Wednesday, 26 February 2014

ದುರ್ಗಸಿಂಹನ "ಕರ್ಣಾಟಕ ಪಂಚತಂತ್ರ" - ಭಾಗ ೧

"ಪಂಚತಂತ್ರ" ಎಂಬ ಹೆಸರನ್ನು ಕೇಳಿದರೆ ಸಾಕು, ನಮಗೆಲ್ಲ ನಮ್ಮ ಬಾಲ್ಯದ ನೆನಪಾಗಿಯೇ ಆಗುತ್ತದೆ. ನಾವೆಲ್ಲ ನಮ್ಮ ಬಾಲ್ಯದಲ್ಲಿ ಒಂದಲ್ಲ ಒಮ್ಮೆ ಪಂಚತಂತ್ರದ ಕತೆಗಳನ್ನು ಓದಿಯೋ ಕೇಳಿಯೋ ಇರುತ್ತೇವೆ. ಪಂಚತಂತ್ರದಲ್ಲಿನ ಬಹುತೇಕ ಕತೆಗಳಲ್ಲಿ ಪ್ರಾಣಿಗಳೇ ಮುಖ್ಯ ಪಾತ್ರಧಾರಿಗಳಾಗಿರುವುದರಿಂದ ಮಕ್ಕಳಿಗೆಲ್ಲ ಕತೆಗಳು ಬಹುಪ್ರಿಯವೆನಿಸಿವೆ - ಅಂದಿಗೂ, ಇಂದಿಗೂ, ಇನ್ನೂ ಮುಂದಕ್ಕೂ..

ಜಗತ್ತಿನ ವಿವಿಧ ದೇಶಗಳಲ್ಲಿ ಸುಮಾರು ೯೦ 'ಪಂಚತಂತ್ರ' ಪರಿಷ್ಕರಣೆಗಳಿವೆಯಂತೆ. ಅಲ್ಲದೆ, ಕತೆಗಳು ಜಗತ್ತಿನ ೨೦೦ ಭಾಷೆಗಳಲ್ಲಿ ಅನುವಾದಗೊಂಡೋ ರೂಪಾಂತರಗೊಂಡೋ ಪ್ರಚಲಿತದಲ್ಲಿವೆಯಂತೆ. ಅಂದಮೇಲೆ ಅದರ ಹಿರಿಮೆಯ ಬಗ್ಗೆ ಹೇಳುವುದಿನ್ನೇನಿದೆ.
ಹಾಗಿದ್ದರೆ, ಕನ್ನಡದಲ್ಲಿಯೂ ಪಂಚತಂತ್ರದ ಅನುವಾದವಿದೆಯೇ? ಹೌದು. ೧೧ನೇ ಶತಮಾನದಲ್ಲಿ ಜೀವಿಸಿದ್ದ ಬ್ರಾಹ್ಮಣಕವಿ ದುರ್ಗಸಿಂಹನು "ಕರ್ಣಾಟಕ ಪಂಚತಂತ್ರ"ವನ್ನು ರಚಿಸಿದ್ದಾನೆ.

ಭಾರತದಲ್ಲಿ ವಿಷ್ಣುಶರ್ಮ ಹಾಗೂ ವಸುಭಾಗಭಟ್ಟ ಸಂಪ್ರದಾಯದ ಪಂಚತಂತ್ರ ಕತೆಗಳು ಇದ್ದವೆಂದು ವಿದ್ವಾಂಸರು ಕಂಡುಕೊಂಡಿದ್ದಾರೆ. ಅವುಗಳಲ್ಲಿ ದುರ್ಗಸಿಂಹನು ಅನುವಾದಿಸಿರುವುದು ವಸುಭಾಗಭಟ್ಟ ಸಂಪ್ರದಾಯದ್ದು. (ಇದು ನೇರ ಅನುವಾದವಾಗಿರದೆ ವಸುಭಾಗಭಟ್ಟನು ಹೇಳಿದುದನ್ನು ತಾನು ಹೊಸತೆನಿಸುವಂತೆ ಹೇಳುತ್ತಿರುವುದಾಗಿ ದುರ್ಗಸಿಂಹ ತಿಳಿಸುತ್ತಾನೆ - "ಪೊಸತಾಗಿರೆ ವಿರಚಿಸುವೆಂ ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ")
ಕೃತಿಯ ವೈಶಿಷ್ಟ್ಯತೆಯೆಂದರೆ - ಪ್ರಪಂಚದಲ್ಲಿಯೇ ವಸುಭಾಗ ಸಂಪ್ರದಾಯದ 'ಪಂಚತಂತ್ರ'ವು ಸಮಗ್ರವಾಗಿ ಸಿಕ್ಕುವುದು ಇಲ್ಲಿ ಮಾತ್ರ.
ಹೀಗಾಗಿ 'ಕರ್ಣಾಟಕ ಪಂಚತಂತ್ರ'ಕ್ಕೆ ಪಂಚತಂತ್ರದ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ.

ಹಳಗನ್ನಡ ಕೃತಿಗಳನ್ನು ಓದುವುದು ಅತಿ ಕಷ್ಟ, ಮಹಾ ಕಷ್ಟ ಎನ್ನುವವರು ಇದನ್ನೊಮ್ಮೆ ಓದಿ ನೋಡಬೇಕು. ತೀರಾ ಸರಳ ಭಾಷೆಯಲ್ಲಿರುವ ಇದನ್ನು ಓದಿದ ನಂತರ ಅವರ ಅಭಿಪ್ರಾಯವು ಬದಲಾಗದೇ ಇರದು. ಯಾವುದಕ್ಕೂ ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.
ಕವಿಯ ಮಾತು ನೇರವಾಗಿ ಸಹೃದಯರಿಗೆ ತಲುಪಲಿ ಎಂಬ ಉದ್ದೇಶದಿಂದಲೇ, ಎಂದಿನಂತೆ ಹೊಸಗನ್ನಡದ ಅರ್ಥ-ಟೀಕೆಯನ್ನು ಬರೆಯದೆ, ನೇರವಾಗಿ - ಕೃತಿಯಲ್ಲಿರುವಂತೆಯೇ ಲೇಖನದಲ್ಲಿ ಅಳವಡಿಸಲಾಗಿದೆ. ತೀರ ಅನಿವಾರ್ಯವೆನಿಸಿದ ಕಡೆ ಮಾತ್ರ ಸಂಧಿಯನ್ನು ಬಿಡಿಸಿ ಬರೆಯಲಾಗಿದೆ ಅಷ್ಟೇ.

ಪೀಠಿಕೆ

ಒಂದು ದಿವಸಂ ಪರಮೇಶ್ವರನುಂ ಮೇರುಪರ್ವತದ ಮೇಲೆ ಪಿರಿದುಂ(ಹಿರಿದಾದ) ಸಂತೋಷದಿಂ ಎಡದಲ್ಲಿ ಬ್ರಹ್ಮನುಂ, ಬಲದಲ್ಲಿ ವಿಷ್ಣುವುಂ, ಪಿಂದೆ(ಹಿಂದೆ) ಮೂವತ್ತುಮೂಱು ಕೋಟಿ ದೇವತೆಗಳುಂ, ಮುಂದೆ ನಂದಿನಾಥ-ವೀರಭದ್ರಾದಿ ಗಣನಾಥರುಂ, ತೊಡೆಯ ಮೇಲೆ ಗೌರಿಯುಂ, ಜಡೆಯಲ್ಲಿ ಗಂಗೆಯುಂ ಸಹಿತಮಾಗಿಯೊಡ್ಡೋಲಗಂಗೊಟ್ಟು (ಸಹಿತಂ+ಆಗಿ+ಒಡ್ಡೋಲಗಂ+ಕೊಟ್ಟುಕುಳಿತಿರ್ದಂ.

ಅಂತಿರ್ದ ಪರಮೇಶ್ವರಂಗೆ ಗಿರಿರಾಜತನೂಜೆ(ಪಾರ್ವತಿ) ಕರಕಮಲಂಗಳಂ ಮುಗಿದುದೇವಾ, ನೀವೆನಗೊಂದಪೂರ್ವಮಪ್ಪ (ನೀವು+ಎನಗೆ+ಒಂದು+ಅಪೂರ್ವಂ+ಅಪ್ಪ) ಕಥೆಯಂ ಪೇಳಲ್ವೇಳ್ಪುದೆನೆ; ಹರಂ ದರಹಸಿತವದನಾರವಿಂದನಾಗಿ ಪಾರ್ವತಿಗಪೂರ್ವಮಪ್ಪ (ಪಾರ್ವತಿಗೆ+ಅಪೂರ್ವಮಪ್ಪ) ಕಥೆಗಳಂ ಪೇಳುತ್ತಿರಲಾ ಕಥಾಗೋಷ್ಠಿಯೊಳ್ ಪುಷ್ಪದಂತನೆಂಬಂ ಗಣಪ್ರಧಾನನಿರ್ದೆಲ್ಲವಂ ಕೆಳ್ದಾತನೇನಾನುಮೊಂದು ಕಾರಣದಿಂ (ಕೇಳ್ದು+ಆತನು+ಏನಾನುಂ+ಒಂದು ಕಾರಣದಿಂ) ಮಾನವಲೋಕದೊಳ್ ಪುಟ್ಟಿ(ಹುಟ್ಟಿ) ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿರ್ದು ಹರಂ ಗಿರಿಸುತೆಗೆ ಪೇಳ್ದಾ ಕಥೆಗಳಂ ಪೈಶಾಚಕ ಭಾಷೆಯೊಳ್ "ಬೃಹತ್ಕಥೆ"ಗಳಂ ಮಾಡಿ ಪೇಳ್ದೊಡವಂ ವಸುಭಾಗ ಭಟ್ಟಂ ಕೇಳ್ದಾ ಕಥಾಸಮುದ್ರದೊಳ್ ಪಂಚರತ್ನಮಪ್ಪೈದು  ಕಥೆಗಳನಾಯ್ದುಕೊಂಡು ಪಂಚತಂತ್ರಮೆಂದು ಪೆಸರಿಟ್ಟು ಸಮಸ್ತಜಗಜ್ಜನೋಪಕಾರಾರ್ಥಂ(ಸಮಸ್ತ+ ಜಗತ್ + ಜನೋಪಕಾರಾರ್ಥಂ) ಪೇಳ್ದನದರಿಂ,

ವಸುಭಾಗಭಟ್ಟ ಕೃತಿಯಂ
ವಸುಧಾಧಿಪಹಿತಮನಖಿಲವಿಬುಧಸ್ತುತಮಂ(ವಸುಧಾಧಿಪ+ಹಿತಂ+ಅಖಿಲ+ವಿಬುಧ+ಸ್ತುತಮಂ)
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ

(ಶಿವನು ಪಾರ್ವತಿಗೆ ಹೇಳಿದ ಕಥೆಗಳನ್ನು ಕೇಳಿದ ಪುಷ್ಪದಂತನೆಂಬ ಗಣಪ್ರಧಾನನು ಮುಂದೆ ಭೂಲೋಕದಲ್ಲಿ ಗುಣಾಢ್ಯನೆಂಬ ಹೆಸರಿನ ಕವಿಯಾಗಿ ಹುಟ್ಟಿ 'ಬೃಹತ್ಕಥೆ' ಎಂಬ ಹೆಸರಿನಿಂದ ಕಥೆಗಳೆಲ್ಲವನ್ನು ಪೈಶಾಚಕ ಭಾಷೆಯಲ್ಲಿ ರಚಿಸಿದನು. ಕಥಾಸಮುದ್ರದಿಂದ ರತ್ನಗಳನ್ನು ಆಯ್ದು ಅವನ್ನು ಪಂಚತಂತ್ರವೆಂಬ ಹೆಸರಿನಿಂದ ವಸುಭಾಗಭಟ್ಟ ಎಂಬ ಕವಿಯು ರಚಿಸಿದನು)
"ವಸುಭಾಗಭಟ್ಟನಿಂದ ರಚಿತವಾದ ಕೃತಿಯನ್ನು ಹೊಸತೆನಿಸುವಂತೆ ಕನ್ನಡದಲ್ಲಿ ರಚಿಸುವೆ" ಎನ್ನುತ್ತ ದುರ್ಗಸಿಂಹನು "ಕರ್ಣಾಟಕ ಪಂಚತಂತ್ರಂ" ಅನ್ನು ರಚಿಸಿದ್ದಾನೆ.

ಕಥಾ ಪ್ರಾರಂಭ

ಕಥಾಪ್ರಪಂಚಮೆಂತೆಂದೊಡೆ (ಕಥಾ+ಪ್ರಪಂಚಂ+ಎಂತು+ಎಂದೊಡೆ) :- ಅನೇಕ ಕರಿಮಕರತಿಮಿತಿಮಿಂಗಿಲಕುಲಕ್ಷೋಭಜನಿತ ಭಂಗುರತರತ್ತರಂಗಸಂಘಾತಮಪ್ಪ ಜಲನಿಧಿವಳಯದಿಂ (ಮೊಸಳೆ, ತಿಮಿಂಗಿಲ ಮುಂತಾದ ಜಲಚರಗಳ ಚಲನದಿಂದ ಉಂಟಾದ ಅಲೆಗಳ ಸಂಘಾತದಿಂದ ಕೂಡಿದ ಸಮುದ್ರದಿಂದ ಆವೃತವಾದ ಜಂಬೂದ್ವೀಪ.) ಪರೀಕ್ಷಿಪ್ತಮಾಗಿ ಸೊಗಯಿಸುವ ಜಂಬೂದ್ವೀಪದ ಭಾರತವರ್ಷದ ಸಕಲಜಗತೀ-ಜನಸ್ತುತ್ಯದಾಕ್ಷಿಣಾತ್ಯವೆಂಬ ಜನಪದಮುಂಟು. ಅಲ್ಲಿ ಮಹಾವಿಭವದಿಂ ಮೆರೆವ ಸೌರೂಪ್ಯಮೆಂಬ ಪುರಮಿರ್ಪುದು.
ಅದನಾಳ್ವರಸನಾರೆಂದೊಡೆ -

ವಿಶದಯಶೋಲತಿಕಾವೃತ (ವಿಶದ+ಯಶೋ ಲತಿಕ+ಆವೃತ)
ದಶದಿಗ್ವಲಯಂ ಬುಧಾಶ್ರಯಂ ಸಕಳಕಳಾ
ಕುಶಲಂ ಪ್ರಭುಮಂತ್ರೋತ್ಸಾ
ಹಶಕ್ತಿಯುತನಮರಶಕ್ತಿಯೆಂಬಂ ಪೆಸರಿಂ
(ಮಂತ್ರೋತ್ಸಾಹ + ಶಕ್ತಿಯುತನ್ + ಅಮರಶಕ್ತಿ+ ಎಂಬಂ ಪೆಸರಿಂ)

ಸಕಲ ಕಲಾ ಕುಶಲನೂ, ಪ್ರಖ್ಯಾತಿವೆತ್ತವನೂ ಆದ ಅಮರಶಕ್ತಿಯೆಂಬವನೇ ಅಲ್ಲಿನ ಅರಸ.
ಅಂತಿರ್ಪಾ ಅರಸಂಗೆ,

ಪ್ರಶಮಿತಗುಣರವಿನಯಕ
ರ್ಕಶಚಿತ್ತೋನ್ಮತ್ತರಖಿಲ ವಿಷಯಕ್ರೀಡಾ
ವಶಗತಸುತರಾದರನೇ
ಕಶಕ್ತಿವಸುಶಕ್ತಿರುದ್ರಶಕ್ತಿಗಳೆಂಬರ್

ಪ್ರಶಮಿತ ಗುಣರ್, ಅವಿನಯ, ಕರ್ಕಶಚಿತ್ತರ್, ಉನ್ಮತ್ತರ್, ಅಖಿಲ ವಿಷಯ ಕ್ರೀಡಾವಶಗತರ್, ಸುತರಾದರ್  - ಏಕಶಕ್ತಿ, ವಸುಶಕ್ತಿ, ರುದ್ರಶಕ್ತಿ ಎಂಬರ್. ( ಅರಸನಿಗೆ ಗುಣಹೀನರಾದ ಏಕಶಕ್ತಿ, ವಸುಶಕ್ತಿ ಹಾಗೂ ರುದ್ರಶಕ್ತಿ ಎಂಬ ಜನ ಮಕ್ಕಳು.)

ಒಂದು ದಿವಸಮಾ ಧರಾಧೀಶ್ವರನಾಸ್ಥಾನಭೂಮಿಯೊಳನಂತ ಸಾಮಂತ ಮಂತ್ರಿ ಪುರೋಹಿತಾಂತರ್ವಾಂಶಿಕಶ್ರೀಕರಣ ಸೇನಾನಾಯಕರಸಂಧಿವಿಗ್ರಹಿ ಪ್ರಮುಖ ನಿಖಿಲ ಪರಿವಾರ ಪರಿವೃತನಾಗಿ, ಮಹಾವಿಭೂತಿಯಿಂದೊಡ್ಡೋಲಗಂಗೊಟ್ಟು ಮಹೀಪಾಲನಿರ್ಪುದುಮಾ ಪ್ರಸ್ತಾವದೊಳ್ ಅತ್ಯಂತ ಯೌವನ-ಮದ ವಿಕಾರ-ವಿಕೃತ ವೇಷರುಂನೀತಿಶಾಸ್ತ್ರ-ಸದ್ಭಾವನಾ-ಬಹಿರ್ಮುಖರುಂ, ವೃದ್ಧೋಪಸೇವಾಮೃತಾಸ್ವಾದನಾತಿದೂರರುಂ, ವಿವೇಕವಿಕಳಮತಿಗಳುಮಪ್ಪ ನಿಜತನೂಭವರ್ ಮೂವರುಮೋಲಗಕ್ಕೆ ಬರ್ಪುದಂ ಕಂಡು, ಅರಸಂ - " ಕುಮಾರರಂ ಬಾಲಕಾಲದೊಳ್ ತೊಟ್ಟು ವಿದ್ಯಾಭ್ಯಾಸಂಗೆಯಿಸದೆ ಸ್ವೇಚ್ಛಾವಿಹಾರಿಗಳಂ ಮಾಡಿ ಕಿಡಿಸಿದೆಂ(ಕೆಡಿಸಿದೆ). ಇನ್ನುಂ ಇವಂದಿರನೀಯಂದದೊಳಿರಿಸಿದೆನಪ್ಪೊಡೆ (ಇವಂದಿರನ್++ಅಂದದೊಳ್+ಇರಿಸಿದೆನ್+ಅಪ್ಪೊಡೆ) ಅವಿನೀತರಾಗಿ ಪಗೆವರ್ಗೆ(ಹಗೆಯವರಿಗೆ) ವಶಗತರಪ್ಪರದರಿಂ(ವಶಗತರ್+ಅಪ್ಪರ್+ಅದರಿಂ), ಶ್ರುತವಿನಯಸಂಪನ್ನರಂ ಮಾಡಲ್ವೇಳ್ಪುದು. ಎಂತುಂ ಸುಭಾಷಿತಮಿಂತೆಂಬುದಲ್ತೆ (ಸುಭಾಷಿತವು ಹೀಗೆ ಹೇಳಿದೆ ಅಲ್ಲವೆ)

"ಅತ್ಯಂತ ದುರ್ವಿನೀತನಂ, ಅಂತರವರಿಯದನಂ, ಇಂದ್ರಿಯವಶನಪ್ಪಾತನಂ ಶತ್ರುಗಳ್ ಕಿಡಿಸುವರ್, ಶ್ರುತವಿನಯಸಂಪನ್ನನಪ್ಪಾತಂಗೆತ್ತಲಾನುಂ(ಶ್ರುತವಿನಯ ಸಂಪನ್ನನ್+ಅಪ್ಪ+ಆತಂಗೆ+ಎತ್ತಲಾನುಂ) ಬಡತನಮಾದೊಡಂ ಪರಾಭವಮನೆಯ್ದಲರಿಯಂ"

ಇವರೊಳೊರ್ವನಂ ಮದೀಯಭುಜಬಲಾವಷ್ಟಂಭದಿಂದಂಭೋದಿವರಂ (ಅಂಭೋದಿ = ಸಮುದ್ರ) ನಿಮಿರ್ದ ಸಕಲವಸುಂಧರಾವಳಯಮಂ ರಕ್ಷಿಸುವಂತು ಮಾಳ್ಪೊಡಿವರ್ ಶ್ರುತವಿಹೀನರ್ (ಇವರನ್ನು ಅರಸರನ್ನಾಗಿ ಮಾಡೋಣವೆಂದರೆ ಇವರೋ ಬುದ್ಧಿಹೀನರು!).
ಅದರಿಂ, ಇವರಂ ಶ್ರುತವಿನಯಸಂಪನ್ನರಪ್ಪಂತು ಮಾಳ್ಪೆನೆಂಬವನುಳ್ಳೊಡಾತನೇನಂ (ಮಾಳ್ಪೆನ್+ಎಂಬುವನ್+ಉಳ್ಳೊಡೆ+ಆತನ್+ಏನಂ) ಬೇಡಿದೊಡಂ ಕುಡುವೆನೆಂದಾಸ್ಥಾನಸ್ಥಿತರಪ್ಪ ಪಂಡಿತರ್ಕಳಂ ನೋಳ್ಪುದುಂ, ಅವರೊಳೊರ್ಬಂ ಮುಕ್ತೋಷ್ಠನುಂ, ನಿಕೃಷ್ಟನುಮಪ್ಪ ಭಟ್ಟನಿಂತೆಂದಂ : ನಿಮ್ಮೀ ಕುಮಾರರಪ್ಪೊಡೆ ಯೌವನ ಮದೋನ್ಮತ್ತರುಂ, ದುರ್ಮುಖರುಂ, ಚಂಚಳಚಿತ್ತರುಮಾಗಿರ್ದಪ್ಪರಿವರಂ ನೀತಿವಿದರಪ್ಪಂತು ತಿಳಿಪುವಂದಂ ಮುದುಗುದುರೆಯಂ ತಿರ್ದುವಂತಕ್ಕುಮೆಂದು ಕಷ್ಟನಿಕೃಷ್ಟವಚನಂಗಳಂ ನುಡಿವುದುಮಾತನ ಮಾತಂ ಮಾರ್ಕೊಂಡು (ಹಾಗೆ ನಿಷ್ಠೂರವಾಗಿ ನುಡಿದ ಪಂಡಿತನ ಮಾತಿಗೆ ಉತ್ತರವಾಗಿ) ಸಮಸ್ತಶಾಸ್ತ್ರ ವಿಚಾರಸಾರನುಂ ಚತುರುಪಧಾವಿಶುದ್ಧನುಂ , ಬುದ್ಧಿವೃದ್ಧನುಂ ಅಮನೇಕಶಿಷ್ಯವಿಖ್ಯಾತಕೀರ್ತಿಯುಂ ಭದ್ರಮೂರ್ತಿಯುಮಪ್ಪ ವಸುಭಾಗಭಟ್ಟನಿಂತೆಂದಂ:

“ಎನಿತೋದನೋದಿಯುಂ ಮನ
ದನಿತೆ ವಲಂ ಬುದ್ಧಿಯಕ್ಕುಮೆಂದು ಸಮಸ್ತಾ
ವನಿಯ ಜನಮೊನಕೆವಾಡ*
ಪ್ಪಿನೆಗಂ ಸಲೆ ನುಡಿದ ನುಡಿ ಯಥಾರ್ಥಂ ನಿನ್ನೊಳ್”

(ಎನಿತು+ಓದನ್+ಓದಿಯುಂ ಮನದನಿತೆ ವಲಂ ಬುದ್ಧಿಯಕ್ಕುಂ.
‘ಎಷ್ಟು ಓದಿದರೂ ಮನದಂತೆಯೆ ಬುದ್ಧಿ’ ಎಂದು ಜನ ಹೇಳುವ ಹಾಡು ನಿನ್ನಲ್ಲಿ ನಿಜವಾಯಿತು. *ಒನಕೆವಾಡು ಎಂದರೆ ಭತ್ತ ಕುಟ್ಟುವಾಗ ಜನ ಹಾಡಿಕೊಳ್ಳುತ್ತಿದ್ದ ಪದ)

ಶ್ಲೋಕ: "ಸ್ವಭಾವಮನುವರ್ತಂತೇ ಪಾಂಡಿತ್ಯಂ ಕಿಂ ಕರಿಷ್ಯತಿ"
ಟೀಕೆ: ತನ್ನ ಪ್ರಕೃತಿ ಬಿಡದಿರಲ್ ಅಱಿಕೆಯೇನಂ ಮಾಡುವುದು? (ಪ್ರಕೃತಿ - ಸ್ವಭಾವ, ಅಱಿಕೆ-ತಿಳುವಳಿಕೆ)

ಎಂಬ ಪುರಾಣವಾಕ್ಯಮೇಕೆ ಪುಸಿಯಕ್ಕುಂ. ಅಲ್ಲದೆಯುಂ,

ಶುಕಶಾರಿಕಾದಿಪಕ್ಷಿ
ಪ್ರಕರಂ ಮೊದಲಾಗಿ ಶಿಕ್ಷೆಯಂ ಕೈಕೊಳ್ಗುಂ
ಪ್ರಕಟಂ ತಾನೆನೆ ಮಾನವ
ನಿಕರಂ ಕೈಕೊಳ್ಳದೆಂದು ನುಡಿವರೆ ಮರುಳೇ

(ಶುಕ-ಗಿಳಿ, ಶಾರಿಕ-ಮೈನ/ಹೆಣ್ಣು ಗಿಳಿ; ನಿಕರ- ಗುಂಪು) "ಗಿಳಿ ಮೊದಲಾದ ಪಕ್ಷಿಗಳೇ ವಿದ್ಯೆಯನ್ನು ಕಲಿಯಬಹುದಿರುವಾಗ ಮಾನವರು ಕಲಿಯಲಾರರೆ, ಮರುಳೇ"

ಅದಱಿಂ ನಿನ್ನ ಪರಿಜ್ಞಾನದ ತೆಱನಱಿಯಲಾದುದು; ನೀಂ ಮಟ್ಟಮಿರೆಂದಾ ಭಟ್ಟನಂ ಮುಟ್ಟುಗಿಡೆ ನುಡಿದುಂ ಮಾಣದೆ, ವಸುಭಾಗಭಟ್ಟಂ ವಿಭುಗಭಿಮುಖನಾಗಿ

"ದೇವ ಭವದೀಯಸುತರಂ
ಮೂವರುಮಂ ಜಡರನಾಱು ತಿಂಗಳ್ಗೆ ಜಯ
ಶ್ರೀವರ ಸಮಸ್ತನೃಪವಿ
ದ್ಯಾವರಪ್ಪಂತು ಮಾಡುವೆ ಪರಮಾರ್ಥಂ.

ಅಂತು ಮಾಡಲಾಱದಂದು ತಪಂಬಡುವೆನ್" ಎಂದು ವಸುಭಾಗಭಟ್ಟಂ ಪ್ರತಿಜ್ಞಾಪೂರ್ವಕಂ ನುಡಿವುದುಂ, ಅಮರಶಕ್ತಿ ಸಂತಸಂಬಟ್ಟು ಕುಮಾರರಂ ಸಮರ್ಪಿಸಿದಂ.

ವಸುಭಾಗಭಟ್ಟನವರಂ ಕೈಕೊಂಡು ಶುಭದಿನ ಸುಮುಹೂರ್ತದೊಳ್ ವಿದ್ಯಾಗಮೋಕ್ತರಂ ಮಾೞ್ಪುದುಂ(ವಿದ್ಯೆ+ಆಗಮ+ಉಕ್ತರಂ) ;
ಅವಂದಿರ್ ಅತಿವರ್ತಿಯಪ್ಪ ಮತ್ತಗಜಮಂ ಕಂಬಕ್ಕೆ ತರ್ಪಂತೆ ಒತ್ತಂಬದಿಂ (ಒತ್ತಾಯದಿಂದ ಕರೆತಂದ ಮದಿಸಿದ ಆನೆಗಳಂತೆ) ಬಂದುಂ, ಪಿಡಿವೆತ್ತ ಕಳ್ಳರಂತೆ ಸಿಡಿಮಿಡಿಗೊಳ್ಳುತಿರ್ದುಂ, ಅಪಸ್ಮಾರಗ್ರಹ ಗೃಹೀತರಂತೆ ವಕ್ರಗ್ರೀವರಾಗಿಯುಂ (ಗ್ರೀವ=ಕುತ್ತಿಗೆ), ನೆಱೆಗಿವುಡರಂತೆ ಕಿವುಡಂಗೇಳ್ದು, ಪಿಸುಣಂ ಕೇಳ್ದ ಸತ್ಪುರುಷನಂತೆ ಕೇಳ್ದುದನಲ್ಲಿಯೇ ಮಱೆದುಂ.... (ಕಿವುಡರಂತೆ ನಟಿಸುತ್ತ, ಚಾಡಿಮಾತನ್ನು ಕೆಳಿಯೂ ಕೇಳದಂತೆ ನಟಿಸುವ ಸತ್ಪುರುಷನಂತೆ ಇವರು ಕೇಳಿದ ಪಾಠವನ್ನು ಅಲ್ಲಿಂದಲ್ಲಿಯೇ ಮರೆಯುತ್ತಿದ್ದರು).

ಇಂತುಮಿವರು ಶಿಕ್ಷೆಯನೆಂತು ಕೈಕೊಳ್ಳದಿರೆ(ಹೀಗೆ ಇವರು ಯಾವ ರೀತಿಯಲ್ಲೂ ಶಿಕ್ಷಣವನ್ನು ಕೈಕೊಳ್ಳದಿರವುದನ್ನು ಕಂಡು) ವಸುಭಾಗಭಟ್ಟಂ ಚಿಂತಾಕ್ರಾಂತನಾಗಿ ಬೆಱಗಾಗಿರೆ; ಆ ಕುಮಾರರ್ ತಮ್ಮೊಡನಾಡುವ ಧೂರ್ತ ಗೋವಳಕರಂ ಕೂಡಿಕೊಂಡು ಪಾಸದ ನಾಯ್ಗಳಂ ಕರೆಸಿ, ಬಲೆಗಳಂ ತಂದು, ಬೇಂಟೆಗೆ ಪೋಗಲುದ್ಯುಕ್ತರಪ್ಪುದಂ (ಸಾಕು ನಾಯಿಗಳನ್ನು ಕರೆಸಿ, ಬಲೆಗಳನ್ನು ತರಿಸಿ ತಾವು ಬೇಟೆಗೆ ಹೋಗಲು ಉದ್ಯುಕ್ತರಾದ ಆ ಕುಮಾರರನ್ನು ಕಂಡು) ವಸುಭಾಗಭಟ್ಟಂ ಆ ಕುಮಾರಕರ ಇಚ್ಛೆಯನಱಿದು ತಾನುಂ ಅವರೊಳ್ ಒರ್ವನಾಗಿ ಪೊಱಮಡೆ ಆ ಕುಮಾರರ್ ಒಳಿತಾಯ್ತೆಂದು ಪೋಗುತ್ತಿರೆ, ವಸುಭಾಗಭಟ್ಟಂ ತನ್ನ ಮನದೊಳಗೆ "ಈ ಕುಮಾರರ್ಗೆ ಹಾಸ್ಯರಸಮೊಸರ್ವಂತೆ(ಹಾಸ್ಯರಸಂ+ಒಸರ್ವಂತೆ) ಒಂದು ಕತೆಯಂ ಪೇೞಿ ಅವರ ಮನೋಧರ್ಮಮಂ ನೋಡುವೆನೆಂದುಂ ಇಂತೆಂದನ್ –
"ಕುಮಾರರ್ಕಳಿರಾ, ನಾಮೆಲ್ಲಂ ಮುಂದಣ ವನಾಂತರಕೆ ಪೋಪನ್ನಮೊಂದು ನರಿಯ ಕತೆಯಂ ಪೇೞ್ವೆನೇ?" ಎಂದು ಬೆಸಗೊಳೆ ಆ ಕುವರರುಂ ಪೇಳಿಮೆಂದರ್.

ನರಿಯ ಕತೆ

ಸಿರಿವಾಸಿಯೆಂಬ ಪುರದೊಳ್
ಸಿರಿವಂತನೆಂಬನೊರ್ವ ಪಾದಜನಧಿಕಂ (ಪಾದಜ= ಶೂದ್ರ)
ಸ್ಮರಚಾಪನೊಡನೆ ದೊರೆಯೆನೆ
ಧರೆಯೊಳ್ ತಾಂ ಕರ್ವು ವಿತ್ತಿ ಪಾಲಿಸುತಿರ್ದಂ
(ಸಿರಿವಾಸಿಯೆಂಬ ಊರಿನಲ್ಲಿ ಸಿರಿವಂತನೆಂಬ ರೈತ ಕಬ್ಬನ್ನು ಬೆಳೆಯುತ್ತಿದ್ದ)

ಅಂತಾತಂ ಕರ್ವು ವಿತ್ತಿ ಸುತ್ತಂ ಬೇಲಿಯಂ ಕಟ್ಟಿ ಪಾಲಿಸುತ್ತುಮಿರೆ, ಕೆಲವಾನೊಂದು ದಿವಸಕ್ಕೆ ಕರ್ವು ನೆಱೆದು(ಬಲಿತು) ಗಿಣ್ಣೇಱುವುದುಂ.. ಮೃಗಧೂರ್ತನೆಂಬ ನರಿ ಅದಂ ಕಂಡು ಸಮೀಪಕ್ಕೆ ವಂದು ಬೇಲಿಯಂ ಸುತ್ತಿವಂದು ನೋಡಿ ಒಂದೆಡೆಯೊಳ್ ಒಂದು ಕಳ್ಳದಾರಿಯಂ ಕಂಡು ನಿಚ್ಚನಿಚ್ಚಂ ಬಂದು ಕರ್ವೆಲ್ಲವಂ ತಿಂದು ಬೇಸಱಿಸುತ್ತಿರೆ; ಆ ಶೂದ್ರಂ ನರಿಯ ಕಾಟಕ್ಕೆ ಬೇಸತ್ತು ಒಂದು ದಿವಸಂ ಆ ನರಿಯಂ ಕೊಲಲ್ ಉಪಾಯಮಂ ಕಂಡು ಒಂದು ಮಾರಗಲದ ಬೇಲಿಯಂ ಕಿೞ್ತು ಪೆರ್ಬಟ್ಟೆಯಂ ಮಾಡಿ(ಬಟ್ಟೆ=ದಾರಿ; ಪೆರ್ಬಟ್ಟೆ= ಅಗಲವಾದ ದಾರಿ) ತಾನುಮಾ ಬಟ್ಟೆಯೊಳ್ ಬಯ್ಗಿನ(ಬೈಗು=ಸಂಜೆ) ಸಮಯದೊಳ್ ಒಂದು ಕೈಯೊಳ್ ಕೂೞ ಬುತ್ತಿಯಂ ಪಿಡಿದು, ಮತ್ತೊಂದು ಕೆಯ್ಯೊಳ್ ದೊಡ್ಡಿತಪ್ಪೊಂದು ದಂಡಮಂ ಪಿಡಿದು ತಲೆಯಂ ಕೆದಱಿ ಮುಚ್ಚಿ ಸತ್ತ ಪೆಣನಂತೆ ಬಿೞ್ದಿರ್ಪುದುಂ ಆ ನರಿ ಬಂದು ಸಮೀಪದೊಳ್ ನಿಂದು ನೋಡಿ ತನ್ನ ಮನದೊಳ್ ಸಂಶಯಂ ಪುಟ್ಟಿ ಮತ್ತಂ ಕಿಱಿದಂತರಂ ತೊಲಗಿ ತನ್ನೊಳೆಯಿಂತೆಂದುದು:-
"ನಾಂ ಕಾಣದ ಸಂಗ್ರಾಮರಂಗಮಿಲ್ಲ. ತೊೞಲದ ವಿಷಯಮಿಲ್ಲ, ಪೋಗದ ಪೆರ್ಬಟ್ಟೆಯಿಲ್ಲ. ಆವೆಡೆಯೊಳಂ(ಆವ+ಎಡೆಯೊಳ್) ಇಂತಪ್ಪ ಸಾವಂ ಕಂಡುದಿಲ್ಲ. ಇವನ್ ಏಂ ಕಾರಣಂ ಇಂತು ಬಿೞ್ದಿರ್ಪನೋ? ಎನ್ನಂ ಕೊಲಲ್ಕೆಂದು ಕಪಟಮರಣಮಂ ತಾೞ್ದಿರ್ಪನೋ? ಮೇಣ್ ಇವಂ ಪೋಗುತ್ತುಂ ಬಟ್ಟೆಯೊಳ್ ಪಸಿದು ಬುತ್ತಿಯನ್ ಉಣಲ್ಕೆಂದು ಕುಳ್ಳಿರ್ದು ಉಣುತ್ತುಂ ಗಂಟಲ್ ಸಿಲ್ಕಿ ಸತ್ತನೋ?"
"ಇದನ್ ನಂಬಲು ಬಾರದು. ಪೆಣನುಂ ಮುಟ್ಟಲುಂ ಬಾರದು. ಕರ್ಬಿನ ತೋಟಮಂ ಪುಗಲುಂ ಬಾರದು. ಇದಂ ವಿಚಾರಿಸುವೊಡೆ ಇವಂ ಸತ್ತುದು ಪುಸಿ-ದಿಟಮೆಂದು ಅಱಿವೊಡೆ ಊರ ಸಮೀಪಕ್ಕೆ ಪೋದುದುಂ ಇವಂ ಸತ್ತ ಸಾವುಳ್ಳೊಡೆ ಊರೊಳಗೆ ಹಲುಬುತ್ತುಂ ಅೞುತಿರ್ಕುಂ. ಅಲ್ಲದಾಗಳ್ ಸುಮ್ಮನಿರ್ಕುಂ ಎಂದು ತನ್ನೊಳ್ ತಾನು ನಿಶ್ಚೈಸಿ ಊರ ಸಮೀಪಕ್ಕೆ ಪೋಗಿ ನಾಲ್ಕುಂ ಕಡೆಯನಾರೈದು ಆವ ಕಳಕಳಮಂ ಕಾಣದೆ ಮಗುೞಿ ವಂದು
"ಎನ್ನನ್ ಕೊಲಲ್ಕೆ ಇವಂ ಮಾಡಿದ ಮಾಯಮಿದು" ಎಂದು ನಿಶ್ಚೈಸಿ ತನ್ನ ಬುದ್ಧಿಗೆ ತಾನೆ ಮೆಚ್ಚಿ ನಕ್ಕು ಇಂತೆಂದುದು:-

"ಅಪೂರ್ವಮಪ್ಪ ಸಾವಂ ಕಂಡೆಂ. ಕೈಯೊಳೆರಡರೊಳಂ ಕೂೞ್ಬುತ್ತಿಯೆಂಡಾಣಿಯಂ ಪಿಡಿದುಕೊಂಡಿರ್ಪುದು. ಊರೊಳಗೆ ಆವ ಕಳಕಳಮುಮಿಲ್ಲ" ಎಂದು ತನ್ನ ಬುದ್ಧಿಗೆ ತಾನೆ ಮೆಚ್ಚಿ ಓಡಿಪೋಗಿ ಬರ್ದುಂಕಿತ್ತು.

(ಮುಂದುವರೆಯುವುದು...)