ನನಗೂ ಕನಸುಗಳಿಗೂ ಬಹಳ ವಿಚಿತ್ರವಾದ ನಂಟು.
ಸುಮಾರು ಹತ್ತು ವರ್ಷಗಳಿಂದ ನನಗೆ ಯಾವುದಾದ್ರೂ ಕನಸಿನಿಂದ ಎಚ್ಚರಾದ
ತಕ್ಷಣ ಆ ಕನಸಿನ ಕುರಿತು - ಏನು ನೆನಪಿದ್ದರೆ ಅದು, ಎಷ್ಟು ನೆನಪಿದ್ದರೆ ಅಷ್ಟು - ನನ್ನ ದಿನಚರಿಯಲ್ಲಿ ಬರೆದುಕೊಂಡುಬಿಡುತ್ತೇನೆ.
ಆಮೇಲೆ ಆ ಕನಸನ್ನು ಓದಲು ಮಜವಾಗಿರುತ್ತೆ.
ನಾವು ಕಾಣುವ ಕನಸುಗಳಿಗೆಲ್ಲ ಲಾಜಿಕ್ಕು ಇರಬೇಕೆಂದೇನೂ
ಇಲ್ಲ. ಹಾಗಂತ ಯಾವುದೇ ಲಾಜಿಕ್ಕೂ ಇಲ್ಲದ ಕನಸುಗಳಷ್ಟೇ ಕಾಣುತ್ತವೆಂದೂ ಅಲ್ಲ (ನನ್ನ ಅನುಭವದ ಮಟ್ಟಿಗೆ
ಈ ಮಾತುಗಳನ್ನು ಹೇಳುತ್ತಿದ್ದೇನಷ್ಟೇ!).
ಕೆಲವು ಕನಸುಗಳು ನಮಗೆ ನೆನಪಿನಲ್ಲಿ ಉಳಿಯುವುದೂ ಇಲ್ಲ. ನಾನು ಕೇಳಿರುವ
ಮಟ್ಟಿಗೆ ನಮಗೆ ಕನಸಿನಿಂದ ಎಚ್ಚರಾದ ಸ್ವಲ್ಪ ಹೊತ್ತಿನವರೆಗು ಮಾತ್ರ ನಾವು ಕಂಡ ಕನಸುಗಳು ನಮಗೆ ನೆನಪಿರುತ್ತವಂತೆ.
ಅದಕ್ಕೇ ನನಗೆ ಎಚ್ಚರಾದ ತಕ್ಷಣ -ಅದು ಯಾವ ಜಾವವಾಗಿದ್ದರೂ- ಆಗಲೇ ಅಂದಿನ
ಕನಸನ್ನು ಕುರಿತು ಬರೆದುಕೊಂಡುಬಿಡುತ್ತೇನೆ. ಈಗಲೂ ಒಮ್ಮೊಮ್ಮೆ ನನ್ನ ದಿನಚರಿಯಿಂದ ನಾನು ಕಂಡ ಕೆಲವು
ಕನಸುಗಳನ್ನು ಕುರಿತು ಓದಿದಾಗ - ’ನಿಜಕ್ಕೂ ಹೀಗೆಲ್ಲ ಕನಸು ಕಂಡಿದ್ದೆನೆ ನಾನು!’ ಅಂತ ಅನಿಸಿದ್ದುಂಟು
:)
ಎಷ್ಟೋ ಬಾರಿ ನಿಜಜೀವನದ ಹಲಾವರು ಸಣ್ಣಪುಟ್ಟ ವಿಷಯಗಳೆಲ್ಲ ಕಲೆತು ಹೊಸತೊಂದು
ಕತೆಯಂತೆ ಕನಸಿನಲ್ಲಿ ಕಂಡದ್ದೂ ಇದೆ. ಆಗೆಲ್ಲ ಬಹಳ ಆಶ್ಚರ್ಯವಾಗುತ್ತೆ - "ನಮ್ಮ ಸುಪ್ತಮನಸ್ಸು
ಈ ಎಲ್ಲ ವಿಷಯಗಳನ್ನೂ ಸೇರಿಸಿ ಅದೆಷ್ಟು ಅದ್ಭುತವಾಗಿ, ಕ್ರಿಯಾತ್ಮಕವಾಗಿ ಚಿತ್ರ-ವಿಚಿತ್ರ ಕತೆಗಳ ಕನಸನ್ನು ಹೆಣೆದು
ನಮಗೆ ತೋರಿಸುವುದಲ್ಲ!" ಅಂತ
ಅಂದ್ಹಾಗೆ, ಇವತ್ತು ಬೆಳಿಗ್ಗೆ ನಾನು ಕಂಡ ಕನಸಿದು:
"ಯಾವುದೋ ಹೊಸ ಜಾಗ. ದೇವಾಲಯಗಳೇ ತುಂಬಿವೆ ಅಲ್ಲಿ. ಒಂದು ಕಾಲೋನಿಯಂತೆ
ಅಥವಾ ಕಾಂಪ್ಲೆಕ್ಸಿನಂತೆ, ಎಲ್ಲಿ ನೋಡಿದರಲ್ಲಿ
ದೇವಾಲಯಗಳು, ಅಲ್ಲಿ. ಎಲ್ಲವೂ ಬಹಳ ಹಳೆಯ ಕಾಲದವು…
(ನಾನು ಇದ್ದೆ ಅನ್ನೋದು ಕನಸಿನ ಮಧ್ಯಭಾಗದಲ್ಲಷ್ಟೇ ತಿಳಿದಿದ್ದು ನನಗೆ.
ನಾನು ಏನಾಗಿದ್ದೆ ಅನ್ನೋದು ಮುಂದೆ ತಿಳಿಯಿತು…)
ಬಹುಶಃ ಮಣ್ಣಿನಲ್ಲಿ ಅಲ್ಲಿನ ದೇವಾಲಯಗಳ ಸಣ್ಣಸಣ್ಣ ಮೂರ್ತಿಗಳನ್ನು
ಮಾಡುತ್ತಿದ್ದೆ ಅನಿಸುತ್ತೆ. ಅಪ್ಪ ಅವುಗಳನ್ನ ಹೊರಗೆಲ್ಲೋ ಮಾರುತ್ತಿದ್ರು ಅನ್ಸುತ್ತೆ.
ಒಂದ್ ದಿನ ಅಪ್ಪ ಭಾರೀ ಖುಷಿಯಾಗಿದ್ದಂತೆ ತೋರಿತು. ಮನೆಗೆ ಬಂದ್ಮೇಲೆ
ತುಂಬ ಆಸಕ್ತಿಯಿಂದ ಅವರೇ ತಮ್ಮ ಕೈಯಾರೆ ಇಲ್ಲಿಯದ್ದೇ (ಬಹುಶಃ ನನಗೆ ಇಷ್ಟವಾದ) ದೇವಾಲಯವೊಂದರ ಮೂರ್ತಿಯನ್ನ
ಮಾಡಿ, ಬಣ್ಣ ಹಚ್ಚಿದ್ದೆಲ್ಲ
ಆದ ನಂತರ ನನಗೆ ಕೊಟ್ರು. ಅದರ ಜೊತೆಗೆ ಒಂದಷ್ಟು ದುಡ್ಡು ಕೂಡ!
ನಾನು ತುಂಬ ಸಂತೋಷಗೊಂಡಿದ್ದೆ. ದುಡ್ಡು ಹಾಗೂ ದೇವಳದ ಮೂರ್ತಿಯನ್ನ
ತಗೊಂಡು ಎಲ್ಲಿಗೋ ಹೊರಟೆ
ಸಣ್ಣ ಸಂದುಗೊಂದುಗಳಲ್ಲಿ ಸಾಗಿ ಹೋದೆ. ಕೊನೆಗೂ ಯಾವುದೋ ಸಣ್ಣ ದೇವಾಲಯವನ್ನು
ತಲುಪಿದೆ. ಅಲ್ಲಿಗೆ ಅವಳಲ್ಲದೆ ಬೇರೆ ಯಾರೂ ಬರುವುದಿಲ್ಲ, ಗೊತ್ತು ನನಗೆ.
ಬಹಳ ಹೊತ್ತು ಅವಳು ಬಂದಾಳೆಂದು ಕಾದೆ. ಎಷ್ಟು ಹೊತ್ತಾದರೂ ಅವಳ ಸುಳಿವೇ
ಇಲ್ಲ! ಕೊನೆಗೆ ದೇವಾಲಯದ ಮೂರ್ತಿಯನ್ನ ಅಲ್ಲೇ ಇಟ್ಟು - ಅಲ್ಲಿಗೆ ಬರುವುದು ಅವಳೊಬ್ಬಳೇ! ಬಂದಾಗ ಅವಳದನ್ನು
ನೋಡಿಯೇ ನೋಡುತ್ತಾಳೆಂಬ ನಂಬಿಕೆಯಿದ್ದಿರಬಹುದು - ಹೊರನಡೆದೆ
ಬಹುಶಃ ಬೇಸರವಾಗಿತ್ತು ಅನಿಸುತ್ತೆ, ನನಗೆ - ಅವಳನ್ನು ಭೇಟಿಯಾಗಲಿಲ್ಲ
ಅಂತ… ಬರಿದೇ ನಡೆದು ಸಾಗಿದ್ದೆ. ನನ್ನಲ್ಲಿ ದುಡ್ಡಿದ್ದುದು ನೆನಪಾಗಿರಬೇಕು. ಹಸಿವೂ ಆಗಿದ್ದಿರಬಹುದು.
ಯಾವುದೋ ಹೋಟೆಲಿನತ್ತ ಹೊರಟೆ.
ಅಹ್! ಅವಳಿಗೆ ಫೋನ್ ಮಾಡೋಣವೆನಿಸಿತು. ನನ್ನ Moto-G
ಫೋನನ್ನು
ತೆಗೆದು ಅವಳ ನಂಬರಿಗೆ ಕರೆ ಮಾಡಿದೆ (ಅದೇಕೊ ಆಗ ಮೋಟೊ-ಜಿ ಫೋನ್ ಸ್ಪಷ್ಟವಾಗಿ ಕಾಣಿಸಿತು. ಅದು ನನ್ನದೆಂದೇ
ಅನಿಸ್ತು. ಈ ಹಂತದಲ್ಲೇ ಈ ಕನಸಿನಲ್ಲಿದ್ದವನು ನಾನೇ ಅಂತ ತಿಳಿದಿದ್ದು)
ಒಂದೆರಡು ಸಾರಿ ಪ್ರಯತ್ನಿಸಿದರೂ ನೋ ರೆಸ್ಪಾನ್ಸ್...!
ಮತ್ತೆ ಬೇಸರವಾಗಿರಬೇಕು.. ಮುಂದೆ ಹೆಜ್ಜೆ ಹಾಕುತ್ತ ಹೊರಟೆ.
ಸ್ವಲ್ಪ ದೂರ ಸಾಗುತ್ತಿದ್ದಂತೆ ಯಾರೋ
ನನ್ನ ಹಿಂಬಾಲಿಸುತ್ತಿರುವಂತೆ ತೋರಿತು. ಹಿಂತಿರುಗಿ ನೋಡಿದೆ. ಯಾರೋ ಹುಡುಗ,
ಒಂದಿಪ್ಪತ್ಮೂರು
ಹರೆಯದವನಿರಬಹುದು,
ಬರುತ್ತಿದ್ದ...
ನೋಡಲು ಕಳ್ಳನಂತೇನೂ ಕಾಣಿಸಲಿಲ್ಲವಾದರೂ ನನಗೇಕೊ ಅವನ ಮೇಲೆ ಅನುಮಾನ ಮೂಡಿತು.
ಸ್ವಲ್ಪ
ತ್ವರೆಯಾಗಿ ಹೆಜ್ಜೆ ಹಾಕಿದೆ. ಅವನೂ ಹಿಂದೆಯೇ ಬಂದಂತೆನಿಸಿತು.
ನಾನು ಇದುವರೆಗೂ ಫೋನನ್ನು ಕೈಯಲ್ಲೇ ಹಿಡಿದಿದ್ದೆ.
ಈಗ ಭದ್ರವಾಗಿ ಜೇಬಿನೊಳಗಿಟ್ಟು ನಡೆಯೋಣವೆಂದುಕೊಂಡೆ. ನೋಡಿದರೆ ನಾನು ಉಟ್ಟಿದ್ದುದು ಪಂಚೆ. ಅದರಲ್ಲಿ
ಜೇಬು ಎಲ್ಲಿಂದ ಬಂದೀತು! ಸರಿ ಕೈಯಲ್ಲೇ ಆದಷ್ಟೂ ಭದ್ರವಾಗಿ ಹಿಡಿದು, ಎದೆಗೆ
ಅವಿಚಿಕೊಂಡು ನಡೆಯತೊಡಗಿದೆ...
ಹಠಾತ್ತಾಗಿ ಅವನು ಹತ್ತಿರ ಬಂದು ನನ್ನ
ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಳ್ಳಲು ಪ್ರಯತ್ನಿಸಿದ. ನಾನು ಮೊಬೈಲನ್ನು ಗಟ್ಟಿಯಾಗಿ ಹಿಡಿದಿದ್ದೆ.
ಅಷ್ಟು ಬೇಗ ಅವನಿಗದು ದಕ್ಕುವಂತಿರಲಿಲ್ಲ
ಬಲವೆಲ್ಲ ಬಿಟ್ಟು ಕಾಲಿನಲ್ಲೊಮ್ಮೆ ಜಾಡಿಸಿ
ಹೊಡೆದೆ ಅವನಿಗೆ. ಆತ ಹೇಗೋ ಸಂಭಾಳಿಸಿಕೊಂಡು ಮತ್ತೂ ಪ್ರಯತ್ನಿಸುತ್ತಿದ್ದ - ಮೊಬೈಲ್ ಕಿತ್ತುಕೊಳ್ಳಲು.
ನಾನು ಬಹುಶಃ ಸಹಾಯಕ್ಕಾಗಿ ಅರಚಾಡಿದೆ
ಅನ್ಸುತ್ತೆ.. ಆ ಕ್ಷಣಕ್ಕೆ ಸುತ್ತಮುತ್ತಲಿದ್ದ ಅಂಗಡಿಗಳ ಸಾಲು, ಅಲ್ಲಿ
ಹತ್ತಿರದಲ್ಲಿ ಓಡಾಡುತ್ತಿದ್ದ ಜನ - ಎಲ್ಲ ಸ್ಪಷ್ಟವಾಗಿ ಕಾಣುತ್ತಿತ್ತು ನನಗೆ.
ಸುಮಾರು ಜನ ಸೇರಿದರು ಅಲ್ಲಿ. ಅವರಲ್ಲಿ
ಕೆಲವರು ಅವನನ್ನು ಹಿಡಿದುಕೊಳ್ಳಲು ಬಂದರು. ಆದರೂ ಮೊಬೈಲಿಗಾಗಿ ನಮ್ಮಿಬ್ಬರ ಸೆಣಸಾಟ ನಡೆದೇ ಇತ್ತು…
ಅಷ್ಟರಲ್ಲಿ,
ಕಿವಿಗಡಚಿಕ್ಕುವಂತೆ
ಯಾವುದೋ ಸದ್ದು… ನಿಲ್ಲದೆ ಮೊಳಗುತ್ತಿದೆ… ಅದು ನಿಲ್ಲುವ ಲಕ್ಷಣವೇ ಕಾಣಿಸದು! ಅಬ್ಬ! ಎಂತಹ ಕರ್ಕಶ
ಶಬ್ದ...!!!
ಎಚ್ಚರಾಯಿತು ನನಗೆ. ಸದ್ದು ಮಾಡುತ್ತಿದ್ದದ್ದು
೬:೧೫ರ alarm.!
ಹಾಸಿಗೆಯ ಮೇಲೆ ಹಾಗೇ ಕೈಯಾಡಿಸಿದೆ. ಮೊಬೈಲು
ತಕ್ಷಣಕ್ಕೆ ಕೈಗೆ ಸಿಗಲಿಲ್ಲ...
ಕನಸು ಕೂಡ ಮೊಬೈಲಿನ ಬಗೆಗೇ ಇದ್ದುದರಿಂದ
ನನ್ನ ಮೊಬೈಲನ್ನು ತಕ್ಷಣವೇ ನೋಡಬೇಕೆನಿಸಿತು. ಅದನ್ನು ಹುಡುಕಿ, alarmಅನ್ನು
off
ಮಾಡಲು
ಏಳಲೇಬೇಕಾಯಿತು."
No comments:
Post a Comment