ದೃಶ್ಯ ೧
ಅಂತಃಪುರದಲ್ಲಿನ ವಾತಾಯನವೊಂದರ ಬಳಿ ನಿಂತು
ರಾಮನು ಹೊರಗಿನ ದೃಶ್ಯವನ್ನು ನೋಡುತ್ತಿದ್ದಾನೆ. ದೂರದಲ್ಲೆಲ್ಲೋ ಮೊಳಗುತ್ತಿರುವ ವಾದ್ಯಗಳ ಸದ್ದು
ಸಣ್ಣದಾಗಿ ಕೇಳುತ್ತಿದೆ.
ಅದೊ ಅಲ್ಲಿ, ಅಯೋಧ್ಯೆಯ ಜನರು ನಾಟ್ಯ, ಕವಿಗೋಷ್ಠಿ ಮುಂತಾದ ಕಲಾಪಗಳಲ್ಲಿ ತೊಡಗಿರುವ ದೃಶ್ಯವೂ ಅಸ್ಪಷ್ಟವಾಗಿ ಕಾಣುತ್ತಿದೆ.
ಅಲ್ಲಿ ನೆರೆದ ಆ ಜನರ ಪ್ರತಿ ಚರ್ಯೆಯಲ್ಲೂ ಅವರಲ್ಲಿ ಮನೆಮಾಡಿರುವ ಸಂತಸ ಸಂಭ್ರಮಗಳು ಅದೆಷ್ಟೇ
ದೂರದಿಂದ ನೋಡಿದರೂ ಅರಿಯಬಹುದಾದಷ್ಟು ಸ್ಪಷ್ಟವಾಗಿದೆ. ಜನರ ಆ ಸಂಭ್ರಮ ಸಂತೋಷಗಳನ್ನು ಕಂಡು
ರಾಮನಿಗೂ ಹಿಗ್ಗು.
ಈ ದಿನವಷ್ಟೇ ದೇವತೆಗಳೂ, ಬ್ರಾಹ್ಮಣಶ್ರೇಷ್ಠರೂ, ಹನುಮ-ಸುಗ್ರೀವ-ಜಾಂಬವಂತನೇ ಮೊದಲಾದ ವಾನರ ವೀರರೂ, ವಿಭೀಷಣಾದಿ
ಪಮುಖರೂ, ನೂರಾರು ಸಾಮಂತ ಅರಸರೂ, ನಾನಾ
ದೇಶದ ಜನರೂ ಉತ್ಸವದಲ್ಲಿ ಭಾಗವಹಿಸಿರಲಾಗಿ, ಅವರೆಲ್ಲರ
ಸಮಕ್ಷಮದಲ್ಲಿ - ವಸಿಷ್ಠ-ವಿಶ್ವಾಮಿತ್ರರಂತಹ ಮುನಿವರರ ಪೌರೋಹಿತ್ಯದಲ್ಲಿ - ಸೀತಾದೇವಿಯ ಪುಂಸವನ ಸೀಮಂತ ಮಹೋತ್ಸವವು ಬಹು ವೈಭವದಿಂದ ನೆರವೇರಿತ್ತು.
ಆ ನಂತರದಲ್ಲಿ ರಾಮನು ಉತ್ಸವಕ್ಕೆ ಆಗಮಿಸಿದ್ದವರೆಲ್ಲರನ್ನೂ ಉಚಿತ
ರೀತಿಯಲ್ಲಿ ಸತ್ಕರಿಸಿ, ಸುಗಂಧ
ತಾಂಬೂಲ ಪುಷ್ಪಾಕ್ಷತೆ ವಸ್ತ್ರಾಭರಣಗಳ ಉಡುಗೊರೆಗಳನ್ನಿತ್ತು ಸತ್ಕರಿಸಿದ್ದನು. ಅಲ್ಲಿ
ನೆರೆದಿದ್ದವರೆಲ್ಲರೂ ಉಡುಗೊರೆ-ದಾನ-ಸತ್ಕಾರಾದಿಗಳಿಂದ ಸಂತೃಪ್ತರಾಗಿ ಮನಸಾರೆ ಸೀತಾರಾಮರಿಗೆ
ಶುಭವನ್ನು ಹಾರೈಸಿ ಬೀಳ್ಕೊಂಡಿದ್ದರು.
ಈಗ, ಅಯೋಧ್ಯೆಯ
ಜನರು ಇನ್ನೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅವರನ್ನು ನೋಡುತ್ತ ನೋಡುತ್ತ ರಾಮನೂ
ಸಂತಸದಲ್ಲಿ ಮೈಮರೆತು ನಿಂತಿದ್ದಾನೆ. ಅಷ್ಟರಲ್ಲಿ ರಾಮನಿದ್ದ ಸ್ಥಳಕ್ಕೆ ಯಾರೋ ಬಂದ ಸದ್ದಾಯಿತು.
ಬಂದವರು ಯಾರೆಂದು ರಾಮನು ತಿರುಗಿನೋಡಿದಾಗ ಕಂಡದ್ದು ಸಂತಸದಿಂದ ತುಂಬಿ, ಲಜ್ಜೆಯಿಂದ ಕೂಡಿದ ಮೈಥಿಲಿಯ ಮುಖ.
ಅದೇನು ಕಳೆ ತುಂಬಿದೆ ಈಗ ಆಕೆಯ ಮೊಗದಲ್ಲಿ! ಲೋಕೋದ್ಧಾರಕನಾದ
ರಾಮಚಂದ್ರನ ಅಂಶವಾದ ಶಿಶುಚಂದ್ರನನ್ನು ತನ್ನ ಗರ್ಭದಲ್ಲಿ ಧರಿಸಿರುವ ಚಂದ್ರಿಕೆಯೀಕೆ ಎಂಬ ಭಾವ
ಮೂಡಿಸುವಂತೆ ಹೊಸಕಾಂತಿಯೊಂದನ್ನು ಹೊರಸೂಸುತ್ತಿದೆ ಸೀತೆಯ ನವಸೌಂದರ್ಯ. ರಾಮನು ಸೀತೆಯ ಆ ಅನುಪಮ
ಸೌಂದರ್ಯವನ್ನು ಮನದಣಿಯೆ ಕಂಡು ಮುದಗೊಂಡನು.
ಇಂದಿನ ಉತ್ಸವದ ಸಲ್ಲಾಪಗಳ ನಡುವೆ ಇಬ್ಬರಿಗೂ
ಪರಸ್ಪರ ಮಾತನಾಡಲೂ ಅವಕಾಶ ಸಿಕ್ಕಿರಲಿಲ್ಲ. ಈಗಲಾದರೂ ಸೀತೆಯೊಡನೆ ಮಾತನಾಡಬೇಕೆಂಬ ಹಂಬಲ ರಾಮನದು.
ಆಕೆಗೂ ಅಷ್ಟೇ, ತನ್ನ
ಬಯಕೆಯೊಂದನ್ನು ರಾಮನಲ್ಲಿ ಬಿನ್ನವಿಸಬೇಕೆಂಬ ಆಸೆ ಆಕೆಯದು. ಗರ್ಭಿಣಿ ಹೆಂಡತಿಯ ಬಯಕೆಯನ್ನರಿತು
ಅದನ್ನು ಈಡೇರಿಸುವುದು ಪತಿಯಾದವನ ಧರ್ಮ. ರಾಮನೂ ಇದಕ್ಕೆ ಹೊರತಲ್ಲವಲ್ಲ! ತನ್ನ ಮುದ್ದಿನ ಮಡದಿಯ
ಮನದಾಳದ ಬಯಕೆಯನ್ನು ತಿಳಿದು ಅದನ್ನು ನಡೆಸಿಕೊಡಬೇಕೆಂಬ ತವಕ ಆತನಿಗೂ ಇದೆ. ಅದಕ್ಕೆಂದೇ
ಸೀತೆಯನ್ನು ಕೇಳಿದ - ನಿನ್ನ ಯಾವುದೇ ಬಯಕೆಯಿದ್ದರೂ ತಿಳಿಸು, ಮೈಥಿಲಿ.
ಅದನ್ನು ತಪ್ಪದೆ ನಡೆಸಿಕೊಡುವ ಹೊಣೆ ನನ್ನದು, ಎಂದು.
ಅದಕ್ಕೆ ಸೀತೆಯು - ’ಕುತ್ಸಿತಂ ಪೊರ್ದದಾಶ್ರಮದ ಋಷಿಪತ್ನಿಯರ ಸತ್ಸಂಗದೊಳ್
ತನ್ನ ಬೇಸರಂ ತವಿಸುವೆನಿದುತ್ಸಕಂ ತನಗದರಿನಿನ್ನೊಮ್ಮೆ ಬನಕೆ ತನ್ನಂ ಕಳುಹಬೇ’ಕೆಂದಳು
ರಾಮನು ಸೀತೆಯ ಬಯಕೆಯನ್ನು ಕೇಳಿ, ಅದಕ್ಕೆ
ಒಪ್ಪಿ ಶೀಘ್ರದಲ್ಲೇ ಗಂಗಾತೀರದ ಋಷ್ಯಾಶ್ರಮಕ್ಕೆ ಸೀತೆಯನ್ನು ಕಳುಹಿಸುವ ಭರವಸೆಯನ್ನಿತ್ತನು.
ಸೀತೆಯ ಮುಖವು ಅಮಿತವಾದ ಸಂತಸದಿಂದ ಇನ್ನಷ್ಟು ಹೊಳಪೇರಿತು.
ದೃಶ್ಯ ೨
ರಾಮ ವಸಿಷ್ಠರೊಡನಿದ್ದಾನೆ. ಆತನ ಮುಖದಲ್ಲಿ
ಯಾವುದೋ ಆತಂಕ, ಕಳವಳ.
ನೆನ್ನೆ ರಾತ್ರಿಯ ಕನಸಿನಲ್ಲಿ ತನ್ನ ಸೀತೆಯು ’ಗಂಗೆಯಂ ಕಳೆದು, ಕಾಡೊಳ್ ಮಹಾ ಕ್ಷೀಣೆಯಾಗಿ, ದೇಸಿಗರಂತೆ ದೆಸೆದೆಸೆಯನ್ ಈಕ್ಷಿಸುತ ಮರುಗುತ್ತಳಿರ್ದು’ದನ್ನು ಕಂಡಾಗಿನಿಂದ ರಾಮನಿಗೆ ಒಂದು ಬಗೆಯ ಆತಂಕ
ಮೂಡಿದೆ. ಆ ಕನಸಿನ ಬಗೆಗೆ ಕೇಳಲೆಂದೇ ಕುಲಗುರುಗಳಾದ ವಸಿಷ್ಠರನ್ನು ಕಂಡು, ಅವರೊಡನೆ ತನ್ನ ಕನಸಿನ ಶುಭಾಶುಭ ಫಲದ
ಬಗ್ಗೆ ಕೇಳಿದ್ದು. ವಸಿಷ್ಠರೂ ಈ ಕನಸಿನ ಶಕುನ ಅಷ್ಟು ಒಳ್ಳೆಯದಲ್ಲವೆಂದು ಅಭಿಪ್ರಾಯ ಪಟ್ಟು,
ತಮ್ಮ ಕೈಲಾದ ಮಟ್ಟಿಗೆ ಅದರ ಪರಿಣಾಮವನ್ನು ಕಡಿಮೆಗೊಳಿಸಲು ಶಾಂತಿಯನ್ನು
ಮಾಡಿಸುವುದಾಗಿ ಹೇಳಿ ಬೀಳ್ಕೊಂಡರು.
ದೃಶ್ಯ ೩
ಕಗ್ಗತ್ತಲ ರಾತ್ರಿ! ರಾಮನು ನಗರಶೋಧನೆಯ
ಚಾರನೊಬ್ಬನನ್ನು ಕರೆದು ರಾಜ್ಯದ ಸದ್ಯದ ಸ್ಥಿತಿಗತಿಗಳನ್ನೂ, ತನ್ನ ನಾಡಿನ ಪ್ರಜೆಗಳು ತನ್ನ ಬಗ್ಗೆ ಹೊಂದಿರುವ ಅಭಿಪ್ರಾಯವನ್ನೂ
ಕುರಿತು ಹೇಳಲು ಆದೇಶಿಸುತ್ತಾನೆ.
ಅದಕ್ಕೆ ಅವನು - "ದೇವ, ನಿನ್ನಂ ಪೆಸರಿಸಿದನ್ ಈಶನಾದಪಂ, ಸೇವಿಸಿದವಂ ಚತುರ್ಮುಖನಾಗಲುಳ್ಳವಂ
, ಕಾವುದೆಂದೈಸೆ ಮೊರೆವೊಕ್ಕವಂ ಜಗದೊಳ್ ಆಚಂದ್ರಾರ್ಕಮಾಗಿ ಬಾಳ್ವಂ
ಶ್ರೀವಿಭವದಿಂ, ಶಕ್ರಪದವಿಯಂ ಜರೆದಪಂ. ಭೂವಲಯದೊಳ್ ನಿಂದಿಸುವರುಂಟೆ,
ತರಣಿಯಂ ಕಾವಳಂ ಮುಸುಕಿರ್ದೊಡೇನಾದುದು!" ಎಂದು ಬಿನ್ನೈಸಿ ಕೈಮುಗಿದನು.
ರಾಮನಿಗೇಕೋ ಈ ಚಾರನು ಯಾವುದೋ ವಿಷಯವನ್ನು
ಹೇಳಲು ಹಿಂಜರಿಯುತ್ತಿದ್ದಾನೆ ಅನಿಸಿತು. ಇಲ್ಲದಿದ್ದರೆ ಇದೇಕೆ ಇವನು’ಸೂರ್ಯನನ್ನು
ಮುಸುಕಿದ ಮಂಜು’ ಎಂಬ ಹೋಲಿಕೆ ಕೊಟ್ಟು ಹೇಳಿದ ಎಂದು ಬಗೆದು ಮತ್ತೆ ’ತನ್ನರಸುತನಕಾವುದು
ಊಣೆಯವೆಂಬರು (ನನ್ನ ಅರಸುತನಕೆ ಯಾವುದು
ಕೊರತೆ ಎಂದು ಜನರ ಅಭಿಪ್ರಾಯ)?’ ಎಂದು
ಚಾರನನ್ನು ಪ್ರಶ್ನಿಸುತ್ತಾನೆ.
ಅದಾಗಿಯೂ ಆ ಚಾರನಿಗೆ ವಿಷಯ ಹೇಗೆ ತಿಳಿಸುವುದೋ
ತೋಚದೆ ’ಜಗದೊಳ್ ಅಜ್ಞಾನಿಗಳ್ ನುಡಿದ ನಿಂದೆಯನ್ ಉಸಿರಲಮ್ಮೆನ್’ ಎಂದು ಹೇಳಿ ರಾಮನ ಪದಕ್ಕೆರಗಿದನು. ರಾಮನು
ಅವನನ್ನೆಬ್ಬಿಸಿ ’ಅಯ್ಯಾ, ಅಂಜಬೇಡ
, ವಿಷಯವೇನೇ ಇದ್ದರೂ ಯಾವ ಅಂಜಿಕೆಯನ್ನೂ ಇಟ್ಟುಕೊಳ್ಳದೆ ನನ್ನಲ್ಲಿ ಹೇಳು’
ಎಂದು ಒತ್ತಾಯಪಡಿಸಲಾಗಿ ಆ ಚಾರನು - "ಸ್ವಾಮಿ, ಒಬ್ಬ ಮಡಿವಾಳಿಯು ನಿನ್ನ ಬಗೆಗೆ ಲಘುವಾಗಿ ಮಾತಾಡಿದ. ನಿನ್ನ ಘನತೆ ಎಂತಹುದೆಂಬುದು
ಆ ಅಜ್ಞಾನಿಗೇನು ತಿಳಿಯಬೇಕು...
ಪೆಂಡತಿ ತವರ್ಮನೆಗೆ ಪೇಳದೆ ಪೋದ
ಚಂಡಿತನಕವಳ ತಾಯ್ತಂದೆಗಳ್ ಕಳುಹಬಂ
ದಂಡಲೆದೊಡಿನ್ನೊಲ್ಲೆನಗಲಿರ್ದ ಮಡದಿಯಂ ಮತ್ತೆ ರಘುನಾಥನಂತೆ
ಕೊಂಡಾಳುವವನಲ್ಲ ತಾನೆಂದು ರಜಕನು
ದ್ದಂಡದೊಳ್ ನುಡಿಯೆ ಕಿವಿಮುಚ್ಚಿಕೊಳುತೆಯ್ದಿದೆನ್" ಎಂದು
ಬಿನ್ನೈಸಿದನು. (ರಜಕ - ಅಗಸ)
ರಾಮನು ಆ ಚಾರನು ನುಡಿದುದೆಲ್ಲವನ್ನೂ ಕೇಳಿ, ಅವನನ್ನು ಕಳುಹಿಸಿದ ನಂತರ ..ಮೌನದಿಂದ
ನಿಂದು ಸೈವೆರಗಾಗಿ, ನೆನೆನೆನೆದು ಚಿತ್ತದೊಳ್ ನೊಂದು, ಬಿಸುಸುಯ್ದು, ಕಡುವಳಿದು, ಕಾತರಿಸಿ,
ಕಳೆಗುಂದಿ, ದುಮ್ಮಾನದಿಂ ಪೊಕ್ಕನ್ ಅಂತಃಪುರವ.
ದೃಶ್ಯ ೪
ಹೀಗೆ ರಾಮನು ಚಿಂತಾಕುಲನಾಗಿ ಅಂತಃಪುರವನ್ನು
ಹೊಕ್ಕ ವಿಷಯವನ್ನು ಕೇಳಿದ ಲಕ್ಷ್ಮಣ ಭರತ ಶತ್ರುಘ್ನರು ಏನಾಯಿತೊ ಎಂಬ ಭೀತಿಯಿಂದ ರಾಮನಿದ್ದೆಡೆಗೆ
ಧಾವಿಸಿ ಬಂದರು. ಹಾಗೆ ಅವರು ಬಂದು ರಾಮನ ಪಾದಕ್ಕೆರಗಿದರೂ ರಾಮನು ಇನ್ನೂ ಯಾವುದೋ
ಚಿಂತೆಯಲ್ಲಿದ್ದುದರಿಂದ ಅವನನ್ನು ಮಾತನಾಡಿಸುವ ಬಗೆಯನ್ನೂ ತಿಳಿಯದೆ ಮೌನವಾಗಿ ನಿಂತರು.
ಸ್ವಲ್ಪ ಸಮಯದ ನಂತರ ರಾಮನೇ ಅವರನ್ನು ಕರೆದು
ಕುಳ್ಳಿರಿಸಿ ವಿಷಯವನ್ನರುಹಿದನು - ".. ಇಳೆಯೊಳ್ ಇಂದು ಎನಗಾದ ಅಪವಾದಮಂ ನೀವ್
ಅರಿದುದಿಲ್ಲ, ಅಕಟ! .. ನೆರವಿಗಳೊಳು ಕದ್ದ ಕಳ್ಳನವೊಲ್
ಆಡಿಸಿಕೊಳ್ಳಲಾರೆನ್, ಒಡಲಿದ್ದಲ್ಲಿ ನಿಂದೆಗೊಳಗಾಗಿ ಬದುಕುವನಲ್ಲ.
ತಿದ್ದಿ ತೀರದ ವಿಲಗಕ್ಕಂಜುವೆಂ, ಸೀತೆಯಂ
ಬಿಟ್ಟಿಲ್ಲದಿರೆನೆಂ"ದನು.
’ಇವಳಯೋನಿಜೆ, ರೂಪಗುಣ
ಶೀಲಸಂಪನ್ನೆ, ಭುವನಪಾವನೆ, ಪುಣ್ಯಚರಿತೆ ಮಂಗಳಮಹೋತ್ಸವೆ, ಪತಿವ್ರತೆಯೆಂಬುದಂ ಬಲ್ಲೆನ್. ಆದೊಡಂ, ನಿಂದೆಗೊಳಗಾದ
ಬಳಿಕ ಅವನಿಸುತೆಯಂ ತನಗೆ ಬಿಡುವುದೇ ನಿಶ್ಚಯಂ. ರವಿಕುಲದ ರಾಯರ್ ಅಪಕೀರ್ತಿಯಂ ತಾಳ್ದಪರೆ?
ಕುವರನಾಗಿರ್ದ ತನ್ನಂ ತಾತನುಳಿದುದಿಲ್ಲವೆ ಸತ್ಯಭಾಷೆಗಾಗಿ?’ (ತಾತ - ತಂದೆ)
ರಾಮನು ’ಕಲಿಯುಗದ ವಿಪ್ರರ್ ಆಚಾರವಂ ಬಿಡುವಂತೆ, ಪಲವು ಮಾತೇನಿನ್ನು, ಸೀತೆಯಂ ಬಿಟ್ಟೆ’ನೆನೆ, "ಬಲುಗರಂ [ಗರ - ದುಷ್ಟಶಕ್ತಿ, ಗ್ರಹ] ಇದೆತ್ತಣಿದೊ
ಕರುಣ್ಯನಿಧಿಗೆ" ಎನುತ ನಡುನಡುಗಿ ಭೀತಿಯಿಂದ "ನೆಲೆಗೊಂಡ ವೇದಮಂ ಧರೆಯ ಪಾಷಂಡಿಗಳ್
ಸಲೆ ನಿಂದಿಸಿದೊಡದಂ ಮಾಣ್ದಪರೆ ದ್ವಿಜರ್? ಅಕಟ! ಕುಲವರ್ಧಿನಿಯನ್ ಎಂತು ಬಿಡುವೆ ನೀಂ, ಪೇಳ್?" ಎಂದರ್ ಅನುಜಾತರ್ ಅಗ್ರಜಂಗೆ.
ಭರತನು ಅತಿ ಶೋಕಾಕುಲಿತನಾಗಿ "ಅಣ್ಣ, ನೀತಿವಂತರಾರಾದರೂ ಹಾಲ್ಗರೆಯುವ
ಕಪಿಲೆಯನ್ನು ಹೊಡೆದು ಅಡವಿಗಟ್ಟುವರೇ? ನಿನಗೆ ಈ ಆಲೋಚನೆಯೇಕೆ ಬಂತು?
ಅಂದು ಆ ಪಾವನಮೂರ್ತಿ ತನ್ನ ಪಾವಿತ್ರ್ಯತೆಯನ್ನು ನಿರೂಪಿಸಿಕೊಳ್ಳಲು
ಅಗ್ನಿಪ್ರವೇಶವನ್ನೇ ಮಾಡಲಿಲ್ಲವೆ, ಆಕೆ ಪರಿಶುದ್ಧಳೆಂದು
ಎಲ್ಲರೆದುರು ನೀನೂ ಒಪ್ಪಲಿಲ್ಲವೇ?
ಅದನೆಲ್ಲಮಂ ಮರೆದು ಹುಲುಮನುಜ ರಜಕನಾ
ಡಿದ ದೂಸರಂ ನೆನೆದು ಕುಲಪತ್ನಿಯಂ ಬಿಡುವ
ಹದನಾವುದಕಟ ಗುರು-ಲಘುವಿನಂತರವನೆಣಿಸದೆ ಬರಿದೆ ಮೂಢರಂತೆ
ಎದೆಗೆಟ್ಟು ದೇವಿಯಂ ದೋಷಿಯೆಂಬರೆ?" (ದೂಸರಂ
- ಅಪವಾದ, ಕಾರಣ, ನಿಂದೆ)
ಅದಕ್ಕೆ ರಾಮನು - "ತಮ್ಮ
ನೀನಾಡಿದಂತೆ ಅವನಿಸುತೆ(ಜಾನಕಿ) ನೀರಜೆಯಹುದು. ಉಮ್ಮಳಿಸಬೇಡ; ಸೈರಿಸಲಾರೆನ್ ಈ
ದೂಸರಂ. ಮಹಿಯೊಳ್ ಉಳಿದರೇ ಪೃಥು-ಪುರೂರವ-ಹರಿಶ್ಚಂದ್ರಾದಿ ನರಪತಿಗಳು? ಸುಮ್ಮನೆ ಅಪಕೀರ್ತಿಗೆ ಒಳಗಾಗಲೇತಕೆ, ಮಮತೆಯನ್
ಮಹಾಯೋಗಿ ಬಿಡುವಂತೆ ಇವಳನ್ ಉಳಿವೆನ್" ಎನೆ, ಹಮ್ಮೈಸಿ ಲಕ್ಷ್ಮಣಂ ಕಂಪಿಸುತ ಕಿವಿ ಮುಚ್ಚುತ ಅಗ್ರಜಂಗೆ ಇಂತೆಂದನು
–
"ಕಾಯಸುಖಕೋಸುಗಂ
ಕೃತಧರ್ಮವಂ ಬಿಡುವೊ
ಲಾಯತಾಕ್ಷಿಯ
ಭಾವಶುದ್ಧಿಯಂ ತಿಳಿದಿರ್ದು
ವಾಯದಪವಾದಕಿಂತರಸಿಯಂ
ತೊರೆಯಬೇಕೆಂಬರೆ, ಕರುಣಮಿಲ್ಲದೆ?
ಜೀಯ, ತುಂಬಿದ ಬಸುರ್ ಬೆಸಲಾದ ದೇವಿಯಂ
ಪ್ರೀಯದಿಂದಾರೈದು
ಸಲಹಬೇಕೆಂ"ದು ರಘುರಾಯಂಗೆ ಬಿನ್ನೈಸಿದನು. ಶತ್ರುಘ್ನನೂ ಸೀತಾಪರಿತ್ಯಾಗಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದನು.
ರಾಮನು ತಮ್ಮಂದಿರಾಡಿದ ಮಾತುಗಳನ್ನು ಕೇಳಿ ’ತರಹರಿಸಬಾರದ ಅಪವಾದ ಹೃಚ್ಛೂಲಮಂ ತನಗೆ ಜಾನಕಿಯನ್ ಉಳಿದು ಪೊರೆಯುರ್ಚಿದ
ಉರಗನಂತಿರ್ಪೆಂ, ಸಾಕು ನಿಮಗೊರೆದೊಡೇನಹುದು’ ಎಂದು ಬೇಸರೊಳ್ ಭರತ-ಶತ್ರುಘ್ನರಂ ಮನೆಗಳ್ಗೆ ಕಳುಹುತ ಏಕಾಂತದೊಳ್ ಸೌಮಿತ್ರಿಗೆ
ಇಂತೆಂದನು -
ತಮ್ಮ ಬಾ, ನೀನಿಂದುವರೆಗೆ ನಾನೆಂದ ಮಾ
ತಮ್ಮೀರಿದವನಲ್ಲ.
ಕೆಲಬಲವನಾರೈವು
ತಮ್ಮರುಗದಿರು
ತನ್ನ ಕೊರಳಿಗಿದೆ ಖಡ್ಗಮಲ್ಲದೊಡೀಗ ಜಾನಕಿಯನು
ಉಮ್ಮಳಿಸದೊಯ್ದು
ಗಂಗೆಯ ತಡಿಯರಣ್ಯದೊಳ್
ಸುಮ್ಮನೆ
ಕಳುಹಿಬರ್ಪುದವಳೆನ್ನೊಳಾಡಿರ್ಪ
ಳೊಮ್ಮೆ
ಕಾನನಕೈದಬೇಕೆಂದು ಬಯಕೆಯಿಂದದೆ ನೆವಂ ನಿನಗೆಂದನು -೧೮.೫೮
ಲಕ್ಷ್ಮಣನು ’ಅಣ್ಣ,
ನಿನ್ನಾಜ್ಞೆಯನ್ನು ಮೀರಿದರೆ ನನಗೆ ರೌರವ ನರಕವೇ ಗತಿ. ಆದರೆ ನೀನೆಂದಂತೆ
ಮಾಡಿದೆನಾದರೆ ಮಾತೃಹತ್ಯೆ ಗೈದವನಿಗೆ ದೊರೆಯುವಂತಹ ಘೋರ ಗತಿ ಉಂಟಾಗುತ್ತದೆ...’ ಎಂದು ದುಃಖಿಸುತ್ತಿರಲು, ರಾಮನು ’ನಿನಗೆ ದೋಷಮೆ ನಾನಿರಲ್ಕೆ? ನಡೆ, ಕಳುಹು’ ಎಂದನು. ಆಹಾ! ಅರಸನದೇಂ ದಯೆದೊರೆದನೋ!!
ದೃಶ್ಯ ೫
ಅಣ್ಣನ ಮೇಲಿನ ವಾತ್ಸಲ್ಯಕ್ಕೂ ಅಭಿಮಾನಕ್ಕೂ
ಕಟ್ಟುಬಿದ್ದು ಅವನ ಮಾತನ್ನು ಮೀರಲಾರದೆ ಕೊನೆಗೂ ಲಕ್ಷ್ಮಣನು ಮುಂದಿನ ಕಾರ್ಯಕ್ಕೆ ಸಜ್ಜಾದನು. ’ತುರಗ ಸಾರಥಿ ಕೇತನಂಗಳಿಂದ ಹಣ್ಣಿದ ವರೂಥಮಂ ತರಿಸಿ ಪೊರಗಿರಿಸಿ ನೆಲವೆಣ್ಣ
ಮಗಳಿರುತಿರ್ದ ರಾಜಮಂದಿರಕೈದಿ ಕಣ್ಣೊಳೀಕ್ಷಿಸದೆ ತಲೆವಾಗಿ ದೂರದೊಳೆ ನಿಂದು ಆ ಸೀತೆಗಿಂತೆಂದನು -
"ತಾಯೆ, ನೀನೇತಕೆಳಸಿದೆ ನಿನ್ನನೀಗ ರಘು
ರಾಯಂ ತಪೋವನಕೆ
ಕಳುಹಿಬರಹೇಳಿದಂ
ಪ್ರೀಯಮುಳ್ಳೊಡೆ
ರಥಂ ಪಣ್ಣಿಬಂದಿದೆಕೊ, ಬಿಜಯಂಗೈವುದೆಂದು" ಮರುಗಿ
ಛಾಯೆಗಾಣಿಸಿ
ಸುಮಿತ್ರಾತ್ಮಜಂ ನುಡಿದ’ಅಭಿ
ಪ್ರಾಯಮಂ ತಿಳಿಯದೆ
ಅತಿ ಸಂಭ್ರಮಾನ್ವಿತೆಯಾದ
ಳಾಯತಾಂಬಕಿ ತನ್ನ
ಅಭೀಷ್ಟಮಂ ಸಲಿಸುವಂ ಕಾಂತನ್ ಎಂಬುತ್ಸವದೊಳು.
(ಮುಂದುವರೆಯುವುದು..)
ಉಪಮಾಲೋಲ ಕವಿ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬರುವ ರಾಮಾಯಣದ
(ರಾಮ-ಲವಕುಶರ ಯುದ್ಧವನ್ನು ಕುರಿತಾದ) ಆಖ್ಯಾನವನ್ನು ಸರಳವಾಗಿ, ಸ್ವಲ್ಪ ಮಾರ್ಪಾಟುಗಳೊಂದಿಗೆ
ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ಮೂಲ ಕೃತಿಯಲ್ಲಿನ ಷಟ್ಪದಿಗಳನ್ನು/ಅವುಗಳ ಭಾಗಗಳನ್ನು ಸರಳ
ಓದಿಗೆ ಅನುವಾಗುವಂತೆ ಅಗತ್ಯವಿದ್ದ ಕಡೆಗಳಲ್ಲಿ ವಿಂಗಡಿಸಿ ಬರೆದಿದ್ದೇನೆ. ಆದ್ದರಿಂದ ಗಣಗಳ ರೂಪದಲ್ಲಿ, ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸಗಳು
ಗೋಚರಿಸಬಹುದು.