ಕಲ್ಪನೆಯ ಕಾಯದಿಂ ಕಲಾ ಕೌಶಲ್ಯದಿಂ
ಕಠಿಣ ಶಿಲೆಯನು ಕಡೆದು ಹೊಸರೂಪವನು ಸೃಜಿಸಿ
ರೂಪದೊಳ್ ಜೀವವ ತುಂಬಿ ಅದಕಮರತ್ವವನಿತ್ತು
ಶಿಲ್ಪಿಯು ಸೃಷ್ಟಿಸಿದ ಹೊಸಲೋಕವನು ಕಂಡೆ. (೧)
ಶಿಲ್ಪಿಯಾ ಕನಸೆಲ್ಲ ಮೈತಳೆದು ನಿಂತುದೋ!
ಸೌಂದರ್ಯವೆಲ್ಲದರ ಸಾಕಾರ ಸಾರವೋ!
ಮೇಣ್ ಇದು ಕಲಾದೇವತೆಯ ಸಾಕ್ಷಾತ್ಕಾರವೋ!
ಎಂಬ ವಿಸ್ಮಯವು ತುಂಬಿರಲು, ಭುವಿಯೊಳುದಿಸಿದ ನಾಕವನು ಕಂಡೆ. (೨)
ಇದು ಮುಕ್ತಿನಗರಿಯ ಮುಂಬಾಗಿಲೋ
ಅಥವ ಚತುರ್ವೇದ ವ್ಯಾಖ್ಯಾನವೋ
ವರ ಪುರುಷಾರ್ಥಗಳ ಸಂದೋಹವೋ
ಎಂಬಂತೆ ವಿಸ್ತರದಿ ನಿಂತ ಪ್ರಾಕಾರದ ನಡುವೆ
ಅಮೃತ ಕಲಶದ ತೆರದಿ ಹೊಳೆಯುತ ನಿಂತ ಆಲಯವ ಕಂಡೆ. (೩)
ಆಲಯದ ಭಿತ್ತಿಯೊಳ್ ಶಿಲ್ಪಿ ತಾನ್ ರಚಿಸಿದ
ಸುರ ಕಾವ್ಯದ ಸಾರಾಂಶವನು ಸಾರುತ್ತ
ಆ ಮಹದ್ಗೀತೆಯನು ಸುಶ್ರಾವ್ಯ ಮೌನದಿಂ ಹಾಡುತ್ತ
ತನ್ಮಯತ್ವದಿ ಮೈಮರೆತು ನಿಂತ ಶಿಲ್ಪಸಂದೋಹವನು ಕಂಡೆ. (೪)
ಶ್ರವಣಮಾತ್ರದ ದನಿಯು ಇಂಪಹುದು ಬಾಹ್ಯದೊಳು
ಮೌನರಾಗದ ಸವಿಯು ಮನಸನ್ನು ತುಂಬಿರಲು
ಅಮರಗೀತೆಯು ಇದನು ಕೇಳುತ್ತ ತಲೆದೂಗಿ
ಗಾನಸುಧೆಯನು ಹರಿಸುತ ನಿಂದ ದೇವಶಿಲ್ಪವ ಕಂಡೆ. (೫)
ಶಿಲೆಯೆಂದು ಕಂಡರೆ ಶಿಲೆಯಾಗಿ ಕಾಣುವುದು
ಕಲೆಯೆಂದು ಕಂಡರೆ ಕಲೆಯಾಗಿ ಕಾಣುವುದು
ಅಂತರಂಗದ ಕಣ್ಣು ತೆರೆದು ನೀನೀಕ್ಷಿಸಲು ಸತ್ಯತೆಯು ಕಾಣುವುದು
ಅಂತು ಸತ್ಯಸಾಕ್ಷಾತ್ಕಾರವನಿತ್ತ ಅನುಪಮ ಸೌಂದರ್ಯವನು ಕಂಡೆ. (೬)
ಶಿಲ್ಪಿಯ ಚಿತ್ತದೊಳುದಿಸಿ, ಕಲ್ಪನೆಯ ರೂಪವ ತಳೆದು
ಕಲೆಯ ರೂಪದಿ ಬೆಳೆದು, ಶಿಲ್ಪದೊಳ್ ಜೀವವ ಪಡೆದು
ಉದ್ಭವಿಸಿದೀ ಲೋಕದಲಿ ಸಕಲ ಜೀವ ಸಂಕುಲವಂ :
ಸುರ-ನರ, ಖಗ-ಮೃಗ ಜಲಚರ, ವನಕುಲ ಸಂದೋಹವಂ ಕಂಡೆ. (೭)
ಅಲ್ಲಿ, ಒಯ್ಯಾರದಿಂ ನಡೆವ ಹಂಸಪ್ರಕರವನು ಕಂಡೆ
ಆನಂದದಿಂ ನಲಿದು ನರ್ತಿಸಿಹ ನವಿಲುಗಳ ಕಂಡೆ
ಇದೋ ಇಲ್ಲಿ! ಬಿರಿಯುವಾಸೆಯ ಮೊಗ್ಗಿನಿಂ
ಕುಸುಮದಾಸೆಯಿಂ ಭ್ರಮಿಸುತಿಹ ಭ್ರಮರದಿಂ
ಬಳುಕುತ್ತ ಹಬ್ಬಿರುವ ವನಲತಾ ಸಂಕುಲವ ಕಂಡೆ. (೮)
ನಾನಾ ವಿಧದ ಫಲವೃಕ್ಷದಿಂ, ಲತಾ ಪ್ರಕರದಿಂ
ತುಂಬಿದ ಕಾನನದೊಳಗೆ ಮುದದಿಂ ವಿಹರಿಸುತಿಹ
ಉರಗವೇ ಮುಂತಾದ ಕ್ರಿಮಿಗಳೂ, ಕಡವೆ, ಭಲ್ಲೂಕ
ವ್ಯಾಘ್ರ, ಸೂಕರ, ಸಿಂಹ,ಶಾರ್ದೂಲ, ಮತ್ತ ಗಜ
ವ್ಯಾಳವೇ ಮೊದಲಾದ ಮೃಗಸಂಕುಲವ ಕಂಡೆ. (೯)
ಇಂತು ವನವನೀಕ್ಷಿಸುತ ನಗರ ಪ್ರಾಂತಕೆ ಬರಲು
ಸಾಲಂಕೃತ ಕುದುರೆಗಳನೇರಿ ಸಾಗಿಹ ಅಶ್ವಾರೋಹಿಗಳ ಕಂಡೆ
ಅತಿ ಮೌನದಿಂ, ಗಾಂಭೀರ್ಯದಿಂ, ಮಂದಗತಿಯಿಂ
ಮುಂದೆ ಸಾಗಿರುವ ಗಜ ನಿಕರವನು ಕಂಡೆ. (೧೦)
ಧ್ಯಾನದೊಳ್ ತಲ್ಲೀನರಾಗಿಹ ಮುನಿ ನಿವಹವಂ ಕಂಡೆ
ವಿವಿಧ ಯಜ್ಞ-ಯಾಗಾದಿ ಪೂಜಾಕಾರ್ಯದೊಳ್
ನಿಮಗ್ನರಾಗಿರ್ಪ ದ್ವಿಜಕುಲೋತ್ತಮರ ಕಂಡೆ
ಅಂತೆಯೇ ಸನಿಹದಲಿ ಭಕ್ತ ಸಂದೋಹವನು ಕಂಡೆ. (೧೧)
ಇಂತು ಖಗ-ಮೃಗ-ಕುಸುಮ-ನರಸಂಕುಲವ ಕಾಣುತ ಬರಲು,
ಅದೋ ಅಲ್ಲಿ! ಅನುಪಮ ಸೌಂದರ್ಯದಿಂ,
ಶ್ರೀಮದ್ಗಾಂಭೀರ್ಯದಿಂ ಸಾಗಿರುವ ಐರಾವತವನೇರಿ
ಕುಲಶಚೀದೇವಿಯೊಡನೆ ವಿಹರಿಸುತಿಹ ವಾಸವನ ಕಂಡೆ. (೧೨)
ಅಲ್ಲಿ, ವಿವಿಧ ರೂಪಿನಿಂ, ವಿವಿಧಾಲಂಕಾರದಿಂ
ವಿವಿಧ ಭಾವದಿಂ, ವಿವಿಧ ಭಂಗಿಯಲಿ ನಿಂತು
ಒನಪು ಒಯ್ಯಾರದಿಂ ನಸುನಗುತ ನಿಂತ
ನಿತ್ಯ ಸೌಂದರ್ಯವತಿ ಮದನಿಕೆಯರ ಕಂಡೆ. (೧೩)
ಶಶಿಕಾಂತಿ ತುಂಬಿರುವ ಮುಖ ಕುಮುದವೂ,
ಕಣ್ಣುಗಳೆಂಬ ಹೃದಯ ಗವಾಕ್ಷವೂ,
ಮೂಗುತಿಗೇ ಮೆರುಗನ್ನೀವ ನಾಸಿಕವೂ,
ಚಂಚಲ ತುಟಿಗಳೂ, ಯೌವನದ ಭಾರಕ್ಕೆ
ಬಾಗಿರುವ ತಿಳಿನಡುವಿನ ಈ ಸುರಕನ್ಯೆಯನು ಕಂಡೆ. (೧೪)
ತನ್ನ ಚೆಲುವೆಲ್ಲವನು ತಾನೇ ಸವಿಯುವ ಸ್ವಾರ್ಥವೋ!
ಲೋಕೋತ್ತರ ಸೌಂದರ್ಯ ಸಂಪದವಂ ಕಾಣ್ವ ಕೌತುಕವೋ!
ದರ್ಪಣವ ಹಿಡಿದು, ಅದರೊಳ್ ಕಾಣ್ವ ಬಿಂಬಕ್ಕೆ ಮನಸೋತು
ತನ್ನಲಿ ತಾನೇ ಮೋಹಗೊಂಡಿರುವ ಈಕೆಯ ಮರುಳನ್ನು ಕಂಡೆ. (೧೫)
ಇಂತು ಅನುಪಮ ಸೌಂದರ್ಯದಿಂ, ಅಪ್ರತಿಮ ಲಾವಣ್ಯದಿಂ
ವಿವಿಧ ಲಾಸ್ಯವ ತೋರಿ ಒಯ್ಯಾರದಿಂ ಮೆರೆಯುತಿಹ
ಸುರಕನ್ನಿಕೆಯರ ಚೆಲುವಿನಿಂ ಆಲಯದ ಭಿತ್ತಿಯೊಳ್
ಶೃಂಗಾರರಸವೇ ಮೈತಳೆದುದನು ಕಂಡೆ. (೧೬)
ಇಂತು ಸುರ ಸೌಂದರ್ಯವಂ ಸವಿಯುತ್ತ ಮುಂಬರಲು
ಅಪರ ಬ್ರಹ್ಮ ಶಿಲ್ಪಿಯು ತಾನ್ ಸೃಷ್ಟಿಸಿದ ಬ್ರಹ್ಮದೇವನನು ಕಂಡೆ;
ಅಂತೆಯೇ ಸನಿಹದಲಿ ಆನಂದದಿ ನರ್ತಿಸುತ
ನೃತ್ಯವಿಲಾಸದಿಂ ಮೈಮರೆತ ವಿದ್ಯಾಧಿದೇವತೆ ವಾಣಿಯನು ಕಂಡೆ. (೧೭)
ತನ್ಮಯತ್ವದಿ ನರ್ತಿಸಿಹ ವಿನಾಯಕನನು ಕಂಡೆ;
ಶಂಖ, ಚಕ್ರ, ಪದ್ಮ, ಕಲಶವ ಹಿಡಿದ ಸಿರಿದೇವಿಯನು ಕಂಡೆ;
ದುಷ್ಟ ದಾನವರ ಹರಿಸಿ, ಭಕ್ತ ಜನರನು ಹರಸಿ
ನಿಂತ ಸಿಂಹವಾಹಿನಿಯನ್ನು, ಶ್ರೀ ದುರ್ಗೆಯನು ಕಂಡೆ. (೧೮)
ಯಶೋಧೆಯ ಮಡಿಲಿನೊಳಾಡ್ವ ಬಾಲಕೃಷ್ಣನ ಕಂಡೆ;
ಪೂತನಿಗೆ ಮುಕ್ತಿಯನಿತ್ತು. ತೃಣಾವೃತನ ಕೊಂದು
ಬಕಾಸುರನ ತಲೆ ಸೀಳಿ, ಕಾಳೀಯನ ಮರ್ದಿಸಿದ
ಗೋಪಾಲಬಾಲಕನ ಬಾಲ ಲೀಲೆಯನು ಕಂಡೆ. (೧೯)
ಗಿರಿಯನೆಡಬೆರಳಿನೊಳೆತ್ತಿ ಆಶ್ರಿತರನನುಗ್ರಹಿಸಿ
ಕರುಣೆಯಿಂ ಕಾಯ್ದ ಗೋವರ್ಧನೋದ್ಧಾರನ ಕಂಡೆ;
ಗೋಪಿಕೆಯರ ಗುಂಪಿನೊಳು ಮಧುರ ಗಾನವ ನುಡಿಸಿ
ರಾಗಾಮೃತವ ಹರಿಸಿ ತನ್ಮಯದಿ ನಿಂತ ಮಾಧವನ ಕಂಡೆ. (೨೦)
ಹಾವಿನ ಹಾಸಿಗೆಯೊಳ್ ವಿರಮಿಸಿಹ ಶ್ರೀ-ಹರಿಯ ಕಂಡೆ;
ಶಿಲ್ಪಿಯ ಕಲಾಕೌಶಲ್ಯವಂ ಕಂಡು ಬೆರಗಾಗಿ
ಶ್ರೀಮನ್ನಾರಾಯಣನೇ ಮೆಚ್ಚುವ ತೆರದಿ
ಭುವಿಯೊಳವತರಿಸಿದ ಈ ವೈಕುಂಠವನು ಕಂಡೆ. (೨೧)
ಯುಗಯುಗದಲ್ಲೂ ಮರ್ತ್ಯದೊಳವತರಿಸಿ
ಧರ್ಮವನ್ನುಳಿಸಿ ಅಧರ್ಮವನು ಅಳಿಸಿ
ಧರ್ಮಸಂಸ್ಥಾಪನೆಯನುಗೈದು ಭುವಿಯನುದ್ಧರಿಸಿ
ಶ್ರೀಹರಿಯು ತಳೆದ ದಶಾವತಾರ ಲೀಲೆಯನು ಕಂಡೆ. (೨೨)
(yet to continue...)
No comments:
Post a Comment