ಈಗಲೂ ’ಹಂಪಿ’
ಅಥವಾ ’ವಿಜಯನಗರ’ ಎಂಬ ಹೆಸರನ್ನು
ಕೇಳಿದಾಗ ನಮಗೆಲ್ಲ "ಆ ಕಾಲದಲ್ಲಿ ವಿಜಯನಗರದ ಸಂತೆಗಳಲ್ಲಿ ಮುತ್ತು-ರತ್ನ, ವಜ್ರ-ವೈಢೂರ್ಯಗಳನ್ನು ರಾಶಿ
ಹಾಕಿ ಮಾರುತ್ತಿದ್ದರಂತೆ" ಎಂಬ ಮಾತು ಒಮ್ಮೆಯಾದರೂ ನೆನಪಾಗುತ್ತದೆ.
ಹೌದು, ಹಂಪಿಯು ಒಂದು ಕಾಲಕ್ಕೆ ಅಂತಹ ಸಮೃದ್ಧಿ,
ವೈಭವಗಳಿಗೆ ಸಾಕ್ಷಿಯಾಗಿದ್ದಂತಹ ಸ್ಥಳ. ದುರದೃಷ್ಟವಶಾತ್
ಅಂತಹ ಮಹತ್ಕಾಲವೊಂದು ಗತಿಸಿಹೋಯಿತಾದರೂ ಇಂದಿಗೂ ಆ ಕಾಲದ, ಆ ವೈಭವದ ಕುರುಹಾಗಿ
ವಿಜಯನಗರದ ಕಾಲದ ಕೆಲವು ಬಜಾರುಗಳು ಉಳಿದುಕೊಂಡಿವೆ. ಹಂಪಿಯ ಬಹುತೇಕ ಎಲ್ಲ
ಪ್ರಮುಖ ದೇವಾಲಯಗಳ ಸಮೀಪದಲ್ಲಿಯೂ ಇಂತಹ ಬಜಾರುಗಳ ಅವಶೇಷಗಳನ್ನು ಕಾಣಬಹುದಾದರೂ. ಈಗ ನಾವು ನೋಡಹೊರಟಿರುವ ಬಜಾರು ವಿರೂಪಾಕ್ಷ ದೇವಾಲಯದ ಎದುರಿಗಿರುವ ರಥಬೀದಿಯದು.
ವಿರೂಪಾಕ್ಷ ದೇವಾಲಯದ ಎದುರು ಸುಮಾರು
ಒಂದು ಕಿಲೋಮೀಟರ್ ದೂರದವರೆಗೂ ಇರುವ ವಿಶಾಲ ರಸ್ತೆಯ ಎರಡೂ ಬದಿಯಲ್ಲಿ ನಿಂತಿರುವ ಸಾಲುಸಾಲು ಕಲ್ಲುಮಂಟಪಗಳನ್ನು
ನೋಡಬಹುದು. ಈ ಬೀದಿಯನ್ನೇ ಇಲ್ಲಿನ ಬಜಾರು ಬೀದಿ ಅಥವಾ ರಥಬೀದಿ ಎಂದು ಕರೆಯುತ್ತಾರೆ. ವಿಜಯನಗರದ ಕಾಲದಲ್ಲಿ ಇದೊಂದು ಪ್ರಮುಖ ಮಾರುಕಟ್ಟೆಯಾಗಿದ್ದಂತೆ ತಿಳಿದುಬರುತ್ತದೆ.
ಈಗ ಈ ಮಂಟಪಗಳ ಪೈಕಿ ಬಹುಪಾಲು ಶಿಥಿಲಾವಸ್ಥೆಯಲ್ಲಿವೆ. ಆದರೂ,
ಕೆಲವು ಮಂಟಪಗಳು ಸುಸ್ಥಿತಿಯಲ್ಲಿದ್ದು, ಈಗಲೂ ಬಳಕೆಗೆ
ಯೋಗ್ಯವಾಗಿವೆ. ಹಂಪಿಯ ಬಸ್ ನಿಲ್ದಾಣದ ಬಳಿಯಿರುವ ಬ್ಯಾಂಕ್, ಹಂಪಿಯ ಪೋಲೀಸ್ ಠಾಣೆ, ಛಾಯಾಚಿತ್ರ ಸಂಗ್ರಹಣಾಲಯಗಳು ಈ ಕಲ್ಲುಮಂಟಪಗಳನ್ನೇ
ದುರಸ್ಥಿಗೊಳಿಸಿ ನಿರ್ಮಿಸಿದುವಾಗಿವೆ. ವಿರೂಪಾಕ್ಷಾಲಯದ ಹತ್ತಿರವಿರುವ ಕೆಲವು
ಮಂಟಪಗಳ ಬಳಿ ಇನ್ನೂ ಉತ್ಖನನ ಪ್ರಗತಿಯಲ್ಲಿದ್ದಂತೆ ತೋರುತ್ತದೆ. ಈ ಬೀದಿಯಲ್ಲಿನ
ಬಹುತೇಕ ಮಂಟಪಗಳು ಎರಡಂತಸ್ತಿನವಾಗಿರುವುದು ವಿಶೇಷ.
೧೬ನೇ ಶತಮಾನದಲ್ಲಿ ವಿಜಯನಗರವನ್ನು
ಸಂದರ್ಶಿಸಿದ್ದ ಯಾತ್ರಿಕ ಡೊಮಿಂಗೊಸ್ ಪೇಯಸ್ ನ ದಾಖಲೆಗಳಲ್ಲಿ ಆ ಕಾಲದ ಹಂಪಿಯ/ವಿಜಯನಗರದ ಬಜಾರುಗಳ
ಚಿತ್ರಣವನ್ನು ಕಾಣಬಹುದು. ಪ್ರಸ್ತುತ ನಾವು ನೋಡಹೊರಟಿರುವ ವಿರೂಪಾಕ್ಷ ದೇವಾಲಯದ
ಎದುರಿನ ಬಜಾರು ಬೀದಿ/ ರಥಬೀದಿಯ ಬಗ್ಗೆ ಅವನ ಮಾತುಗಳು ಇಂತಿವೆ (ವಿರೂಪಾಕ್ಷ ದೇವಾಲಯದ ಮಹಾದ್ವಾರದ ಬಗ್ಗೆ ಹೇಳುವ ಸ್ವಲ್ಪ ಮೊದಲು ಆಲಯದ ಎದುರಿಗಿದ್ದ ಬಜಾರಿನ
ಬಗ್ಗೆ ವರ್ಣಿಸಿದ್ದಾನೆ):
"In this pagoda, opposite
to its principal gate which is to the east, there is a very beautiful street of
very beautiful houses with balconies and arcades, in which are sheltered the
pilgrims that come to it, and there are also houses for lodging for the upper
classes; the king has a palace in the same street, in which he resides when he
visits this pagoda"1
ವಿಜಯನಗರದ ರಾಜಬೀದಿಗಳನ್ನೂ, ಬಜಾರನ್ನೂ ಕುರಿತು
ಬರೆಯುತ್ತ - ಇನ್ನೊಂದು ಕಡೆ ಹೀಗೆ ದಾಖಲಿಸಿದ್ದಾನೆ:
"Going forward, you have a
broad and beautiful street, full of rows of fine houses and streets of the sort
I have described, and it is to be understood that the houses belong to men rich
enough to afford such. In this street live many merchants, and there you will
find all sort of rubies, and diamonds, and emaralds, and pearls, and
seed-pearls, and cloths, and every other sort of thing there is on earth and
that you may wish to buy"2
ಈ ಎರಡೂ ವಿವರಣೆಯ ಆಧಾರದ ಮೇಲೆ ಈಗ
ನಾವು ಹಂಪಿಯಲ್ಲಿ ಕಾಣಬಹುದಾದ ಬಜಾರು ಬೀದಿಯ ಗತಸ್ವರೂಪವನ್ನೂ, ಅದರ ವೈಭವವನ್ನೂ
ಒಮ್ಮೆ ಕಲ್ಪಿಸಿಕೊಳ್ಳಬಹುದು. (ಕಮಲಾಪುರದ ಬಳಿಯಿರುವ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ
ಹಂಪಿಯ ಬಜಾರಿನ ಚಿತ್ರಣವಿರುವ ವರ್ಣಚಿತ್ರವೊಂದಿದೆ. ಅದು ಪೇಯಸನ ಈ ವಿವರಣೆಗಳಿಗೆ
ತಕ್ಕಂತಿದೆ)
ಈ ಬಜಾರು ರಸ್ತೆ/ ತೇರುಬೀದಿಯು ವಿರೂಪಾಕ್ಷನ
ಆಲಯದಿಂದ ನಂದಿಮಂಟಪದವರೆಗೂ ಹಬ್ಬಿದೆ. ಆಲಯದ ಕಡೆಯಿರುವ ಮಂಟಪಗಳಿಗೆ ಹೋಲಿಸಿದರೆ
ನಂದಿಮಂಟಪದ ಕಡೆಗಿರುವ ಮಂಟಪಗಳು ಗಾತ್ರದಲ್ಲಿಯೂ ರಚನೆಯಲ್ಲಿಯೂ ಉತ್ತಮವಾಗಿರುವಂತೆ ತೋರುತ್ತದೆ.
ನಂದಿಮಂಟಪದ ಎದುರಿಗೇ ಸುಂದರವಾದ ರಂಗಮಂಟಪವೊಂದಿದೆ. ಕುಸುರಿ ಕೆತ್ತನೆಗಳಿರುವ
ಹತ್ತು ಹಲವು ಕಂಬಗಳಿಂದ ಕೂಡಿದ ಈ ಮಂಟಪವು ಸುಸ್ಥಿರವಾಗಿದ್ದು, ಸುಂದರವಾಗಿದೆ.
ವಿರೂಪಾಕ್ಷ ಆಲಯದ ನೇರಕ್ಕೆ, ರಥಬೀದಿಯ ಈ ಕೊನೆಗೆ
ನಂದಿಮಂಟಪವಿದೆ. ಬೃಹದಾಕಾರದ ಈ ಬಸವಣ್ಣನ ಶಿಲ್ಪವು ಏಕಶಿಲಾವಿಗ್ರಹವೆಂದು
ತಿಳಿದುಬರುತ್ತದೆ. ಕಾಲದ, ದಾಳಿಯ ಕುರುಹಾಗಿ ಈ
ವಿಗ್ರಹವು ಭಿನ್ನಗೊಂಡಿದ್ದರೂ ಅದರ ಸರಳ ಸೌಂದರ್ಯಕ್ಕೇನೂ ಕುಂದಾಗಿಲ್ಲ. ವಿಗ್ರಹದ ಸುತ್ತ ಕಟ್ಟಲಾಗಿರುವ ಮಂಟಪವೂ ಎರಡು ಮಹಡಿಯದ್ದಾಗಿದ್ದು, (ಇತ್ತೀಚಿನ ಸಂರಕ್ಷಣೆಯ ಫಲವಾಗಿ) ಈಗ ಸುಸ್ಥಿತಿಯಲ್ಲಿದೆ.
ಈ ಮಂಟಪದ ಪಕ್ಕದಲ್ಲೇ ವಿಶಾಲವಾದ ಮೆಟ್ಟಿಲುಗಳಿದ್ದು
ಈ ದಾರಿಯಾಗಿ ಅಚ್ಯುತರಾಯನ ದೇವಾಲಯಕ್ಕೆ ಹೋಗಬಹುದಾಗಿದೆ (ಅಚ್ಯುತರಾಯನ ಆಲಯದ ಬಗ್ಗೆ ಇನ್ನೊಮ್ಮೆ
ಹೇಳುತ್ತೇನೆ)
ಇಲ್ಲಿಗೆ ಸಮೀಪದಲ್ಲೇ ಮಾತಂಗಪರ್ವತವಿದೆ. ಮಾತಂಗಪರ್ವತವು
ರಾಮಾಯಣ, ಮಹಾಭಾರತ ಮುಂತಾದ ಕಾವ್ಯಗಳಲ್ಲಿಯೂ ಉಲ್ಲೇಖಗೊಂಡಿದೆ3. ಜೈನರ ಕೆಲವು ಕೃತಿಗಳಲ್ಲಿಯೂ
ಮಾತಂಗಪರ್ವತದ ಪ್ರಸ್ತಾಪವುಂಟು4. ಹಳಗನ್ನಡದ ಕವಿಗಳ
ಪೈಕಿ ಹರಿಹರ ರಾಘವಾಂಕರು ತಮ್ಮ ಕೃತಿಗಳಲ್ಲಿ ಮಾತಂಗಪರ್ವತವನ್ನು ಮತ್ತೆಮತ್ತೆ ಉಲ್ಲೇಖಿಸಿದ್ದಾರೆ5.
ನಂದಿಮಂಟಪದ ಎಡಗಡೆಯಿಂದ ಮಾತಂಗಪರ್ವತವನ್ನೇರಿ
ಹೋಗಲು ಮೆಟ್ಟಿಲುಗಳಿವೆ.
ಹಲವು ಪುರಾಣ-ಕಾವ್ಯಗಳ ಪ್ರಕಾರ ಹಂಪಿಯ ಸುತ್ತಮುತ್ತ ಇದ್ದ
ಪರ್ವತಗಳ ಪೈಕಿ ಪ್ರಮುಖವಾದವೆಂದರೆ - ಹೇಮಕೂಟ, ಮತಂಗ/ಮಾತಂಗ ಪರ್ವತ, ಮಾಲ್ಯವಂತ,
ಋಷ್ಯಮೂಕ ಪರ್ವತ ಹಾಗೂ ಕಿಷ್ಕಿಂದ ಪರ್ವತ. ಇವುಗಳಲ್ಲಿ
ಮತಂಗಪರ್ವತವೇ ಬಹು ಎತ್ತರವಾದದ್ದು. ಇದರ ತುದಿಯಲ್ಲಿ ನಿಂತು ನೋಡಿದರೆ ಹಂಪಾಕ್ಷೇತ್ರದ
ಸುತ್ತಲಿನ ಪರಿಸರವೆಲ್ಲವನ್ನೂ ಕಾಣಬಹುದು. ಕೆಲವು ಶಾಸನಗಳ ಪ್ರಕಾರ ಹಾಗೂ
ಸ್ಥಳೀಯ ಐತಿಹ್ಯದ ಪ್ರಕಾರ ಮಾತಂಗ ಪರ್ವತದ ಮೇಲಿಂದ ವಿರೂಪಾಕ್ಷನನ್ನು (ಅಥವಾ
ವಿರೂಪಾಕ್ಷನ ಆಲಯವನ್ನು) ದರ್ಶಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆಯೆಂದು.
ಹಾಗೂ :-
"ಅಹೋಬಲನ ’ವಿರೂಪಾಕ್ಷನ ವಸಂತೋತ್ಸವ ಚಂಪೂ’ ಗ್ರಂಥದಲ್ಲಿ ಮಾತಂಗ ಪರ್ವತದ
ಉಲ್ಲೇಖವಿದೆ. ವಿರೂಪಾಕ್ಷ ದೇವರ ರಥೋತ್ಸವ ಸಂದರ್ಭದಲ್ಲಿ ಜನರಿಗೆ ಇಲ್ಲಿನ
ಜಾಗ ಸಾಲದೆ ಹೇಮಕೂಟ ಮತ್ತು ಮಾತಂಗಪರ್ವತದ ಬಂಡೆಗಳ ಮೇಲೆ ನಿಂತು ರಥೋತ್ಸವವನ್ನು ವೀಕ್ಷಿಸುತ್ತಿದ್ದರೆಂದಿದೆ"6
ಚಾರಣಪ್ರಿಯರಿಗೆ ಮಾತಂಗಪರ್ವತವು ಬಹಳ
ಇಷ್ಟವಾಗಬಹುದು. ಮೊದಲೇ ತಿಳಿಸಿದಂತೆ - ಇದರ ತುದಿಯಿಂದ ಹಂಪಿಯ ಸಮಸ್ತ ದೃಶ್ಯವೂ
ಕಾಣುತ್ತದೆಯೆಂಬುದು ಒಂದು ಕಾರಣವಾದರೆ, ಇಲ್ಲಿಂದ ಸೂರ್ಯೋದಯ/ ಸೂರ್ಯಾಸ್ತದ ಸೊಬಗನ್ನು ಕಂಡು ಆನಂದಿಸಬಹುದು ಎಂಬುದು ಮತ್ತೊಂದು ಕಾರಣ.
ರಾಮಾಯಣದಲ್ಲಿ ಮತಂಗಮುನಿಗಳ ಆಶ್ರವಿರುವುದರಿಂದ
ಈ ಪರ್ವತಕ್ಕೆ ಮತಂಗಪರ್ವತವೆಂಬ ಹೆಸರು ಬಂದಿತೆಂದು ವಿವರಿಸಿದೆ. ಕಿಷ್ಕಿಂದಾಕಾಂಡದ
ಬಹುಪ್ರಮುಖ ಘಟನೆಗಳು ಮಾತಂಗಪರ್ವತದ ಪ್ರಾಂತದಲ್ಲೇ ನಡೆಯುತ್ತವೆ. ರಾಮಲಕ್ಷ್ಮಣರು
ವೃದ್ಧೆ ಶಬರಿಯನ್ನು ಭೇಟಿಮಾಡುವುದೂ ಇದೇ ಪ್ರದೇಶದಲ್ಲೇ.
ಹರಿಹರನ ’ಗಿರಿಜಾಕಲ್ಯಾಣ’ದ ಪ್ರಕಾರ ಮನ್ಮಥನು (ಹೇಮಕೂಟದಲ್ಲಿ) ಧ್ಯಾನಮಗ್ನನಾಗಿದ್ದ ಶಿವನ ಕಡೆಗೆ ಪುಷ್ಪಬಾಣಗಳನ್ನು ಪ್ರಯೋಗಿಸಿದ್ದು ಮಾತಂಗಪರ್ವತದ ಮೇಲಿನಿಂದಲೇ.
ಇನ್ನು, ಮಾತಂಗ ಸಮುದಾಯದವರ
ಐತಿಹ್ಯದ ಪ್ರಕಾರ ತಮ್ಮ ಕುಲದೇವತೆಯಾದ ಮಾತಂಗಿಯು ಇದ್ದುದು ಈ ಪರ್ವತದಲ್ಲಿಯೇ ಆದ್ದರಿಂದ ಈ ಕ್ಷೇತ್ರಕ್ಕೆ
’ಮಾತಂಗಿ ಪರ್ವತ’ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.
ಜೈನರಲ್ಲಿ ಸಪ್ತದ್ವೀಪಗಳ ವರ್ಣನೆಯ
ಸಮಯದಲ್ಲಿ ಮಾತಂಗ ಪರ್ವತದ ಪ್ರಸ್ತಾಪವುಂಟು.
ಹೀಗೆ, ಮಾತಂಗ ಪರ್ವತದ
ಪೌರಾಣಿಕ ಮೂಲದ ಬಗ್ಗೆ ಹಲವು ಕತೆಗಳಿವೆಯಾದ್ದರಿಂದ ಅವುಗಳಲ್ಲಿ ಯಾವುದನ್ನು ನಂಬುವುದು ಯಾವುದನ್ನು
ಬಿಡುವುದು ಎಂಬುದು ನಮಗೆ ನಿಲುಕದ ವಿಚಾರ. ಅದೇನೇ ಇದ್ದಾಗಿಯೂ ಕೂಡ,
ಮಾತಂಗ ಪರ್ವತವು ಧಾರ್ಮಿಕವಾಗಿಯೂ ಹಾಗೂ ಐತಿಹಾಸಿಕವಾಗಿಯೂ ಬಹಳ ಪ್ರಾಮುಖ್ಯತೆಯನ್ನು
ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಸುಮಾರು ೨೫ರಷ್ಟು ಶಾಸನಗಳು ದೊರಕಿವೆಯೆಂಬುದು
ಈ ಮಾತಿಗೆ ಪುಷ್ಟಿ ಕೊಡುತ್ತದೆ.
ಮಾತಂಗಪರ್ವತದ ತುದಿಯಲ್ಲಿ ವೀರಭದ್ರ, ಶಿವ,
ಭದ್ರಕಾಳಿ, ಗಣೇಶ ಹಾಗೂ ಸ್ಕಂದ ದೇವಾಲಯಗಳಿವೆ.
ಭದ್ರಕಾಳಿ, ವೀರಭದ್ರ, ಶಿವ ಹಾಗೂ
ಗಣೇಶನ ಆಲಯಗಳು ಒಂದೇ ಸೂರಿನಡಿ - ಬೇರೆಬೇರೆ ಗರ್ಭಗೃಹಗಳಲ್ಲಿವೆ.
ಇವೆಲ್ಲವಕ್ಕೂ ಸೇರಿ ಒಂದೇ ಒಂದು ಶಿಖರವಿದೆ. ಸ್ಥಳೀಯರು
’ದೂರದಿಂದ ನೋಡಿದರೆ ಆ ದೇವಾಲಯವು ಶಿವಲಿಂಗಾಕಾರದಲ್ಲಿದ್ದಂತೆ ತೋರುತ್ತದೆ’
ಎನ್ನುತ್ತಾರೆ. ಪೂರ್ತಿಯಾಗಿ ಸುಸ್ಥಿತಿಯಲ್ಲಿಲ್ಲವಾದರೂ
ಈ ಆಲಯದಲ್ಲಿ ಈಗಲೂ ನಿತ್ಯಪೂಜೆಯ ಕಾರ್ಯಗಳು ನೆರವೇರುತ್ತಿರುವಂತೆ ತೋರುತ್ತದೆ.
ಆಲಯವು ಮಂಟಪಗಳಿಂದ ಕೂಡಿದ್ದು ಸರಳ
ಸುಂದರವಾಗಿದೆ. ಇದರ ವಾಸ್ತುಶೈಲಿಯ ಹಿನ್ನೆಲೆಯಲ್ಲಿ - ಈ ಆಲಯದ ನಿರ್ಮಾಣವು ಬಹುಹಿಂದೆಯೇ
ಆಗಿದ್ದು, ಕಾಲಕಾಲಕ್ಕೆ ಹಲವು ಮನೆತನದ ಅರಸುಗಳ ಕಾಲದಲ್ಲಿ ಇದು ಜೀರ್ಣೋದ್ಧಾರವಾಗಿರಬಹುದೆಂದು
ಊಹಿಸಬಹುದಾಗಿದೆ. ಈಗಿನ ಆಲಯ ಶಿಖರ ಬಹುಶಃ ವಿಜಯನಗರಕಾಲದಲ್ಲಿ ನಿರ್ಮಿಸಿದ್ದಿರಬಹುದು.
ಆಲಯದ ಸಮೀಪದಲ್ಲಿ ಕೆಲವು ಮಂಟಪಗಳನ್ನೂ ಸ್ತಂಭಗಳನ್ನೂ ಕಾಣಬಹುದು. ಆಲಯದ ಛಾವಣಿಯನ್ನೇರಿ
ನೋಡಿದರೆ ಹಂಪೆಯೆಂಬ ಸ್ವರ್ಗವು ಕಾಣುತ್ತದೆ. ಅಚ್ಯುತರಾಯನ ಗುಡಿ,
ದೂರದಲ್ಲಿ ಹರಿಯುತ್ತಿರುವ ತುಂಗಾನದಿ, ಇತ್ತ ನೋಡಿದರೆ ವಿರೂಪಾಕ್ಷನ ಗುಡಿ... ಹೀಗೆ,
ಎತ್ತ ನೋಡಿದರೂ ವಿಜಯನಗರವೇ ಕಾಣುತ್ತದೆ. ಅಗಲವಾದ ಸೋಪಾನಗಳಿರುವ
ಮೆಟ್ಟಿಲ ದಾರಿಯೂ ಈ ಆಲಯಕ್ಕಿದೆ.
ಸ್ಕಂದ ದೇವಾಲಯವು ಇತರ ದೇವಾಲಯಗಳಿರುವ
ಪ್ರದೇಶಕ್ಕಿಂತ ಕೆಳಭಾಗದಲ್ಲಿದೆ.
ಇಲ್ಲಿಗೆ ಸಮೀಪದಲ್ಲೇ ಕಲ್ಲುಬಂಡೆಯೊಂದರ ಮೇಲೆ ಕಡೆದಿರುವ ಭೈರವಮೂರ್ತಿಯೊಂದು ಕಾಣುತ್ತದೆ.
ಶಿಲ್ಪದ ಸ್ವಲ್ಪಭಾಗವು ಭಿನ್ನಗೊಂಡಿದೆಯಾದರೂ ಬಹಳ ಸುಂದರವಾದ ಈ ಭೈರವಮೂರ್ತಿಯು ನೋಡುಗರ
ಮನಸೆಳೆಯುತ್ತದೆ.
ಬೆಟ್ಟದ ಮಧ್ಯಭಾಗದಲ್ಲಿರುವ ಗುಹೆಯೊಂದರಲ್ಲಿ ಗಣಪತಿಯ ಸುಂದರ ವಿಗ್ರಹವೊಂದಿದೆ. ಇನ್ನೂ ಕೆಲವು ಗಣನೀಯವಾದ ಶಿಲ್ಪ-ಶಾಸನಗಳನ್ನು ಮಾತಂಗ ಪರ್ವತದ ಪ್ರದೇಶದಲ್ಲಿ ಕಾಣಬಹುದು.
ಟಿಪ್ಪಣಿಗಳು:
೧. ಮತ್ತು ೨. "Narratives of Domingos
Paes", from 'A forgotten Empire' - by Robert Sewell
೩. ರಾಮಾಯಣದ ಕಿಷ್ಕಿಂದಾಕಾಂಡ; ಮಹಾಭಾರತದ ಆದಿಪರ್ವ
೪. ಮಾಘಣಂದಿಯ "ಪದಾರ್ಥ ಸಾರ"
೫. ಉದಾಹರಣೆಗೆ - ಹರಿಹರನ ’ಗಿರಿಜಾಕಲ್ಯಾಣ ಮಹಾಪ್ರಬಂಧಂ’ ಹಾಗೂ ರಾಘವಾಂಕನ
’ಹರಿಶ್ಚಂದ್ರಕಾವ್ಯಂ’
೬. ವಿಜಯನಗರ ಅಧ್ಯಯನ - ಸಂಪುಟ ೮
Good write up :) Hope you travel more places often and write about them :)
ReplyDeleteWhat a fine lEkhana! Shabhaash!
ReplyDeleteThank you, Niranjan and Arun :)
ReplyDelete