ನಾವು ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ, ಶಿಷ್ಟ ಸಾಹಿತ್ಯದ ಜೊತೆಜೊತೆಗೇ ತನ್ನದೇ ಆದ ವಿಶಿಷ್ಟತೆಗಳೊಂದಿಗೆ ಬೆಳೆದು ಬಂದ ಜನಪದ ಸಾಹಿತ್ಯವನ್ನು ಕಾಣುತ್ತೇವೆ. ಜನಪದ ಸಾಹಿತ್ಯವೂ ಕೂಡ ಯಾವುದೇ ಭಾಷೆಯ ಅಮೂಲ್ಯವಾದ ಆಸ್ತಿ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಆದರೆ ಬಹಳ ಕಾಲದವರೆಗೂ ಜನಪದ ಸಾಹಿತ್ಯವನ್ನು ಕೇವಲ ನಿರಕ್ಷರಸ್ತರ ಕಾವ್ಯ(!)ಸೃಷ್ಟಿಯೆಂದು ನಿರ್ಲಕ್ಷ್ಯ ಮಾಡಲಾಗಿತ್ತು. ಪುಣ್ಯವಶಾತ್, ಸ್ವಾತಂತ್ರಪೂರ್ವದಲ್ಲಿ ಕೆಲವು ಭಾಷಾಶಾಸ್ತ್ರಜ್ಞರು ಜನಪದ ಸಾಹಿತ್ಯದ ಮಹತ್ವವನ್ನು ಮನಗಂಡು ಅದರ ಕುರಿತಾದ ಸಂಶೋಧನೆ-ಸಂಗ್ರಹಣೆಗಳಲ್ಲಿ ತೊಡಗಿದರು. ಅಂದಿನಿಂದ ಶಿಷ್ಟ ಸಾಹಿತ್ಯದಂತೆಯೇ ಜನಪದ ಸಾಹಿತ್ಯಕ್ಕೂ ಮನ್ನಣೆ ದೊರೆಯಿತು.
ಇಷ್ಟಕ್ಕೂ ಈ ಜನಪದ ಸಾಹಿತ್ಯವೆಂದರೇನು? ಇದು ತನ್ನದೇ ಹಾದಿಯಲ್ಲಿ ಹುಟ್ಟಿ-ಬೆಳೆದು-ಉಳಿದು ಬಂದಿರುವ ಬಗೆ ಹೇಗೆ?
ಯಾವುದೇ ಒಂದು ಪ್ರದೇಶದ ಜನಸಮುದಾಯದಲ್ಲಿ - ಅವರ ಜೀವನ ಪದ್ಧತಿ, ಆಚರಣೆ, ನಂಬಿಕೆ, ಸಂಪ್ರದಾಯಗಳೂ ಸೇರಿದಂತೆ ಇತರ ವಿಚಾರಗಳನ್ನು ಕುರಿತಾದ - ಅಗಾಧವಾದ ಜ್ಞಾನವು ಮೌಖಿಕ ಪರಂಪರೆಯ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗಿಬಂದಿರುತ್ತದೆ. ಹೀಗೆ ಅದು ಸಾಗಿಬರಲು ಜನಪದ ಸಾಹಿತ್ಯವೂ ಒಂದು ಮಾಧ್ಯಮ.
ಹಿಂದೆಯೇ ಹೇಳಿದಂತೆ, ಇದು ಒಬ್ಬರಿಂದ ಒಬ್ಬರಿಗೆ - ಮೌಖಿಕ ರೂಪದಲ್ಲಿ ಹರಿದುಬಂದ ಜ್ಞಾನ. ಭಾಷೆಗೆ ಲಿಪಿಯು ಕಾಣಿಸಿಕೊಳ್ಳುವ ಪೂರ್ವದಿಂದಲೇ ಮೌಖಿಕ ಅಭಿವ್ಯಕ್ತಿಯ ರೂಪದಲ್ಲಿ ಇಂತಹ ಜ್ಞಾನವು ಸೃಷ್ಟಿಗೊಂಡು ಪ್ರಸಾರಗೊಂಡಿತ್ತು. ಅಂದರೆ, ಶಿಷ್ಟ ಸಾಹಿತ್ಯ ರೂಪ ಪಡೆಯುವ ಮುಂಚೆಯೇ ಜನಪದ ಸಾಹಿತ್ಯವು ಅಸ್ತಿತ್ವದಲ್ಲಿತ್ತು. ಶಿಷ್ಟ ಸಾಹಿತ್ಯವು ಉದಯಗೊಂಡ ನಂತರ ಅವರೆಡೂ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡು, ಒಮ್ಮೊಮ್ಮೆ ಪರಸ್ಪರ ಪೂರಕವಾಗಿ ವಿಕಾಸಗೊಂಡು ಬೆಳೆದು ಬಂದಿವೆ."ಜನವಾಣಿ ಬೇರು, ಕವಿವಾಣಿ ಹೂವು" ಎಂಬ ಮಾತನ್ನು ನಾವಿಲ್ಲಿ ನೆನೆಯಬಹುದು.
ಜನಪದ ಸಾಹಿತ್ಯದ ಅನೇಕ ಪ್ರಕಾರಗಳ ಪೈಕಿ (ಒಗಟು, ಗಾದೆ, ಕಥೆ, ಗೀತೆ ಇತ್ಯಾದಿ) ಜನಪದ ಗೀತೆಗೇ ಅಗ್ರಸ್ಥಾನ ಸಲ್ಲುತ್ತದೆ. ಜನಪದರು ತಮ್ಮ ಸಂತೋಷ, ದುಃಖ ಅಶ್ಚರ್ಯಾದಿ ಭಾವಗಳನ್ನು ಅಭಿವ್ಯಕ್ತಗೊಳಿಸಲು ಜನಪದ ಗೀತೆಗಳು ಒಂದು ಪ್ರಶಸ್ತ ಮಾಧ್ಯಮವಾಗಿ ಅವರಿಗೊಲಿದಿದೆ. ಮೂಲತಃ ಭಾವಜೀವಿಗಳಾದ ಜನಪದರ ಭಾವೋದ್ಗಾರಗಳು ರಾಗವಾಗಿ ಪರಿಣಮಿಸಿ ಲಯಬದ್ಧವಾಗಿ ಹೊರಹೊಮ್ಮಿದಾಗ ಗೀತೆಗಳ ಉಗಮವಾಗುತ್ತದೆ. ಇಲ್ಲಿ ಅವರ ಜೀವನಾನುಭವಗಳು, ನೋವು-ನಲಿವುಗಳು, ಆಸೆ-ಕನಸುಗಳು ಸ್ವರ ಸ್ವರದಲ್ಲೂ ಜೀವ ತಳೆದು ನಿಲ್ಲುತ್ತವೆ. ಅವರ ಜೀವನದ ಪ್ರತಿ ಘಟ್ಟಗಳಲ್ಲೂ ಜನಪದ ಗೀತೆಗಳು ಇದ್ದೇ ಇರುತ್ತವೆ - ಬೆಳಿಗ್ಗೆ ಎದ್ದು ರಾಗಿ ಬೀಸಲು ತೊಡಗುವ ಹೆಣ್ಣುಮಗಳು ಗೀತೆಯನ್ನು ಹಾಡುತ್ತಲೇ ತನ್ನ ಕೆಲಸದಲ್ಲಿ ತೊಡಗುತ್ತಾಳೆ.ಭತ್ತ ಕುಟ್ಟುವಾಗ, ಅಕ್ಕಿ ಆರಿಸುವಾಗ, ಹೊಲದಲ್ಲಿ ಕೆಲಸ ಮಾಡುವಾಗ - ಹೀಗೆ ದಿನನಿತ್ಯದ ಪ್ರತಿ ಕಾರ್ಯದಲ್ಲೂ ಅವರಿಗೆ ಗೀತೆಗಳ ಸಾಂಗತ್ಯವಿದ್ದೇ ಇರುತ್ತದೆ. ಅದು ಅವರಿಗೆ ಕೆಲಸದ ಶ್ರಮವನ್ನು ಕಡಿಮೆಗೊಳಿಸಲೂ ಸಹಕರಿಸುತ್ತದೇನೋ!! ಅಂತೂ ಜನಪದ ಗೀತೆಯು ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ.
ಜನಪದ ಸಾಹಿತ್ಯದಲ್ಲಿ ಮಾತೃಪ್ರೇಮ
ಜನಪದ ಗೀತೆಗಳಲ್ಲಿ ಅಭಿವ್ಯಕ್ತಗೊಳ್ಳದ ಯಾವುದೇ ವಿಚಾರವೂ,ಭಾವವೂ ಇಲ್ಲವೇ ಇಲ್ಲವೆಂದು ಹೇಳಬಹುದು.
ಮುಖ್ಯವಾಗಿ ಮಾನವೀಯ ಸಂಬಂಧಗಳ ಕುರಿತಾದ ಗೀತೆಗಳು ನಮ್ಮನ್ನು ಬಹುವಾಗಿ ಸೆಳೆಯುತ್ತವೆ. ಅದರಲ್ಲೂ ತಾಯಿ/ತವರನ್ನು ಕುರಿತಾದ ಗೀತೆಗಳು - ಅತ್ಯಂತ ಸುಂದರವಾಗಿರುತ್ತವೆ.
ಭಾರತೀಯ ಹೆಣ್ಣುಮಕ್ಕಳಿಗೆ ತಮ್ಮ ತಾಯಿಯ ಬಗ್ಗೆ, ತಾನು ಹುಟ್ಟಿದ ಮನೆಯ ಬಗ್ಗೆ ಅಪಾರವಾದ ಮಮಕಾರವಿರುತ್ತದೆ. ಆ ಮಮಕಾರದ ಮೂರ್ತರೂಪವೇನೋ ಎನಿಸುವ ಈ ಗೀತೆಗಳು ತಮ್ಮ ಮಾಧುರ್ಯದಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಅವರ ಸರಳ ಭಾಷೆ, ಸರಳವಾದ ಭಾವ - ಅದನ್ನು ಅಷ್ಟೇ ಸರಳವಾಗಿ ವ್ಯಕ್ತಗೊಳಿಸುವ ರೀತಿ ನಿಜಕ್ಕೂ ತುಂಬ ಸೊಗಸಾಗಿರುತ್ತದೆ. ಅಂತಹ ಮಧುರ ಅಭಿವ್ಯಕ್ತಿಯ ಕೆಲ ಉದಾಹರಣೆಗಳು :
"ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಯಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ"
ತನ್ನ ತವರನ್ನು ಕುರಿತ ಹೆಣ್ಣೊಬ್ಬಳ ಹಾರೈಕೆಯಿದು. ಸಾಮಾನ್ಯವಾಗಿ, ಗರಿಕೆಯ ಹುಲ್ಲು ಯಾವಾಗಲೂ ಹಸಿರಾಗೇ ಇರುತ್ತದೆ(ನೀರಿನ ಅಭಾವದ ಕಾಲದಲ್ಲೂ). ಇಲ್ಲಿ ಈಕೆ, ತನ್ನ ತವರುಮನೆ 'ಹೊಳೆದಂಡಿಯಲ್ಲಿರುವ ಗರಿಕೆ'ಯ ಹಾಗೆ ಇರಲೆಂದು ಹಾರೈಸುತ್ತಿದ್ದಾಳೆ. ನಿತ್ಯವೂ ನೀರು ಹರಿಯುವ ಹೊಳೆಯ ದಡದಲ್ಲಿರುವ ಗರಿಕೆಯ ಹುಲ್ಲು ಎಂದೆಂದಿಗೂ ಹಸಿರಾಗೇ ಇರುತ್ತದೆಯಲ್ಲವೆ? ತನ್ನ ತವರುಮನೆಯ ಸಿರಿಯೂ ಹಾಗೆಯೇ ನಿತ್ಯ ಹಸಿರಾಗಿರಲೆಂದು ಆಕೆ ಹಾರೈಸುತ್ತಾಳೆ.
"ತವರೂರು ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟು ಮರಳಿಲ್ಲ, ಬಾನಲ್ಲಿ
ಬಿಸಲೀನ ಬೇಗೆ ಸುಡಲಿಲ್ಲ"
ತನ್ನ ತವರನ್ನು ಕಾಣಲು ಹೊರಟಿರುವ ಹೆಣ್ಣುಮಗಳೊಬ್ಬಳ ಮಾತಿದು. ತವರಿಗೆ ಹೊರಟಿರುವ ಖುಷಿಯಲ್ಲಿ ಆಕೆಗೆ ಹಾದಿಯಲ್ಲಿ ಎದುರಾಗುವ ಕಷ್ಟಗಳ ಪರಿವೆಯೇ ಇಲ್ಲ. ಬಿಸಿಲಿನ ಬೇಗೆಯೂ ಆಕೆಯನ್ನು ಕಾಡಲಿಲ್ಲ.ಆಕೆಗೆ ತನ್ನ ತವರನ್ನು ಕಾಣುವ ಸಂತಸದಲ್ಲಿ ಮಾರ್ಗಮಧ್ಯದ ಈ ಯಾವ ಎಡರು-ತೊಡರುಗಳೂ ಲೆಕ್ಕಕ್ಕೆ ಬರಲಿಲ್ಲ. ಹೀಗಿದೆ ಆಕೆಯ ತವರಿನ ಪ್ರೇಮ.
"ತೊಟ್ಟೀಲ ಹೊತ್ಕೊಂಡು ತೌರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತೌರೂರ
ತಿಟ್ತತ್ತಿ ತಿರುಗಿ ನೋಡ್ಯಾಳೊ"
ತನ್ನ ಚೊಚ್ಚಲ ಬಾಣಂತನವನ್ನು ಮುಗಿಸಿಕೊಂಡು ತನ್ನ ಗಂಡನ ಮನೆಗೆ ಹೊರಟಿರುವ ಹೆಣ್ಣೊಬ್ಬಳ ಚಿತ್ರಣವನ್ನು ಕೊಡುತ್ತದೆ - ಈ ಗೀತೆ.
ತಾಯಿಯ ಮನೆಯವರು ಕೊಟ್ಟ ಸೀರೆಯನ್ನುಟ್ಟು, ಅಪ್ಪ ಕೊಟ್ಟ ಎಮ್ಮೆಯನ್ನು ಹೊಡಕೊಂಡು ಹೊರಟಿದ್ದಾಳೆ - ಒಂದು ದಿಬ್ಬದ ಮೇಲೆ. ಆ ದಿಬ್ಬದ ಮೇಲೆ ನಿಂತು ತನ್ನ ತವರುಮನೆಯ ಕಡೆಗೆ ಒಮ್ಮೆ ನೋಡುತ್ತಿದ್ದಾಳೆ.. ದಿಬ್ಬವನ್ನು ಇಳಿದುಬಿಟ್ಟರೆ ಮತ್ತೆ ತವರುಮನೆ ಕಾಣಿಸದು, ಅದಕ್ಕೇ ಮುಂದೆ ಹೊರಡುವ ಮುಂಚೆ ಇನ್ನೊಮ್ಮೆ ಎನ್ನುವಂತೆ ತವರನ್ನು ನೋಡುತ್ತಿದ್ದಾಳೆ ಆಕೆ. ಎಷ್ಟು ಸುಂದರವಾದ, ಮನಮುಟ್ಟುವ ನಿರೂಪಣೆ!
ಇನ್ನು, ಆಕೆಗೆ ತನ್ನ ತಾಯಿಯ ಬಗೆಗಿರುವ ಪ್ರೀತಿ, ಭಕ್ತಿ ಅಷ್ಟಿಷ್ಟಲ್ಲ,
"ತೌರು ಮನೆಯ ಜ್ಯೋತಿ ತಣ್ಣಾಗೆ ಉರಿಯವ್ವ
ತಣ್ಣೀರಾಗೆ ಮಿಂದು ಮಡಿಯುಟ್ಟು ಬರುತೀನಿ
ತಣ್ಣಾಗೆ ಉರಿಯೆ ಜಗಜೋತಿ"
ಇಲ್ಲಿ ಆಕೆ ತನ್ನ ತಾಯಿಯನ್ನು ತವರಿನ ಮನೆಯ ಜ್ಯೋತಿ ಎಂದು ಕರೆದಿರುವುದು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ?
"ಕಾಶೀಗೆ ಹೋಗಲಿಕೆ ಏಸೊಂದು ದಿನ ಬೇಕು
ತಾಸ್ಸೊತ್ತಿನ ಹಾದಿ ತೌರೂರು ಮನೆಯಲ್ಲಿ
ಕಾಶಿ ಕುಂತವಳೆ ಹಡೆದವ್ವ"
"ಎಲ್ಲೋ ಇರುವ ಕಾಶಿಗೆ ಹೋಗಬೇಕೆಂದರೆ ಎಷ್ಟೋ ದಿನಗಳು ಬೇಕು. ಅಲ್ಲಿಗೆ ಹೋಗಲು ನನ್ನಿಂದ ಆಗುತ್ತದೋ ಇಲ್ಲವೋ, ಆದರೆ ತವರಿನ ಮನೆಯಂತೂ ಒಂದು ತಾಸು ಹೊತ್ತಿನ ಹಾದಿಯಷ್ಟೇ. ಅಲ್ಲಿಗೆ ಹೋದರೆ ಸಾಕು, ಅಲ್ಲಿ ನನ್ನ ತಾಯಿ ಇರುತ್ತಾಳೆ..." ಇಲ್ಲಿ ತನ್ನ ತಾಯಿಯನ್ನು ಕಾಶಿಯಂತಹ ಪುಣ್ಯಕ್ಷೇತ್ರಕ್ಕೆ ಹೋಲಿಸಿದ್ದಾಳೆ - ಈ ಹೆಣ್ಣುಮಗಳು, ಎಂತಹ ಉನ್ನತವಾದ ಕಲ್ಪನೆ.!
"ಯಾರು ಆದರೂ ಹೆತ್ತ ತಾಯಂತೆ ಆದಾರೋ
ಸಾವಿರ ಸೌದೆ ಒಲೆಯಲ್ಲಿ ಉರಿದಾರೂ
ದೀವಿಗೆಯಂತೆ ಬೆಳಕುಂಟೆ"
ಎಂತಹ ಅದ್ಭುತವಾದ ಹೋಲಿಕೆಯನ್ನು ಕೊಟ್ಟು ತಾಯಿಯ ಬಗೆಗೆ ಹೇಳುತ್ತಾಳೆ ಈ ಮಾತನ್ನು - "ಯಾವ ಬಂಧುಗಳು, ಆಪ್ತರೇ ಇದ್ದರೂ ಅವರಲ್ಲಿ ಯಾರೂ ಹೆತ್ತ ತಾಯಿಯನ್ನು ಸರಿಗಟ್ಟಲಾರರು. ತಾಯಿಗೆ ತಾಯಿಯೇ ಸಾಟಿ.
ಸಾವಿರ ಸೌದೆ ಉರಿಯಬಹುದು, ಅದು ಕೂಡ ಬೆಳಕು ಕೊಡುತ್ತದೆ. ಆದರೆ ಒಂದು ದೀಪವು ಕೊಡುವ ಸೌಮ್ಯವಾದ ಬೆಳಕಿಗೆ ಈ ಬೆಳಕು ಸರಿಹೋದೀತೆ?" ಇಲ್ಲ, ಖಂಡಿತ ಇಲ್ಲ. ಇಲ್ಲಿ, ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ದೀಪವು ಶುಭಸೂಚಕ. ಉರಿಯುವ ಸೌದೆಯಾದರೋ ಆಮಂಗಳವನ್ನು ಸೂಚಿಸುತ್ತದೆ.
"ಮೊಲೆಹಾಲ ಕುಡಿಸಿದ್ದಿ ಕಲಸಕ್ರಿ ತಿನಿಸಿದ್ದಿ
ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ
ಅಳುವುದೀಗೆಷ್ಟು ಹಡೆದವ್ವ"
ಯಾವುದೋ ದುಃಖದ ಸಂದರ್ಭದಲ್ಲಿ ಹೇಳುತ್ತಿರುವ ಮಾತಿನಂತಿದೆ - ಈ ಗೀತೆ. ತಾಯಿಯ ಪ್ರೇಮದ ಪರಾಕಾಷ್ಟತೆಯನ್ನು ಈ ಸಾಲುಗಳು ಕಣ್ಣಿಗೆ ಕಟ್ಟಿಕೊಡುತ್ತವೆ.
"ಬೆಳದಿಂಗ್ಳಿಗು ಮರಿಯ ಹಿಡಿದಿದ್ದಿ ನಿನ ಸೆರಗ" -- ತಾಯಿಗೆ ತನ್ನ ಮಗುವಿನ ಮೇಲೆ ಅದೆಷ್ಟು ಪ್ರೀತಿ ಎಂದರೆ, ಬೆಳದಿಂಗಳ ಕಿರಣಗಳು ಸೋಕಿ ಎಲ್ಲಿ ತನ್ನ ಕಂದನ ಮೊಗವು ಕಂದುವುದೋ ಎಂದು ಆಕೆ ತನ್ನ ಸೆರಗನ್ನು ಮರೆಹಿಡಿಯುತ್ತಾಳೆ. ತನ್ನ ಮಗುವಿಗೆ ಅಷ್ಟು ಮಾತ್ರವೂ ನೋವಾಗಬಾರದೆಂದು ಆಕೆಯ ಕಾಳಜಿ. ಅಂತಹ ಅನನ್ಯ ಮಾತೃಪ್ರೇಮವನ್ನು ಎಷ್ಟು ಸರಳವಾಗಿ ಚಿತ್ರಿಸಿಕೊಡುತ್ತವೆ ಈ ಸಾಲುಗಳು.!!
“ಕಣ್ಣೀಗೆ ಕಪ್ಪಾಸೆ ಬಣ್ಣಕ್ಕೆ ಸೆರಗಾಸೆ
ಹೆಣ್ಣುಮಕ್ಕಳಿಗೆ ತವರಾಸೆ ತಾಯವ್ವ
ನಿಮ್ಮದೆ ನಮಗೆ ಅನುಗಾಲ.”
“ಕಲ್ಲಾಸೆ ಕಟ್ಟೀಗಿ ಮುಳ್ಳಾಸೆ ಬೇಲೀಗಿ
ಬಲ್ಲಿದರಾಸೆ ಬಡವರಿಗೆ ನನಕಂದಾ
ನಿನ್ನಾಸೆ ನನಗೆ ಅನುಗಾಲ.”
ತಾಯಿ-ಮಗಳ ಸಂಭಾಷಣೆಯ ಪರಿಯಿದು. ತಾಯಿಗೆ ಯಾವಾಗಲೂ ತನ್ನ ಮಗಳದೇ ನೆನಪು, ಮಗಳಿಗೂ ಕೂಡ ತನ್ನ ತಾಯಿಯನ್ನು ನೋಡುವ ಹಂಬಲ - ಯಾವಾಗಲೂ.
'ಆಕಳ ಕರು ಬಂದು ಅಂಬಾ ಅಂಬಾ ಎಂದು
ತಮ್ಮವ್ವನ ಮೊಲೆಯ ನಲಿನಲಿದು ಉಂಬಾಗ
ನಮ್ಮವ್ವನ ಧ್ಯಾನ ನನಗಾಗಿ'
ಈ ಸಾಲುಗಳು ಸರಳವಾಗಿದ್ದರೂ ಅದರಲ್ಲಿ ವ್ಯಕ್ತವಾಗಿರುವ ಭಾವ ತುಂಬ ಆಳವಾದದ್ದು. ಅದನ್ನು ಮಾತುಗಳಲ್ಲಿ ವಿವರಿಸಿ ಹೇಳುವುದು ಕಷ್ಟವೇ...
ಇಂತಹ ಸಾವಿರಾರು ಸುಂದರವಾದ ಹಾಡುಗಳು ನಮ್ಮ ಜನಪದ ಸಾಹಿತ್ಯದಲ್ಲಿವೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಗೀತೆಗಳ ಸೃಷ್ಟಿಕರ್ತರು ಯಾರೋ ತಿಳಿಯದಾದರೂ ಈ ಗೀತೆಗಳು ಇರುವವರೆಗೂ, ಕನ್ನಡ ಭಾಷೆಯಿರುವವರೆಗೂ ಅವರು ಪ್ರತಿ ಗೀತೆಯಲ್ಲಿಯೂ ಜೀವಂತವಿರುತ್ತಾರೆ ಎಂದು ನನ್ನ ಭಾವನೆ.
ಸೂಪರ್
ReplyDeletethank you Harish :)
ReplyDeletetumba tumba chennagide,
ReplyDeletelokesh...
padyagala aayke mattu ullekha barahada andavannu hecchiside...
baraha nirantaravaagirali...
thanks a lot, Praveen
ReplyDeletekhanditha :)
ಎಂತ ಸಾಹಿತ್ಯ ಸರ್, ಜಾನಪದ ಕಲೆ ನಮ್ಮ ಜೀವನಾಡಿ
ReplyDeleteTq
ReplyDeleteThis comment has been removed by the author.
ReplyDelete