Friday, 27 March 2015

ಕವಿ ಪರಿಚಯ: ಆಂಡಯ್ಯ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಕವಿ ಆಂಡಯ್ಯ. ಈತ 'ಕಬ್ಬಿಗರ ಕಾವ' ಎಂದು ಪ್ರಚಲಿತವಾದ ಕಾವ್ಯದ ಕರ್ತೃ.
ಈತ ತನ್ನ ಸ್ಥಳದ ಬಗೆಗೆ ಕಾವ್ಯದಲ್ಲಿ ಸ್ಪಷ್ಟವಾಗಿ ಹೇಳಿಕೊಂಡಿಲ್ಲ.. ಆದರೆ ಅವನು ಬಣ್ಣಿಸಿರುವ 'ಕನ್ನಡಮೆನಿಪ್ಪಾನಾಡು..' ಬನವಾಸಿ ಇರಬೇಕೆಂದು ಊಹಿಸಲಾಗಿದೆ. ಇನ್ನುಳಿದಂತೆ, ಕಾವ್ಯದಲ್ಲಿ ಸಂಕ್ಷಿಪ್ತವಾಗಿ ಕವಿಯು ತನ್ನ ಪ್ರವರವನ್ನು ಹೇಳಿಕೊಳ್ಳುತ್ತಾನೆ : ಪರಮ ಜಿನಭಕ್ತನೂ, ಸದಾಚಾರಿಯೂ, ವಿದ್ವಾಂಸನೂ ಆದ ಆಂಡಯ್ಯನೆಂಬುವವನಿಗೆ ಸಾಂತ, ಗುಮ್ಮಟ ಮತ್ತು ವೈಜಣನೆಂಬ ಮೂವರು ಮಕ್ಕಳಾದರು. ಇವರಲ್ಲಿ ಹಿರಿಯನಾದ ಸಾಂತ ಹಾಗೂ ಅವನ ಹೆಂಡತಿ ಒಲ್ಲವ್ವೆ, ಇವರಿಬ್ಬರ ಮಗನೇ ಕವಿ - ಆಂಡಯ್ಯ.  (ಈತನ ಹೆಸರಿನ ಬಗ್ಗೆ ಕೆಲವು ಚರ್ಚೆಗಳಿದ್ದು, ಈತನ ಹೆಸರು ಬ್ರಹ್ಮಯ್ಯನೆಂದೂ, ಅದಕ್ಕೆ ಸಂವಾದಿಯಾಗಿ ಆಂಡಯ್ಯ ಎಂದಾಗಿರಬೇಕೆಂದೂ ಹೇಳುವವರಿದ್ದಾರೆ. ಆಂಡಿ ಎಂದರೆ ತಮಿಳಿನಲ್ಲಿ ಜೈನ ಸನ್ಯಾಸಿ ಎಂದು ಬಳಕೆಯಾಗುವ ಉದಾಹರಣೆಯನ್ನೂ ಈತನ ಹೆಸರಿಗೆ ಪ್ರಸ್ತಾಪಿಸಲಾಗಿದೆ.)
ಕಾವ್ಯದ ಹಲವು ಭಾಗಗಳಲ್ಲಿ ಜಿನಸ್ತುತಿಯಿರುವುದರಿಂದಲೂ, ಹಾಗೂ ಕಾವ್ಯಾರಂಭದಲ್ಲಿ ರನ್ನ,ಜನ್ನ ಮೊದಲಾದ ಜೈನಕವಿಗಳನ್ನು ನೆನೆದಿರುವುದರಿಂದಲೂ ಈತನು ಜೈನಕವಿಯಿರಬೇಕೆಂದು ಊಹಿಸಬಹುದು.

ಕಥಾವಸ್ತು
ಶಿವನು ಚಂದ್ರನನ್ನು ಅಪಹರಿಸಿದನೆಂದು ತಿಳಿದು ಕಾಮನು ಕ್ರುದ್ಧನಾಗುತ್ತಾನೆ. ತನ್ನ ಸೈನ್ಯದೊಡನೆ ಶಿವನ ಮೇಲೆ ಯುದ್ಧಕ್ಕೆ ಹೊರಡುತ್ತಾನೆ.
ಕಾಮನ ಸೈನ್ಯದೆದುರು ಶಿವನು ಕಳುಹಿಸಿದ ವೀರಭದ್ರನು ಸೋಲುತ್ತಾನೆ. ಮುಂದೆ ಶಿವನೇ ಕಾಮನೊಡನೆ ಹೋರಾಡುತ್ತಾನೆ. ಆದರೆ ಕಾಮನು ಪ್ರಯೋಗಿಸಿದ ಬಾಣಗಳು ತಾಗಿ ಶಿವನು ಅರೆವೆಣ್ಣಾಗುತ್ತಾನೆ. ಇದರಿಂದಾಗಿ ಶಿವನು ಕಾಮನಿಗೆ "ನೀನು ನಿನ್ನ ಪ್ರಿಯೆಯನ್ನು ಆಗಲಿ, ನೀನಾರೆಂದೇ ತಿಳಿಯದೆ ಯಾರಿಗೂ ತಿಳಿಯದ ಜಾಗದಲ್ಲಿ ತಲೆಮರೆಸಿಕೊಂಡಿರು" ಎಂದು ಶಾಪವನ್ನು ಕೊಡುತ್ತಾನೆ.
ಶಾಪದಿಂದ ಕಾಮನು ತಾನು ಯಾರೆಂದೇ ಮರೆತು ಇರುತ್ತಿರುವಾಗ ಒಬ್ಬ ಅಪ್ಸರೆಯು ಬಂದು ಅವನಿಗೆ ಹಿಂದೆ ನಡೆದ ವಿಷಯವನ್ನು ತಿಳಿಸುತ್ತಾಳೆ. ಅಲ್ಲಿಗೆ ಅವನಿಗೆ ಶಾಪವಿಮೋಚನೆಯಾಗಿ ಮುಂಚಿನ ಸಂಗತಿ ನೆನಪಾಗುತ್ತದೆ. ನಂತರದಲ್ಲಿ ಅವನು ತನ್ನ ಹೆಂಡತಿ ಇಚ್ಚೆಗಾರ್ತಿಯನ್ನು ಕೂಡಿಕೊಂಡು ಸುಖವಾಗಿರುತ್ತಾನೆ.

ಕಬ್ಬಿಗರ ಕಾವ
ಇತ್ತ ತೀರ ಸಣ್ಣದೂ ಅಲ್ಲದ, ಅತ್ತ ತೀರ ವಿಸ್ತಾರವಲ್ಲದ (ಮಹಾಕಾವ್ಯದಷ್ಟು) ಕಾವ್ಯವನ್ನು ಖಂಡಕಾವ್ಯವೆಂದೇ ಹೇಳಬಹುದು. ಅಚ್ಚಗನ್ನಡದಲ್ಲಿಯೇ ರಚನೆಯಾಗಿರುವುದು ಕಾವ್ಯದ ಮೊದಲ ವೈಶಿಷ್ಟ್ಯ. ಕಾಮನ ಕುರಿತಾದ ಕಾವ್ಯವಾದರೂ ಜುಗುಪ್ಸೆ ಹುಟ್ಟಿಸುವಂತಹ, ಮಿತಿಮೀರಿದ ಶೃಂಗಾರ ವರ್ಣನೆಯಿರದಿರುವುದೂ ಒಂದು ವಿಶೇಷ. ಅಷ್ಟೇ ಅಲ್ಲ, ತನ್ನ ಆಶ್ರಯದಾತ ರಾಜನ (ಕದಂಬ ಕಾಮದೇವ)ಚರಿತ್ರೆಯನ್ನೂ ಕಾವ್ಯದಲ್ಲಿ ಧ್ವನಿಸಿರುವುದು ಆಂಡಯ್ಯನ ಸ್ವತಂತ್ರ ಪ್ರತಿಭೆಯ ದ್ಯೋತಕವಾಗಿದೆ.
"ಸೊಗಸಾದ ಸಂಸ್ಕೃತವನ್ನು ಬೆರಕೆ ಮಾಡದೆಯೆ ಕನ್ನಡದಲ್ಲಿ ಮನೋಹರವಾಗಿ ಕಾವ್ಯವನ್ನು ಹೇಳುವುದಕ್ಕೆ ಮುಂಚಿನ ದೊಡ್ಡಕವಿಗಳು ಸಮರ್ಥರಾಗಲಿಲ್ಲ. ಮಾತನಾಡಿದ ಹಾಗೆ ಸೊಗಸಾಗಿ ಹೇಳುವ ಸಾಮರ್ಥ್ಯ ಸಂಪೂರ್ಣವಾಗಿ ಈತನಿಗೆ ಲಭಿಸಿದೆ; ಬೇರೆ ಯಾರಿಗೂ ಇಲ್ಲ" ಎಂದು ಸ್ವತಃ ಕವಿಯೇ ತನ್ನ ಬಗೆಗೆ ಹೇಳಿಕೊಳ್ಳುತ್ತಾನೆ.

ನಿಜ, ಈತನೊಬ್ಬನೇ ನಿಟ್ಟಿನಲ್ಲಿ ಯಶಸ್ವಿಯಾದವನೆಂದು ಹೇಳಬಹುದು. ಕಾವ್ಯವನ್ನು ಅವನು ಸಂಸ್ಕೃತವನ್ನು ಬೆರೆಸದೇ, ಅಚ್ಚಗನ್ನಡದಲ್ಲಿಯೇ ರಚಿಸಿದ್ದಾನೆ (ಕೆಲವು ಮರಾಠಿ ಶಬ್ದಗಳನ್ನು ಬಳಸಿರುವುದುಂಟು. ಸಂಸ್ಕೃತದ ಕೆಲವು ಪದಗಳು ತದ್ಭವ  ರೂಪದಲ್ಲಿ ಬಳಕೆಯಾಗಿವೆ). ಹೀಗೆ ವಿನೂತನ ರೀತಿಯಲ್ಲಿ ಬರೆದವರಲ್ಲಿ ಇವನೇ ಮೊದಲು, ಇವನೇ ಕೊನೆ.!(?)

No comments:

Post a Comment