Sunday, 9 February 2014

ರನ್ನನ ’ಗದಾಯುದ್ಧ’ - ಭಾಗ ೧


’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಕವಿ ರನ್ನನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’ ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.
’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು. ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರುಗುವ ದುರ್ಯೋಧನನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.

ಮುಂಚೆಯೇ ತಿಳಿಸಿದಂತೆ, ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು ಏಕೆ ಬರೆಯುತ್ತಿರುವುದಾಗಿ ಹೇಳಿಬಿಡುತ್ತಾನೆ.

ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆಱೆವನಿಱಿವಬೆಡಂಗಂ                                 || ೧.೩೦||

ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ                                    ||೧.೩೧||

ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ                                  ||೧.೩೨||

ಮೊದಲೊಳ್ ಬದ್ಧವಿರೋಧದಿಂ ನೆಗೞ್ದ ಕುಂತೀಪುತ್ರರೊಳ್ ಭೀಮನಂ
ಕದ ಗಾಂಧಾರಿಯ ಪುತ್ರರೊಳ್ ಮೊದಲಿಗಂ ದುರ್ಯೋಧನಂ ಧರ್ಮಯು
ದ್ಧದೊಳಂತಾತನನಿಕ್ಕಿ ಕೊಂದನದಱಿಂ ಭೀಮಂ ಜಯೋದ್ಧಾಮನೆಂ
ಬುದನೆಂಬಂತಿದು ವಸ್ತುಯುದ್ಧಮೆನಿಸಲ್ ಪೇೞ್ದಂ ಗದಾಯುದ್ಧಮಂ             ||೧.೩೩||

೩೦. ಬೆಳಗುತ್ತಿರುವ ಒಂದು ದೀಪದಿಂದ ಹಲವಾರು ದೀಪಗಳನ್ನು ಹೊತ್ತಿಸಿಕೊಂಡು ಹೋದರೂ ಅದು ಹೇಗೆ ಕುಗ್ಗದೆ ಪ್ರಕಾಶಿಸುತ್ತಲೇ ಇರುವುದೋ ಹಾಗೆ ಜಗವೆಲ್ಲ ಬಂದು ಬೇಡಿ ಪಡೆದುಕೊಂಡು ಹೋದರೂ ಇರಿವಬೆಡಂಗನ (ಇದು ಸತ್ಯಾಶ್ರಯನಿಗೆ ಇದ್ದ ಬಿರುದು) ಸಂಪತ್ತು ಅಕ್ಷಯವಾಗಿಯೇ ಇರುವುದು.
೩೧. ಹೀಗೆ ಪ್ರಸಿದ್ಧನಾದ ಸತ್ಯಾಶ್ರಯದೇವನನ್ನೇ ಕಥಾನಾಯಕನಾದ ಭೀಮನಿಗೆ ಹೋಲಿಸಿ ಈ ’ಗದಾಯುದ್ಧ’ವೆಂಬ ಕಾವ್ಯವನ್ನು ಕವಿ ರನ್ನನು ರಚಿಸಿದನು.
೩೨. ಕೃತಿಯ ಹೆಸರು ಗದಾಯುದ್ಧ, ಇದಕ್ಕೆ ನಾಯಕ ಸಾಹಸಿಯಾದ ಕಲಿ ಭೀಮ. ಅಲಂಕಾರಯುತವಾದ ಈ ಕೃತಿಯನ್ನು ರಚಿಸಿದವನು ಕವಿರತ್ನ ರನ್ನನೆಂದಮೇಲೆ ಇದರ ಮಹಿಮೆಯನ್ನು ಏನೆಂದು ಬಣ್ಣಿಸುವುದೋ..!
೩೩. ಮೊದಲಿನಿಂದಲೂ ಬದ್ಧವಿರೋಧವನ್ನು ಹೊಂದಿದ್ದ - ಕುಂತೀಪುತ್ರರಲ್ಲಿ ಮಿಗಿಲಾದ ಭೀಮ, ಹಾಗೂ ಗಾಂಧಾರಿಯ ಮಕ್ಕಳಲ್ಲಿ ಮೊದಲನೆಯವನಾದ ದುರ್ಯೋಧನನೂ - ಎದುರೆದುರಾಗಿ ನಡೆಸಿದ ಧರ್ಮಯುದ್ಧದಲ್ಲಿ ಭೀಮಸೇನನು ದುರ್ಯೋಧನನನ್ನು ಹೊಡೆದು ಕೊಂದು ವಿಜಯವನ್ನು ಹೊಂದಿದನು. ಆ ಯುದ್ಧ ಪ್ರಸಂಗವನ್ನೇ ಕಥಾವಸ್ತುವನ್ನಾಗಿಸಿಕೊಂಡು ಈ ’ಗದಾಯುದ್ಧ’ವನ್ನು ಕವಿ ರನ್ನನು ರಚಿಸಿದ್ದಾನೆ.

ಹೀಗೆ ರನ್ನನು ತಾನು ಗದಾಯುದ್ಧವನ್ನು ರಚಿಸುತ್ತಿರುವ ಹಿನ್ನೆಲೆಯನ್ನು ವಿವರಿಸುತ್ತಾನೆ.
ರನ್ನನಿಗೆ ತನ್ನ ಕಾವ್ಯರಚನಾ ಸಾಮರ್ಥ್ಯದ ಬಗೆಗೆ ಅಪಾರವಾದ ಹೆಮ್ಮೆಯೂ, ಆತ್ಮವಿಶ್ವಾಸವೂ ಇದೆ. ಅದು ಎಷ್ಟರ ಮಟ್ಟಿಗೆ ಎಂದರೆ,

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್ ಪರೀಕ್ಷಿಪಂಗೆಟೆರ್ದೆಯೇ                                 ||೧.೪೪||

ಕವಿಯು ಹೀಗೆ ಹೇಳುತ್ತಾನೆ "ರತ್ನಪರೀಕ್ಷಕನು ನಾನೆಂದು ಆದಿಶೇಷನ ಹೆಡೆಯ ಮೇಲಿನ ರತ್ನವನ್ನೂ, ಕೃತಿರತ್ನಪರೀಕ್ಷಕನು ನಾನೆಂದು ರನ್ನನ ಕೃತಿರತ್ನವನ್ನೂ ಪರೀಕ್ಷಿಸಿ ಬೆಲೆಗಟ್ಟುವೆನೆಂಬುವವನಿಗೆ ಧೈರ್ಯವೆಂತಹುದು?(ಅಂದರೆ ಯಾರಾದರೂ ಅಂತಹ ಸಾಹಸಕ್ಕೆ ಕೈಹಾಕಿಯಾರೇ..? ಎಂಬ ಅರ್ಥದಲ್ಲಿ)"
ಕೃತಿ ಹಾಗೂ ಕವಿಯ ಬಗೆಗೆ ಇದಿಷ್ಟು ಪರಿಚಯ ಸಾಕು. ಇನ್ನು ಕಥೆಯನ್ನು ಪ್ರಾರಂಭಿಸಬಹುದಲ್ಲವೇ?

=============================================================================================

ಕುರುಕ್ಷೇತ್ರ ಯುದ್ಧದಲ್ಲಿ ಭೀಮನ ಪರಾಕ್ರಮದಿಂದ ಶತ್ರುಸೈನ್ಯವು ನಲುಗಿಹೋಯಿತು. ದುರ್ಯೋಧನನನ್ನುಳಿದು ಕೌರವರೆಲ್ಲರೂ ಹತರಾದರು. ದುರ್ಯೋಧನನ ಕಥೆಯೂ ಮುಗಿಯಿತೆಂದರೆ ಕುರುಕ್ಷೇತ್ರದ ಅಂಕಕ್ಕೆ ತೆರೆಬೀಳುತ್ತದೆಯಷ್ಟೆ.
ಆದರೆ ಆ ಸಮಯಕ್ಕೆ ದ್ರೌಪದಿಗೆ ಒಂದು ಸಂಶಯ ಬರುತ್ತದೆ - ’ಎಲ್ಲಿ ಧೃತರಾಷ್ಟ್ರ, ಭೀಷ್ಮ ಮುಂತಾದವರ ಮಾತಿಗೆ ಒಪ್ಪಿ ಯುಧಿಷ್ಟಿರನು ದುರ್ಯೋಧನನೊಡನೆ ಸಂಧಿ ಮಾಡಿಕೊಂಡುಬಿಡುತ್ತಾನೋ!" ಎಂದು.
ಹಾಗೇನಾದರೂ ಆದರೆ ತನಗಾದ ಹಾನಿಯೆಲ್ಲಕ್ಕೆ ಪ್ರತೀಕಾರವಾದಂತಾಗುವುದಿಲ್ಲ.. ಯಾವುದೇ ಕಾರಣಕ್ಕೂ ಸಂಧಿಯಾಗಕೂಡದು ಎಂದು ಆಕೆಯ ಅಭಿಪ್ರಾಯ. ಅದನ್ನು ತಿಳಿಸಲೆಂದೇ ಆಕೆ ತನ್ನ ಇಬ್ಬರು ಸೇವಕಿಯರೊಡಗೂಡಿ ಭೀಮಸೇನನ ಬಳಿಗೆ ಬರುತ್ತಾಳೆ.

ಖಳದುಶ್ಶಾಸನವಕ್ಷ
ಸ್ಥಳೋಚ್ಚಲತ್ಕೃಷ್ಣರಕ್ತಜಲದಿಂ ಕೋಪಾ
ನಳನಂ ಮೞ್ಗಿಸದಿನ್ನುಂ
ಗಳಗಳಿತಸಕೋಪನಿರ್ಪ ತೆರದಿಂದಿರ್ದಯ್                                   ||೧.೫೭||

"ದುಷ್ಟ ದುಶ್ಶಾಸನನ ಎದೆಯಿಂದ ಚಿಮ್ಮಿದ(ಉಚ್ಚಲ=ಮೇಲಕ್ಕೆ ಚಿಮ್ಮುವ) ರಕ್ತದಿಂದ ನಿನ್ನ ಕೋಪಾಗ್ನಿಯನ್ನೆಲ್ಲ ನಂದಿಸಿಬಿಟ್ಟೆಯಾ? ನೀನಾದರೋ ಕೋಪವೆಲ್ಲ ಇಳಿದುಹೋದವಂತೆ ಇರುವೆ".
"ಒಂದು ವೇಳೆ ಧರ್ಮರಾಯನು ಶತ್ರುಗಳೊಡನೆ ಸಂಧಿ ಮಾಡಿಕೊಳ್ಳಲು ಒಪ್ಪಿಬಿಟ್ಟರೆ ನಿಮಗೆ ಮತ್ತೆ ವನವಾಸವೇ ಗತಿ. ಇನ್ನು ನಾನಾದರೋ ಬೆಂಕಿಯಲ್ಲೇ ಹುಟ್ಟಿದವಳು, ಆದ್ದರಿಂದ ಮತ್ತೆ ಬೆಂಕಿಗೆ ಬೀಳುವುದೊಂದೇ ನನಗೆ ಉಳಿಯುವ ದಾರಿ" ಎಂದು ಮುಂತಾಗಿ ಭೀಮಸೇನನನ್ನು ಮೂದಲಿಸುತ್ತಾಳೆ.
ಹೀಗೆ ದುಃಖದ ಭರದಲ್ಲಿ ನುಡಿಯುತ್ತಿರುವ ದ್ರೌಪದಿಯ ಮಾತುಗಳು ಭೀಮಸೇನನಲ್ಲಿ ಆಕೆಯ ಬಗೆಗೆ ಅನುಕಂಪವನ್ನುಂಟು ಮಾಡುತ್ತವೆ. ಆಕೆ ಹಾಗೆ ನುಡಿಯಲು ಕಾರಣವೇನೆಂದು ಆತ ಬಲ್ಲ. ಅಂದು ದ್ಯೂತದಲ್ಲಿ ತಾವು ಸೋತಾಗ, ತಮ್ಮೆಲ್ಲರ ಕಣ್ಣೆದುರಿನಲ್ಲಿಯೇ ಆಕೆಗಾದ ಅಪಮಾನದ ಉರಿಯು ಇನ್ನೂ ಜೀವಂತವಾಗಿರಲು ಆಕೆಗೆ ಕೋಪವೂ ಮನಸ್ತಾಪವೂ ಕೆರಳದೇ ಇದ್ದೀತೆ?

ಭೀಮನಿಗೂ ಇನ್ನೂ ಕೋಪವು ತೀರಿಲ್ಲ. ತನ್ನ ಬದ್ಧವೈರಿಯಾದ ದುರ್ಯೋಧನನು ಮುಗಿಯುವ ಮುನ್ನ ಆ ಕೋಪವು ಶಮನವಾದೀತೇ?

"ಗಳಿಯಿಸುತಿರೆ ಕಬರಿಭರಂ
ಗಳಿಯಿಸುತಿರೆ ನಯನವಾರಿ ನಿನ್ನಾನನದಿಂ
ನಳಿನಾನನೆ ನೀನಿರೆ ಕುರು
ಕುಳಾಂತಕಂ ಗಳಿತಕೋಪನೇ ಕಲಿಭೀಮಂ"                                 || ೧.೬೩||

"ನೀನಗ್ನಿಪುತ್ರಿಯಯ್ ಪವ
ಮಾನತನೂಭವನೆ ನಾನಣಂ ಕೂಡೆ ಸುಸಂ
ಧಾನಮರಿನೃಪರೊಳೆಂತನ
ಲಾನಿಲಸಂಯೋಗಮುರಿಪದಿರ್ಕುಮೆ ಪಗೆಯಂ"                     || ೧.೬೬||

ಬಿಚ್ಚಿದ ನಿನ್ನ ಮುಡಿಯು ಹೀಗೇ ಇಳಿಬಿದ್ದಿರಲು, ನಿನ್ನ ಕಂಗಳಿಂದ ನಿಲ್ಲದೆ ಕಣ್ಣೀರು ಸುರಿಯುತ್ತಿರಲು, ಓ ಕಮಲಮುಖಿಯೆ, ಕುರುಕುಲಾಂತಕನೆನಿಸಿದ ನಾನು ಗಳಿತ ಕೋಪನೇ ಹೇಳು?(೬೩)
ನೀನು ಅಗ್ನಿಯಲ್ಲಿ ಜನಿಸಿದವಳು, ನಾನು ವಾಯುವಿನ ಪುತ್ರ(ಕುಂತಿಗೆ ವಾಯುವಿನಿಂದ ಜನಿಸಿದವನು). ಹೀಗಿರಲು, ನಾವಿಬ್ಬರೂ ಕೂಡಿರಲು ಶತ್ರುಗಳೊಡನೆ ಸಂಧಾನ ಹೇಗೆ ಸಾಧ್ಯವಾಗುತ್ತದೆ?
(ನಲ+ಅನಿಲ+ಸಂಯೋಗಂ+ಉರಿಪದಿರ್ಕುಮೆ ಪಗೆಯಂ) ಅಗ್ನಿ ಹಾಗು ವಾಯುವಿನ ಸಂಯೋಗವು ಹಗೆಗಳನ್ನು ಸುಡದೇ ಇದ್ದೀತೆ?(ಹಗೆಯು ಸುಟ್ಟು ಬೂದಿಯಾಗದೆ ಇದ್ದೀತೆ) (೬೬)
ಹೀಗೆ ನಾನಾ ಮಾತುಗಳಿಂದ ದ್ರೌಪದಿಯನ್ನು ಸಂತೈಸಿ, ಯಾವುದೇ ಕಾರಣಕ್ಕೂ ಸಂಧಿಯಾಗದಂತೆ, ಒಂದು ವೇಳೆ ಧರ್ಮರಾಯನು ಸಂಧಿಗೆ ಒಪ್ಪಿದರೂ, ಅವನ ಮಾತನ್ನು ಮೀರಿಯಾದರೂ ಆ ದುಷ್ಟ ದುರ್ಯೋಧನನನ್ನು ತಾನು ಕೊಲ್ಲುವುದಾಗಿ ಭೀಮನು ದ್ರೌಪದಿಗೆ ಮಾತುಕೊಡುತ್ತಾನೆ. ಆ ಮಾತುಗಳಿಂದ ಸಮಾಧಾನಗೊಂಡ ದ್ರೌಪದಿಯು ಅಲ್ಲಿಂದ ನಿರ್ಗಮಿಸುತ್ತಾಳೆ.

============================================================================================= 

ಇತ್ತ, ದುರ್ಯೊಧನನು ತನ್ನವರನ್ನೆಲ್ಲ ಕಳೆದುಕೊಂಡು ವ್ಯಾಕುಲಗೊಂಡಿದ್ದಾನೆ. ಹತ್ತಿರದಲ್ಲೇ ಸಂಜಯನೂ ಇದ್ದಾನೆ. ಸಂಜಯನು ರಣರಂಗದಲ್ಲಿ ಭೀಮಾರ್ಜುನರ ಸಾಹಸಗಳನ್ನು ವರ್ಣಿಸಿ ಹೆಳುತ್ತಿದ್ದರೆ ದುರ್ಯೋಧನನಿಗೆ ತಮ್ಮ ಪಕ್ಷದವನೇ ಆದರೂ ಶತ್ರುಗಳನ್ನು ಹಾಡಿ ಹೊಗಳುತ್ತಿದ್ದಾನಲ್ಲ ಎಂದು ಸಂಜಯನ ಮೇಲೆ ಕೋಪವೂ, ಇಷ್ಟೆಲ್ಲ ಹಾನಿಯಾದರೂ ತಾನಿನ್ನೂ ಅದಕ್ಕೆ ಪ್ರತೀಕಾರವನ್ನು ಕೈಗೊಳ್ಳಲಿಲ್ಲವೆಂದು ಪಾಂಡವರ ಬಗೆಗೆ ರೋಷವುಂಟಾಗುತ್ತದೆ. ತನ್ನವರೆಲ್ಲ(ದ್ರೋಣ, ಭೀಷ್ಮ, ಕರ್ಣ, ದುಶ್ಶಾಸನ, ಜಯದ್ರಥ ಮುಂತಾದ ವೀರರು) ತೀರಿಹೋದರೂ ಏನು, ತಾನೊಬ್ಬನೇ ಯುದ್ಧ ಮಾಡಿ ಪಾಂಡವರನ್ನು ಸದೆಬಡಿಯುತ್ತೇನೆಂದು ಹೊರಡುತ್ತಾನೆ.
ಸಂಜಯನು ಅವನನ್ನು ತಡೆದು "ಬಲರಾಮ, ಅಶ್ವತ್ಥಾಮರು ಇನ್ನೂ ಇದ್ದಾರೆ. ಅಲ್ಲದೆ ಕೃಪ, ಕೃತವರ್ಮರೂ ಇದ್ದಾರೆ. ಇವರೆಲ್ಲ ಬರುವವರೆಗೂ ಕಾದು ಈ ನಾಲ್ವರಲ್ಲಿ ಯಾರಾದರೊಬ್ಬರಿಗೆ ವೀರಪಟ್ಟವನ್ನು ಕಟ್ಟಿ ಸೇನಾಪತ್ಯಾಭಿಷೇಕವನ್ನು ಮಾಡಿ ನಂತರ ಯುದ್ಧ ಹೂಡಿ ವೈರಿಗಳನ್ನು ಗೆಲ್ಲು..." ಎಂದು ಸಲಹೆ ಕೊಡುತ್ತಾನೆ. ಅದಕ್ಕೆ ದುರ್ಯೋಧನನು :

ಕಾನೀನಂ ದ್ರೋಣ ನದೀ
ಸೂನುಗಳೞಿದಿಂಬೞಿಕ್ಕೆ ಪೆಱರೆನಗಿಲ್ಲಂ
ದಾನೆ ಗಳಿತಾಶ್ರುಜಲದಿಂ
ಸೇನಾಪತ್ಯಾಭಿಷೇಕಮಂ ಮಾಡಿದಪೆಂ                                      ||೩.೬೬||

"ಕರ್ಣ(ಕಾನೀನ), ದ್ರೋಣ, ಭೀಷ್ಮ(ನದೀ ಸೂನು) ಈ ಮೂವರೂ ಅಳಿದ ಬಳಿಕ ನನಗೆ ಯಾರೂ ಇಲ್ಲವಾದರು. ಈಗಿನ್ನು ನನ್ನ ಕಣ್ಣೀರಿನಿಂದ ನನಗೆ ನಾನೇ ಸೇನಾಪತ್ಯಾಭಿಷೇಕ ಮಾಡಿಕೊಳ್ಳುತ್ತೇನೆ." (ಈ ಎಲ್ಲರ ಸಾವು ದುರ್ಯೋಧನನಿಗೆ ಅತೀವ ನೋವು ಉಂಟು ಮಾಡಿದ್ದುದು ದುರ್ಯೋಧನನ ಮಾತುಗಳಲಲ್ಲಿ ವ್ಯಕ್ತವಾಗುತ್ತದೆ. ಅದರಲ್ಲಿಯೂ ಕರ್ಣ ದುಶ್ಶಾಸನರ ಸಾವು...!)
"ಕರ್ಣ-ದುಶ್ಶಾಸನರಿಬ್ಬರೂ ನನಗೆ ಎರೆಡು ತೋಳು, ಎರೆಡು ಕಣ್ಣುಗಳಂತಿದ್ದರು. ಅವರಿಬ್ಬರೇ ತೀರಿದ ಬಳಿಕ ನಾನಿನ್ನು ಮನುಷ್ಯನಾಗಿ ಬಾಳಬಹುದೇ?" ಎಂದು ಪ್ರಲಾಪಿಸುತ್ತಾನೆ ದುರ್ಯೋಧನ.

"ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಶಾ
ಸನನಿಲ್ಲದೆ ಕರ್ಣನಿಲ್ಲದೆ ನಾನೆಂತಿರ್ಪೆನ್"                                    ||೩.೬೯||

"ನನಗಿಂದು ಮನಸ್ಸು ಶೂನ್ಯ, ಮನೆ ಶೂನ್ಯ, ಪಾಳಯವು ಶೂನ್ಯ.. ಈಗ ಈ ಭೂಮಿಯೆಲ್ಲವೂ ಶೂನ್ಯವಾಗಿದೆ ನನಗೆ. ಕರ್ಣ-ದುಶ್ಶಾಸನರಿಲ್ಲದೆ ಹೇಗಿರಲಿ ನಾನು" ಎಂದು ನಾನಾ ರೀತಿಯಲ್ಲಿ ತನ್ನ ಮನದ ಅಳಲನ್ನು ತೋಡಿಕೊಳ್ಳುತ್ತಾನೆ.

"ಧೃತರಾಷ್ಟ್ರ ಗಾಂಧಾರಿಯರನ್ನು ಒಮ್ಮೆ ಭೇಟಿ ಮಾಡಿ ಅವರನ್ನು ಸಮಾಧಾನಪಡಿಸಬೇಕಾದ ನೀನೇ ಹೀಗೆ ಅಳುತ್ತ ಕೂರುವುದು ಸರಿಯೆ? ಶೀಘ್ರವೇ ಅವರನ್ನೊಮ್ಮೆ ಭೇಟಿ ಮಾಡಬಾರದೇ?" ಎಂದು ಸಂಜಯನು ಹೇಳಿದಾಗ,
ದುರ್ಯೋಧನನು "ಕರ್ಣನನ್ನೂ, ದುಶ್ಶಾಸನನನ್ನೂ, ಇತರ ಬಾಂಧವರನ್ನೂ ಕೊಲ್ಲಿಸಿದ ನಾನು ನಮ್ಮ ಕುರುಡ ತಂದೆಗೆ ಹಾಗೂ ತಾಯಿ ಗಾಂಧಾರಿಗೆ ಹೇಗೆ ನನ್ನ ಮುಖ ತೋರಿಸಲಿ?" ಎಂದು ಇನ್ನಷ್ಟು ದುಃಖಿತನಾಗುತ್ತಾನೆ.
ಹೀಗೆ ಇವರು ಮಾತನಾಡುತ್ತಿರುವಾಗಲೇ ಧೃತರಾಷ್ಟ್ರನೂ ಗಾಂಧಾರಿಯೂ ದುರ್ಯೋಧನನನ್ನು ಹುಡುಕುತ್ತ ಅಲ್ಲಿಗೇ ಬರುತ್ತಾರೆ. ಆ ಸಮಯಕ್ಕೆ ದುಃಖಾತಿರೇಕದಿಂದ ದುರ್ಯೋಧನನು ಧಾರಾಕಾರವಾಗಿ ಕಂಬನಿಗರೆಯುತ್ತ ’ಹಾ ದುಶ್ಶಾಸನ! ಹಾ ಕರ್ಣಾ!’ ಎನ್ನುತ್ತ ಮೂರ್ಛೆ ಹೊಗುತ್ತಾನೆ.
ಇದನ್ನು ಕೇಳಿ ಧೃತರಾಷ್ಟ್ರ-ಗಾಂಧಾರಿಯರು ದುರ್ಯೋಧನನೂ ಅಸುನೀಗಿದನೆಂದೇ ತಿಳಿದು ಅಳಲು ಶುರು ಮಾಡುತ್ತಾರೆ. ಆಗ ಸಂಜಯನು "ಕರ್ಣ ದುಶ್ಶಾಸನಾದಿಗಳ ಸಾವನ್ನು ನೆನೆದು ಶೋಕವುಕ್ಕಿ ನಿಮ್ಮ ಮಗನು ಮೂರ್ಛೆ ಹೊಗಿದ್ದಾನೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅವನು ಎಚ್ಚರಗೊಳ್ಳುವನು. ನಿಮ್ಮ ಪ್ರಲಾಪವನ್ನು ನಿಲ್ಲಿಸಿ ಸಮಾಧಾನ ಹೊಂದಿ.." ಎಂದು ಅವರನ್ನು ಸಮಾಧಾನ ಪಡಿಸುತ್ತಾನೆ.

ಕುರುಕುಲಚೂಡಾಮಣಿ ನಿಜ
ಗುರುಗಳ ನಯನಾಂಬು ತಳಿವ ಜಲಮಾಗಿರೆ ತ
ದ್ಗುರುಜನದೀರ್ಘೋಚ್ಛಾಸಮೆ
ಪರಿವೀಜನಮಾಗೆ ಮೂರ್ಛೆಯಿಂದೆೞ್ಚತ್ತಂ                                    ||೩.೮೪||

ತನ್ನ ತಂದೆ-ತಾಯಿಯರ ಕಣ್ಣೀರೇ ತಳಿವ(ಚಿಮುಕಿಸಿದ) ಜಲವಾಗಿ, ಅವರ ನಿಟ್ಟುಸಿರೇ ಬೀಸಣಿಗೆಯಾಗಿ(ಪರಿವೀಜನ) ಪರಿಣಮಿಸಿ ಅದರಿಂದ ದುರ್ಯೋಧನನು ಎಚ್ಚೆತ್ತನು.


(ಮುಂದುವರೆಯುವುದು...)

Thursday, 2 January 2014

Suneetha(sonnet)

ಅರಸಿನುಡುಗೆಯ ನಡುವೆ, ರನ್ನದೊಡವೆಯ ನಡುವೆ
ಬಂಧಿಸಿಹೆ ಮಗುವನ್ನು- ಸಿರಿಯ ಸೆರೆಯೊಳಗಿರಿಸಿ ;
ಆಡೀತು ಹೇಗೆ ಅದು, ನಲಿದೀತು ಹೇಗೆ ಅದು-
ಪ್ರತಿ ಹೆಜ್ಜೆಗೂ ತಡೆವ - ಹೊನ್ನ ತೆರೆಯನು ಸರಿಸಿ?

ಚಿನ್ನ - ರನ್ನದ ದಿರಿಸು ಅಡಿಗಡಿಗೆ ತಗುಲುವುದು,
ಅದರ ಕಾಟಕೆ ಅವನ ಸಂತೋಷವಳಿಯುವುದು;
ಬಣ್ಣ ಕೆಟ್ಟೀತೆಂಬ, ಧೂಳು ಮೆತ್ತೀತೆಂಬ -
ಭಯದಲ್ಲಿ ಆ ಮಗುವು ಸರಿಯಲೂ ಹೆದರುವುದು.

ನ್ಯಾಯವೇ ಇದು ನಿನಗೆ? ಈ ಬಂಧ ಲೇಸಹುದೆ? -
ತನ್ನ ಪ್ರೇಮವು ಮಗುವ ಸ್ವಾತಂತ್ರ್ಯ ಕಸಿಯುವೆಡೆ,
ಧೂಳಿನೊಳಗಾಡುವS ಆನಂದ ಕದಿಯುವೆಡೆ,
ಜಗದ ಸಿರಿಜಾತ್ರೆಯಾ ದ್ವಾರದೊಳು ನಿಲುಹುವೆಡೆ.

ಬಂಧ ಸಡಿಲಿಸು ತಾಯೆ, ಬಾಳ ಸವಿಯಲಿ ಅವನು;
ಭುವಿಯ ಸಿರಿಮಡಿಲಿನೊಳು ಬಾಲ್ಯ ಪಡೆಯಲಿ ಅವನು.

Sunday, 15 December 2013

ಕಳೆದುಹೋಗಬೇಕು 'ನಾನು'

ಕಳೆದುಹೋಗಬೇಕು ನಾನು ಕಳೆದುಹೋಗಬೇಕು ನಾನು ;
ಜೀವನದs ಜಾತ್ರೆಯಲ್ಲಿ ಕಳೆದುಹೋಗಬೇಕು 'ನಾನು'.

ಎಲ್ಲರ ಜೊತೆ ನಡೆಯುವಾಗ ಕಳೆದುಹೋಗಬೇಕು ನಾನು 
ಎಲ್ಲರ ಜೊತೆ ನುಡಿಯುವಾಗ ಕಳೆದುಹೋಗಬೇಕು ನಾನು 
ಎಲ್ಲರ ಜೊತೆ ದುಡಿಯುವಾಗ ಕಳೆದುಹೋಗಬೇಕು ನಾನು 
ಎಲ್ಲರಲ್ಲಿ ಒಬ್ಬನಾಗಿ ಕಳೆದುಹೋಗಬೇಕು ನಾನು.

ಎಲೆಮರೆಯs ಧ್ವನಿಯ ಹಾಗೆ ಕಳೆದುಹೋಗಬೇಕು ನಾನು
ಧರೆಗಿಳಿವಾ ಹನಿಯ ಹಾಗೆ ಕಳೆದುಹೋಗಬೇಕು ನಾನು
ಹೆಸರಿರದಾ ಝರಿಯ ಹಾಗೆ ಕಳೆದುಹೋಗಬೇಕು ನಾನು
ಸಾಗರದಾ ಅಲೆಯ ಹಾಗೆ ಕಳೆದುಹೋಗಬೇಕು ನಾನು.

ಧಾನ್ಯದಲ್ಲಿ ವೃಕ್ಷದಂತೆ ಕಳೆದುಹೋಗಬೇಕು ನಾನು
ಹಾಲಿನಲ್ಲಿ ಬೆಣ್ಣೆಯಂತೆ ಕಳೆದುಹೋಗಬೇಕು ನಾನು 
ಜಲದೊಳಗಣ ಜೀವದಂತೆ ಕಳೆದುಹೋಗಬೇಕು ನಾನು
ಜೀವನೊಳಗೆ ದೇವನಂತೆ ಕಳೆದುಹೋಗಬೇಕು "ನಾನು"

ಯಾವುದೋ ಸಭೆಯೊಂದರಲ್ಲಿ ಒಬ್ಬರು ಕನಕದಾಸರನ್ನು ಕೇಳಿದರಂತೆ "ಸ್ವಾಮಿ, ಪ್ರಪಂಚದಲ್ಲಿ ಇಷ್ಟೊಂದು ಜನ ಮೋಕ್ಷಪದವನ್ನು ಹೊಂದಲು ಪ್ರಯತ್ನಿಸುತ್ತ ಇರುತ್ತಾರಲ್ಲ, ಅವರಲ್ಲಿ ಯಾರುಯಾರು(ಎಂಥವರು) ಮೋಕ್ಷಪದವನ್ನು ತಲುಪುತ್ತಾರೆ?" ಅಂತ.ಅದಕ್ಕೆ ಕನಕದಾಸರು "ಗೊತ್ತಿಲ್ಲಪ್ಪ, ನಾನು ಹೋದ್ರೆ ಹೋಗಬಹುದು" ಅಂದರಂತೆ.
ಪ್ರಶ್ನೆ ಕೇಳಿದವನಿಗೆ ಆಶ್ಚರ್ಯ! ಜೊತೆಗೆ ಸ್ವಲ್ಪ ಅಸಮಾಧಾನ - "ಅಲ್ಲ, ಈತ ತಾನೊಬ್ಬ ಮಾತ್ರ ಮೋಕ್ಷ ಹೊಂದಬಹುದು ಅಂತಿದಾನಲ್ಲ. ಹಾಗಿದ್ರೆ ಮಿಕ್ಕವರೆಲ್ಲ ಅದಕ್ಕೆ ಅನರ್ಹರು ಎಂದು ಇವರ ಅಭಿಪ್ರಾಯವೇನು??" - ಅಂತ. ಅದನ್ನೇ ಆತ ಕನಕದಾಸರನ್ನು ಕೇಳುತ್ತಾನೆ.
ಅದಕ್ಕೆ ಕನಕದಾಸರು ಹೇಳಿದರಂತೆ "ನಾನು ಹೇಳಿದ್ದು ನಾನೊಬ್ಬ ಮಾತ್ರ ಹೋಗ್ತೀನಿ ಅಂತ ಅಲ್ಲಪ್ಪ, ಈ 'ನಾನು' ಅನ್ನೋ ಭಾವನೆ ನಮ್ಮಿಂದ ಹೋದ್ರೆ ಮೋಕ್ಷಪದಕ್ಕೆ ಹೋಗಬಹುದು" ಅಂತ. (ಕನಕದಾಸರ ಮಾತು/ದಾಸಪದಗಳಲ್ಲಿ ಯಾವಾಗಲೂ ಒಂದಲ್ಲ ಒಂದು ಗೂಢಾರ್ಥ ಇರುವುದು ನಮಗೆಲ್ಲ ಬಹುಶ ಗೊತ್ತಿರುವ ವಿಷಯವೇ). ಅದಕ್ಕೇ ಒಂದು ನುಡಿ ಇದೆ "ಕನಕನನ್ನು ಕೆಣಕಬೇಡ, ಕೆಣಕಿ ತಿಣುಕಬೇಡ" ಅಂತ.
ಅದೇನೇ ಇರಲಿ, ಅವರ ಆ ಮಾತು ನಮಗೆಲ್ಲ ಸರ್ವಥಾ ಮನನೀಯ. 'ನಾನು' ಅನ್ನೋ ಸ್ವಾರ್ಥ ಭಾವನೆ ಹೋದ್ರೆ ಕಾಣದ ಮೋಕ್ಷ ನಮಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ನಿಸ್ವಾರ್ಥ,ನಿರಹಂಕಾರದಿಂದ ಭೂಮಿಯ ಮೇಲಿರುವಾಗಲೇ ನಮಗೆ ಒಂದು ಬಗೆಯ ಆನಂದದ ಅನುಭವ ಆಗದೇ ಇರದು. ಅದನ್ನು ಕುರಿತೇ ಬರೆದದ್ದು ಈ ಕವನ - ಕಳೆದುಹೋಗಬೇಕು "ನಾನು"

"ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇ
sಸ್ತಂ ಗಚ್ಛಂತಿ ನಾಮರೂಪೇ ವಿಹಾಯ|
ತಥಾ ವಿದ್ವಾನ್ನಾಮರೂಪಾದ್ವಿಮುಕ್ತಃ
ಪರಾತ್ ಪರಂ ಪುರುಷಮುಪೈತಿ ದಿವ್ಯಂ"                                              -- ಮುಂಡಕ ಉಪನಿಷದ್ ೩.೨.೮

'ಹೇಗೆ ಹರಿಯುತ್ತಿರುವ ನದಿಗಳು ನಾಮರೂಪಗಳನ್ನು ಬಿಟ್ಟು ಸಮುದ್ರದಲ್ಲಿ ಅದೃಶ್ಯವಾಗುವವೋ, ಹಾಗೆಯೇ ವಿದ್ವಾಂಸನು ನಾಮರೂಪಗಳಿಂದ ಬಿಡುಗಡೆಯನ್ನು ಹೊಂದಿ ಪರತ್ಪರನೂ ದಿವ್ಯನೂ ಆದ ಪುರುಷನನ್ನು ಹೊಂದುವನು.'
ಈ ಉಪನಿಷದ್ವಾಕ್ಯ ಪ್ರೇರಣೆಯಿಂದ ಬರೆದದ್ದು ಮೊದಲ ಚರಣ - ನಾವು ನಮ್ಮ ಅಹಂ ಅನ್ನು ತೊರೆದು ಎಲ್ಲರಲ್ಲಿ ಒಂದಾಗಿ ಬೆರೆಯಬೇಕು - ಸಮುದ್ರದಲ್ಲಿ ಬೆರೆವ ನದಿಯ ಹಾಗೆ. ಅಲ್ಲಿ 'ನಾನು-ತಾನು' ಎಂಬ ಭಾವವಿರಬಾರದು.

ಪೊದೆಗಳ ನೇಪಥ್ಯದಿಂದ ಕೇಳಿಬರುವ ಮಧುರಗೀತೆಯನ್ನು ನಾವು ಕೇಳಿ ಬಲ್ಲೆವೇ ಹೊರತು ಯಾವ ಹಾಡನ್ನು ಯಾವ ಹಕ್ಕಿ ಹಾಡುತ್ತಿದೆ ಎಂದೇನೂ ನಾವು ಹುಡುಕಾಡುವುದಿಲ್ಲ. ಹಾಡುತ್ತಿರುವ ಹಕ್ಕಿಗೂ 'ಹಾಡಿದ್ದು ತಾನೇ' ಎಂದು ತೋರಿಸಿಕೊಳ್ಳುವ ಹಂಬಲವೇನೂ ಇರುವುದಿಲ್ಲ. ಅಂತೆಯೇ ಆಗಸದಿಂದ ಧರೆಗಿಳಿವ ಮಳೆಹನಿ ಕೂಡ - ತನ್ನ ಅಸ್ತಿತ್ವವನ್ನು ಪ್ರತ್ಯೇಕವಾಗಿ ತೋರ್ಪಡಿಸಿಕೊಳ್ಳುವ ಇಚ್ಛೆ ಅದಕ್ಕಿರುವುದಿಲ್ಲ. ಹೆಸರೇ ಇಲ್ಲದೆ ಕಾಡು-ಮೇಡುಗಳ ನಡುವೆ ಹರಿದು ನದಿಯನ್ನು ಕೂಡಿಕೊಳ್ಳುವ ಝರಿಗಳೆಷ್ಟೋ! ನೌಕಾಯಾನದಲ್ಲಿ ಹಡಗಿಗೆ ಸಹಕರಿಸಿ ಸಾಗುವ ಸಾಗರದ ಅಲೆಗಳು ಅದೆಷ್ಟೋ! ಅವು ಯಾವೂ ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಹಂಬಲಿಸುವುದಿಲ್ಲ.

ಪ್ರತಿ ಬೀಜವೂ ವೃಕ್ಷವಾಗಬಲ್ಲ ಸಂಭವನೀಯತೆ ಇದೆ. ಆದರೆ ಅದು ತತ್ ಕ್ಷಣಕ್ಕೆ ಆಗುವಂಥದ್ದದಲ್ಲ, ಬೀಜವೊಂದು ವೃಕ್ಷವಾಗಿ ಬೆಳೆಯಲು ಸಾಕಷ್ಟು ಸಮಯ ಬೇಕು. ಹಾಗೆ ಬೆಳೆಯಲು ಅದಕ್ಕೆ ತಾಳ್ಮೆಯೂ ಇರಬೇಕು. ಹಾಲಿನೊಳಗಿನ ಬೆಣ್ಣೆ ಪ್ರಕಟವಾಗಬೇಕಾದರೂ ಹಾಗೆಯೇ, ಅದು ತಕ್ಷಣಕ್ಕೆ ಕಾಣುವುದಿಲ್ಲ. ಸಂಸ್ಕರಣೆ ಹೊಂದುವವರೆಗೂ ಬೆಣ್ಣೆ ಆಗೋಚರವಾಗಿಯೇ ಇರುತ್ತದೆ. ತಕ್ಕ ಸಮಯದಲ್ಲಿಯೇ ಅದು ನಮಗೆ ಸಿಗುವುದು. ಇಲ್ಲಿ ಕೂಡ ತಾಳ್ಮೆಯ ಅವಶ್ಯಕತೆಯಿದೆ. ಇನ್ನು, ಪ್ರತಿಯೊಬ್ಬರಲ್ಲೂ ಪರಮಾತ್ಮನಿದ್ದಾನೆ. ಅವನು ಕೂಡ ತಕ್ಷಣಕ್ಕೆ ನಮಗೆ ಸಾಕ್ಷಾತ್ಕಾರವಾಗುವುದಿಲ್ಲ, ನಮ್ಮೊಳಗಿನ ಅವನನ್ನು ಅರಿಯಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಮಾತ್ರ - ಆ ಯತ್ನಕ್ಕೆ ಫಲವಾಗಿ - ಅವನು ನಮಗೆ ಗೋಚರಿಸುತ್ತಾನೆ.

Thursday, 5 December 2013

ಚಂದ್ರಹಾಸ ಉಪಾಖ್ಯಾನ - ಭಾಗ ೪

ಅತ್ತ ಚಂದ್ರಹಾಸನು ತನ್ನ ಮಾವ ದುಷ್ಟಬುದ್ಧಿಯ ಆದೇಶದಂತೆ ಊರ ಹೊರಗಿನ ಚಂಡಿಕಾ ದೇವಾಲಯಕ್ಕೆ ಹೊರಟಿರುತ್ತಾನೆ.
------------------------------------------------------------------------------------------------
ಹೀಗಿರಲು, ಇತ್ತ ಅರಮನೆಯಲ್ಲಿ ಕುಂತಳನಗರದ ಅರಸನು :

ಗಾಲವನ ಪದಕೆರಗಿ ಕೈಮುಗಿದು ನಿಂದು ಭೂ
ಪಾಲಕಂ 'ತನಗಿನ್ನು ಸಾಕು ರಾಜ್ಯದ ಚಿಂತೆ
ಕಾಲವಂ ಸಾಧಿಸುವೆನಮಲ ಯೋಗದೊಳೆನಗೆ ಸುತರಿಲ್ಲ ಧರೆಯನಾರ್ಗೆ
ಬಾಲೆ ಚಂಪಕಮಾಲಿನಿಯನಾರ್ಗೆ ಕೊಡುವೆಂ ವಿ
ಶಾಲಮತಿ ಬೆಸಸೆಂದು' ಬೇಡಿಕೊಳೆ "ಲಕ್ಷಣ ಸು
ಶೀಲನಹ ಚಂದ್ರಹಾಸಂಗೆ ಮೇದಿನಿ ಸಹಿತ ಮಗಳನಿತ್ತಪುದೆಂದನು."

ಎಂದೊಡರಸಂ ಗಾಲವನ ಬುದ್ಧಿಯಂ ಕೇಳ್ದು
ತಂದೆ ಮಾಡುವ ರಾಜಕಾರ್ಯವಂ ನಿರ್ವಹಿಸು
ತಂದು ಬಾಗಿಲೊಳಿರ್ದ ಮದನನಂ ಕರೆಸಿ ಕೈವಿಡಿದು ಮೆಲ್ಲನೆ ಕಿವಿಯೊಳು
ಮುಂದೆ ನಮಗುರ್ವ ಕೆಲಸದ ಪೊರಿಗೆಯುಂಟು ನೀ
ನಿಂದುಹಾಸನನಿಲ್ಲಿಗೀಗಲೊಡಗೊಂಡು ಬಾ
ಸಂದೇಹಿಸದೆ ಪೋಗೆನಲ್ಕೆ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು.

ಕುಂತಳ ದೇಶದ ಅರಸನು ತಾನು ವಾನಪ್ರಸ್ಥಾಶ್ರಮಕ್ಕೆ ಹೊರಡುವುದಾಗಿ ನಿಶ್ಚಯಿಸುತ್ತಾನೆ. ತಾನು ಹೊರಡುವ ಮೊದಲು ರಾಜ್ಯವನ್ನೂ,ತನ್ನ ಮಗಳಾದ ಚಂಪಕಮಾಲಿನಿಯನ್ನೂ ಯಾರಿಗಾದರೂ ಒಪ್ಪಿಸಿ ಹೋಗಬೇಕಲ್ಲವೇ? ಈ ವಿಚಾರವಾಗಿ ರಾಜಪುರೋಹಿತನಾದ ಗಾಲವನ ಸಲಹೆ ಕೇಳುತ್ತಾನೆ. ಗಾಲವನು ಚಂದ್ರಹಾಸನೇ ಚಂಪಕಮಾಲಿನಿಗೆ ತಕ್ಕ ವರನೂ, ಕುಂತಳನಗರಕ್ಕೆ ತಕ್ಕ ಅರಸನೂ ಆಗುತ್ತಾನೆಂದು ರಾಜನಿಗೆ ತಿಳಿಸುತ್ತಾನೆ. ಅರಸನು ಆ ಮಾತಿಗೊಪ್ಪಿ ಅಲ್ಲಿ ಹತ್ತಿರವಿದ್ದ ಮದನನ್ನು ಕರೆದು 'ನೀನು ಕೂಡಲೇ ಚಂದ್ರಹಾಸನನ್ನು ಇಲ್ಲಿಗೆ ಕರೆದುಕೊಂಡು ಬಾ' ಎಂದು ಹೇಳುತ್ತಾನೆ. ಮದನನು ರಾಜನ ಆಣತಿಯಂತೆ ಚಂದ್ರಹಾಸನನ್ನು ಕರೆತರಲು ತೆರಳುತ್ತಾನೆ.
------------------------------------------------------------------------------------------------
ಹೀಗೆ ಮದನನು ಚಂದ್ರಹಾಸನನ್ನು ಕರೆತರಲೆಂದು ಬರುತ್ತಿರುವಾಗ ಮಾರ್ಗಮಧ್ಯದಲ್ಲಿಯೇ ಚಂದ್ರಹಾಸನನ್ನು ಭೇಟಿಯಾಗುತ್ತಾನೆ. ಮದನನು "ಎಲ್ಲಿಗೆ ಹೊರಟಿರುವೆ?" ಎಂದು ಕೇಳಿದಾಗ ಚಂದ್ರಹಾಸನು ತಾನು ಚಂಡಿಕಾಲಯಕ್ಕೆ ಹೊರಟಿರುವುದಾಗಿ ಹೇಳುತ್ತಾನೆ. ಅದಕ್ಕೆ ಮದನನು "ಅಯ್ಯಾ ಚಂದ್ರಹಾಸ, ಅನಿವಾರ್ಯ ರಾಜಕಾರ್ಯವೊಂದರ ನಿಮಿತ್ತ ಕುಂತಳೇಶ್ವರನು ನಿನ್ನನ್ನು ಬರಹೇಳಿದ್ದಾನೆ. ಆದ್ದರಿಂದ ನೀನು ಕೂಡಲೆ ಅರಮನೆಗೆ ಹೋಗು. ಪೂಜೆಗೆ ಬೇಕಾದರೆ ನಾನೇ ಹೋಗುತ್ತೇನೆ" ಎಂದು ತಿಳಿಸಿ ಚಂದ್ರಹಾಸನನ್ನು ಅರಮನೆಗೆ ಕಳುಹಿಸಿ ತಾನು ಚಂಡಿಕಾಲಯದ ಕಡೆಗೆ ಹೊರಡುತ್ತಾನೆ.
ಸಂಪ್ರದಾಯವನ್ನು ಉಲ್ಲಂಘಿಸಬಾರದೆಂದು ಮದನನು ಏಕಾಂಗಿಯಾಗಿಯೇ ದೇವಾಲಯಕ್ಕೆ ಹೊರಡುತ್ತಾನೆ.

ಹೀಗೆ ಹೊರಟ ಮದನನು ಕತ್ತಲಾಗುವ ವೇಳೆಗೆ ಆಲಯವನ್ನು ಸಮೀಪಿಸುತ್ತಾನೆ. ಬರುವ ಹಾದಿಯಲ್ಲಿ ಅನೇಕ ತರದ ಅಪಶಕುನಗಳನ್ನು ಕಂಡು ಆತಂಕಗೊಂಡು 'ಕೆಟ್ಟದ್ದೇನೂ ಆಗದಿರಲಿ' ಎಂದು ಪ್ರಾರ್ಥಿಸುತ್ತ ಅವನು ಆಲಯವನ್ನು ಪ್ರವೇಶಿಸುವ ವೇಳೆಗೆ ಆಲಯದ ಒಳ ಗೆ ತುಂಬ ಹೊತ್ತಿನಿಂದ ಹೊಂಚು ಹಾಕಿ ಕುಳಿತಿದ್ದ ಚಂಡಾಲರು ಅವನನ್ನು ಒಂದೇ ಏಟಿಗೆ ಕೊಂದು ಅಲ್ಲಿಂದ ಪರಾರಿಯಾಗಿಬಿಡುತ್ತಾರೆ.
ಇತ್ತ ಚಂದ್ರಹಾಸನು ಅರಮನೆಗೆ ಬರಲು, ಕುಂತಳದ ಅರಸನು ತನ್ನ ರಾಜ್ಯವನ್ನು ಚಂದ್ರಹಾಸನಿಗೊಪ್ಪಿಸಿ, ಮಗಳು ಚಂಪಕಮಾಲಿನಿಯನ್ನು ಗಾಂಧರ್ವ ರೀತಿಯಲ್ಲಿ ಧಾರೆಯೆರೆದು ತಾನು ಅರಣ್ಯವಾಸಕ್ಕೆಂದು ಹೊರಡುತ್ತಾನೆ.

ನಂತರದಲ್ಲಿ ಚಂದ್ರಹಾಸನೂ ಚಂಪಕಮಾಲಿನಿಯೂ ವೈಭವದ ಮೆರವಣಿಗೆಯಲ್ಲಿ ಬರುತ್ತಿರಲು, ಇದ್ದಕ್ಕಿದ್ದಂತೆ ಈ ಉತ್ಸವದ ಧ್ವನಿಯಿದೇನೆಂದು ತನ್ನ ಮನೆಯಿಂದ ಹೊರಗೆ ಬಂದ ಮಂತ್ರಿ ದುಷ್ಟಬುದ್ಧಿಯು ಇವರನ್ನು ನೋಡುತ್ತಾನೆ. ಅವರಿಬ್ಬರೂ ಅವನಿಗೆ ನಮಸ್ಕರಿಸಲು ಬಂದಾಗ "ಅಲ್ಲಯ್ಯ ಚಂದ್ರಹಾಸ, ವಂಶದ ಆಚಾರದಂತೆ ಒಬ್ಬನೇ ಚಂಡಿಕಾಲಯಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಾ ಎಂದು ಕಳುಹಿಸಿದರೆ ಇದೇನು ಮಾಡಿದೆ?" ಎಂದು ಕೇಳುತ್ತಾನೆ (ತನ್ನ ಕೋಪ-ಅಸಮಾಧಾನವನ್ನು ತೋರ್ಪಡಿಸದೆ).
ಅದಕ್ಕೆ ಚಂದ್ರಹಾಸನು ನಡೆದದ್ದನ್ನು ತಿಳಿಸಿ, ತನ್ನ ಬದಲಿಗೆ ಮದನನು ಆಲಯಕ್ಕೆ ಹೋದ ವಿಚಾರವನ್ನು ತಿಳಿಸುತ್ತಾನೆ.

ಹಮ್ಮೈಸಿದಂ ದುಷ್ಟಬುದ್ಧಿ ಮನದೊಳಗಳಿಯ
ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ
ಯಮ್ಮಾಡಿ ಮಾನವಂ ಬಾಳ್ದಪನೆ ದೀಪಮಂ ಕೆಡಿಸುವ ಪತಂಗದಂತೆ
ನಮ್ಮುಪಾಯವೆ ನಮಗಪಾಯಮಂ ತಂದುದೆಂ
ದೊಮ್ಮೆ ನಿಜಸದನಮಂ ಪೋಕ್ಕಾರುಮರಿಯದವೊ
ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಂಟೆಯಂ ಕತ್ತಲೆಯೊಳು.

ದುಷ್ಟಬುದ್ಧಿಗೆ ಚಂದ್ರಹಾಸನರುಹಿದ ವಿಷಯವನ್ನು ಕೇಳಿ ಆಘಾತವಾಗುತ್ತದೆ. ಪರರಿಗೆ ಹಿಂಸೆಯನ್ನು ಮಾಡಲೆಂದೆಳಸಿದವನಿಗೆ ಒಳ್ಳೆಯದಾಗುವುದೇ? ತಾವು ಮಾಡಿದ ತಪ್ಪು/ಸಂಚು ತಮಗೇ ಅಪಾಯವನ್ನು ತಾರದೇ ಇರುತ್ತದೆಯೇ?
ವಿಷಯವನ್ನು ತಿಳಿದ ದುಷ್ಟಬುದ್ಧಿಯು ಅತಿ ದುಃಖದಿಂದ ಕತ್ತಲೆಯಲ್ಲಿ - ಚಂಡಿಕಾಲಯದ ಕಡೆಗೆ - ಹುಚ್ಚನಂತೆ ಓಡುತ್ತಾನೆ.
ಹಾಗೆ ಅವನು ಬರುವುದನ್ನು ಕಂಡು ಕಾಡಿನ ಹಾದಿಯಲ್ಲಿದ್ದ ಭೂತ ಪ್ರೇತಗಳೂ ಇವನ ಆ ಅವತಾರವನ್ನು ಕಂಡು ಆಶ್ಚರ್ಯಗೊಳ್ಳುತ್ತವೆ.
ಹೀಗೆ ದುಷ್ಟಬುದ್ಧಿಯು ಆಲಯವನ್ನು ಸೇರಿದಾಗ ಅವನು ಅಲ್ಲಿ ಸತ್ತುಬಿದ್ದ ತನ್ನ ಮಗ ಮದನನ್ನು ಕಾಣುತ್ತಾನೆ. ದುಃಖದಿಂದಲೂ, ತನ್ನ ದುರ್ಬುದ್ಧಿಯಿಂದ - ಅಮಾಯಕನಾದ ತನ್ನ ಮಗನಿಗೆ - ಒದಗಿದ ದುಸ್ಥಿತಿಯನ್ನು ಕಂಡು ಸೈರಿಸಲಾರದೆ ದುಷ್ಟಬುದ್ಧಿಯು ಆಲಯದ ಕಂಬಕ್ಕೆ ತಲೆಯೊಡೆದುಕೊಂಡು ತಾನೂ ಸಾವನ್ನಪ್ಪುತ್ತಾನೆ.
------------------------------------------------------------------------------------------------
ಮರುದಿನ ಆ ದೇವಾಲಯಕ್ಕೆ ಪೂಜೆಗೆಂದು ಬಂದ ಪೂಜಾರಿಯು ಇವರಿಬ್ಬರ ಶವಗಳನ್ನು ಕಂಡು ಕೂಡಲೇ ಚಂದ್ರಹಾಸನಲ್ಲಿಗೆ ಹೋಗಿ ಈ ಸಂಗತಿಯನ್ನರುಹುತ್ತಾನೆ.
ವಿಷಯ ತಿಳಿದ ಚಂದ್ರಹಾಸನು ಆ ಕೂಡಲೇ ದೇವಾಲಯಕ್ಕೆ ಬಂದು ಅಲ್ಲಿನ ಘೋರ ದೃಶ್ಯವನ್ನು ಕಂಡು ಮರುಗುತ್ತಾನೆ. ತನ್ನಿಂದಾದ ಯಾವ ತಪ್ಪಿಗೆ ಇವರಿಬ್ಬರಿಗೆ ಈ ಸ್ಥಿತಿ ಬಂದೊದಗಿತೋ ಎಂದು ದುಃಖಿಸುತ್ತ ಅವರಿಗೆ ಪುನರ್ಜೀವವನ್ನು ಕೊಡಲೆಂದು ದೇವಿಯನ್ನು ಪ್ರಾರ್ಥಿಸುತ್ತಾನೆ. ಕಡೆಗೆ ತನ್ನನ್ನು ತಾನೇ ಕೊಂದುಕೊಂಡು ದೇವಿಗೆ ಪೂರ್ಣಾಹುತಿಯನ್ನು ನೀಡುವುದಾಗಿ ನಿಶ್ಚೈಸಿ ಚಂದ್ರಹಾಸನು ತನ್ನ ಖಡ್ಗವನ್ನು ಹಿರಿಯುವ ವೇಳೆಗೆ ದೇವಿಯು ಪ್ರತ್ಯಕ್ಷಳಾಗುತ್ತಾಳೆ. ಅವನ ಬೇಡಿಕೆಯಂತೆಯೇ ಅವರಿಬ್ಬರಿಗೂ ಮತ್ತೆ ಪ್ರಾಣ ಬರುವಂತೆ ಮಾಡಿ, ಚಂದ್ರಹಾಸನಿಗೆ ಕೇಳಿದ ವರಗಳನ್ನಿತ್ತು ದೇವಿಯು ಅಂತರ್ಧಾನಳಾಗುತ್ತಾಳೆ.

ಭೂವಲಯಕಿದು ಪೊಸತು ಮರಣಮಾದೊಡೆ ಮತ್ತೆ
ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು
ಕೈವಾರಿಸುವ ನಿಖಿಳ ಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು
"ಕಾವರಾರ್ ಕೊಲ್ವರಾರಳಿವರಾರುಳಿವರಾರ್
ಭಾವಿಪೊಡೆ ವಿಷ್ಣು ಮಾಯಾಮಯಮಿದೆಂದರಿದು
ನೀವೆಲ್ಲರುಂ ಕೃಷ್ಣಭಜನೆಗೈದಪುದೆಂದು" ಸಾರಿದಂ ಬೇಡಿಕೊಳುತ.

"ಹೀಗೆ ಎಲ್ಲವೂ ಸುಖಾಂತವಾಯಿತು. ಮುಂದೆ ಚಂದ್ರಹಾಸನು ಹರಿಭಕ್ತಿಯಿಂದ ರಾಜ್ಯಪಾಲನೆಗೈಯುತ್ತಿದ್ದ. ನಂತರದಲ್ಲಿ ಅವನಿಗೆ ಮಕರಧ್ವಜ ಹಾಗು ಪದ್ಮಾಕ್ಷ ಎಂಬ ಮಕ್ಕಳು ಜನಿಸಿದರು. ಈಗ ಚಂದ್ರಹಾಸನಿಗೆ ಮುನ್ನೂರು ವರುಷಗಳು."

"ಬುದ್ಧಿಪೂರ್ವಕಮಿಲ್ಲದಿಹ ಬಾಲಕರಿಗೆ ಪರಿ
ಶುದ್ಧ ಸಾಲಗ್ರಾಮಶಿಲೆಯ ಸಂಸರ್ಗದಿಂ
ದುದ್ಧತದ ಸಾಮ್ರಾಜ್ಯಪದವಿ ಕೈಸಾರ್ದುದೆನಲಿನ್ನು ಬೇಕೆಂದು ಬಯಸಿ
ಶ್ರದ್ಧೆಯಿಂ ಪ್ರತಿದಿನದೊಳರ್ಚಿಸುವ ನರನಾವ
ಸಿದ್ಧಿಯಂ ಪಡೆದಪನೊ ತನಗದರ ಪುಣ್ಯದಭಿ
ವೃದ್ಧಿಯಂ ಬಣ್ಣಿಸುವೊಡರಿದೆಂದು" ಫಲುಗುಣಂಗಾ ನಾರದಂ ಪೇಳ್ದನು.

ಹೀಗೆ ಚಂದ್ರಹಾಸನ ಕಥೆಯನ್ನು ನಾರದ ಮಹರ್ಷಿಗಳು ಅರ್ಜುನನಿಗೆ ವಿವರಿಸಿ ಹೇಳಿದರು.
ಅರ್ಜುನನಿಗೆ ಈ ಕಥೆಯನ್ನು ಕೇಳಿ ಚಂದ್ರಹಾಸನ ಬಗೆಗೆ ಗೌರವ-ಪ್ರೇಮಗಳುಂಟಾಗುತ್ತವೆ. ಆದರೆ ಅಶ್ವಮೇಧದ ಕುದುರೆಗಳು ಕುಂತಳನಗರದಲ್ಲಿ ಕಟ್ಟಲ್ಪಟ್ಟಿವೆ. ಆದ್ದರಿಂದ ಈಗ ಚಂದ್ರಹಾಸನೊಡನೆ ಯುದ್ಧ ನಡೆಯಲೇಬೇಕಲ್ಲವೇ?
------------------------------------------------------------------------------------------------
ನಗರದ ಹೊರವಲಯದಲ್ಲಿ ತಿರುಗಾಡುತ್ತಿದ್ದ ಯಜ್ಞದ ಕುದುರೆಗಳನ್ನು ಕಂಡು ಪದ್ಮಾಕ್ಷ,ಮಕರಧ್ವಜರು ಅವುಗಳ ಹಣೆಪಟ್ಟಿಯ ಮೇಲೆ ಬರೆದ ವೃತ್ತಾಂತವನ್ನೋದಿಕೊಂಡು ಅವನ್ನಲ್ಲಿಯೇ ಕಟ್ಟಿ ಅರಮನೆಗೆ ಬಂದು ತಂದೆ ಚಂದ್ರಹಾಸನಿಗೆ ತಿಳಿಸುತ್ತಾರೆ. ಚಂದ್ರಹಾಸನು "ಇದೇಕೆ ಹೀಗೆ ಮಾಡಿದಿರಿ, ಭೂಮಿಯೊಳಗೆ ಪ್ರತ್ಯಕ್ಷ ಧರ್ಮದಾಕೃತಿಯೆನಿಸುವ ಯುಧಿಷ್ಟಿರನ ಹಯಗಳನ್ನು ಏಕೆ ತಡೆದಿರಿ? ಈಗ ನಮ್ಮಿಂದ ಅವರ ಯಜ್ಞಕ್ಕೆ ತೊಂದರೆಯಾಗುವುದು ಬೇಡ, ಆ ಕುದುರೆಗಳನ್ನು ರಕ್ಷಿಸಿ ಅರ್ಜುನ-ಕೃಷ್ಣರು ಬಂದಾಗ ಅವರಿಗೆ ಒಪ್ಪಿಸಿ" ಎಂದು ಹೇಳಿ ಕಳುಹಿಸುತ್ತಾನೆ.
ಹಾಗು, ಕೃಷ್ಣಾರ್ಜುನರನ್ನು ಕಾಣುವ ಉತ್ಸುಕತೆಯಿಂದ ಚಂದ್ರಹಾಸನು ನಗರದ ಹೊರವಲಯಕ್ಕೆ ಬಂದು ಅವರಿಗಾಗಿ ಕಾಯುತ್ತಿರುತ್ತಾನೆ.
ಇತ್ತ ಅರ್ಜುನನ ಸೇನೆಯಾದರೋ ಯುದ್ಧಕ್ಕೆ ಸನ್ನದ್ಧವಾಗಿ ಬರುತ್ತಿದೆ.! ಚಂದ್ರಹಾಸನು ಹರಿಯ ದರ್ಶನಾರ್ಥಿಯಗಿದ್ದನೇ ಹೊರತು ಯುದ್ಧಾಪೇಕ್ಷೆ ಅವನಲ್ಲಿರಲಿಲ್ಲ.
ಇದನ್ನರಿತ ಶ್ರೀ ಕೃಷ್ಣನು ಚಂದ್ರಹಾಸನಿಗೆ ತನ್ನ ದಿವ್ಯ ಮಂಗಳರೂಪವನ್ನು ತೋರುತ್ತಾನೆ (ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ ಪೊಂಬಟ್ಟೆಯಂ ತಾಳ್ದು ಕೌಸ್ತುಭವ ಶೋಭಾವಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು....)
ನಂತರದಲ್ಲಿ ಕೃಷ್ಣನು ಅರ್ಜುನನಿಗೆ "ಅಯ್ಯಾ ಅರ್ಜುನ, ಕೇಳು, ಈ ಚಂದ್ರಹಾಸ ನನ್ನ ಪರಮಭಕ್ತ. ಇವನೊಂದಿಗೆ ಯುದ್ಧಕ್ಕೆ ತೊಡಗದೆ ಇವನನ್ನಾಲಂಗಿಸಿ ಸ್ನೇಹದಿಂದಿರು" ಎನ್ನಲು, ಅರ್ಜುನನು "..ಕಾಳಗವೆ ತನಗೆ ಕರ್ತವ್ಯಮೀ | ಪದದೊಳಾಲಿಂಗನಮುಚಿತವಲ್ಲ ವೃದ್ಧನಹನದರಿಂದ ಬೇಕಾದೊಡೀತಂಗೆ ವಂದಿಸುವೆನೆನೆ..."
ಕೃಷ್ಣನು "ತನ್ನ ಕಿಂಕರರ್ಗೆ ಮುದದೊಳೆರಗಿದೊಡೆ, ಮೇಣವರನಪ್ಪಿದೊಡೆ ತಪ್ಪದು ಮಾನವರ್ಗೆ ಕಪಿಲಾ ಗೋ ಸಹಸ್ರ ದಾನದ ಪುಣ್ಯ'ಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಕೇಳೆಂದ"

...... ಬಳಿಕ ಫಲುಗುಣಂ ಕೃಷ್ಣನ ನಿರೂಪಮಂ ಕೈಕೊಂಡು ಹರ್ಷದಿಂದಾಗ ನಿಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂಗೈಯಲು, ಆ ಪೊಡವಿಪತಿ(ಚಂದ್ರಹಾಸ) ನುಡಿದ"ನೆಲೆ ಪಾರ್ಥ ಕದನದಾಳಾಪಮಮಂ ನಿನ್ನೊಡನೆ ಮಾಡಿದೊಡೆ ನೃಪಮುಖಂ ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ರಕ್ಷಣಾರ್ಥಮಾಗಿ"
ಹೀಗೆ ಹೇಳಿ ಚಂದ್ರಹಾಸನು ತನ್ನ ಮಕ್ಕಳು ರಕ್ಷಿಸುತ್ತಿದ್ದ ಯಾಗದ ಕುದುರೆಗಳನ್ನು ತರಿಸಿ ಫಲ್ಗುಣನಿಗೆ ಒಪ್ಪಿಸುತ್ತಾನೆ.
ಮುಂದೆ ಅವರೆಲ್ಲರನ್ನು ತನ್ನ ಅರಮನೆಗೆ ಕರೆದುಕೊಂಡು ಹೋಗಿ ಬಹುವಿಧದಿಂದ ಅರ್ಜುನನ ಪರಿವಾರವೆಲ್ಲವನ್ನೂ ಸತ್ಕರಿಸಿ ಚಂದ್ರಹಾಸನು ತನ್ನ ರಾಜ್ಯವನ್ನು ಕೃಷ್ಣನಿಗೆ ಅರ್ಪಿಸುತ್ತಾನೆ. ಕೃಷ್ಣನಾದರೋ ಅರ್ಜುನನ ಸಮ್ಮತಿಯೊಡನೆ ಆ ರಾಜ್ಯದೊಡೆತನವನ್ನು ವಿಷಯೆಯ(ಚಂದ್ರಹಾಸನ ಹೆಂಡತಿ) ಮಗನಿಗೆ ಕೊಟ್ಟು ಹರಸುತ್ತಾನೆ.

"ಮುಪ್ಪಾದೆನೆಲೆ ಮಗನೆ, ಕೃಷ್ಣದರ್ಶನದಿಂದ
ತಪ್ಪದೆನಗಿನ್ನು ಮೋಕ್ಷದ ಲಾಭಮಸುರಾರಿ
ಗೊಪ್ಪಿಸುವೆನೀ ತನುವನಿವರಧ್ವರಂ ಮುಗಿದ ಬಳಿಕ ವನಕಾಂ ಪೋಪೆನು
ಬಪ್ಪುದಿಲ್ಲದರಿಂದ ನಗರಕರಸಾಗಿ ಸುಖ
ಮಿಪ್ಪುದೆಂ"ದಿರಿಸಿ ನಿಜತನಯರಂ ಶರಧಿಗೆಣೆ
ಯಪ್ಪ ಸೈನಿಕದೊಡನೆ ಪೊರಮಟ್ಟನಾ ಚಂದ್ರಹಾಸನರ್ಜುನನ ಕೂಡೆ.

"ನನಗೆ ವಯಸ್ಸಾಯಿತು. ಯಜ್ಞ ಮುಗಿಯುವವರೆಗೂ ಇವರೊಡನಿದ್ದು ನಂತರ ನಾನು ಅರಣ್ಯವಾಸಕ್ಕೆ ಹೋಗುತ್ತೇನೆ. ಈ ನಗರಕ್ಕೆ ನೀವು ಅರಸರಾಗಿ ಸುಖದಿಂದ ಬಾಳಿ" ಎಂದು ಹರಸಿ ಚಂದ್ರಹಾಸನು ಕೃಷ್ಣಾರ್ಜುನರೊಡನೆ ಹೊರಡುತ್ತಾನೆ.

"ಪುತ್ರಸಂಪದಮಾಯುರಾರೋಗ್ಯಮರಿವು ಶತ
ಪತ್ರನಾಭನ ಭಕ್ತಿ ಧೃಡವಾಗಲೀತನ ಚ
ರಿತ್ರಮಂ ಕೇಳ್ದವರ್ಗೆಂದು" ಹರಿ ವರವನಿತ್ತಾತನಂ ಕೂಡಿಕೊಂಡು
ಸುತ್ರಾಮಸುತನ ಕುದುರೆಗಳೊಡನೆ ತೆರಳ್ದಂ..."


THE END