Monday, 14 July 2014

ಬ್ರಹ್ಮಶಿವ - ಸಮಯ ಪರೀಕ್ಷೆ : ಪರಿಚಯ

"ಕವಿರಾಜಮಾರ್ಗ"ವೆಂಬ ಕಾವ್ಯ ಮೀಮಾಂಸೆಯನ್ನು ಕುರಿತಾದ ಕೃತಿಯೊಂದರಿಂದ ಮೊದಲಾಗುವ ಕನ್ನಡ ಸಾಹಿತ್ಯ ಚರಿತ್ರೆಯು ಹಲವಾರು ವೈವಿಧ್ಯಮಯ ಕೃತಿರತ್ನಗಳಿಂದ ಸಂಪದ್ಭರಿತವಾಗಿದೆ. ಹೀಗೆ ವೈವಿಧ್ಯತೆಯಿಂದ ಕೂಡಿದ ನಮ್ಮ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಪ್ರಾಚೀನ ಜೈನಕವಿಗಳು ನೀಡಿರುವ ಕೊಡುಗೆ ಅಪಾರ. ಕವಿರಾಜಮಾರ್ಗದ ಕರ್ತೃವಾದ ಶ್ರೀವಿಜಯ*ನಾದಿಯಾಗಿ, ಪಂಪ, ರನ್ನ, ಪೊನ್ನ, ಜನ್ನ ಮೊದಲಾದ ಜೈನಕವಿಗಳು ಕನ್ನಡ ಸರಸ್ವತಿಯ ಮಕುಟಕ್ಕೆ ಅನರ್ಘ್ಯವಾದ ಕೃತಿರತ್ನಗಳನ್ನರ್ಪಿಸಿ ಪುನೀತರಾಗಿದ್ದಾರೆ. (*ಕವಿರಾಜಮಾರ್ಗದ ಕರ್ತೃ ಶ್ರೀವಿಜಯನೆಂಬ ಜೈನಕವಿ ಎಂಬ ವಾದವಿದೆ)
ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನಕವಿಗಳು ೫೨೦ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ನಮಗೆ ಈಗ ಅರ್ಧದಷ್ಟು ಕೃತಿಗಳು ಲಭ್ಯವಿದೆ ಎಂದುಕೊಂಡರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯವೆನಿಸುತ್ತದೆ. ಮಹಾಕಾವ್ಯಗಳಿಂದ ಹಿಡಿದು ಮುಕ್ತಕಗಳವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದ ವರೆಗೆ, ಜನಪದ ಕಥೆಗಳಿಂದ ಹಿಡಿದು ವಿಡಂಬನ ಸಾಹಿತ್ಯದವರೆದೂ ಜೈನ ಸಾಹಿತ್ಯದ ಹರಹು ವ್ಯಾಪಿಸಿಕೊಂಡಿದೆ.

ಇವುಗಳ ಪೈಕಿ, "ಸಮಯ ಪರೀಕ್ಷೆ" ಎಂಬ ತನ್ನ ವಿಡಂಬನ ಕಾವ್ಯವೊಂದರಿಂದ ಕನ್ನಡ ಕವಿ ಚರಿತ್ರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿರುವ ಕವಿ ನಮ್ಮ ಬ್ರಹ್ಮಶಿವ!

ಕವಿ ಬ್ರಹ್ಮಶಿವನನ್ನು ಕುರಿತು:

ಸುಮಾರು ಹನ್ನೆರಡನೆಯ ಶತಮಾನದಲ್ಲಿ ಜೀವಿಸಿದ್ದ ಬ್ರಹ್ಮಶಿವನ ಪೂರ್ವಿಕರು ಮುಂಚೆ ಶೈವಬ್ರಾಹ್ಮಣರಾಗಿದ್ದರು ಎಂದು ಅವನ ಕೃತಿಯಿಂದ ತಿಳಿದುಬರುತ್ತದೆ.
ಇವನ ಹೆಸರು ಈ ಗ್ರಂಥದ(ಸಮಯ ಪರೀಕ್ಷೆ) ಶರೀರದಲ್ಲಿ ಬ್ರಹ್ಮ/ಬೊಮ್ಮ ಎಂದೂ, ಪ್ರತಿ ಅಧ್ಯಾಯದ ಕೊನೆಯಲ್ಲಿ ಬ್ರಹ್ಮದೇವನೆಂದೂ ಇರುವುದರಿಂದ ಇವನ ಹೆಸರಿನ ಬಗೆಗೆ ಗೊಂದಲವಿದ್ದರೂ, ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇವನು ’ಬ್ರಹ್ಮಶಿವ’ನೆಂದೇ ಪರಿಚಿತನಾಗಿದ್ದಾನೆ. ಈತ ಜೀವಿಸಿದ್ದ ಕಾಲವನ್ನು ಕೃತಿಯ ಒಳಗಿನ ವಿವರಗಳಿಂದಲೂ, ಇತರ ಮೂಲಗಳ ಆಧಾರದಿಂದಲೂ ಸುಮಾರು ೧೧೬೦ ಇರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ.

ಪೊಟ್ಟಳಗೆರೆಯ ಪ್ರಸಿದ್ಧನಾದ ಸಿಂಗರಾಜ ಖ್ಯಾತ ಕವಿ ನಾಗಚಂದ್ರನ(ಅಭಿನವ ಪಂಪ) ಮಗ. ಆ ಸಿಂಗರಾಜನ ಮಗನೇ ಈ ಬ್ರಹ್ಮಶಿವ. ಹುಟ್ಟಿನಿಂದ ಇವನು ವತ್ಸಗೋತ್ರದ ಜೈನಬ್ರಾಹ್ಮಣನಾಗಿದ್ದವನು. ಹೀಗಿರುವಾಗ, ಇವನು ಮನೆ-ಜೈನಬಸದಿಗಳ ನಡುವೆ ಓಡಾಡುತ್ತಲೇ ನಡೆಯುವುದನ್ನೂ, ಸದಾ ಜೈನಾಗಮಗಳನ್ನು ಓದುತ್ತಲೇ ನುಡಿಯುವುದನ್ನೂ ಕಲಿತು ಬೆಳೆದದ್ದು ಸ್ವಾಭಾವಿಕವೇ ಆಗಿದೆ.
ಆದರೂ, ಆ ಕಾಲದಲ್ಲಿ ಒಂದು ಧಾರ್ಮಿಕ ಚಳುವಳಿಯಾಗಿ ರೂಪುಗೊಂಡ ವೀರಶೈವ ಧರ್ಮವು ಮುಂದೆ ಬ್ರಹ್ಮಶಿವನನ್ನು ಆಕರ್ಷಿಸಿದಂತೆ ಕಾಣುತ್ತದೆ. ಆ ಧರ್ಮವನ್ನೊಪ್ಪಿ, ಸ್ವಲ್ಪಕಾಲ ಅದರಂತೆ ನಡೆದುಕೊಂಡು, ಅದು ಹಿತವೆನ್ನಿಸದೆ, ಮತ್ತೆ ತನ್ನ ಹುಟ್ಟಿನ (ಜೈನ)ಧರ್ಮಕ್ಕೆ ಹಿಂತಿರುಗಿದ್ದಾಗಿ ಅವನೇ ಹೇಳಿಕೊಂಡಿದ್ದಾನೆ (ಸಮಯಪರೀಕ್ಷೆ ೧-೫೯).
ಜೈನಧರ್ಮದ ಬಗೆಗೆ ಬ್ರಹ್ಮಶಿವನಿಗಿದ್ದ ಶ್ರದ್ಧೆ ಅಪಾರವಾದದ್ದು. ಅದು ಇವನ ಕೃತಿಯ ವ್ಯಾಪ್ತಿಯುದ್ದಕ್ಕೂ ಕಂಡುಬರುತ್ತದೆ. ಆದರೂ, ಎಲ್ಲೋ ಒಂದು ಕಡೆ 'ತನ್ನ ಧರ್ಮದ ಬಗ್ಗೆ ಅವನಿಗಿದ್ದ ಈ (ಕುರುಡು)ಶ್ರದ್ಧೆಯೇ ಅವನು ಅನ್ಯಧರ್ಮಗಳ ಬಗೆಗೆ ಕಟುವಾಗಿ ನುಡಿಯುವುದಕ್ಕೆ ಕಾರಣವಾಯಿತೋ!' ಎನಿಸದೆ ಇರದು.

"ಸಮಯಪರೀಕ್ಷೆ" ಹಾಗೂ "ತ್ರೈಲೋಕ್ಯಚೂಡಾಮಣಿ ಸ್ತೋತ್ರ" - ಇವೆರೆಡೂ ಬ್ರಹ್ಮಶಿವನಿಂದ ರಚಿತವಾದ ಕೃತಿಗಳು. ’ತ್ರೈಲೋಕ್ಯಚೂಡಾಮಣಿ ಸ್ತೋತ್ರ’ವು ೩೮* ಸ್ತೋತ್ರರೂಪದ ಪದ್ಯಗಳನ್ನೂ, ವೈದಿಕ ಬೌದ್ಧ ಮೊದಲಾದ ಇತರ ಧರ್ಮಗಳ ವಿಡಂಬನೆಯ ಪದ್ಯಗಳನ್ನೂ ಒಳಗೊಂಡ ಒಂದು ಪುಟ್ಟ ಕೃತಿ. ಆದರೆ ಬ್ರಹ್ಮಶಿವನು ಸಾಹಿತ್ಯ ಚರಿತ್ರೆಯಲ್ಲಿ ವಿಶೇಷವಾಗಿ ಉಲ್ಲೇಖನಾರ್ಹನಾಗುವುದು ಅವನ "ಸಮಯ ಪರೀಕ್ಷೆ" ಎಂಬ ಕೃತಿಯಿಂದಲೇ.
(*ಲಭ್ಯವಿರುವ ಪ್ರತಿಗಳಲ್ಲಿ ಪದ್ಯಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ)

ಸಮಯಪರೀಕ್ಷೆ:

ಬ್ರಹ್ಮಶಿವನ ಸಮಯಪರೀಕ್ಷೆಯು ಒಂದು ಅಪರೂಪದ ಕೃತಿ. ಮೂಲತಃ ಇದೊಂದು ವಾದಗ್ರಂಥ. ಆಪ್ತಸ್ವರೂಪನಿರೂಪಣಂ, ಆಪ್ತಾಗಮ ವರ್ಣನಂ ಮುಂತಾದ ಹದಿನೈದು ಅಧಿಕಾರ(ಅಧ್ಯಾಯ)ಗಳು ಈ ಕೃತಿಯಲ್ಲಿವೆ. ಜಿನಧರ್ಮದ ಮಾರ್ಗದಲ್ಲಿ ನಿಶ್ಚಲವಾಗಿ ನಿಂತು, ಅದರ ತಾತ್ವಿಕ ಹಾಗೂ ಬೌದ್ಧಿಕ ನೆಲೆಗಳನ್ನು ಪೋಷಿಸುವ, ಅವುಗಳ ಮೌಲ್ಯವನ್ನು ಪ್ರತಿಪಾದಿಸಿ ಉಪದೇಶಿಸುವ ಸಂಕಲ್ಪ ಈ ಕವಿಯದು. ಜೈನಧರ್ಮದ ಪಾರಮ್ಯವನ್ನು ಸಾರುತ್ತ, ಅನ್ಯಧರ್ಮಗಳಲ್ಲಿ ಇದ್ದಿರಬಹುದಾದ ಲೋಪ-ದೋಷಗಳನ್ನು ಬೊಟ್ಟು ಮಾಡಿ ತೋರಿಸುವುದೇ ಈ ಕೃತಿಯ ಮೂಲ ಉದ್ದೇಶ ಎನ್ನಬಹುದು. ತನ್ನ ಕೃತಿ ಒಂದು ’ರತ್ನ ಕರಂಡಕ’ವೆಂದೂ, ಪರಧರ್ಮೀಯರನ್ನು ದಾರಿಗೆ ತರುವ ಕಾವ್ಯವೆಂದೂ ಅವನು ಹೇಳಿಕೊಂಡಿರುವುದರಿಂದ ಇದು ವಿದಿತವಾಗುತ್ತದೆ.

ಸಮಯಪರೀಕ್ಷೆಗೆ ನಿರ್ದಿಷ್ಟವಾದ ಕಥಾವಸ್ತು ಎಂಬುದಿಲ್ಲ, ಕಾವ್ಯಪರಂಪರೆಯ ಇತರ ಕಾವ್ಯಗಳ ಹಾಗೆ ಇದರಲ್ಲಿ ಅಷ್ಟಾದಶ ವರ್ಣನೆಗಳಿಲ್ಲ. ಯಾವುದೇ ಪ್ರಧಾನ ಪಾತ್ರ, ಸನ್ನಿವೇಶಗಳಿಲ್ಲ. ವಿವಿಧ ಧರ್ಮಗಳ ಸಾರಾಸಾರ ವಿಮರ್ಶೆಯೇ ಇಲ್ಲಿನ ವಸ್ತು. ವಿವಿಧ ರೀತಿಯ ಆಚಾರ-ವಿಚಾರಗಳ ಕಥನವೇ ಇಲ್ಲಿನ ವರ್ಣನೆ. ಆಯಾ ಮತಾನುಯಾಯಿಗಳ ಶೀಲ ಸ್ವಭಾವಗಳ ಪರಿಶೀಲನೆಯೇ ಇದರಲ್ಲಿನ ಪಾತ್ರಚಿತ್ರಣ. ಇನ್ನು, ಈ ಪಾತ್ರಗಳ ನಡೆನುಡಿ ಕುರಿತಾದ ಸಂದರ್ಭ ವಿಶೇಷಗಳೇ ಇಲ್ಲಿಯ ಸನ್ನಿವೇಶಗಳು.

ಮುಖ್ಯವಾಗಿ, ಸಮಯಪರೀಕ್ಷೆ ರಚನೆಗೊಂಡ ಕಾಲವನ್ನು ಪರಿಗಣಿಸಿ ಹೇಳುವುದಾದರೆ - ಆ ಕಾಲಕ್ಕೆ, ಅಂದರೆ ಸುಮಾರು ೧೨ನೇ ಶತಮಾನದ ವೇಳೆಗೆ ವೀರಶೈವ ಧರ್ಮವು ಒಂದು ಸಾಮಾಜಿಕ ಹಾಗೂ ಧಾರ್ಮಿಕ ಚಳುವಳಿಯಾಗಿ ರೂಪುಗೊಂಡು, ಜನರನ್ನು ಹೆಚ್ಚುಹೆಚ್ಚಾಗಿ ತನ್ನತ್ತ ಸೆಳೆಯತೊಡಗಿತ್ತು. ಹಿಂದೆ ಜೈನಧರ್ಮಕ್ಕೆ ಇದ್ದ ರಾಜಾಶ್ರಯವೂ, ಜನರಲ್ಲಿ ಜಿನಧರ್ಮದ ಬಗೆಗೆ ಇದ್ದ ಒಲವೂ ಕ್ರಮೇಣ ಕ್ಷೀಣಿಸತೊಡಗಿತ್ತು (ವೀರಶೈವದಲ್ಲಿನ ಸರಳ ಸೂತ್ರಗಳೂ, ಜಿನಧರ್ಮದಲ್ಲಿನ ಕಠಿಣ ವ್ರತಾನುಷ್ಠಾನವೂ ಅದಕ್ಕೆ ಕಾರಣವಾಗಿದ್ದಿರಬಹುದು). ಹೀಗೆ, ತನ್ನ ಧರ್ಮವು ವಿಷಮಸ್ಥಿತಿಯೊಂದನ್ನು ಎದುರಿಸುತ್ತಿರುವುದನ್ನು ಕಂಡು, ಅದರ ಅಗ್ಗಳಿಕೆಯನ್ನು ಎತ್ತಿಹಿಡಿದು, ಅನ್ಯಧರ್ಮಗಳಲ್ಲಿನ ದೋಷ-ದೌರ್ಬಲ್ಯಗಳನ್ನು ಆವೇಶದಿಂದ ಹೊರಗೆಡಹುವುದಕ್ಕಾಗಿ ಬ್ರಹ್ಮಶಿವನು ಈ ಮೂಲಕ ಪ್ರಯತ್ನಿಸಿದ್ದಾನೆ. ಶೈವ, ವೈಷ್ಣವ, ಬೌದ್ಧವೂ ಸೇರಿದಂತೆ ಇತರ ಮತ-ಧರ್ಮಗಳನ್ನು ಜೈನಧರ್ಮದೊಡನೆ ತುಲನೆ ಮಾಡಿ ಅವುಗಳಲ್ಲಿ ಜೈನಧರ್ಮವೇ ಹೆಚ್ಚು ಎಂದು ಕೃತಿಯ ಉದ್ದಕ್ಕೂ ಪ್ರತಿಪಾದಿಸುತ್ತಾನೆ - ಬ್ರಹ್ಮಶಿವ.

ಹಿಂದೆಯೇ ತಿಳಿಸಿದಂತೆ, ಇದೊಂದು ವಿಡಂಬನೆಯ ಮಾಧ್ಯಮದಲ್ಲಿರುವ ವಾದಗ್ರಂಥ. ಬ್ರಹ್ಮಶಿವನ ಬಹುಶ್ರುತತೆ ಅವನು ಹೀಗೆ ಸ್ವಮತಪ್ರಶಂಸೆಯ ಜೊತೆಗೆ ಅನ್ಯಮತಗರ್ಹಣೆಗೆ ತೊಡಗುವುದಕ್ಕೆ ಸ್ವಲ್ಪ ಮಟ್ಟಿಗೆ ಸಹಾಯಕವಾಗಿದೆ ಎಂದೇ ಹೇಳಬಹುದು. ಶೈವಮತಕ್ಕೆ ಮತಾಂತರಗೊಂಡಿದ್ದ ಬ್ರಹ್ಮಶಿವನು ಆ ಮತದ ತತ್ತ್ವಗಳನ್ನೂ, ಸಾಹಿತ್ಯವನ್ನೂ ಆಸ್ಥೆಯಿಂದ ಅಭ್ಯಾಸ ಮಾಡಿದ್ದಿರಬಹುದು. ಹಾಗೆಯೇ, ಸ್ವಂತ ಕುತೂಹಲದಿಂದ ಇತರ ಪಂಥಗಳ ಪರಿಚಯವನ್ನೂ ಇವನು ತಕ್ಕಮಟ್ಟಿಗೆ ಹೊಂದಿದ್ದಿರಬೇಕು. ಕೃತಿಯ ಹಲವು ಭಾಗಗಳಲ್ಲಿ ಅವನು ಒಡ್ಡುವ ವಾದಗಳ ಹಿನ್ನೆಲೆಯಿಂದ ಅದು ನಮಗೆ ತಿಳಿದುಬರುತ್ತದೆ. ಆದರೂ, ಬ್ರಹ್ಮಶಿವನ ವಾದಗಳ ಸರಣಿ ಯಾವ ತರ್ಕಶುದ್ಧವಾದ ನೆಲೆಗಟ್ಟಿನ ಮೇಲೂ ನಿಂತದ್ದಲ್ಲ. ಅನ್ಯಧರ್ಮದ ತತ್ತ್ವಗಳ ಬಗೆಗೆ ಗಹನವಾಗಿ ವಿಚಾರ ಮಾಡದೆ, ಹಾಸ್ಯ - ಅಣಕ - ವಿಡಂಬನೆಗಳ ಮೂಲಕ ಅವನು ಹೂಡುವ ವಾದ ಒಮ್ಮೊಮ್ಮೆ ತರ್ಕಹೀನವಾಗಿ, ಒಮ್ಮೊಮ್ಮೆ ತೀರ ಬಾಲಿಶವಾಗಿ ಕಾಣುತ್ತದೆ. ಅವನ ವಾದವು ಕೆಲವೊಮ್ಮೆ ಅಸಹನೆಯಿಂದ ಕೂಡಿದ್ದರೆ, ಒಮ್ಮೊಮ್ಮೆ ಅಸಭ್ಯತೆಯಿಂದ ಕೂಡಿದ್ದು, ತೀರ ಕಟುವಾದದ್ದು ಎನಿಸುತ್ತದೆ.
ಬ್ರಹ್ಮಶಿವನ ತೀವ್ರವಾದ ಆಕ್ರೋಶ, ಆಕ್ಷೇಪಣೆಗಳಿಗೆ ವಿಶೇಷವಾಗಿ ಗುರಿಯಾಗಿರುವುದು ವೈದಿಕ ಶೈವ ಪಂಥಗಳು ಹಾಗೂ ನಾಡ ಜಂಗುಳಿ ದೈವಗಳು. ವೈಷ್ಣವ ಹಾಗೂ ಬೌದ್ಧ ಪಂಥಗಳ ವಿಷಯದಲ್ಲಿ ಅದು ಅಷ್ಟಾಗಿ ಕಾಣುವುದಿಲ್ಲ. ಅವನ ವಾದಗಳಲ್ಲಿ ಮುಖ್ಯವಾಗಿ ಕಾಣಬಹುದಾದ ಅಂಶವೆಂದರೆ - ಇತರ ಧರ್ಮಗಳನ್ನು ಕುರಿತು ಟೀಕಿಸುವಾಗ ಸಾವಧಾನ ಚಿತ್ತದಿಂದ, ನಿರ್ಲಿಪ್ತತೆಯಿಂದ ಅವುಗಳ ತತ್ತ್ವಗಳನ್ನು ಪರಿಭಾವಿಸಿ ನೋಡಿ, ಆ ನಂತರ ಅವುಗಳ ವಿಮರ್ಶೆಗೆ ತೊಡಗದೆ, ನೇರವಾಗಿ ವಿನಾಕಾರಣವೆಂಬಂತೆ ಅವುಗಳ ಬಗೆಗೆ ಕಟುವಾದ ಟೀಕೆಯಲ್ಲಿ ತೊಡಗಿಕೊಂಡಿದ್ದಾನೆ ಕವಿ. ಎಷ್ಟೋ ಸಾರಿ ಆ ಕಾಲಕ್ಕೆ ರೂಢಿಯಲ್ಲಿ ಇಲ್ಲದಿದ್ದ ಪದ್ಧತಿಗಳನ್ನೂ ಇನ್ನೂ ಇವೆ ಎಂದೇ ಭಾವಿಸಿ ಅವನ್ನು ಖಂಡಿಸಿದ್ದಾನೆ. ಒಮ್ಮೊಮ್ಮೆ ಎಲ್ಲೋ ಕೇಳಿದ ಕಥೆಗಳನ್ನೇ ನಿಜವೆಂದು ಭಾವಿಸಿ ಅನ್ಯಧರ್ಮಗಳ ದೂಷಣೆಯಲ್ಲಿ ತೊಡಗುತ್ತಾನೆ.

ಒಡಲೊಳಿರ್ಭಾಗಮನಿತ್ತಂ
ಗಡ ಕಾಂತೆಗೆ ಶಂಭು ಶಂಭುಗಂ ಕೊಟ್ಟಳ್ ತ
ನ್ನೊಡಲೊರ್ಭಾಗಮನಗಸುತೆ
ಗಡ ಮಿಕ್ಕೆರಡರೆಯನಾರ್ಗೆ ಕೊಟ್ಟರೊ ಪೇಳಿಂ    ೧೦.೭೩

ಹರನ ಗಿರಿಸುತೆಯ ತನುಗಳೊ
ಳೆರಡರೆಯಂ ಕಾಣಲಾಗದುಳಿದೆರಡರೆಯಂ
ನರಿ ತಿಂದವೊ ನಾಯ್ ತಿಂದವೊ
ಪರೆದಿರ್ದುವೊ ಪೇಳಿಮರ್ಧನಾರೀಶ್ವರರಾ                     ೧೦.೭೪

ತೀರ ಬಾಲಿಶವೆನಿಸುವಂತಹ ಬ್ರಹ್ಮಶಿವನ ವಾದದ ಸರಣಿಗೆ ಮೇಲಿನ ಎರಡು ಪದ್ಯಗಳೇ ಉದಾಹರಣೆ.
--------------------------------------------------------------------------------------------------------------------------------------

ಸರಿ, ಇಲ್ಲಿಯವರೆಗೂ ಕೃತಿಯಲ್ಲಿನ ಋಣಾತ್ಮಕ ಅಂಶಗಳ ಬಗೆಗೇ ಹೇಳಿದ್ದಾಯಿತು. ಅದರಲ್ಲಿನ ಧನಾತ್ಮಕ ವಿಷಯಗಳ ಬಗೆಗೂ ಒಮ್ಮೆ ಗಮನ ಹರಿಸಬೇಕಿದೆ. ತನಗೆ ತಿಳಿದೋ ತಿಳಿಯದೆಯೋ, ಬ್ರಹ್ಮಶಿವನು ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳ ವಿವರವಾದ ಚಿತ್ರಣವೊಂದನ್ನು ನಮ್ಮ ಮುಂದಿಟ್ಟಿದ್ದಾನೆ - ಈ ಕೃತಿಯಲ್ಲಿ. ಆಗ ಪ್ರಚಲಿತವಿದ್ದ ಅನೇಕ ಮತ-ಧರ್ಮಗಳ, ಅವುಗಳ ಆಚಾರ-ವಿಚಾರಗಳ ಬಗ್ಗೆ ಸಾಕಷ್ಟು ಮಾಹಿತಿ ಈ ಕೃತಿಯ ಮೂಲಕ ನಮಗೆ ದೊರೆಯುತ್ತದೆ. ಆ ಕಾಲಕ್ಕೆ ಇದ್ದಿರಬಹುದಾದ ಹಲವಾರು ಮೂಢಾಚರಣೆಗಳನ್ನು ಬ್ರಹ್ಮಶಿವನು ಖಂಡಿಸಿ ನುಡಿದಿರುವುದನ್ನು ನೋಡಿದರೆ ಇದು ನಮಗೆ ತಿಳಿಯುತ್ತದೆ.
ಆ ಕಾಲಕ್ಕೆ ಪ್ರವರ್ಧಮಾನದಲ್ಲಿದ್ದ ಶೈವ ವೈಷ್ಣವ ಧರ್ಮಗಳ ಪ್ರಭಾವಲಯದ ನಡುವೆಯೇ ಇದ್ದೂ, ಆಯಾ ಧರ್ಮಗಳಲ್ಲಿನ ದೋಷ-ದೌರ್ಬಲ್ಯಗಳನ್ನೂ, ಅವುಗಳ ಆಚರಣೆಗಳಲ್ಲಿದ್ದ ಹಲವು ಭ್ರಮೆ ಮೌಢ್ಯಗಳನ್ನೂ ಅಷ್ಟು ದಿಟ್ಟವಾಗಿ ಹೊರಹಾಕಲು ಪ್ರಯತ್ನಿಸಿರುವ ಅವನ ಧೈರ್ಯವನ್ನು ಮೆಚ್ಚಬೇಕಾದ್ದೇ.
ಧಾರ್ಮಿಕ ಹಿನ್ನೆಲೆಯಿಂದಲ್ಲದೆ ಇನ್ನೊಂದು ಆಯಾಮದಿಂದ ನೋಡಿದ್ದಾದರೆ ಬ್ರಹ್ಮಶಿವನಲ್ಲಿ ಒಬ್ಬ ವಿಚಾರವಾದಿಯನ್ನೂ, ಸಮಾಜ ಸುಧಾರಕನನನ್ನೂ ಮನಗಾಣಬಹುದು.
ಅನ್ಯಧರ್ಮಗಳ ಬಗೆಗೆ ಅವನ ಮಾತುಗಳು ಕಟುವಾಗಿದ್ದರೂ ಕೂಡ, ಅವನು ವಿರೋಧಿಸಿದ ಹಲವಾರು ವಿಷಯಗಳು ಸಮಾಜದಲ್ಲಿ ಆಗ ಪ್ರಚಲಿತವಿದ್ದ ಕೆಲವು ಅನಿಷ್ಟ ಪದ್ಧತಿಗಳೇ ಆಗಿವೆ. ಮೇಲು-ಕೀಳು, ಮಡಿ-ಮೈಲಿಗೆ, ನಾಡ ಜಂಗುಳಿ ದೈವಗಳಿಗೆ ಕೊಡುತ್ತಿದ್ದ ಪಶುಬಲಿ - ಹೀಗೆ ಮುಂತಾದವು ಬ್ರಹ್ಮಶಿವನಿಂದ ತೀವ್ರ ಖಂಡನೆಗೆ ಒಳಗಾದ ವಿಷಯಗಳು. ಅಹಿಂಸೆಯೇ ಪರಮಧರ್ಮವೆಂಬ ಜಿನಧರ್ಮ ಸಾರವನ್ನು ಪ್ರತಿಪಾದಿಸಲು ಬ್ರಹ್ಮಶಿವನು ಈ ಎಲ್ಲವನ್ನೂ ವಿರೋಧಿಸಿದ್ದಾನೆ.
ಇನ್ನು, ಈ ಕೃತಿಯಲ್ಲಿ ಹಲವಾರು ಚಾರಿತ್ರಿಕ ಅಂಶಗಳೂ ದಾಖಲಾಗಿವೆ. ಈ ನೆಲೆಯಿಂದ ಚರಿತ್ರೆಯನ್ನರಿಯಲೂ ಈ ಕೃತಿಯು ಉಪಕಾರಿ ಎಂದೇ ಹೇಳಬಹುದು.

ಭಾವಿಸುವನಾವನೆಲ್ಲಾ
ಜೀವಮುಮಂ ತನ್ನ ಮಕ್ಕಳಂತಂತವನಂ
ಭಾವಿಸುಗುಂ ಭೂವಳಯಂ
ದೇವನಿವಂ ಮನುಜನಲ್ಲನೆಂದಾಪೊಳ್ತುಂ                       ೫.೨೩

(ಯಾವೊಬ್ಬ ವ್ಯಕ್ತಿಯು ಎಲ್ಲ ಜೀವ/ಜೀವಿಗಳನ್ನೂ ತನ್ನ ಮಕ್ಕಳಂತೆ ಎಂದು ಭಾವಿಸಿ ನಡೆದುಕೊಳ್ಳುತ್ತಾನೋ, ಅಂತಹ ವ್ಯಕ್ತಿಯನ್ನು ಕುರಿತು ಈ ಭೂಲೋಕವು "ಇವನು ಮನುಜನಲ್ಲ, ದೇವತೆ" ಎಂದು ಭಾವಿಸುತ್ತದೆ.)
ಇಂತಹ ಉದಾರವಾದ ವಿಚಾರವನ್ನುಳ್ಳ ಹಲವಾರು ಪದ್ಯಗಳು ಈ ಕೃತಿಯಲ್ಲಿವೆ.

ಅದಾವ ಕಾರಣಕ್ಕೋ, ಅವನ ಮುಂದಿನ ಕವಿಗಳಾರೂ ಇವನನ್ನು ತಮ್ಮ ಕೃತಿಗಳಲ್ಲಿ ನೆನೆದಿಲ್ಲವಾದರೂ, ಬ್ರಹ್ಮಶಿವನು ನಿಶ್ಚಿತವಾಗಿಯೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಮಹತ್ವದ ಸ್ಥಾನಕ್ಕೆ ಅರ್ಹನಾಗಿದ್ದಾನೆ.

Sunday, 6 July 2014

ಕನಕದಾಸರ "ರಾಮಧಾನ್ಯ ಚರಿತ್ರೆ" - ೧

ಪ್ರಸ್ತಾವನೆ

ಕನಕದಾಸರ ಹೆಸರನ್ನೇ ಕೇಳದ ಕನ್ನಡಿಗರು ಬಹುಶಃ ಯಾರೂ ಇರಲಾರರೇನೋ.! ಆ ಮಟ್ಟಿಗೆ ಕನಕದಾಸರು ನಮಗೆಲ್ಲ ಸುಪರಿಚಿತರು.

ಮಧ್ಯಕಾಲೀನ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾದ ದಾಸಸಾಹಿತ್ಯವನ್ನು (ಕೀರ್ತನ ಸಾಹಿತ್ಯ) ಶ್ರೀಮಂತಗೊಳಿಸಿದ ಕೀರ್ತನಕಾರರ ಪೈಕಿ ಕನಕದಾಸರು ಅಗ್ರಗಣ್ಯರು. ಕನಕದಾಸ ಹಾಗೂ ಪುರಂದರದಾಸರು ದಾಸಸಾಹಿತ್ಯದ ಅಶ್ವಿನೀ ದೇವತೆಗಳೆಂದೇ ಖ್ಯಾತಿ ಹೊಂದಿದ್ದಾರೆ ಎಂದಮೇಲೆ ದಾಸಸಾಹಿತ್ಯದಲ್ಲಿ ಕನಕದಾಸರ ಸ್ಥಾನವನ್ನು ಕುರಿತು ಹೆಚ್ಚಾಗಿ ಹೇಳುವ ಅಗತ್ಯವೇನಿಲ್ಲ.

ಕನಕದಾಸರು ಕೀರ್ತನೆಗಳನ್ನಷ್ಟೇ ಅಲ್ಲದೆ ಕಾವ್ಯ, ಮಹಾಕಾವ್ಯ, ಮುಂಡಿಗೆಗಳನ್ನೂ ಬರೆದಿದ್ದಾರೆ. ಹೀಗಾಗಿ, ಅವರು ಕೀರ್ತನೆಗಳ ದೃಷ್ಟಿಯಿಂದ ಕೀರ್ತನಕಾರರಾಗಿಯೂ, ಕಾವ್ಯಗಳ ದೃಷ್ಟಿಯಿಂದ ಕವಿಯಾಗಿಯೂ ನಮಗೆ ಕಂಡುಬರುತ್ತಾರೆ. ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ರಾಮಧಾನ್ಯ ಚರಿತ್ರೆ’, ’ಹರಿಭಕ್ತಿ ಸಾರ’, ಕೀರ್ತನೆ ಹಾಗೂ ಮುಂಡಿಗೆಗಳು ಕನಕದಾಸರಿಂದ ರಚಿತವಾದ ಕೃತಿಗಳು.
(’ಕಾಗಿನೆಲೆಯಾದಿಕೇಶವ’ ಎಂಬುದು ಇವರ ಕೀರ್ತನೆಗಳ ಅಂಕಿತ) ಹರಿಯ ಬಗೆಗಿನ ಭಕ್ತಿಯೇ ಅಲ್ಲದೆ ಕನಕದಾಸರ ಹಲವಾರು ಕೀರ್ತನೆಗಳಲ್ಲಿ ತಾತ್ವಿಕತೆ, ವೈಚಾರಿಕತೆ, ಸಾಮಾಜಿಕ ವಿಮರ್ಶೆ, ವಿಡಂಬನೆ ಕಂಡುಬರುತ್ತದೆ. ಆ ಕಾಲಕ್ಕೆ ಪ್ರಚಲಿತವಿದ್ದ ಹಲವು ಮೂಢನಂಬಿಕೆಗಳನ್ನೂ, ಕಂದಾಚಾರಗಳನ್ನೂ, ಜಾತಿ-ವರ್ಗ ಭೇದಗಳನ್ನೂ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಬಹುವಾಗಿ ಖಂಡಿಸಿದ್ದಾರೆ. "ಕುಲಕುಲ ಕುಲವೆಂದು ಹೊಡೆದಾಡುವಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ..." ಎಂಬ ಮೊದಲಾದ ಅವರ ಕೀರ್ತನೆಗಳಲ್ಲಿ ಈ ಅಂಶಗಳನ್ನು ನಾವು ಕಾಣಬಹುದು.

ಪ್ರಕೃತ "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ. ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.
ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.

ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ ಜಗಳವೇರ್ಪಡುವುದು.

ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.
------------------------------------------------------------------------------------------------------------

ರಾಮಧಾನ್ಯ ಚರಿತ್ರೆ


ರಾಮಧಾನ್ಯದ ಕೃತಿಯನೀ ಜನ
ದಾಮವೆಲ್ಲಾದರಿಸುವಂದದಿ
ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ
ಪ್ರೇಮದಿಂದಾದರಿಸಿ ಕೇಳ್ದ ಸ
ನಾಮರಿಗೆ ಸತ್ಕರುಣದಲಿ
ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ               (೩)

ಧರೆಯನೆಲ್ಲವ ಸೋತು ಜೂಜಲಿ
ಕುರುಪತಿಗೆ, ಕೈದಳಿಸಿ ತಮ್ಮಂ
ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು
ಪರಮ ಋಷಿ ಶಾಂಡಿಲ್ಯ ಸ
ತ್ಕರುಣದಲಿ ನಡೆತಂದನಲ್ಲಿಗೆ
ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ             (೪)

ಧರಣಿಪತಿ ಧರ್ಮಜನು ತಮ್ಮಂದಿರೊಡಗೂಡಿ ಶಾಂಡಿಲ್ಯ ಮುನಿಗೆ ವಂದಿಸಿ ಸತ್ಕರಿಸಿದನು. ಆಗ ಶಾಂಡಿಲ್ಯ ಮುನಿಯು "ನೃಪಸಿರಿ - ದರಿದ್ರತೆ ನಿಲದು, ಪರಿಹಾರವಹುದು" ಎಂದು ನುಡಿಯುತ್ತಾನೆ. ಆಗ ಧರ್ಮಜನು :

"ದೇವಋಷಿಗಳು ನಿಮ್ಮ ಕರುಣಾ
ಭಾವವೆಮ್ಮಲ್ಲಿರಲು ನಮಗಿ
ನ್ನಾವ ಕಷ್ಟದ ಬಳಕೆದೋರದು. ನಿಮ್ಮ ದರುಶನದಿ
ಪಾವನರು ನಾವಾದೆವೆಮಗಿ
ನ್ನಾವ ಬುದ್ಧಿಯನರುಹುವಿರಿಯದ
ನೀವು ಪೇಳೆನೆ", ನಸುನಗುತ ಮುನಿನಾಥನಿಂತೆಂದ            (೬)

"ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಯಾವ ವಿಷಯವನ್ನು ಅರುಹುವಿರಿ ಈಗ" ಎಂದು ಕೇಳಲು, ಶಾಂಡಿಲ್ಯ ಮುನಿಯು "ಯುಧಿಷ್ಟಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು ಹೊಂದಿರುವ ನಾಲ್ಕು ಅರಸುಗಳೆಂದರೆ - ನಳ, ರಾಮ, ಯುಧಿಷ್ಟಿರ ಹಾಗೂ ಹರಿಶ್ಚಂದ್ರ ಎಂದು ಜಗವೆಲ್ಲ ಸಾರುತ್ತಿದೆ. ಅವರಲ್ಲಿ ರಾಮನು ಅತ್ಯಂತ ಗುಣಶೀಲನಾಗಿದ್ದಾನೆ. ಒಮ್ಮೆ ನೆಲ್ಲು(ವ್ರಿಹಿಗ) ಹಾಗೂ ರಾಗಿ(ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎಂದು ತಿಳಿಸುತ್ತಾನೆ.

ಆಗ ಧರ್ಮರಾಯನು ರಾಮಚರಿತೆಯನ್ನು ತಮಗೆ ಹೇಳಬೇಕೆಂದು ಶಾಂಡಿಲ್ಯ ಮುನಿಯನ್ನು ಬಿನ್ನವಿಸಲು, ಆ ಮುನಿಪನು ಅಲ್ಲಿದ್ದವರಿಗೆಲ್ಲ ರಾಮನ ಕಥೆಯನ್ನು ವಿಸ್ತರಿಸಿ ಹೆಳುತ್ತಾನೆ. :

ಕೇಳು ಕುಂತೀ ತನಯ, ಗಂಗಾ ನದಿಯ ದಡದ ಉತ್ತರ ಭಾಗದಲ್ಲಿ ವಿಶಾಲವಾಗಿಯೂ, ವೈಭವಯುತವಾಗಿಯೂ ಇರುವ ಅಯೋಧ್ಯಾಪುರ. ಆ ಪುರದ ಅರಸ ದಶರಥ. ಅವನಿಗೆ ಕೌಸಲ್ಯೆ, ಕೈಕೆ ಹಾಗೂ ಸುಮಿತ್ರೆ - ಈ ಮೂವರು ಅರಸಿಯರು.
ಆ ದಶರಥ ಹಾಗೂ ಕೌಸಲ್ಯೆಯರಿಗೆ ಜನಿಸಿದ ಗುಣನಿಧಿ ಆ ರಾಮ. ಅವನು ತಾಟಕಿಯೆಂಬ ರಾಕ್ಷಸಿಯನ್ನು ಸಂಹರಿಸಿ, ಮಾರೀಚ-ಸುಬಾಹುಗಳನ್ನು ಕೊಂದು, ವಿಶ್ವಾಮಿತ್ರ ಮುನಿಯು ನಡೆಸುತ್ತಿದ್ದ ಮಖ(ಯಾಗ)ವನ್ನು ಯಾವುದೇ ವಿಘ್ನ ಬಾರದಂತೆ ರಕ್ಷಿಸಿದನು. ಆ ನಂತರದಲ್ಲಿ ರಾಮನು ಗೌತಮನ ಸತಿ ಅಹಲ್ಯೆಯ ಶಾಪವನ್ನು ನಿವಾರಿಸಿ, ತನ್ನ ತಮ್ಮ ಲಕ್ಷ್ಮಣ ಹಾಗೂ ಮುನಿ ವಿಶ್ವಾಮಿತ್ರನೊಡಗೂಡಿ ಮಿಥಿಲಾನಗರಕ್ಕೆ ಬಂದನು.
ಮುಂದೆ, ಅಲ್ಲಿನ ಅರಸನಾದ ಜನಕನ ಮಗಳು ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು, ಶುಭಮುಹೂರ್ತದಲ್ಲಿ ರಾಮನು ಸೀತೆಯನ್ನು ವರಿಸಿದನು. ಆ ನಂತರದಲ್ಲಿ ರಾಮನು ತನ್ನವರೊಡಗೂಡಿ ಅಯೋಧ್ಯೆಗೆ ಹೊರಟುಬಂದನು.

ಕೇಳು ಧರ್ಮಜ, ರಾಮನಿಗೆ ಕೂಡ ನಿಮ್ಮಂತೆಯೇ ವನವಾಸ ಮಾಡಬೇಕಾಗಿ ಬಂತು. ಪಿತೃವಚನ ಪಾಲನೆಗೆಂದು ರಾಮನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ಘೋರವಾದ ಕಾನನದಲ್ಲಿ ಇರಬೇಕಾಯಿತು.
"ಭರತನನು ಸಂತೈಸಿ, ಕಾಕಾಸುರನ ಪ್ರಾಣವ ಕಾಯ್ದು, ದಾನವ ತರುಣಿ ನಾಸಿಕವರಿದು, ಮಾಯಾಮೃಗವ ಸಂಹರಿಸಿ, ಸರಸಿಜಾಕ್ಷಿಯನಗಲಿ, ಮಾರ್ಗಾಂತರದಿ ಕಂಡ ಜಟಾಯುವನು - ಮನ ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಗೊಳಿಸಿ..(೧೩)"

ಸೀತೆಯನ್ನು ಹುಡುಕಿ ಹೊರಟ ರಾಮಲಕ್ಷ್ಮಣರಿಗೆ ಸಾವಿನ ಅಂಚಿನಲ್ಲಿದ್ದ ಜಟಾಯುವು ಕಾಣಿಸುತ್ತಾನೆ. ಅವನಿಂದ ರಾಮನು ನಡೆದ ವೃತ್ತಾಂತವನ್ನು(ಸೀತಾ ಅಪಹರಣ, ಹಾಗೂ ರಾವಣನನ್ನು ಎದುರಿಸಿದ ಜಟಾಯುವನ್ನು ರಾವಣನು ಗಾಯಗೊಳಿಸಿದ್ದು) ಕೇಳಿ ತಿಳಿದುಕೊಳ್ಳುತ್ತಾನೆ. ಇಷ್ಟನ್ನೂ ತಿಳಿಸುವ ವೇಳೆಗೆ ಜಟಾಯುವು ಮೃತನಾಗುತ್ತಾನೆ. ಅವನ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಡುತ್ತಾರೆ.
ಮಾರ್ಗ ಮಧ್ಯದಲ್ಲಿ ಹನುಮನನ್ನು ಕಂಡು, ಕಿಷ್ಕಿಂದೆಯನ್ನು ತಲುಪಿ, ಅಲ್ಲಿ ವಾಲಿಯನ್ನು ಹರಿಸಿ, ಸುಗ್ರೀವನು ಕಳುಹಿಸಿದ ವಾನರ ಸೈನ್ಯವನ್ನು ಒಡಗೊಂಡು ರಾಮನು ದಕ್ಷಿಣಕ್ಕೆ ಹೊರಟನು. ಸಮುದ್ರವನ್ನು ದಾಟಲು ಸೇತುಬಂಧವನ್ನು ನಿರ್ಮಿಸಿ, ಲಂಕೆಯನ್ನು ತಲುಪಿ, ರಾವಣ ಕುಂಭಕರ್ಣಾದಿ ದಾನವ ವೀರರನ್ನು ಕೊಂದು, ರಾಮನು ನಂತರದಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿದನು.

ಆ ನಂತರ ರಾಮನು ಸೀತೆಯನ್ನು ಕೈಕೊಂಡು, ತಮ್ಮೊಡನೆ ಅಯೋಧ್ಯೆಗೆ ಬರಲು ವಿಭೀಷಣನನ್ನೂ ಅಹ್ವಾನಿಸುತ್ತಾನೆ. ಅಗ ಅಗಣಿತ ದಾನವ ಸೇನೆಯು ಅವರೊಡನೆ ಅಯೋಧ್ಯೆಗೆ ಹೊರಡಲು ಸಿದ್ಧವಾಯ್ತು.
ವಿಭೀಷಣನು ತನಗೆಂದು ಅರ್ಪಿಸಿದ ಕುಬೇರನ ರಥದಲ್ಲಿ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ಕುಳಿತಿರಲು, ಅವರೊಡನೆ ಹನುಮ, ಜಾಂಬವಂತ, ವಿಭೀಷಣಾದಿಯಾಗಿ, ದಾನವ ಹಾಗೂ ವಾನರ ಸೈನ್ಯವೂ ಅಯೋಧ್ಯೆಯೆಡೆಗೆ ಹೊರಡುತ್ತಾರೆ.

ಮಾರ್ಗ ಮಧ್ಯದಲ್ಲಿ ಇವರೆಲ್ಲ ವಾಲ್ಮೀಕಿ, ಮುಚುಕುಂದ ಮುಂತಾದ ಮುನಿಗಳ ಆಶ್ರಮಗಳನ್ನು ಸಂದರ್ಶಿಸಿದರು. ನಂತರ ಮುಂದುವರೆದು ಇವರೆಲ್ಲ ಮಾಹವನವೊಂದರಲ್ಲಿ ಬೀಡುಬಿಟ್ಟಿರಲು ಹಲವಾರು ಮುನಿವರರು ಬಂದು ರಾಮನನ್ನು ಕಂಡರು.

ಕೌಶಿಕನು, ಜಮದಗ್ನಿ, ಜನ್ಹು, ಪರಾಶರನು, ಜಾಬಾಲಿ, ಭೃಗು, ದೂರ್ವಾಸ, ಗೌತಮನಾದಿಯಾದ ಸಮಸ್ತ ಮುನಿವರರು ಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರು, ದಾಶರಥಿಯನು ಕಂಡು ಹರಸಿದರಕ್ಷತೆಯ ತಳಿದು (೨೩)

ಅವರೆಲ್ಲ ರಾಮನನ್ನು ಮನಸಾರೆ ಪ್ರಾರ್ಥಿಸಿ, ಹೊಗಳಿ, ವಿವಿಧ ಬಗೆಯಲ್ಲಿ ಸತ್ಕರಿಸಿದರು.

ಅಲ್ಲಿ ನೆರೆದ ಮಹಾಮುನೀಶ್ವರ
ರೆಲ್ಲ ತರಿಸಿದರಖಿಳ ವಸ್ತುವ -
ಬೆಲ್ಲ, ಸಕ್ಕರೆ, ಜೇನುತುಪ್ಪ, ರಸಾಯನಂಗಳಲಿ
ಭುಲ್ಲವಿಸಿ ರಚಿಸಿದ ಸುಭಕ್ಷಗ
ಳೆಲ್ಲವನು ತುಂಬಿದರು ಹೆಡಗೆಗ
ಳಲ್ಲಿ. ಜೋಡಿಸಿ, ಹೊರಿಸಿ ತಂದರು ರಾಮನೋಲಗಕೆ           (೨೮)

ರಾಮನೊಡನೆ ಬಂದವರೆಲ್ಲ ಆ ರುಚಿರುಚಿಯಾದ ಭೋಜ್ಯಗಳೆಲ್ಲವನ್ನು ಮನಸಾರೆ ಸವಿದರು. ಅವರೆಲ್ಲ ಮುನಿವರರನ್ನು ಆನಂದದಿಂದ ಕೊಂಡಾಡಿದರು. ಆಗ ರಾಮನು ಹನುಮನನ್ನು ಕರೆದು ಆ ಭಕ್ಷ್ಯಗಳ ರುಚಿಯನ್ನು ಕುರಿತು ಪ್ರಶ್ನಿಸಿದನು -

ಅನಿಲಸುತ ಬಾರೆಂದು ರಘುನಂ
ದನನು "ಕರುಣದೊಳಿವರ ರುಚಿಯೆಂ
ತೆನಲು", ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ
’ಇನಕುಲಾನ್ವಯತಿಲಕ ಚಿತ್ತೈ
ಸೆನಗೆ ಸವಿಯಹುದಿನ್ನು ಧಾನ್ಯದ
ತನುವನೀಕ್ಷಿಸಬೇಕು, ದೇವರು ತರಿಸಿ ನೀವೆಂದ’                 (೨೯)

ಆಗ ಹನುಮನು ’ಭಕ್ಷ್ಯಗಳೇನೋ ಬಹಳ ರುಚಿಯಾಗಿವೆ. ಆದರೆ ಈ ಭಕ್ಷ್ಯಗಳನ್ನು ಯಾವ ಯಾವ ಧಾನ್ಯಗಳಿಂದ ತಯಾರಿಸಿದ್ದಾರೋ ಆ ಧಾನ್ಯಗಳನ್ನೆಲ್ಲ ಒಮ್ಮೆ ತಾನು ನೋಡಬೇಕು. ದಯವಿಟ್ಟು ತಾವು ಆ ಧಾನ್ಯಗಳನ್ನು ತರಿಸಿ’ ಎಂದು ರಾಮನನ್ನು ಕೇಳುತ್ತಾನೆ.
ಹಾಗೇ ಆಗಲಿ ಎಂದು ರಾಮನು ಗೌತಮ ಮುನಿಯನ್ನು ’ಧಾನ್ಯಗಳನ್ನು ತರಿಸಬೇಕು’ ಎಂದು ವಿನಯದಿಂದ ಕೇಳಿಕೊಳ್ಳುತ್ತಾನೆ. ಆಗ ಗೌತಮ ಮುನಿಯ ಶಿಷ್ಯರು ಎಲ್ಲ ತರದ ಧಾನ್ಯಗಳನ್ನೂ ಹೊತ್ತು ತಂದು ಅಲ್ಲಿದ್ದವರೆಲ್ಲರ ಮುಂದಿಡುತ್ತಾರೆ.

"ನರೆದಲೆಗನಿದು, ನೆಲ್ಲು, ಹಾರಕ, ಬರಗು, ಜೋಳವು, ಕಂಬು, ಸಾಮೆಯು, ಉರುತರದ ನವಣೆಯಿದು ನವಧಾನ್ಯ"ವೆಂದೆನಲು, ಮೆರೆವ ರಾಶಿಯ ಕಂಡು - ’ಇದರೊಳು ಪರಮಸಾರದ ಹೃದಯನಾರೆಂದರಸಿ’ ಕೇಳಿದನಲ್ಲಿರುತಿಹ ಮಹಾಮುನೀಶ್ವರರ                   (೩೨)
(೧. ನರೆದಲೆಗ: ರಾಗಿ, ೨. ನೆಲ್ಲು: ಭತ್ತ. ೩. ಹಾರಕ, ಬರಗು, ಕಂಬು, ಸಾಮೆ, ನವಣೆ - ಬಗೆಬಗೆಯ ಇತರ ಧಾನ್ಯಗಳು).
ಎಲ್ಲ ಧಾನ್ಯಗಳ ಹೆಸರುಗಳನ್ನೂ ಒಂದೊಂದಾಗಿ ಹೇಳುತ್ತಿರಲು, ರಾಮನು - "ಈ ಧಾನ್ಯಗಳಲ್ಲಿ ಉತ್ತಮವಾದದ್ದು ಯಾವುದು?" ಎಂದು ಅಲ್ಲಿದ್ದ ಮುನಿಗಳನ್ನು ಕೇಳುತ್ತಾನೆ. ಆಗ

ಕೆಲರು ಗೋದಿಯ, ಸಾಮೆಯನು ಕೆಲ
ಕೆಲರು ನವಣೆಯ, ಕಂಬು, ಜೋಳವ
ಕೆಲರು ಹಾರಕವೆಂದು, ಕೆಲವರು ನೆಲ್ಲನತಿಶಯವ,
ಕೆಲರು ನರೆದಲಗನನು ಪತಿಕರಿ
ಸಲದ ನೋಡಿದ ನೃಪತಿ"ಯದರೊಳು
ಹಲವು ಮತವೇಕೊಂದನೇ ಪೇಳೆನಲು", ಗೌತಮನು:              (೩೩)

(ಅಲ್ಲಿದ್ದ ಕೆಲವರು ಗೋಧಿಯನ್ನೂ, ಕೆಲವರು ಸಾಮೆಯನ್ನೂ, ಕೆಲವರು ಇತರ ಧಾನ್ಯಗಳನ್ನೂ, ಕೆಲವರು ಭತ್ತವನ್ನೂ, ಹಾಗೇ ಇನ್ನೂ ಕೆಲವರು ರಾಗಿಯನ್ನೂ ಪತಿಕರಿಸಿ(ಪತಿಕರಿಸು: ಅಂಗೀಕರಿಸು/ಹೊಗಳು) ನುಡಿದರು. ಆಗ ರಾಮನು "ಹೀಗೆ ಹಲವು ಅಭಿಪ್ರಾಯಗಳೇಕೆ, ಯಾವುದಾದರೂ ಒಂದನ್ನು ಒಪ್ಪಿ ಹೇಳಿ" ಎನ್ನಲು, ಗೌತಮನು..)

ದಾಶರಥಿ ಚಿತ್ತೈಸು ನಮ್ಮಯ
ದೇಶಕತಿಶಯ ನರೆದಲೆಗನೇ
ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
"ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸು ಪರಿಯಲಿ ಮಾಡುವರೆ ಶಿವ"ಯೆಂದನಾ ವ್ರಿಹಿಗ           (೩೪)

"ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರರಿಯಿರೆ ಎಲ್ಲರನು ನೀ
ವಿಲ್ಲಿ ನುಡಿವ ಉಪೇಕ್ಷೆಯುಂಟೇ! ಸಾಕದಂತಿರಲಿ,
ನೆಲ್ಲು ನಾನಿರೆ, ಗೋದಿ ಮೊದಲಾ
ದೆಲ್ಲ ಧಾನ್ಯಗಳಿರಲು ಇದರಲಿ
ಬಲ್ಲಿದನು ನರೆದಲೆಗನೆಂಬುದಿದಾವ ಮತ?"ವೆಂದ               (೩೫)

ಗೌತಮನು "ಕೇಳು ದಾಶರಥಿ, ನಮ್ಮ ದೇಶಕ್ಕೆ ಅತಿಶಯವಾದ ಈ ನರೆದಲೆಗನೇ(ರಾಗಿ) ಮಿಕ್ಕೆಲ್ಲವುಗಳಿಗಿಂತ ಉತ್ತಮವಾದ ಧಾನ್ಯ. ಏಕೆಂದರೆ.." ಎಂದು ನುಡಿಯುತ್ತಿರುವಷ್ಟರಲ್ಲೇ ಅಲ್ಲಿದ್ದ ನೆಲ್ಲಿಗೆ(ವ್ರಿಹಿಗ: ನೆಲ್ಲು) ರೋಷವುಕ್ಕುತ್ತದೆ.
ಕೂಡಲೆ ನೆಲ್ಲು ಸಿಡಿದೆದ್ದು ಗೌತಮನನ್ನು ಕುರಿತು "ಆಹಾ! ಲೇಸನಾಡಿದಿರಿ ಗೌತಮರೇ, ದೋಷರಹಿತರಾದ ನೀವೂ ಹೀಗೆ ಪಕ್ಷಪಾತದಿಂದ ನುಡಿಯಬಹುದೇ. ಶಿವಶಿವಾ!
ಎಲ್ಲ ಧರ್ಮಗಳ ಸಾರವನ್ನೂ ಅರಿತ ನೀವು ಹೀಗೆ ಉಪೇಕ್ಷಿಸಿ ನುಡಿಯುವುದು ಸರಿಯೇ? ಅಲ್ಲ, ನೆಲ್ಲು ನಾನಿರುವಾಗ, ಗೋಧಿ ಮುಂತಾದ ಎಲ್ಲ ಧಾನ್ಯಗಳೂ ಇಲ್ಲಿರುವಾಗ ಇವರೆಲ್ಲರಲ್ಲಿ ಈ ರಾಗಿಯೇ ಶ್ರೇಷ್ಠ ಎಂದು ಹೇಳುವುದು ಎಷ್ಟು ಸರಿ. ಇದಾವ ನ್ಯಾಯ?" ಎಂದು ಗೌತಮನನ್ನು ಪ್ರಶ್ನಿಸುತ್ತದೆ ನೆಲ್ಲು.

(ಮುಂದುವರೆಯುತ್ತದೆ....)