ಚಿಕ್ಕಂದಿನಲ್ಲಿ ಎಲ್ಲೋ ಓದಿದ/ಕೇಳಿದ ನೆನಪು - ಈ ಕಥೆಯನ್ನು.. ಕಥೆ ಸ್ಪಷ್ಟವಾಗಿ ನೆನಪಿಲ್ಲದೆ ಹೋದರೂ ಕಥೆಯ ಎಳೆ, ಅದರಲ್ಲಿನ ನೀತಿ ಇನ್ನೂ ನೆನಪಿದೆ. ಎಷ್ಟೋ ಬಾರಿ ಅದು ನನ್ನನ್ನು ತಪ್ಪುದಾರಿಯತ್ತ ಸರಿಯದಂತೆ ಎಚ್ಚರಿಸಿದೆ..
ನನಗೆ ತಿಳಿದ ಮಟ್ಟಿಗೆ ಆ ಕಥೆಯ ಸಾರವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ :
ರಾಮನ ಮಡದಿ ಸೀತೆಯನ್ನು ರಾವಣನು ಅಪಹರಿಸಿದ್ದ ಸಂಗತಿ ನಮಗೆಲ್ಲ ತಿಳಿದದ್ದೇ. ಆಕೆಯನ್ನು ದುಷ್ಟ ರಾವಣನಿಂದ ಬಿಡುಗಡೆಗೊಳಿಸಲೆಂದು ರಾಮನು ವಾನರ ಸೈನ್ಯದ ಸಹಾಯದಿಂದ ಸಾಗರಕ್ಕೆ ಸೇತುವೆಯನ್ನು ಕಟ್ಟಿ ಲಂಕೆಯನ್ನು ತಲುಪುತ್ತಾನೆ. ನಂತರದಲ್ಲಿ ರಾಮ ರಾವಣರ ನಡುವೆ ದೊಡ್ಡ ಯುದ್ಧವೇ ನಡೆಯುತ್ತದೆ.
ರಾಮನೋ ಮಾನವ, ರಾವಣನೋ ದಾನವ. ಮಾನವ-ದಾನವ, ಒಳಿತು-ಕೆಡುಕಿನ ನಡುವೆ ನಡೆದ ಯುದ್ಧವದು.
ಯುದ್ಧದಲ್ಲಿ ರಾವಣನು ತನ್ನ ತಮ್ಮ ಕುಂಭಕರ್ಣನನ್ನೂ, ಮಗ ಇಂದ್ರಜಿತುವನ್ನೂ ಕಳೆದುಕೊಳ್ಳುತ್ತಾನೆ. ಆದರೂ ಅವನು ತನ್ನ ಹಠವನ್ನು ಬಿಡಲಿಲ್ಲ. ತಮ್ಮ ವಿಭೀಷಣನ ಮಾತನ್ನು ಮನ್ನಿಸಿ ಸೀತೆಯನ್ನು ರಾಮನಿಗೆ ಒಪ್ಪಿಸಲಿಲ್ಲ. ಮತ್ತೆ ಯುದ್ಧದ ಜಪವನ್ನೇ ಮುಂದುವರೆಸಿದ ಆ ರಾವಣ. ಕೆಟ್ಟಕಾಲ ಬಂದಾಗ ಬುದ್ಧಿ ಸರಿಯಾಗಿ ಕೆಲಸ ಮಾಡುವುದಿಲ್ಲ, ಅಲ್ಲವೇ.. ಹಿತೈಷಿಗಳು ಹೇಳುವ ಬುದ್ಧಿಮಾತೂ ಆಗ ಕೇಳಿಸುವುದಿಲ್ಲ...
ಕೊನೆಗೆ ರಾಮ-ರಾವಣರ ಯುದ್ಧದಲ್ಲಿ ರಾವಣ ಸೋಲನ್ನಪ್ಪುತ್ತಾನೆ. ರಾಮನ ಬಾಣಕ್ಕೆ ಗುರಿಯಾಗಿ ಸಾಯುವ ಸ್ಥಿತಿಯಲ್ಲಿರುತ್ತಾನೆ ರಾವಣ.
ಕೊನೆಯ ಕ್ಷಣಗಳನ್ನೆಣಿಸುತ್ತಿರುವ ರಾವಣನನ್ನು ಕಂಡು ಲಕ್ಷ್ಮಣನಿಗೆ ಒಂದು ಸಂದೇಹ ಬರುತ್ತದೆ. "ಅಲ್ಲ, ಈ ರಾವಣನೇನೂ ಸಾಮಾನ್ಯದನವನಲ್ಲ.. ಇಂದ್ರಾದಿ ದೇವತೆಗಳನ್ನು ಗೆದ್ದು, ಅವರನ್ನು ಅಪಮಾನಗೊಳಿಸಿದವ. ಶಿವನ ಸ್ನೇಹಿತನಾದ ಕುಬೇರನಿಂದ ಪುಷ್ಪಕ ವಿಮಾನವನ್ನೇ ಕಸಿದುಕೊಂಡವ. ಇಂತಹ ರಾವಣನು ಮನಸ್ಸು ಮಾಡಿದ್ದರೆ ತಾನು ಸಾಯದೇ ಇರಬಹುದಿತ್ತಲ್ಲ!! ಇಂದ್ರನ ಅಧೀನದಲ್ಲಿರುವ ಅಮೃತವನ್ನು ಅನಾಯಾಸವಾಗಿ ಪಡೆದು ಸೇವಿಸಬಹುದಿತ್ತಲ್ಲ.. ಆಗಲಾದರೆ ಇವನಿಗೆ ಸಾವೇ ಬರುತ್ತಿರಲಿಲ್ಲ.. ಇವನೇಕೆ ಅಮೃತವನ್ನು ಸೇವಿಸಲಿಲ್ಲ..!!"
ತನ್ನ ಈ ಸಂದೇಹವನ್ನು ಕುರಿತು ಲಕ್ಷ್ಮಣನು ರಾಮನಿಗೆ ಹೇಳುತ್ತಾನೆ. ರಾಮನು "ಬಾ ಲಕ್ಷ್ಮಣ, ನಿನ್ನ ಈ ಪ್ರಶ್ನೆಗೆ ರಾವಣನಿಂದಲೇ ಉತ್ತರವನ್ನು ಪಡೆಯುವಿಯಂತೆ" ಎಂದು ಲಕ್ಷ್ಮಣನನ್ನು ರಾವಣನ ಬಳಿಗೆ ಕರೆದುಕೊಂಡು ಹೋಗುತ್ತಾನೆ.
ಆಗ ರಾವಣನನ್ನು ಕುರಿತು ಲಕ್ಷ್ಮಣ ಹೀಗೆ ಕೇಳುತ್ತಾನೆ "ಅಯ್ಯಾ ರಾವಣ, ದಾನವೇಂದ್ರನಾದ ನೀನು ಇಂದ್ರಾದಿ ದೇವತೆಗಳನ್ನೂ ಗೆದ್ದವನು. ನೀನು ಅವರ ಪಾಲಿಗೆ ಸಿಂಹಸ್ವಪ್ನದಂತಿದ್ದವನು. ಒಂದು ವೇಳೆ ನೀನು ಮನಸ್ಸು ಮಾಡಿದ್ದರೆ ಅವರಲ್ಲಿದ್ದ ಅಮೃತವನ್ನು ಸೇವಿಸಿ ನೀನು ಕೂಡ ಅಮರತ್ವವನ್ನು ಪಡೆಯಬಹುದಿತ್ತಲ್ಲ!! ಆಗ ಈ ಯುದ್ಧದಲ್ಲಿ ಸಾಯುವಂತಹ ಸ್ಥಿತಿ ನಿನಗೆ ಬರುತ್ತಿರಲಿಲ್ಲ ಅಲ್ಲವೇ.. ನೀನೇಕೆ ಹಾಗೆ ಮಾಡಲಿಲ್ಲ?"
ರಾವಣ ಹೇಳುತ್ತಾನೆ : "ಅಯ್ಯಾ ಲಕ್ಷ್ಮಣಾ, ನೀನೆಂದದ್ದು ನಿಜ. ನಾನು ಹಾಗೆ ಮಾಡಿದ್ದರೆ ಸಾಯುವ ಸ್ಥಿತಿಯೇ ನನಗೆ ಬರುತ್ತಿರಲಿಲ್ಲ. ಆದರೆ, ಕೇಳು.. ಇಂದ್ರಾದಿ ದೇವತೆಗಳನ್ನು ಗೆದ್ದಿದೇನೆ ಎಂಬ ಮದವಿತ್ತು ನನಗೆ. ದೇವತೆಗಳನ್ನೇ ಗೆದ್ದವನಿಗೆ ಮಾನವರಿಂದ ಮೃತ್ಯು ಬರಬಹುದು ಎಂದು ನಾನೆಣಿಸಲೇ ಇಲ್ಲ.. ಹಾಗಾಗಿ ಮುಂಚೆ ನಾನು ಅಮೃತದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ… ಮುಂದೆಂದಾದರೂ ಮಾನವನಿಂದಲೇ ನನಗೆ ಮರಣ ಬರಬಹುದೆಂಬ ಅರಿವಿತ್ತಾದರೂ* ಅದರ ಬಗ್ಗೆ ಈಗಲೇ ಹೆದರುವುದೇಕೆ ಎಂಬ ತಾತ್ಸಾರ (*ಆದು ರಾವಣನು ಪಡೆದಿದ್ದ ವರ - ಕೇವಲ ಮಾನವನಿಂದ ಮಾತ್ರ ತನಗೆ ಮೃತ್ಯು ಬರಬಹುದು ಎಂದು).. ಹಾಗಾಗಿ ಅಮೃತವನ್ನು ಸೇವಿಸುವ ಯೋಚನೆಯನ್ನು ಮುಂದೂಡಿದೆ.
ಆದರೆ, ಈ ಯುದ್ಧ ಮೊದಲಾದ ಸಮಯದಲ್ಲಿ ನನ್ನ ಆಪ್ತ ಮಂತ್ರಿಗಳು ಅಮೃತವನ್ನು ಸೇವಿಸಲೆಂದು ಸಲಹೆಯನ್ನಿತ್ತರು. ಅವರಿಗೆ ನನ್ನ ಶೌರ್ಯದ ಬಗೆಗೆ, ಯುದ್ಧದಲ್ಲಿ ನಾನು ಗೆಲ್ಲುವೆನೆನುವ ಬಗೆಗೆ ಸಂಶಯವಿದೆಯೋ ಎನಿಸಿತು ನನಗೆ...!!
‘ಛೇ, ಎಂತಹ ಅವಿವೇಕಿಗಳು, ಇವರು ಈ ರಾವಣನ ಪರಾಕ್ರಮವನ್ನೇ ಅನುಮಾನಿಸುವರಲ್ಲ’ ಎಂದು ಅವರ ಬಗೆಗೆ ರೋಷವುದಿಸಿತು... ಹಾಗಾಗಿ ಅವರ ಮಾತನ್ನು ಇನ್ನಷ್ಟು ನಿರ್ಲಕ್ಷಿಸಿದೆ.
‘ಇಷ್ಟಕ್ಕೂ ಅಮೃತವು ಇಂದ್ರನ ಬಳಿಯಲ್ಲಿ ಇದ್ದೇ ಇರುತ್ತದೆ.. ಅವನು ನನ್ನ ಅಧೀನದಲ್ಲಿಯೇ ಇರುವುದರಿಂದ ಅದನ್ನು ಯಾವಾಗ ಬೇಕೆಂದರಾಗ ಪಡೆಯಬಹುದು. ಸುಮ್ಮನೆ ಅದಕ್ಕಾಗಿ ಈಗಲೇ ಏಕೆ ಚಿಂತಿಸಬೇಕೆಂಬ’ ಮನೋಭಾವ ನನ್ನದು.. ಹಾಗೂ ನನ್ನ ಪರಾಕ್ರಮದ ಬಗೆಗೆ ನನಗಿದ್ದ ಅಹಂಕಾರ.. ಈ ಎಲ್ಲ ಕಾರಣಕ್ಕಾಗಿ ನಾನು ಯಾವಾಗಲೂ ಆ ಯೋಚನೆಯನ್ನೇ ಕಡೆಗಣಿಸುತ್ತಿದ್ದೆ . ಅಮೃತಪಾನದಿಂದ ನನಗೆ ಒಳಿತಾಗಬಹುದೆಂದು ತಿಳಿದಿದ್ದರೂ ಯಾವಾಗಲೂ ಅದನ್ನು ಮುಂದೂಡುತ್ತಿದ್ದೆ.
ಹೀಗೆ, ನನ್ನನ್ನು ಉಳಿಸಿಕೊಳ್ಳುವ ಮಾರ್ಗವೊಂದು ಇದೆಯೆಂದು ನನಗೆ ತಿಳಿದಿದ್ದರೂ ಅದನ್ನು ಬೇಕೆಂದೇ ನಿರ್ಲಕ್ಷಿಸಿದೆ ನಾನು. ಅದರ ಕಾರಣವಾಗಿಯೇ ನನಗೆ ಈ ದುಸ್ಥಿತಿ ಬಂದೊದಗಿತು.."
ಈ ಕಥೆ ನಿಜವಿರದೇ ಇರಬಹುದು. ಆದರೆ ಜೀವನದ ಬಗೆಗೆ ಒಂದು ಒಳ್ಳೆಯ ಪಾಠ ಅಡಗಿದೆ ಇದರಲ್ಲಿ. ನಾವು ಕೂಡ ಎಷ್ಟೋ ಬಾರಿ ಹೀಗೇ ಮಾಡುತ್ತೇವೆ. ಯಾವುದನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂಬ ಅರಿವು ನಮಗೆ ಇರುತ್ತದೆ. ಆದರೆ ಅದನ್ನು ನಾವು ಮಾಡುವುದಿಲ್ಲ. ಸಾಧ್ಯವಾದಷ್ಟೂ ಅದನ್ನು ಮುಂದೂಡುತ್ತೇವೆ. ತೀರಾ ಕೆಟ್ಟ ಸ್ಥಿತಿಯನ್ನು ತಲುಪುವವರೆಗೂ ಆ ವಿಷಯವಾಗಿ ನಾವು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಎಲ್ಲ ಕೈಮೀರಿದ ಮೇಲೆ “ನಾವು ಆ ಕಾರ್ಯವನ್ನು ಮೊದಲೇ ಮಾಡಬೇಕಾಗಿತ್ತು” ಎಂದು ಪಶ್ಚಾತ್ತಾಪ ಪಡುತ್ತೇವೆ. ಹೀಗಾಗಿ, ಕೊನೆಯಲ್ಲಿ ನಮ್ಮ ಈ ನಿರ್ಲಕ್ಷ್ಯದ ಫಲವನ್ನು ನಾವು ಅನುಭವಿಸಲೇಬೇಕಾಗುತ್ತದೆ.
"ಕಾಲೇಜು ಶುರುವಾದಾಗಿನಿಂದಲೇ ಸರಿಯಾಗಿ ಓದಿದ್ದಿದ್ರೆ ನಾನು ಫೇಲಾಗ್ತಿರ್ಲಿಲ್ಲ", "ಮುಂಚೆಯಿಂದಲೇ ಸ್ವಲ್ಪ ವಾಕಿಂಗ್ ಅಭ್ಯಾಸ ಮಾಡಿದ್ದಿದ್ರೆ ಈ ವ್ಯಾಧಿ ಬರ್ತಾ ಇರ್ಲಿಲ್ವೇನೋ!" , "ಮುಂಚೆಯಿಂದಲೇ ಸ್ವಲ್ಪ ಹಣವನ್ನು ಕೂಡಿಟ್ಟಿದ್ದರೆ ಇಂತಹ ಕಷ್ಟಕಾಲಕ್ಕೆ ಸ್ವಲ್ಪ ಸಹಾಯವಾದ್ರೂ ಆಗ್ತಿತ್ತು" – ಇಂಥವೇ ಮುಂತಾದ ಸಮಯಗಳಲ್ಲಿ ನಮ್ಮ ನಿರ್ಲಕ್ಷ್ಯ / ಸೋಮಾರಿತನವನ್ನು ಕುರಿತು ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಟ್ಟಿರುತ್ತೇವೆ ನಾವೆಲ್ಲ. ಹಾಗೆಯೇ, ಅಂಥದೇ ತಪ್ಪುಗಳು ಪುನರಾವರ್ತನೆಯಾದ ಸಂದರ್ಭಗಳೂ ಇದ್ದಿರಬಹುದು.
ಮುಖ್ಯವಾಗಿ ನಮಗೆ "ಈಗ್ಲೇ ಆ ಬಗ್ಗೆ ಚಿಂತೆ ಯಾಕೆ" "ಅಂತ ಕಾಲ ಬಂದಾಗ ನೋಡ್ಕೊಂಡ್ರೆ ಆಯ್ತು" ಅನ್ನುವ ಧೊರಣೆ ಸ್ವಲ್ಪ ಹೆಚ್ಚಾಗಿಯೇ ಇರುತ್ತೆ. ‘ನಮಗೆ ಅಂತಹ ಸಮಸ್ಯೆ ಬರುವುದೇ ಇಲ್ಲವೇನೋ’ ಎಂಬ ಹುಂಬಧೈರ್ಯವೊಂದಿರುತ್ತದೆ. ಆ ಪೊಳ್ಳುಧೈರ್ಯದ ದೆಸೆಯಿಂದಲೇ ನಮಗೇ ಗೊತ್ತಿಲ್ಲದೆ ಒಮ್ಮೊಮ್ಮೆ ಇಂತಹ ಹಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೇವೆ. ನಂತರದಲ್ಲಿ ನಮ್ಮ ಅಜಾಗರೂಕತೆಯ ಬಗ್ಗೆ ನಮ್ಮನ್ನು ನಾವೇ ಹಳಿದುಕೊಳ್ಳುತ್ತೇವೆ.
ಯಾಕೋ ಗೊತ್ತಿಲ್ಲ, ತುಂಬಾ ದಿನಗಳಿಂದ ಮನಸಿನಲ್ಲಿ ಅಸ್ಪಷ್ಟವಾಗಿದ್ದ ಈ ಕಥೆಯ ನೆನಪಿಗೆ ಒಂದು ಸ್ಪಷ್ಟವಾದ ರೂಪವನ್ನು ಕೊಟ್ಟು ಯಾರೊಂದಿಗಾದರೂ ಹಂಚಿಕೊಳ್ಳಬೇಕೆನಿಸುತ್ತಿತ್ತು. ಇಂದಿಗೆ ಅದು ಈ ಲೇಖನದ ಮೂಲಕ ನೆರವೇರಿತು.
No comments:
Post a Comment