’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು
ಪಡೆದಿದ್ದ ಕವಿ ರನ್ನನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ. ಹತ್ತನೇ
ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’
ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.
’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ
ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ,
ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ)
ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ
ಹೊಂದಿದ್ದರೂ ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು. ಭೀಮನ ಪರಾಕ್ರಮವನ್ನಷ್ಟೇ ಅಲ್ಲ,
ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ
ಮರುಗುವ ದುರ್ಯೋಧನನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ
ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.
ಮುಂಚೆಯೇ ತಿಳಿಸಿದಂತೆ, ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ
ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ
ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು
ಏಕೆ ಬರೆಯುತ್ತಿರುವುದಾಗಿ ಹೇಳಿಬಿಡುತ್ತಾನೆ.
ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್
ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು
ಮೆಱೆವನಿಱಿವಬೆಡಂಗಂ || ೧.೩೦||
ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ
ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ
ಮಹಾಕವಿ ರನ್ನಂ ||೧.೩೧||
ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ
ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ
ಕವಿರತ್ನನೆಂದೊಡೇವಣ್ಣಿಪುದೋ ||೧.೩೨||
ಮೊದಲೊಳ್ ಬದ್ಧವಿರೋಧದಿಂ
ನೆಗೞ್ದ ಕುಂತೀಪುತ್ರರೊಳ್ ಭೀಮನಂ
ಕದ ಗಾಂಧಾರಿಯ ಪುತ್ರರೊಳ್
ಮೊದಲಿಗಂ ದುರ್ಯೋಧನಂ ಧರ್ಮಯು
ದ್ಧದೊಳಂತಾತನನಿಕ್ಕಿ
ಕೊಂದನದಱಿಂ ಭೀಮಂ ಜಯೋದ್ಧಾಮನೆಂ
ಬುದನೆಂಬಂತಿದು
ವಸ್ತುಯುದ್ಧಮೆನಿಸಲ್ ಪೇೞ್ದಂ ಗದಾಯುದ್ಧಮಂ ||೧.೩೩||
೩೦.
ಬೆಳಗುತ್ತಿರುವ ಒಂದು ದೀಪದಿಂದ ಹಲವಾರು ದೀಪಗಳನ್ನು ಹೊತ್ತಿಸಿಕೊಂಡು ಹೋದರೂ ಅದು ಹೇಗೆ ಕುಗ್ಗದೆ
ಪ್ರಕಾಶಿಸುತ್ತಲೇ ಇರುವುದೋ ಹಾಗೆ ಜಗವೆಲ್ಲ ಬಂದು ಬೇಡಿ ಪಡೆದುಕೊಂಡು ಹೋದರೂ ಇರಿವಬೆಡಂಗನ (ಇದು
ಸತ್ಯಾಶ್ರಯನಿಗೆ ಇದ್ದ ಬಿರುದು) ಸಂಪತ್ತು ಅಕ್ಷಯವಾಗಿಯೇ ಇರುವುದು.
೩೧.
ಹೀಗೆ ಪ್ರಸಿದ್ಧನಾದ ಸತ್ಯಾಶ್ರಯದೇವನನ್ನೇ ಕಥಾನಾಯಕನಾದ ಭೀಮನಿಗೆ ಹೋಲಿಸಿ ಈ ’ಗದಾಯುದ್ಧ’ವೆಂಬ
ಕಾವ್ಯವನ್ನು ಕವಿ ರನ್ನನು ರಚಿಸಿದನು.
೩೨.
ಕೃತಿಯ ಹೆಸರು ಗದಾಯುದ್ಧ,
ಇದಕ್ಕೆ ನಾಯಕ ಸಾಹಸಿಯಾದ ಕಲಿ ಭೀಮ. ಅಲಂಕಾರಯುತವಾದ ಈ ಕೃತಿಯನ್ನು ರಚಿಸಿದವನು
ಕವಿರತ್ನ ರನ್ನನೆಂದಮೇಲೆ ಇದರ ಮಹಿಮೆಯನ್ನು ಏನೆಂದು ಬಣ್ಣಿಸುವುದೋ..!
೩೩.
ಮೊದಲಿನಿಂದಲೂ ಬದ್ಧವಿರೋಧವನ್ನು ಹೊಂದಿದ್ದ - ಕುಂತೀಪುತ್ರರಲ್ಲಿ ಮಿಗಿಲಾದ ಭೀಮ, ಹಾಗೂ ಗಾಂಧಾರಿಯ ಮಕ್ಕಳಲ್ಲಿ
ಮೊದಲನೆಯವನಾದ ದುರ್ಯೋಧನನೂ - ಎದುರೆದುರಾಗಿ ನಡೆಸಿದ ಧರ್ಮಯುದ್ಧದಲ್ಲಿ ಭೀಮಸೇನನು
ದುರ್ಯೋಧನನನ್ನು ಹೊಡೆದು ಕೊಂದು ವಿಜಯವನ್ನು ಹೊಂದಿದನು. ಆ ಯುದ್ಧ ಪ್ರಸಂಗವನ್ನೇ ಕಥಾವಸ್ತುವನ್ನಾಗಿಸಿಕೊಂಡು
ಈ ’ಗದಾಯುದ್ಧ’ವನ್ನು ಕವಿ ರನ್ನನು ರಚಿಸಿದ್ದಾನೆ.
ಹೀಗೆ
ರನ್ನನು ತಾನು ಗದಾಯುದ್ಧವನ್ನು ರಚಿಸುತ್ತಿರುವ ಹಿನ್ನೆಲೆಯನ್ನು ವಿವರಿಸುತ್ತಾನೆ.
ರನ್ನನಿಗೆ
ತನ್ನ ಕಾವ್ಯರಚನಾ ಸಾಮರ್ಥ್ಯದ ಬಗೆಗೆ ಅಪಾರವಾದ ಹೆಮ್ಮೆಯೂ, ಆತ್ಮವಿಶ್ವಾಸವೂ ಇದೆ. ಅದು ಎಷ್ಟರ ಮಟ್ಟಿಗೆ
ಎಂದರೆ,
ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು
ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್
ಪರೀಕ್ಷಿಪಂಗೆಟೆರ್ದೆಯೇ ||೧.೪೪||
ಕವಿಯು
ಹೀಗೆ ಹೇಳುತ್ತಾನೆ "ರತ್ನಪರೀಕ್ಷಕನು ನಾನೆಂದು ಆದಿಶೇಷನ ಹೆಡೆಯ ಮೇಲಿನ ರತ್ನವನ್ನೂ, ಕೃತಿರತ್ನಪರೀಕ್ಷಕನು ನಾನೆಂದು
ರನ್ನನ ಕೃತಿರತ್ನವನ್ನೂ ಪರೀಕ್ಷಿಸಿ ಬೆಲೆಗಟ್ಟುವೆನೆಂಬುವವನಿಗೆ ಧೈರ್ಯವೆಂತಹುದು?(ಅಂದರೆ ಯಾರಾದರೂ ಅಂತಹ ಸಾಹಸಕ್ಕೆ ಕೈಹಾಕಿಯಾರೇ..? ಎಂಬ
ಅರ್ಥದಲ್ಲಿ)"
ಕೃತಿ
ಹಾಗೂ ಕವಿಯ ಬಗೆಗೆ ಇದಿಷ್ಟು ಪರಿಚಯ ಸಾಕು. ಇನ್ನು ಕಥೆಯನ್ನು ಪ್ರಾರಂಭಿಸಬಹುದಲ್ಲವೇ?
=============================================================================================
ಕುರುಕ್ಷೇತ್ರ
ಯುದ್ಧದಲ್ಲಿ ಭೀಮನ ಪರಾಕ್ರಮದಿಂದ ಶತ್ರುಸೈನ್ಯವು ನಲುಗಿಹೋಯಿತು. ದುರ್ಯೋಧನನನ್ನುಳಿದು ಕೌರವರೆಲ್ಲರೂ
ಹತರಾದರು. ದುರ್ಯೋಧನನ ಕಥೆಯೂ ಮುಗಿಯಿತೆಂದರೆ ಕುರುಕ್ಷೇತ್ರದ ಅಂಕಕ್ಕೆ ತೆರೆಬೀಳುತ್ತದೆಯಷ್ಟೆ.
ಆದರೆ
ಆ ಸಮಯಕ್ಕೆ ದ್ರೌಪದಿಗೆ ಒಂದು ಸಂಶಯ ಬರುತ್ತದೆ - ’ಎಲ್ಲಿ ಧೃತರಾಷ್ಟ್ರ, ಭೀಷ್ಮ ಮುಂತಾದವರ ಮಾತಿಗೆ ಒಪ್ಪಿ
ಯುಧಿಷ್ಟಿರನು ದುರ್ಯೋಧನನೊಡನೆ ಸಂಧಿ ಮಾಡಿಕೊಂಡುಬಿಡುತ್ತಾನೋ!" ಎಂದು.
ಹಾಗೇನಾದರೂ
ಆದರೆ ತನಗಾದ ಹಾನಿಯೆಲ್ಲಕ್ಕೆ ಪ್ರತೀಕಾರವಾದಂತಾಗುವುದಿಲ್ಲ.. ಯಾವುದೇ ಕಾರಣಕ್ಕೂ ಸಂಧಿಯಾಗಕೂಡದು
ಎಂದು ಆಕೆಯ ಅಭಿಪ್ರಾಯ. ಅದನ್ನು ತಿಳಿಸಲೆಂದೇ ಆಕೆ ತನ್ನ ಇಬ್ಬರು ಸೇವಕಿಯರೊಡಗೂಡಿ ಭೀಮಸೇನನ
ಬಳಿಗೆ ಬರುತ್ತಾಳೆ.
ಖಳದುಶ್ಶಾಸನವಕ್ಷ
ಸ್ಥಳೋಚ್ಚಲತ್ಕೃಷ್ಣರಕ್ತಜಲದಿಂ
ಕೋಪಾ
ನಳನಂ ಮೞ್ಗಿಸದಿನ್ನುಂ
ಗಳಗಳಿತಸಕೋಪನಿರ್ಪ
ತೆರದಿಂದಿರ್ದಯ್ ||೧.೫೭||
"ದುಷ್ಟ
ದುಶ್ಶಾಸನನ ಎದೆಯಿಂದ ಚಿಮ್ಮಿದ(ಉಚ್ಚಲ=ಮೇಲಕ್ಕೆ ಚಿಮ್ಮುವ) ರಕ್ತದಿಂದ ನಿನ್ನ
ಕೋಪಾಗ್ನಿಯನ್ನೆಲ್ಲ ನಂದಿಸಿಬಿಟ್ಟೆಯಾ?
ನೀನಾದರೋ ಕೋಪವೆಲ್ಲ ಇಳಿದುಹೋದವಂತೆ ಇರುವೆ".
"ಒಂದು
ವೇಳೆ ಧರ್ಮರಾಯನು ಶತ್ರುಗಳೊಡನೆ ಸಂಧಿ ಮಾಡಿಕೊಳ್ಳಲು ಒಪ್ಪಿಬಿಟ್ಟರೆ ನಿಮಗೆ ಮತ್ತೆ ವನವಾಸವೇ
ಗತಿ. ಇನ್ನು ನಾನಾದರೋ ಬೆಂಕಿಯಲ್ಲೇ ಹುಟ್ಟಿದವಳು,
ಆದ್ದರಿಂದ ಮತ್ತೆ ಬೆಂಕಿಗೆ ಬೀಳುವುದೊಂದೇ ನನಗೆ ಉಳಿಯುವ ದಾರಿ" ಎಂದು
ಮುಂತಾಗಿ ಭೀಮಸೇನನನ್ನು ಮೂದಲಿಸುತ್ತಾಳೆ.
ಹೀಗೆ
ದುಃಖದ ಭರದಲ್ಲಿ ನುಡಿಯುತ್ತಿರುವ ದ್ರೌಪದಿಯ ಮಾತುಗಳು ಭೀಮಸೇನನಲ್ಲಿ ಆಕೆಯ ಬಗೆಗೆ
ಅನುಕಂಪವನ್ನುಂಟು ಮಾಡುತ್ತವೆ. ಆಕೆ ಹಾಗೆ ನುಡಿಯಲು ಕಾರಣವೇನೆಂದು ಆತ ಬಲ್ಲ. ಅಂದು ದ್ಯೂತದಲ್ಲಿ
ತಾವು ಸೋತಾಗ, ತಮ್ಮೆಲ್ಲರ
ಕಣ್ಣೆದುರಿನಲ್ಲಿಯೇ ಆಕೆಗಾದ ಅಪಮಾನದ ಉರಿಯು ಇನ್ನೂ ಜೀವಂತವಾಗಿರಲು ಆಕೆಗೆ ಕೋಪವೂ ಮನಸ್ತಾಪವೂ
ಕೆರಳದೇ ಇದ್ದೀತೆ?
ಭೀಮನಿಗೂ
ಇನ್ನೂ ಕೋಪವು ತೀರಿಲ್ಲ. ತನ್ನ ಬದ್ಧವೈರಿಯಾದ ದುರ್ಯೋಧನನು ಮುಗಿಯುವ ಮುನ್ನ ಆ ಕೋಪವು
ಶಮನವಾದೀತೇ?
"ಗಳಿಯಿಸುತಿರೆ
ಕಬರಿಭರಂ
ಗಳಿಯಿಸುತಿರೆ ನಯನವಾರಿ
ನಿನ್ನಾನನದಿಂ
ನಳಿನಾನನೆ ನೀನಿರೆ ಕುರು
ಕುಳಾಂತಕಂ ಗಳಿತಕೋಪನೇ
ಕಲಿಭೀಮಂ" || ೧.೬೩||
"ನೀನಗ್ನಿಪುತ್ರಿಯಯ್
ಪವ
ಮಾನತನೂಭವನೆ ನಾನಣಂ ಕೂಡೆ
ಸುಸಂ
ಧಾನಮರಿನೃಪರೊಳೆಂತನ
ಲಾನಿಲಸಂಯೋಗಮುರಿಪದಿರ್ಕುಮೆ
ಪಗೆಯಂ" || ೧.೬೬||
ಬಿಚ್ಚಿದ
ನಿನ್ನ ಮುಡಿಯು ಹೀಗೇ ಇಳಿಬಿದ್ದಿರಲು,
ನಿನ್ನ ಕಂಗಳಿಂದ ನಿಲ್ಲದೆ ಕಣ್ಣೀರು ಸುರಿಯುತ್ತಿರಲು, ಓ ಕಮಲಮುಖಿಯೆ, ಕುರುಕುಲಾಂತಕನೆನಿಸಿದ ನಾನು ಗಳಿತ ಕೋಪನೇ
ಹೇಳು?(೬೩)
ನೀನು
ಅಗ್ನಿಯಲ್ಲಿ ಜನಿಸಿದವಳು,
ನಾನು ವಾಯುವಿನ ಪುತ್ರ(ಕುಂತಿಗೆ ವಾಯುವಿನಿಂದ ಜನಿಸಿದವನು). ಹೀಗಿರಲು,
ನಾವಿಬ್ಬರೂ ಕೂಡಿರಲು ಶತ್ರುಗಳೊಡನೆ ಸಂಧಾನ ಹೇಗೆ ಸಾಧ್ಯವಾಗುತ್ತದೆ?
(ನಲ+ಅನಿಲ+ಸಂಯೋಗಂ+ಉರಿಪದಿರ್ಕುಮೆ
ಪಗೆಯಂ) ಅಗ್ನಿ ಹಾಗು ವಾಯುವಿನ ಸಂಯೋಗವು ಹಗೆಗಳನ್ನು ಸುಡದೇ ಇದ್ದೀತೆ?(ಹಗೆಯು ಸುಟ್ಟು ಬೂದಿಯಾಗದೆ
ಇದ್ದೀತೆ) (೬೬)
ಹೀಗೆ
ನಾನಾ ಮಾತುಗಳಿಂದ ದ್ರೌಪದಿಯನ್ನು ಸಂತೈಸಿ,
ಯಾವುದೇ ಕಾರಣಕ್ಕೂ ಸಂಧಿಯಾಗದಂತೆ, ಒಂದು ವೇಳೆ
ಧರ್ಮರಾಯನು ಸಂಧಿಗೆ ಒಪ್ಪಿದರೂ, ಅವನ ಮಾತನ್ನು ಮೀರಿಯಾದರೂ ಆ ದುಷ್ಟ
ದುರ್ಯೋಧನನನ್ನು ತಾನು ಕೊಲ್ಲುವುದಾಗಿ ಭೀಮನು ದ್ರೌಪದಿಗೆ ಮಾತುಕೊಡುತ್ತಾನೆ. ಆ ಮಾತುಗಳಿಂದ
ಸಮಾಧಾನಗೊಂಡ ದ್ರೌಪದಿಯು ಅಲ್ಲಿಂದ ನಿರ್ಗಮಿಸುತ್ತಾಳೆ.
=============================================================================================
ಇತ್ತ, ದುರ್ಯೊಧನನು ತನ್ನವರನ್ನೆಲ್ಲ ಕಳೆದುಕೊಂಡು ವ್ಯಾಕುಲಗೊಂಡಿದ್ದಾನೆ. ಹತ್ತಿರದಲ್ಲೇ ಸಂಜಯನೂ ಇದ್ದಾನೆ. ಸಂಜಯನು ರಣರಂಗದಲ್ಲಿ ಭೀಮಾರ್ಜುನರ ಸಾಹಸಗಳನ್ನು ವರ್ಣಿಸಿ ಹೆಳುತ್ತಿದ್ದರೆ ದುರ್ಯೋಧನನಿಗೆ ತಮ್ಮ ಪಕ್ಷದವನೇ ಆದರೂ ಶತ್ರುಗಳನ್ನು ಹಾಡಿ ಹೊಗಳುತ್ತಿದ್ದಾನಲ್ಲ ಎಂದು ಸಂಜಯನ ಮೇಲೆ ಕೋಪವೂ, ಇಷ್ಟೆಲ್ಲ ಹಾನಿಯಾದರೂ ತಾನಿನ್ನೂ ಅದಕ್ಕೆ ಪ್ರತೀಕಾರವನ್ನು ಕೈಗೊಳ್ಳಲಿಲ್ಲವೆಂದು ಪಾಂಡವರ ಬಗೆಗೆ ರೋಷವುಂಟಾಗುತ್ತದೆ. ತನ್ನವರೆಲ್ಲ(ದ್ರೋಣ, ಭೀಷ್ಮ, ಕರ್ಣ, ದುಶ್ಶಾಸನ, ಜಯದ್ರಥ ಮುಂತಾದ ವೀರರು) ತೀರಿಹೋದರೂ ಏನು, ತಾನೊಬ್ಬನೇ ಯುದ್ಧ ಮಾಡಿ ಪಾಂಡವರನ್ನು ಸದೆಬಡಿಯುತ್ತೇನೆಂದು ಹೊರಡುತ್ತಾನೆ.
ಸಂಜಯನು
ಅವನನ್ನು ತಡೆದು "ಬಲರಾಮ,
ಅಶ್ವತ್ಥಾಮರು ಇನ್ನೂ ಇದ್ದಾರೆ. ಅಲ್ಲದೆ ಕೃಪ, ಕೃತವರ್ಮರೂ
ಇದ್ದಾರೆ. ಇವರೆಲ್ಲ ಬರುವವರೆಗೂ ಕಾದು ಈ ನಾಲ್ವರಲ್ಲಿ ಯಾರಾದರೊಬ್ಬರಿಗೆ ವೀರಪಟ್ಟವನ್ನು ಕಟ್ಟಿ
ಸೇನಾಪತ್ಯಾಭಿಷೇಕವನ್ನು ಮಾಡಿ ನಂತರ ಯುದ್ಧ ಹೂಡಿ ವೈರಿಗಳನ್ನು ಗೆಲ್ಲು..." ಎಂದು ಸಲಹೆ
ಕೊಡುತ್ತಾನೆ. ಅದಕ್ಕೆ ದುರ್ಯೋಧನನು :
ಕಾನೀನಂ ದ್ರೋಣ ನದೀ
ಸೂನುಗಳೞಿದಿಂಬೞಿಕ್ಕೆ
ಪೆಱರೆನಗಿಲ್ಲಂ
ದಾನೆ ಗಳಿತಾಶ್ರುಜಲದಿಂ
ಸೇನಾಪತ್ಯಾಭಿಷೇಕಮಂ
ಮಾಡಿದಪೆಂ ||೩.೬೬||
"ಕರ್ಣ(ಕಾನೀನ), ದ್ರೋಣ, ಭೀಷ್ಮ(ನದೀ ಸೂನು) ಈ ಮೂವರೂ ಅಳಿದ ಬಳಿಕ ನನಗೆ ಯಾರೂ ಇಲ್ಲವಾದರು. ಈಗಿನ್ನು ನನ್ನ
ಕಣ್ಣೀರಿನಿಂದ ನನಗೆ ನಾನೇ ಸೇನಾಪತ್ಯಾಭಿಷೇಕ ಮಾಡಿಕೊಳ್ಳುತ್ತೇನೆ." (ಈ ಎಲ್ಲರ ಸಾವು ದುರ್ಯೋಧನನಿಗೆ ಅತೀವ ನೋವು ಉಂಟು ಮಾಡಿದ್ದುದು ದುರ್ಯೋಧನನ
ಮಾತುಗಳಲಲ್ಲಿ ವ್ಯಕ್ತವಾಗುತ್ತದೆ. ಅದರಲ್ಲಿಯೂ ಕರ್ಣ ದುಶ್ಶಾಸನರ ಸಾವು...!)
"ಕರ್ಣ-ದುಶ್ಶಾಸನರಿಬ್ಬರೂ
ನನಗೆ ಎರೆಡು ತೋಳು, ಎರೆಡು
ಕಣ್ಣುಗಳಂತಿದ್ದರು. ಅವರಿಬ್ಬರೇ ತೀರಿದ ಬಳಿಕ ನಾನಿನ್ನು ಮನುಷ್ಯನಾಗಿ ಬಾಳಬಹುದೇ?"
ಎಂದು ಪ್ರಲಾಪಿಸುತ್ತಾನೆ ದುರ್ಯೋಧನ.
"ಎನಗೆ ಮನಮಿಂದು
ಶೂನ್ಯಂ
ಮನೆ ಶೂನ್ಯಂ ಬೀಡು
ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು
ದುಶ್ಶಾ
ಸನನಿಲ್ಲದೆ ಕರ್ಣನಿಲ್ಲದೆ
ನಾನೆಂತಿರ್ಪೆನ್" ||೩.೬೯||
"ನನಗಿಂದು
ಮನಸ್ಸು ಶೂನ್ಯ, ಮನೆ
ಶೂನ್ಯ, ಪಾಳಯವು ಶೂನ್ಯ.. ಈಗ ಈ ಭೂಮಿಯೆಲ್ಲವೂ ಶೂನ್ಯವಾಗಿದೆ ನನಗೆ.
ಕರ್ಣ-ದುಶ್ಶಾಸನರಿಲ್ಲದೆ ಹೇಗಿರಲಿ ನಾನು" ಎಂದು ನಾನಾ ರೀತಿಯಲ್ಲಿ ತನ್ನ ಮನದ ಅಳಲನ್ನು
ತೋಡಿಕೊಳ್ಳುತ್ತಾನೆ.
"ಧೃತರಾಷ್ಟ್ರ
ಗಾಂಧಾರಿಯರನ್ನು ಒಮ್ಮೆ ಭೇಟಿ ಮಾಡಿ ಅವರನ್ನು ಸಮಾಧಾನಪಡಿಸಬೇಕಾದ ನೀನೇ ಹೀಗೆ ಅಳುತ್ತ ಕೂರುವುದು
ಸರಿಯೆ? ಶೀಘ್ರವೇ
ಅವರನ್ನೊಮ್ಮೆ ಭೇಟಿ ಮಾಡಬಾರದೇ?" ಎಂದು ಸಂಜಯನು ಹೇಳಿದಾಗ,
ದುರ್ಯೋಧನನು
"ಕರ್ಣನನ್ನೂ, ದುಶ್ಶಾಸನನನ್ನೂ,
ಇತರ ಬಾಂಧವರನ್ನೂ ಕೊಲ್ಲಿಸಿದ ನಾನು ನಮ್ಮ ಕುರುಡ ತಂದೆಗೆ ಹಾಗೂ ತಾಯಿ
ಗಾಂಧಾರಿಗೆ ಹೇಗೆ ನನ್ನ ಮುಖ ತೋರಿಸಲಿ?" ಎಂದು ಇನ್ನಷ್ಟು
ದುಃಖಿತನಾಗುತ್ತಾನೆ.
ಹೀಗೆ
ಇವರು ಮಾತನಾಡುತ್ತಿರುವಾಗಲೇ ಧೃತರಾಷ್ಟ್ರನೂ ಗಾಂಧಾರಿಯೂ ದುರ್ಯೋಧನನನ್ನು ಹುಡುಕುತ್ತ ಅಲ್ಲಿಗೇ
ಬರುತ್ತಾರೆ. ಆ ಸಮಯಕ್ಕೆ ದುಃಖಾತಿರೇಕದಿಂದ ದುರ್ಯೋಧನನು ಧಾರಾಕಾರವಾಗಿ ಕಂಬನಿಗರೆಯುತ್ತ ’ಹಾ
ದುಶ್ಶಾಸನ! ಹಾ ಕರ್ಣಾ!’ ಎನ್ನುತ್ತ ಮೂರ್ಛೆ ಹೊಗುತ್ತಾನೆ.
ಇದನ್ನು
ಕೇಳಿ ಧೃತರಾಷ್ಟ್ರ-ಗಾಂಧಾರಿಯರು ದುರ್ಯೋಧನನೂ ಅಸುನೀಗಿದನೆಂದೇ ತಿಳಿದು ಅಳಲು ಶುರು
ಮಾಡುತ್ತಾರೆ. ಆಗ ಸಂಜಯನು "ಕರ್ಣ ದುಶ್ಶಾಸನಾದಿಗಳ ಸಾವನ್ನು ನೆನೆದು ಶೋಕವುಕ್ಕಿ ನಿಮ್ಮ
ಮಗನು ಮೂರ್ಛೆ ಹೊಗಿದ್ದಾನೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅವನು ಎಚ್ಚರಗೊಳ್ಳುವನು. ನಿಮ್ಮ
ಪ್ರಲಾಪವನ್ನು ನಿಲ್ಲಿಸಿ ಸಮಾಧಾನ ಹೊಂದಿ.." ಎಂದು ಅವರನ್ನು ಸಮಾಧಾನ ಪಡಿಸುತ್ತಾನೆ.
ಕುರುಕುಲಚೂಡಾಮಣಿ ನಿಜ
ಗುರುಗಳ ನಯನಾಂಬು ತಳಿವ
ಜಲಮಾಗಿರೆ ತ
ದ್ಗುರುಜನದೀರ್ಘೋಚ್ಛಾಸಮೆ
ಪರಿವೀಜನಮಾಗೆ
ಮೂರ್ಛೆಯಿಂದೆೞ್ಚತ್ತಂ ||೩.೮೪||
ತನ್ನ
ತಂದೆ-ತಾಯಿಯರ ಕಣ್ಣೀರೇ ತಳಿವ(ಚಿಮುಕಿಸಿದ) ಜಲವಾಗಿ,
ಅವರ ನಿಟ್ಟುಸಿರೇ ಬೀಸಣಿಗೆಯಾಗಿ(ಪರಿವೀಜನ) ಪರಿಣಮಿಸಿ ಅದರಿಂದ ದುರ್ಯೋಧನನು
ಎಚ್ಚೆತ್ತನು.
(ಮುಂದುವರೆಯುವುದು...)
ಧನ್ಯವಾದಗಳು ತುಂಬಾ ಚೆನ್ನಾಗಿದೆ. ಹಗೆ ಎಂದರೆ ಶತ್ರು ಎನ್ನುವ ಅರ್ಥದಲ್ಲಿ ಯಕ್ಷಗಾನ ಕಾವ್ಯದಲ್ಲಿ ಬಳಸಲಾಗುತ್ತದೆ.
ReplyDeletepleas continue story
ReplyDeleteContinue please
Deletepleas continue story
ReplyDeletegoood and evergeern
ReplyDeleteVery happy
ReplyDeleteತುಂಬಾ ಸೊಗಸಾಗಿದೆ..
ReplyDeleteಭೀಮ ದುರ್ಯೋಧನರ ಗದಾಯುದ್ಧ ಸನ್ನಿವೇಶವು ರನ್ನನ ಕಾವ್ಯದಲ್ಲಿ ಹೇಗೆ ಚಿತ್ರಿತವಾಗಿದೆ?
ReplyDelete