Sunday, 14 October 2012

ಹೀಗೊಂದು ಮನವಿ


ಎಲ್ಲ ಚೆಲುವಿಕೆಗಳ ಮೂರ್ತ ರೂಪದಂತಿದೆ ನಿನ್ನೀ ಸೊಬಗು,
ಅದರಿಂದೆ ಬಂಧಿಸಿರುವೆ ನನ್ನನ್ನು - ಸೌಂದರ್ಯದ ಸಂಕೋಲೆಯಲಿ
ನಿನಗೋ, ಸಿಕ್ಕಿರುವ ಬೇಟೆಯನು ಕೆಣಕಿ ಕೊಲ್ಲುವ ಚಪಲ;
ಅದಕೆಂದೇ ನೋಟಗಳ ಗಾಳವನು ನನ್ನೆಡೆಗೆ ಎಸೆವೆ
ಆದರೆ ನಾನಾದರೋ ಈಗಾಗಲೆ ಸಿಕ್ಕಿಬಿದ್ದಿರುವೆ - ನಿನ್ನದೆ ಬಲೆಯಲ್ಲಿ
ಆದರೂ ಮತ್ತೆ ಸಿಕ್ಕಿಬೀಳುವೆ - ನೀನೆಸವ ಗಾಳಕ್ಕೆ
ಅಯ್ಯೋ ! ನಾನೆಂಥ ಮರುಳು; ಒಡ್ಡಿರುವೆ ನನ್ನೆದೆಯ ನಿನ್ನೀ ಹುಡುಗಾಟಕ್ಕೆ.

ನಿನದೋ ಜಿಪುಣತೆ, ನಾನೋ ಅತಿ ಲೋಭಿ
ಕೊಡುವುದಿಲ್ಲ ನೀನು, ಗೊತ್ತಿದೆ ನನಗೆ; ಆದರೂ ಪಡೆವಾಸೆ..
ನೀನೋ ಮಹಾನ್ ಚಾಲಾಕಿ ! ಎಲ್ಲವನು ಎದುರಿಗೇ ಇಟ್ಟಿರುವೆ
ಆದರೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಮಾತ್ರ ನನ್ನಿಂದ ಕಸಿದಿರುವೆ..
ನ್ಯಾಯವೇ ಇದು ನಿನಗೆ? ಹಸಿದವನ ಎದಿರು ಮೃಷ್ಠಾನ್ನವನಿತ್ತು
ತಿನ್ನಬೇಡ ಎನ್ನುವ ಕಠಿಣತೆ ಏಕೆ?
ನೀ ಕೊಡಲಾರೆ, ನಾ ಬಿಡಲಾರೆ...
ಸಾಗುತಿದೆ ಸಮಯ, ಕರಗುತಿದೆ ರಾತ್ರಿ
ಹೆಚ್ಚುತಿದೆ ಹಸಿವು; ಕಾಡಿದ್ದು ಸಾಕು, ಬಡಿಸು ಸಾಕಿನ್ನು;
ಮೌನವನು ಮುರಿದು ತೆಗೆದುಕೊ ಎನ್ನು...
ಅಷ್ಟಾದರೂ ಹೇಳಿ ಉಳಿಸು ನನ್ನನ್ನು..

-Lokesh N

No comments:

Post a Comment