Monday, 1 April 2013

ಮುಂಡಿಗೆ

"ಒಗಟು" (riddle) ಎಂದರೆ ಜಾನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವೆಂದು ಮಾತ್ರ ತಿಳಿದಿದ್ದೆ . ಆದರೆ ಕನ್ನಡದ ಶಿಷ್ಟ ಸಾಂಪ್ರದಾಯದ ಸಾಹಿತ್ಯದಲ್ಲ್ಲೂಇದರ ಇನ್ನೊಂದು ಮಜಲು ಹೇರಳವಾಗಿ ಕಾಣಬರುತ್ತದೆ. ಅಷ್ಟೇ ಅಲ್ಲ, "ಪ್ರಹೇಲಿಕ" ಎಂಬ ಹೆಸರಿನಿಂದ ಇದು ಸಂಸ್ಕೃತ ಕಾವ್ಯಗಳಲ್ಲೂ ಕಂಡುಬರುತ್ತದೆ.

ಕನ್ನಡದಲ್ಲಿ ಕುಮಾರವ್ಯಾಸನ ಪದ್ಯಗಳಲ್ಲಿ ಇಂತಹ ಚಮತ್ಕಾರವನ್ನು ಕಾಣಬಹುದು.
ಮುಂಡಿಗೆ ಅಥವಾ ಮುಡಿಗೆ ಎಂದು ಕರೆಯಲ್ಪಡುವ ಈ ಪ್ರಕಾರವನ್ನು ಬಹುವಾಗಿ ಬಳಸಿದವರು ನಮ್ಮ ಕನಕದಾಸರು.
ಇಲ್ಲೊಂದು ಸಣ್ಣ ಉದಾಹರಣೆ :

"ಮಂಗಳಂ ಜಯಮಂಗಳಂ ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ ಚಂದದಿವಡೆದ ನಂದನೆಯಳ ನಲ- ವಿಂದ ಧರಿಸಿದ ಮುಕುಂದನಿಗೆ"

ಈ ಮೇಲಿನ ಸಾಲುಗಳನ್ನು ನೋಡಿದ ತಕ್ಷಣ ಇದು ಶ್ರೀ ಕೃಷ್ಣನ ಸ್ತುತಿಯೆಂದು ಕಂಡುಬರುತ್ತದೆ. ಆದರೆ ಅದರಲ್ಲಿ ಬರುವ ವರ್ಣನೆಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ... ಇದು ಓದುಗನನ್ನು/ಕೇಳುಗನನ್ನು ಈ ಕುರಿತು ಆಲೋಚಿಸುವಂತೆ ಪ್ರೇರೇಪಿಸುತ್ತದೆ. 

ಮೇಲಿನ ಸಾಲುಗಳಲ್ಲಿನ ಪ್ರತಿ ಪದವನ್ನು ಬಿಡಿಸಿ ಹೀಗೆ ಅರ್ಥೈಸಬಹುದು :

"ಅಂಧಕ"ನೆಂದರೆ ಧೃತರಾಷ್ಟ್ರ.ಈತನ ಅನುಜ ಪಾಂಡುರಾಜ. ಅವನ ಮಗ ಧರ್ಮರಾಯ. ಈ ಧರ್ಮರಾಯ ಯಮನ ಅಂಶದಿಂದ ಹುಟ್ಟಿದವ, ಆದ್ದರಿಂದ ಈತನ ತಂದೆ ಯಮ.
ಆ ಯಮನನ್ನು ಸೋಲಿಸಿದವನು ಶಿವ. ಆ ಶಿವನು ತಲೆಯ ಮೇಲೆ ಚಂದ್ರಬಿಂಬವನ್ನು ಧರಿಸಿದ್ದಾನೆ. ಆ ಚಂದ್ರನಾದರೋ ಕ್ಷೀರಸಾಗರ ಮಥನ ಕಾಲದಲ್ಲಿ ಸಮುದ್ರದಲ್ಲಿ ಜನಿಸಿದವ.
ಅದೇ ಸಮುದ್ರದಿಂದ ಉದಯಿಸಿದವಳು ಶ್ರೀ ಲಕ್ಷ್ಮಿ.
ಇಂತಹ ಲಕ್ಷ್ಮಿಯನ್ನು ಧರಿಸಿದ/ವರಿಸಿದ ಶ್ರೀ ಮಹಾವಿಷ್ಣುವಿಗೆ ಮಂಗಳವಾಗಲಿ.

ಇದು ಈ ಮುಂಡಿಗೆಯ ತಾತ್ಪರ್ಯ..

No comments:

Post a Comment