ಏನೆಲವೊ ನರೆದಲೆಗ ನೀನು ಸ
ಮಾನನೇ ಎನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀಪತಿ ಸನಿಹದಲಿ ಕುಲ
ಹೀನ ನೀನಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ ||೩೬||
ಲೋಕದಲಧಿಕ ಭೋಜನವಿದೆಂ
ದಾಕೆವಾಳರು ಬುಧರು ಜರೆದು ನಿ
ರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ
ನಾಕನಿಳಯರು ಸಾಕ್ಷಿ ನಿನ್ನ ವಿ
ವೇಕಿಗಳು ಮೆಚ್ಚುವರೆ ಬಾಹಿರ
ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ ||೩೭||
ಭತ್ತವು
ರಾಗಿಯನ್ನು ಹೀಯಾಳಿಸಿ ನುಡಿಯತೊಡಗಿತು : "ಏನೆಲವೋ ನರೆದೆಲಗ, ನೀನು ನನಗೆ ಸಮಾನನೇ ಇಲ್ಲಿ? ನಮ್ಮಿಬ್ಬರನ್ನು, ನಮ್ಮ ಹೆಚ್ಚು-ಕುಂದುಗಳನ್ನು
ಕುರಿತು ಶ್ರೀರಾಮನು ಚೆನ್ನಾಗಿ ಬಲ್ಲ. ಜಾನಕೀಪತಿಯು ತಾನಿರುವ ಈ ಸಭೆಯಲ್ಲಿ ಕುಲಹೀನನಾದ, ಮತಿಹೀನನಾದ ನೀನೂ
ಇರುವೆಯಲ್ಲ. ಅಬ್ಬಾ! ಲೋಕದಲ್ಲಿ ನೀನು ಮಹಾಭೋಜನವೆಂದೇ ವೀರರೂ, ವಿದ್ವಾಂಸರೂ ನಿನ್ನನ್ನು
ನಿರಾಕರಿಸಿದರಲ್ಲವೇ? ಅದಕ್ಕೇ ನೀನು
ಶೂದ್ರಾನ್ನವಾದೆ ಅಲ್ಲವೇ. ಆ
ದೇವತೆಗಳೇ ಸಾಕ್ಷಿ, ವಿವೇಕಿಗಳೆನಿಸಿಕೊಂಡವರು
ಯಾರಾದರೂ ನಿನ್ನನ್ನು ಮೆಚ್ಚುವರೇ? ಛಿ! ಬಾಹಿರ, ಇಲ್ಲಿ ನೀನಾವ
ಮಾನ್ಯನೋ..ಸಾಕು ತೊಲಗು ಇಲ್ಲಿಂದ."
ಕ್ಷಿತಿಯಮರರುಪನಯನದಲಿ ಸು
ವ್ರತ ಸುಭೋಜನ ಪರಮ ಮಂತ್ರಾ
ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ
ಕ್ರತುಗಳೆಡೆಯೊಳಗರಮನೆಯಲಿ
ಪ್ರತಿದಿನವು ರಂಜಿಸುತ ದೇವರಿ
ಗತಿಶಯದ ನೈವೇದ್ಯ ತಾನಹೆನೆಂದನಾ ವ್ರಿಹಿಗ ||೩೮||
ಧರಣಿಯಮರರು ಮಂತ್ರತಂತ್ರೋ
ಚ್ಛರಣೆಯಲಿ ಹಸ್ತಾಂಬುಜದಿ ಮಿಗೆ
ಹರಸಿ ಕೊಡಲಕ್ಷತೆಯ ಮಂಡೆಯೊಳಾಂತ ಮಹಿಮರಿಗೆ
ದುರಿತ ದುಃಖ ವಿನಾಶ ಮಂಗಳ
ಕರವಹುದು ತಾನೀವೆ ಸಂತತ
ಸಿರಿಯ ಸಂಪತ್ತಾಯುವನು ಕೇಳೆಂದನಾ ವ್ರಿಹಿಗ ||೪೧||
"ಬ್ರಾಹ್ಮಣರ
ಮನೆಗಳಲ್ಲಿನ ಉಪನಯನ, ವ್ರತ ಮುಂತಾದ
ಸಮಾರಂಭಗಳಲ್ಲಿ, ಮಂತ್ರಾಕ್ಷತೆಗಳಲ್ಲಿ, ಶುಭಕಾರ್ಯಗಳಲ್ಲಿ, ಹಿರಿಯರಲ್ಲಿ, ಯಜ್ಞ-ಯಾಗಾದಿಗಳು
ನಡೆಯುವಲ್ಲಿ, ಅರಮನೆಯಲ್ಲಿ -
ಹೀಗೆ ಎಲ್ಲ ಕಡೆಯೂ ನಾನು ಇರಲೇಬೇಕು. ಅಷ್ಟೇನು, ದೇವರಿಗೆ ಪ್ರಿಯವಾದ
ನೈವೇದ್ಯಕ್ಕೂ ನಾನಿರಲೇಬೇಕು. ಬ್ರಾಹ್ಮಣರು ಮಂತ್ರತಂತ್ರೋಚ್ಛಾರಣೆಯಲ್ಲಿ ತಮ್ಮ ಕೈಯಲ್ಲಿ ತಳೆದು, ಹರಸಿ ಕೊಡುವ ಮಂತ್ರಾಕ್ಷತೆಯು
ನಾನು. ಆ ಮಂತ್ರಾಕ್ಷತೆಯನ್ನು ತಮ್ಮ ತಲೆಯ ಮೇಲೆ ತಳೆದ ಮಹನೀಯರಿಗೆ ಅವರ
ದುಃಖ-ದುರಿತಗಳೆಲ್ಲವನ್ನೂ ಕಳೆದು, ಅವರಿಗೆ ಸಿರಿ
ಸಂಪತ್ತನ್ನೂ, ಆಯುರಾರೋಗ್ಯವನ್ನೂ
ತಂದುಕೊಡುವವನು ನಾನೇ"
ಪರಿಮಳದ ಚಂದನದ ತರುವಿಗೆ
ಸರಿಯೆ ಒಣಗಿದ ಕಾಷ್ಠ ಗೋವದು
ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು
ಪರಮ ಸಾಹಸಿ ವೀರ ಹನುಮಗೆ
ಮರದ ಮೇಲಣ ಕಪಿಯು ತಾನಂ
ತರವೆ ಫಡ ನೀನೆನಗೆ ಸರಿಯೇ ಭ್ರಷ್ಟ ತೊಲಗೆಂದ ||೪೨||
ಸುರನದಿಗೆ ತಾ ಸರಿಯೆ ಕಾಡೊಳು
ಹರಿವ ಹಳ್ಳದ ನೀರು ತಾ ಗರುಡನ
ಮರಿಗೆ ಹದ್ದಂತರವೆ ಹಂಸಗೆ ಬಕನು ಹೋಲುವುದೆ
ಸರಸ ಮರಿ ಕೋಗಿಲೆಗೆ ವಾಯಸ
ನಣಕಿಸುವ ತೆರನಾಯ್ತು ಸಾಕಿ
ನ್ನರದೆಲಗ ನೀನಾವ ಮಾನ್ಯನು ಕಡೆಗೆ ತೊಲಗೆಂದ ||೪೩||
"ಪರಿಮಳಭರಿತವಾದ
ಚಂದನದ ಮರಕ್ಕೆ ಒಣಗಿದ ಕಟ್ಟಿಗೆಯು ಸಮವೇ? ಹಸುವು ಕರೆದ
ಹಾಲಿಗೆ ಕುರಿಯ ಹಾಲೇನು ಸಮವೇ? ಅಲ್ಲ, ಪರಮ ಸಾಹಸಿ ವೀರ ಹನುಮನಿಗೆ
ಮರದ ಮೇಲಿನ ಕಪಿಯು ಸರಿಸಮವೇ? ಛಿ! ನನಗೆ ನೀನು
ಸರಿಸಾಟಿಯೇ! ಭ್ರಷ್ಟ, ತೊಲಗು
ಇಲ್ಲಿಂದ.
ದೇವನದಿಗೆ
ಕಾಡಿನಲ್ಲಿ ಹರಿಯುವ ಹಳ್ಳದ ನೀರು ಸಾಟಿಯಾಗಬಲ್ಲದೇ!? ಗರುಡನ ಮರಿಗೆ ಹದ್ದು
ಸಮನಾದುದೇ? ಹಂಸಕ್ಕೆ
ಕೊಕ್ಕರೆಯು ಸಮವೇ? ಕೋಗಿಲೆಯ
ಮರಿಯನ್ನು ಕಾಗೆಯು ಅಪಹಾಸ್ಯ ಮಾಡುವ ತೆರವಾಯ್ತಿದು (ನಿನ್ನನ್ನೂ ನನ್ನನ್ನೂ ಸಮಾನರೆಂದು
ಹೋಲಿಸುವುದು). ಎಲವೋ ರಾಗಿ, ಇಲ್ಲಿ ನೀನಾವ
ಮಾನ್ಯನೋ! ತೊಲಗು, ತೊಲಗು
ಇಲ್ಲಿಂದ"
ನುಡಿಯ ಕೇಳುತ ಕನಲಿ ಕಂಗಳು
ಕಿಡಿಮಸಗಿ ಖತಿಗೊಂಡು ನುಡಿದನು
ಸಿಡಿಲ ಘರ್ಜನೆಯಂತೆ ಸಭೆಯಲಿ ಜರೆದನಾ ವ್ರಿಹಿಯ
ನುಡಿಗೆ ಹೇಸದ ಭಂಡ ನಿನ್ನೊಳು
ಕೊಡುವರೇ ಮಾರುತ್ತರವ ಕಡು
ಜಡನಲಾ ನಿನ್ನೊಡನೆ ಮಾತೇಕೆಂದ ನರೆದೆಲಗ ||೪೪||
ಸತ್ಯಹೀನನು, ಬಡವರನು ಕ
ಣ್ಣೆತ್ತಿ ನೋಡೆ ಧನಾಢ್ಯರನು ಬೆಂ
ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು
ಹೆತ್ತ ಬಾಣಂತಿಯರು, ರೋಗಿಗೆ
ಪತ್ಯ ನೀನಹೆ. ಹೆಣದ ಬಾಯಿಗೆ
ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವೆಂದ ||೪೫||
ಭತ್ತವು ನುಡಿದ
ಈ ಎಲ್ಲ ಅವಮಾನಕರ ಮಾತುಗಳನ್ನೂ ಕೇಳಿ ರಾಗಿಗೆ ಅಭಿಮಾನಭಂಗವಾಯಿತು. ಹಾಗೆಯೇ ಕೋಪವೂ ಉಕ್ಕಿತು.
ಅದಕ್ಕೇ ಕೋಪದಿಂದ ಎದ್ದು ನಿಂತು ಸಭೆಯಲ್ಲಿ ರಾಗಿಯು ನುಡಿಯತೊಡಗಿತು : "ಛಿ! ನುಡಿಗೆ ಹೇಸದ
ನಿನ್ನಂತಹ ಭಂಡರಿಗೆ ಮಾರುತ್ತರವ ಕೊಡುವರೇ ಯಾರಾದರೂ! ಕಡು ಮೂರ್ಖ ನಿನ್ನೊಡನೆ ಮಾತೇಕೆ..
ಸತ್ಯಹೀನನು ನೀನು. ಬಡವರನ್ನು ನೀನು ಕಣ್ಣೆತ್ತಿಯೂ ನೋಡುವುದಿಲ್ಲ, ಆದರೆ ಶ್ರೀಮಂತರನ್ನು ಮಾತ್ರ
ಬೆಂಬತ್ತಿಯೇ ಇರುವ ಅಪೇಕ್ಷೆ ನಿನ್ನದು. ಇನ್ನು ಹೆಚ್ಚಿಗೆ ಹೇಳುವುದೇನು, ಹೆತ್ತ ಬಾಣಂತಿಯರಿಗೆ, ರೋಗಿಗಳಿಗೆ ನೀನು
ವರ್ಜ್ಯನಲ್ಲವೇ.. ಹೆಣದ ಬಾಯಿಗೆ ಹಾಕುವ ತುತ್ತು ನೀನಲ್ಲವೇ. ಆಹಾ! ನಿನ್ನ ಜನ್ಮ ಅದೆಷ್ಟು
ನಿರರ್ಥಕವೊ!"
ಮಳೆದೆಗೆದು ಬೆಳೆಯಡಗಿ ಕ್ಷಾಮದ
ವಿಲಯಕಾಲದೊಳನ್ನವಿಲ್ಲದೆ
ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ
ಎಲವೊ ನೀನೆಲ್ಲಿಹೆಯೊ ನಿನ್ನಯ
ಬಳಗವದು ತಾನೆಲ್ಲಿಹುದು ಈ
ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ ||೪೭||
ಬಲ್ಲಿದರು ಬರೆ ಬಡವರಲಿ ನಿ
ನ್ನಲ್ಲಿಯುಂಟು ಉಪೇಕ್ಷೆ,
ನಮ್ಮಲಿ
ಸಲ್ಲದೀ ಪರಿ ಪಕ್ಷಪಾತವದಿಲ್ಲ. ಭಾವಿಸಲು
ಬಲ್ಲಿದರು ಬಡವರುಗಳೆನ್ನದೆ
ಎಲ್ಲರನು ರಕ್ಷಿಸುವೆ ನಿರ್ದಯ
ನಲ್ಲ ತಾ ನಿನ್ನಂತೆ ಎಲೆ ಕುಟಿಲಾತ್ಮ ಹೋಗೆಂದ ||೪೮||
ಏನಿಹಿರಿ ಹಿರಿಕಿರಿದ ನುಡಿಯದೆ
ಮೌನದೀಕ್ಷಿತರಾದಿರಲ ಕಂ
ಡೆನು ಮುರಿದಾಡುವಿರಸಾಧ್ಯವೊ ಸಾಧ್ಯವೋ ನಿಮಗೆ
ಈ ನಪುಂಸಕನಲಿ ನಿರಂತರ
ವೇನು ಕಾರಣ ವಾದವಿದು ನಮ
ಗೇನು ಬುದ್ಧಿಯನರುಹುವಿರಿ ಪೇಳೆಂದ ನರೆದೆಲಗ ||೫೨||
"ಮಳೆಯೇ
ಇಲ್ಲದೆ, ಬರಗಾಲ
ಬಂದೊದಗಿದಾಗ ಅನ್ನವಿಲ್ಲದೆ ಅಳಿಯುವ ಪ್ರಾಣಿಗಳನ್ನು ನಾನು ಸಲಹುತ್ತೇನೆ(ಅವರಿಗೆ ನಾನು ಆಹರವಾಗಿ
ಒದಗುತ್ತೇನೆ). ಅಂತಹ ವಿಲಯಕಾಲದಲ್ಲಿ ನೀನೆಲ್ಲಿರುವೆಯೋ? ನಿನ್ನಂತಹ (ಇಲ್ಲಿರುವ)
ಧಾನ್ಯಗಳೆಲ್ಲಿರುತ್ತೀರೋ.. ಹೀಗಿರಲು ನನಗೆ ನಿಮ್ಮಂತಹ ಹುಲುಧಾನ್ಯಗಳು ನನಗೆ ಸರಿಸಾಟಿಯಾಗಬಲ್ಲವೇ?
ಶ್ರೀಮಂತರು
ಬಂದರೆ ನಿನ್ನಲ್ಲಿ ಬಡವರನ್ನು ಕಂಡರೆ ಉಪೇಕ್ಷೆ ಮೂಡುತ್ತದೆ. ಆದರೆ ನಾನು ಹಾಗೆಲ್ಲ ಪಕ್ಷಪಾತ
ಮಾಡುವವನಲ್ಲ. ನಾನು ಬಡವ-ಬಲ್ಲಿದ ಎಂಬ ಭೇದವೆಣಿಸದೆ ಎಲ್ಲರನ್ನೂ ರಕ್ಷಿಸುವೆ. ನಿನ್ನಂತೆ ನಾನು
ನಿರ್ದಯನಲ್ಲ , ಕೇಳೆಲವೋ
ಕುಟಿಲಾತ್ಮ."
"ಸಭೆಯೊಳಗಿನವರೆಲ್ಲ
ಏಕೆ ನುಡಿಯದೆ ಹೀಗೆ ಮೌನದೀಕ್ಷಿತರಾದಿರಿ. ಈ ಮೌನವನ್ನು ಮುರಿದು ನುಡಿಯುವುದು ಸಾಧ್ಯವೋ
ಅಸಾಧ್ಯವೋ ನಿಮಗೆ? ಸುಮ್ಮನೆ ಹೀಗೆ
ಈ ನಪುಂಸಕನ ಜೊತೆಗೆ ನನಗೆ ಇದಾವ ವಾದ! ಈ ಬಗ್ಗೆ ನೀವು ಯಾವ ಮಾತನ್ನು ಹೇಳಬಯಸುತ್ತೀರಿ, ನುಡಿಯಿರಿ"
ಮಸೆದುದಿತ್ತಂಡಕ್ಕೆ ಮತ್ಸರ
ಪಿಸುಣ ಬಲರತಿ ನಿಷ್ಠುರರು ವಾ
ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ
ಹಿಸುಣರಿವದಿರ ಮತ್ಸರವ ಮಾ
ಣಿಸುವ ಹದನೇನೆನುತ ಯೋಚಿಸಿ
ದ ಸುರಮುನಿಪರ ನೋಡೆ ಗೌತಮ ಮುನಿಪನಿಂತೆಂದ ||೫೩||
ಹೀಗೆ ಭತ್ತ
ಹಾಗೂ ರಾಗಿಯ ನಡುವೆ ವಾದ ವಾಗ್ವಾದ ನಡೆಯುತ್ತಿರುವುದನ್ನು ಕಂಡು ರಾಮನು ಇವರಿಬ್ಬರ ನಡುವಿನ
ಮತ್ಸರವನ್ನು ಮಾಣಿಸುವ ಬಗೆ ಹೇಗೆ ಎಂದು ಯೋಚಿಸಿ :
ಅರಸುಗಳು ನಾವೆಲ್ಲ ಭೂಮೀ
ಸುರರು ನೆರೆದಿಹ ದಾನವರು ವಾ
ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ
ಕರಸುವೆವು ಹರಿಹರವಿರಿಂಚಾ
ದ್ಯರನಯೋಧ್ಯೆಗೆ ಅವರ ಗುಣವಾ
ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ ||೫೪||
ಪರಮ ಧಾನ್ಯದೊಳಿಬ್ಬರೇ ಇವರಿರಲಿ
ಸೆರೆಯೊಳಗಾರು ತಿಂಗಳು
ಹಿರಿದು-ಕಿರಿದೆಂಬಿವರ ಪೌರುಷವರಿಯಬಹುದಿನ್ನು
ಪುರಕೆ ಗಮನಿಸಿ ನಾವು ನಿಮ್ಮನು
ಕರೆಸುವೆವು ಕೇಳೆನುತಯೋಧ್ಯಾ
ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ ||೫೫||
"ಇಲ್ಲಿ
ನೆರೆದಿರುವ ಅರಸುಗಳು, ಬ್ರಾಹ್ಮಣರು, ದಾನವ ಹಾಗೂ ವಾನರ ವೀರರು -
ನಮಗೆ ಈ ನ್ಯಾಯವನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಆ ಹರಿಹರ ಬ್ರಹ್ಮರನ್ನೇ ಅಯೋಧ್ಯೆಗೆ
ಕರೆಸುತ್ತೇವೆ. ಅವರೇ ಈ ಸಮಸ್ಯೆಯನ್ನು ಪರಿಹರಿಸಲಿ"
"ಇಲ್ಲಿರುವ
ಇವಿಷ್ಟೂ ಧಾನ್ಯಗಳ ಪೈಕಿ ಇವರಿಬ್ಬರೇ (ಭತ್ತ ಹಾಗೂ ರಾಗಿ) ಇನ್ನು ಆರು ತಿಂಗಳವರೆಗೂ
ಸೆರೆಯೊಳಗಿರಲಿ. ಆಮೇಲೆ ಇವರನ್ನು ಅಯೋಧ್ಯೆಗೆ ಕರೆಸುತ್ತೇವೆ. ಇವರಿಬ್ಬರಲ್ಲಿ ಹೆಚ್ಚು ಯಾರು
ಕಡಿಮೆ ಯಾರು ಎಂದು ಆ ನಂತರ ತಿಳಿಯಬರುತ್ತದೆ." ’ಇನ್ನು ಅಯೋಧ್ಯೆಗೆ ಹೊರಡೋಣ,’ ಎಂದು ಪಯಣಕ್ಕೆ
ಸಿದ್ಧತೆಗಳನ್ನು ಮಾಡಲು ವಿಭೀಷಣನಿಗೆ ತಿಳಿಸುತ್ತಾನೆ ರಾಮ.
ಅಂತೆಯೇ ದಾನವ
ಹಾಗೂ ವಾನರ ಸೇನೆಯೊಡನೆ ರಾಮ ಲಕ್ಷ್ಮಣಾದಿಗಳು ಅಯೋಧ್ಯೆಯೆಡೆಗೆ ಪ್ರಯಾಣಿಸುತ್ತಾರೆ.
ಹೊಲಬುದಪ್ಪದೆ ಸಕಲ ನಾಯಕದಳ ಸಹಿತ ಮುಂಬಟ್ಟೆಯಲಿ ಮುನಿಕುಲದ
ದರುಶನವಾಗಲಾಶೀರ್ವಾದವನು ಕೊಂಡು ಬಳಿವಿಡಿದು ಬರೆ ಜನರ ಪಾಪವ ಕಳೆದು ಸಲಹುವ ತುಂಗಭದ್ರೆಯ
ಕಳೆದುಬಂದರು ಭಾರದ್ವಾಜನಾಶ್ರಮಕೆ.
ಹೀಗೆ ಹೊರಟ
ಶ್ರೀರಾಮನ ಪರಿವಾರವು ದಾರಿಯ ಮಧ್ಯದಲ್ಲಿ ಕಂಡ ಮುನಿವರರ ದರ್ಶನವನ್ನೂ, ಆಶೀರ್ವಾದವನ್ನೂ ಪಡೆದು, ಪಾಪವಿನಾಶಿನಿಯಾದ
ತುಂಗಭದ್ರೆಯನ್ನು ದಾಟಿ ಭಾರದ್ವಾಜ ಮುನಿಯ ಆಶ್ರಮವಿರುವ ವನವನ್ನು ತಲುಪಿತು.
"...ಸುತ್ತಲು ಕರಿ-ತುರಗ-ರಥ-ಪಾಯ್ದಳವು ಸಂದಣಿಸಿ
ನಿಂದಿರಲು, ಮೊರೆವ ರಭಸವ ಕಂಡು ಸುರಮುನಿವರರ್ ’ಇದೇನೋ!’ ಎನುತ ನಿಜಮಂದಿರವ ಹೊರವಂಟು
ಅಲ್ಲಿ ಕೇಳ್ದರು ರಾಮನತಿಶಯವ."
ಉರಗಮಾಲಿ, ಮತಂಗ, ಗಾರ್ಗ್ಯಾಂ
ಗಿರಸ, ಗಾಲವ, ಕಣ್ವ, ಜಯಮುನಿ
ಪರಶುರಾಮ, ಪರಾಶ, ಕೌಶಿಕ, ದಾಲ್ಬ್ಯ ಮೊದಲಾದ
ವರಮುನಿಗಳೊಡನೈದಿ ಬಂದನು
ಭರದಿ ಭಾರದ್ವಾಜ ಮುನಿ ರಘು
ವರನ ಕಾಣಿಸಿಕೊಂಡು ಹರಸಿದರತುಳ ವಿಭವದಲಿ.
ಅಂಗೀರಸ, ಗಾಲವ, ಪರಾಶರ ಮೊದಲಾದ ಮುನಿಗಳೊಡನೆ
ಬಂದ ಭಾರದ್ವಾಜ ಮುನಿಯು ರಾಮನನ್ನು ಕಂಡನು. ಅವರೆಲ್ಲರೂ ರಾಮನನ್ನು ಮನಸಾರೆ ಹರಸಿದರು.
ಬಂದ ಮುನಿಗವನೀಶ ವಂದಿಸಿ ನಿಂದು, ಕರಗಳ ಮುಗಿದು ವಿನಯದೊಳೆಂದ - "ನಿಮ್ಮ ಸದಾಗ್ನಿಹೋತ್ರ, ಸುಯಾಗ ಕರ್ಮಗಳು, ಸಂದ ಜಪ-ತಪಗಳು ಸುರಕ್ಷಿತದಿಂದ ಮೆರೆವುದೆ? ದಾನವರ ಭಯದಿಂದ ದುರ್ಘಟವಿಲ್ಲಲಾ, ಮುನಿನಾಥ?" ಹೇಳೆಂದ.
(ಭಾರದ್ವಾಜ ಮುನಿ) : "ದಶರಥಾತ್ಮಜ, ನೀನು ಲಂಕೆಯೊಳ್ ಅಸುರ ವೀರರು - ಕುಂಭಕರ್ಣನು, ದಶಶಿರನು ಮೊದಲಾದ ದುರ್ಜನರೆಲ್ಲರನು ಮಡುಹಿ, ಅಸುರನನುಜಗೆ(ವಿಭೀಷಣನಿಗೆ) ಅಚಲ ಪದವಿಯನ್ ಒಸೆದು ಸಲಹಿದೆ. ನಮ್ಮ
ಕರುಣಾರಸದಿ ಪಾಲಿಸೆ ಬಂದೆ"ಯೆಂದುಪಚರಿಸಿದನು ನೃಪನ.
ಹೀಗೆ
ರಾಮ-ಭಾರದ್ವಾಜರು ಮಾತನಾಡುತ್ತಿರಲು, ನಂತರದಲ್ಲಿ
ರಾಮನು ಹನುಮನನ್ನು ಕರೆದು, ಭರತನನ್ನು ಕಂಡು
ತಾವೆಲ್ಲ ಅಯೋಧ್ಯೆಗೆ ತೆರಳುತ್ತಿರುವುದನ್ನು ತಿಳಿಸಿ ಅವನನ್ನು ಸಂತೈಸು ಎಂದು ಕಳುಹಿಸುತ್ತಾನೆ.
ರಾಮನ ಆಣತಿಯನ್ನು ಹೊತ್ತ ಹನುಮ ಭರತನನ್ನು ಭೇಟಿಯಾಗಲು ಹೊರಡುತ್ತಾನೆ.
ಹಾಗೆ ಹೊರಟ ಹನುಮನು ಹರಿಯುವ
ಗಂಗಾನದಿಯನ್ನು ದಾಟಿ ಶೃಂಗಭೇರಿ ಎಂಬ ಪುರವನ್ನು ಹೊಕ್ಕು, ಅಲ್ಲಿ ಗುಹನನ್ನು ಕಂಡು, ಅವನಿಗೆ ರಾಮನು ತನ್ನನ್ನು ಕಳುಹಿಸಿದ
ಕಾರಣವನ್ನು ಅರುಹುತ್ತಾನೆ.
ಗುಹನು
ಹನುಮಂತನನ್ನು ಪ್ರೀತಿಯಿಂದ ಸ್ವಾಗತಿಸಿ, ಸತ್ಕರಿಸಿ, ಅವನಿಗೆ ಭರತನು
ನಂದಿಗ್ರಾಮದಲ್ಲಿರುವ ವಿಷಯವನ್ನು ತಿಳಿಸುತ್ತಾನೆ.
"...ಮಾರುತಿ ಮುಂದೆ ಪಥವಿಡಿದು ಬರುತ ಮಾರ್ಗಾಂತರದಿ ಕಾನನ
ಗಿರಿ ಶಿಖರಗಳ ಕಳೆದು ಬರೆ ವಿಸ್ತರದ ನಂದೀಗ್ರಾಮವನು ಕಂಡಲ್ಲಿ ಮನನಲಿದು..
ಬಂದು ಭರತನ ಕಂಡು ನಮಿಸಿದ
ಡೆಂದ ನೀನಾರಿಲ್ಲಿಗಿಂದೈ
ತಂದ ಕಾರಣವೇನು? ನಿನ್ನಭಿದಾನವೇನೆನಲು
ನಿಂದು ಕೈಗಳ ಮುಗಿದು ನಸುನಗೆ
ಯಿಂದ ನುಡಿದನು ಹನುಮ ತಾ ರಘು
ನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ ||೭೮||
ರಾವಣನ ಸಂಹರಿಸಿ ಲಂಕೆಯ
ನಾ ವಿಭೀಷಣಗಿತ್ತು ಸೀತಾ
ದೇವಿ ಲಕ್ಷ್ಮಣ ಸಹಿತ ಭಾರದ್ವಾಜನಾಶ್ರಮಕೆ
ದೇವ ಬಂದನು ಸಕಲ ವಿಭವದಿ
ನೀವು ಚಿತ್ತದೊಳವಧರಿಸಿಯೆನೆ
ಪಾವಮಾನಿಯ ನುತಿಸಿ ತಕ್ಕೈಸಿದನು ಭರತೇಂದ್ರ ||೭೯||
ನಂದೀಗ್ರಾಮವನ್ನು
ತಲುಪಿದ ಹನುಮನು ಭರತನನ್ನು ಕಂಡಾಗ, ಭರತನು ಅವನನ್ನು
’ನೀನಾರು? ನೀನು ಇಲ್ಲಿಗೆ
ಬಂದ ಕಾರಣವೇನು? ನಿನ್ನ ಹೆಸರೇನು?’ ಹೀಗೆ ಮುಂತಾಗಿ
ಪ್ರಶ್ನಿಸಲು, ಹನುಮನು ತಾನು
ರಾಮನ ಸೇವಕನೆಂದೂ ತನ್ನನ್ನು ರಾಮನು ಭರತನ ಬಳಿಗೆ ಕಳುಹಿಸಿದ ಕಾರಣವನ್ನೂ ತಿಳಿಸುತ್ತಾನೆ.
"ರಾವಣನನ್ನು
ಸಂಹರಿಸಿ, ಲಂಕೆಯನ್ನು
ವಿಭೀಷಣನಿಗೆ ವಹಿಸಿದ ನಂತರ ಶ್ರೀರಾಮನು ಸೀತಾದೇವಿ ಹಾಗೂ ಲಕ್ಷ್ಮಣನೊಡನೆ ಭಾರದ್ವಾಜ ಮುನಿಯ
ಆಶ್ರಮಕ್ಕೆ ಆಗಮಿಸಿದ್ದಾನೆ.."ಎಂದು ತಿಳಿಸಿದ ಹನುಮನನ್ನು ಭರತನು ಪ್ರೀತಿಯಿಂದ
ಉಪಚರಿಸುತ್ತಾನೆ.
ಅಂತೆಯೇ
ಎಲ್ಲರೊಡಗೂಡಿ ಶ್ರೀರಾಮನು ಮುಂದೆ ಅಯೋಧ್ಯೆಗೆ ಆಗಮಿಸಲಿರುವುದಾಗಿ ಹನುಮನು ಭರತನಿಗೆ
ತಿಳಿಸುತ್ತಾನೆ.
(ಮುಂದುವರೆಯುತ್ತದೆ...)
No comments:
Post a Comment