Sunday, 20 December 2015

ಪಂಪಾಕ್ಷೇತ್ರ, ನಾನು ಕಂಡಂತೆ - ೨

ಈಗಲೂ ಹಂಪಿಅಥವಾ ವಿಜಯನಗರಎಂಬ ಹೆಸರನ್ನು ಕೇಳಿದಾಗ ನಮಗೆಲ್ಲ "ಆ ಕಾಲದಲ್ಲಿ ವಿಜಯನಗರದ ಸಂತೆಗಳಲ್ಲಿ ಮುತ್ತು-ರತ್ನ, ವಜ್ರ-ವೈಢೂರ್ಯಗಳನ್ನು ರಾಶಿ ಹಾಕಿ ಮಾರುತ್ತಿದ್ದರಂತೆ" ಎಂಬ ಮಾತು ಒಮ್ಮೆಯಾದರೂ ನೆನಪಾಗುತ್ತದೆ. ಹೌದು, ಹಂಪಿಯು ಒಂದು ಕಾಲಕ್ಕೆ ಅಂತಹ ಸಮೃದ್ಧಿ, ವೈಭವಗಳಿಗೆ ಸಾಕ್ಷಿಯಾಗಿದ್ದಂತಹ ಸ್ಥಳ. ದುರದೃಷ್ಟವಶಾತ್ ಅಂತಹ ಮಹತ್ಕಾಲವೊಂದು ಗತಿಸಿಹೋಯಿತಾದರೂ ಇಂದಿಗೂ ಆ ಕಾಲದ, ಆ ವೈಭವದ ಕುರುಹಾಗಿ ವಿಜಯನಗರದ ಕಾಲದ ಕೆಲವು ಬಜಾರುಗಳು ಉಳಿದುಕೊಂಡಿವೆ. ಹಂಪಿಯ ಬಹುತೇಕ ಎಲ್ಲ ಪ್ರಮುಖ ದೇವಾಲಯಗಳ ಸಮೀಪದಲ್ಲಿಯೂ ಇಂತಹ ಬಜಾರುಗಳ ಅವಶೇಷಗಳನ್ನು ಕಾಣಬಹುದಾದರೂ. ಈಗ ನಾವು ನೋಡಹೊರಟಿರುವ ಬಜಾರು ವಿರೂಪಾಕ್ಷ ದೇವಾಲಯದ ಎದುರಿಗಿರುವ ರಥಬೀದಿಯದು.


 

ವಿರೂಪಾಕ್ಷ ದೇವಾಲಯದ ಎದುರು ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಇರುವ ವಿಶಾಲ ರಸ್ತೆಯ ಎರಡೂ ಬದಿಯಲ್ಲಿ ನಿಂತಿರುವ ಸಾಲುಸಾಲು ಕಲ್ಲುಮಂಟಪಗಳನ್ನು ನೋಡಬಹುದು. ಈ ಬೀದಿಯನ್ನೇ ಇಲ್ಲಿನ ಬಜಾರು ಬೀದಿ ಅಥವಾ ರಥಬೀದಿ ಎಂದು ಕರೆಯುತ್ತಾರೆ. ವಿಜಯನಗರದ ಕಾಲದಲ್ಲಿ ಇದೊಂದು ಪ್ರಮುಖ ಮಾರುಕಟ್ಟೆಯಾಗಿದ್ದಂತೆ ತಿಳಿದುಬರುತ್ತದೆ.

ಈಗ ಈ ಮಂಟಪಗಳ ಪೈಕಿ ಬಹುಪಾಲು ಶಿಥಿಲಾವಸ್ಥೆಯಲ್ಲಿವೆ. ಆದರೂ, ಕೆಲವು ಮಂಟಪಗಳು ಸುಸ್ಥಿತಿಯಲ್ಲಿದ್ದು, ಈಗಲೂ ಬಳಕೆಗೆ ಯೋಗ್ಯವಾಗಿವೆ. ಹಂಪಿಯ ಬಸ್ ನಿಲ್ದಾಣದ ಬಳಿಯಿರುವ ಬ್ಯಾಂಕ್, ಹಂಪಿಯ ಪೋಲೀಸ್ ಠಾಣೆ, ಛಾಯಾಚಿತ್ರ ಸಂಗ್ರಹಣಾಲಯಗಳು ಈ ಕಲ್ಲುಮಂಟಪಗಳನ್ನೇ ದುರಸ್ಥಿಗೊಳಿಸಿ ನಿರ್ಮಿಸಿದುವಾಗಿವೆ. ವಿರೂಪಾಕ್ಷಾಲಯದ ಹತ್ತಿರವಿರುವ ಕೆಲವು ಮಂಟಪಗಳ ಬಳಿ ಇನ್ನೂ ಉತ್ಖನನ ಪ್ರಗತಿಯಲ್ಲಿದ್ದಂತೆ ತೋರುತ್ತದೆ. ಈ ಬೀದಿಯಲ್ಲಿನ ಬಹುತೇಕ ಮಂಟಪಗಳು ಎರಡಂತಸ್ತಿನವಾಗಿರುವುದು ವಿಶೇಷ.


೧೬ನೇ ಶತಮಾನದಲ್ಲಿ ವಿಜಯನಗರವನ್ನು ಸಂದರ್ಶಿಸಿದ್ದ ಯಾತ್ರಿಕ ಡೊಮಿಂಗೊಸ್ ಪೇಯಸ್ ನ ದಾಖಲೆಗಳಲ್ಲಿ ಆ ಕಾಲದ ಹಂಪಿಯ/ವಿಜಯನಗರದ ಬಜಾರುಗಳ ಚಿತ್ರಣವನ್ನು ಕಾಣಬಹುದು. ಪ್ರಸ್ತುತ ನಾವು ನೋಡಹೊರಟಿರುವ ವಿರೂಪಾಕ್ಷ ದೇವಾಲಯದ ಎದುರಿನ ಬಜಾರು ಬೀದಿ/ ರಥಬೀದಿಯ ಬಗ್ಗೆ ಅವನ ಮಾತುಗಳು ಇಂತಿವೆ (ವಿರೂಪಾಕ್ಷ ದೇವಾಲಯದ ಮಹಾದ್ವಾರದ ಬಗ್ಗೆ ಹೇಳುವ ಸ್ವಲ್ಪ ಮೊದಲು ಆಲಯದ ಎದುರಿಗಿದ್ದ ಬಜಾರಿನ ಬಗ್ಗೆ ವರ್ಣಿಸಿದ್ದಾನೆ):

"In this pagoda, opposite to its principal gate which is to the east, there is a very beautiful street of very beautiful houses with balconies and arcades, in which are sheltered the pilgrims that come to it, and there are also houses for lodging for the upper classes; the king has a palace in the same street, in which he resides when he visits this pagoda"1


ವಿಜಯನಗರದ ರಾಜಬೀದಿಗಳನ್ನೂ, ಬಜಾರನ್ನೂ ಕುರಿತು ಬರೆಯುತ್ತ - ಇನ್ನೊಂದು ಕಡೆ ಹೀಗೆ ದಾಖಲಿಸಿದ್ದಾನೆ:
"Going forward, you have a broad and beautiful street, full of rows of fine houses and streets of the sort I have described, and it is to be understood that the houses belong to men rich enough to afford such. In this street live many merchants, and there you will find all sort of rubies, and diamonds, and emaralds, and pearls, and seed-pearls, and cloths, and every other sort of thing there is on earth and that you may wish to buy"2

ಈ ಎರಡೂ ವಿವರಣೆಯ ಆಧಾರದ ಮೇಲೆ ಈಗ ನಾವು ಹಂಪಿಯಲ್ಲಿ ಕಾಣಬಹುದಾದ ಬಜಾರು ಬೀದಿಯ ಗತಸ್ವರೂಪವನ್ನೂ, ಅದರ ವೈಭವವನ್ನೂ ಒಮ್ಮೆ ಕಲ್ಪಿಸಿಕೊಳ್ಳಬಹುದು. (ಕಮಲಾಪುರದ ಬಳಿಯಿರುವ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಹಂಪಿಯ ಬಜಾರಿನ ಚಿತ್ರಣವಿರುವ ವರ್ಣಚಿತ್ರವೊಂದಿದೆ. ಅದು ಪೇಯಸನ ಈ ವಿವರಣೆಗಳಿಗೆ ತಕ್ಕಂತಿದೆ)
ಈ ಬಜಾರು ರಸ್ತೆ/ ತೇರುಬೀದಿಯು ವಿರೂಪಾಕ್ಷನ ಆಲಯದಿಂದ ನಂದಿಮಂಟಪದವರೆಗೂ ಹಬ್ಬಿದೆ. ಆಲಯದ ಕಡೆಯಿರುವ ಮಂಟಪಗಳಿಗೆ ಹೋಲಿಸಿದರೆ ನಂದಿಮಂಟಪದ ಕಡೆಗಿರುವ ಮಂಟಪಗಳು ಗಾತ್ರದಲ್ಲಿಯೂ ರಚನೆಯಲ್ಲಿಯೂ ಉತ್ತಮವಾಗಿರುವಂತೆ ತೋರುತ್ತದೆ.


ನಂದಿಮಂಟಪದ ಎದುರಿಗೇ ಸುಂದರವಾದ ರಂಗಮಂಟಪವೊಂದಿದೆ. ಕುಸುರಿ ಕೆತ್ತನೆಗಳಿರುವ ಹತ್ತು ಹಲವು ಕಂಬಗಳಿಂದ ಕೂಡಿದ ಈ ಮಂಟಪವು ಸುಸ್ಥಿರವಾಗಿದ್ದು, ಸುಂದರವಾಗಿದೆ.

 


ವಿರೂಪಾಕ್ಷ ಆಲಯದ ನೇರಕ್ಕೆ, ರಥಬೀದಿಯ ಈ ಕೊನೆಗೆ ನಂದಿಮಂಟಪವಿದೆ. ಬೃಹದಾಕಾರದ ಈ ಬಸವಣ್ಣನ ಶಿಲ್ಪವು ಏಕಶಿಲಾವಿಗ್ರಹವೆಂದು ತಿಳಿದುಬರುತ್ತದೆ. ಕಾಲದ, ದಾಳಿಯ ಕುರುಹಾಗಿ ಈ ವಿಗ್ರಹವು ಭಿನ್ನಗೊಂಡಿದ್ದರೂ ಅದರ ಸರಳ ಸೌಂದರ್ಯಕ್ಕೇನೂ ಕುಂದಾಗಿಲ್ಲ. ವಿಗ್ರಹದ ಸುತ್ತ ಕಟ್ಟಲಾಗಿರುವ ಮಂಟಪವೂ ಎರಡು ಮಹಡಿಯದ್ದಾಗಿದ್ದು, (ಇತ್ತೀಚಿನ ಸಂರಕ್ಷಣೆಯ ಫಲವಾಗಿ) ಈಗ ಸುಸ್ಥಿತಿಯಲ್ಲಿದೆ.


ಈ ಮಂಟಪದ ಪಕ್ಕದಲ್ಲೇ ವಿಶಾಲವಾದ ಮೆಟ್ಟಿಲುಗಳಿದ್ದು ಈ ದಾರಿಯಾಗಿ ಅಚ್ಯುತರಾಯನ ದೇವಾಲಯಕ್ಕೆ ಹೋಗಬಹುದಾಗಿದೆ (ಅಚ್ಯುತರಾಯನ ಆಲಯದ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ)

ಇಲ್ಲಿಗೆ ಸಮೀಪದಲ್ಲೇ ಮಾತಂಗಪರ್ವತವಿದೆ. ಮಾತಂಗಪರ್ವತವು ರಾಮಾಯಣ, ಮಹಾಭಾರತ ಮುಂತಾದ ಕಾವ್ಯಗಳಲ್ಲಿಯೂ ಉಲ್ಲೇಖಗೊಂಡಿದೆ3. ಜೈನರ ಕೆಲವು ಕೃತಿಗಳಲ್ಲಿಯೂ ಮಾತಂಗಪರ್ವತದ ಪ್ರಸ್ತಾಪವುಂಟು4. ಹಳಗನ್ನಡದ ಕವಿಗಳ ಪೈಕಿ ಹರಿಹರ ರಾಘವಾಂಕರು ತಮ್ಮ ಕೃತಿಗಳಲ್ಲಿ ಮಾತಂಗಪರ್ವತವನ್ನು ಮತ್ತೆಮತ್ತೆ ಉಲ್ಲೇಖಿಸಿದ್ದಾರೆ5.

ನಂದಿಮಂಟಪದ ಎಡಗಡೆಯಿಂದ ಮಾತಂಗಪರ್ವತವನ್ನೇರಿ ಹೋಗಲು ಮೆಟ್ಟಿಲುಗಳಿವೆ. ಹಲವು ಪುರಾಣ-ಕಾವ್ಯಗಳ ಪ್ರಕಾರ ಹಂಪಿಯ ಸುತ್ತಮುತ್ತ ಇದ್ದ ಪರ್ವತಗಳ ಪೈಕಿ ಪ್ರಮುಖವಾದವೆಂದರೆ - ಹೇಮಕೂಟ, ಮತಂಗ/ಮಾತಂಗ ಪರ್ವತ, ಮಾಲ್ಯವಂತ, ಋಷ್ಯಮೂಕ ಪರ್ವತ ಹಾಗೂ ಕಿಷ್ಕಿಂದ ಪರ್ವತ. ಇವುಗಳಲ್ಲಿ ಮತಂಗಪರ್ವತವೇ ಬಹು ಎತ್ತರವಾದದ್ದು. ಇದರ ತುದಿಯಲ್ಲಿ ನಿಂತು ನೋಡಿದರೆ ಹಂಪಾಕ್ಷೇತ್ರದ ಸುತ್ತಲಿನ ಪರಿಸರವೆಲ್ಲವನ್ನೂ ಕಾಣಬಹುದು. ಕೆಲವು ಶಾಸನಗಳ ಪ್ರಕಾರ ಹಾಗೂ ಸ್ಥಳೀಯ ಐತಿಹ್ಯದ ಪ್ರಕಾರ ಮಾತಂಗ ಪರ್ವತದ ಮೇಲಿಂದ ವಿರೂಪಾಕ್ಷನನ್ನು (ಅಥವಾ ವಿರೂಪಾಕ್ಷನ ಆಲಯವನ್ನು) ದರ್ಶಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆಯೆಂದು. ಹಾಗೂ :-

"ಅಹೋಬಲನ ವಿರೂಪಾಕ್ಷನ ವಸಂತೋತ್ಸವ ಚಂಪೂಗ್ರಂಥದಲ್ಲಿ ಮಾತಂಗ ಪರ್ವತದ ಉಲ್ಲೇಖವಿದೆ. ವಿರೂಪಾಕ್ಷ ದೇವರ ರಥೋತ್ಸವ ಸಂದರ್ಭದಲ್ಲಿ ಜನರಿಗೆ ಇಲ್ಲಿನ ಜಾಗ ಸಾಲದೆ ಹೇಮಕೂಟ ಮತ್ತು ಮಾತಂಗಪರ್ವತದ ಬಂಡೆಗಳ ಮೇಲೆ ನಿಂತು ರಥೋತ್ಸವವನ್ನು ವೀಕ್ಷಿಸುತ್ತಿದ್ದರೆಂದಿದೆ"6


ಚಾರಣಪ್ರಿಯರಿಗೆ ಮಾತಂಗಪರ್ವತವು ಬಹಳ ಇಷ್ಟವಾಗಬಹುದು. ಮೊದಲೇ ತಿಳಿಸಿದಂತೆ - ಇದರ ತುದಿಯಿಂದ ಹಂಪಿಯ ಸಮಸ್ತ ದೃಶ್ಯವೂ ಕಾಣುತ್ತದೆಯೆಂಬುದು ಒಂದು ಕಾರಣವಾದರೆ, ಇಲ್ಲಿಂದ ಸೂರ್ಯೋದಯ/ ಸೂರ್ಯಾಸ್ತದ ಸೊಬಗನ್ನು ಕಂಡು ಆನಂದಿಸಬಹುದು ಎಂಬುದು ಮತ್ತೊಂದು ಕಾರಣ. 


ರಾಮಾಯಣದಲ್ಲಿ ಮತಂಗಮುನಿಗಳ ಆಶ್ರವಿರುವುದರಿಂದ ಈ ಪರ್ವತಕ್ಕೆ ಮತಂಗಪರ್ವತವೆಂಬ ಹೆಸರು ಬಂದಿತೆಂದು ವಿವರಿಸಿದೆ. ಕಿಷ್ಕಿಂದಾಕಾಂಡದ ಬಹುಪ್ರಮುಖ ಘಟನೆಗಳು ಮಾತಂಗಪರ್ವತದ ಪ್ರಾಂತದಲ್ಲೇ ನಡೆಯುತ್ತವೆ. ರಾಮಲಕ್ಷ್ಮಣರು ವೃದ್ಧೆ ಶಬರಿಯನ್ನು ಭೇಟಿಮಾಡುವುದೂ ಇದೇ ಪ್ರದೇಶದಲ್ಲೇ.
ಹರಿಹರನ ಗಿರಿಜಾಕಲ್ಯಾಣದ ಪ್ರಕಾರ ಮನ್ಮಥನು (ಹೇಮಕೂಟದಲ್ಲಿ) ಧ್ಯಾನಮಗ್ನನಾಗಿದ್ದ ಶಿವನ ಕಡೆಗೆ ಪುಷ್ಪಬಾಣಗಳನ್ನು ಪ್ರಯೋಗಿಸಿದ್ದು ಮಾತಂಗಪರ್ವತದ ಮೇಲಿನಿಂದಲೇ.
ಇನ್ನು, ಮಾತಂಗ ಸಮುದಾಯದವರ ಐತಿಹ್ಯದ ಪ್ರಕಾರ ತಮ್ಮ ಕುಲದೇವತೆಯಾದ ಮಾತಂಗಿಯು ಇದ್ದುದು ಈ ಪರ್ವತದಲ್ಲಿಯೇ ಆದ್ದರಿಂದ ಈ ಕ್ಷೇತ್ರಕ್ಕೆ ಮಾತಂಗಿ ಪರ್ವತಎಂಬ ಹೆಸರು ಬಂದಿತೆಂದು ಹೇಳುತ್ತಾರೆ.
ಜೈನರಲ್ಲಿ ಸಪ್ತದ್ವೀಪಗಳ ವರ್ಣನೆಯ ಸಮಯದಲ್ಲಿ ಮಾತಂಗ ಪರ್ವತದ ಪ್ರಸ್ತಾಪವುಂಟು.

ಹೀಗೆ, ಮಾತಂಗ ಪರ್ವತದ ಪೌರಾಣಿಕ ಮೂಲದ ಬಗ್ಗೆ ಹಲವು ಕತೆಗಳಿವೆಯಾದ್ದರಿಂದ ಅವುಗಳಲ್ಲಿ ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎಂಬುದು ನಮಗೆ ನಿಲುಕದ ವಿಚಾರ. ಅದೇನೇ ಇದ್ದಾಗಿಯೂ ಕೂಡ, ಮಾತಂಗ ಪರ್ವತವು ಧಾರ್ಮಿಕವಾಗಿಯೂ ಹಾಗೂ ಐತಿಹಾಸಿಕವಾಗಿಯೂ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಸುಮಾರು ೨೫ರಷ್ಟು ಶಾಸನಗಳು ದೊರಕಿವೆಯೆಂಬುದು ಈ ಮಾತಿಗೆ ಪುಷ್ಟಿ ಕೊಡುತ್ತದೆ.

ಮಾತಂಗಪರ್ವತದ ತುದಿಯಲ್ಲಿ ವೀರಭದ್ರ, ಶಿವ, ಭದ್ರಕಾಳಿ, ಗಣೇಶ ಹಾಗೂ ಸ್ಕಂದ ದೇವಾಲಯಗಳಿವೆ. ಭದ್ರಕಾಳಿ, ವೀರಭದ್ರ, ಶಿವ ಹಾಗೂ ಗಣೇಶನ ಆಲಯಗಳು ಒಂದೇ ಸೂರಿನಡಿ - ಬೇರೆಬೇರೆ ಗರ್ಭಗೃಹಗಳಲ್ಲಿವೆ. ಇವೆಲ್ಲವಕ್ಕೂ ಸೇರಿ ಒಂದೇ ಒಂದು ಶಿಖರವಿದೆ. ಸ್ಥಳೀಯರು ದೂರದಿಂದ ನೋಡಿದರೆ ಆ ದೇವಾಲಯವು ಶಿವಲಿಂಗಾಕಾರದಲ್ಲಿದ್ದಂತೆ ತೋರುತ್ತದೆಎನ್ನುತ್ತಾರೆ. ಪೂರ್ತಿಯಾಗಿ ಸುಸ್ಥಿತಿಯಲ್ಲಿಲ್ಲವಾದರೂ ಈ ಆಲಯದಲ್ಲಿ ಈಗಲೂ ನಿತ್ಯಪೂಜೆಯ ಕಾರ್ಯಗಳು ನೆರವೇರುತ್ತಿರುವಂತೆ ತೋರುತ್ತದೆ.

ಆಲಯವು ಮಂಟಪಗಳಿಂದ ಕೂಡಿದ್ದು ಸರಳ ಸುಂದರವಾಗಿದೆ. ಇದರ ವಾಸ್ತುಶೈಲಿಯ ಹಿನ್ನೆಲೆಯಲ್ಲಿ - ಈ ಆಲಯದ ನಿರ್ಮಾಣವು ಬಹುಹಿಂದೆಯೇ ಆಗಿದ್ದು, ಕಾಲಕಾಲಕ್ಕೆ ಹಲವು ಮನೆತನದ ಅರಸುಗಳ ಕಾಲದಲ್ಲಿ ಇದು ಜೀರ್ಣೋದ್ಧಾರವಾಗಿರಬಹುದೆಂದು ಊಹಿಸಬಹುದಾಗಿದೆ. ಈಗಿನ ಆಲಯ ಶಿಖರ ಬಹುಶಃ ವಿಜಯನಗರಕಾಲದಲ್ಲಿ ನಿರ್ಮಿಸಿದ್ದಿರಬಹುದು. ಆಲಯದ ಸಮೀಪದಲ್ಲಿ ಕೆಲವು ಮಂಟಪಗಳನ್ನೂ ಸ್ತಂಭಗಳನ್ನೂ ಕಾಣಬಹುದು. ಆಲಯದ ಛಾವಣಿಯನ್ನೇರಿ ನೋಡಿದರೆ ಹಂಪೆಯೆಂಬ ಸ್ವರ್ಗವು ಕಾಣುತ್ತದೆ. ಅಚ್ಯುತರಾಯನ ಗುಡಿ, ದೂರದಲ್ಲಿ ಹರಿಯುತ್ತಿರುವ ತುಂಗಾನದಿ, ಇತ್ತ ನೋಡಿದರೆ ವಿರೂಪಾಕ್ಷನ ಗುಡಿ... ಹೀಗೆ, ಎತ್ತ ನೋಡಿದರೂ ವಿಜಯನಗರವೇ ಕಾಣುತ್ತದೆ. ಅಗಲವಾದ ಸೋಪಾನಗಳಿರುವ ಮೆಟ್ಟಿಲ ದಾರಿಯೂ ಈ ಆಲಯಕ್ಕಿದೆ.


ಸ್ಕಂದ ದೇವಾಲಯವು ಇತರ ದೇವಾಲಯಗಳಿರುವ ಪ್ರದೇಶಕ್ಕಿಂತ ಕೆಳಭಾಗದಲ್ಲಿದೆ. ಇಲ್ಲಿಗೆ ಸಮೀಪದಲ್ಲೇ ಕಲ್ಲುಬಂಡೆಯೊಂದರ ಮೇಲೆ ಕಡೆದಿರುವ ಭೈರವಮೂರ್ತಿಯೊಂದು ಕಾಣುತ್ತದೆ. ಶಿಲ್ಪದ ಸ್ವಲ್ಪಭಾಗವು ಭಿನ್ನಗೊಂಡಿದೆಯಾದರೂ ಬಹಳ ಸುಂದರವಾದ ಈ ಭೈರವಮೂರ್ತಿಯು ನೋಡುಗರ ಮನಸೆಳೆಯುತ್ತದೆ



ಬೆಟ್ಟದ ಮಧ್ಯಭಾಗದಲ್ಲಿರುವ ಗುಹೆಯೊಂದರಲ್ಲಿ ಗಣಪತಿಯ ಸುಂದರ ವಿಗ್ರಹವೊಂದಿದೆಇನ್ನೂ ಕೆಲವು ಗಣನೀಯವಾದ ಶಿಲ್ಪ-ಶಾಸನಗಳನ್ನು ಮಾತಂಗ ಪರ್ವತದ ಪ್ರದೇಶದಲ್ಲಿ ಕಾಣಬಹುದು.



ಟಿಪ್ಪಣಿಗಳು: 
೧. ಮತ್ತು ೨. "Narratives of Domingos Paes", from 'A forgotten Empire' - by Robert Sewell
೩. ರಾಮಾಯಣದ ಕಿಷ್ಕಿಂದಾಕಾಂಡ; ಮಹಾಭಾರತದ ಆದಿಪರ್ವ
೪. ಮಾಘಣಂದಿಯ "ಪದಾರ್ಥ ಸಾರ"
೫. ಉದಾಹರಣೆಗೆ - ಹರಿಹರನ ’ಗಿರಿಜಾಕಲ್ಯಾಣ ಮಹಾಪ್ರಬಂಧಂ’ ಹಾಗೂ ರಾಘವಾಂಕನ ’ಹರಿಶ್ಚಂದ್ರಕಾವ್ಯಂ’
೬. ವಿಜಯನಗರ ಅಧ್ಯಯನ - ಸಂಪುಟ ೮

Saturday, 5 December 2015

ಪಂಪಾಕ್ಷೇತ್ರ, ನಾನು ಕಂಡಂತೆ - ೧


ಒಂದೆರಡು ವಾರಗಳ ಹಿಂದೆ ಸ್ನೇಹಿತರೊಬ್ಬರನ್ನು "ಹಂಪಿಯನ್ನ ನೋಡ್ಲಿಕ್ಕೆ ಮೂರು ದಿನಗಳು ಸಾಕಾಗುತ್ತವಾ?" ಅಂತ ಕೇಳಿದ್ದೆ. ನನ್ನ ಆ ಪ್ರಶ್ನೆ ಎಂತಹ ಮಂಕುತನದ್ದಾಗಿತ್ತು ಎಂಬುದರ ಅರಿವು ಈಗ ಆಗಿದೆ, ನನಗೆ. ಕೊನೆಗೂ 'ನಾಲ್ಕು ದಿನಗಳ ಕಾಲ ಅಲ್ಲಿಯೇ ಇದ್ದಾಗಿಯೂ ಕೂಡ ಹಂಪಿಯನ್ನು ಇಡಿಯಾಗಿ ನೋಡಲಾಗಲಿಲ್ಲವಲ್ಲ! ಎಷ್ಟೊಂದು ಗುಡಿ, ಕ್ಷೇತ್ರಗಳನ್ನು ನೋಡಲೇ ಇಲ್ಲವಲ್ಲ..’ ಎಂಬ ನಿರಾಸೆಯಿಂದಲೇ ಮೈಸೂರಿಗೆ ಮರಳಬೇಕಾಯ್ತು.....

ಸಾವಿರಾರು ವರ್ಷಗಳ1 ಇತಿಹಾಸವಿರುವ ಪಂಪಾಕ್ಷೇತ್ರ ಅಥವಾ ಇಂದಿನ ಹಂಪಿಯು ಈಗಿನ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ಸೇರಿದ ಸ್ಥಳ. ಪ್ರಾಚೀನ ಕಾಲದಿಂದಲೂ ಹಂಪೆಯು ಧಾರ್ಮಿಕ, ರಾಜಕೀಯ, ಸಾಹಿತ್ಯಿಕ ಹಾಗೂ ಶಿಲ್ಪಕಲೆಗಳ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಹಿಂದಿನಿಂದಲೂ ಹಂಪಿ ಕ್ಷೇತ್ರಕ್ಕಿದ್ದ ಮಹತ್ವ, ವೈಭವವು ವಿಜಯನಗರದ ಅರಸರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿತೆನ್ನಬಹುದು. ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು ಎಂಬುದೂ ಇದಕ್ಕೆ ಕಾರಣವಿರಬಹುದು.

ವಿಜಯನಗರದ ಅರಸರ ಕಾಲದಲ್ಲಿ ಹಂಪಿಕ್ಷೇತ್ರದ ಸುತ್ತಮುತ್ತ ಹಲವಾರು ಹೊಸ ದೇವಾಲಯಗಳ ನಿರ್ಮಾಣವಾದವು. ಅಂತೆಯೇ ಹಲವು ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವೂ ಈ ಕಾಲದಲ್ಲಾಗಿರುವುದಾಗಿ ಶಾಸನಗಳ ಆಧಾರದಿಂದ ತಿಳಿದುಬರುತ್ತದೆ.

ವಿರೂಪಾಕ್ಷ ದೇವಾಲಯ:

ಶಿವನಿಗೆ ವಿರೂಪ, ವಿಷಮಾಕ್ಷ, ವಿರೂಪಾಕ್ಷ ಎಂಬ ಹೆಸರುಗಳಿರುವುದಾಗಿ ಶಿವನ ಕುರಿತಾಗಿರುವ ಕೆಲವು ಸ್ತೋತ್ರಗಳಿಂದ ತಿಳಿದುಬರುತ್ತದೆ. ಆ ವಿರೂಪಾಕ್ಷನು ಹೇಮಕೂಟ ನಿವಾಸಿ. ಹರಿಹರ ಕವಿಯ ’ಗಿರಿಜಾಕಲ್ಯಾಣ ಮಹಾಪ್ರಬಂಧಂ’ನ ಪ್ರಕಾರ - ಸತೀದೇವಿಯು ದಕ್ಷಯಜ್ಞದ ಸಂದರ್ಭದಲ್ಲಿ ಯೋಗಾಗ್ನಿಪ್ರವೇಶ ಮಾಡಿದ ನಂತರದ ದಿನಗಳಲ್ಲಿ ಶಿವನು ಕೈಲಾಸವನ್ನು ತೊರೆದು ಹೇಮಕೂಟಕ್ಕೆ ಬಂದು ಧ್ಯಾನದಲ್ಲಿ ಮಗ್ನನಾದನು.
ಮುಂದೆ, ಸತಿದೇವಿಯು ಹಿಮವಂತ-ಮೇನಾದೇವಿಯರ ಮಗಳಾಗಿ ಜನಿಸಿ, ಮಹರ್ಷಿ ನಾರದರ ನಿರ್ದೇಶದಂತೆ - ತಂದೆತಾಯಿಯರ ಅಪ್ಪಣೆ ಪಡೆದು - ಹೇಮಕೂಟ ಪರ್ವತಕ್ಕೆ ಬಂದು ಧ್ಯಾನಮಗ್ನನಾಗಿದ್ದ ಶಿವನ ಸೇವೆಯಲ್ಲಿ ತೊಡಗಿರುತ್ತಾಳೆ. ಶಿವನಾದರೋ ಒಮ್ಮೆಯೂ ಆಕೆಯನ್ನು ಕಣ್ತೆರೆದು ನೋಡಲೂ ಇಲ್ಲ.
ಇತ್ತ, ದುಷ್ಟ ತಾರಕಾಸುರನನ್ನು ವಧಿಸಲು ಶಿವತನಯನಿಗೆ ಮಾತ್ರ ಸಾಧ್ಯವಿರುವುದರಿಂದ ದೇವತೆಗಳೂ ಶಿವ-ಪಾರ್ವತಿಯರ ವಿವಾಹವು ಬೇಗ ನಡೆಯಲೆಂದು ಹಾರೈಸಿ, ಶಿವನ ತಪೋಭಂಗಕ್ಕಾಗಿ ಮನ್ಮಥನನ್ನು ಕಳುಹಿಸುತ್ತಾರೆ.
ಮನ್ಮಥನು ಹೇಮಕೂಟದ ಎದುರಿಗಿದ್ದ ಮಾತಂಗಪರ್ವತವನ್ನೇರಿ ಶಿವನ ಕಡೆಗೆ ಒಂದೊಂದಾಗಿ ಪುಷ್ಪಬಾಣಗಳನ್ನು ಪ್ರಯೋಗಿಸುತ್ತಾನೆ. ಆದರೆ ಅವೆಲ್ಲವೂ ಶಿವನ ತಪಕ್ಕೆ ಯಾವ ಮಾತ್ರದ ವಿಘ್ನವನ್ನುಂಟುಮಾಡಲಾರದೆ ಶಕ್ತಿಹೀನವಾಗಿ ಬೀಳುತ್ತವೆ. ಕೊನೆಗೆ ’ಪಂಚಬಾಣ’ನೆಂದೇ ಪ್ರಖ್ಯಾತನಾದ ಮನ್ಮಥನು ತನ್ನ ಐದೂ ಬಾಣಗಳನ್ನು ಒಟ್ಟಿಗೇ ಶಿವನ ಕಡೆಗೆ ಪ್ರಯೋಗಿಸುತ್ತಾನೆ.
ಅದೇ ಸಮಯಕ್ಕೆ ಅಲ್ಲಿಯೇ ಇದ್ದ ಪಾರ್ವತಿಯ ಭಕ್ತಿ-ಪ್ರೇಮಗಳು ಶಿವನ ಮನಸನ್ನು ಮುಟ್ಟಿ - ಶಿವನಿಗೆ ಕನಸಿನಲ್ಲೆಂಬಂತೆ ಕ್ಷೀಣವಾಗಿ ಅಹಂ-ಮಮತೆಗಳು ತಲೆದೋರಿ, ಶಿವನು ಇನ್ನೇನು ಕಣ್ತೆರೆಯಬೇಕು, ಅಷ್ಟರಲ್ಲಿ ಮನ್ಮಥನು ಪ್ರಯೋಗಿಸಿದ ಪಂಚಬಾಣಗಳೂ ಬಂದು ಶಿವನನ್ನು ಕವಿದವು. ಶಿವನಿಗೆ - ಕಣ್ತೆರೆಯುವ ವೇಳೆಗೆ - ತನ್ನ ಎದುರು ಕುಳಿತ ಪಾರ್ವತಿಯನ್ನು ಕಂಡು ಆಶ್ಚರ್ಯವಾಯಿತು. ಆಕೆಯನ್ನು ಕುರಿತು ’ಈಕೆ ಯಾರು’ ಎಂದು ಶಿವನು ಯೋಚಿಸುವ ಮೊದಲೇ ಮಾತಂಗಪರ್ವತದ ಮೇಲಿದ್ದ ಮನ್ಮಥನು ಆತನಿಗೆ ಕಾಣಿಸಿದ. ಅಷ್ಟೆ, ಶಿವ ತನ್ನ ಹಣೆಗಣ್ಣನ್ನು ತೆರೆದು ಕೋಪಾಗ್ನಿಯಿಂದ ಮನ್ಮಥನನ್ನು ಉರುಹಿ, ಅಲ್ಲಿಂದ ಕೈಲಾಸಪರ್ವತಕ್ಕೆ ಹೊರಟುಬಿಡುತ್ತಾನೆ - ಪಾರ್ವತಿಯ ಕಡೆಗೆ ಒಮ್ಮೆಯೂ ತಿರುಗಿ ನೋಡದೆ.

ಪಾರ್ವತಿಗೆ ಶಿವನ ಈ ವರ್ತನೆಯಿಂದ ಬಹಳ ಅಪಮಾನವೂ ದುಃಖವೂ ಉಂಟಾಯಿತು. ಅದಕ್ಕೇ "ತಾನಿರ್ದಲ್ಲಿಗೆ ನಡೆತಂದಾನರ್ಚಿಸೆ ಕಾಮವೈರಿ ನುಡಿಯಿಸದಂತರ್ಧಾನಕ್ಕೆ ಸಂದನದರಿಂದಾನಿರ್ದಲ್ಲಿಗೆ ಸಮಂತು ತನ್ನನೆ ತರ್ಪೆಂ" (ಆತನಿದ್ದಲ್ಲಿಗೇ ಬಂದು ಪ್ರೀತಿಯಿಂದ ಆತನನ್ನು ಅರ್ಚಿಸುತ್ತ ಇದ್ದ ನನ್ನೊಂದಿಗೆ ಒಂದು ಮಾತನ್ನೂ ಆಡದೆ ಕಾಮವೈರಿಯಾದ ಶಿವನು ಅಂತರ್ಧಾನನಾಗಿಹೋದನು. ಇನ್ನು ಇಲ್ಲಿಯೇ ಆತನನ್ನು ಕುರಿತು ತಪಗೈದು ಶಿವನನ್ನೇ ನಾನಿರುವಲ್ಲಿಗೆ ಬರುವಂತೆ ಮಾಡುತ್ತೇನೆ) ಎಂದು ನಿಶ್ಚಯಿಸಿ ಉಗ್ರತಪದಲ್ಲಿ ನಿರತಳಾಗುತ್ತಾಳೆ.  ಹೀಗೆ ಹೇಮಕೂಟದ ಬಳಿಯೇ ಆಕೆಯೂ ತಪೋನಿರತಳಾಗಿ, ಕೊನೆಗೂ ಶಿವನನ್ನು ಮೆಚ್ಚಿಸಿ, ಸರ್ವದೇವತೆಗಳ ಸಮಕ್ಷಮದಲ್ಲಿ ಶಿವನನ್ನೇ ವರಿಸುತ್ತಾಳೆ.

ಪುರಾಣ-ಕಾವ್ಯಗಳ ಪ್ರಕಾರ ಪಾರ್ವತಿಯ ಇನ್ನೊಂದು ಹೆಸರು ಪಂಪಾ2 ಎಂದು. ಆಕೆ ಹರನನ್ನು ಕುರಿತು ಈ ಕ್ಷೇತ್ರದಲ್ಲೇ ತಪಗೈದು, ಆತನನ್ನು ವರಿಸಿದಳೆಂಬುದು ಪುರಾಣದ ಕತೆ (ಹರಿಹರನ "ಗಿರಿಜಾಕಲ್ಯಾಣಮಹಾಪ್ರಬಂಧಂ"ನ ಕತೆಯೂ ಅದೇ). ಮದುವೆಯ ನಂತರ ಶಿವಪಾರ್ವತಿಯರಿಬ್ಬರೂ ಈ ಕ್ಷೇತ್ರದಲ್ಲೇ ನೆಲೆಸಿದ್ದಾರೆಂದು ಜನರ ನಂಬಿಕೆ. ಪಂಪಾದೇವಿಯು ನೆಲೆಸಿರುವ ಕ್ಷೇತ್ರವಾದ್ದರಿಂದ ಇದು ’ಪಂಪಾಕ್ಷೇತ್ರ’ವೆನಿಸಿತು ಎಂಬುದು ಈ ಸ್ಥಳದ ಐತಿಹ್ಯ. ಆ ಪಂಪಾದೇವಿಯ ಪತಿಯಾದ್ದರಿಂದ ವಿರೂಪಾಕ್ಷನಿಗೆ ’ಪಂಪಾಪತಿ’ಯೆಂಬ ಮುದ್ದಿನ ಹೆಸರೂ ಉಂಟು.

ಪೂರ್ವಕಾಲದಿಂದಲೂ ವಿರೂಪಾಕ್ಷ ದೇವಾಲಯವು ಪಂಪಾಪುರದ ಪ್ರಮುಖ ದೇವಾಲಯವಾಗಿದೆ. ದೇವಾಲಯ ನಿರ್ಮಾಣವಾದ ಕಾಲದ ಬಗ್ಗೆ ಸ್ಪಷ್ಟ ಅಭಿಪ್ರಾಯವಿಲ್ಲವಾದರೂ ಹಲವಾರು ಅರಸು ಮನೆತನದವರು ಕಾಲಕಾಲಕ್ಕೆ ಈ ಆಲಯದ ಜೀರ್ಣೋದ್ಧಾರ ಮಾಡಿಸಿರುವುದಾಗಿ ಶಾಸನಗಳಿಂದ3 ತಿಳಿದುಬರುತ್ತದೆ. ಹಾಗೂ ಇಲ್ಲಿನ ವಾಸ್ತು-ಶಿಲ್ಪಗಳನ್ನು ಕಂಡಾಗಲೂ ಈ ವಿಷಯ ಗೋಚರಿಸುತ್ತದೆ. ಬೇರೆಬೇರೆ ದೇವತೆಗಳ ಸಣ್ಣಸಣ್ಣ ಗುಡಿಗಳಿರುವುದರಿಂದ ಈಗಿರುವ ವಿರೂಪಾಕ್ಷ ದೇವಾಲಯವು ಹಲವು ದೇವಾಲಯಗಳ ಸಂಕೀರ್ಣವೆಂದೂ ಹೇಳಬಹುದು.

ಹಂಪೆಯ ವಿರೂಪಾಕ್ಷ ದೇವಾಲಯವು ಗಾತ್ರ-ವಿಸ್ತಾರದಲ್ಲಿ ಅಗಾಧವಾಗಿರುವಂತೆಯೇ ಅದರ ಸೌಂದರ್ಯವೂ ಕೂಡ ಅನುಪಮವಾಗಿದೆ. ಆಲಯದ ಭವ್ಯತೆಯನ್ನು ಕಂಡವರ ಮನಸ್ಸು ಅವ್ಯಕ್ತವಾದ ಆನಂದಭಾವಗಳ ಅಂಗಳದಲ್ಲಿ ವಿಹರಿಸುತ್ತದೆ.

ಆಲಯದ ಮಹಾದ್ವಾರದ ಮೇಲೆ ಒಂಬತ್ತು ಅಂತಸ್ತುಗಳ ಎತ್ತರವಾದ ಗೋಪುರವಿದೆ. ಗೋಪುರದ ಮೇಲೆ ಶಿವ, ವಿಷ್ಣು, ಗಣಪತಿ ಮೊದಲಾದ ದೇವದೇವಿಯರ ಮೂರ್ತಿಗಳೂ, ಸ್ತ್ರೀ-ಪುರುಷರ ವಿವಿಧ ಭಂಗಿಗಳ ಮೂರ್ತಿಗಳೂ, ಬೇಟೆ ಮೊದಲಾದ ಕ್ರೀಡೆಗಳನ್ನು ತೋರುವ ಮೂರ್ತಿಗಳೂ ಇವೆ.

 


ಗೋಪುರದ ದ್ವಾರದ ಇಕ್ಕೆಲಗಳಲ್ಲಿಯೂ ಕೆಲವು ಸೊಗಸಾದ ಕೆತ್ತನೆಗಳಿವೆ

ಗೋಪುರವನ್ನು ದಾಟಿ ಒಳಬಂದ ತಕ್ಷಣ ಮೂರು ಮುಖದ ವೃಷಭನ ಮೂರ್ತಿಯೊಂದು ಕಾಣಿಸುತ್ತದೆ.
 

ಇದರ ಎದುರುಗಡೆಯ ಗೋಡೆಯ ಮೇಲೆ ವಿಜಯನಗರದ ರಾಯರ ರಾಜಲಾಂಛನವು ಕಾಣಬರುತ್ತದೆ. ಇದಕ್ಕೆ ಸ್ವಲ್ಪ ಸಮೀಪದಲ್ಲೇ ನಾಟ್ಯದಲ್ಲಿ ತೊಡಗಿರುವ ದುರ್ಗಾದೇವಿಯ ಶಿಲ್ಪವೊಂದನ್ನು ಕಾಣಬಹುದು.

 
 

ಹೀಗೆ, ಮಹಾದ್ವಾರದಿಂದ ಒಳಗೆ ಬಂದರೆ ಮತ್ತೊಂದು ದ್ವಾರವಿರುವ ಆವರಣವೊಂದು ಕಾಣಿಸುತ್ತದೆ.

ಅದರ ಎಡಬದಿಗೆ ವಿವಿಧ ಶಿಲ್ಪಗಳ ಕೆತ್ತನೆಯಿಂದ ಕೂಡಿದ ಕಂಭಗಳಿರುವ ಮಂಟಪವೊಂದಿದೆ. ಶಿವಲಿಂಗ, ಬಸವ, ಶಿವಶರಣರ, ಗಣಪ್ರಮುಖರ ಶಿಲ್ಪಗಳನ್ನೂ, ರಾಮ-ಹನುಮಂತರ ಶಿಲ್ಪಗಳನ್ನೂ ಈ ಮಂಟಪದಲ್ಲಿ ಕಾಣಬಹುದು.



ಎರಡನೇ ದ್ವಾರವನ್ನು ದಾಟಿ ಒಳಬಂದರೆ ದೊಡ್ಡ ಮಂಟಪವೊಂದು ಕಾಣುತ್ತದೆ. ಮಂಟಪದ ಶಿರೋಭಾಗದಲ್ಲಿರುವ ಮೂರ್ತಿಗಳ ಪೈಕಿ ಶಿವ-ಪಾರ್ವತಿಯರ ವಿವಾಹ ಸಂದರ್ಭದ ಮೂರ್ತಿಯು ಬಹುಸುಂದರವಾಗಿದೆ.
ಮಹಾದ್ವಾರಕ್ಕೆ ಎದುರಿಗಿರುವ ಈ ಮಂಟಪದ ಶಿಲಾಸ್ತಂಭಗಳಲ್ಲಿ ಎರಡು ಕಂಬಗಳಿಗೆ ಚಿನ್ನದ ತಗಡಿನ ಹೊದಿಕೆಯಿತ್ತು (ಉಳಿದ ಎಲ್ಲಾ ಕಂಬಗಳಿಗೆ ತಾಮ್ರದ ತಗಡನ್ನು ಹೊದಿಸಲಾಗಿತ್ತು) ಎಂದು ೧೬ನೇ ಶತಮಾನದಲ್ಲಿ ವಿಜಯನಗರವನ್ನು ಸಂದರ್ಶಿಸಿದ ಡೊಮಿಂಗೊಸ್ ಪೇಯಸ್ ಎಂಬ ಯಾತ್ರಿಕನು ದಾಖಲಿಸಿದ್ದಾನೆ4

ಈ ಮಂಟಪವನ್ನೂ, ಇದರ ಎದುರಿಗಿನ ದ್ವಾರವನ್ನೂ ಕೃಷ್ಣದೇವರಾಯನು ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕಟ್ಟಿಸಿದುದಾಗಿ ಇಲ್ಲಿನ ಶಾಸನವೊಂದರಿಂದ5 ತಿಳಿದುಬರುತ್ತದೆ.

ಈ ಮಂಟಪಕ್ಕೆ ಹೊಂದಿಕೊಂಡಂತೆಯೇ ಗರ್ಭಗುಡಿಯಿದೆ. ಗರ್ಭಗುಡಿಯ ದ್ವಾರಕ್ಕೆ ಶ್ರೀ ಕೃಷ್ಣದೇವರಾಯನೂ, ಉಳಿದವನ್ನು ಅವನ ಪೂರ್ವಜರೂ ಅಲಂಕಾರ ಮಾಡಿಸಿದ್ದುದಾಗಿ ಪೇಯಸ್ ದಾಖಲಿಸಿದ್ದಾನೆ6. ಆ ಕಾಲದಲ್ಲಿ ಗರ್ಭಗುಡಿಯ ಒಳಭಾವನ್ನೆಲ್ಲಾ ತಾಮ್ರದ ತಗಡುಗಳನ್ನು ಹೊದಿಸಿ ಚಿನ್ನದ ಲೇಪ ಮಾಡಿದ್ದುದಾಗಿಯೂ ದಾಖಲಿಸಿದ್ದಾನೆ. ಗರ್ಭಗುಡಿಯಲ್ಲಿ ಪಂಪಾಪತಿಯಾದ ವಿರೂಪಾಕ್ಷಲಿಂಗವಿದೆ. ಶಿವಲಿಂಗದ ಎದುರಿಗೆ ಎರಡು ಬಸವಮೂರ್ತಿಗಳಿರುವುದರ ಕಾರಣವೇನೊ ಹೊಳೆಯಲಿಲ್ಲ ನನಗೆ.

 

ಮಂಟಪದಲ್ಲಿನ ಕಂಬಗಳ ಮೇಲೆಯೂ ಗರ್ಭಗುಡಿಯ ಹೊರಗೋಡೆಯ ಮೇಲೆಯೂ ಶಿವಶರಣರ ಶಿಲ್ಪಗಳನ್ನೂ, ಶಿವಲೀಲೆಗಳನ್ನು ನಿರೂಪಿಸುವ ಶಿಲ್ಪಗಳಿರುವುದನ್ನೂ ಗಮನಿಸಬಹುದು. ನನಗೆ ಬೇಡರ ಕಣ್ಣಪ್ಪ, ಕೋಳೂರ ಕೊಡಗೂಸು ಮುಂತಾದವರ ಕತೆಯನ್ನು ನಿರೂಪಿಸುವ ಶಿಲ್ಪಗಳು ಅಲ್ಲಲ್ಲಿ ಕಂಡುಬಂದವು. ಶಿಲ್ಪಗಳ ಕೆತ್ತನೆಗೆ ತೊಡಗುವ ಮುನ್ನ ಶಿಲ್ಪಿಗಳು ಆಯಾ ಶಿಲ್ಪಕ್ಕೆ, ಕತೆಗೆ ಸಂಬಂಧಿಸಿದ ಸಾಹಿತ್ಯಿಕ ಆಧಾರಗಳನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದರೆಂದು ತೋರುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶಿವಶರಣ ಶಿಲ್ಪಗಳ ಕೆತ್ತನೆಗಾಗಿ ಯಾವ ಆಧಾರವನ್ನು ಅನುಸರಿಸಿದ್ದರೆಂಬುದರ ಬಗೆಗೆ ವಿಚಾರ ಮಾಡಬೇಕಾಗಿದೆ. ’ರಗಳೆಗಳ ಕವಿ’ ಹರಿಹರನು ಹಂಪೆಯವನೇ ಆದ್ದರಿಂದ, ಶಿವಶರಣರನ್ನು ಕುರಿತು ಅವನು ರಚಿಸಿದ ನೂರಾರು ರಗಳೆಗಳೇನಾದರೂ ಈ ಶಿಲ್ಪಗಳ ಕೆತ್ತನೆಗೆ ಆಧಾರವಾಗಿದ್ದವೋ ಎಂದು ಊಹಿಸಲು ಅವಕಾಶವಿದೆ7

ಕಲ್ಲಿನಲ್ಲೇ ಕೆತ್ತಿ ರೂಪಿಸಲಾದ ಈ ಭಾಂಡವೂ ಅಡ್ಡಣಿಗೆಯೂ ಅವುಗಳ ಸೊಗಸು, ಗಾತ್ರಗಳ ಕಾರಣದಿಂದ ಅಚ್ಚರಿಗೆ ಕಾರಣವಾಯಿತು.


ಮುಂಚೆಯೇ ತಿಳಿಸಿದಂತೆ, ವಿರೂಪಾಕ್ಷ ದೇವಾಲಯವು ಹಲವು ದೇವಾಲಯಗಳನ್ನೊಳಗೊಂಡ ಸಂಕೀರ್ಣವೇ ಆಗಿದೆ. ವಿರೂಪಾಕ್ಷಲಿಂಗದ ಗರ್ಭಗುಡಿಯ ಹಿಂಭಾಗದಲ್ಲಿ (ಎಡಗಡೆಗೆ) ಪಂಪಾದೇವಿಯ, ಭುವನೇಶ್ವರಿಯ ಆಲಯಗಳು ಪಕ್ಕಪಕ್ಕದಲ್ಲೇ ಇವೆ. ಅಲ್ಲಿಯೇ ಸಮೀಪದಲ್ಲಿ ಗುಲಗಂಜಿ ಮಾಧವನ ಆಲಯವೂ ಇದೆ. ಈ ಆಲಯವು ನೆಲಮಟ್ಟಕ್ಕಿಂತ ಸ್ವಲ್ಪ ತಗ್ಗಿನಲ್ಲಿರುವುದರಿಂದ ಮೆಟ್ಟಿಲುಗಳನ್ನಿಳಿದು ಹೋಗಬೇಕಿದೆ. ವಿಷ್ಣು ಹಾಗೂ ಶಿವಲಿಂಗವು ಈ ಆಲಯದಲ್ಲಿರುವುದು ವಿಶೇಷ. ಉಳಿದಂತೆ, ಆಲಯಗಳ ಸಂಕೀರ್ಣದಲ್ಲಿರುವ ಗುಡಿಗಳ ಪೈಕಿ ವಿದ್ಯಾರಣ್ಯರ ಆಲಯವನ್ನೂ, ಸುದರ್ಶನ ಮೂರ್ತಿಯನ್ನೂ, ತಾರಕೇಶ್ವರ, ರತ್ನಗರ್ಭ ಗಣಪತಿಯ ಗುಡಿಗಳನ್ನೂ ಇಲ್ಲಿ ಹೆಸರಿಸಬಹುದು.

ಆಲಯದ ಹಿಂಭಾಗದಲ್ಲೊಂದು ವಿಶೇಷ ದೃಶ್ಯವನ್ನು ಕಾಣಬಹುದು. ಆಲಯದ ಹಿಂಭಾಗದಲ್ಲಿರುವ ಕತ್ತಲೆಕೋಣೆಯೊಂದರಲ್ಲಿ ಸಣ್ಣ ಕಿಂಡಿಯೊಂದಿದೆ. ಅದರಿಂದ ಒಳಬರುವ ಬೆಳಕು ಆ ಕಿಂಡಿಯೆದುರಿನ ಗೋಡೆಯ ಮೇಲೆ ಬೀಳುತ್ತದೆ. ಇಲ್ಲಿ ಆಲಯದ ಮುಖ್ಯಗೋಪುರದ ಛಾಯೆಯು ತಲೆಕೆಳಗಾಗಿ ಕಾಣುತ್ತದೆ. ಬೆಳಗಿನ ಹೊತ್ತು ಈ ಛಾಯೆಯು ಬರಿಯ ಕಪ್ಪು ನೆರಳಿನಂತೆ ಕಂಡುಬಂದರೆ ಸಂಜೆಯ ಹೊತ್ತಿಗೆ ಸಹಜವರ್ಣದ ಬಿಂಬವೇ ತಲೆಕೆಳಗಾಗಿ ಕಾಣುತ್ತದೆ. ನೂರಾರು ವರ್ಷಗಳ ಹಿಂದೆಯೇ ಇಂತಹ ತಂತ್ರವನ್ನು ಅಳವಡಿಸಿರುವುದು ವಿಜಯನಗರದ ವಾಸ್ತುಶಿಲ್ಪಿಗಳ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿದೆ.

ರಂಗಮಂಟಪದ ಎಡಗಡೆಯಿರುವ ದ್ವಾರವನ್ನು ದಾಟಿ ಹೋದರೆ ಶಿಥಿಲವಾಗಿರುವ ಕೆಲವು ಗುಡಿಗಳೂ, ಮನ್ಮಥಕುಂಡವೂ, ಮಹಿಷಮರ್ದಿನಿ ಆಲಯವೂ ಕಾಣಿಸುತ್ತದೆ. ಇದ್ದುದರಲ್ಲಿ ಮಹಿಷಮರ್ದಿನಿ ದೇವಾಲಯವು ಒಳ್ಳೆಯ ಸ್ಥಿತಿಯಲ್ಲಿದ್ದು ಈಗಲೂ ಅಲ್ಲಿ ಪ್ರತಿದಿನದ ಪೂಜಾಕಾರ್ಯಗಳು ನಡೆಯುತ್ತವೆ. ಈ ಆಲಯವು ಇತರ ಆಲಯಗಳಿಗಿಂತ ಪ್ರಾಚೀನ ವಾಸ್ತುಲಕ್ಷಣವನ್ನು ಹೊಂದಿದೆಯೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಗುಡಿಯಲ್ಲಿ ೧೨ನೇ ಶತಮಾನದ ಉತ್ತರಾರ್ಧಕ್ಕೆ ಸೇರಿದ ಶಾಸನವೊಂದು ದೊರೆತಿದೆ8
(ಚಿತ್ರದಲ್ಲಿ ಮಹಿಷಮರ್ದಿನಿ ಆಲಯದ ಸಣ್ಣ ಗೋಪುರವನ್ನೂ, ಮನ್ಮಥಕುಂಡವನ್ನೂ ವಿರೂಪಾಕ್ಷ ದೇವಾಲಯದ ಬೃಹತ್ ಗೋಪುರವನ್ನೂ ಕಾಣಬಹುದು)


(ಬೃಹದ್ಗೋಪುರದ ಪಾರ್ಶ್ವನೋಟ)



(ಈ ಲೇಖನದ ಮೊದಲಲ್ಲಿ ತಿಳಿಸಿದಂತೆ ವಿರೂಪಾಕ್ಷ ದೇವಾಲಯವು ಗಾತ್ರದಲ್ಲಿ ಅಗಾಧವಾಗಿರುವಂತೆ ಅದರ ಸೌಂದರ್ಯದ ವಿಷಯದಲ್ಲೂ ಅಪ್ರತಿಮವಾಗಿದೆ. ಹಲವು ರೀತಿಯ ವಾಸ್ತುಲಕ್ಷಣಗಳೂ, ವೈಶಿಷ್ಟ್ಯಗಳೂ ಆಲಯದ ಆದ್ಯಂತವೂ ಮೇಳೈಸಿರುವುದರಿಂದ ಈ ಆಲಯವೊಂದರ ಬಗ್ಗೆ ತಿಳಿಯಬೇಕಾದುದೇ ಸಾಕಷ್ಟಿದೆ. ನಾನು ಈ ಲೇಖನದಲ್ಲಿ ಹೇಳಿರುವುದು ನನಗೆ ಕಂಡುಬಂದ, ನಾನು ಕಂಡುಕೊಂಡ ವಿಷಯಗಳಷ್ಟೇ)

ಟಿಪ್ಪಣಿಗಳು:
೧. ಶ್ರೀಮದ್ವಾಲ್ಮೀಕಿ ರಾಮಾಯಣ, ಸ್ಕಂದಪುರಾಣಗಳಲ್ಲಿನ ಉಲ್ಲೇಖಗಳು
೨. ಪಂಪಾ ಎಂಬುದು ಪೂರ್ವಕಾಲದಲ್ಲಿ ತುಂಗಭದ್ರಾ ನದಿಗೆ ಇದ್ದ ಹೆಸರೆಂದು ನಂಬಲಾಗಿದೆ. ಇದಕ್ಕೆ ಪೂರಕವಾದ ಆಧಾರಗಳೂ ಉಂಟು.
೩. ವಿಜಯನಗರದ (ಹಂಪೆಯ) ಶಾಸನಗಳು - ೧
೪. 'A Forgotten' Empire, "Narrative of Domingo Paes"
೫. ವಿಜಯನಗರದ (ಹಂಪೆಯ) ಶಾಸನಗಳು - ೧, ಶಾಸನ ಸಂ. ೧೦೪
೬. 'A Forgotten' Empire, "Narrative of Domingo Paes"
. ವಿಜಯನಗರ ಅಧ್ಯಯನದ ಒಂದೆರಡು ಸಂಪುಟಗಳಲ್ಲಿನ ಲೇಖನಗಳ ಆಧಾರದ ಮೇಲೆ ನನಗೆ ಹೀಗೆ ತೋರಿತು.
. ವಿಜಯನಗರ ಅಧ್ಯಯನ’, ಸಂಪುಟ ೧