ಇತ್ತೀಚೆಗೆ
ಕನ್ನಡವೂ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಕಿರುಚಿತ್ರಗಳು ಹೆಚ್ಚುಹೆಚ್ಚಾಗಿ ಮೂಡಿಬರುತ್ತಿವೆ.
ಐಟಿ ಉದ್ಯೋಗಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಜನರು ತಮ್ಮಲ್ಲಿನ
ಪ್ರತಿಭೆಯನ್ನು ಅನಾವರಣಗೊಳಿಸಲು ಕಿರುಚಿತ್ರವು ಒಳ್ಳೆಯ ಮಾಧ್ಯಮವಾಗಿ ರೂಪುಗೊಂಡಿದೆ. ಇಂದು
ಹೊಸ ಹೊಸ ತಂತ್ರಜ್ಞಾನಗಳ ಸಹಾಯದಿಂದ ಅತಿ ಕಡಿಮೆ ಖರ್ಚಿನಲ್ಲಿಯೇ ಸಿನಿಮಾ ನಿರ್ಮಾಣ ಮಾಡಲು
ಸಾಧ್ಯವಾಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಿರುಚಿತ್ರಗಳನ್ನು ತಯಾರಿಸುವಲ್ಲಿ ಯುವಜನತೆ
ಉತ್ಸಾಹ ತೋರುತ್ತಿದೆ. ಯೂಟ್ಯೂಬ್, ಫೇಸ್ಬುಕ್, ಟ್ವಿಟ್ಟರ್ ಮುಂತಾದ
ಸಾಮಾಜಿಕ ಜಾಲತಾಣಗಳ ಮೂಲಕ ಕಿರುಚಿತ್ರಗಳು ಹೆಚ್ಚುಹೆಚ್ಚು ಜನರನ್ನು ತಲುಪುತ್ತಿರುವುದೂ, ಹಾಗೂ ನೋಡುಗರಿಂದ ಅವುಗಳಿಗೆ
ಹೆಚ್ಚು ಹೆಚ್ಚು ಪ್ರೋತ್ಸಾಹ-ಮೆಚ್ಚುಗೆಗಳು ಲಭಿಸುತ್ತಿರುವುದೂ ನಿಜವಷ್ಟೆ. ಈ ಮೂಲಕ ನಮ್ಮ
ನಡುವೆಯೇ ಇರುವ ಹಲವಾರು ಪ್ರತಿಭೆಗಳು ನಮಗೆಲ್ಲರಿಗೂ -ಜಗತ್ತಿನ ಎಲ್ಲ ಭಾಗದಲ್ಲಿರುವವರಿಗೂ-
ಪರಿಚಯವಾಗುತ್ತಿವೆ. ಇದು ನಿಜಕ್ಕೂ ಸಂತಸದ ವಿಷಯ.
ಇತ್ತೀಚೆಗೆಷ್ಟೇ
ಯೂಟ್ಯೂಬಿನಲ್ಲಿ ಬಿಡುಗಡೆಯಾಗಿ, ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಅಪಾರವಾದ ಮೆಚ್ಚುಗೆಯನ್ನು
ಪಡೆದುಕೊಂಡ ಕಿರುಚಿತ್ರ ’ಅನಿರೀಕ್ಷಿತ’. ಮೊನ್ನೆಯಷ್ಟೇ ಈ ಚಿತ್ರದ ಬಗ್ಗೆ ’ಒನ್ ಇಂಡಿಯಾ’ ಕನ್ನಡ ಆನ್ಲೈನ್ ಪತ್ರಿಕೆಯಲ್ಲಿಯೂ
ಲೇಖನವೊಂದು ಪ್ರಕಟವಾಗಿತ್ತು.
ಇಷ್ಟೆಲ್ಲ
ಮೆಚ್ಚುಗೆಯನ್ನು ಪಡೆದ ಈ ಕಿರುಚಿತ್ರವನ್ನು ತಯಾರಿಸಿದ ತಂಡ ನಮ್ಮ ಸಂಸ್ಥೆಯ ಉದ್ಯೋಗಿಗಳೇ ಎಂಬುದು
ನಿಜಕ್ಕೂ ನಮಗೆ ಹೆಮ್ಮೆಯ ವಿಷಯ. ವೇಗವಾಗಿ ಸಾಗಿಹೋಗುತ್ತಿರುವ ಯಾಂತ್ರಿಕ ಜೀವನದ ನಡುವೆ ತಮ್ಮ
ಹವ್ಯಾಸ-ಕಲೆ-ಪ್ರತಿಭೆಗಳಿಗೂ ಸಮಯವನ್ನು ಮಾಡಿಕೊಂಡು ಅಪರೂಪದ ಚಿತ್ರವೊಂದನ್ನು ನಿರ್ಮಿಸಿದ್ದಾರೆ
’ಅನಿರೀಕ್ಷಿತ’ ಚಿತ್ರತಂಡ. ನಮ್ಮ ಬಳಗದವರೇ ಆದ ಶ್ರವಣ್’ರವರು ಈ ಚಿತ್ರಕ್ಕೆ
ಚಿತ್ರಕತೆ-ಸಂಭಾಷಣೆಯನ್ನು ರಚಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದ
ತಾರಾಗಣದಲ್ಲಿ ಶ್ರವಣ್, ಸಂದೀಪ್
ಹಾಗೂ ಪ್ರೀತಿ ಇದ್ದಾರೆ. ರಾಜಾರಾಮ್ ರಾಮಮೂರ್ತಿಯವರು ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ.
ಲಿಂಗರಾಜುರವರ ಛಾಯಾಗ್ರಹಣವಿರುವ ಈ ಚಿತ್ರದ ಸಂಕಲನ ಕಾರ್ಯವನ್ನು ಜಗದೀಶ್’ರವರು
ನಿರ್ವಹಿಸಿದ್ದಾರೆ.
ಅನಿರೀಕ್ಷಿತ:
ಚಿತ್ರದ
ನಿರ್ದೇಶಕ ಶ್ರವಣ್’ರವರೇ ಹೇಳುವಂತೆ ಇದು ಟಿ.ಪಿ.ಕೈಲಾಸಂ ರವರ "ಗಂಡಸ್ಕತ್ರಿ" ಎಂಬ
ನಾಟಕದ ಪ್ರೇರಣೆಯಿಂದ ಮೂಡಿಬಂದಿರುವ ಚಿತ್ರ. ಆದರೆ, ’ಗಂಡಸ್ಕತ್ರಿ’ಯ ಕತೆ
ಹಳೆಯದಾದರೂ, ಅದನ್ನು ಈ
ಕಾಲಕ್ಕೆ ಹೊಂದುವಂತೆ ಹಲವಾರು ಮಾರ್ಪಾಟುಗಳನ್ನು ಮಾಡಿಕೊಂಡು ಚಿತ್ರಕತೆ-ಸಂಭಾಷಣೆಯನ್ನು
ರಚಿಸಿದ್ದಾರೆ, ಶ್ರವಣ್.
ಹಾಗಾಗಿ ಈ ಚಿತ್ರವನ್ನು ನಾಟಕದ ಹಿನ್ನೆಲೆಯಲ್ಲಿಯೇ ವಿಮರ್ಶಿಸುವುದು ಸೂಕ್ತ ಎಂದು
ನನಗೆನಿಸುತ್ತದೆ.
ಮೊದಲಿಗೆ
ಕತೆಗೆ ಅಷ್ಟಾಗಿ ಅಗತ್ಯವೆನಿಸದ, ನಾಟಕದಲ್ಲಿನ
ಪಾತ್ರಗಳನ್ನು ಕಡಿಮೆ ಮಾಡಿ ಮುಖ್ಯಕತೆಗೆ ಬೇಕಿರುವಷ್ಟೇ(೩) ಪಾತ್ರಗಳನ್ನು ಮಾತ್ರ ಚಿತ್ರದಲ್ಲಿ
ಉಳಿಸಿಕೊಂಡಿದ್ದಾರೆ ಎಂಬುದನ್ನು ನಾವು ಗಮನಿಸಬಹುದು. ಹಾಗಾಗಿ ಈ ಮೂರು ಪಾತ್ರಗಳಿಗೆ ಮಾತ್ರ ಬೇಕಾದಷ್ಟು
ಫೋಕಸ್ ಮಾಡಲು ಸಾಧ್ಯವಾಗಿದೆ (ಕತೆಯ ಹರಹಿಗೆ ತಕ್ಕಂತೆ ಬೇರೆ ಪಾತ್ರಗಳು ಅನುಷಂಗಿಕವಾಗಿ
ಪ್ರಸ್ತಾಪಿಸಲ್ಪಡುತ್ತವೆ). ಕತೆಯ ಹರಿವು, ಅಂತ್ಯದಲ್ಲಿಯೂ
ಸೂಕ್ತವಾದ ಬದಲಾವಣೆಗಳಾಗಿವೆ. ಈ ಎಲ್ಲ ಮಾರ್ಪಾಟುಗಳೇನೇ ಇದ್ದಾಗಿಯೂ ’ಅನಿರೀಕ್ಷಿತ’ದ ಮೂಲಕ
ಕೈಲಾಸಂರವರ ನಾಟಕವೊಂದು ಹೊಸರೂಪದಲ್ಲಿ ಇಂದಿನ ಜನರಿಗೆ ತಲುಪಿದೆ ಎಂದರೆ ಅತಿಶಯವಲ್ಲ. ಯಾವ
ರೀತಿಯಲ್ಲಿ ಆ ನಾಟಕದಲ್ಲಿನ ಕತೆ ಇಂದಿಗೂ ಪ್ರಸ್ತುತ ಎಂಬುದನ್ನು ಶ್ರವಣ್’ರವರು ನಿರೂಪಿಸಿದ್ದಾರೆ.
ಅವರ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ.
ಕೇವಲ
ಹದಿನಾಲ್ಕು+ ನಿಮಿಷದ ಅವಧಿಯಲ್ಲಿ ಈ ಕತೆಯನ್ನು ತೆರೆಯ ಮೇಲೆ ಸಮರ್ಥವಾಗಿ ಮೂಡಿಸಿದ್ದಾರೆ.
ಮೂಲ ಕತೆಗಿಂತ ಭಿನ್ನವಾದ ಶೈಲಿಯಲ್ಲಿ ಕತೆಯನ್ನು ನಿರೂಪಿಸಿರುವುದು ಹೆಚ್ಚು ಅರ್ಥವತ್ತಾಗಿದೆ.
ಹಿಂದೆ ಏನಾಗಿತ್ತೋ, ಮುಂದೆ
ಏನಾಗುವುದೋ ಎಂಬ ಪ್ರಶ್ನೆಗಳನ್ನು, ಊಹೆಗಳನ್ನು
ಪ್ರೇಕ್ಷಕನ ಮನಸಿನಲ್ಲಿ ಮೂಡಿಸುವ ಹಾಗೆ ಸ್ಕ್ರೀನ್ ಪ್ಲೇ ಇರುವುದು ಚಿತ್ರದ ಹೆಸರಿಗೆ ಚೆನ್ನಾಗಿ
ಒಪ್ಪುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕನ, ಸಂಕಲನಕಾರನ
ಚಾತುರ್ಯ ಮೆಚ್ಚಲೇಬೇಕು.
ಹಾಗೆ
ನೋಡಿದರೆ ’ಗಂಡಸ್ಕತ್ರಿ’ಯ ಕತೆ ಗಟ್ಟಿಯಾದದ್ದೇ ಆದರೂ ನಾಟಕ ಮಾತ್ರ ಒಟ್ಟಾರೆಯಾಗಿ ಸಾಧಾರಣವೆಂದೇ
ಹೇಳಬಹುದು. ನನಗೆ ಅನಿಸಿದ ಮಟ್ಟಿಗೆ - ನಾಟಕದಲ್ಲಿನ ಶೈಲಿ ಅಷ್ಟೇನೂ ಎಫೆಕ್ಟಿವ್ ಆಗಿಲ್ಲ.
ಏಕೆಂದರೆ ಕತೆಯಲ್ಲಿ ಸ್ವಲ್ಪ ಮಟ್ಟಿಗಿನ ಸಂಕೀರ್ಣತೆ ಇದ್ದಾಗಿಯೂ ನಾಟಕದ ಹರಿವು ಸರಳವಾಗಿ
ಸಾಗಿಹೋಗುತ್ತದೆ. ಅಲ್ಲಿ ಯಾವ ರೀತಿಯ ಸಸ್ಪೆನ್ಸ್’ಗೂ ಅವಕಾಶವಿಲ್ಲ. ಎಲ್ಲವೂ ಒಂದರ ನಂತರ
ಒಂದರಂತೆ ಕಣ್ಣೆದುರಿಗೇ ನಡೆದುಹೋಗುತ್ತದೆ.
ಆದರೆ
’ಅನಿರೀಕ್ಷಿತ’ದಲ್ಲಿ ಮಾಡಿಕೊಂಡ ಬದಲಾವಣೆಗಳು ಚಿತ್ರದಲ್ಲಿ ಕತೆಯು ಇನ್ನಷ್ಟು ರಸವತ್ತಾಗಿ
ಮೂಡಿಬರಲು ಕಾರಣವಾಗಿವೆ. ಈ ನಿಟ್ಟಿನಲ್ಲಿ ಹಿನ್ನೆಲೆ ಸಂಗೀತವೂ ಮಹತ್ವದ ಪಾತ್ರ ವಹಿಸಿದೆ.
ಶ್ರವಣ್’ರವರು
ಈ ಹಿಂದೆ ಕಿರುಚಿತ್ರದಲ್ಲಿ ನಟಿಸಿದ್ದರಾದರೂ ಈ ಚಿತ್ರದಲ್ಲಿ ಅವರ ನಟನೆ ಇನ್ನಷ್ಟು ಪಕ್ವಗೊಂಡಿದೆ
ಎಂದು ಹೇಳಬಹುದು. ಸಂದೀಪ್ ಹಾಗೂ ಪ್ರೀತಿ ಕೂಡ ತಮ್ಮ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ.
ಕಥೆಯಲ್ಲಿನ ಮುಖ್ಯ ಪಾತ್ರವಾಗಿರುವುದರಿಂದ, ಹಾಗೂ
ಕಣ್ಣುಗಳಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಪ್ರೀತಿಯವರ ನಟನೆ ಪ್ರತ್ಯೇಕ
ಮೆಚ್ಚುಗೆಗೆ ಪಾತ್ರವಾಗುತ್ತದೆ. ನಾಟಕದಲ್ಲಿಯೂ ಚಿತ್ರದಲ್ಲಿಯೂ ಪ್ರೇಕ್ಷಕರಿಗೆ (ಮುಖ್ಯವಾಗಿ
ನನಗೆ!) ಕತೆಯಲ್ಲಿನ ಈ ಹೆಣ್ಣಿನ ಪಾತ್ರದ ಬಗ್ಗೆ ಒಂದೇ ಬಗೆಯ ಪ್ರಶ್ನೆ, ಭಾವನೆ ಮೂಡುತ್ತದೆ.
ಇನ್ನು, ಚಿತ್ರದ ಪ್ರತಿ ಫ್ರೇಮ್
ಕೂಡ ಅಂದವಾಗಿ ಮೂಡಿಬಂದಿದೆ. ಛಾಯಾಗ್ರಾಹಕನ ಪರಿಶ್ರಮ ನಿಜಕ್ಕೂ ಫಲ ಕೊಟ್ಟಿದೆ. ಒಟ್ಟಾರೆ
ಚಿತ್ರತಂಡದಲ್ಲಿನ ಪ್ರತಿಯೊಬ್ಬರ ಡೆಡಿಕೇಷನ್ ಎಂತಹುದೆಂದು ಚಿತ್ರದ ಪ್ರತಿ ದೃಶ್ಯದಲ್ಲೂ ನಮಗೆ
ಕಂಡುಬರುತ್ತದೆ.
ಆದರೂ, ಚಿತ್ರದ
ಒಂದು ದೃಶ್ಯದಲ್ಲಿ ಆಕೆ ಅವನನ್ನು ’ಮುದಿಗೊಡ್ಡು..’ ಎಂದು ಸೂಚಿಸುವುದು ಚಿತ್ರಕತೆಯ ದೃಷ್ಟಿಯಿಂದ
ಅಷ್ಟು ಸರಿಯೆನಿಸದು. ಬಹುಶಃ ನಾಟಕದ ಪ್ರಭಾವದಿಂದ ಹೇಗೋ ಅದೊಂದು ವಾಕ್ಯ ಚಿತ್ರದಲ್ಲಿಯೂ
ಮೂಡಿಬಂದಿರಬಹುದು. ಅದೂ ಅಲ್ಲದೆ ಚಿತ್ರದಲ್ಲಿನ ಪಾತ್ರಗಳ ವಯಸ್ಸನ್ನು ನಾನು ಅರ್ಥೈಸಿಕೊಂಡದ್ದೇ
ತಪ್ಪಿರಬಹುದು. ಅದೇನೇ ಇರಲಿ, ಅದೇನೂ ಅಂತಹ
ದೊಡ್ಡ ವಿಷಯವೇನಲ್ಲ. ಇನ್ನುಳಿದಂತೆ ಅನಿರೀಕ್ಷಿತ ಗಟ್ಟಿಯಾಗಿದೆ.
ಚಿತ್ರಕತೆಯಲ್ಲಿ
ಮಾಡಿಕೊಂಡ ಬದಲಾವಣೆಗಳ ಪೈಕಿ ಕತೆಯ ಅಂತ್ಯ ಕೂಡ ಹೆಚ್ಚು ಸೂಕ್ತವಾಗಿದೆ.
ಒಟ್ಟಾರೆಯಾಗಿ
ಹೇಳುವುದಾದರೆ, ’ಗಂಡಸ್ಕತ್ರಿ’ಯೊಂದಿಗೆ
ತುಲನೆ ಮಾಡಿ ನೋಡಿದಾಗಿಯೂ, ’ಗಂಡಸ್ಕತ್ರಿ’ಯ
ಹಿನ್ನೆಲೆಯಲ್ಲಿ ನೋಡದೆ ’ಅನಿರೀಕ್ಷಿತ’ವನ್ನೇ ಪ್ರತ್ಯೇಕವಾಗಿ ನೋಡಿದಾಗಿಯೂ
"ಅನಿರೀಕ್ಷಿತ"ವು ಪ್ರೇಕ್ಷಕರ ಮೆಚ್ಚುಗೆಗೆ ಸರ್ವವಿಧದಲ್ಲಿಯೂ ಅರ್ಹವಾಗಿದೆ. ನನ್ನ
ಮಟ್ಟಿಗೆ ಹೇಳುವುದಾದರೆ ’ಅನಿರೀಕ್ಷಿತ’ವೇ ನನಗೆ ಹೆಚ್ಚು ಇಷ್ಟವಾಯಿತು.
"ನಾವಂದ್ಕೊಂಡ್ಹಾಗೇ
ಇಲ್ಲಿ ಎಲ್ಲ ನಡೆಯುತ್ತೆ ಅಂತ ತಿಳ್ಕೊಂಡ್ರೆ ಅದು ನಮ್ಮ ಮುಠ್ಠಾಳ್ತನ. ಯಾಕಂದ್ರೆ ಇಲ್ಲಿ
ಎಲ್ಲವೂ...... ’ಅನಿರೀಕ್ಷಿತ’!"
ಈ
ಸಂಭಾಷಣೆಯೊಂದಿಗೆ ’ಅನಿರೀಕ್ಷಿತ’ ಶುರುವಾಗುತ್ತದೆ. ಹಾಗಿದ್ದರೆ ಚಿತ್ರದ ಕೊನೆಯ ದೃಶ್ಯದಲ್ಲಿ
ಏನು ನಡೆಯಬಹುದು?
ಕೊನೆಯಲ್ಲಿ
ಏನಾಗುತ್ತದೆ ಎಂದು ತಿಳಿಯಲು ಇಂದೇ ’ಅನಿರೀಕ್ಷಿತ’ವನ್ನು ನೋಡಿ.
ಕೂಲಂಕುಶವಾಗಿ ಗಮನಿಸಿ ಬರೆದಂತಿದೆ ನಿಮ್ಮ ವಿಮರ್ಶೆ.. ಜೊತೆಗೆ ಸಂದೀಪ್ ಅವ್ರ T-ಶರ್ಟ್ ಬರಹ ಕೂಡ ಚಿತ್ರಕ್ಕೆ ಪೂರಕವಾಗಿದೆ. ಇಂತಹ ಕೆಲವು ಸಣ್ಣ ಸಂಗತಿಗಳೇ ಬೇರೆ ಚಿತ್ರಗಳಿಗಿಂತ ವಿಭಿನ್ನ ಅನ್ಸೋದು. good luck shravan.. Proud that you are my senior. :)
ReplyDelete