Sunday, 6 July 2014

ಕನಕದಾಸರ "ರಾಮಧಾನ್ಯ ಚರಿತ್ರೆ" - ೧

ಪ್ರಸ್ತಾವನೆ

ಕನಕದಾಸರ ಹೆಸರನ್ನೇ ಕೇಳದ ಕನ್ನಡಿಗರು ಬಹುಶಃ ಯಾರೂ ಇರಲಾರರೇನೋ.! ಆ ಮಟ್ಟಿಗೆ ಕನಕದಾಸರು ನಮಗೆಲ್ಲ ಸುಪರಿಚಿತರು.

ಮಧ್ಯಕಾಲೀನ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾದ ದಾಸಸಾಹಿತ್ಯವನ್ನು (ಕೀರ್ತನ ಸಾಹಿತ್ಯ) ಶ್ರೀಮಂತಗೊಳಿಸಿದ ಕೀರ್ತನಕಾರರ ಪೈಕಿ ಕನಕದಾಸರು ಅಗ್ರಗಣ್ಯರು. ಕನಕದಾಸ ಹಾಗೂ ಪುರಂದರದಾಸರು ದಾಸಸಾಹಿತ್ಯದ ಅಶ್ವಿನೀ ದೇವತೆಗಳೆಂದೇ ಖ್ಯಾತಿ ಹೊಂದಿದ್ದಾರೆ ಎಂದಮೇಲೆ ದಾಸಸಾಹಿತ್ಯದಲ್ಲಿ ಕನಕದಾಸರ ಸ್ಥಾನವನ್ನು ಕುರಿತು ಹೆಚ್ಚಾಗಿ ಹೇಳುವ ಅಗತ್ಯವೇನಿಲ್ಲ.

ಕನಕದಾಸರು ಕೀರ್ತನೆಗಳನ್ನಷ್ಟೇ ಅಲ್ಲದೆ ಕಾವ್ಯ, ಮಹಾಕಾವ್ಯ, ಮುಂಡಿಗೆಗಳನ್ನೂ ಬರೆದಿದ್ದಾರೆ. ಹೀಗಾಗಿ, ಅವರು ಕೀರ್ತನೆಗಳ ದೃಷ್ಟಿಯಿಂದ ಕೀರ್ತನಕಾರರಾಗಿಯೂ, ಕಾವ್ಯಗಳ ದೃಷ್ಟಿಯಿಂದ ಕವಿಯಾಗಿಯೂ ನಮಗೆ ಕಂಡುಬರುತ್ತಾರೆ. ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ರಾಮಧಾನ್ಯ ಚರಿತ್ರೆ’, ’ಹರಿಭಕ್ತಿ ಸಾರ’, ಕೀರ್ತನೆ ಹಾಗೂ ಮುಂಡಿಗೆಗಳು ಕನಕದಾಸರಿಂದ ರಚಿತವಾದ ಕೃತಿಗಳು.
(’ಕಾಗಿನೆಲೆಯಾದಿಕೇಶವ’ ಎಂಬುದು ಇವರ ಕೀರ್ತನೆಗಳ ಅಂಕಿತ) ಹರಿಯ ಬಗೆಗಿನ ಭಕ್ತಿಯೇ ಅಲ್ಲದೆ ಕನಕದಾಸರ ಹಲವಾರು ಕೀರ್ತನೆಗಳಲ್ಲಿ ತಾತ್ವಿಕತೆ, ವೈಚಾರಿಕತೆ, ಸಾಮಾಜಿಕ ವಿಮರ್ಶೆ, ವಿಡಂಬನೆ ಕಂಡುಬರುತ್ತದೆ. ಆ ಕಾಲಕ್ಕೆ ಪ್ರಚಲಿತವಿದ್ದ ಹಲವು ಮೂಢನಂಬಿಕೆಗಳನ್ನೂ, ಕಂದಾಚಾರಗಳನ್ನೂ, ಜಾತಿ-ವರ್ಗ ಭೇದಗಳನ್ನೂ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಬಹುವಾಗಿ ಖಂಡಿಸಿದ್ದಾರೆ. "ಕುಲಕುಲ ಕುಲವೆಂದು ಹೊಡೆದಾಡುವಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ..." ಎಂಬ ಮೊದಲಾದ ಅವರ ಕೀರ್ತನೆಗಳಲ್ಲಿ ಈ ಅಂಶಗಳನ್ನು ನಾವು ಕಾಣಬಹುದು.

ಪ್ರಕೃತ "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ. ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.
ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.

ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ ಜಗಳವೇರ್ಪಡುವುದು.

ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.
------------------------------------------------------------------------------------------------------------

ರಾಮಧಾನ್ಯ ಚರಿತ್ರೆ


ರಾಮಧಾನ್ಯದ ಕೃತಿಯನೀ ಜನ
ದಾಮವೆಲ್ಲಾದರಿಸುವಂದದಿ
ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ
ಪ್ರೇಮದಿಂದಾದರಿಸಿ ಕೇಳ್ದ ಸ
ನಾಮರಿಗೆ ಸತ್ಕರುಣದಲಿ
ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ               (೩)

ಧರೆಯನೆಲ್ಲವ ಸೋತು ಜೂಜಲಿ
ಕುರುಪತಿಗೆ, ಕೈದಳಿಸಿ ತಮ್ಮಂ
ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು
ಪರಮ ಋಷಿ ಶಾಂಡಿಲ್ಯ ಸ
ತ್ಕರುಣದಲಿ ನಡೆತಂದನಲ್ಲಿಗೆ
ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ             (೪)

ಧರಣಿಪತಿ ಧರ್ಮಜನು ತಮ್ಮಂದಿರೊಡಗೂಡಿ ಶಾಂಡಿಲ್ಯ ಮುನಿಗೆ ವಂದಿಸಿ ಸತ್ಕರಿಸಿದನು. ಆಗ ಶಾಂಡಿಲ್ಯ ಮುನಿಯು "ನೃಪಸಿರಿ - ದರಿದ್ರತೆ ನಿಲದು, ಪರಿಹಾರವಹುದು" ಎಂದು ನುಡಿಯುತ್ತಾನೆ. ಆಗ ಧರ್ಮಜನು :

"ದೇವಋಷಿಗಳು ನಿಮ್ಮ ಕರುಣಾ
ಭಾವವೆಮ್ಮಲ್ಲಿರಲು ನಮಗಿ
ನ್ನಾವ ಕಷ್ಟದ ಬಳಕೆದೋರದು. ನಿಮ್ಮ ದರುಶನದಿ
ಪಾವನರು ನಾವಾದೆವೆಮಗಿ
ನ್ನಾವ ಬುದ್ಧಿಯನರುಹುವಿರಿಯದ
ನೀವು ಪೇಳೆನೆ", ನಸುನಗುತ ಮುನಿನಾಥನಿಂತೆಂದ            (೬)

"ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಯಾವ ವಿಷಯವನ್ನು ಅರುಹುವಿರಿ ಈಗ" ಎಂದು ಕೇಳಲು, ಶಾಂಡಿಲ್ಯ ಮುನಿಯು "ಯುಧಿಷ್ಟಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು ಹೊಂದಿರುವ ನಾಲ್ಕು ಅರಸುಗಳೆಂದರೆ - ನಳ, ರಾಮ, ಯುಧಿಷ್ಟಿರ ಹಾಗೂ ಹರಿಶ್ಚಂದ್ರ ಎಂದು ಜಗವೆಲ್ಲ ಸಾರುತ್ತಿದೆ. ಅವರಲ್ಲಿ ರಾಮನು ಅತ್ಯಂತ ಗುಣಶೀಲನಾಗಿದ್ದಾನೆ. ಒಮ್ಮೆ ನೆಲ್ಲು(ವ್ರಿಹಿಗ) ಹಾಗೂ ರಾಗಿ(ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎಂದು ತಿಳಿಸುತ್ತಾನೆ.

ಆಗ ಧರ್ಮರಾಯನು ರಾಮಚರಿತೆಯನ್ನು ತಮಗೆ ಹೇಳಬೇಕೆಂದು ಶಾಂಡಿಲ್ಯ ಮುನಿಯನ್ನು ಬಿನ್ನವಿಸಲು, ಆ ಮುನಿಪನು ಅಲ್ಲಿದ್ದವರಿಗೆಲ್ಲ ರಾಮನ ಕಥೆಯನ್ನು ವಿಸ್ತರಿಸಿ ಹೆಳುತ್ತಾನೆ. :

ಕೇಳು ಕುಂತೀ ತನಯ, ಗಂಗಾ ನದಿಯ ದಡದ ಉತ್ತರ ಭಾಗದಲ್ಲಿ ವಿಶಾಲವಾಗಿಯೂ, ವೈಭವಯುತವಾಗಿಯೂ ಇರುವ ಅಯೋಧ್ಯಾಪುರ. ಆ ಪುರದ ಅರಸ ದಶರಥ. ಅವನಿಗೆ ಕೌಸಲ್ಯೆ, ಕೈಕೆ ಹಾಗೂ ಸುಮಿತ್ರೆ - ಈ ಮೂವರು ಅರಸಿಯರು.
ಆ ದಶರಥ ಹಾಗೂ ಕೌಸಲ್ಯೆಯರಿಗೆ ಜನಿಸಿದ ಗುಣನಿಧಿ ಆ ರಾಮ. ಅವನು ತಾಟಕಿಯೆಂಬ ರಾಕ್ಷಸಿಯನ್ನು ಸಂಹರಿಸಿ, ಮಾರೀಚ-ಸುಬಾಹುಗಳನ್ನು ಕೊಂದು, ವಿಶ್ವಾಮಿತ್ರ ಮುನಿಯು ನಡೆಸುತ್ತಿದ್ದ ಮಖ(ಯಾಗ)ವನ್ನು ಯಾವುದೇ ವಿಘ್ನ ಬಾರದಂತೆ ರಕ್ಷಿಸಿದನು. ಆ ನಂತರದಲ್ಲಿ ರಾಮನು ಗೌತಮನ ಸತಿ ಅಹಲ್ಯೆಯ ಶಾಪವನ್ನು ನಿವಾರಿಸಿ, ತನ್ನ ತಮ್ಮ ಲಕ್ಷ್ಮಣ ಹಾಗೂ ಮುನಿ ವಿಶ್ವಾಮಿತ್ರನೊಡಗೂಡಿ ಮಿಥಿಲಾನಗರಕ್ಕೆ ಬಂದನು.
ಮುಂದೆ, ಅಲ್ಲಿನ ಅರಸನಾದ ಜನಕನ ಮಗಳು ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು, ಶುಭಮುಹೂರ್ತದಲ್ಲಿ ರಾಮನು ಸೀತೆಯನ್ನು ವರಿಸಿದನು. ಆ ನಂತರದಲ್ಲಿ ರಾಮನು ತನ್ನವರೊಡಗೂಡಿ ಅಯೋಧ್ಯೆಗೆ ಹೊರಟುಬಂದನು.

ಕೇಳು ಧರ್ಮಜ, ರಾಮನಿಗೆ ಕೂಡ ನಿಮ್ಮಂತೆಯೇ ವನವಾಸ ಮಾಡಬೇಕಾಗಿ ಬಂತು. ಪಿತೃವಚನ ಪಾಲನೆಗೆಂದು ರಾಮನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ಘೋರವಾದ ಕಾನನದಲ್ಲಿ ಇರಬೇಕಾಯಿತು.
"ಭರತನನು ಸಂತೈಸಿ, ಕಾಕಾಸುರನ ಪ್ರಾಣವ ಕಾಯ್ದು, ದಾನವ ತರುಣಿ ನಾಸಿಕವರಿದು, ಮಾಯಾಮೃಗವ ಸಂಹರಿಸಿ, ಸರಸಿಜಾಕ್ಷಿಯನಗಲಿ, ಮಾರ್ಗಾಂತರದಿ ಕಂಡ ಜಟಾಯುವನು - ಮನ ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಗೊಳಿಸಿ..(೧೩)"

ಸೀತೆಯನ್ನು ಹುಡುಕಿ ಹೊರಟ ರಾಮಲಕ್ಷ್ಮಣರಿಗೆ ಸಾವಿನ ಅಂಚಿನಲ್ಲಿದ್ದ ಜಟಾಯುವು ಕಾಣಿಸುತ್ತಾನೆ. ಅವನಿಂದ ರಾಮನು ನಡೆದ ವೃತ್ತಾಂತವನ್ನು(ಸೀತಾ ಅಪಹರಣ, ಹಾಗೂ ರಾವಣನನ್ನು ಎದುರಿಸಿದ ಜಟಾಯುವನ್ನು ರಾವಣನು ಗಾಯಗೊಳಿಸಿದ್ದು) ಕೇಳಿ ತಿಳಿದುಕೊಳ್ಳುತ್ತಾನೆ. ಇಷ್ಟನ್ನೂ ತಿಳಿಸುವ ವೇಳೆಗೆ ಜಟಾಯುವು ಮೃತನಾಗುತ್ತಾನೆ. ಅವನ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಡುತ್ತಾರೆ.
ಮಾರ್ಗ ಮಧ್ಯದಲ್ಲಿ ಹನುಮನನ್ನು ಕಂಡು, ಕಿಷ್ಕಿಂದೆಯನ್ನು ತಲುಪಿ, ಅಲ್ಲಿ ವಾಲಿಯನ್ನು ಹರಿಸಿ, ಸುಗ್ರೀವನು ಕಳುಹಿಸಿದ ವಾನರ ಸೈನ್ಯವನ್ನು ಒಡಗೊಂಡು ರಾಮನು ದಕ್ಷಿಣಕ್ಕೆ ಹೊರಟನು. ಸಮುದ್ರವನ್ನು ದಾಟಲು ಸೇತುಬಂಧವನ್ನು ನಿರ್ಮಿಸಿ, ಲಂಕೆಯನ್ನು ತಲುಪಿ, ರಾವಣ ಕುಂಭಕರ್ಣಾದಿ ದಾನವ ವೀರರನ್ನು ಕೊಂದು, ರಾಮನು ನಂತರದಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿದನು.

ಆ ನಂತರ ರಾಮನು ಸೀತೆಯನ್ನು ಕೈಕೊಂಡು, ತಮ್ಮೊಡನೆ ಅಯೋಧ್ಯೆಗೆ ಬರಲು ವಿಭೀಷಣನನ್ನೂ ಅಹ್ವಾನಿಸುತ್ತಾನೆ. ಅಗ ಅಗಣಿತ ದಾನವ ಸೇನೆಯು ಅವರೊಡನೆ ಅಯೋಧ್ಯೆಗೆ ಹೊರಡಲು ಸಿದ್ಧವಾಯ್ತು.
ವಿಭೀಷಣನು ತನಗೆಂದು ಅರ್ಪಿಸಿದ ಕುಬೇರನ ರಥದಲ್ಲಿ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ ಕುಳಿತಿರಲು, ಅವರೊಡನೆ ಹನುಮ, ಜಾಂಬವಂತ, ವಿಭೀಷಣಾದಿಯಾಗಿ, ದಾನವ ಹಾಗೂ ವಾನರ ಸೈನ್ಯವೂ ಅಯೋಧ್ಯೆಯೆಡೆಗೆ ಹೊರಡುತ್ತಾರೆ.

ಮಾರ್ಗ ಮಧ್ಯದಲ್ಲಿ ಇವರೆಲ್ಲ ವಾಲ್ಮೀಕಿ, ಮುಚುಕುಂದ ಮುಂತಾದ ಮುನಿಗಳ ಆಶ್ರಮಗಳನ್ನು ಸಂದರ್ಶಿಸಿದರು. ನಂತರ ಮುಂದುವರೆದು ಇವರೆಲ್ಲ ಮಾಹವನವೊಂದರಲ್ಲಿ ಬೀಡುಬಿಟ್ಟಿರಲು ಹಲವಾರು ಮುನಿವರರು ಬಂದು ರಾಮನನ್ನು ಕಂಡರು.

ಕೌಶಿಕನು, ಜಮದಗ್ನಿ, ಜನ್ಹು, ಪರಾಶರನು, ಜಾಬಾಲಿ, ಭೃಗು, ದೂರ್ವಾಸ, ಗೌತಮನಾದಿಯಾದ ಸಮಸ್ತ ಮುನಿವರರು ಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರು, ದಾಶರಥಿಯನು ಕಂಡು ಹರಸಿದರಕ್ಷತೆಯ ತಳಿದು (೨೩)

ಅವರೆಲ್ಲ ರಾಮನನ್ನು ಮನಸಾರೆ ಪ್ರಾರ್ಥಿಸಿ, ಹೊಗಳಿ, ವಿವಿಧ ಬಗೆಯಲ್ಲಿ ಸತ್ಕರಿಸಿದರು.

ಅಲ್ಲಿ ನೆರೆದ ಮಹಾಮುನೀಶ್ವರ
ರೆಲ್ಲ ತರಿಸಿದರಖಿಳ ವಸ್ತುವ -
ಬೆಲ್ಲ, ಸಕ್ಕರೆ, ಜೇನುತುಪ್ಪ, ರಸಾಯನಂಗಳಲಿ
ಭುಲ್ಲವಿಸಿ ರಚಿಸಿದ ಸುಭಕ್ಷಗ
ಳೆಲ್ಲವನು ತುಂಬಿದರು ಹೆಡಗೆಗ
ಳಲ್ಲಿ. ಜೋಡಿಸಿ, ಹೊರಿಸಿ ತಂದರು ರಾಮನೋಲಗಕೆ           (೨೮)

ರಾಮನೊಡನೆ ಬಂದವರೆಲ್ಲ ಆ ರುಚಿರುಚಿಯಾದ ಭೋಜ್ಯಗಳೆಲ್ಲವನ್ನು ಮನಸಾರೆ ಸವಿದರು. ಅವರೆಲ್ಲ ಮುನಿವರರನ್ನು ಆನಂದದಿಂದ ಕೊಂಡಾಡಿದರು. ಆಗ ರಾಮನು ಹನುಮನನ್ನು ಕರೆದು ಆ ಭಕ್ಷ್ಯಗಳ ರುಚಿಯನ್ನು ಕುರಿತು ಪ್ರಶ್ನಿಸಿದನು -

ಅನಿಲಸುತ ಬಾರೆಂದು ರಘುನಂ
ದನನು "ಕರುಣದೊಳಿವರ ರುಚಿಯೆಂ
ತೆನಲು", ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ
’ಇನಕುಲಾನ್ವಯತಿಲಕ ಚಿತ್ತೈ
ಸೆನಗೆ ಸವಿಯಹುದಿನ್ನು ಧಾನ್ಯದ
ತನುವನೀಕ್ಷಿಸಬೇಕು, ದೇವರು ತರಿಸಿ ನೀವೆಂದ’                 (೨೯)

ಆಗ ಹನುಮನು ’ಭಕ್ಷ್ಯಗಳೇನೋ ಬಹಳ ರುಚಿಯಾಗಿವೆ. ಆದರೆ ಈ ಭಕ್ಷ್ಯಗಳನ್ನು ಯಾವ ಯಾವ ಧಾನ್ಯಗಳಿಂದ ತಯಾರಿಸಿದ್ದಾರೋ ಆ ಧಾನ್ಯಗಳನ್ನೆಲ್ಲ ಒಮ್ಮೆ ತಾನು ನೋಡಬೇಕು. ದಯವಿಟ್ಟು ತಾವು ಆ ಧಾನ್ಯಗಳನ್ನು ತರಿಸಿ’ ಎಂದು ರಾಮನನ್ನು ಕೇಳುತ್ತಾನೆ.
ಹಾಗೇ ಆಗಲಿ ಎಂದು ರಾಮನು ಗೌತಮ ಮುನಿಯನ್ನು ’ಧಾನ್ಯಗಳನ್ನು ತರಿಸಬೇಕು’ ಎಂದು ವಿನಯದಿಂದ ಕೇಳಿಕೊಳ್ಳುತ್ತಾನೆ. ಆಗ ಗೌತಮ ಮುನಿಯ ಶಿಷ್ಯರು ಎಲ್ಲ ತರದ ಧಾನ್ಯಗಳನ್ನೂ ಹೊತ್ತು ತಂದು ಅಲ್ಲಿದ್ದವರೆಲ್ಲರ ಮುಂದಿಡುತ್ತಾರೆ.

"ನರೆದಲೆಗನಿದು, ನೆಲ್ಲು, ಹಾರಕ, ಬರಗು, ಜೋಳವು, ಕಂಬು, ಸಾಮೆಯು, ಉರುತರದ ನವಣೆಯಿದು ನವಧಾನ್ಯ"ವೆಂದೆನಲು, ಮೆರೆವ ರಾಶಿಯ ಕಂಡು - ’ಇದರೊಳು ಪರಮಸಾರದ ಹೃದಯನಾರೆಂದರಸಿ’ ಕೇಳಿದನಲ್ಲಿರುತಿಹ ಮಹಾಮುನೀಶ್ವರರ                   (೩೨)
(೧. ನರೆದಲೆಗ: ರಾಗಿ, ೨. ನೆಲ್ಲು: ಭತ್ತ. ೩. ಹಾರಕ, ಬರಗು, ಕಂಬು, ಸಾಮೆ, ನವಣೆ - ಬಗೆಬಗೆಯ ಇತರ ಧಾನ್ಯಗಳು).
ಎಲ್ಲ ಧಾನ್ಯಗಳ ಹೆಸರುಗಳನ್ನೂ ಒಂದೊಂದಾಗಿ ಹೇಳುತ್ತಿರಲು, ರಾಮನು - "ಈ ಧಾನ್ಯಗಳಲ್ಲಿ ಉತ್ತಮವಾದದ್ದು ಯಾವುದು?" ಎಂದು ಅಲ್ಲಿದ್ದ ಮುನಿಗಳನ್ನು ಕೇಳುತ್ತಾನೆ. ಆಗ

ಕೆಲರು ಗೋದಿಯ, ಸಾಮೆಯನು ಕೆಲ
ಕೆಲರು ನವಣೆಯ, ಕಂಬು, ಜೋಳವ
ಕೆಲರು ಹಾರಕವೆಂದು, ಕೆಲವರು ನೆಲ್ಲನತಿಶಯವ,
ಕೆಲರು ನರೆದಲಗನನು ಪತಿಕರಿ
ಸಲದ ನೋಡಿದ ನೃಪತಿ"ಯದರೊಳು
ಹಲವು ಮತವೇಕೊಂದನೇ ಪೇಳೆನಲು", ಗೌತಮನು:              (೩೩)

(ಅಲ್ಲಿದ್ದ ಕೆಲವರು ಗೋಧಿಯನ್ನೂ, ಕೆಲವರು ಸಾಮೆಯನ್ನೂ, ಕೆಲವರು ಇತರ ಧಾನ್ಯಗಳನ್ನೂ, ಕೆಲವರು ಭತ್ತವನ್ನೂ, ಹಾಗೇ ಇನ್ನೂ ಕೆಲವರು ರಾಗಿಯನ್ನೂ ಪತಿಕರಿಸಿ(ಪತಿಕರಿಸು: ಅಂಗೀಕರಿಸು/ಹೊಗಳು) ನುಡಿದರು. ಆಗ ರಾಮನು "ಹೀಗೆ ಹಲವು ಅಭಿಪ್ರಾಯಗಳೇಕೆ, ಯಾವುದಾದರೂ ಒಂದನ್ನು ಒಪ್ಪಿ ಹೇಳಿ" ಎನ್ನಲು, ಗೌತಮನು..)

ದಾಶರಥಿ ಚಿತ್ತೈಸು ನಮ್ಮಯ
ದೇಶಕತಿಶಯ ನರೆದಲೆಗನೇ
ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
"ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸು ಪರಿಯಲಿ ಮಾಡುವರೆ ಶಿವ"ಯೆಂದನಾ ವ್ರಿಹಿಗ           (೩೪)

"ಎಲ್ಲ ಧರ್ಮದ ಸಾರವನು ನೀವ್
ಬಲ್ಲಿರರಿಯಿರೆ ಎಲ್ಲರನು ನೀ
ವಿಲ್ಲಿ ನುಡಿವ ಉಪೇಕ್ಷೆಯುಂಟೇ! ಸಾಕದಂತಿರಲಿ,
ನೆಲ್ಲು ನಾನಿರೆ, ಗೋದಿ ಮೊದಲಾ
ದೆಲ್ಲ ಧಾನ್ಯಗಳಿರಲು ಇದರಲಿ
ಬಲ್ಲಿದನು ನರೆದಲೆಗನೆಂಬುದಿದಾವ ಮತ?"ವೆಂದ               (೩೫)

ಗೌತಮನು "ಕೇಳು ದಾಶರಥಿ, ನಮ್ಮ ದೇಶಕ್ಕೆ ಅತಿಶಯವಾದ ಈ ನರೆದಲೆಗನೇ(ರಾಗಿ) ಮಿಕ್ಕೆಲ್ಲವುಗಳಿಗಿಂತ ಉತ್ತಮವಾದ ಧಾನ್ಯ. ಏಕೆಂದರೆ.." ಎಂದು ನುಡಿಯುತ್ತಿರುವಷ್ಟರಲ್ಲೇ ಅಲ್ಲಿದ್ದ ನೆಲ್ಲಿಗೆ(ವ್ರಿಹಿಗ: ನೆಲ್ಲು) ರೋಷವುಕ್ಕುತ್ತದೆ.
ಕೂಡಲೆ ನೆಲ್ಲು ಸಿಡಿದೆದ್ದು ಗೌತಮನನ್ನು ಕುರಿತು "ಆಹಾ! ಲೇಸನಾಡಿದಿರಿ ಗೌತಮರೇ, ದೋಷರಹಿತರಾದ ನೀವೂ ಹೀಗೆ ಪಕ್ಷಪಾತದಿಂದ ನುಡಿಯಬಹುದೇ. ಶಿವಶಿವಾ!
ಎಲ್ಲ ಧರ್ಮಗಳ ಸಾರವನ್ನೂ ಅರಿತ ನೀವು ಹೀಗೆ ಉಪೇಕ್ಷಿಸಿ ನುಡಿಯುವುದು ಸರಿಯೇ? ಅಲ್ಲ, ನೆಲ್ಲು ನಾನಿರುವಾಗ, ಗೋಧಿ ಮುಂತಾದ ಎಲ್ಲ ಧಾನ್ಯಗಳೂ ಇಲ್ಲಿರುವಾಗ ಇವರೆಲ್ಲರಲ್ಲಿ ಈ ರಾಗಿಯೇ ಶ್ರೇಷ್ಠ ಎಂದು ಹೇಳುವುದು ಎಷ್ಟು ಸರಿ. ಇದಾವ ನ್ಯಾಯ?" ಎಂದು ಗೌತಮನನ್ನು ಪ್ರಶ್ನಿಸುತ್ತದೆ ನೆಲ್ಲು.

(ಮುಂದುವರೆಯುತ್ತದೆ....)

No comments:

Post a Comment