ಆ ಪಾತಕಿಗಳು ಮಗುವನ್ನು ಹುಡುಕಿ, ಅದನ್ನು ಕೊಲ್ಲಲೆಂದು ನಗರದಾಚೆಗಿನ ಕಾಡಿಗೆ ಕೊಂಡೊಯ್ಯುತ್ತಾರೆ. ಹಾಗೆ ಅವರು ಕೊಂಡೊಯ್ಯುವಾಗ ಮಗುವು ಅವರ ಭೀಕರ ರೂಪಕ್ಕೆ ಹೆದರಿ, ಹರಿಯ ನಾಮಸ್ಮರಣೆ ಮಾಡುತ್ತಾ ಜೋರಾಗಿ ಅಳಲು ಶುರುಮಾಡುತ್ತದೆ.
ಮಗುವಿನ ಈ ಆಕ್ರಂದವನ್ನೂ, ಅದರ ಮುಗ್ಧ ಮುಖವನ್ನೂ ನೋಡಿದ ಆ ಕಟುಕರ ಎದೆಯೂ ಕರಗುತ್ತದೆ. "ಅರೆ, ಇಂತಹ ಮುದ್ದಾದ ಮಗುವನ್ನು ಕೊಲ್ಲಲು ತಿಳಿಸಿದ್ದಾನಲ್ಲ ನಮ್ಮ ಮಂತ್ರಿ! ಈ ಸಣ್ಣ ಮಗುವಿನಿಂದ ಆತನಿಗೆ ಆಗುವ ಹಾನಿಯಾದರೂ ಏನು? ಇದನ್ನು ಕೊಲ್ಲಲಂತೂ ನಮಗೆ ಮನಸ್ಸಾಗುತ್ತಿಲ್ಲ.. ಈಗ ಏನು ಮಾಡುವುದು!!" ಎಂದು ಯೋಚಿಸುತ್ತಿರುವಾಗ ಮಗುವಿನ ಎಡಗಾಲಿನಲ್ಲಿದ್ದ ಆರನೆಯ ಬೆರಳು ಅವರ ಕಣ್ಣಿಗೆ ಬೀಳುತ್ತದೆ.
“ಮಗುವನ್ನು ಕೊಲ್ಲುವುದು ಬೇಡ. ಅದರ ಎಡಗಾಲಿನ ಬೆರಳನ್ನು ಕತ್ತರಿಸಿಕೊಂಡು ಇವನನ್ನು ಇಲ್ಲಿಯೇ ಬಿಟ್ಟುಬಿಡೋಣ. ಮಗುವನ್ನು ಕೊಂದದಕ್ಕೆ ಕುರುಹಾಗಿ ನಮ್ಮ ಮಂತ್ರಿಗೆ ಆ ಬೆರಳನ್ನು ತೋರಿಸಿದರೆ ಸಾಕು” ಎಂದು ತೀರ್ಮಾನಿಸಿ ಮಗುವಿನ ಬೆರಳನ್ನು ಕತ್ತರಿಸಿಕೊಂಡು ಮಗುವನ್ನು ಅಲ್ಲಿಯೇ ಬಿಟ್ಟು ಅವರು ಹೊರಟುಹೋಗುತ್ತಾರೆ.
ಭಯದಿಂದಲೂ, ನೋವಿನಿಂದಲೂ ಆಳುತ್ತಿರುವ ಮಗುವಿನ ದೀನ ಸ್ಥಿತಿಯನ್ನು ಕಂಡು ಕಾಡಿನ ಪಶು-ಪಕ್ಷಿಗಳೂ ಮರುಗುತ್ತವೆ. ಅವು ಆ ಬಾಲಕನ ಶುಶ್ರೂಷೆಗೆ ತೊಡಗುತ್ತವೆ :
ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆಪಸುಳೆ ಹರಿಹರಿಯೆಂದೊರಲ್ದಳುತಿರಲ್ ಕಣ್ಣೊ
ಳೊಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡುಶೋಕದಿಂದ
ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ
ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ್
ವಸುಮತಿಯೊಳಾರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ (28.35)
ಮಗುವಿನ ಕಷ್ಟವನ್ನು ಕಂಡು ಮೃಗ-ಪಕ್ಷಿಗಳೇ ಅದನ್ನು ಉಪಚರಿಸುತ್ತಿದ್ದವು ಎಂದಮೇಲೆ ಅನ್ಯರ ಕಷ್ಟವನ್ನು ನೋಡಿ ಮರುಗದ ಮಾನವನೇ ಪಾಪಿಯಲ್ಲವೇ!
ಆ ಕಾಡಿಗೆ ಚಂದನಾವತಿ ರಾಜ್ಯದ ದೊರೆ ಕುಳಿಂದಕ ಎಂಬುವವನು ಬೇಟೆಗೆಂದು ಬಂದಿರುತ್ತಾನೆ. ಆತನಿಗೆ ಈ ಮಗುವಿನ ಆಕ್ರಂದನ ಕೇಳಿಸುತ್ತದೆ.
ತನ್ನ ಕಷ್ಟಕಾಲದಲ್ಲಿ ತಂದೆ-ತಾಯಿ, ಒಡಹುಟ್ಟಿದವರನ್ನು ನೆನೆಯದೆ ಹರಿಯನ್ನೇ ನೆನೆದು ಆಳುತ್ತಿದ್ದ ಮಗುವನ್ನು ಕಂಡು ರಾಜನು ಅಶ್ಚರ್ಯಚಕಿತನಾಗುತ್ತಾನೆ. ಪುತ್ರಭಾಗ್ಯವಿಲ್ಲದ ತನಗೆ ಹರಿಯ ಕೃಪೆಯಿಂದಲೇ ಈ ಮಗುವು ದೊರೆಯಿತು, ಇದನ್ನು ದತ್ತು ಸ್ವೀಕರಿಸಿ ಸ್ವಂತ ಮಗನಂತೆ ಸಾಕುವೆನೆಂದು ಯೋಚಿಸಿ ಕುಳಿಂದಕನು ಆ ಮಗುವನ್ನು ತನ್ನೊಂದಿಗೆ ತನ್ನ ರಾಜ್ಯಕ್ಕೆ ಕರೆದುಕೊಂಡು ಹೋಗುತ್ತಾನೆ.
ಕುಳಿಂದಕನು ಮಗುವನ್ನು ಉತ್ಸವದೊಂದಿಗೆ ತನ್ನ ರಾಜ್ಯಕ್ಕೆ ಕೊಂಡೊಯ್ದು ಅದಕ್ಕೆ ಶಾಸ್ತ್ರೋಕ್ತವಾಗಿ ನಾಮಕರಣಾದಿ ಜಾತಕರ್ಮಗಳನ್ನು ನೆರವೇರಿಸುತ್ತಾನೆ.
ಚಂದ್ರನಂತೆ ನಿರ್ಮಲ ಕಾಂತಿಮಯವಾದ ಮುಖವೂ, ಬೆಳದಿಂಗಳಿನಂತಹ ಮುಗುಳ್ನಗುವನ್ನೂ ಹೊಂದಿದ ಆ ಬಾಲಕನಿಗೆ 'ಚಂದ್ರಹಾಸ' ಎಂದು ನಾಮಕರಣ ಮಾಡುತ್ತಾರೆ. ಚಂದ್ರಹಾಸನ ಪ್ರಭಾವದಿಂದಲೋ ಎಂಬಂತೆ ಅವನು ಅಲ್ಲಿಗೆ ಬಂದಾಗಿನಿಂದ ರಾಜ್ಯವು ಹಿಂದೆಂದಿಗಿಂತ ಸುಭಿಕ್ಷವಾಗುತ್ತದೆ.
ಇವೆಲ್ಲ ಮಹಿಮೆಗಳ ನಡುವೆಯೇ ಚಂದ್ರಹಾಸನು ಹರಿಭಕ್ತಿಪಾರಂಗತನಾಗಿ ಬೆಳೆಯುತ್ತಾನೆ. ಎಲ್ಲ ಶಾಸ್ತ್ರಗಳನ್ನು ಅಭ್ಯಸಿಸಿ ಸಕಲ ಕಲೆಗಳಲ್ಲೂ ಪ್ರಾವೀಣ್ಯ ಹೊಂದುತ್ತಾನೆ.
ಇಂತಿರಲು, ಚಂದ್ರಹಾಸನಿಗೆ ಹದಿನಾರನೇ ವಯಸ್ಸು ತುಂಬುವ ವೇಳೆಗೆ ಕುಳಿಂದಕನು ಚಂದ್ರಹಾಸನಿಗೆ ರಾಜ್ಯದ ಪಟ್ಟವನ್ನು ಕಟ್ಟುತ್ತಾನೆ. ತಮ್ಮ ರಾಜ್ಯದ ಮೇಲೇರಿ ಬಂದ ಶತ್ರುರಾಜರನ್ನು ಸೋಲಿಸಿ ಚಂದ್ರಹಾಸನು ರಾಜ್ಯವಿಸ್ತರಣೆಯನ್ನು ಗೈದು ದಿಗ್ವಿಜಯವನ್ನಾಚರಿಸುತ್ತಾನೆ. ಹೀಗೆ ಚಂದನಾವತಿಯ ಐಶ್ವರ್ಯವೂ ವೃದ್ಧಿಯಾಗುತ್ತದೆ.
ಹೀಗಿರಲು ಒಂದು ದಿನ ಕುಳಿಂದಕನು ಚಂದ್ರಹಾಸನಿಗೆ "ಈ ರಾಜ್ಯವು ಕುಂತಳನಗರದ ಅರಸನ ಆಧಿಪತ್ಯಕ್ಕೆ ಒಳಪಟ್ಟಿದೆ. ಸಾಮಂತರಾದ ನಾವು ಅವರಿಗೆ ಸಿದ್ಧಾಯವನ್ನು ಕಳುಹಿಸಬೇಕಾಗಿದೆ. ಶೀಘ್ರವೇ ತಪ್ಪದೆ ಅವರಿಗೆ ಕಪ್ಪ-ಕಾಣಿಕೆಗಳನ್ನು ಕಳುಹಿಸು” ಎಂದು ತಿಳಿಸುತ್ತಾನೆ. “ಅಂತೆಯೇ ಆಗಲಿ” ಎಂದು ಚಂದ್ರಹಾಸನು ಇದಕ್ಕೆ ಮುಂಚೆ ಕಳುಹಿಸುತ್ತಿದ್ದುದಕ್ಕಿಂತ ಹೆಚ್ಚಿನ ಕಾಣಿಕೆಗಳನ್ನು (ಈಗ ರಾಜ್ಯ ವಿಸ್ತರಣೆಯಾಗಿರುವುದರಿಂದ) ಕುಂತಳನಗರಕ್ಕೆ ಕಳುಹಿಸುತ್ತಾನೆ. ದೂತರು ಎಂದಿಗಿಂತ ಹೆಚ್ಚಿನ ಕಪ್ಪ-ಕಾಣಿಕೆಗಳನ್ನು ತಂದಿರುವುದನ್ನು ಕಂಡು ಶಂಕಿಸಿದ ಮಂತ್ರಿ ದುಷ್ಟಬುದ್ಧಿಯು ಅದಕ್ಕೆ ಕಾರಣವನ್ನು ಕೇಳುತ್ತಾನೆ. ಭಟರು ತಮ್ಮ ದೊರೆ ಕುಳಿಂದಕನ ಮಗ ಚಂದ್ರಹಾಸನ ದಿಗ್ವಿಜಯದ ಬಗೆಗೆ ತಿಳಿಸಿ ಆ ಕಾರಣದಿಂದಲೇ ಹೆಚ್ಚಿನ ಸಿದ್ಧಾಯವನ್ನು ತಂದಿರುವುದಾಗಿ ಹೇಳುತ್ತಾರೆ.
ದುಷ್ಟಬುದ್ಧಿಯು “ಕುಳಿಂದಕನಿಗೆ ಮಕ್ಕಳಿರಲಿಲ್ಲವಲ್ಲ! ಈ ಚಂದ್ರಹಾಸ ಯಾರು?” ಎಂದು ಮುಂತಾಗಿ ಪ್ರಶ್ನಿಸಲು ಭಟರು ಚಂದ್ರಹಾಸನು ತಮ್ಮ ಅರಸನಿಗೆ ಕಾಡಿನಲ್ಲಿ ದೊರೆತ ವೃತ್ತಾಂತವನ್ನು ತಿಳಿಸುತ್ತಾರೆ.
ಈಗ ದುಷ್ಟಬುದ್ಧಿಗೆ “ಈ ಚಂದ್ರಹಾಸನು ಹಿಂದೆ ತಾನು ಕೊಲ್ಲಲೆಂದು ಬಯಸಿದ್ದ ಆ ಅನಾಥ ಬಾಲಕನೇ?" ಎಂಬ ಶಂಕೆ ಉಂಟಾಗುತ್ತದೆ. ಅವನ ಬಗೆಗೆ ಕುಳಿಂದಕನಿಂದಲೇ ತಿಳಿದುಕೊಳ್ಳುವೆನೆಂದು ಯೋಚಿಸಿ ಶೀಘ್ರವಾಗಿ ದುಷ್ಟಬುದ್ಧಿಯು ಚಂದನಾವತಿಗೆ ಹೊರಡುತ್ತಾನೆ.
ತಾನು ಚಂದನಾವತಿಗೆ ಹೊರಡುವ ಮುನ್ನ ರಾಜಕಾರ್ಯವನ್ನು ತನ್ನ ಮಗನಾದ ಮದನನಿಗೆ ವಹಿಸಿ ಹೊರಡುತ್ತಾನೆ.
ಚಂದನಾವತಿಗೆ ಬಂದ ದುಷ್ಟಬುದ್ಧಿಯನ್ನು ಕುಳಿಂದಕನು ಆದರದಿಂದ ಸ್ವಾಗತಿಸಿ, ವಿವಿಧ ಕಾಣಿಕೆಗಳನ್ನು ನೀಡಿ ಸತ್ಕರಿಸುತ್ತಾನೆ. ನಂತರದಲ್ಲಿ ಚಂದ್ರಹಾಸನನ್ನು ದುಷ್ಟಬುದ್ಧಿಗೆ ಪರಿಚಯಿಸಿ , ಹಿಂದೆ ತಾನು ಬೇಟೆಗೆ ಹೋದಾಗ ಹರಿಭಕ್ತನಾದ ಮಗುವು ತನಗೆ ಸಿಕ್ಕ ವೃತ್ತಾಂತವನ್ನು ಕುಳಿಂದಕನು ಮಂತ್ರಿ ದುಷ್ಟಬುದ್ಧಿಗೆ ಅರುಹುತ್ತಾನೆ.
ಆ ದಿನ ಚಾಂಡಾಲರು ತನ್ನನ್ನು ವಂಚಿಸಿ ಮಗುವನ್ನು ಕೊಲ್ಲದೆ ಬಿಟ್ಟಿದ್ದಾರೆ ಎಂದು ತಿಳಿದ ದುಷ್ಟಬುದ್ಧಿಯು ಒಳಗೊಳಗೇ ಕ್ರುದ್ಧನಾದರೂ, ಹೊರಗೆ ಅದನ್ನು ತೋರಿಸಿಕೊಳ್ಳದೆ ವಿನಯದಿಂದ ಮಾತನ್ನಾಡುತ್ತಾನೆ.
ಬಂಜೆಯಾಗದು ವಿಪ್ರರಂದೆನ್ನೊಳೆಂದ ನುಡಿ
ರಂಜಿಸುವ ರಾಜಲಕ್ಷಣದೊಳೊಪ್ಪುವನಿವಂ
ಭಂಜಿಸದೊಡೀ ಧರಣಿಗೀತನರಸಾದಪಂ ಬಳಿಕ ತನ್ನಾತ್ಮಜರ್ಗೆ
ಸಂಜನಿಸಲರಿಯದು ನೃಪಾಲತ್ವಮಗ್ಗಳಿಕೆ
ಗಂಜುವನಲ್ಲ ಬಲವಂತನಹನೀತಂಗೆ
ನಂಜನೂಡಿಸಿ ಕೊಲ್ವುಪಾಯಮಂ ಮಾಳ್ಪೆನೆಂದೆಣಿಸಿದಂ ದುಷ್ಟಬುದ್ಧಿ.
ಅಂದು ಬ್ರಾಹ್ಮಣರು ನುಡಿದ ಮಾತು ಸತ್ಯವಾಯಿತಲ್ಲ! ತಾನು ಆ ಮಗುವನ್ನು ಕೊಳ್ಳಲು ಪ್ರಯತ್ನಿಸಿದರೂ ವಿಧಿಯ ಲೀಲೆಯಿಂದ ಅದು ಸಾಧ್ಯವಾಗಲಿಲ್ಲ.. ಈ ಚಂದ್ರಹಾಸನು ಇರುವವರೆಗೆ ತನ್ನ ಮಗ ಮದನನು ರಾಜನಾಗುವುದಕ್ಕೆ ಸಾಧ್ಯವಾಗುವುದಿಲ್ಲ, ಹಾಗಾಗಿ ಇವನನ್ನು ಹೇಗಾದರೂ ಮುಗಿಸಬೇಕು ಎಂದು ಯೋಚಿಸುತ್ತಾನೆ. ಉಪಾಯವಾಗಿ ಇವನಿಗೆ ವಿಷವನ್ನೂಡಿಸಿ ಕೊಲ್ಲಬೇಕೆಂದು ದುಷ್ಟಬುದ್ಧಿಯು ಸಂಚು ರೂಪಿಸುತ್ತಾನೆ.
“ಈ ಪತ್ರವನ್ನು ತರುವ ಚಂದ್ರಹಾಸನಿಗೆ ವಿಷವನ್ನೂಡಿಸಿ ಕೊಲ್ಲಬೇಕೆಂಬ” ಗೂಢಾರ್ಥವುಳ್ಳ ಲೇಖನವೊಂದನ್ನು ಬರೆದು, ಅದಕ್ಕೆ ಮುದ್ರೆಯನ್ನೊತ್ತಿ : "ಇದನ್ನು ಒಂದು ರಾಜಕಾರ್ಯದ ನಿಮಿತ್ತ ಕೂಡಲೇ ಮದನನಿಗೆ ತಲುಪಿಸಬೇಕಾಗಿದೆ. ಆದ್ದರಿಂದ ಶೀಘ್ರವೇ ಹೊರಟು ನೀನು ಇದನ್ನು ನನ್ನ ಮಗನಿಗೆ ಕೊಟ್ಟು ಬಾ . ನಿನ್ನೊಂದಿಗೆ ಬೇಕಾದರೆ ನಾಲ್ಕು ಅಶ್ವಾರೋಹಿಗಳನ್ನೂ ಕರೆದುಕೊಂಡು ಹೋಗು" ಎಂದು ಹೇಳುತ್ತಾನೆ.ದುಷ್ಟಬುದ್ಧಿಯ ಕುಟಿಲತೆಯನ್ನರಿಯದ ಚಂದ್ರಹಾಸನು ಅಂತೆಯೇ ಮಾಡುವೆನೆಂದು ತನ್ನ ತಂದೆ-ತಾಯಿಗೆ ತಿಳಿಸಿ ನಾಲ್ಕು ಜನ ಸೇವಕರೊಂದಿಗೆ ಕುಂತಳನಗರಕ್ಕೆ ಹೊರಡುತ್ತಾನೆ.
(ಮುಂದುವರೆಯುವುದು...)