ಮುದದಿಂ ಮುಗಿಲು ತಾನೆರೆದ ಮುತ್ತಿನ ಮಣಿಗಳಿಂ
ಮಧುಮಯ ಹೂಮಳೆಯಿಂ ಭುವಿಗೆ ಅಭ್ಯಂಗವಾಯ್ತು।
ನಭದೊಳ್ ಮೂಡಿದ ವರ್ಣಮಯ ಸುರಚಾಪಂ
ಅಮರವ್ರಾತಕೆ ಭುವಿಯು ಆಗಸದಿ ತೆರೆದ ಬಾಗಿಲಂತಾಯ್ತು।
ಇಂತು ಮಂಗಳಮಯ ಸ್ನಾನದಿಂ ಇಳೆಯು ಇಂದಿನುತ್ಸವಕೆ ಅಣಿಯಾಯ್ತು.
ಹಿರಿವೀಧಿ-ಕಿರಿವೀಧಿ, ನಡುವೀಧಿ-ಕುಡಿವೀಧಿ
ಎಲ್ಲ ವೀಧಿಗಳೂ ಮಳೆಯಿಂ ಕಳೆಯಿಂ ಹಸನಾಯ್ತು।
ಹೂಗಳಿಂ ನನೆಗಳಿಂ ವಿವಿಧ ವರ್ಣಾಕೃತಿಗಳೆಸೆವ
ರಂಗೋಲಿಯಿಂ ಮನೆಮನೆಯ ಪ್ರಾಂಗಣಮೂ ಚೆಲುವಾಯ್ತು।
ಎತ್ತ ನೋಡಿದರತ್ತ ಹೊಸತನವೂ ಸಂಭ್ರಮವೂ ತುಂಬಿ ಊರು ಗೆಲುವಾಯ್ತು.
ವಿವಿಧಾಲಂಕಾರದಿ ಮೆರೆವ ಭವನಗಳಿಂ
ಮುಗಿಲೆತ್ತರಕೆ ಸಾರಿ ನಿಂತ ಧ್ವಜ-ಪತಾಕೆಗಳಿಂ
ಕಣ್ಸೆಳೆವ ಮನಸೆಳೆವ ವಿವಿಧ ದೀಪಾಲಂಕಾರದಿಂ
ಪುರ ಪ್ರಮುಖ ವೀಧಿಗಳು ಕಾಣುಗರ ಕಣ್ಗೆ
ವಿಸ್ಮಯಾನಂದಗಳ ಸಂದೋಹಮಾಯ್ತು.
ಬಿತ್ತರದಿ ಹರಡಿದ ಹಸಿರು ಚಪ್ಪರವು
ದಿವಿಯೇ ಭುವಿಗಿಳಿದು ಬಂದುದೋ! ಎಂಬ
ಭ್ರಮೆಯನ್ನು ತಂದಿರಲು; ತಂಪೆಸೆವ ಮಾವಿನ ತೋರಣವೂ,
ಕಂಪೆಸೆವ ಹೊಸ ಹೂವಿನಲಂಕಾರವೂ ಸೇರಿ
ಊರಿನ ರಾಜವೀಧಿಯು ಅತಿ ಮಂಗಳಪ್ರದವಾಯ್ತು.
ಪುರ ಪ್ರಮುಖ ಗುಡಿ ನಿವಹದೊಳ್
ಭಜನ, ಕೀರ್ತನ ಸೇವೆ, ಗೀತ ನರ್ತನ ಸೇವೆ
ವಿವಿಧೋತ್ಸವದ ಸೇವೆ, ಪೂಜಾ ಕಲಾಪಗಳು
ಎಡೆಬಿಡದೆ ತಡೆಯಿರದೆ ಅವಿರತದಿ ಸಾಗಿತ್ತು।
ಭಕ್ತಿರಸ ಪ್ರಾಧಾನ್ಯದಲಿ ಭಕ್ತರೆಲ್ಲರ ಮನವು ಭಕ್ತಿಮಯವಾಯ್ತು.
ಆಲಯದ ಪ್ರಾಂಗಣವು ಭಕ್ತರಿಂದಲೂ
ಅಚಲ ಭಕ್ತಿಯಿಂದಲೂ ತುಂಬಿರಲು
ಸಕಲ ಸನ್ಮಂಗಲವೂ ಮೂರ್ತಿವೆತ್ತಂತೆ ಕಾಣ್ವ ಗೋಪುರವು
ಸುಧಾಕಲಶದಂತೆ, ಸುರತರುವಿನಂತೆ, ಸುರುಚಿರ
ಮೌಕ್ತಿಕಾಮಣಿಯಂತೆ ಬಹುಕಾಂತಿಮಯವಾಯ್ತು.
ಇಂತು ಪ್ರತಿ ಪದವೂ ಪ್ರತಿ ನೋಟವೂ
ಬಲು ವಿಶೇಷವಾಗಿರಲು, ಸಕಲ ಲಾಂಛನದೊಡನೆ
ಪುರವಧುವು ಸಿಂಗಾರಗೊಂಡಿರಲು, ದ್ರೌಪದಿಯ ಬರುವಿಕೆಗೆ
ಸಮಯವದು ಸಾರಿರಲು, ಕಾದು ನಿಂತ ಭಕ್ತ ನಿವಹದೊಳ್
ಸಂತಸವೂ ಕಾತರವೂ ತುಂಬಿರಲು, ಗುಡಿಯೊಳಗೆ ದೇವಿಯ ಆವಹನವಾಯ್ತು.
ಅಂದು ಭೂವರರಿಗಿತ್ತ ಭಾಷೆಯನು ನಡೆಸಿ
ಪರಿಜನವನನುಗ್ರಹಿಸಿ ಪ್ರೇಮದಿಂ ಹರಸಿ
ಅಗ್ನಿಸಂಜಾತೆ ದ್ರೌಪದಿಯು ಪುರದಿ ಚಲಿಸುತ ಬರಲು
ಪೂಜಾದೀಕ್ಷೆಯನು ತೊಟ್ಟ ವೀರಕುವರರ
ಎದೆಎದೆಯಲ್ಲಿ ಶಕ್ತಿ ಸಂಚಾರವಾಯ್ತು.
ಆಹಾ! ಕಂಡೆವೈ ನಾವು ಎಂಥಾ ಮಹಾದ್ಭುತವ
ಕಂಡೆವೈ ನಾವು ಶಕ್ತಿದೇವಿಯ ವಿಭವ
ದೇವಿಯನುಗ್ರಹವು ನಮ್ಮ ಮೇಲಾದುದೈ
ಎನಿತು ಧನ್ಯರೊ ನಾವು ಎಂಬ ಭಾವನೆ
ಮೂಡಿ ಭಕ್ತರೆಲ್ಲರ ಮನವು ಆನಂದಮಯವಾಯ್ತು.
ಈ ಮಹಾಘಟನೆಯಂ ಕಂಡುದೈ ದಿವಿಜಕುಲ!
ಪರಮಾನಂದದಿಂ ಮೈಮರೆತುದೈ ಸುರ ನಿವಹ
ಸಂತಸದಿ ಸಂಭ್ರಮದಿ ವಿವಿಧ ವಾದ್ಯವ ನುಡಿಸಿ,
ಸರಸದಿಂ ಹಾಡಿ, ಸಡಗರದಿ ನರ್ತಿಸಲು
ಆಗಸವು ಸಂಗೀತ ನೃತ್ಯಗಳ ತವರು ನೆಲೆಯಾಯ್ತು.
ಕಾಣುವಾ ಕಮಲಕ್ಕೆ ತಿಳಿಕಿರಣಗಳ ಚೆಲ್ಲಿ
ಸಾಗುವಾ ರವಿಯಂತೆ
ಚಿಮ್ಮುವಾ ಕಡಲಲೆಯ ಪ್ರೇಮದಿಂ ರಮಿಸಿ
ಸಾಗುವಾ ಶಶಿಯಂತೆ
ದೇವಿ ಚಲಿಸುತ ಬರಲು ಜಗವೆಲ್ಲ ಬೆಳಕಾಯ್ತು.
-Lokesh N Acharya
Awesome dude :) You are great
ReplyDeletethanks ntg.. nothing great
ReplyDeleteThats really great....
ReplyDeletetumba chennagide lokesh....baravanige nirantaravaagirali....
ReplyDeleteThank you praveen :)
ReplyDelete