ಅತ್ತ ಚಂದ್ರಹಾಸನು ತನ್ನ ಮಾವ
ದುಷ್ಟಬುದ್ಧಿಯ ಆದೇಶದಂತೆ ಊರ ಹೊರಗಿನ ಚಂಡಿಕಾ ದೇವಾಲಯಕ್ಕೆ ಹೊರಟಿರುತ್ತಾನೆ.
------------------------------------------------------------------------------------------------
ಹೀಗಿರಲು, ಇತ್ತ ಅರಮನೆಯಲ್ಲಿ
ಕುಂತಳನಗರದ ಅರಸನು :
ಗಾಲವನ ಪದಕೆರಗಿ ಕೈಮುಗಿದು ನಿಂದು ಭೂ
ಪಾಲಕಂ 'ತನಗಿನ್ನು ಸಾಕು ರಾಜ್ಯದ ಚಿಂತೆ
ಕಾಲವಂ ಸಾಧಿಸುವೆನಮಲ ಯೋಗದೊಳೆನಗೆ ಸುತರಿಲ್ಲ ಧರೆಯನಾರ್ಗೆ
ಬಾಲೆ ಚಂಪಕಮಾಲಿನಿಯನಾರ್ಗೆ ಕೊಡುವೆಂ ವಿ
ಶಾಲಮತಿ ಬೆಸಸೆಂದು' ಬೇಡಿಕೊಳೆ "ಲಕ್ಷಣ ಸು
ಶೀಲನಹ ಚಂದ್ರಹಾಸಂಗೆ ಮೇದಿನಿ ಸಹಿತ ಮಗಳನಿತ್ತಪುದೆಂದನು."
ಎಂದೊಡರಸಂ ಗಾಲವನ ಬುದ್ಧಿಯಂ ಕೇಳ್ದು
ತಂದೆ ಮಾಡುವ ರಾಜಕಾರ್ಯವಂ ನಿರ್ವಹಿಸು
ತಂದು ಬಾಗಿಲೊಳಿರ್ದ ಮದನನಂ ಕರೆಸಿ ಕೈವಿಡಿದು ಮೆಲ್ಲನೆ
ಕಿವಿಯೊಳು
ಮುಂದೆ ನಮಗುರ್ವ ಕೆಲಸದ ಪೊರಿಗೆಯುಂಟು ನೀ
ನಿಂದುಹಾಸನನಿಲ್ಲಿಗೀಗಲೊಡಗೊಂಡು ಬಾ
ಸಂದೇಹಿಸದೆ ಪೋಗೆನಲ್ಕೆ ಭೂಪಾಲನಂ ಬೀಳ್ಕೊಂಡು ಪೊರಮಟ್ಟನು.
ಕುಂತಳ ದೇಶದ ಅರಸನು ತಾನು
ವಾನಪ್ರಸ್ಥಾಶ್ರಮಕ್ಕೆ ಹೊರಡುವುದಾಗಿ ನಿಶ್ಚಯಿಸುತ್ತಾನೆ. ತಾನು ಹೊರಡುವ ಮೊದಲು
ರಾಜ್ಯವನ್ನೂ,ತನ್ನ ಮಗಳಾದ ಚಂಪಕಮಾಲಿನಿಯನ್ನೂ ಯಾರಿಗಾದರೂ ಒಪ್ಪಿಸಿ ಹೋಗಬೇಕಲ್ಲವೇ? ಈ
ವಿಚಾರವಾಗಿ ರಾಜಪುರೋಹಿತನಾದ ಗಾಲವನ ಸಲಹೆ ಕೇಳುತ್ತಾನೆ. ಗಾಲವನು ಚಂದ್ರಹಾಸನೇ ಚಂಪಕಮಾಲಿನಿಗೆ
ತಕ್ಕ ವರನೂ, ಕುಂತಳನಗರಕ್ಕೆ ತಕ್ಕ ಅರಸನೂ ಆಗುತ್ತಾನೆಂದು
ರಾಜನಿಗೆ ತಿಳಿಸುತ್ತಾನೆ. ಅರಸನು ಆ ಮಾತಿಗೊಪ್ಪಿ ಅಲ್ಲಿ ಹತ್ತಿರವಿದ್ದ ಮದನನ್ನು ಕರೆದು 'ನೀನು
ಕೂಡಲೇ ಚಂದ್ರಹಾಸನನ್ನು ಇಲ್ಲಿಗೆ ಕರೆದುಕೊಂಡು ಬಾ' ಎಂದು ಹೇಳುತ್ತಾನೆ. ಮದನನು ರಾಜನ ಆಣತಿಯಂತೆ
ಚಂದ್ರಹಾಸನನ್ನು ಕರೆತರಲು ತೆರಳುತ್ತಾನೆ.
------------------------------------------------------------------------------------------------
ಹೀಗೆ ಮದನನು ಚಂದ್ರಹಾಸನನ್ನು
ಕರೆತರಲೆಂದು ಬರುತ್ತಿರುವಾಗ ಮಾರ್ಗಮಧ್ಯದಲ್ಲಿಯೇ ಚಂದ್ರಹಾಸನನ್ನು ಭೇಟಿಯಾಗುತ್ತಾನೆ. ಮದನನು
"ಎಲ್ಲಿಗೆ ಹೊರಟಿರುವೆ?" ಎಂದು ಕೇಳಿದಾಗ ಚಂದ್ರಹಾಸನು ತಾನು ಚಂಡಿಕಾಲಯಕ್ಕೆ
ಹೊರಟಿರುವುದಾಗಿ ಹೇಳುತ್ತಾನೆ. ಅದಕ್ಕೆ ಮದನನು "ಅಯ್ಯಾ ಚಂದ್ರಹಾಸ, ಅನಿವಾರ್ಯ
ರಾಜಕಾರ್ಯವೊಂದರ ನಿಮಿತ್ತ ಕುಂತಳೇಶ್ವರನು ನಿನ್ನನ್ನು ಬರಹೇಳಿದ್ದಾನೆ. ಆದ್ದರಿಂದ ನೀನು ಕೂಡಲೆ
ಅರಮನೆಗೆ ಹೋಗು. ಪೂಜೆಗೆ ಬೇಕಾದರೆ ನಾನೇ ಹೋಗುತ್ತೇನೆ" ಎಂದು ತಿಳಿಸಿ ಚಂದ್ರಹಾಸನನ್ನು
ಅರಮನೆಗೆ ಕಳುಹಿಸಿ ತಾನು ಚಂಡಿಕಾಲಯದ ಕಡೆಗೆ ಹೊರಡುತ್ತಾನೆ.
ಸಂಪ್ರದಾಯವನ್ನು ಉಲ್ಲಂಘಿಸಬಾರದೆಂದು
ಮದನನು ಏಕಾಂಗಿಯಾಗಿಯೇ ದೇವಾಲಯಕ್ಕೆ ಹೊರಡುತ್ತಾನೆ.
ಹೀಗೆ ಹೊರಟ ಮದನನು ಕತ್ತಲಾಗುವ ವೇಳೆಗೆ
ಆಲಯವನ್ನು ಸಮೀಪಿಸುತ್ತಾನೆ. ಬರುವ ಹಾದಿಯಲ್ಲಿ ಅನೇಕ ತರದ ಅಪಶಕುನಗಳನ್ನು ಕಂಡು ಆತಂಕಗೊಂಡು
'ಕೆಟ್ಟದ್ದೇನೂ ಆಗದಿರಲಿ' ಎಂದು ಪ್ರಾರ್ಥಿಸುತ್ತ ಅವನು ಆಲಯವನ್ನು ಪ್ರವೇಶಿಸುವ ವೇಳೆಗೆ ಆಲಯದ
ಒಳ ಗೆ ತುಂಬ ಹೊತ್ತಿನಿಂದ ಹೊಂಚು ಹಾಕಿ ಕುಳಿತಿದ್ದ ಚಂಡಾಲರು ಅವನನ್ನು ಒಂದೇ ಏಟಿಗೆ ಕೊಂದು
ಅಲ್ಲಿಂದ ಪರಾರಿಯಾಗಿಬಿಡುತ್ತಾರೆ.
ಇತ್ತ ಚಂದ್ರಹಾಸನು ಅರಮನೆಗೆ ಬರಲು,
ಕುಂತಳದ ಅರಸನು ತನ್ನ ರಾಜ್ಯವನ್ನು ಚಂದ್ರಹಾಸನಿಗೊಪ್ಪಿಸಿ, ಮಗಳು ಚಂಪಕಮಾಲಿನಿಯನ್ನು ಗಾಂಧರ್ವ
ರೀತಿಯಲ್ಲಿ ಧಾರೆಯೆರೆದು ತಾನು ಅರಣ್ಯವಾಸಕ್ಕೆಂದು ಹೊರಡುತ್ತಾನೆ.
ನಂತರದಲ್ಲಿ ಚಂದ್ರಹಾಸನೂ
ಚಂಪಕಮಾಲಿನಿಯೂ ವೈಭವದ ಮೆರವಣಿಗೆಯಲ್ಲಿ ಬರುತ್ತಿರಲು, ಇದ್ದಕ್ಕಿದ್ದಂತೆ ಈ ಉತ್ಸವದ
ಧ್ವನಿಯಿದೇನೆಂದು ತನ್ನ ಮನೆಯಿಂದ ಹೊರಗೆ ಬಂದ ಮಂತ್ರಿ ದುಷ್ಟಬುದ್ಧಿಯು ಇವರನ್ನು ನೋಡುತ್ತಾನೆ.
ಅವರಿಬ್ಬರೂ ಅವನಿಗೆ ನಮಸ್ಕರಿಸಲು ಬಂದಾಗ "ಅಲ್ಲಯ್ಯ ಚಂದ್ರಹಾಸ, ವಂಶದ ಆಚಾರದಂತೆ ಒಬ್ಬನೇ
ಚಂಡಿಕಾಲಯಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಾ ಎಂದು ಕಳುಹಿಸಿದರೆ ಇದೇನು ಮಾಡಿದೆ?" ಎಂದು
ಕೇಳುತ್ತಾನೆ (ತನ್ನ ಕೋಪ-ಅಸಮಾಧಾನವನ್ನು ತೋರ್ಪಡಿಸದೆ).
ಅದಕ್ಕೆ ಚಂದ್ರಹಾಸನು ನಡೆದದ್ದನ್ನು
ತಿಳಿಸಿ, ತನ್ನ ಬದಲಿಗೆ ಮದನನು ಆಲಯಕ್ಕೆ ಹೋದ ವಿಚಾರವನ್ನು ತಿಳಿಸುತ್ತಾನೆ.
ಹಮ್ಮೈಸಿದಂ ದುಷ್ಟಬುದ್ಧಿ ಮನದೊಳಗಳಿಯ
ನಮ್ಮನೆಗೆ ಬೀಳ್ಕೊಟ್ಟನರಿದರಿದು ಪರಹಿಂಸೆ
ಯಮ್ಮಾಡಿ
ಮಾನವಂ ಬಾಳ್ದಪನೆ ದೀಪಮಂ ಕೆಡಿಸುವ ಪತಂಗದಂತೆ
ನಮ್ಮುಪಾಯವೆ
ನಮಗಪಾಯಮಂ ತಂದುದೆಂ
ದೊಮ್ಮೆ ನಿಜಸದನಮಂ ಪೋಕ್ಕಾರುಮರಿಯದವೊ
ಲುಮ್ಮಳಿಸಿ ಶೋಕದಿಂ ಪೊರಮಟ್ಟನೇರಿಳಿದು ಕೋಂಟೆಯಂ ಕತ್ತಲೆಯೊಳು.
ದುಷ್ಟಬುದ್ಧಿಗೆ ಚಂದ್ರಹಾಸನರುಹಿದ
ವಿಷಯವನ್ನು ಕೇಳಿ ಆಘಾತವಾಗುತ್ತದೆ. ಪರರಿಗೆ ಹಿಂಸೆಯನ್ನು ಮಾಡಲೆಂದೆಳಸಿದವನಿಗೆ
ಒಳ್ಳೆಯದಾಗುವುದೇ? ತಾವು ಮಾಡಿದ ತಪ್ಪು/ಸಂಚು ತಮಗೇ ಅಪಾಯವನ್ನು ತಾರದೇ ಇರುತ್ತದೆಯೇ?
ವಿಷಯವನ್ನು ತಿಳಿದ ದುಷ್ಟಬುದ್ಧಿಯು
ಅತಿ ದುಃಖದಿಂದ ಕತ್ತಲೆಯಲ್ಲಿ - ಚಂಡಿಕಾಲಯದ ಕಡೆಗೆ - ಹುಚ್ಚನಂತೆ ಓಡುತ್ತಾನೆ.
ಹಾಗೆ ಅವನು ಬರುವುದನ್ನು ಕಂಡು ಕಾಡಿನ
ಹಾದಿಯಲ್ಲಿದ್ದ ಭೂತ ಪ್ರೇತಗಳೂ ಇವನ ಆ ಅವತಾರವನ್ನು ಕಂಡು ಆಶ್ಚರ್ಯಗೊಳ್ಳುತ್ತವೆ.
ಹೀಗೆ ದುಷ್ಟಬುದ್ಧಿಯು ಆಲಯವನ್ನು
ಸೇರಿದಾಗ ಅವನು ಅಲ್ಲಿ ಸತ್ತುಬಿದ್ದ ತನ್ನ ಮಗ ಮದನನ್ನು ಕಾಣುತ್ತಾನೆ. ದುಃಖದಿಂದಲೂ, ತನ್ನ
ದುರ್ಬುದ್ಧಿಯಿಂದ - ಅಮಾಯಕನಾದ ತನ್ನ ಮಗನಿಗೆ - ಒದಗಿದ ದುಸ್ಥಿತಿಯನ್ನು ಕಂಡು ಸೈರಿಸಲಾರದೆ
ದುಷ್ಟಬುದ್ಧಿಯು ಆಲಯದ ಕಂಬಕ್ಕೆ ತಲೆಯೊಡೆದುಕೊಂಡು ತಾನೂ ಸಾವನ್ನಪ್ಪುತ್ತಾನೆ.
------------------------------------------------------------------------------------------------
ಮರುದಿನ ಆ ದೇವಾಲಯಕ್ಕೆ ಪೂಜೆಗೆಂದು
ಬಂದ ಪೂಜಾರಿಯು ಇವರಿಬ್ಬರ ಶವಗಳನ್ನು ಕಂಡು ಕೂಡಲೇ ಚಂದ್ರಹಾಸನಲ್ಲಿಗೆ ಹೋಗಿ ಈ
ಸಂಗತಿಯನ್ನರುಹುತ್ತಾನೆ.
ವಿಷಯ ತಿಳಿದ ಚಂದ್ರಹಾಸನು ಆ ಕೂಡಲೇ
ದೇವಾಲಯಕ್ಕೆ ಬಂದು ಅಲ್ಲಿನ ಘೋರ ದೃಶ್ಯವನ್ನು ಕಂಡು ಮರುಗುತ್ತಾನೆ. ತನ್ನಿಂದಾದ ಯಾವ ತಪ್ಪಿಗೆ
ಇವರಿಬ್ಬರಿಗೆ ಈ ಸ್ಥಿತಿ ಬಂದೊದಗಿತೋ ಎಂದು ದುಃಖಿಸುತ್ತ ಅವರಿಗೆ ಪುನರ್ಜೀವವನ್ನು ಕೊಡಲೆಂದು
ದೇವಿಯನ್ನು ಪ್ರಾರ್ಥಿಸುತ್ತಾನೆ. ಕಡೆಗೆ ತನ್ನನ್ನು ತಾನೇ ಕೊಂದುಕೊಂಡು ದೇವಿಗೆ
ಪೂರ್ಣಾಹುತಿಯನ್ನು ನೀಡುವುದಾಗಿ ನಿಶ್ಚೈಸಿ ಚಂದ್ರಹಾಸನು ತನ್ನ ಖಡ್ಗವನ್ನು ಹಿರಿಯುವ ವೇಳೆಗೆ
ದೇವಿಯು ಪ್ರತ್ಯಕ್ಷಳಾಗುತ್ತಾಳೆ. ಅವನ ಬೇಡಿಕೆಯಂತೆಯೇ ಅವರಿಬ್ಬರಿಗೂ ಮತ್ತೆ ಪ್ರಾಣ ಬರುವಂತೆ
ಮಾಡಿ, ಚಂದ್ರಹಾಸನಿಗೆ ಕೇಳಿದ ವರಗಳನ್ನಿತ್ತು ದೇವಿಯು ಅಂತರ್ಧಾನಳಾಗುತ್ತಾಳೆ.
ಭೂವಲಯಕಿದು ಪೊಸತು ಮರಣಮಾದೊಡೆ ಮತ್ತೆ
ಜೀವಮಂ ಬರಿಸಿದವರುಂಟೆ ನಿನ್ನವೊಲೆಂದು
ಕೈವಾರಿಸುವ ನಿಖಿಳ ಪೌರಜನ ಪರಿಜನಕೆ ಚಂದ್ರಹಾಸಂ ಮುದದೊಳು
"ಕಾವರಾರ್ ಕೊಲ್ವರಾರಳಿವರಾರುಳಿವರಾರ್
ಭಾವಿಪೊಡೆ
ವಿಷ್ಣು ಮಾಯಾಮಯಮಿದೆಂದರಿದು
ನೀವೆಲ್ಲರುಂ
ಕೃಷ್ಣಭಜನೆಗೈದಪುದೆಂದು" ಸಾರಿದಂ ಬೇಡಿಕೊಳುತ.
"ಹೀಗೆ ಎಲ್ಲವೂ ಸುಖಾಂತವಾಯಿತು.
ಮುಂದೆ ಚಂದ್ರಹಾಸನು ಹರಿಭಕ್ತಿಯಿಂದ ರಾಜ್ಯಪಾಲನೆಗೈಯುತ್ತಿದ್ದ. ನಂತರದಲ್ಲಿ ಅವನಿಗೆ ಮಕರಧ್ವಜ
ಹಾಗು ಪದ್ಮಾಕ್ಷ ಎಂಬ ಮಕ್ಕಳು ಜನಿಸಿದರು. ಈಗ ಚಂದ್ರಹಾಸನಿಗೆ ಮುನ್ನೂರು ವರುಷಗಳು."
"ಬುದ್ಧಿಪೂರ್ವಕಮಿಲ್ಲದಿಹ ಬಾಲಕರಿಗೆ ಪರಿ
ಶುದ್ಧ ಸಾಲಗ್ರಾಮಶಿಲೆಯ ಸಂಸರ್ಗದಿಂ
ದುದ್ಧತದ ಸಾಮ್ರಾಜ್ಯಪದವಿ ಕೈಸಾರ್ದುದೆನಲಿನ್ನು ಬೇಕೆಂದು ಬಯಸಿ
ಶ್ರದ್ಧೆಯಿಂ ಪ್ರತಿದಿನದೊಳರ್ಚಿಸುವ ನರನಾವ
ಸಿದ್ಧಿಯಂ ಪಡೆದಪನೊ ತನಗದರ ಪುಣ್ಯದಭಿ
ವೃದ್ಧಿಯಂ ಬಣ್ಣಿಸುವೊಡರಿದೆಂದು" ಫಲುಗುಣಂಗಾ ನಾರದಂ ಪೇಳ್ದನು.
ಹೀಗೆ ಚಂದ್ರಹಾಸನ ಕಥೆಯನ್ನು ನಾರದ
ಮಹರ್ಷಿಗಳು ಅರ್ಜುನನಿಗೆ ವಿವರಿಸಿ ಹೇಳಿದರು.
ಅರ್ಜುನನಿಗೆ ಈ ಕಥೆಯನ್ನು ಕೇಳಿ
ಚಂದ್ರಹಾಸನ ಬಗೆಗೆ ಗೌರವ-ಪ್ರೇಮಗಳುಂಟಾಗುತ್ತವೆ. ಆದರೆ ಅಶ್ವಮೇಧದ ಕುದುರೆಗಳು ಕುಂತಳನಗರದಲ್ಲಿ
ಕಟ್ಟಲ್ಪಟ್ಟಿವೆ. ಆದ್ದರಿಂದ ಈಗ ಚಂದ್ರಹಾಸನೊಡನೆ ಯುದ್ಧ ನಡೆಯಲೇಬೇಕಲ್ಲವೇ?
------------------------------------------------------------------------------------------------
ನಗರದ ಹೊರವಲಯದಲ್ಲಿ ತಿರುಗಾಡುತ್ತಿದ್ದ
ಯಜ್ಞದ ಕುದುರೆಗಳನ್ನು ಕಂಡು ಪದ್ಮಾಕ್ಷ,ಮಕರಧ್ವಜರು ಅವುಗಳ ಹಣೆಪಟ್ಟಿಯ ಮೇಲೆ ಬರೆದ
ವೃತ್ತಾಂತವನ್ನೋದಿಕೊಂಡು ಅವನ್ನಲ್ಲಿಯೇ ಕಟ್ಟಿ ಅರಮನೆಗೆ ಬಂದು ತಂದೆ ಚಂದ್ರಹಾಸನಿಗೆ
ತಿಳಿಸುತ್ತಾರೆ. ಚಂದ್ರಹಾಸನು "ಇದೇಕೆ ಹೀಗೆ ಮಾಡಿದಿರಿ, ಭೂಮಿಯೊಳಗೆ ಪ್ರತ್ಯಕ್ಷ ಧರ್ಮದಾಕೃತಿಯೆನಿಸುವ
ಯುಧಿಷ್ಟಿರನ ಹಯಗಳನ್ನು ಏಕೆ ತಡೆದಿರಿ? ಈಗ ನಮ್ಮಿಂದ ಅವರ ಯಜ್ಞಕ್ಕೆ ತೊಂದರೆಯಾಗುವುದು ಬೇಡ, ಆ
ಕುದುರೆಗಳನ್ನು ರಕ್ಷಿಸಿ ಅರ್ಜುನ-ಕೃಷ್ಣರು ಬಂದಾಗ ಅವರಿಗೆ ಒಪ್ಪಿಸಿ" ಎಂದು ಹೇಳಿ
ಕಳುಹಿಸುತ್ತಾನೆ.
ಹಾಗು, ಕೃಷ್ಣಾರ್ಜುನರನ್ನು ಕಾಣುವ
ಉತ್ಸುಕತೆಯಿಂದ ಚಂದ್ರಹಾಸನು ನಗರದ ಹೊರವಲಯಕ್ಕೆ ಬಂದು ಅವರಿಗಾಗಿ ಕಾಯುತ್ತಿರುತ್ತಾನೆ.
ಇತ್ತ ಅರ್ಜುನನ ಸೇನೆಯಾದರೋ ಯುದ್ಧಕ್ಕೆ
ಸನ್ನದ್ಧವಾಗಿ ಬರುತ್ತಿದೆ.! ಚಂದ್ರಹಾಸನು ಹರಿಯ ದರ್ಶನಾರ್ಥಿಯಗಿದ್ದನೇ ಹೊರತು ಯುದ್ಧಾಪೇಕ್ಷೆ
ಅವನಲ್ಲಿರಲಿಲ್ಲ.
ಇದನ್ನರಿತ ಶ್ರೀ ಕೃಷ್ಣನು
ಚಂದ್ರಹಾಸನಿಗೆ ತನ್ನ ದಿವ್ಯ ಮಂಗಳರೂಪವನ್ನು ತೋರುತ್ತಾನೆ (ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ ಪೊಂಬಟ್ಟೆಯಂ ತಾಳ್ದು ಕೌಸ್ತುಭವ
ಶೋಭಾವಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು....)
ನಂತರದಲ್ಲಿ ಕೃಷ್ಣನು ಅರ್ಜುನನಿಗೆ
"ಅಯ್ಯಾ ಅರ್ಜುನ, ಕೇಳು, ಈ ಚಂದ್ರಹಾಸ ನನ್ನ ಪರಮಭಕ್ತ. ಇವನೊಂದಿಗೆ ಯುದ್ಧಕ್ಕೆ ತೊಡಗದೆ
ಇವನನ್ನಾಲಂಗಿಸಿ ಸ್ನೇಹದಿಂದಿರು" ಎನ್ನಲು, ಅರ್ಜುನನು "..ಕಾಳಗವೆ ತನಗೆ ಕರ್ತವ್ಯಮೀ | ಪದದೊಳಾಲಿಂಗನಮುಚಿತವಲ್ಲ ವೃದ್ಧನಹನದರಿಂದ
ಬೇಕಾದೊಡೀತಂಗೆ ವಂದಿಸುವೆನೆನೆ..."
ಕೃಷ್ಣನು "ತನ್ನ ಕಿಂಕರರ್ಗೆ ಮುದದೊಳೆರಗಿದೊಡೆ, ಮೇಣವರನಪ್ಪಿದೊಡೆ ತಪ್ಪದು ಮಾನವರ್ಗೆ
ಕಪಿಲಾ ಗೋ ಸಹಸ್ರ ದಾನದ ಪುಣ್ಯ'ಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಕೇಳೆಂದ"
...... ಬಳಿಕ ಫಲುಗುಣಂ ಕೃಷ್ಣನ ನಿರೂಪಮಂ ಕೈಕೊಂಡು ಹರ್ಷದಿಂದಾಗ
ನಿಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಂಗೈಯಲು, ಆ ಪೊಡವಿಪತಿ(ಚಂದ್ರಹಾಸ) ನುಡಿದ"ನೆಲೆ ಪಾರ್ಥ ಕದನದಾಳಾಪಮಮಂ ನಿನ್ನೊಡನೆ ಮಾಡಿದೊಡೆ
ನೃಪಮುಖಂ ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ರಕ್ಷಣಾರ್ಥಮಾಗಿ"
ಹೀಗೆ ಹೇಳಿ ಚಂದ್ರಹಾಸನು ತನ್ನ ಮಕ್ಕಳು
ರಕ್ಷಿಸುತ್ತಿದ್ದ ಯಾಗದ ಕುದುರೆಗಳನ್ನು ತರಿಸಿ ಫಲ್ಗುಣನಿಗೆ ಒಪ್ಪಿಸುತ್ತಾನೆ.
ಮುಂದೆ ಅವರೆಲ್ಲರನ್ನು ತನ್ನ ಅರಮನೆಗೆ
ಕರೆದುಕೊಂಡು ಹೋಗಿ ಬಹುವಿಧದಿಂದ ಅರ್ಜುನನ ಪರಿವಾರವೆಲ್ಲವನ್ನೂ ಸತ್ಕರಿಸಿ ಚಂದ್ರಹಾಸನು ತನ್ನ
ರಾಜ್ಯವನ್ನು ಕೃಷ್ಣನಿಗೆ ಅರ್ಪಿಸುತ್ತಾನೆ. ಕೃಷ್ಣನಾದರೋ ಅರ್ಜುನನ ಸಮ್ಮತಿಯೊಡನೆ ಆ
ರಾಜ್ಯದೊಡೆತನವನ್ನು ವಿಷಯೆಯ(ಚಂದ್ರಹಾಸನ ಹೆಂಡತಿ) ಮಗನಿಗೆ ಕೊಟ್ಟು ಹರಸುತ್ತಾನೆ.
"ಮುಪ್ಪಾದೆನೆಲೆ ಮಗನೆ, ಕೃಷ್ಣದರ್ಶನದಿಂದ
ತಪ್ಪದೆನಗಿನ್ನು ಮೋಕ್ಷದ ಲಾಭಮಸುರಾರಿ
ಗೊಪ್ಪಿಸುವೆನೀ ತನುವನಿವರಧ್ವರಂ ಮುಗಿದ ಬಳಿಕ ವನಕಾಂ ಪೋಪೆನು
ಬಪ್ಪುದಿಲ್ಲದರಿಂದ ನಗರಕರಸಾಗಿ ಸುಖ
ಮಿಪ್ಪುದೆಂ"ದಿರಿಸಿ ನಿಜತನಯರಂ ಶರಧಿಗೆಣೆ
ಯಪ್ಪ ಸೈನಿಕದೊಡನೆ ಪೊರಮಟ್ಟನಾ ಚಂದ್ರಹಾಸನರ್ಜುನನ ಕೂಡೆ.
"ನನಗೆ ವಯಸ್ಸಾಯಿತು. ಯಜ್ಞ
ಮುಗಿಯುವವರೆಗೂ ಇವರೊಡನಿದ್ದು ನಂತರ ನಾನು ಅರಣ್ಯವಾಸಕ್ಕೆ ಹೋಗುತ್ತೇನೆ. ಈ ನಗರಕ್ಕೆ ನೀವು
ಅರಸರಾಗಿ ಸುಖದಿಂದ ಬಾಳಿ" ಎಂದು ಹರಸಿ ಚಂದ್ರಹಾಸನು ಕೃಷ್ಣಾರ್ಜುನರೊಡನೆ ಹೊರಡುತ್ತಾನೆ.
"ಪುತ್ರಸಂಪದಮಾಯುರಾರೋಗ್ಯಮರಿವು
ಶತ
ಪತ್ರನಾಭನ
ಭಕ್ತಿ ಧೃಡವಾಗಲೀತನ ಚ
ರಿತ್ರಮಂ ಕೇಳ್ದವರ್ಗೆಂದು" ಹರಿ ವರವನಿತ್ತಾತನಂ ಕೂಡಿಕೊಂಡು
ಸುತ್ರಾಮಸುತನ ಕುದುರೆಗಳೊಡನೆ ತೆರಳ್ದಂ..."
THE END