯೇ ಮಾತಾಡಿದ್ದಳು. ಗೌರಿಯು ಅವಳ ಭಾಗದ ಶಿವನನ್ನು ತನಗೇ ಕೊಡುವ ಕರಾರಿಗೆ ಒಪ್ಪಿದ ಮೇಲಷ್ಟೇ ಗಂಗೆ ಬಾಗಿಲು ತೆರೆದು ಹೊರಬಂದದ್ದು.

ಸರಿ, ಗಂಗೆ ಬಾಗಿಲು ತೆರೆದು ಹೊರಬಂದು, ಗುಡುಗು ಮಿಂಚಿನ ಮಳೆ ಬಂದು ಎಲ್ಲ ಕೆರೆ-ಹೊಳೆ, ಹಳ್ಳಕೊಳ್ಳಗಳು ತುಂಬುವಂತೆ ಮಾಡಿದಳು.
ಆಮೇಲೆ ಅಕ್ಕತಂಗಿಯರಿಬ್ಬರೂ ಸೇರಿ ಹೊಸನೀರಿನಲ್ಲಿ ಮಿಂದು, ಮಡಿಯುಟ್ಟು, ಬಗೆಬಗೆಯ ಹೂಗಳನ್ನು ಕುಯ್ದು ಶಿವನಿಗರ್ಪಿಸಿ ಶಿವಪೂಜೆ ಮಾಡಿದರು. ಹಾಲು ಅನ್ನವನಟ್ಟು ಊಟ ಮಾಡಿದರು.
ಅಲ್ಲಿಗೆ ಅವರಿಬ್ಬರ  ಈ ಜಗಳ (ತಾತ್ಕಾಲಿಕವಾಗಿ?) ಕೊನೆಯಾಯಿತು.

ಮುಂದೆ ಏನಾಯಿತು? ಗೌರಿ ತಾನು ಕೊಟ್ಟ ಮಾತಿನಂತೆ ನಡೆದುಕೊಂಡಳೆ? ತನ್ನ ಪಾಲಿನ ಶಿವನನ್ನು ಗಂಗೆಗೇ ಕೊಟ್ಟುಬಿಟ್ಟಳೆ? ಮುಂದೆ ಗಂಗೆ-ಗೌರಿಯರು ಜಗಳವಾಡಲಿಲ್ಲವೆ?

ಈ ಬಗ್ಗೆ ಮುಂದೆ ಎಂದಾದರೊಮ್ಮೆ ಹೇಳುತ್ತೇನೆ. ಈಗಷ್ಟೇ ಅವರಿಬ್ಬರ ಜಗಳ ಮುಗಿದಿದೆ. ಸದ್ಯಕ್ಕೆ ಆ ಸಮಾಧಾನವೇ ಸಾಕು, ಅಲ್ಲವೇ?

Thursday, 23 April 2015

ನಾನೂ... ನನ್ನ ಕನಸೂ...

ನನಗೂ ಕನಸುಗಳಿಗೂ ಬಹಳ ವಿಚಿತ್ರವಾದ ನಂಟು.
ಸುಮಾರು ಹತ್ತು ವರ್ಷಗಳಿಂದ ನನಗೆ ಯಾವುದಾದ್ರೂ ಕನಸಿನಿಂದ ಎಚ್ಚರಾದ ತಕ್ಷಣ ಆ ಕನಸಿನ ಕುರಿತು - ಏನು ನೆನಪಿದ್ದರೆ ಅದು, ಎಷ್ಟು ನೆನಪಿದ್ದರೆ ಅಷ್ಟು - ನನ್ನ ದಿನಚರಿಯಲ್ಲಿ ಬರೆದುಕೊಂಡುಬಿಡುತ್ತೇನೆ. ಆಮೇಲೆ ಆ ಕನಸನ್ನು ಓದಲು ಮಜವಾಗಿರುತ್ತೆ. 
ನಾವು ಕಾಣುವ ಕನಸುಗಳಿಗೆಲ್ಲ ಲಾಜಿಕ್ಕು ಇರಬೇಕೆಂದೇನೂ ಇಲ್ಲ. ಹಾಗಂತ ಯಾವುದೇ ಲಾಜಿಕ್ಕೂ ಇಲ್ಲದ ಕನಸುಗಳಷ್ಟೇ ಕಾಣುತ್ತವೆಂದೂ ಅಲ್ಲ (ನನ್ನ ಅನುಭವದ ಮಟ್ಟಿಗೆ ಈ ಮಾತುಗಳನ್ನು ಹೇಳುತ್ತಿದ್ದೇನಷ್ಟೇ!).
ಕೆಲವು ಕನಸುಗಳು ನಮಗೆ ನೆನಪಿನಲ್ಲಿ ಉಳಿಯುವುದೂ ಇಲ್ಲ. ನಾನು ಕೇಳಿರುವ ಮಟ್ಟಿಗೆ ನಮಗೆ ಕನಸಿನಿಂದ ಎಚ್ಚರಾದ ಸ್ವಲ್ಪ ಹೊತ್ತಿನವರೆಗು ಮಾತ್ರ ನಾವು ಕಂಡ ಕನಸುಗಳು ನಮಗೆ ನೆನಪಿರುತ್ತವಂತೆ.
ಅದಕ್ಕೇ ನನಗೆ ಎಚ್ಚರಾದ ತಕ್ಷಣ -ಅದು ಯಾವ ಜಾವವಾಗಿದ್ದರೂ- ಆಗಲೇ ಅಂದಿನ ಕನಸನ್ನು ಕುರಿತು ಬರೆದುಕೊಂಡುಬಿಡುತ್ತೇನೆ. ಈಗಲೂ ಒಮ್ಮೊಮ್ಮೆ ನನ್ನ ದಿನಚರಿಯಿಂದ ನಾನು ಕಂಡ ಕೆಲವು ಕನಸುಗಳನ್ನು ಕುರಿತು ಓದಿದಾಗ - ’ನಿಜಕ್ಕೂ ಹೀಗೆಲ್ಲ ಕನಸು ಕಂಡಿದ್ದೆನೆ ನಾನು!’ ಅಂತ ಅನಿಸಿದ್ದುಂಟು :)

ಎಷ್ಟೋ ಬಾರಿ ನಿಜಜೀವನದ ಹಲಾವರು ಸಣ್ಣಪುಟ್ಟ ವಿಷಯಗಳೆಲ್ಲ ಕಲೆತು ಹೊಸತೊಂದು ಕತೆಯಂತೆ ಕನಸಿನಲ್ಲಿ ಕಂಡದ್ದೂ ಇದೆ. ಆಗೆಲ್ಲ ಬಹಳ ಆಶ್ಚರ್ಯವಾಗುತ್ತೆ - "ನಮ್ಮ ಸುಪ್ತಮನಸ್ಸು ಈ ಎಲ್ಲ ವಿಷಯಗಳನ್ನೂ ಸೇರಿಸಿ ಅದೆಷ್ಟು ಅದ್ಭುತವಾಗಿ, ಕ್ರಿಯಾತ್ಮಕವಾಗಿ ಚಿತ್ರ-ವಿಚಿತ್ರ ಕತೆಗಳ ಕನಸನ್ನು ಹೆಣೆದು ನಮಗೆ ತೋರಿಸುವುದಲ್ಲ!" ಅಂತ

ಅಂದ್ಹಾಗೆ, ಇವತ್ತು ಬೆಳಿಗ್ಗೆ ನಾನು ಕಂಡ ಕನಸಿದು:

"ಯಾವುದೋ ಹೊಸ ಜಾಗ. ದೇವಾಲಯಗಳೇ ತುಂಬಿವೆ ಅಲ್ಲಿ. ಒಂದು ಕಾಲೋನಿಯಂತೆ ಅಥವಾ ಕಾಂಪ್ಲೆಕ್ಸಿನಂತೆ, ಎಲ್ಲಿ ನೋಡಿದರಲ್ಲಿ ದೇವಾಲಯಗಳು, ಅಲ್ಲಿ. ಎಲ್ಲವೂ ಬಹಳ ಹಳೆಯ ಕಾಲದವು…

(ನಾನು ಇದ್ದೆ ಅನ್ನೋದು ಕನಸಿನ ಮಧ್ಯಭಾಗದಲ್ಲಷ್ಟೇ ತಿಳಿದಿದ್ದು ನನಗೆ. ನಾನು ಏನಾಗಿದ್ದೆ ಅನ್ನೋದು ಮುಂದೆ ತಿಳಿಯಿತು…)
ಬಹುಶಃ ಮಣ್ಣಿನಲ್ಲಿ ಅಲ್ಲಿನ ದೇವಾಲಯಗಳ ಸಣ್ಣಸಣ್ಣ ಮೂರ್ತಿಗಳನ್ನು ಮಾಡುತ್ತಿದ್ದೆ ಅನಿಸುತ್ತೆ. ಅಪ್ಪ ಅವುಗಳನ್ನ ಹೊರಗೆಲ್ಲೋ ಮಾರುತ್ತಿದ್ರು ಅನ್ಸುತ್ತೆ.
ಒಂದ್ ದಿನ ಅಪ್ಪ ಭಾರೀ ಖುಷಿಯಾಗಿದ್ದಂತೆ ತೋರಿತು. ಮನೆಗೆ ಬಂದ್ಮೇಲೆ ತುಂಬ ಆಸಕ್ತಿಯಿಂದ ಅವರೇ ತಮ್ಮ ಕೈಯಾರೆ ಇಲ್ಲಿಯದ್ದೇ (ಬಹುಶಃ ನನಗೆ ಇಷ್ಟವಾದ) ದೇವಾಲಯವೊಂದರ ಮೂರ್ತಿಯನ್ನ ಮಾಡಿ, ಬಣ್ಣ ಹಚ್ಚಿದ್ದೆಲ್ಲ ಆದ ನಂತರ ನನಗೆ ಕೊಟ್ರು. ಅದರ ಜೊತೆಗೆ ಒಂದಷ್ಟು ದುಡ್ಡು ಕೂಡ!

ನಾನು ತುಂಬ ಸಂತೋಷಗೊಂಡಿದ್ದೆ. ದುಡ್ಡು ಹಾಗೂ ದೇವಳದ ಮೂರ್ತಿಯನ್ನ ತಗೊಂಡು ಎಲ್ಲಿಗೋ ಹೊರಟೆ
ಸಣ್ಣ ಸಂದುಗೊಂದುಗಳಲ್ಲಿ ಸಾಗಿ ಹೋದೆ. ಕೊನೆಗೂ ಯಾವುದೋ ಸಣ್ಣ ದೇವಾಲಯವನ್ನು ತಲುಪಿದೆ. ಅಲ್ಲಿಗೆ ಅವಳಲ್ಲದೆ ಬೇರೆ ಯಾರೂ ಬರುವುದಿಲ್ಲ, ಗೊತ್ತು ನನಗೆ.
ಬಹಳ ಹೊತ್ತು ಅವಳು ಬಂದಾಳೆಂದು ಕಾದೆ. ಎಷ್ಟು ಹೊತ್ತಾದರೂ ಅವಳ ಸುಳಿವೇ ಇಲ್ಲ! ಕೊನೆಗೆ ದೇವಾಲಯದ ಮೂರ್ತಿಯನ್ನ ಅಲ್ಲೇ ಇಟ್ಟು - ಅಲ್ಲಿಗೆ ಬರುವುದು ಅವಳೊಬ್ಬಳೇ! ಬಂದಾಗ ಅವಳದನ್ನು ನೋಡಿಯೇ ನೋಡುತ್ತಾಳೆಂಬ ನಂಬಿಕೆಯಿದ್ದಿರಬಹುದು - ಹೊರನಡೆದೆ

ಬಹುಶಃ ಬೇಸರವಾಗಿತ್ತು ಅನಿಸುತ್ತೆ, ನನಗೆ - ಅವಳನ್ನು ಭೇಟಿಯಾಗಲಿಲ್ಲ ಅಂತ… ಬರಿದೇ ನಡೆದು ಸಾಗಿದ್ದೆ. ನನ್ನಲ್ಲಿ ದುಡ್ಡಿದ್ದುದು ನೆನಪಾಗಿರಬೇಕು. ಹಸಿವೂ ಆಗಿದ್ದಿರಬಹುದು. ಯಾವುದೋ ಹೋಟೆಲಿನತ್ತ ಹೊರಟೆ.
ಅಹ್! ಅವಳಿಗೆ ಫೋನ್ ಮಾಡೋಣವೆನಿಸಿತು. ನನ್ನ Moto-G ಫೋನನ್ನು ತೆಗೆದು ಅವಳ ನಂಬರಿಗೆ ಕರೆ ಮಾಡಿದೆ (ಅದೇಕೊ ಆಗ ಮೋಟೊ-ಜಿ ಫೋನ್ ಸ್ಪಷ್ಟವಾಗಿ ಕಾಣಿಸಿತು. ಅದು ನನ್ನದೆಂದೇ ಅನಿಸ್ತು. ಈ ಹಂತದಲ್ಲೇ ಈ ಕನಸಿನಲ್ಲಿದ್ದವನು ನಾನೇ ಅಂತ ತಿಳಿದಿದ್ದು)
ಒಂದೆರಡು ಸಾರಿ ಪ್ರಯತ್ನಿಸಿದರೂ ನೋ ರೆಸ್ಪಾನ್ಸ್...! ಮತ್ತೆ ಬೇಸರವಾಗಿರಬೇಕು.. ಮುಂದೆ ಹೆಜ್ಜೆ ಹಾಕುತ್ತ ಹೊರಟೆ.

ಸ್ವಲ್ಪ ದೂರ ಸಾಗುತ್ತಿದ್ದಂತೆ ಯಾರೋ ನನ್ನ ಹಿಂಬಾಲಿಸುತ್ತಿರುವಂತೆ ತೋರಿತು. ಹಿಂತಿರುಗಿ ನೋಡಿದೆ. ಯಾರೋ ಹುಡುಗ, ಒಂದಿಪ್ಪತ್ಮೂರು ಹರೆಯದವನಿರಬಹುದು, ಬರುತ್ತಿದ್ದ... ನೋಡಲು ಕಳ್ಳನಂತೇನೂ ಕಾಣಿಸಲಿಲ್ಲವಾದರೂ ನನಗೇಕೊ ಅವನ ಮೇಲೆ ಅನುಮಾನ ಮೂಡಿತು. ಸ್ವಲ್ಪ ತ್ವರೆಯಾಗಿ ಹೆಜ್ಜೆ ಹಾಕಿದೆ. ಅವನೂ ಹಿಂದೆಯೇ ಬಂದಂತೆನಿಸಿತು.
ನಾನು ಇದುವರೆಗೂ ಫೋನನ್ನು ಕೈಯಲ್ಲೇ ಹಿಡಿದಿದ್ದೆ. ಈಗ ಭದ್ರವಾಗಿ ಜೇಬಿನೊಳಗಿಟ್ಟು ನಡೆಯೋಣವೆಂದುಕೊಂಡೆ. ನೋಡಿದರೆ ನಾನು ಉಟ್ಟಿದ್ದುದು ಪಂಚೆ. ಅದರಲ್ಲಿ ಜೇಬು ಎಲ್ಲಿಂದ ಬಂದೀತು! ಸರಿ ಕೈಯಲ್ಲೇ ಆದಷ್ಟೂ ಭದ್ರವಾಗಿ ಹಿಡಿದು, ಎದೆಗೆ ಅವಿಚಿಕೊಂಡು ನಡೆಯತೊಡಗಿದೆ...

ಹಠಾತ್ತಾಗಿ ಅವನು ಹತ್ತಿರ ಬಂದು ನನ್ನ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಳ್ಳಲು ಪ್ರಯತ್ನಿಸಿದ. ನಾನು ಮೊಬೈಲನ್ನು ಗಟ್ಟಿಯಾಗಿ ಹಿಡಿದಿದ್ದೆ. ಅಷ್ಟು ಬೇಗ ಅವನಿಗದು ದಕ್ಕುವಂತಿರಲಿಲ್ಲ
ಬಲವೆಲ್ಲ ಬಿಟ್ಟು ಕಾಲಿನಲ್ಲೊಮ್ಮೆ ಜಾಡಿಸಿ ಹೊಡೆದೆ ಅವನಿಗೆ. ಆತ ಹೇಗೋ ಸಂಭಾಳಿಸಿಕೊಂಡು ಮತ್ತೂ ಪ್ರಯತ್ನಿಸುತ್ತಿದ್ದ - ಮೊಬೈಲ್ ಕಿತ್ತುಕೊಳ್ಳಲು.
ನಾನು ಬಹುಶಃ ಸಹಾಯಕ್ಕಾಗಿ ಅರಚಾಡಿದೆ ಅನ್ಸುತ್ತೆ.. ಆ ಕ್ಷಣಕ್ಕೆ ಸುತ್ತಮುತ್ತಲಿದ್ದ ಅಂಗಡಿಗಳ ಸಾಲು, ಅಲ್ಲಿ ಹತ್ತಿರದಲ್ಲಿ ಓಡಾಡುತ್ತಿದ್ದ ಜನ - ಎಲ್ಲ ಸ್ಪಷ್ಟವಾಗಿ ಕಾಣುತ್ತಿತ್ತು ನನಗೆ.
ಸುಮಾರು ಜನ ಸೇರಿದರು ಅಲ್ಲಿ. ಅವರಲ್ಲಿ ಕೆಲವರು ಅವನನ್ನು ಹಿಡಿದುಕೊಳ್ಳಲು ಬಂದರು. ಆದರೂ ಮೊಬೈಲಿಗಾಗಿ ನಮ್ಮಿಬ್ಬರ ಸೆಣಸಾಟ ನಡೆದೇ ಇತ್ತು…
ಅಷ್ಟರಲ್ಲಿ, ಕಿವಿಗಡಚಿಕ್ಕುವಂತೆ ಯಾವುದೋ ಸದ್ದು… ನಿಲ್ಲದೆ ಮೊಳಗುತ್ತಿದೆ… ಅದು ನಿಲ್ಲುವ ಲಕ್ಷಣವೇ ಕಾಣಿಸದು! ಅಬ್ಬ! ಎಂತಹ ಕರ್ಕಶ ಶಬ್ದ...!!!

ಎಚ್ಚರಾಯಿತು ನನಗೆ. ಸದ್ದು ಮಾಡುತ್ತಿದ್ದದ್ದು ೬:೧೫ರ alarm.!
ಹಾಸಿಗೆಯ ಮೇಲೆ ಹಾಗೇ ಕೈಯಾಡಿಸಿದೆ. ಮೊಬೈಲು ತಕ್ಷಣಕ್ಕೆ ಕೈಗೆ ಸಿಗಲಿಲ್ಲ...
ಕನಸು ಕೂಡ ಮೊಬೈಲಿನ ಬಗೆಗೇ ಇದ್ದುದರಿಂದ ನನ್ನ ಮೊಬೈಲನ್ನು ತಕ್ಷಣವೇ ನೋಡಬೇಕೆನಿಸಿತು. ಅದನ್ನು ಹುಡುಕಿ, alarmಅನ್ನು off ಮಾಡಲು ಏಳಲೇಬೇಕಾಯಿತು."

Tuesday, 14 April 2015

ಬೀಸಿತು ಸುಖಸ್ಪರುಶವಾತಂ – ೧


ದೃಶ್ಯ ೧

ಅಂತಃಪುರದಲ್ಲಿನ ವಾತಾಯನವೊಂದರ ಬಳಿ ನಿಂತು ರಾಮನು ಹೊರಗಿನ ದೃಶ್ಯವನ್ನು ನೋಡುತ್ತಿದ್ದಾನೆ. ದೂರದಲ್ಲೆಲ್ಲೋ ಮೊಳಗುತ್ತಿರುವ ವಾದ್ಯಗಳ ಸದ್ದು ಸಣ್ಣದಾಗಿ ಕೇಳುತ್ತಿದೆ.  ಅದೊ ಅಲ್ಲಿ, ಅಯೋಧ್ಯೆಯ ಜನರು ನಾಟ್ಯ, ಕವಿಗೋಷ್ಠಿ ಮುಂತಾದ ಕಲಾಪಗಳಲ್ಲಿ ತೊಡಗಿರುವ ದೃಶ್ಯವೂ ಅಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲಿ ನೆರೆದ ಆ ಜನರ ಪ್ರತಿ ಚರ್ಯೆಯಲ್ಲೂ ಅವರಲ್ಲಿ ಮನೆಮಾಡಿರುವ ಸಂತಸ ಸಂಭ್ರಮಗಳು ಅದೆಷ್ಟೇ ದೂರದಿಂದ ನೋಡಿದರೂ ಅರಿಯಬಹುದಾದಷ್ಟು ಸ್ಪಷ್ಟವಾಗಿದೆ. ಜನರ ಆ ಸಂಭ್ರಮ ಸಂತೋಷಗಳನ್ನು ಕಂಡು ರಾಮನಿಗೂ ಹಿಗ್ಗು.

ಈ ದಿನವಷ್ಟೇ ದೇವತೆಗಳೂ, ಬ್ರಾಹ್ಮಣಶ್ರೇಷ್ಠರೂ, ಹನುಮ-ಸುಗ್ರೀವ-ಜಾಂಬವಂತನೇ ಮೊದಲಾದ ವಾನರ ವೀರರೂ, ವಿಭೀಷಣಾದಿ ಪಮುಖರೂ, ನೂರಾರು ಸಾಮಂತ ಅರಸರೂ, ನಾನಾ ದೇಶದ ಜನರೂ ಉತ್ಸವದಲ್ಲಿ ಭಾಗವಹಿಸಿರಲಾಗಿ, ಅವರೆಲ್ಲರ ಸಮಕ್ಷಮದಲ್ಲಿ - ವಸಿಷ್ಠ-ವಿಶ್ವಾಮಿತ್ರರಂತಹ ಮುನಿವರರ ಪೌರೋಹಿತ್ಯದಲ್ಲಿ - ಸೀತಾದೇವಿಯ ಪುಂಸವನ ಸೀಮಂತ ಮಹೋತ್ಸವವು ಬಹು ವೈಭವದಿಂದ ನೆರವೇರಿತ್ತು.

ಆ ನಂತರದಲ್ಲಿ ರಾಮನು ಉತ್ಸವಕ್ಕೆ ಆಗಮಿಸಿದ್ದವರೆಲ್ಲರನ್ನೂ ಉಚಿತ ರೀತಿಯಲ್ಲಿ ಸತ್ಕರಿಸಿ, ಸುಗಂಧ ತಾಂಬೂಲ ಪುಷ್ಪಾಕ್ಷತೆ ವಸ್ತ್ರಾಭರಣಗಳ ಉಡುಗೊರೆಗಳನ್ನಿತ್ತು ಸತ್ಕರಿಸಿದ್ದನು. ಅಲ್ಲಿ ನೆರೆದಿದ್ದವರೆಲ್ಲರೂ ಉಡುಗೊರೆ-ದಾನ-ಸತ್ಕಾರಾದಿಗಳಿಂದ ಸಂತೃಪ್ತರಾಗಿ ಮನಸಾರೆ ಸೀತಾರಾಮರಿಗೆ ಶುಭವನ್ನು ಹಾರೈಸಿ ಬೀಳ್ಕೊಂಡಿದ್ದರು.

ಈಗ, ಅಯೋಧ್ಯೆಯ ಜನರು ಇನ್ನೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅವರನ್ನು ನೋಡುತ್ತ ನೋಡುತ್ತ ರಾಮನೂ ಸಂತಸದಲ್ಲಿ ಮೈಮರೆತು ನಿಂತಿದ್ದಾನೆ. ಅಷ್ಟರಲ್ಲಿ ರಾಮನಿದ್ದ ಸ್ಥಳಕ್ಕೆ ಯಾರೋ ಬಂದ ಸದ್ದಾಯಿತು. ಬಂದವರು ಯಾರೆಂದು ರಾಮನು ತಿರುಗಿನೋಡಿದಾಗ ಕಂಡದ್ದು ಸಂತಸದಿಂದ ತುಂಬಿ, ಲಜ್ಜೆಯಿಂದ ಕೂಡಿದ ಮೈಥಿಲಿಯ ಮುಖ.
ಅದೇನು ಕಳೆ ತುಂಬಿದೆ ಈಗ ಆಕೆಯ ಮೊಗದಲ್ಲಿ! ಲೋಕೋದ್ಧಾರಕನಾದ ರಾಮಚಂದ್ರನ ಅಂಶವಾದ ಶಿಶುಚಂದ್ರನನ್ನು ತನ್ನ ಗರ್ಭದಲ್ಲಿ ಧರಿಸಿರುವ ಚಂದ್ರಿಕೆಯೀಕೆ ಎಂಬ ಭಾವ ಮೂಡಿಸುವಂತೆ ಹೊಸಕಾಂತಿಯೊಂದನ್ನು ಹೊರಸೂಸುತ್ತಿದೆ ಸೀತೆಯ ನವಸೌಂದರ್ಯ. ರಾಮನು ಸೀತೆಯ ಆ ಅನುಪಮ ಸೌಂದರ್ಯವನ್ನು ಮನದಣಿಯೆ ಕಂಡು ಮುದಗೊಂಡನು.

ಇಂದಿನ ಉತ್ಸವದ ಸಲ್ಲಾಪಗಳ ನಡುವೆ ಇಬ್ಬರಿಗೂ ಪರಸ್ಪರ ಮಾತನಾಡಲೂ ಅವಕಾಶ ಸಿಕ್ಕಿರಲಿಲ್ಲ. ಈಗಲಾದರೂ ಸೀತೆಯೊಡನೆ ಮಾತನಾಡಬೇಕೆಂಬ ಹಂಬಲ ರಾಮನದು. ಆಕೆಗೂ ಅಷ್ಟೇ, ತನ್ನ ಬಯಕೆಯೊಂದನ್ನು ರಾಮನಲ್ಲಿ ಬಿನ್ನವಿಸಬೇಕೆಂಬ ಆಸೆ ಆಕೆಯದು. ಗರ್ಭಿಣಿ ಹೆಂಡತಿಯ ಬಯಕೆಯನ್ನರಿತು ಅದನ್ನು ಈಡೇರಿಸುವುದು ಪತಿಯಾದವನ ಧರ್ಮ. ರಾಮನೂ ಇದಕ್ಕೆ ಹೊರತಲ್ಲವಲ್ಲ! ತನ್ನ ಮುದ್ದಿನ ಮಡದಿಯ ಮನದಾಳದ ಬಯಕೆಯನ್ನು ತಿಳಿದು ಅದನ್ನು ನಡೆಸಿಕೊಡಬೇಕೆಂಬ ತವಕ ಆತನಿಗೂ ಇದೆ. ಅದಕ್ಕೆಂದೇ ಸೀತೆಯನ್ನು ಕೇಳಿದ - ನಿನ್ನ ಯಾವುದೇ ಬಯಕೆಯಿದ್ದರೂ ತಿಳಿಸು, ಮೈಥಿಲಿ. ಅದನ್ನು ತಪ್ಪದೆ ನಡೆಸಿಕೊಡುವ ಹೊಣೆ ನನ್ನದು, ಎಂದು.

ಅದಕ್ಕೆ ಸೀತೆಯು - ಕುತ್ಸಿತಂ ಪೊರ್ದದಾಶ್ರಮದ ಋಷಿಪತ್ನಿಯರ ಸತ್ಸಂಗದೊಳ್ ತನ್ನ ಬೇಸರಂ ತವಿಸುವೆನಿದುತ್ಸಕಂ ತನಗದರಿನಿನ್ನೊಮ್ಮೆ ಬನಕೆ ತನ್ನಂ ಕಳುಹಬೇಕೆಂದಳು

ರಾಮನು ಸೀತೆಯ ಬಯಕೆಯನ್ನು ಕೇಳಿ, ಅದಕ್ಕೆ ಒಪ್ಪಿ ಶೀಘ್ರದಲ್ಲೇ ಗಂಗಾತೀರದ ಋಷ್ಯಾಶ್ರಮಕ್ಕೆ ಸೀತೆಯನ್ನು ಕಳುಹಿಸುವ ಭರವಸೆಯನ್ನಿತ್ತನು. ಸೀತೆಯ ಮುಖವು ಅಮಿತವಾದ ಸಂತಸದಿಂದ ಇನ್ನಷ್ಟು ಹೊಳಪೇರಿತು.

ದೃಶ್ಯ ೨
ರಾಮ ವಸಿಷ್ಠರೊಡನಿದ್ದಾನೆ. ಆತನ ಮುಖದಲ್ಲಿ ಯಾವುದೋ ಆತಂಕ, ಕಳವಳ.
ನೆನ್ನೆ ರಾತ್ರಿಯ ಕನಸಿನಲ್ಲಿ ತನ್ನ ಸೀತೆಯು ಗಂಗೆಯಂ ಕಳೆದು, ಕಾಡೊಳ್ ಮಹಾ ಕ್ಷೀಣೆಯಾಗಿ, ದೇಸಿಗರಂತೆ ದೆಸೆದೆಸೆಯನ್ ಈಕ್ಷಿಸುತ ಮರುಗುತ್ತಳಿರ್ದುದನ್ನು ಕಂಡಾಗಿನಿಂದ ರಾಮನಿಗೆ ಒಂದು ಬಗೆಯ ಆತಂಕ ಮೂಡಿದೆ. ಆ ಕನಸಿನ ಬಗೆಗೆ ಕೇಳಲೆಂದೇ ಕುಲಗುರುಗಳಾದ ವಸಿಷ್ಠರನ್ನು ಕಂಡು, ಅವರೊಡನೆ ತನ್ನ ಕನಸಿನ ಶುಭಾಶುಭ ಫಲದ ಬಗ್ಗೆ ಕೇಳಿದ್ದು. ವಸಿಷ್ಠರೂ ಈ ಕನಸಿನ ಶಕುನ ಅಷ್ಟು ಒಳ್ಳೆಯದಲ್ಲವೆಂದು ಅಭಿಪ್ರಾಯ ಪಟ್ಟು, ತಮ್ಮ ಕೈಲಾದ ಮಟ್ಟಿಗೆ ಅದರ ಪರಿಣಾಮವನ್ನು ಕಡಿಮೆಗೊಳಿಸಲು ಶಾಂತಿಯನ್ನು ಮಾಡಿಸುವುದಾಗಿ ಹೇಳಿ ಬೀಳ್ಕೊಂಡರು.

ದೃಶ್ಯ ೩
ಕಗ್ಗತ್ತಲ ರಾತ್ರಿ! ರಾಮನು ನಗರಶೋಧನೆಯ ಚಾರನೊಬ್ಬನನ್ನು ಕರೆದು ರಾಜ್ಯದ ಸದ್ಯದ ಸ್ಥಿತಿಗತಿಗಳನ್ನೂ, ತನ್ನ ನಾಡಿನ ಪ್ರಜೆಗಳು ತನ್ನ ಬಗ್ಗೆ ಹೊಂದಿರುವ ಅಭಿಪ್ರಾಯವನ್ನೂ ಕುರಿತು ಹೇಳಲು ಆದೇಶಿಸುತ್ತಾನೆ.
ಅದಕ್ಕೆ ಅವನು - "ದೇವ, ನಿನ್ನಂ ಪೆಸರಿಸಿದನ್ ಈಶನಾದಪಂ, ಸೇವಿಸಿದವಂ ಚತುರ್ಮುಖನಾಗಲುಳ್ಳವಂ , ಕಾವುದೆಂದೈಸೆ ಮೊರೆವೊಕ್ಕವಂ ಜಗದೊಳ್ ಆಚಂದ್ರಾರ್ಕಮಾಗಿ ಬಾಳ್ವಂ ಶ್ರೀವಿಭವದಿಂ, ಶಕ್ರಪದವಿಯಂ ಜರೆದಪಂ. ಭೂವಲಯದೊಳ್ ನಿಂದಿಸುವರುಂಟೆ, ತರಣಿಯಂ ಕಾವಳಂ ಮುಸುಕಿರ್ದೊಡೇನಾದುದು!" ಎಂದು ಬಿನ್ನೈಸಿ ಕೈಮುಗಿದನು.

ರಾಮನಿಗೇಕೋ ಈ ಚಾರನು ಯಾವುದೋ ವಿಷಯವನ್ನು ಹೇಳಲು ಹಿಂಜರಿಯುತ್ತಿದ್ದಾನೆ ಅನಿಸಿತು. ಇಲ್ಲದಿದ್ದರೆ ಇದೇಕೆ ಇವನುಸೂರ್ಯನನ್ನು ಮುಸುಕಿದ ಮಂಜುಎಂಬ ಹೋಲಿಕೆ ಕೊಟ್ಟು ಹೇಳಿದ ಎಂದು ಬಗೆದು ಮತ್ತೆ ತನ್ನರಸುತನಕಾವುದು ಊಣೆಯವೆಂಬರು (ನನ್ನ ಅರಸುತನಕೆ ಯಾವುದು ಕೊರತೆ ಎಂದು ಜನರ ಅಭಿಪ್ರಾಯ)?’ ಎಂದು ಚಾರನನ್ನು ಪ್ರಶ್ನಿಸುತ್ತಾನೆ.

ಅದಾಗಿಯೂ ಆ ಚಾರನಿಗೆ ವಿಷಯ ಹೇಗೆ ತಿಳಿಸುವುದೋ ತೋಚದೆ ಜಗದೊಳ್ ಅಜ್ಞಾನಿಗಳ್ ನುಡಿದ ನಿಂದೆಯನ್ ಉಸಿರಲಮ್ಮೆನ್ ಎಂದು ಹೇಳಿ ರಾಮನ ಪದಕ್ಕೆರಗಿದನು. ರಾಮನು ಅವನನ್ನೆಬ್ಬಿಸಿ ಅಯ್ಯಾ, ಅಂಜಬೇಡ , ವಿಷಯವೇನೇ ಇದ್ದರೂ ಯಾವ ಅಂಜಿಕೆಯನ್ನೂ ಇಟ್ಟುಕೊಳ್ಳದೆ ನನ್ನಲ್ಲಿ ಹೇಳುಎಂದು ಒತ್ತಾಯಪಡಿಸಲಾಗಿ ಆ ಚಾರನು - "ಸ್ವಾಮಿ, ಒಬ್ಬ ಮಡಿವಾಳಿಯು ನಿನ್ನ ಬಗೆಗೆ ಲಘುವಾಗಿ ಮಾತಾಡಿದ. ನಿನ್ನ ಘನತೆ ಎಂತಹುದೆಂಬುದು ಆ ಅಜ್ಞಾನಿಗೇನು ತಿಳಿಯಬೇಕು...

ಪೆಂಡತಿ ತವರ್ಮನೆಗೆ ಪೇಳದೆ ಪೋದ
ಚಂಡಿತನಕವಳ ತಾಯ್ತಂದೆಗಳ್ ಕಳುಹಬಂ
ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ
ಕೊಂಡಾಳುವವನಲ್ಲ ತಾನೆಂದು ರಜಕನು
ದ್ದಂಡದೊಳ್ ನುಡಿಯೆ ಕಿವಿಮುಚ್ಚಿಕೊಳುತೆಯ್ದಿದೆನ್" ಎಂದು ಬಿನ್ನೈಸಿದನು. (ರಜಕ - ಅಗಸ)

ರಾಮನು ಆ ಚಾರನು ನುಡಿದುದೆಲ್ಲವನ್ನೂ ಕೇಳಿ, ಅವನನ್ನು ಕಳುಹಿಸಿದ ನಂತರ ..ಮೌನದಿಂದ ನಿಂದು ಸೈವೆರಗಾಗಿ, ನೆನೆನೆನೆದು ಚಿತ್ತದೊಳ್ ನೊಂದು, ಬಿಸುಸುಯ್ದು, ಕಡುವಳಿದು, ಕಾತರಿಸಿ, ಕಳೆಗುಂದಿ, ದುಮ್ಮಾನದಿಂ ಪೊಕ್ಕನ್ ಅಂತಃಪುರವ.

ದೃಶ್ಯ ೪
ಹೀಗೆ ರಾಮನು ಚಿಂತಾಕುಲನಾಗಿ ಅಂತಃಪುರವನ್ನು ಹೊಕ್ಕ ವಿಷಯವನ್ನು ಕೇಳಿದ ಲಕ್ಷ್ಮಣ ಭರತ ಶತ್ರುಘ್ನರು ಏನಾಯಿತೊ ಎಂಬ ಭೀತಿಯಿಂದ ರಾಮನಿದ್ದೆಡೆಗೆ ಧಾವಿಸಿ ಬಂದರು. ಹಾಗೆ ಅವರು ಬಂದು ರಾಮನ ಪಾದಕ್ಕೆರಗಿದರೂ ರಾಮನು ಇನ್ನೂ ಯಾವುದೋ ಚಿಂತೆಯಲ್ಲಿದ್ದುದರಿಂದ ಅವನನ್ನು ಮಾತನಾಡಿಸುವ ಬಗೆಯನ್ನೂ ತಿಳಿಯದೆ ಮೌನವಾಗಿ ನಿಂತರು.
ಸ್ವಲ್ಪ ಸಮಯದ ನಂತರ ರಾಮನೇ ಅವರನ್ನು ಕರೆದು ಕುಳ್ಳಿರಿಸಿ ವಿಷಯವನ್ನರುಹಿದನು - ".. ಇಳೆಯೊಳ್ ಇಂದು ಎನಗಾದ ಅಪವಾದಮಂ ನೀವ್ ಅರಿದುದಿಲ್ಲ, ಅಕಟ! .. ನೆರವಿಗಳೊಳು ಕದ್ದ ಕಳ್ಳನವೊಲ್ ಆಡಿಸಿಕೊಳ್ಳಲಾರೆನ್, ಒಡಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ. ತಿದ್ದಿ ತೀರದ ವಿಲಗಕ್ಕಂಜುವೆಂ, ಸೀತೆಯಂ ಬಿಟ್ಟಿಲ್ಲದಿರೆನೆಂ"ದನು.
ಇವಳಯೋನಿಜೆ, ರೂಪಗುಣ ಶೀಲಸಂಪನ್ನೆ, ಭುವನಪಾವನೆ, ಪುಣ್ಯಚರಿತೆ ಮಂಗಳಮಹೋತ್ಸವೆ, ಪತಿವ್ರತೆಯೆಂಬುದಂ ಬಲ್ಲೆನ್. ಆದೊಡಂ, ನಿಂದೆಗೊಳಗಾದ ಬಳಿಕ ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ. ರವಿಕುಲದ ರಾಯರ್ ಅಪಕೀರ್ತಿಯಂ ತಾಳ್ದಪರೆ? ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ?(ತಾತ - ತಂದೆ)
ರಾಮನು ಕಲಿಯುಗದ ವಿಪ್ರರ್ ಆಚಾರವಂ ಬಿಡುವಂತೆ, ಪಲವು ಮಾತೇನಿನ್ನು, ಸೀತೆಯಂ ಬಿಟ್ಟೆನೆನೆ, "ಬಲುಗರಂ [ಗರ - ದುಷ್ಟಶಕ್ತಿ, ಗ್ರಹ] ಇದೆತ್ತಣಿದೊ ಕರುಣ್ಯನಿಧಿಗೆ" ಎನುತ ನಡುನಡುಗಿ ಭೀತಿಯಿಂದ "ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್ ಸಲೆ ನಿಂದಿಸಿದೊಡದಂ ಮಾಣ್ದಪರೆ ದ್ವಿಜರ್? ಅಕಟ! ಕುಲವರ್ಧಿನಿಯನ್ ಎಂತು ಬಿಡುವೆ ನೀಂ, ಪೇಳ್?" ಎಂದರ್ ಅನುಜಾತರ್ ಅಗ್ರಜಂಗೆ. 

ಭರತನು ಅತಿ ಶೋಕಾಕುಲಿತನಾಗಿ "ಅಣ್ಣ, ನೀತಿವಂತರಾರಾದರೂ ಹಾಲ್ಗರೆಯುವ ಕಪಿಲೆಯನ್ನು ಹೊಡೆದು ಅಡವಿಗಟ್ಟುವರೇ? ನಿನಗೆ ಈ ಆಲೋಚನೆಯೇಕೆ ಬಂತು? ಅಂದು ಆ ಪಾವನಮೂರ್ತಿ ತನ್ನ ಪಾವಿತ್ರ್ಯತೆಯನ್ನು ನಿರೂಪಿಸಿಕೊಳ್ಳಲು ಅಗ್ನಿಪ್ರವೇಶವನ್ನೇ ಮಾಡಲಿಲ್ಲವೆ, ಆಕೆ ಪರಿಶುದ್ಧಳೆಂದು ಎಲ್ಲರೆದುರು ನೀನೂ ಒಪ್ಪಲಿಲ್ಲವೇ?

ಅದನೆಲ್ಲಮಂ ಮರೆದು ಹುಲುಮನುಜ ರಜಕನಾ
ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ
ಹದನಾವುದಕಟ ಗುರು-ಲಘುವಿನಂತರವನೆಣಿಸದೆ ಬರಿದೆ ಮೂಢರಂತೆ
ಎದೆಗೆಟ್ಟು ದೇವಿಯಂ ದೋಷಿಯೆಂಬರೆ?" (ದೂಸರಂ - ಅಪವಾದ, ಕಾರಣ, ನಿಂದೆ)

ಅದಕ್ಕೆ ರಾಮನು - "ತಮ್ಮ ನೀನಾಡಿದಂತೆ ಅವನಿಸುತೆ(ಜಾನಕಿ) ನೀರಜೆಯಹುದು. ಉಮ್ಮಳಿಸಬೇಡ; ಸೈರಿಸಲಾರೆನ್ ಈ ದೂಸರಂ. ಮಹಿಯೊಳ್ ಉಳಿದರೇ ಪೃಥು-ಪುರೂರವ-ಹರಿಶ್ಚಂದ್ರಾದಿ ನರಪತಿಗಳು? ಸುಮ್ಮನೆ ಅಪಕೀರ್ತಿಗೆ ಒಳಗಾಗಲೇತಕೆ, ಮಮತೆಯನ್ ಮಹಾಯೋಗಿ ಬಿಡುವಂತೆ ಇವಳನ್ ಉಳಿವೆನ್" ಎನೆ, ಹಮ್ಮೈಸಿ ಲಕ್ಷ್ಮಣಂ ಕಂಪಿಸುತ ಕಿವಿ ಮುಚ್ಚುತ ಅಗ್ರಜಂಗೆ ಇಂತೆಂದನು –
"ಕಾಯಸುಖಕೋಸುಗಂ ಕೃತಧರ್ಮವಂ ಬಿಡುವೊ
ಲಾಯತಾಕ್ಷಿಯ ಭಾವಶುದ್ಧಿಯಂ ತಿಳಿದಿರ್ದು
ವಾಯದಪವಾದಕಿಂತರಸಿಯಂ ತೊರೆಯಬೇಕೆಂಬರೆ, ಕರುಣಮಿಲ್ಲದೆ?
ಜೀಯ, ತುಂಬಿದ ಬಸುರ್ ಬೆಸಲಾದ ದೇವಿಯಂ
ಪ್ರೀಯದಿಂದಾರೈದು ಸಲಹಬೇಕೆಂ"ದು ರಘುರಾಯಂಗೆ ಬಿನ್ನೈಸಿದನು. ಶತ್ರುಘ್ನನೂ ಸೀತಾಪರಿತ್ಯಾಗಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದನು.

ರಾಮನು ತಮ್ಮಂದಿರಾಡಿದ ಮಾತುಗಳನ್ನು ಕೇಳಿ ತರಹರಿಸಬಾರದ ಅಪವಾದ ಹೃಚ್ಛೂಲಮಂ ತನಗೆ ಜಾನಕಿಯನ್ ಉಳಿದು ಪೊರೆಯುರ್ಚಿದ ಉರಗನಂತಿರ್ಪೆಂ, ಸಾಕು ನಿಮಗೊರೆದೊಡೇನಹುದುಎಂದು ಬೇಸರೊಳ್ ಭರತ-ಶತ್ರುಘ್ನರಂ ಮನೆಗಳ್ಗೆ ಕಳುಹುತ ಏಕಾಂತದೊಳ್ ಸೌಮಿತ್ರಿಗೆ ಇಂತೆಂದನು -

ತಮ್ಮ ಬಾ, ನೀನಿಂದುವರೆಗೆ ನಾನೆಂದ ಮಾ
ತಮ್ಮೀರಿದವನಲ್ಲ. ಕೆಲಬಲವನಾರೈವು
ತಮ್ಮರುಗದಿರು ತನ್ನ ಕೊರಳಿಗಿದೆ ಖಡ್ಗಮಲ್ಲದೊಡೀಗ ಜಾನಕಿಯನು
ಉಮ್ಮಳಿಸದೊಯ್ದು ಗಂಗೆಯ ತಡಿಯರಣ್ಯದೊಳ್
ಸುಮ್ಮನೆ ಕಳುಹಿಬರ್ಪುದವಳೆನ್ನೊಳಾಡಿರ್ಪ
ಳೊಮ್ಮೆ ಕಾನನಕೈದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು      -೧೮.೫೮

ಲಕ್ಷ್ಮಣನು ಅಣ್ಣ, ನಿನ್ನಾಜ್ಞೆಯನ್ನು ಮೀರಿದರೆ ನನಗೆ ರೌರವ ನರಕವೇ ಗತಿ. ಆದರೆ ನೀನೆಂದಂತೆ ಮಾಡಿದೆನಾದರೆ ಮಾತೃಹತ್ಯೆ ಗೈದವನಿಗೆ ದೊರೆಯುವಂತಹ ಘೋರ ಗತಿ ಉಂಟಾಗುತ್ತದೆ...ಎಂದು ದುಃಖಿಸುತ್ತಿರಲು, ರಾಮನು ನಿನಗೆ ದೋಷಮೆ ನಾನಿರಲ್ಕೆ? ನಡೆ, ಕಳುಹುಎಂದನು. ಆಹಾ! ಅರಸನದೇಂ ದಯೆದೊರೆದನೋ!! 

ದೃಶ್ಯ ೫
ಅಣ್ಣನ ಮೇಲಿನ ವಾತ್ಸಲ್ಯಕ್ಕೂ ಅಭಿಮಾನಕ್ಕೂ ಕಟ್ಟುಬಿದ್ದು ಅವನ ಮಾತನ್ನು ಮೀರಲಾರದೆ ಕೊನೆಗೂ ಲಕ್ಷ್ಮಣನು ಮುಂದಿನ ಕಾರ್ಯಕ್ಕೆ ಸಜ್ಜಾದನು. ತುರಗ ಸಾರಥಿ ಕೇತನಂಗಳಿಂದ ಹಣ್ಣಿದ ವರೂಥಮಂ ತರಿಸಿ ಪೊರಗಿರಿಸಿ ನೆಲವೆಣ್ಣ ಮಗಳಿರುತಿರ್ದ ರಾಜಮಂದಿರಕೈದಿ ಕಣ್ಣೊಳೀಕ್ಷಿಸದೆ ತಲೆವಾಗಿ ದೂರದೊಳೆ ನಿಂದು ಆ ಸೀತೆಗಿಂತೆಂದನು -

"ತಾಯೆ, ನೀನೇತಕೆಳಸಿದೆ ನಿನ್ನನೀಗ ರಘು
ರಾಯಂ ತಪೋವನಕೆ ಕಳುಹಿಬರಹೇಳಿದಂ
ಪ್ರೀಯಮುಳ್ಳೊಡೆ ರಥಂ ಪಣ್ಣಿಬಂದಿದೆಕೊ, ಬಿಜಯಂಗೈವುದೆಂದು" ಮರುಗಿ
ಛಾಯೆಗಾಣಿಸಿ ಸುಮಿತ್ರಾತ್ಮಜಂ ನುಡಿದಅಭಿ
ಪ್ರಾಯಮಂ ತಿಳಿಯದೆ ಅತಿ ಸಂಭ್ರಮಾನ್ವಿತೆಯಾದ
ಳಾಯತಾಂಬಕಿ ತನ್ನ ಅಭೀಷ್ಟಮಂ ಸಲಿಸುವಂ ಕಾಂತನ್ ಎಂಬುತ್ಸವದೊಳು.

(ಮುಂದುವರೆಯುವುದು..)

ಉಪಮಾಲೋಲ ಕವಿ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬರುವ ರಾಮಾಯಣದ (ರಾಮ-ಲವಕುಶರ ಯುದ್ಧವನ್ನು ಕುರಿತಾದ) ಆಖ್ಯಾನವನ್ನು ಸರಳವಾಗಿ, ಸ್ವಲ್ಪ ಮಾರ್ಪಾಟುಗಳೊಂದಿಗೆ ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಮೂಲ ಕೃತಿಯಲ್ಲಿನ ಷಟ್ಪದಿಗಳನ್ನು/ಅವುಗಳ ಭಾಗಗಳನ್ನು ಸರಳ ಓದಿಗೆ ಅನುವಾಗುವಂತೆ ಅಗತ್ಯವಿದ್ದ ಕಡೆಗಳಲ್ಲಿ ವಿಂಗಡಿಸಿ ಬರೆದಿದ್ದೇನೆ. ಆದ್ದರಿಂದ ಗಣಗಳ ರೂಪದಲ್ಲಿ, ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸಗಳು ಗೋಚರಿಸಬಹುದು.