Sunday, 30 November 2014

ಕನಕದಾಸರ "ರಾಮಧಾನ್ಯ ಚರಿತ್ರೆ" - ೪

'ಅರಸ ಕೇಳ್ಮರುದಿವಸದಲಿ ರಘು
ವರನು ತನ್ನೋಲಗಕೆ ನೃಪರನು
ಕರೆಸಿದನು ನಿಜಮಂತ್ರಿ ಬಾಂಧವಜಾಲ ವರ್ಗವನು
ತರಣಿಸುತ; ಜಾಂಬವ ವಿಭೀಷಣ
ರಿರದೆ ಬಂದರು ಕೈಮುಗಿದು ಕು
ಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ'                          -೧೨೩

’ಕೇಳು ಲಕ್ಷ್ಮಣ, ಕೇಳು ಜಾಂಬವ, ಕೇಳು ನಳ ನೀಲಾದಿ ಸುಭಟರೆ ಕೇಳಿರೈ, ನರೆದಲೆಗ-ವ್ರಿಹಿಯರು ಸೆರೆಯೊಳಿರ್ದವರ ಕಾಲ ಸವೆದುದು ದಿವಸವಿಂದಿಗೆ ಏಳು ತಿಂಗಳು ಕಳೆದವವದಿರ ಪಾಲಿಸಲು ಬೇಕು. ಅನಿಲಸುತ, ನೀ ಕರೆದು ತಾ’ ಎಂದ.

ಹನುಮಂತನು ರಾಮನ ಅಪ್ಪಣೆಯನ್ನು ಪಡೆದು ಗೌತಮ ಮಹರ್ಷಿಗಳ ಆಶ್ರಮಕ್ಕೆ ಬಂದನು. ಅವರಿಗೆ ನಮಿಸಿ ಆಶೀರ್ವಾದ ಪಡೆದ ನಂತರ ತಾನು ಬಂದ ವಿಷಯವನ್ನು ತಿಳಿಸಿ, ಕೂಡಲೆ ನರೆದಲೆಗ ಹಾಗೂ ವ್ರಿಹಿಗರನ್ನು ಸೆರೆಮನೆಯಿಂದ ಬಿಡಿಸಿ ತಮ್ಮೊಡನೆ ಕರೆದುಕೊಂಡು ಕೂಡಲೆ ಅಯೋಧ್ಯೆಗೆ ಬರಬೇಕಾಗಿ ಬಿನ್ನವಿಸಿದನು. ಗೌತಮ ಮಹರ್ಷಿಯು ಹನುಮಂತನ ಮಾತಿಗೆ ಒಪ್ಪಿ, ಕೂಡಲೆ ಆಶ್ರಮದ ಇತರ ತಾಪಸಿಗಳನ್ನು ಕರೆಸಿ, ನರೆದಲೆಗ-ವ್ರಿಹಿಗರನ್ನೊಡಗೊಂಡು ಅಯೋಧ್ಯೆಗೆ ಹೊರಟುಬಂದರು.
-----------------------------------------------------------------------------------------------------------
ಅಯೋಧ್ಯೆಗೆ ದಯಮಾಡಿಸಿದ ಗೌತಮ ಮಹರ್ಷಿಗಳನ್ನು ರಾಮನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಸತ್ಕರಿಸಿದನು. ನಂತರದಲ್ಲಿ:

ಇವರ ವ್ಯವಹಾರವನು ಪರಿಹರಿ
ಸುವ ವಿಚಾರವ ಮಾಡಿ ಮನದಲಿ
ರವಿಕುಲಾನ್ವಯ ರಾಮ ನೆನೆದನು ಹೃದಯಶುದ್ಧಿಯಲಿ -
ಶಿವನ ಧ್ಯಾನಿಸಲಾ ಕ್ಷಣವೆ ತ್ರೈ
ಭುವನಕರ್ತರು ಇಂದ್ರ ಮೊದಲಾ
ದವರು ಬಂದರಯೋಧ್ಯಾಪುರಧಾಮನೋಲಗಕೆ                                    -೧೨೯

ವಸುಗಳು, ಅಮರರು, ಭುಜಂಗಾಮರರು, ಅಸುರ, ಕಿನ್ನರ, ಯಕ್ಷ, ರಾಕ್ಷಸ, ಶಶಿ-ರವಿಗಳು, ಆದಿತ್ಯ, ವಿದ್ಯಾಧರರು, ಗುಹ್ಯಕರು, ವಸುಧೆಯಮರರು(ಬ್ರಾಹ್ಮಣರು), ಕ್ಷತ್ರಿಯರು, ಜೋಯಿಸರು, ವೈಶ್ಯ ಚತುರ್ಥರು, ಉನ್ನತ ಕುಶಲ ವಿದ್ಯಾಧಿಕರು ನೆರೆದುದು ನೃಪನ ಸಭೆಯೊಳಗೆ.

ಇಂತೆಸೆವನಾ ಸಭೆಯೊಳಗೆ ಮತಿ
ವಂತ ನುಡಿದನು ಧಾನ್ಯವರ್ಗದ
ಸಂತತಿಯ ಬರಹೇಳಿಯೆನೆ, ಸೆರೆಮನೆಯೊಳಿರ್ದವರು
ನಿಂತು ಕರಗಳ ಮುಗಿದು 'ಧರಣೀ
ಕಾಂತ ರಘುವರನೀ ಸುಬುದ್ಧಿಯ
ನೆಂತು ನಮಗರುಹುವಿಯದ ಪೇಳೆಂದ' ನರೆದಲೆಗ                                   -೧೩೧

ಕೂಡಿದ ಸಭೆಯೊಳಕ್ಕೆ ನರೆದಲೆಗ-ವ್ರಿಹಿಗರನ್ನು ಕರೆಸಲಾಯಿತು. ಆಗ ನರೆದಲೆಗನು "ಅಯ್ಯಾ, ರಘುವರನೇ, ನಮ್ಮಿಬ್ಬರ ನಡುವಿನ ವ್ಯಾಜ್ಯ ಬಗೆಹರಿಸಲು ನೀವು ಯಾವ ನ್ಯಾಯವನ್ನು ತಿಳಿಸಲಿರುವಿರಿ?" ಎಂದು ಕೇಳಿದ.

ಎನಲು ರಾಮನೃಪಾಲ ನೋಡಿದ
ಘನ ತಪೋಮಹಿಮರಿಗೆ ನುಡಿದನು -
’ಮನವ ವಂಚಿಸಲಾಗದೀ ಧರ್ಮವನು ನೆರೆ ತಿಳಿದು
ಅನುನಯದೆ ಪೇಳೆ’ನೆ, ಮುನೀಂದ್ರರು
ಅನಿಮಿಷರನೀಕ್ಷಿಸಿದರಲ್ಲಿಯ (ಅನಿಮಿಷರು-ದೇವತೆಗಳು)
ಘನ ಮಹಾಸಭೆಯೊಳಗೆ ಭಾರ್ಗವ ರಾಮನಿಂತೆಂದ                                  -೧೩೨

’ಆರು ನುಡಿಯರೆ! ನೀವು ಹಿರಿಯರು, ಮೀರಿಸುವರಾರಿವರೊಳಗೆ ಗುಣಸಾರನ್ ಆವನು ಪೇಳ್’ ಎನಲು, ಜಂಭಾರಿ ನಸುನಗುತ "ಸಾರಹೃದಯನು ನರೆದಲೆಗ; ನಿಸ್ಸಾರನೀ ವ್ರಿಹಿ" ಎನಲು, ಮರುತಾತ್ಮಜ ನೋಡಿದನು ಸನ್ನೆಯಲಿ ನಾರದನ. (ಜಂಭಾರಿ - ಜಂಭಾಸುರ ಎಂಬ ರಾಕ್ಷಸನ ವೈರಿ, ಇಂದ್ರ; ಮರುತಾತ್ಮಜ - ಹನುಮಂತ)

"ಅಹುದಹುದು, ಸುರಪನ (ಇಂದ್ರ) ಮಾತು ನಿಶ್ಚಯವಹುದು; ನರೆದಲೆಗನೆ ಸಮರ್ಥನು, ಬಹಳ ಬಲಯುತ. ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ. ಸಹಜವಿದು. ಪರಪಕ್ಷವಾದಡೆ (ಪ್ರತಿಪಕ್ಷದವನು - ಭತ್ತ) ವ್ರಿಹಿ ಕರಗಿ ಕಂದಿದನು ಸೆರೆಯಲಿ. ವಿಹಿತವಿದು ಕೇಳ್" ಎಂದು ನಾರದ ನುಡಿದನು ನಸುನಗುತ.

"ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು, ಹುಸಿಯಲ್ಲ. ಬಡವರ-ಬಲ್ಲಿದರನಾರೈದು ಸಲಹುವನ್ ಇವಗೆ ಸರಿಯುಂಟೆ? ನೆಲ್ಲಿನಲಿ ಗುಣವೇನು, ಭಾಗ್ಯದಿ ಬಲ್ಲಿದರ ಪತಿಕರಿಸುವನು (ಪತಿಕರಿಸು - ಒಲಿಯುವುದು, ಕೃಪೆ ಮಾಡು). ಅವನಲ್ಲಿ ಸಾರವ ಕಾಣೆ" ಎಂದನು ಕಪಿಲ ಮುನಿ ನಗುತ.
ಹೀಗೆ, ಸುರರೂ ಮುನಿಗಳೂ ಧಾನ್ಯಗಳ ಪೈಕಿ ನರೆದಲೆಗನೇ ಉತ್ತಮನೆಂಬುದನ್ನು ಒಪ್ಪಿ ನುಡಿದರು.

ಸುರಮುನಿಗಳಿಂತೆನಲು, ಭೂಸುರ
ವರರು, ಸಂತೋಷಿಸಲು ಸಭಿಕರು
'ನರೆದಲೆಗ ನೀ ಬಾ'ರೆನುತ ರಾಮನೃಪಾಲ ನೆರೆಮೆಚ್ಚಿ
ಕರೆದು ಕೊಟ್ಟನು ತನ್ನ ನಾಮವ
ಧರೆಗೆ "ರಾಘವ"ನೆಂಬ ಪೆಸರಾ (ರಾಘವ --> ರಾಗಿ)
ಯ್ತಿರದೆ ವ್ರಿಹಿ ನಾಚಿದನು. ಸಭೆಯಲ್ಲಿ ಶಿರವ ಬಾಗಿಸಿದ.                         -೧೩೬

ಹಾಗೆ ಎಲ್ಲರ ಸಮಕ್ಷಮದಲ್ಲಿ ರಾಮನು ನರೆದಲೆಗನನ್ನು ಉತ್ತಮನೆಂದು ಘೋಷಿಸಿ, ತನ್ನ ಹೆಸರಾದ ’ರಾಘವ’ನೆಂಬ ನಾಮವನ್ನೇ ನರೆದಲೆಗನಿಗೂ ಕೊಟ್ಟನು. "ಹರುಷ ತೋರಿದ ಮನದಿ ನಲಿವುತ ನರೆದಲೆಗನೈತಂದು ರಾಮನ ಸಿರಿಚರಣಕೆ ಅಭಿನಮಿಸೆ, ದೇವಾಸುರರು ಕೊಂಡಾಡೆ, ಹರಸಿ ಮುತ್ತಿನ ಸೇಸೆಯನು ಭೂಸುರರು ಮಂತ್ರಾಕ್ಷತೆಯನ್ ಇತ್ತು ಉಪಚರಿಸಿದರು ರಾಗಿಯನು...." ಹೀಗೆ ರಾಗಿಯು ಸಭೆಯಲ್ಲಿ ಎಲ್ಲರ ಮೆಚ್ಚುಗೆ, ಗೌರವ, ಆಶೀರ್ವಾದಗಳಿಗೆ ಪಾತ್ರವಾಗುತ್ತದೆ.

ನಂತರದಲ್ಲಿ ಬ್ರಹ್ಮ, ಶಿವ, ಇಂದ್ರ, ಯಮ, ಕುಬೇರ ಮೊದಲಾದ ದೇವತೆಗಳು ರಾಗಿಗೆ ವಿವಿಧ ಬಹುಮಾನಗಳನ್ನೂ, ವರಗಳನ್ನೂ ಕೊಟ್ಟು ಹರಸಿದರು.

ಕರೆಸಿದಳು ಶರ್ವಾಣಿ(ಪಾರ್ವತಿ) ತನ್ನಯ ಮರುಳು ಬಳಗವನೆಲ್ಲ - "ನೀವೀ ಧರಣಿಯಲಿ ಸತಿ ರೂಪವಂ ತಾಳ್ದು, ಅಗಣಿತದ ಮನೆಗಳಲಿ ಹುರುಳುಗೆಡಿಸದೆ ಸರ್ವಭೂತಾತ್ಮರಿಗೆ ಪಕ್ವಾನ್ನವನು ನೀಡಿ" ಎಂದು ಉರುತರದ ಪ್ರೇಮದಲಿ ಕಳುಹಿದಳಗಜೆ (ಅಗಜೆ - ಪರ್ವತರಾಜನ ಕುಮಾರಿ, ಪಾರ್ವತಿ) ಕರುಣದಲಿ.
ನಂತರದಲ್ಲಿ ಹರಿಹರಬ್ರಹ್ಮಾದಿಗಳು ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸಿ ತಮ್ಮತಮ್ಮ ಲೋಕಗಳಿಗೆ ತೆರಳಿದರು.

ಸಭೆಗೆ ಆಗಮಿಸಿದ್ದ ದೇವಾಸುರರು, ಬ್ರಾಹ್ಮಣರು ಮುಂತಾದರೆಲ್ಲ ಅನೇಕ ವರಗಳನ್ನು ಕರುಣಿಸಿ ಹರಸಿದ್ದರ ಫಲವಾಗಿ ನರೆದಲೆಗನು ಮುಂದೆ ಭುವಿಯಲ್ಲಿ ರಾಗಿ ಎಂದು ಪ್ರಖ್ಯಾತನಾದನು.
ಹೀಗೆ ಸಭೆಯಲ್ಲಿ ರಾಗಿಯು ಎಲ್ಲರಿಂದ ಪ್ರಶಂಸೆ ಪಡೆದುದನ್ನು ಕಂಡು ತನಗಾದ ಮಾನಭಂಗವನ್ನು ನೆನೆಯುತ್ತ ಚಿಂತೆಗೊಳಗಾಗಿದ್ದ ವ್ರಿಹಿಗನನ್ನು ರಾಮನು ಕರೆದು ಪ್ರೇಮದಿಂದ ಮಾತನಾಡಿಸಿದನು. "ಅಯ್ಯಾ ವ್ರಿಹಿಗ, ಏಕೆ ಕೊರಗುತ್ತೀಯೆ. ನಾವು ಭೂಮಿಯಲ್ಲಿ ನರೆದಲೆಗನೇ ಉತ್ತಮನೆಂದು ಹೇಳಿದ್ದನ್ನು ಕೇಳಿ ಖತಿಗೊಂಡಿರುವೆಯಾ? ಈತನು ಕ್ಷಾಮಕಾಲದಲ್ಲೂ ಜನರನ್ನು ಕರುಣೆಯಿಂದ ಕಾಯುತ್ತಾನೆಯಾದ್ದರಿಂದ ಅವನನ್ನು ಪತಿಕರಿಸಿದೆವು. ಅಷ್ಟೇ ಹೊರತು ನಿನ್ನನ್ನು ಹೀಗಳೆಯುವುದು ನಮ್ಮ ಉದ್ದೇಶವಲ್ಲ."
"...ನಮ್ಮೆಡೆಗೆ ನೀನು ಸುರಧೇನುವಿನ ಸಮ. ನಿನ್ನ ಚಿತ್ತದಿ ಹಾನಿದೋರಲದೇಕೆ, ಬಿಡು ಬಿಡು ಚಿಂತೆ ಯಾಕೆಂ"ದ

"ದೇವರಿಗೆ ಪರಮಾನ್ನ ನೀ. ಮನು
ಜಾವಳಿಗೆ ಪಕ್ವಾನ್ನವೀತನು.
ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು.
ನಾವು ಕೊಟ್ಟೆವು ವರವ, ಸಲ್ಲುವು
ದಾವ ಕಾಲದಲಿನ್ನು ನೀವೇ ಪಾವನರು ಸುಖಿ"ಯೆಂದುಪಚರಿಸಿದನು ನೃಪತಿ.          - ೧೪೯

ಹೀಗೆ ವ್ರಿಹಿಗನನ್ನು ಸಂತೈಸಿ, ಇತರ ಧಾನ್ಯಗಳನ್ನೂ ಹರಸಿ ಹಲವು ವರಗಳನಿತ್ತು ರಾಮನು ಎಲ್ಲ ಧಾನ್ಯಗಳನ್ನೂ ಕಳುಹಿಸಿದ.

ಶಾಂಡಿಲ್ಯ ಮುನಿಗಳು ಯುಧಿಷ್ಠಿರನಿಗೆ ಈ ಕಥೆಯೆಲ್ಲವನ್ನು ವಿಸ್ತಾರವಾಗಿ ಹೇಳಿದರು. ಯುಧಿಷ್ಠಿರನು ರಾಮಧಾನ್ಯದ ಚರಿತೆಯನ್ನು ಕೇಳುವ ಭಾಗ್ಯ ತನ್ನದಾಯ್ತೆಂದು ಸಂತಸದಿಂದ ಶಾಂಡಿಲ್ಯ ಮುನಿಯ ಪಾದಗಳಿಗೆರಗಿ ವಂದಿಸಿದ.

ಶಾಂಡಿಲ್ಯಮುನಿಯು:
"ಅರಸ, ನೀ ಮನವೊಲಿದು ಕೇಳದ
ಚರಿತೆ ತಾನೊಂದಿಲ್ಲ. ಲೋಕದಿ
ಪರಮ ಪುಣ್ಯದ ರಾಮಕಥೆಯಿದ ಕೇಳ್ದೆ ನೀನಿಂದು
ಕೊರತೆಯುಂಟೇ? ಇಷ್ಟಭೋಗವ
ಹರಿ ಕೊಡುವ ನಿಮಗಿನ್ನು"ಯೆನುತುಪ
ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ.                            -೧೫೭

ಶರಧಿಶಯನ ಮುಕುಂದ ಸಚರಾ
ಚರಭರಿತ ನಿರ್ಗುಣ ನಿರಾಮಯ
ಸುರ ನರೋರಗವಂದ್ಯ ವರಪುರದಾದಿಕೇಶವನ
ಚರಣದಂಕಿತಮಾಗಿ ಪೇಳಿದ
ಪರಮಧಾನ್ಯದ ಚರಿತೆ ಸಂತತ
ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ.                              -೧೫೮


"ಮಂಗಳಂ"

Saturday, 29 November 2014

ಅನಿರೀಕ್ಷಿತ - ಒಂದು ವಿಮರ್ಶೆ

ಇತ್ತೀಚೆಗೆ ಕನ್ನಡವೂ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಕಿರುಚಿತ್ರಗಳು ಹೆಚ್ಚುಹೆಚ್ಚಾಗಿ ಮೂಡಿಬರುತ್ತಿವೆ. ಐಟಿ ಉದ್ಯೋಗಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಜನರು ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಕಿರುಚಿತ್ರವು ಒಳ್ಳೆಯ ಮಾಧ್ಯಮವಾಗಿ ರೂಪುಗೊಂಡಿದೆ. ಇಂದು ಹೊಸ ಹೊಸ ತಂತ್ರಜ್ಞಾನಗಳ ಸಹಾಯದಿಂದ ಅತಿ ಕಡಿಮೆ ಖರ್ಚಿನಲ್ಲಿಯೇ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಿರುಚಿತ್ರಗಳನ್ನು ತಯಾರಿಸುವಲ್ಲಿ ಯುವಜನತೆ ಉತ್ಸಾಹ ತೋರುತ್ತಿದೆ. ಯೂಟ್ಯೂಬ್, ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಕಿರುಚಿತ್ರಗಳು ಹೆಚ್ಚುಹೆಚ್ಚು ಜನರನ್ನು ತಲುಪುತ್ತಿರುವುದೂ, ಹಾಗೂ ನೋಡುಗರಿಂದ ಅವುಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ-ಮೆಚ್ಚುಗೆಗಳು ಲಭಿಸುತ್ತಿರುವುದೂ ನಿಜವಷ್ಟೆ. ಈ ಮೂಲಕ ನಮ್ಮ ನಡುವೆಯೇ ಇರುವ ಹಲವಾರು ಪ್ರತಿಭೆಗಳು ನಮಗೆಲ್ಲರಿಗೂ -ಜಗತ್ತಿನ ಎಲ್ಲ ಭಾಗದಲ್ಲಿರುವವರಿಗೂ- ಪರಿಚಯವಾಗುತ್ತಿವೆ. ಇದು ನಿಜಕ್ಕೂ ಸಂತಸದ ವಿಷಯ.

ಇತ್ತೀಚೆಗೆಷ್ಟೇ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿ, ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡ ಕಿರುಚಿತ್ರ ’ಅನಿರೀಕ್ಷಿತ’. ಮೊನ್ನೆಯಷ್ಟೇ ಈ ಚಿತ್ರದ ಬಗ್ಗೆ  ’ಒನ್ ಇಂಡಿಯಾ’ ಕನ್ನಡ ಆನ್ಲೈನ್ ಪತ್ರಿಕೆಯಲ್ಲಿಯೂ ಲೇಖನವೊಂದು ಪ್ರಕಟವಾಗಿತ್ತು. 
ಇಷ್ಟೆಲ್ಲ ಮೆಚ್ಚುಗೆಯನ್ನು ಪಡೆದ ಈ ಕಿರುಚಿತ್ರವನ್ನು ತಯಾರಿಸಿದ ತಂಡ ನಮ್ಮ ಸಂಸ್ಥೆಯ ಉದ್ಯೋಗಿಗಳೇ ಎಂಬುದು ನಿಜಕ್ಕೂ ನಮಗೆ ಹೆಮ್ಮೆಯ ವಿಷಯ. ವೇಗವಾಗಿ ಸಾಗಿಹೋಗುತ್ತಿರುವ ಯಾಂತ್ರಿಕ ಜೀವನದ ನಡುವೆ ತಮ್ಮ ಹವ್ಯಾಸ-ಕಲೆ-ಪ್ರತಿಭೆಗಳಿಗೂ ಸಮಯವನ್ನು ಮಾಡಿಕೊಂಡು ಅಪರೂಪದ ಚಿತ್ರವೊಂದನ್ನು ನಿರ್ಮಿಸಿದ್ದಾರೆ ’ಅನಿರೀಕ್ಷಿತ’ ಚಿತ್ರತಂಡ. ನಮ್ಮ ಬಳಗದವರೇ ಆದ ಶ್ರವಣ್’ರವರು ಈ ಚಿತ್ರಕ್ಕೆ ಚಿತ್ರಕತೆ-ಸಂಭಾಷಣೆಯನ್ನು ರಚಿಸಿ, ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಶ್ರವಣ್, ಸಂದೀಪ್ ಹಾಗೂ ಪ್ರೀತಿ ಇದ್ದಾರೆ. ರಾಜಾರಾಮ್ ರಾಮಮೂರ್ತಿಯವರು ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. ಲಿಂಗರಾಜುರವರ ಛಾಯಾಗ್ರಹಣವಿರುವ ಈ ಚಿತ್ರದ ಸಂಕಲನ ಕಾರ್ಯವನ್ನು ಜಗದೀಶ್’ರವರು ನಿರ್ವಹಿಸಿದ್ದಾರೆ. 


ಅನಿರೀಕ್ಷಿತ:

ಚಿತ್ರದ ನಿರ್ದೇಶಕ ಶ್ರವಣ್’ರವರೇ ಹೇಳುವಂತೆ ಇದು ಟಿ.ಪಿ.ಕೈಲಾಸಂ ರವರ "ಗಂಡಸ್ಕತ್ರಿ" ಎಂಬ ನಾಟಕದ ಪ್ರೇರಣೆಯಿಂದ ಮೂಡಿಬಂದಿರುವ ಚಿತ್ರ. ಆದರೆ, ’ಗಂಡಸ್ಕತ್ರಿ’ಯ ಕತೆ ಹಳೆಯದಾದರೂ, ಅದನ್ನು ಈ ಕಾಲಕ್ಕೆ ಹೊಂದುವಂತೆ ಹಲವಾರು ಮಾರ್ಪಾಟುಗಳನ್ನು ಮಾಡಿಕೊಂಡು ಚಿತ್ರಕತೆ-ಸಂಭಾಷಣೆಯನ್ನು ರಚಿಸಿದ್ದಾರೆ, ಶ್ರವಣ್. ಹಾಗಾಗಿ ಈ ಚಿತ್ರವನ್ನು ನಾಟಕದ ಹಿನ್ನೆಲೆಯಲ್ಲಿಯೇ ವಿಮರ್ಶಿಸುವುದು ಸೂಕ್ತ ಎಂದು ನನಗೆನಿಸುತ್ತದೆ.
ಮೊದಲಿಗೆ ಕತೆಗೆ ಅಷ್ಟಾಗಿ ಅಗತ್ಯವೆನಿಸದ, ನಾಟಕದಲ್ಲಿನ ಪಾತ್ರಗಳನ್ನು ಕಡಿಮೆ ಮಾಡಿ ಮುಖ್ಯಕತೆಗೆ ಬೇಕಿರುವಷ್ಟೇ(೩) ಪಾತ್ರಗಳನ್ನು ಮಾತ್ರ ಚಿತ್ರದಲ್ಲಿ ಉಳಿಸಿಕೊಂಡಿದ್ದಾರೆ ಎಂಬುದನ್ನು ನಾವು ಗಮನಿಸಬಹುದು. ಹಾಗಾಗಿ ಈ ಮೂರು ಪಾತ್ರಗಳಿಗೆ ಮಾತ್ರ ಬೇಕಾದಷ್ಟು ಫೋಕಸ್ ಮಾಡಲು ಸಾಧ್ಯವಾಗಿದೆ (ಕತೆಯ ಹರಹಿಗೆ ತಕ್ಕಂತೆ ಬೇರೆ ಪಾತ್ರಗಳು ಅನುಷಂಗಿಕವಾಗಿ ಪ್ರಸ್ತಾಪಿಸಲ್ಪಡುತ್ತವೆ). ಕತೆಯ ಹರಿವು, ಅಂತ್ಯದಲ್ಲಿಯೂ ಸೂಕ್ತವಾದ ಬದಲಾವಣೆಗಳಾಗಿವೆ. ಈ ಎಲ್ಲ ಮಾರ್ಪಾಟುಗಳೇನೇ ಇದ್ದಾಗಿಯೂ ’ಅನಿರೀಕ್ಷಿತ’ದ ಮೂಲಕ ಕೈಲಾಸಂರವರ ನಾಟಕವೊಂದು ಹೊಸರೂಪದಲ್ಲಿ ಇಂದಿನ ಜನರಿಗೆ ತಲುಪಿದೆ ಎಂದರೆ ಅತಿಶಯವಲ್ಲ. ಯಾವ ರೀತಿಯಲ್ಲಿ ಆ ನಾಟಕದಲ್ಲಿನ ಕತೆ ಇಂದಿಗೂ ಪ್ರಸ್ತುತ ಎಂಬುದನ್ನು ಶ್ರವಣ್’ರವರು ನಿರೂಪಿಸಿದ್ದಾರೆ. ಅವರ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ.

ಕೇವಲ ಹದಿನಾಲ್ಕು+ ನಿಮಿಷದ ಅವಧಿಯಲ್ಲಿ ಈ ಕತೆಯನ್ನು ತೆರೆಯ ಮೇಲೆ ಸಮರ್ಥವಾಗಿ ಮೂಡಿಸಿದ್ದಾರೆ. ಮೂಲ ಕತೆಗಿಂತ ಭಿನ್ನವಾದ ಶೈಲಿಯಲ್ಲಿ ಕತೆಯನ್ನು ನಿರೂಪಿಸಿರುವುದು ಹೆಚ್ಚು ಅರ್ಥವತ್ತಾಗಿದೆ. ಹಿಂದೆ ಏನಾಗಿತ್ತೋ, ಮುಂದೆ ಏನಾಗುವುದೋ ಎಂಬ ಪ್ರಶ್ನೆಗಳನ್ನು, ಊಹೆಗಳನ್ನು ಪ್ರೇಕ್ಷಕನ ಮನಸಿನಲ್ಲಿ ಮೂಡಿಸುವ ಹಾಗೆ ಸ್ಕ್ರೀನ್ ಪ್ಲೇ ಇರುವುದು ಚಿತ್ರದ ಹೆಸರಿಗೆ ಚೆನ್ನಾಗಿ ಒಪ್ಪುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕನ, ಸಂಕಲನಕಾರನ ಚಾತುರ್ಯ ಮೆಚ್ಚಲೇಬೇಕು.
ಹಾಗೆ ನೋಡಿದರೆ ’ಗಂಡಸ್ಕತ್ರಿ’ಯ ಕತೆ ಗಟ್ಟಿಯಾದದ್ದೇ ಆದರೂ ನಾಟಕ ಮಾತ್ರ ಒಟ್ಟಾರೆಯಾಗಿ ಸಾಧಾರಣವೆಂದೇ ಹೇಳಬಹುದು. ನನಗೆ ಅನಿಸಿದ ಮಟ್ಟಿಗೆ - ನಾಟಕದಲ್ಲಿನ ಶೈಲಿ ಅಷ್ಟೇನೂ ಎಫೆಕ್ಟಿವ್ ಆಗಿಲ್ಲ. ಏಕೆಂದರೆ ಕತೆಯಲ್ಲಿ ಸ್ವಲ್ಪ ಮಟ್ಟಿಗಿನ ಸಂಕೀರ್ಣತೆ ಇದ್ದಾಗಿಯೂ ನಾಟಕದ ಹರಿವು ಸರಳವಾಗಿ ಸಾಗಿಹೋಗುತ್ತದೆ. ಅಲ್ಲಿ ಯಾವ ರೀತಿಯ ಸಸ್ಪೆನ್ಸ್’ಗೂ ಅವಕಾಶವಿಲ್ಲ. ಎಲ್ಲವೂ ಒಂದರ ನಂತರ ಒಂದರಂತೆ ಕಣ್ಣೆದುರಿಗೇ ನಡೆದುಹೋಗುತ್ತದೆ.
ಆದರೆ ’ಅನಿರೀಕ್ಷಿತ’ದಲ್ಲಿ ಮಾಡಿಕೊಂಡ ಬದಲಾವಣೆಗಳು ಚಿತ್ರದಲ್ಲಿ ಕತೆಯು ಇನ್ನಷ್ಟು ರಸವತ್ತಾಗಿ ಮೂಡಿಬರಲು ಕಾರಣವಾಗಿವೆ. ಈ ನಿಟ್ಟಿನಲ್ಲಿ ಹಿನ್ನೆಲೆ ಸಂಗೀತವೂ ಮಹತ್ವದ ಪಾತ್ರ ವಹಿಸಿದೆ.
ಶ್ರವಣ್’ರವರು ಈ ಹಿಂದೆ ಕಿರುಚಿತ್ರದಲ್ಲಿ ನಟಿಸಿದ್ದರಾದರೂ ಈ ಚಿತ್ರದಲ್ಲಿ ಅವರ ನಟನೆ ಇನ್ನಷ್ಟು ಪಕ್ವಗೊಂಡಿದೆ ಎಂದು ಹೇಳಬಹುದು. ಸಂದೀಪ್ ಹಾಗೂ ಪ್ರೀತಿ ಕೂಡ ತಮ್ಮ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ. ಕಥೆಯಲ್ಲಿನ ಮುಖ್ಯ ಪಾತ್ರವಾಗಿರುವುದರಿಂದ, ಹಾಗೂ ಕಣ್ಣುಗಳಲ್ಲಿಯೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಪ್ರೀತಿಯವರ ನಟನೆ ಪ್ರತ್ಯೇಕ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಾಟಕದಲ್ಲಿಯೂ ಚಿತ್ರದಲ್ಲಿಯೂ ಪ್ರೇಕ್ಷಕರಿಗೆ (ಮುಖ್ಯವಾಗಿ ನನಗೆ!) ಕತೆಯಲ್ಲಿನ ಈ ಹೆಣ್ಣಿನ ಪಾತ್ರದ ಬಗ್ಗೆ ಒಂದೇ ಬಗೆಯ ಪ್ರಶ್ನೆ, ಭಾವನೆ ಮೂಡುತ್ತದೆ.

ಇನ್ನು, ಚಿತ್ರದ ಪ್ರತಿ ಫ್ರೇಮ್ ಕೂಡ ಅಂದವಾಗಿ ಮೂಡಿಬಂದಿದೆ. ಛಾಯಾಗ್ರಾಹಕನ ಪರಿಶ್ರಮ ನಿಜಕ್ಕೂ ಫಲ ಕೊಟ್ಟಿದೆ. ಒಟ್ಟಾರೆ ಚಿತ್ರತಂಡದಲ್ಲಿನ ಪ್ರತಿಯೊಬ್ಬರ ಡೆಡಿಕೇಷನ್ ಎಂತಹುದೆಂದು ಚಿತ್ರದ ಪ್ರತಿ ದೃಶ್ಯದಲ್ಲೂ ನಮಗೆ ಕಂಡುಬರುತ್ತದೆ.

ಆದರೂ, ಚಿತ್ರದ ಒಂದು ದೃಶ್ಯದಲ್ಲಿ ಆಕೆ ಅವನನ್ನು ’ಮುದಿಗೊಡ್ಡು..’ ಎಂದು ಸೂಚಿಸುವುದು ಚಿತ್ರಕತೆಯ ದೃಷ್ಟಿಯಿಂದ ಅಷ್ಟು ಸರಿಯೆನಿಸದು. ಬಹುಶಃ ನಾಟಕದ ಪ್ರಭಾವದಿಂದ ಹೇಗೋ ಅದೊಂದು ವಾಕ್ಯ ಚಿತ್ರದಲ್ಲಿಯೂ ಮೂಡಿಬಂದಿರಬಹುದು. ಅದೂ ಅಲ್ಲದೆ ಚಿತ್ರದಲ್ಲಿನ ಪಾತ್ರಗಳ ವಯಸ್ಸನ್ನು ನಾನು ಅರ್ಥೈಸಿಕೊಂಡದ್ದೇ ತಪ್ಪಿರಬಹುದು. ಅದೇನೇ ಇರಲಿ, ಅದೇನೂ ಅಂತಹ ದೊಡ್ಡ ವಿಷಯವೇನಲ್ಲ. ಇನ್ನುಳಿದಂತೆ ಅನಿರೀಕ್ಷಿತ ಗಟ್ಟಿಯಾಗಿದೆ.
ಚಿತ್ರಕತೆಯಲ್ಲಿ ಮಾಡಿಕೊಂಡ ಬದಲಾವಣೆಗಳ ಪೈಕಿ ಕತೆಯ ಅಂತ್ಯ ಕೂಡ ಹೆಚ್ಚು ಸೂಕ್ತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ’ಗಂಡಸ್ಕತ್ರಿ’ಯೊಂದಿಗೆ ತುಲನೆ ಮಾಡಿ ನೋಡಿದಾಗಿಯೂ, ’ಗಂಡಸ್ಕತ್ರಿ’ಯ ಹಿನ್ನೆಲೆಯಲ್ಲಿ ನೋಡದೆ ’ಅನಿರೀಕ್ಷಿತ’ವನ್ನೇ ಪ್ರತ್ಯೇಕವಾಗಿ ನೋಡಿದಾಗಿಯೂ "ಅನಿರೀಕ್ಷಿತ"ವು ಪ್ರೇಕ್ಷಕರ ಮೆಚ್ಚುಗೆಗೆ ಸರ್ವವಿಧದಲ್ಲಿಯೂ ಅರ್ಹವಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ’ಅನಿರೀಕ್ಷಿತ’ವೇ ನನಗೆ ಹೆಚ್ಚು ಇಷ್ಟವಾಯಿತು.

"ನಾವಂದ್ಕೊಂಡ್ಹಾಗೇ ಇಲ್ಲಿ ಎಲ್ಲ ನಡೆಯುತ್ತೆ ಅಂತ ತಿಳ್ಕೊಂಡ್ರೆ ಅದು ನಮ್ಮ ಮುಠ್ಠಾಳ್ತನ. ಯಾಕಂದ್ರೆ ಇಲ್ಲಿ ಎಲ್ಲವೂ...... ’ಅನಿರೀಕ್ಷಿತ’!"
ಈ ಸಂಭಾಷಣೆಯೊಂದಿಗೆ ’ಅನಿರೀಕ್ಷಿತ’ ಶುರುವಾಗುತ್ತದೆ. ಹಾಗಿದ್ದರೆ ಚಿತ್ರದ ಕೊನೆಯ ದೃಶ್ಯದಲ್ಲಿ ಏನು ನಡೆಯಬಹುದು?
ಕೊನೆಯಲ್ಲಿ ಏನಾಗುತ್ತದೆ ಎಂದು ತಿಳಿಯಲು ಇಂದೇ ’ಅನಿರೀಕ್ಷಿತ’ವನ್ನು ನೋಡಿ.



Tuesday, 25 November 2014

ಭೂಮಿಪುರದ ಜಾತ್ರೆ

ತನ್ನ ತಂದೆಯ ಜೊತೆಯಲ್ಲಿ ಜಾತ್ರೆಯನ್ನು ನೋಡುವ ಹಿಗ್ಗಿನಿಂದ ಹೊರಟಿದ್ದಾನೆ ಆ ಬಾಲಕ. ಇದೇ ಮೊದಲ ಬಾರಿಗೆ ಜಾತ್ರೆಯನ್ನು ನೋಡುತ್ತಿರುವ ಕಾರಣ ಅವನಿಗೆ ಹೇಳತೀರದ ಸಂಭ್ರಮ.
ಅವೆಷ್ಟು ಅಂಗಡಿಗಳೋ ಅಲ್ಲಿ.! ನೋಡಿದಷ್ಟೂ ದೂರಕ್ಕೆ ವಿವಿಧ ವಸ್ತುಗಳನ್ನು ಅಂದವಾಗಿ ಜೋಡಿಸಿಟ್ಟ ಅಂಗಡಿಗಳು.
ಪ್ರತಿ ಅಂಗಡಿಯಲ್ಲೂ ನೋಡುಗರನ್ನು ಮರುಳುಗೊಳಿಸುವಂತಹ ಬಣ್ಣಬಣ್ಣದ ಬೊಂಬೆಗಳು. ಕೆಲವು ಅಂಗಡಿಗಳಲ್ಲಿ - ನೋಡಿದೊಡನೆ ಬಾಯಲ್ಲಿ ನೀರೂರಿಸುವಂತಹ ತಿಂಡಿ ತಿನಿಸುಗಳು. ಅಲ್ಲಿಯೇ ಹತ್ತಿರದಲ್ಲಿ ಚಿತ್ರವಿಚಿತ್ರ ವೇಷಭೂಷಣಗಳನ್ನು ತೊಟ್ಟು ಆಡುವ/ ಹಾಡುವ ಮಂದಿ. ಎತ್ತರವಾದ ವಿವಿಧ ವಿನ್ಯಾಸದ ಆಟದ ಯಂತ್ರಗಳು. ಅದರಲ್ಲಿ ಕುಳಿತು ಆಡಿ ನಲಿಯುತ್ತಿರುವ ಜನರು.
ಅವನಿಗೆ ಎಲ್ಲವೂ ಕುತೂಹಲಕರವಾಗಿವೆ. ಎತ್ತ ನೋಡಿದರೂ ವಿಚಿತ್ರವೇ! ಎತ್ತ ನೋಡಿದರೂ ವಿಸ್ಮಯವೇ! ಅವನ ಕಣ್ಣುಗಳಲ್ಲಿ ಅಗಾಧ ಕುತೂಹಲವೂ, ಆನಂದವೂ, ಆ ಆಟಪಾಟಗಳಲ್ಲಿ ತಾನೂ ಪಾಲ್ಗೊಳ್ಳಬೇಕೆಂಬ ಅತೀವ ಬಯಕೆಯೂ ತುಂಬಿದೆ.

ನೋಡುವವರ ಮೈಮನಗಳನ್ನು ಬಿಡದೆ ಸೆಳೆಯುವ ಆ ಬೊಂಬೆಗಳ, ಆಟದ ಯಂತ್ರಗಳ ಆಕರ್ಷಣೆಗೆ ಒಳಗಾಗದೆ ಇರುವುದು ಹೇಗೆ! ಅಪ್ಪನನ್ನು ಕೇಳುವ ಆಸೆ - ತಾನು ಅವನ್ನೆಲ್ಲ ಒಮ್ಮೆ ಆಡಿನೋಡಬೇಕೆಂದು. ಅಪ್ಪ ಏನೆಂದಾನೋ ಎಂಬ ಹೆದರಿಕೆಯೂ ಇದೆ. ಆದರೆ ಹಾಗೆಲ್ಲ ಹೆದರಿ ಸುಮ್ಮನಿರಲಾದೀತೆ? ಅಂತೂ ಅಪ್ಪನನ್ನು ಕೇಳಿದ.
ಅಪ್ಪ 'ಮೊದಲು ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯೋಣ. ಬರುವಾಗ ನಿನ್ನ ಮನಸ್ಸು ತಣಿಯುವವರೆಗೂ ಆಡು, ಆಮೇಲೆ ನಿನಗಿಷ್ಟವಾದ ಬೊಂಬೆಗಳನ್ನೂ, ತಿಂಡಿಗಳನ್ನೂ ಕೊಡಿಸುತ್ತೇನೆ, ಆಯಿತಾ?' ಎಂದು ಪ್ರೇಮದಿಂದಲೇ ಹೇಳಿ ಇವನನ್ನು ಮತ್ತೆ ಮುಂದಕ್ಕೆ ಕರೆದುಕೊಂಡು ಹೊರಟ.
ಇವನ ಉತ್ಸಾಹವೆಲ್ಲ ಇಂಗಿಹೋಯಿತು. ಮುಖವು ಬಾಡಿತು. ಕಣ್ಣುಗಳಲ್ಲಿ ನೀರೂರಿತು. ಮೊದಲು ಗುಡಿಗೆ ಹೋಗಿ ದೇವರನ್ನು ಕಂಡು, ಆಮೇಲೆ - ಬರುವಾಗ - ಇವನ್ನೆಲ್ಲ ಆಡಲು ಅಪ್ಪ ಹೇಳುತ್ತಾನೆ. ಆದರೆ ಇವನಿಗೆ ಅಲ್ಲಿಯವರೆಗೂ ಕಾಯಲು ಸಾಧ್ಯವೇ? ಒಂದು ವೇಳೆ ಗುಡಿಯಲ್ಲಿ ದರ್ಶನ ತುಂಬಾ ತಡವಾದರೆ, ಆಗ ಇವರಿಬ್ಬರೂ ಹೊರಗೆ ಬರುವ ವೇಳೆಗೆ ಈ ಅಂಗಡಿಗಳು ಮುಚ್ಚಿರುವುದಿಲ್ಲವೇ? ಈಗಲೇ ಆಡಿದರೆ ತಪ್ಪೇನು? ಅಪ್ಪ ಸುಮ್ಮನೆ ನನಗೆ ಸಮಾಧಾನ ಹೇಳಲು ಹಾಗೆ ಹೇಳಿರಬೇಕು. ಅಪ್ಪ ನನಗೆ ಇವನ್ನೆಲ್ಲ ಆಡಲು ಬಿಡುವುದಿಲ್ಲ - ಇಂಥವೇ ಯೋಚನೆಗಳು ಇವನ ಮನದಲ್ಲಿ.
ಹಾಗೇ ತನ್ನ ಅಪ್ಪನ ಬಗೆಗೆ ಸ್ವಲ್ಪ ಕೋಪವೂ ಉಕ್ಕಿತು ಇವನಲ್ಲಿ. ಅದುವರೆಗೆ ಅಪ್ಪನೇ ಇವನ ಕೈಯನ್ನು ಹಿಡಿದುಕೊಂಡಿದ್ದ. ಅದೇನೆನಿಸಿತೋ ಇವನಿಗೆ, ಕೊಸರಿಕೊಂಡು ತನ್ನ ಕೈಯನ್ನು ಬಿಡಿಸಿಕೊಂಡು ತಾನೇ ಅಪ್ಪನ ಕೈಹಿಡಿದುಕೊಂಡ.
ಅಪ್ಪನೊಡನೆ ಯಾಂತ್ರಿಕವಾಗಿ ಹೆಜ್ಜೆಹಾಕುತ್ತಿದ್ದರೂ ಆಸೆಗಣ್ಣುಗಳಿಂದ ಅವನು ಸುತ್ತಮುತ್ತ ಇದ್ದ ಅಂಗಡಿಗಳನ್ನೂ, ಆಟದ ಯಂತ್ರಗಳನ್ನೂ ನೋಡುತ್ತಾನೆ.
ಅಯ್ಯೋ! ನಾನು ಇವನ್ನೆಲ್ಲ ಆಡಲು ಸಾಧ್ಯವೇ! ಎಂದು ಯೋಚಿಸುತ್ತ, ಭಾರವಾದ ಮನಸಿನಿಂದ -ಆಡದಿದ್ದರೇನಂತೆ, ಅವೆಲ್ಲವನ್ನು ಮತ್ತೊಮ್ಮೆ ಕಣ್ತುಂಬ ನೋಡುವ ಆಸೆಯಿಂದ- ಆ ಕಡೆಗೇ ದೀನದೃಷ್ಟಿಯಿಂದ ನೋಡುತ್ತಿದ್ದಾನೆ. ನೋಡುತ್ತ ನಡೆಯುತ್ತಿದ್ದಾನೆ.

ಅರೆ! ಅಲ್ಲಿ ದೂರದಲ್ಲಿ ಜನಗಳ ನಡುವೆಯಿಂದ ಯಾರೋ ಇವನೆಡೆಗೆ ಬರುತ್ತಿದ್ದಾರೆ. ಮುಖಕ್ಕೆ ಬಗೆಬಗೆಯ ಬಣ್ಣಗಳನ್ನು ಬಳೆದುಕೊಂಡಿದ್ದರೂ ನಗುಮೊಗದಿಂದ ಅವನನ್ನು ಕರೆಯುತ್ತಿದ್ದಾರೆ. ಅದು ಅವನಿಗೂ ಕಂಡಿತು. ಅಷ್ಟರಲ್ಲಿ ಆ ವ್ಯಕ್ತಿ ಇವರನ್ನು ಸಮೀಪಿಸಿ ಇವನೆಡೆಗೆ ಕೈಚಾಚಿದ. ಅವನಿಗೋ ಕುತೂಹಲ - ಇವರು ಯಾರೆಂದು.! ಯಾವುದೋ ಮಾಯೆಗೆ ಸಿಲುಕಿದವನಂತೆ ಅವನೂ ಆತನೆಡೆಗೆ ಕೈಚಾಚಿದ. ಅಪ್ಪನ ಕೈಹಿಡಿತ ಅದಾವಾಗಲೋ ಸಡಿಲವಾಗಿತ್ತು. ಅವನು ಆಗಂತುಕನ ಕೈಹಿಡಿದುಕೊಂಡ... ಅಪ್ಪನ ಕಡೆಗೊಮ್ಮೆ ನೋಡಬೇಕೆಂಬ ಯೋಚನೆಯೂ ಹೊಳೆಯಲಿಲ್ಲ ಅವನಿಗೆ, ಆ ಕ್ಷಣದಲ್ಲಿ.
ಆಗಂತುಕ ಆದರದಿಂದ ಅವನನ್ನು ಕರೆದ. 'ನಮ್ಮೊಡನೆ ಬರುವೆಯಾ? ನೀನೇನನ್ನು ಕೇಳಿದರೂ ಅವೆಲ್ಲವನ್ನೂ ನಾವು ನಿನಗೆ ಕೊಡುತ್ತೇವೆ. ನನ್ನೊಡನೆ ಬಾ' ಎಂದ. ಆಗ ಅವನ ಕಣ್ಣಿನ ಪರದೆಯ ಮೇಲೆ ಅದಾವ ಬೊಂಬೆಯ ಚಿತ್ರವು ಮೂಡಿತೋ! ‘ಸರಿ, ಬರುತ್ತೇನೆ’ ಎಂದ.
ಆಗಂತುಕನು ಅವನನ್ನು ತನ್ನೊಡನೆ ಕರೆದುಕೊಂಡು ಇತ್ತ ಹೊರಟ. ಅತ್ತ, ಅಪ್ಪ ಆ ಜಾತ್ರೆ-ಜಂಗುಳಿಯಲ್ಲಿ ಎಂದೋ ಮರೆಯಾಗಿಹೋಗಿದ್ದ. ಅವನಿಗೆ ಆ ಕ್ಷಣಕ್ಕೆ ಅಪ್ಪನ ನೆನಪೂ ಆಗಲಿಲ್ಲ. ಕಣ್ಣ ಮುಂದೆಲ್ಲ ಬಣ್ಣಬಣ್ಣದ ಲೋಕವಷ್ಟೇ ಕಾಣುತ್ತಿದೆ ಅವನಿಗೆ. ಇನ್ನು ಅಪ್ಪನ ನೆನಪು ಹೇಗಾದೀತು!
 ============================================================================================
ಆಗಂತುಕನು ಅವನನ್ನು ಯಾವುದೋ ಅರಿಯದ ಸ್ಥಳವೊಂದಕ್ಕೆ ಕರೆತಂದ.
ಅಲ್ಲಿ ಎಲ್ಲವೂ ವರ್ಣರಂಜಿತವಾಗಿವೆ. ವಿವಿಧ ಬಣ್ಣದ, ವಿಧವಿಧವಾದ ಸಿಹಿತಿಂಡಿಗಳು ತುಂಬಿರುವ ಅಂಗಡಿಗಳು. ವಿವಿಧಾಕಾರದ, ವಿಚಿತ್ರವಾದ ವಿನ್ಯಾಸವುಳ್ಳ ಬೊಂಬೆಗಳನ್ನು ಜೋಡಿಸಿಟ್ಟಿರುವ ಅಂಗಡಿಗಳು. ಅದೋ ಅಲ್ಲಿ, ಹೆಗ್ಗಾಲಿ! ವರ್ತುಲವಾಗಿ ತಿರುಗುವ ಕುದುರೆಗಳನ್ನುಳ್ಳ ಆಟದ ಯಂತ್ರಗಳು.! ಚಿತ್ರವಿಚಿತ್ರ ವೇಷಗಳನ್ನು ತೊಟ್ಟು ಮಕ್ಕಳೊಡನೆ ಆಡಿ ನಗಿಸುವ ವಿದೂಷಕ ವೇಷದವರು.
ಅಲ್ಲಿ ಬಣ್ಣಬಣ್ಣದ ಬೆಲೆಬಾಳುವ ಬಟ್ಟೆಗಳನ್ನು ತೊಟ್ಟ, ತನ್ನಂತಹ ನೂರಾರು ಮಕ್ಕಳು ಆಡುತ್ತಿದ್ದಾರೆ. ಅವರೆಲ್ಲರ ಮೊಗವೂ ಸಂತೋಷದಿಂದ ತುಂಬಿದೆ. ಅವನಿಗೂ ಅವನ್ನೆಲ್ಲ ಕಂಡು ಎದೆಬಿರಿಯುವಷ್ಟು ಸಂತೋಷವಾಯಿತು.
ಅವನು ಅವನ್ನೆಲ್ಲ ನೋಡುತ್ತ ನಿಂತಿರುವಾಗಲೇ ಅಲ್ಲಿದ್ದ ಮಕ್ಕಳೆಲ್ಲ ಅವನ ಬಳಿ ಬಂದು ಅವನನ್ನೂ ತಮ್ಮೊಡನೆ ಆಟಕ್ಕೆ ಸೇರಿಸಿಕೊಂಡರು.
ಇವನು ಅವರೊಡನೆ ಬೆರೆತು ಮನಸಾರೆ ಎಲ್ಲ ಆಟವನ್ನೂ ಆಡಿದ. ಹೆಗ್ಗಾಲಿಯಲ್ಲಿ ಕುಳಿತು ಆನಂದಿಸಿದ. ತಿರುಗುವ ಕುದುರೆಯ ಸವಾರಿಯನ್ನೂ ಮಾಡಿದ
ವಿದೂಷಕರೊಡನೆ - ಅವರ ಹಾಸ್ಯಚೇಷ್ಟೆಗಳನ್ನು ಕಂಡು - ನಕ್ಕು ನಗಿಸಿದ. ನಂತರ, ಸವಿಸವಿಯಾದ ತಿಂಡಿಗಳನ್ನು ತಿಂದು, ಬೇಕೆನಿಸಿದ ಬೊಂಬೆಗಳನ್ನಾಯ್ದುಕೊಂಡು ಅವುಗಳೊಡನೆ ಆಟವಾಡಿದ..
ಆಡಿಪಾಡಿ ದಣಿವಾಯಿತೋ ಏನೋ, ಅವನಿಗೆ ನಿದಿರೆಯ ಜೊಂಪು ಹತ್ತಿತು. ಕುಳಿತಿದ್ದ ಕಡೆಯಲ್ಲೇ ಸಲ್ಪ ಜಾಗ ಮಾಡಿಕೊಂಡು ಹಾಗೇ ನಿದ್ರೆಗೆ ಜಾರಿದ.
 ============================================================================================
ಸಂಜೆಯಾಯಿತು. ಇವನಿಗೆ ದಿಢೀರನೆ ಎಚ್ಚರವಾಯಿತು.
ಎದ್ದು ಸುತ್ತಲೂ ಒಮ್ಮೆ ನೋಡಿದ. ಅವನಿದ್ದ ಜಾಗ ನಿರ್ಜನವಾಗಿದೆ. ಅಲ್ಲಲ್ಲಿ ಖಾಲಿ ಅಂಗಡಿಗಳು, ಕೆಲವು ಕಡೆ - ಮುರಿದು - ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನಿರ್ಜೀವ ಬೊಂಬೆಗಳು.
ಇನ್ನು ಮಿಕ್ಕ ಕಡೆಯೆಲ್ಲ ಖಾಲಿ ಜಾಗ. ಆದರೂ ಹಿಂದೆ ಅಲ್ಲಿ ಏನೋ ಇತ್ತು ಎಂಬುದಕ್ಕೆ ಕೆಲವು ಕುರುಹುಗಳು.
ಒಂದು ಕ್ಷಣಕ್ಕೆ ತಾನು ಯಾರು, ಇಲ್ಲಿಗೇಕೆ ಬಂದೆ, ಇದು ಯಾವ ಸ್ಥಳ - ಒಂದೂ ಅವನಿಗೆ ಹೊಳೆಯಲಿಲ್ಲ. ಇನ್ನೂ ನಿದ್ರೆಯ ಮಂಪರಿನಲ್ಲಿದ್ದನೇನೋ! ಎದ್ದೊಮ್ಮೆ ಕಣ್ಣುಜ್ಜಿಕೊಂಡು, ತಲೆಕೊಡವಿಕೊಂಡ. ಹಿಂದೆ ಏನು ನಡೆಯಿತೋ ನೆನಪಿಗೆ ತಂದುಕೊಳ್ಳಲು ಪ್ರಯತ್ನಿಸಿದ.
ತಾನು ತನ್ನ ತಂದೆಯೊಡನೆ ಜಾತ್ರೆಗೆಂದು ಬಂದದ್ದು, ಇಲ್ಲಿನ ಬಣ್ಣಬಣ್ಣದ ಬೊಂಬೆಗಳ ಬಿನ್ನಾಣಕ್ಕೆ ತಾನು ಮರುಳಾಗಿದ್ದು, ತಂದೆಯು ದೇವಸ್ಥಾನಕ್ಕೆ ಹೋಗಿ ಬರುವಾಗ ಆಟವಾಡಬಹುದು ಎಂದು ಹೇಳಿದ್ದು, ಯಾರೋ ಇವನನ್ನು ಕರೆದದ್ದು.. .ತಾನು ಇಲ್ಲಿಗೆ ಬಂದು ಆಡಿ ನಲಿದದ್ದು - ಎಲ್ಲವೂ ನೆನಪಾಯಿತು. ಆ ಎಲ್ಲ ದೃಶ್ಯಗಳೂ ಸರಣಿಯಾಗಿ ಅವನ ಕಣ್ಣೆದುರು ಮೂಡಿತು.

ಆದರೆ ಆ ಜನರೆಲ್ಲ ಎಲ್ಲಿ? ತನ್ನನ್ನು ಇಲ್ಲಿಗೆ ಕರೆದುತಂದವನೆಲ್ಲಿ? ತಾನು ಎಲ್ಲಿದ್ದೇನೆ? ಅಪ್ಪ! ಅಯ್ಯೋ, ಅಪ್ಪನೆಲ್ಲಿ....!!
ಎಂತಹ ತಪ್ಪು ಕೆಲಸ ಮಾಡಿಬಿಟ್ಟೆ ನಾನು.! ಕೈಹಿಡಿದು ನನ್ನನ್ನು ಕರೆತಂದ ಅಪ್ಪನನ್ನೇ ಮರೆತು ಯಾರೋ ತಿಳಿಯದವನ ಜೊತೆ ಹೊರಟುಬಂದು ಇಂತಹ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡೆನಲ್ಲ.
ಅಯ್ಯೋ, ಅಪ್ಪಾ! ಎಲ್ಲಿರುವಿ? ನಾನು ತಪ್ಪು ಮಾಡಿದೆ, ಅಪ್ಪಾ.. ನಿನ್ನ ಮಾತನ್ನು ಕೇಳಿ ನಿನ್ನೊಡನೆ ಬರಬೇಕಿತ್ತು. ಯಾರೊಡನೆಯೋ ಬಂದು ಹೀಗೆ ತಿಳಿಯದ ಪ್ರದೇಶದಲ್ಲಿ ಒಬ್ಬಂಟಿಯಾದೆ ನಾನು. ಅಪ್ಪಾ, ಎಲ್ಲಿರುವಿ? ನನ್ನನ್ನು ಈ ಒಂದು ಸಾರಿ ಕ್ಷಮಿಸಿಬಿಡು ಅಪ್ಪಾ, ಇನ್ನೆಂದೂ ಹೀಗೆ ಮಾಡುವುದಿಲ್ಲ ನಾನು. ಬೇಗ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು... ಬೇಗ ನನ್ನ ಬಳಿಗೆ ಬಾ ಅಪ್ಪಾ...
ಅವನ ಎದೆಯು ಒಂದೇ ಸಮನೆ ಹೀಗೆ ದುಃಖದಿಂದ ಕೂಗುತ್ತಿದೆ. ಮೆಲ್ಲಗೆ ಆವರಿಸುತ್ತಿರುವ ಕತ್ತಲು ಅವನ ಭೀತಿಯನ್ನು, ದುಃಖವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಅವನು ತಾನಿದ್ದ ಜಾಗದಿಂದ ಎದ್ದು ಹುಚ್ಚನಂತೆ ಹುಡುಕಾಡಿದ. ಕುರುಡನಂತೆ ಎಡವೆಡವಿ ಬಿದ್ದ. ಎದೆಯೆಲ್ಲ ಬಿರಿಯುವಂತೆ ಜೋರಾಗಿ ಕೂಗಿ ಅಳಲು ಶುರು ಮಾಡಿದ... ಇನ್ನೆಂದೂ ತನ್ನ ಅಪ್ಪನನ್ನು ಕಾಣಲಾರೇನೇನೋ ಎಂಬ ಭೀತಿ ಅವನಿಗೆ... ಇಲ್ಲ, ಅಪ್ಪ ಎಲ್ಲೇ ಇದ್ದರೂ ತನ್ನನ್ನು ಹುಡುಕಿ ಬರುವನೆಂದೂ, ಇಲ್ಲಿಂದ ತನ್ನನ್ನು ಕರೆದೊಯ್ವನೆಂದೂ ಕ್ಷೀಣವಾದ ಆಸೆ... ಹುಡುಕುತ್ತ ಹೊರಟ..
ಬೆಳಿಗ್ಗೆ ಜನರಿಂದ ಕಿಕ್ಕಿರಿದಿದ್ದ ಪ್ರದೇಶವೆಲ್ಲ ಈಗ ಖಾಲಿ ಖಾಲಿ. ಬೆಳಿಗ್ಗೆ ತನ್ನನ್ನು ಮೈಮರೆಸಿ ಮರುಳುಗೊಳಿಸಿದ್ದ ಜಾಗವೇ ಈಗ ತನ್ನಲ್ಲಿ ಅಪಾರವಾದ ಭೀತಿ ಹುಟ್ಟಿಸುತ್ತಿದೆ.
ಅಪ್ಪನೆಲ್ಲಿ? ಅಪ್ಪನೆಲ್ಲಿ? ಅವನ ಮನಸು ಕಂಗಳು ತೀಕ್ಷ್ಣವಾಗಿ ಹುಡುಕುತ್ತಿವೆ.
ಕತ್ತಲು ಈಗ ದಟ್ಟವಾಯಿತು. ಅಲ್ಲೊಂದು ಇಲ್ಲೊಂದು ಬೀದಿದೀಪಗಳ ಬೆಳಕಷ್ಟೇ. ಅವು ಕೂಡ ಮಂದವಾಗಿವೆ. ಇವನಲ್ಲಿ ಭೀತಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಅಪ್ಪನನ್ನು ನೋಡಲೇಬೇಕೆಂಬ ಹಂಬಲ ಕೂಡ ಹೆಚ್ಚುತ್ತಿದೆ.

ಹಾಗೆ ಹುಡುಕುತ್ತ ಅದೆಷ್ಟು ದೂರ ಬಂದಿದ್ದನೋ! ನಡೆದೂ ನಡೆದೂ ಸುಸ್ತಾಗಿತ್ತು.. ಕೂಗಿ ಕೂಗಿ ಇದ್ದ ಶಕ್ತಿಯೆಲ್ಲ ಉಡುಗಿಹೋಗಿತ್ತು... ಕಣ್ಣಿಗೆ ಎಲ್ಲವೂ ಮಂಜುಮಂಜಾಯಿತು... ಅವನು ಇನ್ನೇನು ಕುಸಿದು ಬೀಳುವವನಿದ್ದ.
ಆಗ, ದೂರದಲ್ಲೊಂದು ಸಣ್ಣ ಬೆಳಕಿನ ಕಿಡಿ... ಕ್ಷಣಕ್ಷಣಕ್ಕೂ ಅದರ ಗಾತ್ರ ದೊಡ್ಡದಾಗುತ್ತಿದೆ. ಆ ಬೆಳಕು ತನ್ನೆಡೆಗೇ ಬರುತ್ತಿದೆ. ಇವನು ಆಶ್ಚರ್ಯದಿಂದ ನೋಡಿದ.
ಆಗ ಅವನ ಸುತ್ತಲಿನ ದೃಶ್ಯ ಬದಲಾಯಿತು. ಎಲ್ಲೆಡೆ ಬೆಳಕು ತುಂಬಿತು. ಖಾಲಿಯಾಗಿದ್ದ ಅಂಗಡಿಗಳೆಲ್ಲ ಮತ್ತೆ ಬೊಂಬೆಗಳಿಂದ ತುಂಬಿತು. ಜನ ನೆರೆದರು. ಎಲ್ಲವ ಬೆಳಿಗ್ಗೆ ಹೇಗಿತ್ತೋ ಹಾಗೆಯೇ ಆಯಿತು. ಆದರೆ ಈಗ ಅವನಿಗೆ ಅದಾವುದರ ಬಗೆಗೂ ಗಮನವಿಲ್ಲ. ಅವನು ತನ್ನೆಡೆಗೆ ಬರುತ್ತಿದ್ದ ಬೆಳಕಿನ ರೂಪವನ್ನೇ ರೆಪ್ಪೆ ಬಡಿಯದೆ ನೋಡುತ್ತಿದ್ದಾನೆ.
ಬೆಳಕು ಅವನನ್ನು ಸಮೀಪಿಸಿತು. ಅಲ್ಲಿದ್ದುದು ಬೆಳಕಲ್ಲ. ಬಂದಿದ್ದು ತನ್ನ ಅಪ್ಪ. ಆ ಬೆಳಕು ಅವನ ಸುತ್ತ ಬೆಳಗಿರುವ ಪ್ರಭೆ. ಅವನೊಮ್ಮೆ ನೋಡಿದ. ಅಪ್ಪ ಬದಲಾಗಿದ್ದಾನೆ.! ಮೊದಲು ಇದ್ದುದಕ್ಕಿಂತ ಸೌಮ್ಯವಾದ ಮುಖ. ಆ ಮುಖದಲ್ಲಿ ತಿಳಿಬೆಳಕಿನಂತಹ ಮಂದಹಾಸ. 'ನಿನ್ನ ತಪ್ಪೆಲ್ಲವನ್ನು ನಾನು ಕ್ಷಮಿಸಿದ್ದೇನೆ ಮಗೂ' ಎಂಬಂತಹ ಶಾಂತಭಾವ.
ಇವನಿಗೆ ಹೋದ ಪ್ರಾಣ ಬಂದಂತಾಯಿತು. ಅಳಿದುಳಿದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿಕೊಂಡು ಅಪ್ಪನ ಬಳಿಗೋಡಿ ಅವನನ್ನು ತಬ್ಬಿಕೊಂಡ. 'ಅಪ್ಪ, ತಪ್ಪಾಯಿತು ಅಪ್ಪ, ಇನ್ನೆಂದೂ ನಿನ್ನ ಮರೆತು, ನಿನ್ನ ಬಿಟ್ಟು ಹೋಗುವುದಿಲ್ಲ ಅಪ್ಪಾ....' ಎಂದು ಗೋಳಿಡುತ್ತಾ ಅಪ್ಪನ ಪಾದಕ್ಕೆರಗಿದ.
ಅಪ್ಪ ಅವನನ್ನು ಎತ್ತಿ ತಬ್ಬಿಕೊಂಡು ಹಣೆಯನ್ನೊಮ್ಮೆಮ್ಮೆ ಮುದ್ದಿಸಿದ. 'ಆಡುವುದಿಲ್ಲವೆ ಮಗೂ?' ಎಂದು ಕೇಳಿದ. ಕಣ್ಣೀರೇ ಇವನ ಉತ್ತರವಾಯಿತು. 

Saturday, 1 November 2014

ಕನಕದಾಸರ "ರಾಮಧಾನ್ಯ ಚರಿತ್ರೆ" - ೩

ಹರುಷ ಹೆಚ್ಚಿದ ಮನದಿ ತಮ್ಮನ
ಕರೆದು ಶತ್ರುಘ್ನನನಯೋಧ್ಯಾ
ಪುರಿಗೆ ಕಳುಹಿದ - "ಜನನಿಯರಿಗೀ ವಾರ್ತೆಯೆಲ್ಲವನು
ಅರುಹಿ ಬಾ"ಯೆನಲಗ್ರಜನ ಸಿರಿ
ಚರಣಕಭಿಮುಖನಾಗಿ ವಂದಿಸಿ
ಹರುಷ ಮಿಗೆ ಹೊರವಂಟು ಹೊಕ್ಕನಯೋಧ್ಯಾಪುರವರವ       -೮೦

ಹನುಮಂತನ ಮಾತನ್ನು ಕೇಳಿದ ಭರತನು ಅತಿ ಸಂತಸಗೊಂಡು ಶತ್ರುಘ್ನನನ್ನು ಕರೆದು ಈಗಲೇ ಅಯೋಧ್ಯೆಗೆ ಹೋಗಿ ತಾಯಿಯರಿಗೆ ರಾಮನ ಆಗಮನದ ವಿಷಯವನ್ನು ತಿಳಿಸಿ ಬಾ ಎಂದು ಹೇಳುತ್ತಾನೆ. ಅಂತೆಯೇ ಆಗಲೆಂದು ಶತ್ರುಘ್ನನು ಭರತನ ಕಾಲುಗಳಿಗೆ ನಮಸ್ಕರಿಸಿ ಅಯೋಧ್ಯೆಗೆ ಹೊರಡುತ್ತಾನೆ.

ಜನನಿಯರು ಮೂವರಿಗೆ ನಮಿಸಿದ
ತನುಜನನು ತಕ್ಕೈಸಿ ಪೇಳಿದ
ನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆ
ಎನಲು ಹರುಷಾನಂದಮಯರಸ
ಹೊನಲಿನೊಳಗೋಲಾಡಿದರು ಮುಖ
ವನಜವರಳಿತು ಜನನಿಯರಿಗವನೀಶ ಕೇಳೆಂದ                  -೮೨

ಶತ್ರುಘ್ನನನು ಅಯೋಧ್ಯೆಯನ್ನು ತಲುಪಿ, ಕೌಸಲ್ಯೆ-ಸುಮಿತ್ರೆ-ಕೈಕೆಯರಿಗೆ ನಮಿಸಿ ಶ್ರೀರಾಮನು ಭಾರದ್ವಾಜ ಋಷಿಯ ಆಶ್ರಮದಲ್ಲಿರುವನೆಂದೂ, ಶೀಘ್ರದಲ್ಲೇ ಸೀತಾರಾಮ ಲಕ್ಷ್ಮಣರೆಲ್ಲರೂ ಅಯೋಧ್ಯೆಗೆ ಬರಲಿರುವರೆಂದೂ ತಿಳಿಸಿದನು. ಈ ಶುಭ ಸಮಾಚಾರವನ್ನು ಕೇಳಿದ ಆ ಮೂರೂ ಜನರೂ ಸಂತಸದ ಸಾಗರದಲ್ಲಿ ತೇಲಾಡಿದರು.

ಕರೆಸಿದನು ಶತ್ರುಘ್ನ ಮಂತ್ರೀ
ಶ್ವರ ಸುಮಂತನ ಕೂಡೆ ನುಡಿದನು
ತರಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು
ಪುರವ ಶೃಂಗರಿಸಲ್ಲಿ ಕರಿ ರಥ
ತುರಗ ಮೇಳೈಸಿರಲಿ ಮೋದದ
ತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ          -೮೩

ಎಂದು ಮಂತ್ರಿಯೊಳರುಹಿ ತಾ ನಿಜ
ಮಂದಿರಕೆ ನಡೆತಂದು ಪಯಣವ
ನಂದು ಮಾಡಿದ ಜನನಿ ಕೌಸಲದೇವಿ ಮೊದಲಾದ
ಇಂದುವದನೆಯರೇರುತಿರ್ದರು
ಅಂದಣವ ಸೊಸೆಯರು ವರೂಥದಿ
ಹಿಂದುಮುಂದಿಟ್ಟಣಿಸಿ ನಡೆದುದು ಸತಿಯರೊಗ್ಗಿನಲಿ             -೮೪

ಆ ನಂತರ ಶತ್ರುಘ್ನನನು ಮಂತ್ರಿ ಸುಮಂತನನ್ನು ಕರೆಸಿ, ರಾಮನು ಅಯೋಧ್ಯೆಗೆ ಬರುತ್ತಿರುವುದನ್ನು ತಿಳಿಸಿ, ಅವರೆಲ್ಲ ಬರುವ ವೇಳೆಗೆ ಅಯೋಧ್ಯೆಯು ಸರ್ವವಿಧದಲ್ಲಿಯೂ ಸಿಂಗಾರಗೊಂಡಿರಬೇಕೆಂದು ತಿಳಿಸಿದನು.
ಹೀಗೆ, ಮಂತ್ರಿ ಸುಮಂತನೊಡನೆ ಮುಂದೆ ನಡೆಯಬೇಕಾದ ಕಾರ್ಯಗಳೆಲ್ಲದರ ಬಗ್ಗೆ ಚರ್ಚಿಸಿದ ನಂತರ ಶತ್ರುಘ್ನನು ತನ್ನ ಮಂದಿರಕ್ಕೆ ತೆರಳಿದನು. ರಾಮನನ್ನು ಕಾಣುವ ತವಕದಿಂದ ಎಲ್ಲರೂ ಅವನನ್ನು ಬರಮಾಡಿಕೊಳ್ಳಲು ಹೊರಟರು. ಕೌಸಲ್ಯೆ ಮುಂತಾದವರೆಲ್ಲ ಅಂದಣವನ್ನೇರಿದರು(ಪಲ್ಲಕ್ಕಿ). ಸೊಸೆಯಂದಿರು ರಥದಲ್ಲಿ ಕುಳಿತರು. ಇವರಷ್ಟೇ ಅಲ್ಲದೇ ಹಲವಾರು ಸಾಮಂತ ಅರಸರೂ, ಪುರಪ್ರಮುಖರೂ ರಾಮನನ್ನು ಎದಿರುಗೊಳ್ಳಲು ಹೊರಟರು.

ವಿವಿಧ ವಾದ್ಯ ಧ್ವನಿಯ ಕಹಳಾ
ರವದ ಸನ್ನೆಯೊಳೈದಿಬಹ ನೃಪ
ನಿವಹದಲಿ ಚತುರಂಗ ಸೇನೆಯ ಪದದ ಕೆಂಧೂಳಿ
ಭುವನವಾಕಾಶವನು ಮುಸುಕಿದ
ಡವನಿ ನೆಗ್ಗಲು ಬಲವು ಭಾ
ರವಣೆಯಲಿ ಹೊರವಂಟನಾ ಶತ್ರುಘ್ನನೊಲವಿನಲಿ               -೮೬

ವಿವಿಧ ವಾದ್ಯಗಳ, ಕಹಳೆಗಳ ಧ್ವನಿಯು ಮೊಳಗುತ್ತಿರಲು, ಚತುರಂಗ ಸೇನೆಯ ನಡಿಗೆಯಿಂದೆದ್ದ ಕೆಂಧೂಳು ಆಕಾಶವೆಲ್ಲವನ್ನೂ ತುಂಬಿತೋ.! ಅವರೆಲ್ಲರ ಭಾರಕ್ಕೆ ಭೂಮಿಯೇ ಕುಗ್ಗಿತೇನೋ ಎನ್ನುವಂತೆ ಭಾಸವಾಗುತ್ತಿರಲು,  ಸಮಸ್ತ ಪರಿವಾರದವರೊಡನೆ ಶತ್ರುಘ್ನನು ಹೊರಟನು.

ಪುರವ ಕಳೆದರು ಮುಂದೆ ಯಮುನಾ
ವರನದಿಯನುತ್ತರಿಸೆ ಪಯಣದಿ
ಮೆರೆವ ನಂದೀಗ್ರಾಮವನು ಕಂಡಲ್ಲಿಗೈತಂದು
ಭರತನೊಡಗೊಂಡಲ್ಲಿ ಹನುಮನ
ಕರುಣದಲಿ ಸತ್ಕರಿಸಿ ಮುಂದಕೆ
ತೆರಳಿದರು ಕೌಸಲ್ಯರಾಮನ ಕಾಣ್ಬ ತವಕದಲಿ                   -೮೮
---------------------------------------------------

ಇತ್ತ ಕೇಳೈ ಪಾಂಡವಾಗ್ರಜ
ಸತ್ವ ಗುಣನಿಧಿ ರಾಮಚಂದ್ರನು
ವತ್ತರಿಸಿಬರೆ ಕಂಡು ನಲಿಯುತ ಜಾನಕಿಯ ಕರೆದು
ಇತ್ತ ನೋಡೆಲೆ ದೇವಿ ಭರತನ
ಶತ್ರುಹರ ಶತ್ರುಘ್ನರಿವರು ಸ
ಮಸ್ತ ಬಲಸಹಿತಿದಿರು ಬರುತಿದೆ ನೋಡು ನೀನೆಂದ             -೮೯

ಎಂದು ತೋರಿಸಿ ಮನದ ಹರುಷದಿ
ಮಿಂದು ಲಕ್ಷ್ಮಣನೊಡನೆ ಸತಿಸಹಿ
ತಂದು ರಥವೇರಿದನು ರಾಮನೃಪಾಲನಾಕ್ಷಣಕೆ
ಮುಂದೆ ನೆರೆದುದು ಬನದೊಳಗೆ ಮುದ
ದಿಂದ ಪಾಠಕರುಗ್ಘಡಿಸೆ ನಲ
ವಿಂದ ಮುನಿಕುಲದೊಡನೆ ತೆರಳಿದನಾ ಮಹೀಪಾಲ            -೯೦

ಶಾಂಡಿಲ್ಯ ಮುನಿಯು ಧರ್ಮರಾಯನಿಗೆ ಮುಂದೆ ನಡೆದ ಕಥೆಯನ್ನು ಹೇಳಿದರು - "ಇತ್ತ, ರಾಮನು ಭರತ-ಶತ್ರುಘ್ನರು ಸಮಸ್ತ ಪರಿವಾರದೊಡನೆ ಬರುತ್ತಿರುವುದನ್ನು ದೂರದಿಂದಲೇ ಕಂಡು, ಸೀತೆಯನ್ನು ಕರೆದು ಅವಳಿಗೂ ತೋರಿಸಿದನು"
ಆ ನಂತರ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ರಥವನ್ನೇರಿ ಭರತ-ಶತ್ರುಘ್ನರು ಬರುತ್ತಿದ್ದ ಕಡೆಗೆ ಹೊರಟನು. ವಿಭೀಷಣನ ದಾನವ ಸೇನೆಯೂ, ಸುಗ್ರೀವಾದಿ ವಾನರ ಸೇನೆಯೂ, ಹಾಗೂ ಅಲ್ಲಿದ್ದ ಮುನಿಗಳೂ ರಾಮನೊಂದಿಗೇ ಹೊರಟರು.
ಮುಂದೆ ರಾಮನ ಪರಿವಾರವೂ ಭರತನ ಪರಿವಾರವೂ ಎದುರಾದವು.

ಇಳಿದು ರಥವನು ನೃಪತಿ ಸೀತಾ
ಲಲನೆ ಲಕ್ಷ್ಮಣಸಹಿತ ತಾ ಕೌ
ಸಲೆ ಸುಮಿತ್ರಾದೇವಿ ಕೈಕೆಯ ಚರಣಕಭಿನಮಿಸಿ
ತೊಲಗಿದಸು ಬಂದಂತೆ ತನಯರ
ಚೆಲುವನೀಕ್ಷಿಸಿ ಜನನಿಯರು ಕಂ
ಗಳಲಿ ಜಲತುಂಬಿ ನೆರೆ ಬಿಗಿಯಪ್ಪಿದರು ನಂದನರ               -೯೩

ವಿಮಲಮತಿ ಶತೃಘ್ನ ಭರತರು
ನಮಿಸಿದರು ರಘುಪತಿಗೆ ಲಕ್ಷ್ಮಣ
ನಮಿಸಿದನು ಭರತಂಗೆ ಭರತಾನುಜನ ಸಂತೈಸೆ
ಸಮತೆಯಲಿ ಸುಗ್ರೀವ ಜಾಂಬವ
ರಮಿತ ಬಲವನು ಜನನಿಯ ಚರಣ
ಕಮಲವನು ಕಾಣಿಸಿದ ಸುಕರದೊಳೂರ್ಮಿಳಾರಮಣ           -೯೪

ಸೀತಾ ರಾಮ ಲಕ್ಷ್ಮಣರು ರಥದಿಂದಿಳಿದು ಕೌಸಲ್ಯೆ-ಸುಮಿತ್ರೆ-ಕೈಕೆಯರ ಕಾಲಿಗೆ ನಮಸ್ಕರಿಸಿದರು. ಅವರಾದರೋ ಹೋಗಿದ್ದ ಪ್ರಾಣವು ಮರಳಿ ಬಂದಿತೆಂಬ ಸಂತಸದಲ್ಲಿ ಮಕ್ಕಳನ್ನು ಹರಸಿ ತಬ್ಬಿದರು. ಭರತ-ಶತೃಘ್ನರು ರಾಮನಿಗೆ ನಮಿಸಿದರು. ಲಕ್ಷ್ಮಣನು ಭರತನಿಗೆ ನಮಿಸಿ ಶತೃಘ್ನನನ್ನು ಸಂತೈಸಿದನು. ಸುಗ್ರೀವ-ಜಾಂಬವಂತ ಮುಂತಾದವರೆಲ್ಲರೂ ರಾಜಮಾತೆಯರಿಗೆ ನಮಿಸಿದರು.
ದಶರಥನ ಮಡದಿಯರು ಸೀತೆಯನ್ನು ಕರೆದು ಪ್ರೀತಿಯಿಂದ ತಕ್ಕೈಸಿ "..ಬನದೊಳಗೆ ಬಲುನೊಂದಲಾ ಮಾನಿನಿಯೆ ಬಾರೌ ತಾಯೆ ಬಾರೆಂದೆನುತ ಕಂಬನಿದೊಡೆದು ಲಾಲಿಸಿದರು ಮಹಾಸತಿಯ."
ಭರತನು ಸೀತಾರಾಮ ಲಕ್ಷ್ಮಣಾದಿಯಾಗಿ ಎಲ್ಲರಿಗೂ ಮಣಿಭೂಷಣಾದಿಗಳನ್ನೂ, ರೇಷಿಮೆಯ ವಸ್ತ್ರಗಳನ್ನೂ ಕೊಟ್ಟು ಉಪಚರಿಸಿದನು. ವಿಭೀಷಣಾದಿಗಳಿಗೆ ಯುಕ್ತವಾದ ಕಾಣಿಕೆಗಳನ್ನು ಕೊಟ್ಟು ಸತ್ಕರಿಸಿದನು.

ಅರಸ ಕೇಳಲ್ಲಿಂದಯೋಧ್ಯಾ
ಪುರಿಗೆ ಬಂದನು ರಾಮನೃಪ ತ
ನ್ನರಸಿ, ಲಕ್ಷ್ಮಣ, ಭರತ-ಶತೃಘ್ನಾದಿ ಬಾಂಧವರ
ಪರುಠವಣೆಯಲಿ ರಾಜ ತೇಜದಿ
ಸುರರು ದುಂದುಭಿ ಮೊಳಗೆ ನಿಜಮಂ
ದಿರದ ಬಾಗಿಲ ಬಳಿಯ ನಿಂದನು ಮುನಿಪರೊಗ್ಗಿನಲಿ            -೯೯

"..ರಥದಿಂದಿಳಿದು ರಘುನಂದನನು ಹೊಕ್ಕನು ರಾಜಭವನವ ತನತನಗೆ ಪುರಜನರು ಕಾಣಿಕೆಗೊಟ್ಟು ನಮಿಸಿದರು".
ಅಲ್ಲಿಂದ ರಾಮನು ಎಲ್ಲರೊಡಗೂಡಿ ಅಯೋಧ್ಯೆಯನ್ನು ತಲುಪಿ, ಪುರಜನರು ಕೊಟ್ಟ ಕಾಣಿಕೆಗಳನ್ನೆಲ್ಲ ಸ್ವೀಕರಿಸಿ ಅರಮನೆಗೆ ಬಂದನು. ಮಂಗಲಸ್ನಾನಾದಿಗಳನ್ನು ಮುಗಿಸಿ ರಾಮನು ತನ್ನ ತಮ್ಮಂದಿರೊಡಗೂಡಿ ಓಲಗಕ್ಕೆ ನಡೆತಂದನು

ಆಗ ಮಂತ್ರಿ ಸುಮಂತ್ರನು ಅಲ್ಲಿದ್ದ ಕುಲಗುರುವಾದ ವಸಿಷ್ಠರಿಗೆ ನಮಿಸಿ "ರಾಮನೃಪಾಲನಿಗೆ ರಾಜಪಟ್ಟವನ್ನು ಕಟ್ಟಬಹುದಲ್ಲವೆ?" ಎಂದು ಕೇಳಲು, ವಸಿಷ್ಠರು ಅದಕ್ಕೆ ತಮ್ಮ ಸಮ್ಮತಿ ಸೂಚಿಸಿದರು. ಸುಮಂತ್ರನು ಸಂತಸಗೊಂಡು ರಾಮ ಪಟ್ಟಾಭಿಷೇಕಕ್ಕೆ ಮಾಡಬೇಕಾದ ಸಿದ್ಧತೆಗಳಲ್ಲಿ ತೊಡಗಿದನು. ಸಾಮಂತ ಅರಸುಗಳನ್ನೆಲ್ಲ ಆಮಂತ್ರಿಸಿ ಎಲ್ಲ ದಿಕ್ಕುಗಳ ಕಡೆಗೂ ಓಲೆಗಳನ್ನು ಬರೆಸಿ ಕಳುಹಿಸಿದನು.

ರಾಮ ಪಟ್ಟಾಭಿಷೇಕದ ವಿಷಯವನ್ನು ತಿಳಿದು ಅಯೋಧ್ಯೆಯು ನವವಧುವಿನಂತೆ ಸಿಂಗಾರಗೊಂಡಿತು. ಎಲ್ಲೆಡೆಯೂ ಸಂಭ್ರಮವೋ ಸಂಭ್ರಮ!
ವಿವಿಧ ದೇಶಗಳಿಂದ ಜನರು, ಪಂಡಿತರು, ಕವಿಗಳು, ಗಾಯಕ, ನರ್ತಕರು, ದೈವಜ್ಞರು ಅಯೋಧ್ಯೆಗೆ ಬಂದು ಸೇರಿದರು. ಸನಕ ಸನಂದಾದಿ ತಪಸ್ವಿಗಳು ಅಯೋಧ್ಯೆಗೆ ದಯಮಾಡಿಸಿದರು. ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ ವಾಮದೇವಾದಿ ಮಹಾಮುನಿಗಳೂ ಬಂದರು.
ಚೋಳ, ಗುರ್ಜರ, ದ್ರವಿಡ, ವಂಗ, ಸಿಂಧು, ನೇಪಾಳ, ವಿದರ್ಭ, ಮಲೆಯಾಳ, ಆಂಧ್ರ, ಮರಾಟ, ಕರ್ಣಾಟ, ಕುಂತಳ - ಹೀಗೆ ಹಲವಾರು ದೇಶದ ಅರಸರು ಅಯೋಧ್ಯೆಗೆ ಆಗಮಿಸಿದರು.
ಹೀಗೆ ಎಲ್ಲ ದಿಕ್ಕುಗಳಿಂದಲೂ ಮುಖ್ಯಜನರೆಲ್ಲರೂ ಬಂದು ಕೂಡಿದರು. ಪಟ್ಟಾಭಿಷೇಕ ಮಹೋತ್ಸವದ ದಿನವೂ ಬಂತು. ಸಭಾಸದರೆಲ್ಲರೂ ತವಕದಿಂದ ನೋಡುತ್ತಿರಲಾಗಿ -

ಭರತ ಭಾರಿಯ ಸತ್ತಿಗೆಯ ಚಾ
ಮರವ ಲಕ್ಷ್ಮಣ ದೇವ ಚಿಮ್ಮಲು
ಧರಿಸಿದನು ಶತೃಘ್ನ ಗಿಂಡಿಯ ಹೆಗಲ ಹಡಪದಲಿ
ಮರುತಸುತ ಸೇವಿಸಲು ಚರಣದಿ
ಗುರು ವಸಿಷ್ಠನ ಸಮ್ಮುಖದಿ ರಘು
ವರನು ನಿಜಸತಿ ಸಹಿತ ಸಿಂಹಾಸನದಿ ರಂಜಿಸಿದ                -೧೧೪

ನಂತರದಲ್ಲಿ - "ಅಲ್ಲಿ ನೆರೆದ ಮುನೀಶ್ವರರೆಲ್ಲರು ಬಲ್ಲ ಭೂಸುರನಿವಹ ಮಂತ್ರಿಗಳಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆ......"

ಭರತನು ಭಾರಿಯಾದ ಒಂದು ಛತ್ರಿಯನ್ನು ಹಿಡಿದಿರಲು, ಲಾಕ್ಷ್ಮಣನು ಚಾಮರವನ್ನು ಬೀಸುತ್ತಿರಲು, ಶತೃಘ್ನನು ಗಿಂಡಿಯನ್ನು ಧರಿಸಿರಲು, ಹನುಮಂತನು ಸೇವಿಸುತ್ತಿರಲಾಗಿ ಸೀತಾದೇವಿಯ ಸಹಿತ ರಾಮನು ಸಿಂಹಾಸನದಲ್ಲಿ ಕುಳಿತು ಶೋಭಿಸಿದ.
ಮುಂದೆ ಅಲ್ಲಿ ಸೇರಿದ್ದ ಮುನೀಶ್ವರರೆಲ್ಲರ ಸಮಕ್ಷಮದಿ ಸುಮುಹೂರ್ತವೊಂದರಲ್ಲಿ ರಾಮನಿಗೆ ಪಟ್ಟಾಭಿಷೇಕವಾಯಿತು.


(ಮುಂದುವರೆಯುವುದು...)