Saturday, 17 October 2015

ಮಾಮರವೆಂಬ 'ಮಾ-ಮರ'.!



ನಮ್ಮ ಕವಿಗಳಿಗೆ ಮಾವಿನ ಬಗ್ಗೆ, ಮಾವಿನಮರದ ಬಗೆಗಿನ ಒಲವು ತುಸು ಹೆಚ್ಚೆಂದೇ ಹೇಳಬೇಕು. ಅದಕ್ಕೇ ಬಹುತೇಕ ಎಲ್ಲ ಕಾವ್ಯಗಳಲ್ಲಿ ಮಾಮರದ ವರ್ಣನೆ, ಪ್ರಶಂಸೆ ತಪ್ಪದೇ ಬರುತ್ತದೆ. ಅದೂ ಅಲ್ಲದೆ, ಮಹಾಕಾವ್ಯದಲ್ಲಿರಬೇಕಾದ ಲಕ್ಷಣಗಳ (ಅಷ್ಟಾದಶ ವರ್ಣನೆಗಳ) ಪೈಕಿ ಋತು ವರ್ಣನೆಯೂ ಒಂದಷ್ಟೇ. ಋತುವರ್ಣನೆಯೆಂದಮೇಲೆ ವಸಂತ ಋತುವಿನ ಸ್ತುತಿಯಾಗಲೇಬೇಕು. ವಸಂತ ಋತು, ಚೈತ್ರಮಾಸಗಳ ಚಿತ್ರಣವೆಂದರೆ ಮಾವಿನ ಬಗೆಗಿನ ಸ್ತೋತ್ರ ಪ್ರಶಂಸೆಗಳಿಲ್ಲದಿದ್ದರೆ ಹೇಗೆ.?

ಪಂಪನ ಆದಿಪುರಾಣದಲ್ಲಿ ಮಾವು - ಒಮ್ಮೆ ’ಕೋಗಿಲೆಗಳ ಗುಂಪು, ದುಂಬಿವಿಂಡು, ಗಿಳಿಗಳ ಸಮೂಹಕ್ಕೆ ಆಶ್ರಯವಾದ ಮಾಮರವು ಕಾಮತಂತ್ರದಂತೆ’ ಕಂಡರೆ, ಮತ್ತೊಮ್ಮೆ ಅದು ಭರತೇಶನ ಮಡದಿಯರ ಮುದ್ದಿಗೆ, ಅಪ್ಪುಗೆಗೆ ಪಾತ್ರವಾಗಿ, ಅವರಿಂದ "ತಳಿರುಗಳ ಪೈಕಿ ನೀನೇ ಸುಂದರ, ಮೊಗ್ಗುಗಳಲ್ಲಿಯೂ ನೀನೇ ಚೆಲುವ, ಹೂಗಳ ವಿಷಯದಲ್ಲಿ ನೀನೇ ವಿಲಾಸಿ, ಮಿಡಿಗಾಯಿಗಳಲ್ಲಿ ನೀನೇ ಚೆಲುವ, ಮಾಗಿದ ಹಣ್ಣುಗಳ ಪೈಕಿ... ಆಹಾ! ಹೆಚ್ಚಿಗೆ ಹೇಳುವುದೇನು, ಎಲ್ಲ ವಿಧದಿಂದಲೂ ನೀನೇ ಚೆನ್ನ, ನೀನೇ ಭುವನೈಕಪೂಜಿತ. ದುಂಬಿ, ಕೋಗಿಲೆ, ಗಿಳಿಗಳಿಗೆ ಪ್ರಿಯನಾದ ಮಾಮರವೇ, ಇತರ ಮರಗಳು ನಿನ್ನಷ್ಟು ಸುಂದರವಾಗಿರಲಾದೀತೇ?" ಎಂದು ಹೊಗಳಿಸಿಕೊಂಡಿದೆ.

ಇನ್ನು, ಆಂಡಯ್ಯನು ’ಕಬ್ಬಿಗರ ಕಾವ’ದಲ್ಲಿ ’ಕೋಗಿಲೆಗಳೆಂಬ ಮೇಳದಾಳುಗಳಿಂದ, ಗಿಳಿಗಳೆಂಬ ಯಾಚಕರ ತಂಡದಿಂದ, ಸುಗಂಧಯುಕ್ತವಾದ ಹೂಗಳಿಂದ ಕೂಡಿದ, ದುಂಬಿಗಳೆಂಬ ಗಾಯಕರು ಹಾಡುತ್ತಲಿರಲು, ಫಲಗಳಿಂದ ತುಂಬಿದ ಮಾಮರವು ಕಾಮದೇವನ ಓಲಗಶಾಲೆಯಂತೆ’ ಕಾಣುತಿತ್ತು ಎಂದಿದ್ದಾನೆ. ಹೀಗೆ, ಮಾವು ಪ್ರತಿಯೊಬ್ಬ ಕವಿಯಿಂದಲೂ ಹೊಗಳಿಸಿಕೊಂಡಿದೆ.

ಷಡಕ್ಷರದೇವನ "ಶಬರಶಂಕರವಿಳಾಸಂ" ಕೃತಿಯಲ್ಲಿ ಮಾಮರದ ಬಗೆಗಿನ (ನನಗೆ ಇಷ್ಟವಾದ) ಕೆಲವು ಪದ್ಯಗಳು ಈ ಲೇಖನದಲ್ಲಿ:

ಅಳಿಕುಲಮಿಂದ್ರನೀಲಮಣಿ, ಪಚ್ಚೆ ಪಸಿರ್ಮಿಡಿ, ತಳ್ತ ಮಲ್ಲಿಕಾ
ಸುಳಳಿತಕುಟ್ಮಳಾಳಿ ಪೊಸಮುತ್ತು, ಕೊನರ್ ಪವಳಂ ಪೊದೞ್ದು ಸಂ
ಗಳಿಸಿರೆ ತನ್ನೊಳೊಪ್ಪಿದುದು ಮಾಮರಮಲ್ಲಿ ಮನೋಜ್ಞ ರತ್ನಸಂ
ಕುಳಮನೆ ಕಾತ ಕಲ್ಪಕುಂಜದಂತೆ ಮರುದ್ಗತನಂದನಸ್ಥಿತಂ                                   -೨.೪೩

"ಅಳಿ’ಕುಲಂ ಇಂದ್ರನೀಲಮಣಿ, ಪಚ್ಚೆ ಪಸಿರ್ ಮಿಡಿ, ತಳ್ತ ಮಲ್ಲಿಕಾ-ಸುಳಳಿತ-ಕುಟ್ಮಳಾಳಿ ಪೊಸಮುತ್ತು, ಕೊನರ್ ಪವಳಂ ಪೊದಳ್ದು ಸಂಗಳಿಸಿರೆ ತನ್ನೊಳ್, ಒಪ್ಪಿದುದು ಮಾಮರಂ ಅಲ್ಲಿ - ಮನೋಜ್ಞ ರತ್ನಸಂಕುಳಮನೆ ಕಾತ ಕಲ್ಪಕುಂಜದಂತೆ ಮರುತ್’ಗತ-ನಂದನ-ಸ್ಥಿತಂ"

(ಆ ಮಾಮರದ ಮೇಲೆ) ಹಾರಾಡುತ್ತಿರುವ ದುಂಬಿಗಳೇ (ಅಳಿ - ದುಂಬಿ) ಇಂದ್ರನೀಲಮಣಿಯಿದ್ದಂತೆ, ಹಸಿರುಬಣ್ಣದ ಮಿಡಿಗಾಯಿಗಳೇ ಪಚ್ಚೆ, ಹಬ್ಬಿದ ಮಲ್ಲಿಗೆಯ ಬಳ್ಳಿಯಲ್ಲಿ ಅರಳಿದ ಹೂಗಳೇ ಮುತ್ತುಗಳು, ಚಿಗುರುಗಳೇ ಹವಳದಂತೆ ಸೊಗಸಾಗಿ ಕಾಣುತ್ತಿರಲು, ಆ ಮಾಮರವು ದೇವತೆಗಳ ನಂದನದಲ್ಲಿರುವ - ಮುತ್ತು, ಪಚ್ಚೆ, ರತ್ನಾವಳಿಯನ್ನು ತಳೆದು ಕಂಗೊಳಿಸುವ - ಕಲ್ಪವೃಕ್ಷದಂತೆ ಕಾಣುತ್ತಿತ್ತು.

ತಳಿರೆಳಮಾದಳಂ ಪುದಿದ ಪೂಗುಡಿ ಜಲ್ಲಿ ಮಡಲ್ತ ಮಲ್ಲಿಯು
ಜ್ವಳಮುಕುಳಾಳಿ ಮುತ್ತು ಪವಳಂ ಕೊನರಾಗೆ ವನಾಬ್ಧಿಯಲ್ಲಿ ಕ
ಣ್ಗೊಳಿಪ ಪಡಂಗು ಮಾಮರಮದಾಗಿರೆ ಕೋಗಿಲೆ ನಟ್ಟೆಗೊಂಬಿನೊಳ್
ತಳೆದುದು ಕೂವಕಂಬದುದಿವತ್ತಿದ ನಾವಿಕನೊಂದು ಲೀಲೆಯಂ                              -೨.೪೪

ತಳಿರ್ ಎಳ-ಮಾ-ದಳಂ ಪುದಿದ ಪೂಗುಡಿ ಜಲ್ಲಿ, ಮಡಲ್ತ ಮಲ್ಲಿಯ ಉಜ್ವಳ ಮುಕುಳಾಳಿ ಮುತ್ತು, ಪವಳಂ ಕೊನರಾಗೆ - ವನಾಬ್ಧಿಯಲ್ಲಿ ಕಣ್ಗೊಳಿಪ ಪಡಂಗು ಮಾಮರಂ’ಅದಾಗಿರೆ, ಕೋಗಿಲೆ ನಟ್ಟೆಗೊಂಬಿನೊಳ್ ತಳೆದುದು ಕೂವಕಂಬದ-ತುದಿ-ವತ್ತಿದ ನಾವಿಕನೊಂದು ಲೀಲೆಯಂ.

ಕವಿಗೆ ಮಾಮರವು ಆ ವನವೆಂಬ ಸಮುದ್ರದಲ್ಲಿರುವ ಹಡಗಿನಂತೆ ಕಂಡಿದೆ ಈ ಪದ್ಯದಲ್ಲಿ.
ತಳಿರು-ಎಲೆ-ದಳಗಳಿಂದ ಕೂಡಿದ ಭಾಗವು ಹೂಬುಟ್ಟಿಯಂತೆ (ಹಡಗಿನ ತಳಭಾಗ), ಮಲ್ಲಿಗೆ/ಹೂ ಮುಕುಳವು ಮುತ್ತುಗಳು (ಮುಕುಳ - ಮೊಗ್ಗು), ಮರದ ಚಿಗುರುಗಳೇ ಹವಳಗಳು. ಈ ಮುತ್ತುರತ್ನಗಳನ್ನು ಹೊತ್ತು ಸಾಗುತ್ತಿರುವ (ಮಾಮರವೆಂಬ) ಹಡಗಿಗೆ ಮರದ ಎತ್ತರದ ಕೊಂಬೆಯನ್ನೇರಿದ ಕೋಗಿಲೆಯೇ ನಾವಿಕನಂತೆ (ಕೂವಕಂಬ - ಹಡಗಿನ ಮಧ್ಯದಲ್ಲಿರುವ ಕಂಬ) ಕಾಣುತ್ತಿತ್ತು.

ಕಳಕಂಠಗಳ ಬಗ್ಗಣೆ
ಗಿಳಿಗಳ ಚಪ್ಪರಣೆಯಳಿಗಳಿಂಚರಮೆಸೆಗುಂ
ತಳಿರ್ಗಳ್ ತನಿವಣ್ಗಳ್ ಸುಮ
ಕುಳಂಗಳಿಡುಕಿಱಿದ ಚೂತಶಾಖಾಂತರದೊಳ್                                                   -೨.೪೫

ಕಳಕಂಠಗಳ ಬಗ್ಗಣೆ, ಗಿಳಿಗಳ ಚಪ್ಪರಣೆ, ಅಳಿಗಳ ಇಂಚರಂ ಎಸೆಗುಂ - ತಳಿರ್ಗಳ್, ತನಿವಣ್ಗಳ್, ಸುಮಕುಳಂಗಳ್ ಇಡುಕಿರಿದ ಚೂತ-ಶಾಖಾಂತರದೊಳ್

ತಳಿರೆಲೆಗಳಿಂದ, ಫಲಿತ ಹಣ್ಣುಗಳಿಂದ, ಕುಸುಮಸಂಕುಲದಿಂದ ನಿಬಿಡವಾಗಿದ್ದ ಆ ಮಾವಿನಮರದ ಕೊಂಬೆಕೊಂಬೆಗಳಿಂದಲೂ ಕೋಗಿಲೆಗಳ ಕೂಗೂ, ಗಿಳಿಗಳು ಹಣ್ಣಿನ ರಸವನ್ನು ಚಪ್ಪರಿಸಿ ಹೀರುವಾಗಿನ ಸದ್ದೂ, ದುಂಬಿಗಳ ಝೇಂಕಾರವೂ ಕೇಳಿಬರುತ್ತಿತ್ತು.

ಕಾಮನ ಸಾಮಜಂ, ಮಧುಮಹೀಶನ ಕೋಶಗೃಹಂ ಮಧುವ್ರತ
ಸ್ತೋಮದ ಪಾನಭೂಮಿ ಮಲಯಾನಿಲನಾಡುವ ಮಾಡುವೆಟ್ಟು ಮ
ಲ್ಲೀಮೃದುಲಾಸ್ಯಶಾಲೆ ಶುಕವೃಂದದ ಜೇವಣದಾಗರಂ ಬೞಿ
ಕ್ಕೀ ಮರಮಲ್ತೆ "ಮಾಮರ"ಮೆನುತ್ತಜನಿಟ್ಟನೊಱಲ್ದು ನಾಮಮಂ                                   -೨.೪೬

"ಕಾಮನ ಸಾಮಜಂ, ಮಧುಮಹೀಶನ ಕೋಶಗೃಹಂ, ಮಧುವ್ರತ-ಸ್ತೋಮದ ಪಾನಭೂಮಿ, ಮಲಯಾನಿಲನ್ ಆಡುವ ಮಾಡುವೆಟ್ಟು, ಮಲ್ಲೀ-ಮೃದುಲಾಸ್ಯಶಾಲೆ, ಶುಕವೃಂದದ ಜೇವಣದಾಗರಂ ಬಳಿಕ್ಕೆ ಈ ಮರಮಲ್ತೆ ’ಮಾಮರಂ’" ಎನುತ್ತ ಅಜನ್ ಇಟ್ಟನ್ ಒರಲ್ದು ನಾಮಮಂ

ಈ ಪದ್ಯದಲ್ಲಿ ಮಾಮರವು ’ಮಾ-ಮರಂ’ (ಮಹಾ ಮರಂ / ಮಹಾವೃಕ್ಷ) ಆಗಿ ಕಂಡಿದೆ ಕವಿಗೆ. ಈ ಮರದ ಘನತೆಯನ್ನು ನೋಡಿಯೇ ಆ ಬ್ರಹ್ಮನು ಇದನ್ನು ’ಮಾ-ಮರ’ವೆಂದು ಕರೆದನಂತೆ. "ಇದು ಮನ್ಮಥನ ಪಟ್ಟದಾನೆ, ಚೈತ್ರರಾಜನ (ಮಧುಮಾಸದ) ಕೋಶಾಗಾರ, ಇದು ದುಂಬಿಗಳ ಪಾನಶಾಲೆ (ಮಧುವ್ರ‍ತ-ದುಂಬಿ), ಮಲಯಮಾರುತನು ವಿಹರಿಸುವ ಕೃತಕಶೈಲ (ಮಾಡುವೆಟ್ಟು - ಕೃತಕ ಶೈಲ), ಇದು ಮಲ್ಲಿಗೆಯ ಬಳ್ಳಿಗಳು ಲಾಸ್ಯವಾಡುವ ನಾಟ್ಯಮಂದಿರ, ಇದು ಗಿಳಿವಿಂಡಿನ ಪಾಲಿಗೆ ಭೋಜನಶಾಲೆ (ಜೇವಣ - ಊಟ).. ಇಷ್ಟೆಲ್ಲಾ ವೈಶಿಷ್ಟ್ಯಗಳ ಕಾರಣದಿಂದಲೇ ಇದು ಮಹಾವೃಕ್ಷ.. ಅದಕ್ಕೇ ಇದು ’ಮಾ-ಮರ’


ಗಿಳಿಗಳ ಸಾಲ್ ಸುರೇಂದ್ರಧನು ಚೆಂದಳಿರೊಂದಿದ ಮಿಂಚು ಕೋಕಿಲಾ
ವಳಿಯ ರವಂ ಘನಧ್ವನಿಗಳುನ್ಮಕರಂದಮೆ ವೃಷ್ಟಿಯಂತೆ ಕಣ್
ಗೊಳಿಸೆ ನಿಲುಂಬಿ ತುಂಬಿ ಕವಿವಾಮ್ರಮನಭ್ರಮೆಗೆತ್ತು ಕೇಕಿಮಂ
ಡಳಿ ಬೞಿಸಾರ್ದು ನರ್ತಿಸುಗುಮೀಕ್ಷಿಸಿ ಮರ್ಚುವಿನಂ ಮನೋಭವಂ                        -೨.೪೭

ಗಿಳಿಗಳ ಸಾಲ್ ಸುರೇಂದ್ರ-ಧನು, ಚೆಂದಳಿರ್ ವೊಂದಿದ ಮಿಂಚು, ಕೋಕಿಲಾವಳಿಯ ರವಂ ಘನಧ್ವನಿಗಳ್, ಉನ್-ಮಕರಂದಮೆ ವೃಷ್ಟಿಯಂತೆ ಕಣ್ಗೊಳಿಸೆ - ನಿಲುಂಬಿ ತುಂಬಿ ಕವಿವ ಆಮ್ರಮನ್ ಭ್ರಮೆಗೆತ್ತು ಕೇಕಿಮಂಡಳಿ ಬಳಿ ಸಾರ್ದು ನರ್ತಿಸುಗುಂ - ಈಕ್ಷಿಸಿ ಮರ್ಚುವಿನಂ ಮನೋಭವಂ

ಆ ವನದಲ್ಲಿದ್ದ ನವಿಲುಗಳಿಗೆ ಮಾಮರವು ಮಳೆಗಾಲದ ಆಕಾಶದಂತೆ ಕಂಡು, ಅವು ಕುಣಿಯಲು ಶುರು ಮಾಡಿದುವಂತೆ. ಅದನ್ನು ಕಂಡು ಮನ್ಮಥನೂ ಪ್ರೀತಿ ತಳೆದನಂತೆ (ಮರ್ಚು - ಪ್ರೀತಿ).
ಮಾಮರದ ಮೇಲೆ ಕುಳಿತಿದ್ದ ಗಿಳಿಗಳ ಸಾಲು (ನವಿಲಿಗೆ) ಕಾಮನಬಿಲ್ಲಿನಂತೆ ಕಂಡಿತು (ಬಹುಶಃ ಅದು ’ಪಂಚವರ್ಣ’ದ ಗಿಳಿಗಳ ಗುಂಪಿದ್ದಿರಬಹುದು). ಚಿಗುರುಗಳು ಮಿಂಚಿನಂತೆ ಕಂಡವು (ಅಥವಾ ಚಿಗುರುಗಳು ಮಿಂಚುತ್ತಿದ್ದವು ಎಂದು ಅರ್ಥೈಸಿಕೊಳ್ಳಬಹುದು). ಮರದ ಮೇಲೆ ಕುಳಿತು ಕೂಗುವ ಕೋಗಿಲೆಯ ದನಿಯು ಗುಡುಗಿನಂತೆ ತೋರಿತು (ನವಿಲಿಗೆ). ಹೂಗಳಿಂದ ಒಸರುತ್ತಿರುವ ಮಕರಂದವೇ ಮಳೆಯಾಗಿ ಕಂಡಿತು. ಹೀಗೆ ಕಂಗೊಳಿಸುತ್ತಿರುವ ಆಮ್ರವನ್ನೇ (ಮಾವಿನಮರ) ಆಕಾಶವೆಂದು ಭ್ರಮಿಸಿ ಆ ವನದಲ್ಲಿದ್ದ ನವಿಲುಗಳು ಕುಣಿಯಲು ಶುರುಮಾಡಿದವು.


ತಳಿರ್ಗಳೆ ದಳ್ಳುರಿಯಲರಿಂ
ಬೆಳೆದಲರ್ವುಡಿ ದೂವೆ ಮಂತ್ರಘೋಷಂ ಪಿಕಸಂ
ಕುಳರವಮೆನೆ ಚೂತಂ ಕಣ್
ಗೊಳಿಪುದು ಹೋಮಾಗ್ನಿಯಂತೆ ಕಾಮಾಧ್ವರಿಯಾ                                           -೨.೪೮

ತಳಿರ್ಗಳೆ ದಳ್ಳುರಿ, ಅಲರಿಂ ಬೆಳೆದ ಅಲರ್-ವುಡಿ ದೂವೆ, ಮಂತ್ರಘೋಷಂ ಪಿಕ-ಸಂಕುಳ-ರವಂ ಎನೆ ಚೂತಂ ಕಣ್ಗೊಳಿಪುದು ಹೋಮಾಗ್ನಿಯಂತೆ ಕಾಮಾಧ್ವರಿಯಾ

ಕವಿಗೆ ಮಾಮರವು ಹೋಮಾಗ್ನಿಯಂತೆ ಕಂಡಿತಂತೆ.!
ಕಂದುಬಣ್ಣದ ಮಾವಿನ ತಳಿರುಗಳೇ ಹೋಮಜ್ವಾಲೆಗಳು, ಹೂಗಳಿಂದ ಉದುರುತ್ತಿದ್ದ ಪರಾಗವೇ ಹೊಗೆ (ಅಲರ್ - ಹೂ; ಅಲರ್-ವುಡಿ -> ಅಲರ ಹುಡಿ - ಪರಾಗ), ಕೋಗಿಲೆಗಳ ಧ್ವನಿಯೇ ಮಂತ್ರಘೋಷವಾಗಿರಲು ಆ ಮಾಮರವು ಕಾಮನು ನಡೆಸುತ್ತಿರುವ ಹೋಮದಂತೆ ಕಂಡಿತು.


ತನಿವಣ್ಣಂ ಮನವಾರೆ ನೋಡಿ ಬೞಿವಂದೊಲ್ದಪ್ಪಿ ಪಕ್ಕಂಗಳಿಂ
ದನಿದೋಱುತ್ತೊಲವೆತ್ತು ಚಂಚುಪುಟದಿಂದಂ ಮೆಲ್ಪಿನಿಂ ಸೀಳ್ದು ಸೀ
ಯೆನೆ ಸೋರ್ವಾ ರಸಧಾರೆಯಂ ಸವಿದುಂ ಚೀತ್ಕಾರಸ್ವರಂ ಪೊಣ್ಮೆ ತ
ನ್ನಿನಿಯಳ್ಗಂ ಕರೆದಿತ್ತದಂ ತಣಿಪುಗುಂ ಕೀರಾಳಿ ಮಾಕಂದದೊಳ್                             -೨.೪೯

ತನಿವಣ್ಣಂ ಮನವಾರೆ ನೋಡಿ ಬೞಿವಂದು, ಒಲ್ದು ಅಪ್ಪಿ ಪಕ್ಕಂಗಳಿಂ, ದನಿದೋರುತ್ತ ಒಲವೆತ್ತು ಚಂಚುಪುಟದಿಂದಂ ಮೆಲ್ಪಿನಿಂ ಸೀಳ್ದು, ಸೀಯೆನೆ ಸೋರ್ವ ಆ ರಸಧಾರೆಯಂ ಸವಿದುಂ, ಚೀತ್ಕಾರಸ್ವರಂ ಪೊಣ್ಮೆ ತನ್ನ ಇನಿಯಳ್ಗಂ ಕರೆದು ಇತ್ತು ಅದಂ ತಣಿಪುಗುಂ ಕೀರಾಳಿ ಮಾ-ಕಂದದೊಳ್   

ಗಿಳಿಗಳು ಆ ಮರದಲ್ಲಿದ್ದ ಮಾಗಿದ ಹಣ್ಣುಗಳನ್ನು ಆಸೆಯಿಂದ ನೋಡಿ, ಅದರ ಬಳಿಸಾರಿ, ತಮ್ಮ ರೆಕ್ಕೆಗಳಿಂದ ಆ ಹಣ್ಣುಗಳನ್ನು ಪ್ರೀತಿಯಿಂದ ಅಪ್ಪಿ, ದನಿದೋರುತ್ತ ತಮ್ಮ ಕೊಕ್ಕಿನಿಂದ (ಹಣ್ಣನ್ನು) ಸೀಳಿ, ಆಗ ಒಸರುವ ರುಚಿಯಾದ ಮಾವಿನರಸವನ್ನು ಸಶಬ್ದವಾಗಿ ಹೀರಿ, ತನ್ನ ಇನಿಯಳನ್ನು (ತನ್ನ ಜೊತೆಗಾತಿ ಗಿಳಿಯನ್ನು) ಕರೆದು ಅದಕ್ಕೂ ಮಾವಿನ ರಸದ ಸವಿಯನ್ನು ಉಣಬಡಿಸಿ ತೃಪ್ತಿಪಡಿಸುತ್ತಿದ್ದವು.

No comments:

Post a Comment