ಬಹಳಷ್ಟು ಸಾರಿ ಜನಪದ ಸಾಹಿತ್ಯದಲ್ಲಿ ಕಂಡುಬರುವ
ದೇವ-ದೇವಿಯರ ಚಿತ್ರಣ
ಶಿಷ್ಟಸಾಹಿತ್ಯದಲ್ಲಿ ಕಂಡುಬರುವ ವರ್ಣನೆಗಳಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಅದಕ್ಕೆ ಕಾರಣವೂ
ಇಲ್ಲದಿಲ್ಲ. ಏನೆಂದರೂ ಶಿಷ್ಟಸಾಹಿತ್ಯದಲ್ಲಿ ದೇವತೆಗಳಿಗೂ ನಮಗೂ ನಡುವೆ ಒಂದು ಮಟ್ಟಿನ ಅಂತರವಿದ್ದೇ
ಇರುತ್ತದೆ. ರವೀಂದ್ರರು ಗೀತಾಂಜಲಿಯ ಗೀತೆಯೊಂದರಲ್ಲಿ ಹೇಳುವಂತೆ "Drunk with
the joy of singing, I forget myself and call thee a friend who art my
lord", ಒಮ್ಮೊಮ್ಮೆ ಭಕ್ತಿ ಪರವಶತೆಯಲ್ಲಿ ಹಾಗೆ ಆ ಅಂತರವನ್ನು ಮರೆತು
ಏನನ್ನಾದರೂ ನುಡಿದುಬಿಟ್ಟರೂ ಕೂಡ ’ಆತ ದೇವರು, ನಾನು ಭಕ್ತ’ ಎನ್ನುವ ಸಂಗತಿ
ಗೌಣವಾಗಿಯಾದರೂ ಕಂಡೇ ಕಾಣಿಸುತ್ತದೆ. ಆದರೆ ಬಹುತೇಕ
ಜನಪದ ಗೀತೆಗಳಲ್ಲಿ ಆ ಭೇದ ಕಾಣಿಸದು.! ಅವರಿಗೆ ದೇವತೆಗಳು ಎಲ್ಲೋ ದೂರದಲ್ಲಿದ್ದಂತೆನಿಸುವುದಿಲ್ಲ.
ತಾವು ಆರಾಧಿಸುವ ಆ ದೈವಗಳು ತಮ್ಮ ದಿನನಿತ್ಯದ ಬದುಕಿನ ಒಂದು ಭಾಗವಾಗಿಯೇ ಕಾಣುತ್ತಾರೆ, ಅವರಿಗೆ. ರಾಗಿ ಬೀಸುವಾಗ, ಕಣ ಮಾಡುವಾಗ... ಅಷ್ಟೇಕೆ,
ಮರದ ನೆರಳಿನಲ್ಲಿ ಆರಾಮವಾಗಿ ಕುಳಿತಾಗ ಕೂಡ ಅವರ ಅವರ ಪದಗಳೂ, ಆ ಪದಗಳಲ್ಲಿ ಬರುವ ಅವರ ದೇವತೆಗಳೇ ಅವರಿಗೆ ಜೊತೆಗಾರರು.
ತಾವು ಪೂಜಿಸುವ ದೇವದೇವಿಯರೂ ಕೂಡ ತಮ್ಮಲ್ಲಿ ಒಬ್ಬರಂತೆಯೇ
ಕಾಣುತ್ತಾರೆ. ತಮ್ಮ ಮನೆಯ ಮಗನನ್ನೊ, ಅಣ್ಣತಮ್ಮಂದಿರನ್ನೊ ಮಾತಾಡಿಸಿದಂತೆ
ಮಾತಾಡುವಷ್ಟು ಸಲುಗೆ ಕಾಣುತ್ತದೆ ಅವರ ಪದಗಳಲ್ಲಿ. ಶಿಷ್ಟಸಾಹಿತ್ಯದಲ್ಲಿ ಅಂತಹ ರಚನೆಗಳೇ ಇಲ್ಲವೆಂದಲ್ಲ.
ಆದರೆ, ಆ ಬಗೆಯ ಭಾವದ ಸೊಬಗು ಜನಪದ ಸಾಹಿತ್ಯದಲ್ಲಿ ಸರಳವಾಗಿ, ಸಹಜವಾಗಿ, ಅಷ್ಟೇ ಸೊಗಸಾಗಿ ವ್ಯಕ್ತವಾಗುತ್ತದೆ ಎಂದರೆ
ತಪ್ಪಾಗಲಾರದು.
ಅವರು ತಮ್ಮ ದೇವರನ್ನು "ನಂಜನಗೂಡಲ್ಲಿ ನೆಂಟ ನೀನಿರುವಾಗ | ಎಂಟೆಂಟು ದಿನಕ ಬರುವೇನು ನಂಜುಂಡ | ಸೋಲಿಸಬೇಡ ಗೆಲಿಸಯ್ಯ||" ಎಂದು ಪ್ರಾರ್ಥಿಸುವುದೂ
ಉಂಟು. "ಯಾಕೊ ಲಿಂಗಯ್ಯ ಮುಖನೆಲ್ಲ ಸಪ್ಪಗೆ | ನೋಡೋಕೆ ಬಂದೋರು ನಗುತಾರೆ ಲಿಂಗಯ್ಯ | ಕಾಲೀಗೆ ಬಿದ್ದೇವು
ಕಲಿಯಾಗೊ ||" ಎಂದು
ದೇವರಿಗೇ ಧೈರ್ಯ ಹೇಳುವುದೂ ಉಂಟು. ’ಅಲ್ಲಪ್ಪ, ಲಿಂಗಯ್ಯ, ನೀನೇ ಹೀಗೆ ಸಪ್ಪೆ ಮೋರೆ ಹಾಕ್ಕೊಂಡು ಕೂತುಬಿಟ್ರೆ ಹೇಗೆ. ನಿನ್ನ ನೋಡೋಕೆ ಬಂದವರಾದರೂ
ಎನಂದುಕೊಂಡಾರು? ನಿನ್ನ ಕೊರಗು ಏನೇ ಇದ್ದರೂ ಅದನ್ನೆಲ್ಲ ಮರೆತು
ಕಲಿಯಾಗು’ ಅಂತ ಬುದ್ಧಿ ಹೇಳುವಷ್ಟು ಸಲುಗೆ ಅವರಿಗೆ. ಸಾಮಾನ್ಯವಾಗಿ ಮಕ್ಕಳು ಅತ್ತಾಗ
ಹೇಳುತ್ತೇವಲ್ಲ, "ಅಯ್ಯೊ, ಇಷ್ಟು
ದೊಡ್ಡೋನಾಗಿ ಹೀಗೆಲ್ಲ ಅಳ್ತಾರಾ. ನೋಡ್ದೋರು ನಗ್ತಾರೆ ಅಷ್ಟೇ..", ಹಾಗೆ..
ಇನ್ನು, ಹಾಸ್ಯಕ್ಕೆಂದೊ ಅಥವಾ ಭಕ್ತಿಯಿಂದಲೊ, ಹಿಂದೆ ತಮ್ಮ ನೆಚ್ಚಿನ ದೇವತೆಗಳು ಮಾಡಿದ ಕೆಲಸಗಳನ್ನು ಕುರಿತು ಆಡುವುದೂ
(ಆಡಿಕೊಳ್ಳುವುದೂ ಉಂಟು): "ಇಬ್ಬರ‍್ಹೆಂಡಿರ
ಮೇಲೆ ಕದ್ದು ಸೂಳೆ ನೋಡಿದ | ಕಬ್ಬಿಣದ ಕದವ ಮುರಕೊಂಡು ವರದಯ್ಯ | ಎದ್ದಾನೆ ಸೂಳೆ ಮನೆಯಾಗೆ ||"
"ಹಾಲು
ಅನ್ನಕೆ ಒಲಿದು ಜೇನು ಸಕ್ಕರೆಗೊಲಿದು | ಸೋಲಿಗರ ಹೆಣ್ಣೀಗೆ
ಮನಸಾಗಿ - ಒಲಕೊಂಡು | ನೆಲೆಗೊಂಡ ಗಿರಿಯಲ್ಲಿ ಗೋಪಾಲ
||"
'ಗಂಗೆಗೂ ಗೌರೀಗೂ ಹತ್ತೀತು ಜಗಳ'
ಸವತಿ ಮತ್ಸರವೆನ್ನುವುದು ಆ ಗಂಗೆ-ಗೌರಿಯರನ್ನೂ ಬಿಟ್ಟಿದ್ದಲ್ಲ.! ಹರಿಹರನ "ಗಿರಿಜಾಕಲ್ಯಾಣ ಮಹಾಪ್ರಬಂಧ"ದಲ್ಲಿನ
ಒಂದು ಸನ್ನಿವೇಶ:
ಅದು ಗಿರಿಜಾ-ಶಂಕರರ ವಿವಾಹ ಮಹೋತ್ಸವ .. ಮದುಮಗ ಮದುಮಗಳು ಎದುರುಬದುರಾಗಿ
ನಿಂತಿದ್ದಾರೆ. ಶಾಸ್ತ್ರದಂತೆ ಗಿರಿಜೆ ಈಗ ಜೀರಿಗೆ-ಬೆಲ್ಲವನ್ನು ಶಿವನ ತಲೆಯ ಮೇಲಿಡಬೇಕು. ಆ ಕ್ಷಣಕ್ಕೆ
ಶಿವನ ಜಟೆಯಲ್ಲಿನ ಗಂಗೆ ಕಾಣಿಸುತ್ತಾಳೆ ಆಕೆಗೆ. ಅದ್ದೆಲ್ಲಿತ್ತೊ, ಮತ್ಸರ ಜಾಗೃತವಾಗುತ್ತದೆ ಗಿರಿಜೆಗೆ:
"ಆನಿರಲ್ ಮತ್ತೊರ್ವಳ್
ಗಡ
ತಾನಿರ್ಪಳ್ ಜಡೆಯೊಳೆನುತೆ ಮುಳಿದಿಡುವಂತಾ
ಮಾನಿನಿ ಜೀರಿಗೆ ಬೆಲ್ಲದೊ
ಳಾನುತೆ ಶಿವನುತ್ತಮಾಂಗಮಂ ಪದೆದಿಟ್ಟಳ್"
(೧೦.೯೧)
"ನಾನು ಇಲ್ಲೇ ಇರುವಾಗ ಇವಳಾರೊ ಶಿವನ ತಲೆಯನ್ನೇರಿ ಕುಳಿತುಬಿಟ್ಟಿದ್ದಾಳಲ್ಲ!"
ಎಂದು ಮುನಿದಿಟ್ಟಳೋ ಎಂಬಂತೆ ಗಿರಿಜೆಯು ಜೀರಿಗೆ-ಬೆಲ್ಲವನು ಶಿವನ ಉತ್ತಮಾಂಗದ ಮೇಲಿರಿಸಿದಳು.
ಇಂತಹ ಸನ್ನಿವೇಶಗಳು ಜನಪದ ಸಾಹಿತ್ಯದಲ್ಲೂ ಇಲ್ಲದಿಲ್ಲ. ಹರಿಹರನ "ಗಿರಿಜಾಕಲ್ಯಾಣ"ದಲ್ಲಿನ
ಗಿರಿಜೆಯು ತಪಸ್ಸು ಮಾಡಿ ಶಿವನನ್ನು ವರನನ್ನಾಗಿ ಪಡೆದಂತೆಯೇ "ಶ್ರೀ ಗೌರಿಯ ಮದುವೆ" ಲಾವಣಿಯಲ್ಲಿನ
ಗೌರಿ ಕೂಡ ಬಹುಕಠಿಣ ತಪಸ್ಸನ್ನು ಮಾಡಿ ಶಿವನನ್ನು ಗಂಡನನ್ನಾಗಿ ಪಡೆದವಳು. ಅಂತಹ ಶಿವನು ಗಂಗೆಯನ್ನು
ತನಗೆ ಸವತಿಯನ್ನಾಗಿ ತಂದಿಟ್ಟರೆ, ಪಾಪ, ಗೌರಿಗೆ
ಹೇಗಾಗಬೇಡ! ಅದಕ್ಕೇ ಆಕೆ "ನಮ್ಮ ಅರಮನೆಗೆ ಬರಬೇಡಿ ಶಿವನೆ, ನಮ್ಮ ಮಂಚಕೆ
ನೀವು ಹತ್ತಬೇಡಿ ಶಿವನೆ.." ಎಂದು ತನ್ನ ಪ್ರತಿರೋಧವನ್ನು ಪ್ರದರ್ಶಿಸಿದ್ದುಂಟು.
ಇನ್ನು, ಸವತಿ ಬಂದ ಮೇಲೆ ಅವರಿಬ್ಬರ ನಡುವೆ
ಆಗಾಗ ನಡೆಯುವ ಜಗಳದ ಮಾತಂತೂ ಹೇಳುವುದೇ ಬೇಡ. ಇವರಿಬ್ಬರ ಜಗಳವನ್ನು ನೋಡಲಾರದೆ ಶಿವನು ಅವರಿಬ್ಬರನ್ನೂ
ಭೂಮಿಯ ಮೇಲೆ ಬಿಟ್ಟು ತಾನು ಮಾತ್ರ ಹಾಯಾಗಿ ಕೈಲಾಸಕ್ಕೆ ಹೋಗಿ ಸೇರಿಕೊಂಡ. ಪಾಪ, ಇಲ್ಲಿ ದಿನವೂ ಇವರ ನಡುವೆ ಕಿತ್ತಾಟ...
ಆ ಜಗಳಗಳಲ್ಲಿ ಒಂದರ ಕತೆಯನ್ನು ಈ ಲಾವಣಿಯೊಂದು ಬಹಳ ಸುಂದರವಾಗಿ ಸೆರೆಹಿಡಿದಿದೆ
ಜಿ.ಶಂ.ಪರಮೇಶ್ವರಯ್ಯನವರು ಸಂಪಾದಿಸಿರುವ
"ಜಾನಪದ ಖಂಡಕಾವ್ಯಗಳು" ಕೃತಿಯಲ್ಲಿನ "ದೊಂಬಿದಾಸರ ಲಾವಣಿಗಳು" ಎಂಬ
ಶೀರ್ಷಿಕೆಯಡಿಯಲ್ಲಿ ಸಂಗ್ರಹಿಸಲ್ಪಟ್ಟ ಲಾವಣಿ ಈ ’ಗಂಗೆಗೂ ಗೌರೀಗೂ ಹತ್ತೀತು ಜಗಳ’
ಗಂಗೆ-ಗೌರಿ ಜಗಳ
ಒಂದು ದಿನ ಪಾರ್ವತಿಯು ತನ್ನ ಮಗ
ಈರಣ್ಣ(ವೀರಭದ್ರ) ಬೆಳೆಸಿದ ಹೂದೋಟದಲ್ಲಿ ಅರಳಿದ ಮಲ್ಲಿಗೆ, ಸಿರಿಜಾಜಿ, ಸಂಪಿಗೆ
ಹೂಗಳನ್ನೆಲ್ಲ ಕೊಯ್ದಳು. ಅವುಗಳಲ್ಲಿ ಚೆನ್ನಾಗಿದ್ದ ಹೂಗಳನ್ನೆಲ್ಲ ಆರಿಸಿಕೊಂಡು ಅವನ್ನು ತನಗೇ
ಇಟ್ಟುಕೊಂಡು, ಒಣಗಿದ , ಬಾಡಿದ ಹೂಗಳನ್ನೆಲ್ಲ
ಒಂದು ತಟ್ಟೆಯಲ್ಲಿ ಸುರಿದು ಅವನ್ನು ತನ್ನ ಸವತಿಯಾದ ಗಂಗೆಗೆ ಕೊಟ್ಟು ಬಾ ಎಂದು ಈರಣ್ಣನನ್ನು
ಕಳಿಸಿದಳು.
ಸರಿ, ಈರಣ್ಣ ಆ ಹೂಗಳನ್ನು ಗಂಗೆಯ ಮನೆಗೆ ತಂದುಕೊಟ್ಟ. ಗಂಗೆ
ಈರಣ್ಣ ತಂದ ಹೂಗಳನ್ನು ನೋಡುತ್ತಾಳೆ! ಎಲ್ಲ ಬಾಡಿದ ಹೂಗಳು. ಅವಳಿಗೆ ಕೋಪ ಬಂದು :-
"ಒಳ್ಳೊಳ್ಳೆ
ಹುವ್ವನೆಲ್ಲ ನಿಮ್ಮವ್ವ ಮುಡಿದು
ಸಂಪಾಗೆ
ಸಿರುಜಾಜಿ ಪಾರ್ವತಿ ಮುಡಿದು
ಮುಡಿದು
ಮಿಕ್ಕ ಹೂವ ನನಗೆ ಕಳಿಸ್ಯಾಳು
ಬಾಡಿ
ಬತ್ತಿದ ಹೂವು ಬೇಡಾವು ನನಗೆ
ಒಣಗೀ
ಹೋದಾ ಹೂವು ಏಕಯ್ಯ ನನಗೆ" ಎನ್ನುತ್ತ ಆ ಹೂಗಳನ್ನೆಲ್ಲ ಚೆಲ್ಲಿ ಬಿಸಾಡುತ್ತಾಳೆ.
ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಗೌರಿ
ಅದನ್ನು ಕಂಡು "ಏನೆ ಹಿರಿಗಂಗೆ ಹೂವ ಚೆಲ್ಲಿದೆಯಾ?" ಅಂತ ಕೇಳುತ್ತಾಳೆ. ಅದಕ್ಕೆ
ಆಕೆ :-
ಗಂಗೆ : ಸಾಲಾದಂತಲು ನಾನು ಚೆಲ್ಲೀದೆ ಕಾಣೆ
ಗೌರಿ: ಸಾಲಾದೆ ನನ ಕೂಡೆ ಸರಿ ಬಂದೀಯೇನೆ?
ಗಂಗೆ: ಸರಿಯವ್ಳು ನಾನಲ್ದೆ ಸವತಿಯಾಗಾದೆ?
ಗೌರಿ: ಈಡು ಸಮನವಳಲ್ಲ ಶಿವನಂಗೆ ತಂದ..
ಹೀಗೇ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಭಾರೀ
ಜಗಳವೇ ಶುರುವಾಗುತ್ತದೆ.
"ಜಡೆ
ಜಡೆ ಹಿಡಕೊಂಡು ಜಗಳವಾಡಿದರು
ಹೊರಸೆರಗ
ಹಿಡಕೊಂಡು ವೈರವಾಡಿದರು
ಮುಂದಲೆ
ಹಿಡಕೊಂಡು ತರದಾಡಿದರು
ಎರಡು
ಮೂರು ಪೆಟ್ಟೆ ಹೊಡೆದಾಳೆ ಗೌರಿ...."
ಹೀಗೆ ಗಂಗೆಗೂ ಗೌರಿಗೂ ಮಾರಾಮಾರಿ
ಶುರುವಾಗುತ್ತದೆ. ಅವರು ಜಗಳವಾಡುವ ಚಿತ್ರಣವಾದರೂ ಎಷ್ಟು ನೈಜವಾಗಿದೆ ನೋಡಿ. ಹೆಂಗಸರ ಜಗಳವೆಂದರೆ
ಬೇರೆ ಹೇಳಬೇಕೆ. ಮಾತಿಗೂ ಸೈ, ಹೊಡೆದಾಡಲೂ
ಸೈ. ಸಾಮಾನ್ಯವಾಗಿ ಹೆಂಗಸರು ಹೀಗೆ ಜಗಳವಾಡುವಾಗ ಹಿಂದಿನ ಸಂಗತಿಗಳನ್ನು ಎತ್ತಿ ಆಡುವುದು ಸಹಜವೇ.
ಇಲ್ಲಿ ಕೂಡ ಅದೇ ಕಾಣುತ್ತೇವೆ:
"ಬೇಟೇಗೆ
ಹೋದ ಶಿವನ ಬೆನ್ನಾಡಿ ಬಂದೆ .... ಕೂಡಿ ನೀ ಬಂದಲ್ಲೆ ಕುಲಗೆಟ್ಟ ಗಂಗೆ" ಎಂದು ಗೌರಿ ಗಂಗೆಯನ್ನು
ಆಡಿಕೊಳ್ಳುತಾಳೆ. ಗಂಗೆಯೂ ದಿಟ್ಟೆಯೇ, "ಕೂಡಿ ನಾ ಬಂದಾರೆ ಕುಲವಿಲ್ಲವೇನೆ?" ಎಂದು ಗೌರಿಗೆ ಸವಾಲು
ಹಾಕುತ್ತಾಳೆ ಆಕೆ.
ಮಾತು ಅಲ್ಲಿಗೇ ನಿಲ್ಲದೆ, ಗಂಗೆ ಗೌರಿಯನ್ನು "ಎಲೆಯ ಮಾರುವರಲ್ಲೆ ಎಡ್ದ ನನ ಸವತಿ.... ಎಲೆಯ ಕಟ್ಟುವರಲ್ಲೆ
ನಿಮ್ಮಪ್ಪದೀರು..." ಅಂತ ಹೇಳಿ ಹಂಗಿಸುತ್ತಾಳೆ. ಅದಕ್ಕೆ ಪ್ರತಿಯಾಗಿ ಗೌರಿ "ಮೀನು
ಮಾರುವರಲ್ಲೆ ನಿಮ್ಮಣ್ಣದೀರು... ತೆಪ್ಪ ಕಟ್ಟುವರಲ್ಲೆ ನಿಮ್ಮಪ್ಪದೀರು..." ಎಂದು ಆಡಿತೋರಿಸುತ್ತಾಳೆ.
ನೋಡಿ, ಎಲ್ಲಿಂದ ಎಲ್ಲಿಗೆ ಹೋಯಿತು ಜಗಳ. ಪರಸ್ಪರರ ಅಪ್ಪ
ಅಣ್ಣ, ಕುಲ ಗೋತ್ರಗಳನ್ನೂ ಆಡಿಕೊಂಡು ಜಗಳಕ್ಕಿಳಿಯುತ್ತಾರೆ.
ಅಷ್ಟು ಸಾಲದೆಂಬಂತೆ, ಪಾಪ, ಅಲ್ಲೇ ಇದ್ದ ಈರಣ್ಣನನ್ನು "ನೋಡಿದ ನನ ಕಂದ
ಗಂಗೆ ಮಾತುಗಳ...." "ನೋಡಿದ ನನ ಕಂದ ಗೌರಿ ಮಾತುಗಳ.." "ಬೆಸ್ತಾರ
ಹುಡಿಗ್ಯಾಡೊ ಮಾತ ಕೇಳಯ್ಯ.." "ಶಿವಭದ್ರನ ಹುಡಿಗ್ಯಾಡೊ ಶೀಲ ನೋಡಯ್ಯ.." ಎನ್ನುತ್ತ ಒಬ್ಬರನ್ನೊಬ್ಬರು
ಅಣಕಿಸಿಕೊಂಡು ಅವನಿಗೆ ನ್ಯಾಯವನ್ನೊಪ್ಪಿಸುತ್ತಾರೆ.
ಪಾಪ, ಅವನಾದರೂ ಏನು ಮಾಡಿಯಾನು. ಇಬ್ಬರು ಹೆಂಗಸರು
ಜಗಳವಾಡುವಾಗ ಹೀಗೆ ಮಧ್ಯೆ ನ್ಯಾಯ ಹೇಳಲು ಹೋದವನಿಗೆ ಗತಿಯುಂಟೇ?
ಅದೂ ಸಾಲದೆಂಬಂತೆ ಗೌರಿಯ "ಬಾರೆಲ್ಲ
ಈರಣ್ಣ ಗುಂಡಿಗೆ ಮುರಿಯೋ.." ಎಂಬ ಆದೇಶ ಬೇರೆ. ಅದಕ್ಕೆ ಗಂಗಮ್ಮನ "ಈರಣ್ಣ ಒದೆಯಾಕೆ
ಹಿಡಿದು ಕಟ್ಟಿಸುವೆ.." ಅನ್ನೋ ಉತ್ತರ. ಪಾಪ, ಈರಣ್ಣನ ಪಾಡು ಕಷ್ಟವೇ!
ಜಗಳ ಮತ್ತೆ ಮುಂದುವರೆಯುತ್ತದೆ. ಈಡು
ಸರಿಯಿಲ್ಲದವಳನ್ನು ಶಿವನು ಯಾಕಾದರೂ ತಂದನೋ ಎಂದು ಗೌರಿ ಮತ್ತೊಮ್ಮೆ ಆಡಿಕೊಳ್ಳುತ್ತಾಳೆ ಕೂಡ.
ಮತ್ತೆ
"ಜಡೆ ಜಡೆ ಹಿಡಕೊಂಡು ಜಗಳವಾಡಿದರು
ಮುಂದಲೆ ಹಿಡಕೊಂಡು ಕದನವಾಡಿದರು"
ಒಬ್ಬರನ್ನೊಬ್ಬರು ಹೊಡೆದಾಡುವುದೂ ನಡೆಯುತ್ತದೆ.
"ನನ ಕೈ ಬರುತದೆ ತಪ್ಪಿಸಿಕೊಳ್ಳೆ" ಎಂದು ಗಂಗಮ್ಮ ಕೈಯೆತ್ತಿ ಗೌರಿಯನ್ನು
ಹೊಡೆಯಬೇಕು, ಆ
ಹೊತ್ತಿಗೆ ಗೌರಿ ಬಹಿಷ್ಟೆಯಾಗುತ್ತಾಳೆ.
ಇಲ್ಲಿಗೆ ಲಾವಣಿಯ ಒಂದು ಮಜಲು ಮುಗಿಯುತ್ತದೆ.
ಮುಂದಿನ ಕಥೆಯಲ್ಲಿ ಗಂಗೆಯದೇ ಮೇಲುಗೈ.
ಗೌರಿ ಬಹಿಷ್ಟೆಯಾದ ಸುದ್ದಿ ತಿಳಿದ ಗಂಗೆ ಇದೇ
ಅವಳಿಗೆ ಬುದ್ಧಿ ಕಲಿಸಲು ಸರಿಯಾದ ಸಂದರ್ಭವೆಂದು ಬಗೆದು ಭೂಮಿಯ ಮೇಲೆ ಎಲ್ಲಿಯೂ ನೀರೇ ಸಿಗದಂತೆ
ಮಾಡಿಬಿಡುತ್ತಾಳೆ.
"ಉಗರಷ್ಟೆ
ವಿಭೂತಿ ಭೂಮಿ ಮ್ಯಾಲ್ಹಾಕಿ
ಸುತ್ತೇಳು
ಸಮುದ್ರವೆ ಬತ್ತೋಗಲೆಂದು
ಹಕ್ಕಿ
ಕುಡಿಯೋಷ್ಟು ನೀರಿಲ್ಲ ಗಂಗೆ
ನೀರು
ಮಾಯಮಾಡಿ ನಿಜವಾದ ಗಂಗೆ.."
ಇತ್ತ ಗೌರಿ ಮನೆಯ ಹೊರಗೆ ಕುಳಿತಿದ್ದಾಳೆ.
ಈರಣ್ಣನನ್ನು ಕರೆದು ತನ್ನ ಸ್ನಾನಕ್ಕೆ ನೀರನ್ನಿಡಲು ಹೇಳಿದಾಗ ಈರಣ್ಣ ಮನೆಯಲ್ಲಿ ನೀರಿಲ್ಲವೆಂದು
ತಿಳಿಸುತ್ತಾನೆ. ’ಸರಿ, ಕೊಳಕ್ಕೆ
ಹೋಗಿ ನೀರು ತಾ ಮಗನೆ’ ಎಂದು ಸುತ್ತಮುತ್ತ ಇರುವ ಕೊಳಗಳಿಗೆಲ್ಲ ಕಳುಹಿಸುತ್ತಾಳೆ. ಈರಣ್ಣ ಯಾವ
ಕೊಳಕ್ಕೆ ಹೋದರೂ ಎಲ್ಲಿಯೂ ಅವನಿಗೆ ನೀರೇ ಇರುವುದಿಲ್ಲ!
ಗೌರಿ: ಕಾವೇರಿ ಕಪಿನೀಲಿ ನೀರ ತಾ ಕಂದ
ಈರಣ್ಣ: ಕಾವೇರಿ ಕಪಿನೀಲಿ ಕಾಣಬರಲಿಲ್ಲ
ಗೌರಿ: ಯಮುನಾ ತುಂಗಭದ್ರಾ ನೀರ ತಾ ಮಗನೆ
ಈರಣ್ಣ: ಯಮುನಾ ತುಂಗಾದಲ್ಲಿ ಹೆಸರಿಗಿಲ್ಲಮ್ಮ
ಗೌರಿ: ಇನ್ನೇಕೆ ನನ ಕಂದ ನಾನು ಬಾಳುವುದು
ಈರಣ್ಣ: ನಾನೇನು ಮಾಡಲಮ್ಮ ನನ್ನೆತ್ತ ತಾಯಿ
ಗೌರಿ: ಇದೆಲ್ಲ ನನ ಸವತಿ ಗಂಗೆ ಮಾಯಗಳು
ಕೊನೆಗೆ ಪ್ರಯಾಣಕ್ಕೆ ಬೇಕಾದಷ್ಟು ರೊಕ್ಕವನ್ನು
ಕೊಟ್ಟು ಈರಣ್ಣನನ್ನು ಕಾಶಿಗೆ ಕಳುಹಿಸುತ್ತಾಳೆ ಗೌರಿ, ನೀರು ತರಲೆಂದು. ಈರಣ್ಣ ಕಾಶಿಗೆ ಹೋದರೂ ಅಲ್ಲಿಯೂ
ನೀರು ಸಿಗುವುದಿಲ್ಲ. ಸರಿ, ಅಷ್ಟು ದೂರದ ಪ್ರಯಾಣದಿಂದ ಬಳಲಿ ಬೆಂಡಾಗಿ,
ತಂದಿದ್ದ ರೊಕ್ಕವೆಲ್ಲ ವ್ಯಯವಾಗಿಹೋದರೂ, ಕೊನೆಗೂ
ನೀರು ಸಿಗದೇ ಇದ್ದ ಕಾರಣ ಬೇಸರದಿಂದ ಈರಣ್ಣ ಮತ್ತೆ ಮನೆಯ ಕಡೆಗೆ ಹೊರಟ.
ಈರಣ್ಣ ಬರುವ ದಾರಿಯನ್ನು ಮರೆಯಲ್ಲಿದ್ದ ಗಂಗೆ
ನೋಡುತ್ತಾಳೆ. ಪಾಪ, ಈರಣ್ಣ ಬಹಳ
ಸೊರಗಿದ್ದಾನೆ, ಬಳಲಿದ್ದಾನೆ.
"ನನ
ಸವತಿ ಗೌರಿ ಮಗ ಹಸಿದು ಹೋಗುತವನೆ
ನೀರು
ಇಲ್ಲದೆ ಕಂದ ಬಳ್ಳೋಗುತಾನೆ
ಹಸ್ತು
ಹೋಗುವನಿಗೆ ನೀರ ಕೊಟ್ಟರೆ
ನೀರ
ಕುಡಿದು ಕಂದ ಊರಿಗೋಗುತಾನೆ"
ಎಷ್ಟೆಂದರೂ ಗಂಗೆಗೂ ಈರಣ್ಣ ವರಸೆಯಲ್ಲಿ ಮಗನೇ
ಅಲ್ಲವೆ. ಅದಕ್ಕಾಗಿ ಅವಳ ಕರುಳೂ ಮಿಡಿಯುತ್ತದೆ - ’ಅಯ್ಯೊ, ಮಗು ಹಸಿದುಕೊಡು ಹೊರಟಿದ್ದಾನಲ್ಲ’ ಅಂತ. ಅವನ
ಬಾಯಾರಿಕೆಯನ್ನು ತೀರಿಸಲೆಂದು ಅವನಿಗೆ ಸಣ್ಣದೊಂದು ಹಳ್ಳದಲ್ಲಿ ನೀರು ಕಾಣಿಸುವಂತೆ ಮಾಡುತ್ತಾಳೆ,
ಗಂಗೆ. ತನ್ನ - ಗೌರಿಯ ನಡುವೆ ಪರಸ್ಪರ ಮನಸ್ತಾಪಗಳು ಎಷ್ಟೇ ಇದ್ದರೂ ಮಗನ ಮೇಲೆ
ಆ ಕೋಪವನ್ನು ತೋರಿಸಬಾರದೆಂದು ತಿಳಿದಿದೆ ಆಕೆಗೆ.
ನೀರನ್ನು ನೋಡಿ ಈರಣ್ಣನಿಗೆ ಸಂತೋಷವಾಯಿತು.
ತಣ್ಣೀರ ಸ್ನಾನ ಮಾಡಿ, ಸುತ್ತಲಿದ್ದ
ಹೂಗಳನ್ನು ತಂದು ಹತ್ತಿರವಿದ್ದ ಶಿವಲಿಂಗಕ್ಕೆ ಪೂಜೆ ಮಾಡಿದ. ನಂತರ ತನ್ನ ತಾಯಿ ಪಾರ್ವತಿಗಾಗಿ
ಹಳ್ಳದಿಂದ ಐದು ತಂಬಿಗೆ ನೀರನ್ನು ತೆಗೆದುಕೊಂಡು ಹೊರಟ. ವೀರಣ್ಣ ಬರೋ ದಾರಿಯನ್ನು ನೋಡಿದ ಗಂಗೆಯು
- "ನೀರೋದರಲ್ಲಿನ್ನ ಪಂಥವೆಲ್ಲುಳಿತು, ನೀರ ಕೊಟ್ಟ ಮೇಲೆ ಜಗಳವೆಲ್ಲುಳಿತು.." ಎಂದು ಬಗೆದು, ವೀರಣ್ಣ ಬರುವ ದಾರಿಯಲ್ಲಿ
ಅವನು ಕಲ್ಲೊಂದನ್ನು ಎಡವಿ ಬೀಳುವಂತೆ ಮಾಡಿದಳು. ಅಲ್ಲಿಗೆ ಅವನು ಹೊತ್ತು ತರುತ್ತಿದ್ದ ನೀರೂ
ಭೂಮಿಪಾಲಾಯಿತು.
ಈರಣ್ಣ ಬರಿಗೈಲಿ ಮನೆ ತಲುಪಿದ. ಪಾರ್ವತಿಯ ಗೋಳು
ಮತ್ತೆ ಹೆಚ್ಚಾಯಿತು. ಹೇಗಾದರೂ ಮಾಡಿ ನೀರನ್ನು ತಾ.. ಎಂದು ಮಗನನ್ನು ಬೇಡಿದಳು. ’ಕೈಲಾಸಕ್ಕೆ
ಹೋಗಿ ನಿನ್ನ ತಂದೆಯನ್ನೇ ಕೇಳಿ ನೀರನ್ನು ತಾ’ ಎಂದು ಅವನನ್ನು ಕೈಲಾಸಕ್ಕಟ್ಟಿದಳು.
ಸರಿ, ಈರಣ್ಣ ಕೈಲಾಸಕ್ಕೆ ಹೋಗಿ ಶಿವನಿಗೆ ನಡೆದ
ಸಂಗತಿಯನ್ನೆಲ್ಲ ಅರುಹಿದ. ಶಿವನು ’ಅಯ್ಯೊ, ಗಂಗೆಗೆ ಜಗಳವಾಡಬೇಡ ಎಂದು
ಹೇಳಿದ್ದೆನಲ್ಲ...’ ಎಂದು ಯೋಚಿಸಿ, ’ಸರಿ, ನಡಿ
ಈರಣ್ಣ, ನಾನೂ ಬರುತೀನಿ. ಅವರ ಜಗಳವನ್ನು ಬಿಡಿಸೋಣ’ ಅಂತ ಪಾರ್ವತಿಯ
ಮನೆಗೆ ಬಂದ. ಶಿವನು ಬರುವ ಹೊತ್ತಿಗೆ ಗೌರಿ ಇನ್ನೂ ಮನೆಯ ಹೊರಗೇ ಕುಳಿತಿದ್ದಾಳೆ.
ಎಲ್ಲವನ್ನೂ ಬಲ್ಲ ಶಿವನಿಗೆ ಇಲ್ಲಿ ನಡೆದ
ರಾದ್ಧಾಂತದ ಬಗ್ಗೆ ತಿಳಿಯದೇ? ಆದರೂ,
ಪಾರ್ವತಿಯನ್ನು ಕೆಣಕಲೆಂದೊ ಏನೊ, "ಅದು ಏನೆ ಎಲೆ ಗೌರಿ ಹೊರಗೆ ಕುಳಿತಿದ್ದಿ?" ಎಂದು ಕೇಳಿಯೇ ಬಿಟ್ಟ.
ಗೌರಿಗೆ ಇಷ್ಟು ಹೊತ್ತೂ ಗಂಗೆಯ ಮೇಲಿದ್ದ
ಸಿಟ್ಟು ಶಿವನ ಮೇಲೆ ತಿರುಗಲು ಇಷ್ಟೇ ಸಾಕಾಯಿತು.
"ಅರಿತೆಂಗೆ
ಕೇಳೀರಿ ಅರಿಯೇನು ಶಿವನೆ?
ನನ
ಮೇಲೆ ಪ್ರತಿಯಾಗಿ ಗಂಗೆಯನ ತಂದೆ
ಗಂಗೆಗೂ
ನನಗಿನ್ನು ಜಗಳ ತಂದಿಟ್ಟೆ
ಕಾಣದಂಗೋಗಿ
ಕೈಲಾಸ ಸೇರಿದೆ
ದೆವ್ವ
ಹಿಡಿದೋರಂಗೆ ಸುಮ್ಮನಿದ್ದೀರ..." ಎಂದು ಶಿವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ ಆಕೆ. ಪಾಪ, ಸವತಿಯ ಮೇಲಿನ ಸಿಟ್ಟೂ,
ಅವಳ ಈ ಮಾಯದಾಟಗಳಿಂದ ತಾನು ಅನುಭವಿಸುತ್ತಿರುವ ದುಃಖವೂ ಆಕೆಯನ್ನು ಅದೆಷ್ಟು
ಕಂಗೆಡಿಸಿದೆ ಎಂದರೆ ಶಿವನನ್ನೂ ಬಾಯಿಗೆ ಬಂದಂತೆ ಬೈದುಬಿಡುತ್ತಾಳೆ ಆಕೆ. ಅಂತಹ ಮಾಯಗಾತಿ
ಸವತಿಯನ್ನು ತಂದಿಟ್ಟ ಶಿವನ ಬಗೆಗೆ ಆಕೆಗೆ ಅಷ್ಟಾದರೂ ಸಿಟ್ಟು ಇರಬೇಕಾದ್ದು ಸಹಜವೇ.!
ಶಿವನು ಅವಳ ಬೈಗುಳಗಳನ್ನು ಕೇಳಿ, ನಕ್ಕು, ’ಸುಮ್ಮನಿರು ಗೌರಿ. ಈಗೇನು, ನಿನ್ನ ಸ್ನಾನಕ್ಕೆ ಹಾಲು
ತಂದುಕೊಡಲೇ? ಮೊಸರನ್ನು ತರಿಸಲೇ? ತುಪ್ಪವೇನಾದರೂ
ಬೇಕೇ? ಜೇನುತುಪ್ಪವನ್ನು ತರಿಸಿಕೊಡಲೇ?’
ಎಂದು ಮುಂತಾಗಿ ಕೇಳುತ್ತಾನೆ. ಗೌರಿ ’ಅವು ಯಾವುದರಿಂದಲೂ ಸೂತಕ ತೀರದು, ನೀರನ್ನಾದರೆ ತರಿಸಿ ಕೊಡಿ’ ಎನ್ನುತ್ತಾಳೆ. ಅದಕ್ಕೆ ಶಿವನು ’ನೀರೇ ಬೇಕೆಂದಾದರೆ ನೀನು
ನಿನ್ನ ತಂಗಿಯನ್ನು ಬೇಡಿಕೊ, ಅವಳು ಕೊಡುತ್ತಾಳೆ’ ಎಂದಾಗ ಗೌರಿಗೆ
ಮತ್ತೆ ರೋಷವುಕ್ಕುತ್ತದೆ.
ಆಕೆ
"ಸತ್ತು ಮಣ್ಣಾದರು ಸವತಿ ಕೇಳೇನೆ... ಮರೆತು ಮಣ್ಣಾದರು ಸವತಿ ಕೇಳೇನೆ.." ಎಂದು ಪ್ರತಿ ನುಡಿಯುತ್ತಾಳೆ.
ಶಿವನಿಗೆ ಇದರಿಂದ ರೋಸಿಹೋಗುತ್ತದೆ.
"ನೀನೂ
ಸಾಯಲಿ ಗಂಗೆ ಸಾಯಲಿ
ನನ
ಕೈಲಿ ಈ ಜಗಳ ತೀರಾದು ಕೇಳೆ
ನೀನೋಗದಿದ್ದರೆ
ಈರಣ್ಣನ ಕಳುಹು" ಎಂದು ಈ ಮೂರು ಮಾತುಗಳನ್ನಾಡಿ ಮಾಯವಾಗಿಬಿಡುತ್ತಾನೆ. ಕೊನೆಗೆ ವಿಧಿಯಿಲ್ಲದೆ ಗೌರಿ ಗಂಗೆಯ
ಬಳಿ ನೀರನ್ನು ಬೇಡಿ ತರಲೆಂದು ಈರಣ್ಣನನ್ನು ಕಳುಹಿಸುತ್ತಾಳೆ.
ಈರಣ್ಣ ಗಂಗೆಯ ಮನೆಬಾಗಿಲಿಗೆ ಬಂದು "ಚಿಕತಾಯಿ ಗಂಗಮ್ಮ ಕೇಳೆ ನನ ಮಾತ.. ನಿಮಗೊಂದು ಸಮಯವು,
ನಮಗೊಂದು ಸಮಯ.. ಇಂಥ ಸಮಯದಲಿ ನೀರ ಕೊಡಮ್ಮ. ನೀರ ಕೊಡುವುದು ತಾಯಿ ನಿನಗೆ
ಧರ್ಮ.." ಎಂದು ಮುಂತಾಗಿ ಬೇಡಿಕೊಳ್ಳುತ್ತಾನೆ.
ಅದಕ್ಕೆ ಗಂಗೆ:
"ನೀವು
ಉತ್ತಮರಲ್ಲೊ, ನಾವು ಬೆಸ್ತಾರು
ಬೆಸ್ತಾರ
ಮನೆಗೆ ನೀ ಬರಬಹುದೆ ಕಂದ
ನಮ್ಮೂರ
ಬಾವೀಲಿ ಮೀನು ಇರ್ತಾವೆ
ಮೀನು
ಇರುವ ನೀರು ಹೊಲಸು ಕಾಣಯ್ಯ...
ಬೆಸ್ತಾರ
ಮನೆ ನೀರು ಬೇಡೋಗೊ ಕಂದ.." ಎಂದು ಹಂಗಿಸಿ ನುಡಿಯುತ್ತಾಳೆ.
ಈರಣ್ಣ ’ಅವ್ವ, ಹಿಂದೆ ಆಡಿದ ಮಾತನ್ನು
ಎತ್ತಾಡಬೇಡ. ನೀರನ್ನು ಕೊಡುವುದು ನಿನಗೆ ಧರ್ಮ. ದಯವಿಟ್ಟು ನೀರು ಕೊಡು’ ಎಂದು ಬೇಡಿಕೊಂಡಾಗ,
’ನಿನಗೆ ಬೇಕಾದರೆ ಒಂದು ತಂಬಿಗೆ ನೀರು ಕೊಡುತ್ತೇನೆ. ಆದರೆ ನನ್ನ ಆ ಸವತಿಗೆ
ಎಂದಾದರೆ ನೀರೂ ಇಲ್ಲ ಏನೂ ಇಲ್ಲ’ ಎಂದು ಅವನನ್ನು ಕಳುಹಿಸುತ್ತಾಳೆ. ಪಾಪ, ಮತ್ತೆ ಈರಣ್ಣ ಬರಿಗೈಲಿ ವಾಪಸಾಗುತ್ತಾನೆ.
ಈರಣ್ಣ ಮನೆಗೆ ಬಂದು ನಡೆದದ್ದೆಲ್ಲವನ್ನೂ
ತಿಳಿಸಿ ಗಂಗೆ ತಮ್ಮ ಜಾತಿನೀತಿಯನೆಲ್ಲ ಎತ್ತಾಡಿದ್ದನ್ನೂ ತಿಳಿಸಿ ಮುಂದೇನು ಮಾಡುವುದೊ
ಎನ್ನುತ್ತಾನೆ.
ಇಷ್ಟೆಲ್ಲ ಆದಮೇಲೆ ಕೊನೆಗೂ ಗೌರಿ ತನ್ನ
ಪಂತವನ್ನು ಬಿಡಲೇಬೇಕಾಯಿತು. ತನ್ನ ಐದು ಜನ ಮಕ್ಕಳನ್ನೂ ಕರೆದುಕೊಂಡು ಗಂಗೆಯ ಮನೆಬಾಗಿಲಿಗೆ ಬಂದು
ಎಷ್ಟು ಸಾರಿ ಕೂಗಿ ಕರೆದರೂ ಮೊದಮೊದಲು ಗಂಗೆ ಗೌರಿಯ ಕರೆಗೆ ಓಕೊಳ್ಳಲಿಲ್ಲ.
ಕೊನೆಗೊಮ್ಮೆ , "ಅಂಗ್ಯಾಕೆ
ಕೂಗೀಯೆ ಬಂಡ ನನ ಸವತಿ" ಎಂದುತ್ತರಿಸಿದಳು.
ಸಹಾಯ ಮಾಡಬಲ್ಲವಳು ಅವಳೇ ಅಲ್ಲವೇ? ಪಾಪ, ಗಂಗೆ ಏನೇನು ಬೈದರೂ ಪಾರ್ವತಿ ಈಗ ಅದೆಲ್ಲವನ್ನೂ ಕೇಳಿ ಸಹಿಸಿಕೊಳ್ಳಲೇಬೇಕು.
ಗೌರಿ: ಏನಾದರನ್ನಮ್ಮ
ನೀರು ಕೊಡು ತಂಗಿ
ಗಂಗೆ: ಏನಾದರಾಗಲಿ
ನೀರಿಲ್ಲ ಕಾಣೆ
ನೀವು
ಉತ್ತಮರಲ್ಲೆ! ನಾವು ಬೆಸ್ತಾರು
ಬೆಸ್ತಾರ
ಮನೆಗೆ ನೀ ಬರಬಹುದೆ ಗರತಿ
ಬೆಸ್ತಾರ
ಮನೆ ನೀರು ಬೇಡೋಗೆ ನಿನಗೆ
ಗೌರಿ: ಜಾತಿನೀತಿನೆಲ್ಲ
ಎತ್ತಾಡಬೇಡ
ಕುಲವು
ಗೋತ್ರಾನೆಲ್ಲ ಬೈದಾಡಬೇಡ
ಹನ್ನೊಂದು
ದಿನದಿಂದ ಅನ್ನಾ ನೀರಿಲ್ಲ
ಶಿವನಿಗೆ
ಶಿವಪೂಜೆ ಮಾಡಲಿಲ್ಲಮ್ಮ
ನೀರು
ಕೊಡುವುದು ತಂಗಿ ನಿನಗೆ ಧರ್ಮವು.... ಎಂದು ಹೀಗೆ ನಾನಾ ಪರಿಯಾಗಿ ಬೇಡಿಕೊಂಡಳು.
ಎಷ್ಟು ಕೇಳಿದರೂ ಗಂಗೆ ತನ್ನ ಪಟ್ಟನ್ನು
ಬಿಡಲೊಲ್ಲಳು. ಪಾರ್ವತಿ ತನ್ನ ಮಕ್ಕಳೈವರನ್ನೂ ಗಂಗೆಗೇ ಕೊಡುವುದಾಗಿಯೂ, ಅದಕ್ಕೆ ಪ್ರತಿಯಾಗಿ ನೀರು
ಕೊಡಬೇಕೆಂದೂ ಕೇಳಿದಳು. ಅದಕ್ಕೆ ಗಂಗೆ ’ನಿನಗೆ ಮಕ್ಕಳಾದವರು ನನಗೂ ಮಕ್ಕಳಲ್ಲವೇನೆ. ನನ್ನ
ಮಕ್ಕಳನ್ನು ನನಗೇ ಕೊಡೋದೂ ಅಂದ್ರೇನು, ನೀರು ಕೊಡುವುದಿಲ್ಲ ಹೋಗು’
ಎಂದು ಉತ್ತರಿಸುತ್ತಾಳೆ.
ಗೌರಿ ತನ್ನ ಒಡವೆ ವಸ್ತ್ರಗಳನ್ನೂ, ಭೂಮಿಯನ್ನೂ ಶಿವನು ಮಲಗುವ
ಮಂಚವನ್ನೂ ಕೊಡುವುದಾಗಿ ಹೇಳಿದರೂ ಗಂಗೆ ಒಪ್ಪುವುದಿಲ್ಲ. ’ಶಿವನ ಮಂಚವನ್ನು ಮಾತ್ರ ಇಟ್ಟುಕೊಂಡು
ನಾನೇನು ಮಾಡಲಿ, ಅದಾವುದೂ ಬೇಡ, ನಾನು ನಿನಗೆ
ನೀರು ಕೊಡುವುದಿಲ್ಲ’ - ಗಂಗೆಯದು ಮತ್ತೆ ಅದೇ ಪಟ್ಟು.
ಕೊನೆಗೆ ಗೌರಿ "ಗಟ್ಟಿಯಾಗಿ
ನನ್ನ ಭಾಗದ ಶಿವನ ಕೊಡುತೀನಿ" ಎಂದು ಹೇಳಿದಾಗ ಗಂಗೆ ಆ ಕರಾರಿಗೆ ಒಪ್ಪಿ ನೀರು ಕೊಡುವೆನೆಂದು
ಹೇಳುತ್ತಾಳೆ. ಅಲ್ಲಿಯವರೆಗೂ ಗಂಗೆ ತನ್ನ ಮನೆಯ ಬಾಗಿಲನ್ನೂ ತೆರೆಯದೆ ಗೌರಿಯನ್ನು ಹೊರಗೆ
ನಿಲ್ಲಿಸಿಯೇ ಮಾತಾಡಿದ್ದಳು. ಗೌರಿಯು ಅವಳ ಭಾಗದ ಶಿವನನ್ನು ತನಗೇ ಕೊಡುವ ಕರಾರಿಗೆ ಒಪ್ಪಿದ
ಮೇಲಷ್ಟೇ ಗಂಗೆ ಬಾಗಿಲು ತೆರೆದು ಹೊರಬಂದದ್ದು.
ಸರಿ, ಗಂಗೆ ಬಾಗಿಲು ತೆರೆದು ಹೊರಬಂದು, ಗುಡುಗು ಮಿಂಚಿನ ಮಳೆ ಬಂದು ಎಲ್ಲ ಕೆರೆ-ಹೊಳೆ, ಹಳ್ಳಕೊಳ್ಳಗಳು
ತುಂಬುವಂತೆ ಮಾಡಿದಳು.
ಆಮೇಲೆ ಅಕ್ಕತಂಗಿಯರಿಬ್ಬರೂ ಸೇರಿ
ಹೊಸನೀರಿನಲ್ಲಿ ಮಿಂದು, ಮಡಿಯುಟ್ಟು,
ಬಗೆಬಗೆಯ ಹೂಗಳನ್ನು ಕುಯ್ದು ಶಿವನಿಗರ್ಪಿಸಿ ಶಿವಪೂಜೆ ಮಾಡಿದರು. ಹಾಲು
ಅನ್ನವನಟ್ಟು ಊಟ ಮಾಡಿದರು.
ಅಲ್ಲಿಗೆ ಅವರಿಬ್ಬರ ಈ ಜಗಳ (ತಾತ್ಕಾಲಿಕವಾಗಿ?) ಕೊನೆಯಾಯಿತು.
ಮುಂದೆ ಏನಾಯಿತು? ಗೌರಿ ತಾನು ಕೊಟ್ಟ
ಮಾತಿನಂತೆ ನಡೆದುಕೊಂಡಳೆ? ತನ್ನ ಪಾಲಿನ ಶಿವನನ್ನು ಗಂಗೆಗೇ
ಕೊಟ್ಟುಬಿಟ್ಟಳೆ? ಮುಂದೆ ಗಂಗೆ-ಗೌರಿಯರು ಜಗಳವಾಡಲಿಲ್ಲವೆ?
ಈ ಬಗ್ಗೆ ಮುಂದೆ ಎಂದಾದರೊಮ್ಮೆ ಹೇಳುತ್ತೇನೆ.
ಈಗಷ್ಟೇ ಅವರಿಬ್ಬರ ಜಗಳ ಮುಗಿದಿದೆ. ಸದ್ಯಕ್ಕೆ ಆ ಸಮಾಧಾನವೇ ಸಾಕು, ಅಲ್ಲವೇ?
ತುಂಬಾ ಚೆನ್ನಾಗಿದೆ ಬರಹ. ಆದರೆ ಮೃಷ್ಟಾನ್ನದಲ್ಲಿ ಅಲ್ಲಲ್ಲಿ ಕಲ್ಲು ಎಂಬಂತೆ, "ಹೆಂಗಸರ ಜಗಳವೆಂದರೆ ಬೇರೆ ಹೇಳಬೇಕೆ.", "ಇಬ್ಬರು ಹೆಂಗಸರು ಜಗಳವಾಡುವಾಗ ಹೀಗೆ ಮಧ್ಯೆ...." ಇತ್ಯಾದಿಗಳು ಕಿರಿಕಿರಿ ಎನಿಸುವಂತೆ ಮಾಡಿದವು.ಇಂಥ ಹಗುರ ಅಭಿಪ್ರಾಯಗಳನ್ನು ಬದಿಗಿಟ್ಟು ಲೇಖನವನ್ನು ಓದಿದಾಗ ಖುಷಿಯಾಗುತ್ತೆ.
ReplyDeletesakkath kaNappa.. naanu girijaa kalyaaNa nu Odilla.. janapada saahitya nu hechchaagi tiLkonDilla. aadre idanna Odida mEle saahitya samudrada ondu haniya ondu kaNavannu Oduva prayatna maaDiruva naanu OdbEkaaddu innoo eshTOnd ide anstu.. vishlEshaNe sakkataagide..
ReplyDeletesakkath kaNappa.. naanu girijaa kalyaaNa nu Odilla.. janapada saahitya nu hechchaagi tiLkonDilla. aadre idanna Odida mEle saahitya samudrada ondu haniya ondu kaNavannu Oduva prayatna maaDiruva naanu OdbEkaaddu innoo eshTOnd ide anstu.. vishlEshaNe sakkataagide..
ReplyDeleteಸೊಗಸಾದ ಬರಹ! ನಿಮ್ಮ ಬತ್ತಲಿಕೆಯಲ್ಲಿ ಅದೆಷ್ಟು ಬಾಣಗಳಿವೆಯೋ ಶಿವನೇ ಬಲ್ಲ!
ReplyDelete