'ಅರಸ ಕೇಳ್ಮರುದಿವಸದಲಿ ರಘು
ವರನು ತನ್ನೋಲಗಕೆ ನೃಪರನು
ಕರೆಸಿದನು ನಿಜಮಂತ್ರಿ ಬಾಂಧವಜಾಲ ವರ್ಗವನು
ತರಣಿಸುತ; ಜಾಂಬವ ವಿಭೀಷಣ
ರಿರದೆ ಬಂದರು ಕೈಮುಗಿದು ಕು
ಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ' -೧೨೩
’ಕೇಳು ಲಕ್ಷ್ಮಣ, ಕೇಳು ಜಾಂಬವ,
ಕೇಳು ನಳ ನೀಲಾದಿ ಸುಭಟರೆ ಕೇಳಿರೈ, ನರೆದಲೆಗ-ವ್ರಿಹಿಯರು
ಸೆರೆಯೊಳಿರ್ದವರ ಕಾಲ ಸವೆದುದು ದಿವಸವಿಂದಿಗೆ ಏಳು ತಿಂಗಳು ಕಳೆದವವದಿರ ಪಾಲಿಸಲು ಬೇಕು.
ಅನಿಲಸುತ, ನೀ ಕರೆದು ತಾ’ ಎಂದ.
ಹನುಮಂತನು ರಾಮನ
ಅಪ್ಪಣೆಯನ್ನು ಪಡೆದು ಗೌತಮ ಮಹರ್ಷಿಗಳ ಆಶ್ರಮಕ್ಕೆ ಬಂದನು. ಅವರಿಗೆ ನಮಿಸಿ ಆಶೀರ್ವಾದ ಪಡೆದ
ನಂತರ ತಾನು ಬಂದ ವಿಷಯವನ್ನು ತಿಳಿಸಿ, ಕೂಡಲೆ ನರೆದಲೆಗ ಹಾಗೂ ವ್ರಿಹಿಗರನ್ನು ಸೆರೆಮನೆಯಿಂದ
ಬಿಡಿಸಿ ತಮ್ಮೊಡನೆ ಕರೆದುಕೊಂಡು ಕೂಡಲೆ ಅಯೋಧ್ಯೆಗೆ ಬರಬೇಕಾಗಿ ಬಿನ್ನವಿಸಿದನು. ಗೌತಮ ಮಹರ್ಷಿಯು
ಹನುಮಂತನ ಮಾತಿಗೆ ಒಪ್ಪಿ, ಕೂಡಲೆ ಆಶ್ರಮದ ಇತರ ತಾಪಸಿಗಳನ್ನು ಕರೆಸಿ,
ನರೆದಲೆಗ-ವ್ರಿಹಿಗರನ್ನೊಡಗೊಂಡು ಅಯೋಧ್ಯೆಗೆ ಹೊರಟುಬಂದರು.
-----------------------------------------------------------------------------------------------------------
ಅಯೋಧ್ಯೆಗೆ ದಯಮಾಡಿಸಿದ
ಗೌತಮ ಮಹರ್ಷಿಗಳನ್ನು ರಾಮನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಸತ್ಕರಿಸಿದನು. ನಂತರದಲ್ಲಿ:
ಇವರ ವ್ಯವಹಾರವನು ಪರಿಹರಿ
ಸುವ ವಿಚಾರವ ಮಾಡಿ ಮನದಲಿ
ರವಿಕುಲಾನ್ವಯ ರಾಮ ನೆನೆದನು ಹೃದಯಶುದ್ಧಿಯಲಿ
-
ಶಿವನ ಧ್ಯಾನಿಸಲಾ ಕ್ಷಣವೆ ತ್ರೈ
ಭುವನಕರ್ತರು ಇಂದ್ರ ಮೊದಲಾ
ದವರು ಬಂದರಯೋಧ್ಯಾಪುರಧಾಮನೋಲಗಕೆ -೧೨೯
ವಸುಗಳು, ಅಮರರು, ಭುಜಂಗಾಮರರು, ಅಸುರ, ಕಿನ್ನರ, ಯಕ್ಷ, ರಾಕ್ಷಸ, ಶಶಿ-ರವಿಗಳು, ಆದಿತ್ಯ,
ವಿದ್ಯಾಧರರು, ಗುಹ್ಯಕರು, ವಸುಧೆಯಮರರು(ಬ್ರಾಹ್ಮಣರು),
ಕ್ಷತ್ರಿಯರು, ಜೋಯಿಸರು, ವೈಶ್ಯ
ಚತುರ್ಥರು, ಉನ್ನತ ಕುಶಲ ವಿದ್ಯಾಧಿಕರು ನೆರೆದುದು ನೃಪನ ಸಭೆಯೊಳಗೆ.
ಇಂತೆಸೆವನಾ ಸಭೆಯೊಳಗೆ ಮತಿ
ವಂತ ನುಡಿದನು ಧಾನ್ಯವರ್ಗದ
ಸಂತತಿಯ ಬರಹೇಳಿಯೆನೆ,
ಸೆರೆಮನೆಯೊಳಿರ್ದವರು
ನಿಂತು ಕರಗಳ ಮುಗಿದು 'ಧರಣೀ
ಕಾಂತ ರಘುವರನೀ ಸುಬುದ್ಧಿಯ
ನೆಂತು ನಮಗರುಹುವಿಯದ ಪೇಳೆಂದ'
ನರೆದಲೆಗ -೧೩೧
ಕೂಡಿದ ಸಭೆಯೊಳಕ್ಕೆ
ನರೆದಲೆಗ-ವ್ರಿಹಿಗರನ್ನು ಕರೆಸಲಾಯಿತು. ಆಗ ನರೆದಲೆಗನು "ಅಯ್ಯಾ, ರಘುವರನೇ, ನಮ್ಮಿಬ್ಬರ ನಡುವಿನ ವ್ಯಾಜ್ಯ ಬಗೆಹರಿಸಲು ನೀವು ಯಾವ ನ್ಯಾಯವನ್ನು ತಿಳಿಸಲಿರುವಿರಿ?"
ಎಂದು ಕೇಳಿದ.
ಎನಲು ರಾಮನೃಪಾಲ ನೋಡಿದ
ಘನ ತಪೋಮಹಿಮರಿಗೆ ನುಡಿದನು -
’ಮನವ ವಂಚಿಸಲಾಗದೀ ಧರ್ಮವನು ನೆರೆ ತಿಳಿದು
ಅನುನಯದೆ ಪೇಳೆ’ನೆ, ಮುನೀಂದ್ರರು
ಅನಿಮಿಷರನೀಕ್ಷಿಸಿದರಲ್ಲಿಯ (ಅನಿಮಿಷರು-ದೇವತೆಗಳು)
ಘನ ಮಹಾಸಭೆಯೊಳಗೆ ಭಾರ್ಗವ ರಾಮನಿಂತೆಂದ -೧೩೨
’ಆರು ನುಡಿಯರೆ! ನೀವು ಹಿರಿಯರು, ಮೀರಿಸುವರಾರಿವರೊಳಗೆ
ಗುಣಸಾರನ್ ಆವನು ಪೇಳ್’ ಎನಲು, ಜಂಭಾರಿ ನಸುನಗುತ "ಸಾರಹೃದಯನು
ನರೆದಲೆಗ; ನಿಸ್ಸಾರನೀ ವ್ರಿಹಿ" ಎನಲು, ಮರುತಾತ್ಮಜ ನೋಡಿದನು ಸನ್ನೆಯಲಿ ನಾರದನ. (ಜಂಭಾರಿ - ಜಂಭಾಸುರ ಎಂಬ ರಾಕ್ಷಸನ ವೈರಿ,
ಇಂದ್ರ; ಮರುತಾತ್ಮಜ - ಹನುಮಂತ)
"ಅಹುದಹುದು, ಸುರಪನ (ಇಂದ್ರ)
ಮಾತು ನಿಶ್ಚಯವಹುದು; ನರೆದಲೆಗನೆ ಸಮರ್ಥನು, ಬಹಳ
ಬಲಯುತ. ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ. ಸಹಜವಿದು. ಪರಪಕ್ಷವಾದಡೆ (ಪ್ರತಿಪಕ್ಷದವನು - ಭತ್ತ)
ವ್ರಿಹಿ ಕರಗಿ ಕಂದಿದನು ಸೆರೆಯಲಿ. ವಿಹಿತವಿದು ಕೇಳ್" ಎಂದು ನಾರದ ನುಡಿದನು ನಸುನಗುತ.
"ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು,
ಹುಸಿಯಲ್ಲ. ಬಡವರ-ಬಲ್ಲಿದರನಾರೈದು ಸಲಹುವನ್ ಇವಗೆ ಸರಿಯುಂಟೆ? ನೆಲ್ಲಿನಲಿ ಗುಣವೇನು, ಭಾಗ್ಯದಿ ಬಲ್ಲಿದರ ಪತಿಕರಿಸುವನು
(ಪತಿಕರಿಸು - ಒಲಿಯುವುದು, ಕೃಪೆ ಮಾಡು). ಅವನಲ್ಲಿ ಸಾರವ ಕಾಣೆ"
ಎಂದನು ಕಪಿಲ ಮುನಿ ನಗುತ.
ಹೀಗೆ, ಸುರರೂ ಮುನಿಗಳೂ
ಧಾನ್ಯಗಳ ಪೈಕಿ ನರೆದಲೆಗನೇ ಉತ್ತಮನೆಂಬುದನ್ನು ಒಪ್ಪಿ ನುಡಿದರು.
ಸುರಮುನಿಗಳಿಂತೆನಲು, ಭೂಸುರ
ವರರು, ಸಂತೋಷಿಸಲು ಸಭಿಕರು
'ನರೆದಲೆಗ ನೀ ಬಾ'ರೆನುತ ರಾಮನೃಪಾಲ
ನೆರೆಮೆಚ್ಚಿ
ಕರೆದು ಕೊಟ್ಟನು ತನ್ನ ನಾಮವ
ಧರೆಗೆ "ರಾಘವ"ನೆಂಬ ಪೆಸರಾ (ರಾಘವ --> ರಾಗಿ)
ಯ್ತಿರದೆ ವ್ರಿಹಿ ನಾಚಿದನು. ಸಭೆಯಲ್ಲಿ ಶಿರವ ಬಾಗಿಸಿದ. -೧೩೬
ಹಾಗೆ ಎಲ್ಲರ ಸಮಕ್ಷಮದಲ್ಲಿ
ರಾಮನು ನರೆದಲೆಗನನ್ನು ಉತ್ತಮನೆಂದು ಘೋಷಿಸಿ, ತನ್ನ ಹೆಸರಾದ ’ರಾಘವ’ನೆಂಬ ನಾಮವನ್ನೇ ನರೆದಲೆಗನಿಗೂ
ಕೊಟ್ಟನು. "ಹರುಷ ತೋರಿದ ಮನದಿ ನಲಿವುತ ನರೆದಲೆಗನೈತಂದು ರಾಮನ ಸಿರಿಚರಣಕೆ
ಅಭಿನಮಿಸೆ, ದೇವಾಸುರರು ಕೊಂಡಾಡೆ, ಹರಸಿ
ಮುತ್ತಿನ ಸೇಸೆಯನು ಭೂಸುರರು ಮಂತ್ರಾಕ್ಷತೆಯನ್ ಇತ್ತು ಉಪಚರಿಸಿದರು ರಾಗಿಯನು...." ಹೀಗೆ ರಾಗಿಯು ಸಭೆಯಲ್ಲಿ
ಎಲ್ಲರ ಮೆಚ್ಚುಗೆ, ಗೌರವ,
ಆಶೀರ್ವಾದಗಳಿಗೆ ಪಾತ್ರವಾಗುತ್ತದೆ.
ನಂತರದಲ್ಲಿ ಬ್ರಹ್ಮ, ಶಿವ, ಇಂದ್ರ, ಯಮ, ಕುಬೇರ ಮೊದಲಾದ
ದೇವತೆಗಳು ರಾಗಿಗೆ ವಿವಿಧ ಬಹುಮಾನಗಳನ್ನೂ, ವರಗಳನ್ನೂ ಕೊಟ್ಟು
ಹರಸಿದರು.
ಕರೆಸಿದಳು ಶರ್ವಾಣಿ(ಪಾರ್ವತಿ) ತನ್ನಯ ಮರುಳು ಬಳಗವನೆಲ್ಲ - "ನೀವೀ
ಧರಣಿಯಲಿ ಸತಿ ರೂಪವಂ ತಾಳ್ದು, ಅಗಣಿತದ ಮನೆಗಳಲಿ ಹುರುಳುಗೆಡಿಸದೆ ಸರ್ವಭೂತಾತ್ಮರಿಗೆ
ಪಕ್ವಾನ್ನವನು ನೀಡಿ" ಎಂದು ಉರುತರದ ಪ್ರೇಮದಲಿ ಕಳುಹಿದಳಗಜೆ (ಅಗಜೆ - ಪರ್ವತರಾಜನ ಕುಮಾರಿ,
ಪಾರ್ವತಿ) ಕರುಣದಲಿ.
ನಂತರದಲ್ಲಿ
ಹರಿಹರಬ್ರಹ್ಮಾದಿಗಳು ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸಿ ತಮ್ಮತಮ್ಮ ಲೋಕಗಳಿಗೆ ತೆರಳಿದರು.
ಸಭೆಗೆ ಆಗಮಿಸಿದ್ದ ದೇವಾಸುರರು, ಬ್ರಾಹ್ಮಣರು ಮುಂತಾದರೆಲ್ಲ
ಅನೇಕ ವರಗಳನ್ನು ಕರುಣಿಸಿ ಹರಸಿದ್ದರ ಫಲವಾಗಿ ನರೆದಲೆಗನು ಮುಂದೆ ಭುವಿಯಲ್ಲಿ ರಾಗಿ ಎಂದು
ಪ್ರಖ್ಯಾತನಾದನು.
ಹೀಗೆ ಸಭೆಯಲ್ಲಿ ರಾಗಿಯು ಎಲ್ಲರಿಂದ
ಪ್ರಶಂಸೆ ಪಡೆದುದನ್ನು ಕಂಡು ತನಗಾದ ಮಾನಭಂಗವನ್ನು ನೆನೆಯುತ್ತ ಚಿಂತೆಗೊಳಗಾಗಿದ್ದ
ವ್ರಿಹಿಗನನ್ನು ರಾಮನು ಕರೆದು ಪ್ರೇಮದಿಂದ ಮಾತನಾಡಿಸಿದನು. "ಅಯ್ಯಾ ವ್ರಿಹಿಗ, ಏಕೆ ಕೊರಗುತ್ತೀಯೆ.
ನಾವು ಭೂಮಿಯಲ್ಲಿ ನರೆದಲೆಗನೇ ಉತ್ತಮನೆಂದು ಹೇಳಿದ್ದನ್ನು ಕೇಳಿ ಖತಿಗೊಂಡಿರುವೆಯಾ? ಈತನು ಕ್ಷಾಮಕಾಲದಲ್ಲೂ ಜನರನ್ನು ಕರುಣೆಯಿಂದ ಕಾಯುತ್ತಾನೆಯಾದ್ದರಿಂದ ಅವನನ್ನು
ಪತಿಕರಿಸಿದೆವು. ಅಷ್ಟೇ ಹೊರತು ನಿನ್ನನ್ನು ಹೀಗಳೆಯುವುದು ನಮ್ಮ ಉದ್ದೇಶವಲ್ಲ."
"...ನಮ್ಮೆಡೆಗೆ ನೀನು ಸುರಧೇನುವಿನ ಸಮ. ನಿನ್ನ ಚಿತ್ತದಿ
ಹಾನಿದೋರಲದೇಕೆ, ಬಿಡು ಬಿಡು ಚಿಂತೆ ಯಾಕೆಂ"ದ
"ದೇವರಿಗೆ ಪರಮಾನ್ನ ನೀ. ಮನು
ಜಾವಳಿಗೆ ಪಕ್ವಾನ್ನವೀತನು.
ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು.
ನಾವು ಕೊಟ್ಟೆವು ವರವ, ಸಲ್ಲುವು
ದಾವ ಕಾಲದಲಿನ್ನು ನೀವೇ ಪಾವನರು ಸುಖಿ"ಯೆಂದುಪಚರಿಸಿದನು ನೃಪತಿ. - ೧೪೯
ಹೀಗೆ ವ್ರಿಹಿಗನನ್ನು
ಸಂತೈಸಿ, ಇತರ
ಧಾನ್ಯಗಳನ್ನೂ ಹರಸಿ ಹಲವು ವರಗಳನಿತ್ತು ರಾಮನು ಎಲ್ಲ ಧಾನ್ಯಗಳನ್ನೂ ಕಳುಹಿಸಿದ.
ಶಾಂಡಿಲ್ಯ ಮುನಿಗಳು
ಯುಧಿಷ್ಠಿರನಿಗೆ ಈ ಕಥೆಯೆಲ್ಲವನ್ನು ವಿಸ್ತಾರವಾಗಿ ಹೇಳಿದರು. ಯುಧಿಷ್ಠಿರನು ರಾಮಧಾನ್ಯದ
ಚರಿತೆಯನ್ನು ಕೇಳುವ ಭಾಗ್ಯ ತನ್ನದಾಯ್ತೆಂದು ಸಂತಸದಿಂದ ಶಾಂಡಿಲ್ಯ ಮುನಿಯ ಪಾದಗಳಿಗೆರಗಿ
ವಂದಿಸಿದ.
ಶಾಂಡಿಲ್ಯಮುನಿಯು:
"ಅರಸ, ನೀ ಮನವೊಲಿದು ಕೇಳದ
ಚರಿತೆ ತಾನೊಂದಿಲ್ಲ. ಲೋಕದಿ
ಪರಮ ಪುಣ್ಯದ ರಾಮಕಥೆಯಿದ ಕೇಳ್ದೆ ನೀನಿಂದು
ಕೊರತೆಯುಂಟೇ? ಇಷ್ಟಭೋಗವ
ಹರಿ ಕೊಡುವ ನಿಮಗಿನ್ನು"ಯೆನುತುಪ
ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ. -೧೫೭
ಶರಧಿಶಯನ ಮುಕುಂದ ಸಚರಾ
ಚರಭರಿತ ನಿರ್ಗುಣ ನಿರಾಮಯ
ಸುರ ನರೋರಗವಂದ್ಯ ವರಪುರದಾದಿಕೇಶವನ
ಚರಣದಂಕಿತಮಾಗಿ ಪೇಳಿದ
ಪರಮಧಾನ್ಯದ ಚರಿತೆ ಸಂತತ
ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ. -೧೫೮
"ಮಂಗಳಂ"
thank you very much for the article sir :)
ReplyDelete