ಪೃಥಿವಿಯಾತ್ಮಜೆ ಬಳಿಕ ಚೇತರಿಸಿ, ತನಗಿನ್ನು
ಪಥಮಾವುದೆಂದು ದೆಸೆದೆಸೆಗಳಂ ನೋಡಿ, ಸಲೆ
ಶಿಥಿಲಮಾದವಯವದ, ಧೂಳಿಡಿದ ಮೆಯ್ಯ,
ಬಿಡಿಮುಡಿಯ ವಿಕೃತಿಯನೆಣಿಸದೆ
"ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶ
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್
ವ್ಯಥಿಸುವಂತಾಯ್ತಕಟ, ವಿಧಿ"ಯೆಂದು
ಹಲುಬಿದಳ್ ಕಲ್ಮರಂ ಮರುಗುವಂತೆ -
೧೯.೩೬
ಅಲ್ಲಿನ ಮೃಗಪಕ್ಷಿಗಳ
ಉಪಚಾರದಿಂದ ಚೇತರಿಸಿಕೊಂಡು ಸೀತೆಯು ಎಚ್ಚತ್ತಳು. ಹಾಗೆ ಚೇತರಿಸಿಕೊಂಡು ಎದ್ದ ಬಳಿಕ - ತನಗಿನ್ನು
ಮುಂದಿನ ದಾರಿ ಯಾವುದೆಂದು ತಿಳಿಯದೆ ದಿಕ್ಕುದಿಕ್ಕುಗಳನ್ನು ನೋಡಿ, ಶಿಥಿಲವಾದ ತನ್ನ ಅವಯವದ
ಬಗ್ಗೆಯೂ, ಧೂಳು ಮೆತ್ತಿದ ಮೈಯ ಬಗ್ಗೆಯೂ, ಬಿಡುಮುಡಿಯ
ಬಗ್ಗೆಯೂ.. ಆಗ ತಾನಿದ್ದ ಅವಸ್ಥೆಯ ಬಗ್ಗೆ ಅಷ್ಟೇನೂ ಗಮನ ಹರಿಸದೆ - "ಮಿಥಿಲೇಂದ್ರನಿಗೆ
ಮಗಳಾಗಿ, ರಘುಕುಲದ ಅರಸ ದಶರಥನ ಸೊಸೆಯಾಗಿ ಬಂದ ನಾನು ಹೀಗೆ
ಕಾರಡವಿಯಲ್ಲಿ ವ್ಯಥಿಸುವಂತಾಯ್ತು, ಅಯ್ಯೋ ವಿಧಿಯೇ.." ಎಂದು
ಗೋಳಾಡುವ ಪರಿಯನ್ನು ನೋಡಿದರೆ, ಅದನ್ನು ಕಂಡು ಕಲ್ಲು ಕೂಡ ಕರಗುವ
ಹಾಗಿತ್ತು.
"ಕೇಣಮಂ ಬಿಟ್ಟಾತ್ಮಘಾತಕದೊಳೀಕ್ಷಣಂ
ಪ್ರಾಣಮಂ ತೊರೆದಪೆನೆನೆ ಬಂದಪುದು ಗರ್ಭದಿಂ
ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು,
ಬಳಿಕ
ಏಣಾಕ್ಷಿ ನಡೆದಳಡವಿಯೊಳು ಪಲ ಕಂಟಕ
ಶ್ರೇಣಿಗಳ್ ಸೋಂಕಿ ಮೆಲ್ಲಡಿಗಳಿಂ ಬಸಿವ ನವ
ಶೋಣಿತಂ ನೆಲದೊಳ್ ಪೊನಲ್ವರಿಯಲ್...." - ೧೯.೩೭
’ಭಯಪಡುತ್ತ ಕೂರುವುದರ ಬದಲು
ಈ ಕ್ಷಣದಲ್ಲಿ ತನ್ನನ್ನು ತಾನು ಕೊಂದುಕೊಳ್ಳೋಣವೆಂದರೆ ಅದನ್ನೂ ಮಾಡಬಾರದು. ಹಾಗೆ ಮಾಡಿದರೆ
ಭ್ರೂಣಹತ್ಯಾ ದೋಷ ಅಂಟುವುದಲ್ಲವೆ.. ಅಯ್ಯೊ, ಏನು ಮಾಡುವುದು.. ಯಾರಲ್ಲಿ ನನ್ನ ನೋವಿನ ಕಥೆಯನ್ನು
ಹೇಳುವುದು..’ ಎಂದುಕೊಂಡು ಸೀತೆ ಅಲ್ಲಿಂದೆದ್ದು ಆ ಕಾಡಿನಲ್ಲಿ ನಡೆಯತೊಡಗಿದಳು. ಕಾಡಿನ
ದಾರಿಯಲ್ಲಿ ಆಕೆಯ ಕಾಲಿಗೆ ಹಲಕೆಲವು ತೆರದ ಮುಳ್ಳುಗಳು ಚುಚ್ಚಿ ಮೃದುಪಾದದಿಂದ ಒಸರುವ ಹೊಸರಕ್ತವು
ಧಾರೆಧಾರೆಯಾಗಿ ಹರಿಯುತ್ತಿರಲು ಸೀತೆ ಆ ಕಾಡಿನಲ್ಲಿ ಮುನ್ನಡೆದಳು.
ಆ ಹೊತ್ತಿಗೆ ಸರಿಯಾಗಿ
ವಾಲ್ಮೀಕಿ ಮಹರ್ಷಿಗಳು ತಮ್ಮ ಶಿಷ್ಯರ ಸಮೇತ ಅಲ್ಲಿಗೆ ಬಂದರು. ಅಡವಿಯಲ್ಲಿ ಏಕಾಕಿಯಾಗಿ
ದಿಕ್ಕುಗಾಣದೆ ನಡೆದು ರೋದಿಸುತ್ತಿದ್ದ ಸೀತೆಯನ್ನು ಕಂಡು -
"ಆರಿವಳ್? ಅದೇತಕೆ ಇರ್ದಪಳ್ ಈ
ವನಾಂತರದೊಳ್! ಆರೈವೆನ್ (ಆರಯ್ - ವಿಚಾರಿಸು)" ಎಂದು ನಡೆತಂದು, ಕರುಣದಿಂದ
"ಎಲೆ ತಾಯೆ, ನೀನಾವಳೌ? ಕಂಡ
ಕುರುಪಾಗಿರ್ಪುದು.. ಘೋರತರ ಗಹನಕೆ ಒರ್ವಳೆ ಬಂದೆ ಎಂತು? ಹೇಳಾ..
ಬೆದರಬೇಡ." ಎಂದು ಸೀತೆಯನ್ನು ಪ್ರಶ್ನಿಸಿದರು. ’ತಾಯೆ, ನೀನಾರು ಎಂದು ತಿಳಿಸು.
ನನ್ನ ಹೆಸರು ವಾಲ್ಮೀಕಿ ಎಂದು. ಹೀಗೆ ಅತಿಶೋಕದಲ್ಲಿದ್ದವರನ್ನು ಕಂಡು ಸುಮ್ಮನೆ ಹೋಗಲಾರೆ ನಾನು.
ಹೇಳು ತಾಯೆ, ಯಾರು ನೀನು?’ ಎಂದು ಆಕೆಗೆ
ಅಭಯವನ್ನಿತ್ತು ನುಡಿದರು.
ಸೀತೆಗಾದರೊ, ಈ ದಟ್ಟ ಕಾಡಿನಲ್ಲಿ ತನ್ನ
ದುಃಖವನ್ನು ವಿಚಾರಿಸಲು ಮಹರ್ಷಿಯೊಬ್ಬರು ಸಿಕ್ಕರಲ್ಲ ಎಂದು ಹರುಷವೊತ್ತರಿಸಿದರೂ, ಅದರ ಜೊತೆಗೇ ಆಕೆಯ ಶೋಕವೂ ಇಮ್ಮಡಿಸಿತು. ಆ ಶೋಕದ ಜೊತೆಗೆ ಸ್ವಲ್ಪ ಲಜ್ಜೆಯೂ ಬೆರೆಯಿತು
- ಮಹರ್ಷಿಗಳೆದುರು ತನ್ನ ಪರಿಚಯವನ್ನು, ಹೀಗೆ ಈ ಸ್ಥಿತಿಯಲ್ಲಿ
ಮಾಡಿಕೊಳ್ಳಬೇಕಾಯಿತಲ್ಲ ಎಂದಿರಬಹುದು. ಗದ್ಗದ ಕಂಠೆಯಾಗಿ "ಸ್ವಾಮಿ, ನಾನು ಸೀತೆ. ಲೋಕಾಪವಾದಕ್ಕೆ ಅಂಜಿ ರವಿಕುಲ ಸಂಭವನಾದ ನನ್ನ ಪತಿಯು ನನ್ನನ್ನು
ತ್ಯಜಿಸಿದನು. ಆತನ ಸಹೋದರನಾದ ಸೌಮಿತ್ರಿಯು ನನ್ನನ್ನು ಈ ಕಾಡಿಗೆ ಕರೆದುತಂದು ಇಲ್ಲಿ
ಬಿಟ್ಟುಹೋದನು. ಈಗ ನನ್ನ ಗರ್ಭದಲ್ಲಿರುವ ಶಿಶುವಿನ ಸಲುವಾಗಿಯಾದರೂ ನನ್ನ ಜೀವವನ್ನು ನಾನು
ಹೊರೆದುಕೊಳ್ಳಬೇಕಿದೆ" ಎಂದು ತನ್ನ ಸಂಗತಿಯನ್ನು ಅರುಹಿ ವಾಲ್ಮೀಕಿ ಮುನಿಯ
ಪಾದಕ್ಕೆರಗಿದಳು.
ಅದಕ್ಕೆ ವಾಲ್ಮೀಕಿ ಮಹರ್ಷಿಯು
: "ದೇವಿ, ಬಿಡು ಶೋಕಮಂ. ಪುತ್ರಯುಗಮಂ ಪಡೆವೆ, ಭಾವಿಸದಿರಿನ್ನು ಸಂದೇಹಮಂ. ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ಆವಾವ
ಬಯಕೆಯುಂಟೆಲ್ಲಮಂ ಸಲಿಸಿ ತಾನ್ ಓವಿಕೊಂಡಿರ್ಪೆನ್, ಅಂಜದಿರು"
ಎಂದು ಸಂತೈಸಿ, ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು.
---------------------------------------------------------------------------------------------------------
ವಾಲ್ಮೀಕಿ ಆಶ್ರಮದಲ್ಲಿ
ಸೀತೆಗಾಗಿ ಚಿತ್ರಮಯವಾದ ಪರ್ಣಕುಟೀರವೊಂದು ಸಿದ್ಧವಾಯಿತು. ಸೀತೆಯು ಆ ಪರ್ಣಕುಟೀರದಲ್ಲಿರುತ್ತ, ಆಶ್ರಮದ ಋಷಿಪತ್ನಿಯರ
ಮಿತ್ರತ್ವವನ್ನು ಪಡೆದು, ವಾಲ್ಮೀಕಿ ಮುನಿವರರ ಆರೈಕೆಯಲ್ಲಿ, ಪುತ್ರೋದಯದ ಕಾಲಕ್ಕಾಗಿ ಕಾಯುತ್ತಿದ್ದಳು.
ಜಾತಿವೈರಗಳಿಲ್ಲದ
ಮೃಗಪಕ್ಷಿಗಳ ಸಮೂಹದಿಂದ, ಋತುಭೇದವಿಲ್ಲದ
ಬಳ್ಳಿ-ಮರಗಳಿಂದ, ತಿಳಿಗೊಳಗಳಲ್ಲಿ ಅರಳಿರುವ ಕಮಲದ ಹೂಗಳಿಂದ ಕೂಡಿದ ಆ
ಆಶ್ರಮದ ಪರಿಸರವು ತುಂಬ ರಮ್ಯವಾಗಿತ್ತು.
ಅಲ್ಲಿನ ಮುನಿಪತ್ನಿಯರೊಡನೆ
ಸ್ನೇಹದಿಂದಿರುತ್ತ ಸೀತೆ ದಿನ ಕಳೆಯುತ್ತಿದ್ದಳು. ಮುನಿವಟುಗಳು ಪರಿಚರ್ಯೆಯನ್ನು ಮಾಡುವರು, ಋಷಿಪತ್ನಿಯರು ಇನಿದಾದ
ವಸ್ತುಗಳನ್ನಿತ್ತು ಸೀತೆಯನ್ನು ಸತ್ಕರಿಸುವರು. ವಾಲ್ಮೀಕಿ ಮಹರ್ಷಿಗಳೂ ಸೀತೆಯ ಬಯಕೆಯ ವಸ್ತುಗಳನ್ನು
ಸಲಿಸುತ್ತ , ದಿನದಿನಕ್ಕೆ ಆಕೆಯ ಯೋಗಕ್ಷೇಮವನ್ನು
ವಿಚಾರಿಸುತ್ತಿದ್ದರು. ಇವರೆಲ್ಲರ ಅಕ್ಕರೆಯ ಆಸರೆಯಲ್ಲಿರುತ್ತ ಸೀತೆಯು ಶ್ರೀರಾಮನನ್ನು ಕುರಿತು
ಧ್ಯಾನಿಸುತ್ತ ತನ್ನ ನೋವನ್ನು ಮರೆಯಲು ಪ್ರಯತ್ನಪಡುತ್ತಿದ್ದಳು.
ಹೀಗಿರಲು ಸೀತೆಗೆ ನವಮಾಸಗಳು
ತುಂಬಿದವು. ಬಳಿಕ ಒಂದಿರುಳು ಶುಭಲಗ್ನದಲ್ಲಿ ಸೀತೆಯು ಮುದ್ದಾದ ಅವಳಿ ಗಂಡುಮಕ್ಕಳಿಗೆ
ಜನ್ಮವಿತ್ತಳು. ಆಶ್ರಮವಾಸಿ ಹೆಂಗಸರು ಈ ವಿಷಯವನ್ನು ವಾಲ್ಮೀಕಿ ಮಹರ್ಷಿಗಳಿಗೆ ಹೋಗಿ ತಿಳಿಸಿದರು.
ಅವರು ತವಕದಿಂದ ಸೀತೆಯಿದ್ದಲ್ಲಿಗೆ ಬಂದು, ಮಕ್ಕಳನ್ನು ನೋಡಿ ಸಂತಸಪಟ್ಟು, ಅವರಿಬ್ಬರಿಗೆ ಕುಶ-ಲವ ಎಂಬ ಹೆಸರನ್ನಿಟ್ಟರು. ಆಶ್ರಮವಾಸಿಗಳಿಗೆ ತಮ್ಮ ಆಶ್ರಮದಲ್ಲಿ
ಏಕಕಾಲಕ್ಕೆ ಶಶಿ-ರವಿಗಳು ಉದಯಿಸಿದರೊ ಎಂಬಂತೆ ಆ ಮಕ್ಕಳು ಕಂಡರು.
------------------------------------------------------------------------------------------------------------
ಬಾಲದೊಡಿಗೆಗಳೆಲ್ಲಮಂ ತೊಡಿಸಿ ನೋಡುವಂ,
ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ,
ಬಾಲಕರ್ಗಿನಿದಾದ ವಸ್ತುವಂ ಕೂಡುವಂ, ತನ್ನ
ತೊಡೆಮಡಿಲೊಳಿಟ್ಟು
ಲಾಲಿಸುವನಾವಗಂ ಜಪತಪ ಸಮಾಧಿಗಳ
ಕಾಲಮಂ ಬಗೆಯದೆ; ಮುನೀಶ್ವರಂ ಕುಶಲವರ
ಮೇಲಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದುದು ದಿನದಿನದೊಳು - ೧೯.೪೭
ವಾಲ್ಮೀಕಿ ಮಹರ್ಷಿಯು
ಕುಶಲವರಿಗೆ ಅಂದವಾದ ತೊಡಿಗೆಗಳನ್ನು ತೊಡಿಸಿ ನೋಡುವರು, ಮಕ್ಕಳಾಟವನ್ನು ಆಡಿಸಿ ಮುದ್ದು ಮಾಡುವರು, ಅವರಿಗೆ ಇನಿದಾದ ವಸ್ತುಗಳನ್ನಿತ್ತು, ತನ್ನ
ತೊಡೆಮಡಿಲಿನೊಳಿಟ್ಟು ಸಲಹುವರು. ಮಕ್ಕಳ ಲಾಲನೆಪಾಲನೆಯಲ್ಲಿ ಅವರು ಎಷ್ಟರ ಮಟ್ಟಿಗೆ
ಮೈಮರೆತಿದ್ದರೆಂದರೆ ಒಮ್ಮೊಮ್ಮೆ ತಮ್ಮ ಜಪತಪ ಧ್ಯಾನಗಳ ಸಮಯವನ್ನೂ ಅವರು ಮರೆತೇಬಿಡುವರು. ಈ
ರೀತಿಯಾಗಿ, ಮುನೀಶ್ವರರ ಆರೈಕೆಯಲ್ಲಿ ಕುಶಲವರು ಬೆಳೆಯುತ್ತಿರಲು
ಆಶ್ರಮದ ಉತ್ಸಾಹವು ದಿನದಿನವೂ ಹೆಚ್ಚುತ್ತಿತ್ತು.
ದಶರಥರಾಜನ ಮಗನ ಅರಮೆಯಲ್ಲಿ
ಬೆಳೆಯಬೇಕಾದ ಬಾಲಕರು ಹೀಗೆ ಕಾಂತಾರವಾಸದಲ್ಲಿರಬೇಕಾಯಿತಲ್ಲ ಎಂಬ ಚಿಂತೆ ಸೀತೆಯ ಮನಸಿಗೆ ಎಂದೂ
ಬಾರದಿರುವಂತೆ, ಯಾವ ವಿಷಯದಲ್ಲೂ
ಮಕ್ಕಳಿಗೆ ಏನೂ ಕೊರತೆಯಾಗದಂತೆ ವಾಲ್ಮೀಕಿ ಮಹರ್ಷಿಗಳು ನೋಡಿಕೊಂಡರು. ಅವರ ಪಾಲನೆಯಲ್ಲಿ ಆ
ಮಕ್ಕಳು ಶುಕ್ಲಪಕ್ಷದ ಚಂದಿರನಂತೆ ದಿನದಿನಕೆ ವರ್ಧಿಸಿದರು. ಕುಶಲವರಿಗೆ ಹನ್ನೆರಡು ವರ್ಷಗಳು
ತುಂಬಲು, ವಾಲ್ಮೀಕಿ ಮಹರ್ಷಿಗಳು ಮಕ್ಕಳ ಉಪನಯನ ಸಂಸ್ಕಾರವನ್ನು
ವೇದೋಕ್ತ ರೀತಿಯಲ್ಲಿ ನಡೆಯಿಸಿದರು.
ಮುಂದೆ, ಮುನೀಶ್ವರರು ಆ ಮಕ್ಕಳಿಗೆ
ಸರ್ವಕರ್ಮದ ವಿಧಿಯನ್ನೂ, ಅಖಿಲ ನಿಗಮ ಶಾಸ್ತ್ರದ ಬಗೆಯನ್ನೂ, ಧರ್ಮದ ನೆಲೆಯನ್ನೂ, ನೀತಿ ನಿಶ್ಚಯ ರೀತಿಗಳನ್ನೂ
ಸಾಂಗೋಪಾಂಗವಾಗಿ ಬೋಧಿಸಿದರು. ನಂತರ ಆ ಕುಮಾರರಿಗೆ ಧನುರ್ವೇದವನ್ನು ಕಲಿಸಿ, ಉತ್ತಮವಾದ ಧನುಸ್ಸುಗಳನ್ನೂ, (ಅದರಲ್ಲಿನ ಬಾಣಗಳು ಎಂದಿಗೂ
ಮುಗಿಯದ) ಅಕ್ಷಯವಾದ ಬತ್ತಳಿಕೆಗಳನ್ನೂ ಉಡುಗೊರೆಯಾಗಿತ್ತರು.
ಆ ನಂತರ ಅವರಿಗೆ
ರಾಮಾಯಣವನ್ನು ಮೃದುಮಧುರವಾಗಿ ಹಾಡುವ ರೀತಿಯನ್ನು ಕಲಿಸಿದರು. ಸೀತೆ ನಲಿವಂತೆ, ವಾಲ್ಮೀಕಿ ಮೆಚ್ಚುವ
ತೆರದೊಳ್, ಆ ತಪೋವನದ ಮುನಿಗಣಮೈದೆ ಕೊಂಡಾಡಲ್ - ಆ ತರುಣರೀರ್ವರುಂ (ಕುಶ-ಲವರು) ಮಧುರವೀಣೆಗಳ ಮೇಳಾಪದಾಲಾಪಂಗಳ ಗೀತದೊಳ್ -
ಸಂಕೀರ್ಣ ಶುದ್ಧ ಸಾಳಗದಿಂ ರಸಾತಿಶಯಮೆನೆ ಪಾಡುವರ್ ದೇವನಗರೀ ನಿಕೇತನ ಶ್ರೀಪತಿಯ ಚಾರಿತ್ರಮಪ್ಪ
ರಾಮಾಯಣವನ್ ಅನುದಿನದೊಳು.
ಹೀಗೆ, ಕುಶಲವರು ದೇವಪುರ
ನಿವಾಸಿಯಾದ ಶ್ರೀನಿವಾಸನ ಚರಿತ್ರೆಯಾದ ರಾಮಾಯಣ ಮಹಾಕಾವ್ಯವನ್ನು ಅನುದಿನವೂ ಹಾಡಿ ಸೀತೆಯನ್ನೂ,
ವಾಲ್ಮೀಕಿ ಮುನೀಶ್ವರರನ್ನೂ, ಆಶ್ರಮವಾಸಿಗಳನ್ನೂ
ಸಂತೋಷಪಡಿಸುತ್ತಿದ್ದರು.
------------------------------------------------------------------------------------------------------------
ಇತ್ತ, ಅಯೋಧ್ಯೆಯಲ್ಲಿ, ರಾಮನು ತನ್ನಿಂದಾದ ಬ್ರಹ್ಮಹತ್ಯಾದೋಷದ* ನಿವಾರಣೆಗಾಗಿ ಅಶ್ವಮೇಧಯಾಗವನ್ನು
ಮಾಡುವುದೆಂದು ನಿಶ್ಚೈಸಿ, ವಸಿಷ್ಠಾದಿ ಮುನಿಗಳನ್ನು ಕರೆಸಿ ಅವರ
ಅನುಮತಿ ಕೇಳಿದನು.
(*ರಾವಣನನ್ನು ಕೊಂದದ್ದರಿಂದ
ಉಂಟಾದ ಬ್ರಹ್ಮಹತಿಯ ದೋಷ)
ಅಲ್ಲಿ ನೆರೆದಿದ್ದ ವಾಮದೇವ, ಅತ್ರಿ, ಗಾಲವ, ವಸಿಷ್ಠ, ವಿಶ್ವಾಮಿತ್ರ
ಮುಂತಾದ ಮುನಿಗಳು ಅಶ್ವಮೇಧದ ಲಕ್ಷಣವನ್ನು ರಾಮನಿಗೆ ತಿಳಿಸಿ, ಆ
ಯಾಗವನ್ನು ಮಾಡಲು ಸಹಧರ್ಮಿಣಿಯೂ ಜೊತೆಯಲ್ಲಿರಬೇಕು ಎಂದು ತಿಳಿಸಿದರು. ಅದಕ್ಕೆ ರಾಮನು
ಬಂಗಾರದಿಂದ ನಿರ್ಮಿಸಿದ ಸೀತೆಯ ಪುತ್ಥಳಿಯ ಜೊತೆ ಕುಳಿತು ತಾನು ಆ ಮಹಾಯಜ್ಞವನ್ನು ನಡೆಸುವೆನೆಂದೂ,
ಅದಕ್ಕೆ ಮುನಿಗಳೆಲ್ಲರ ಅನುಜ್ಞೆ ಬೇಕೆಂದೂ ಬಿನ್ನವಿಸಿ, ಅವರನ್ನು ಅದಕ್ಕೆ ಒಡಂಬಡಿಸಿದನು.
ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ ತಳೆದು,
ರಘುನಾಥಂ ತುರಂಗಮಂ ಪೂಜೆಗೈದು, ಇಳೆಯೊಳ್ ಚಲಿಸಲ್ ಅದರ
ಹಣೆಗೆ ತನ್ನ ಅಗ್ಗಳಿಕೆಯಂ ಬರೆದ ಪತ್ರಿಕೆಯನು ಅಳವಡಿಸಿ, ಕೂಡೆ ಮೂರು
ಅಕ್ಷೋಹಿಣಿಯ ಮೂಲಬಲಸಹಿತ ವೀರ ಶತ್ರುಘ್ನನಂ ಕಾವಲ್ಗೆ ಕಳುಹಿಬಿಡಲ್ ಆ ಹಯಂ ತಿರುಗುತಿರ್ದುದು
ಧರೆಯ ಮೇಲೆ ಅಖಿಲ ದೆಸೆದೆಸೆಯೊಳು.
ಹೀಗೆ, ಶತ್ರುಘ್ನನ ಕಾವಲಿನಲ್ಲಿ,
ಮೂರು ಅಕ್ಷೋಹಿಣಿಯ ಬಲವು ತನ್ನ ಹಿಂದಿರಲು, ಆ ಯಾಗದ
ಕುದುರೆಯು ಭೂಮಿಯ ಮೇಲೆ ದಿಕ್ಕುದಿಕ್ಕಿನಲ್ಲಿ ಚಲಿಸುತ್ತಿದ್ದಿತು. ಆ ಕುದುರೆ ಹೋದ ಕಡೆಯ ರಾಜ್ಯದ
ಅರಸುಗಳೆಲ್ಲ ರಾಮನ ಔನ್ನತ್ಯವನ್ನೊಪ್ಪಿ, ಅಶ್ವದ ಕಾವಲಿಗೆ ಬಂದ
ಶತ್ರುಘ್ನನಿಗೆ ಕಾಣಿಕೆಗಳನ್ನಿತ್ತು ನಮಿಸುತ್ತಿದ್ದರು. ರಾಮನನ್ನು ಕೊಂಡಾಡುತ್ತಿದ್ದರು.
ಹೀಗಿರಲು ಆ ಕುದುರೆಯು ಮುಂದುವರೆಯುತ್ತ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಸೇರಿದ ಉಪವನದ ಬಳಿಗೆ
ಬಂದಿತು.
ಆ ಉಪವನದಲ್ಲಿದ್ದ ಹಸುರು
ಹುಲ್ಲುಗಳಿಗೆ ಮನಸೋತು ಯಾಗದ ಕುದುರೆಯು ಆ ಉಪವನವನ್ನು ಹೊಕ್ಕಿತು. ಅದನ್ನು ಆ ತೋಟದ ಕಾವಲಿಗಿದ್ದ
ಲವನು ಕಂಡು, ಕುದುರೆಯ
ಬಳಿಬಂದು ನೋಡಿದನು.
"ಇದೆತ್ತಣ ಕುದುರೆಯಪ್ಪಾ!
ಮಹರ್ಷಿ ವಾಲ್ಮೀಕಿಯು ಸಮುದ್ರರಾಜನ ಆಹ್ವಾನದ ಮೇರೆಗೆ ಅವರ ಲೋಕಕ್ಕೆ ಹೋಗುವ ಮುನ್ನ ಈ ಉಪವನದ
ಕಾವಲಿನ ಕೆಲಸವನ್ನು ನನಗೊಪ್ಪಿಸಿ ಹೋಗಿದ್ದಾರೆ. ಆದರೆ ಇದಾವುದೋ ಕುದುರೆ ಈ ತೋಟವನ್ನು ಹೊಕ್ಕು
ಇಲ್ಲಿನ ಸಸ್ಯಗಳನ್ನೆಲ್ಲ ಮೇಯ್ದಿತೆಂದು ತಿಳಿಯಿತೆಂದರೆ ಮುನೀಶ್ವರರು ಏನೆಂದಾರು.." ಎಂದು
ಅಂಜಿ ಕುದುರೆಯಿದ್ದಲ್ಲಿಗೆ ಬಂದು ನೋಡಿದರೆ ಕುದುರೆಯ ಹಣೆಯ ಮೇಲೊಂದು ಬರಹವಿದೆ.! ಲವನು ಅದನ್ನೋದಲು
ತೊಡಗಿದನು:
"ಬುವಿಯಲ್ಲಿ ಕೌಸಲ್ಯೆಯ
ಮಗನಾದ ರಾಮನೊಬ್ಬನೇ ವೀರನು. ಆತನ ಯಜ್ಞ ತುರಗವಿದು. ಇದನ್ನು ತಡೆದು ನಿಲ್ಲಿಸಿ ನಿರ್ವಹಿಸಬಲ್ಲ
ಸಾಮರ್ಥ್ಯವುಳ್ಳವರು ಯಾರಾದರೂ ಇದನ್ನು ತಡೆಯಲಿ...." ಎಂದು ಮುಂತಾದ ವಿವರವನ್ನುಳ್ಳ ಆ
ಲೇಖನವನ್ನೋದಿ ಲವನು ಉರಿದೆದ್ದನು. ಇವರ ಗರ್ವವನ್ನು ಮುರಿಯದಿದ್ದರೆ ನಾನು ಸೀತೆಯ ಮಗನೇ ಅಲ್ಲ
ಎಂದು ಕೋಪ ತಳೆದು ನುಡಿದನು.
ತನ್ನ ಉತ್ತರೀಯವನ್ನು ತೆಗೆದು
ಅದರಿಂದ ಹತ್ತಿರವಿದ್ದ ಬಾಳೆಯ ಮರವೊಂದಕ್ಕೆ ಕುದುರೆಯನ್ನು ಬಿಗಿದು ಕಟ್ಟಿದನು. "ಬೇಡ ಬೇಡ, ಅರಸುಗಳ ಕುದುರೆಯನ್ನು
ಕಟ್ಟಬೇಡ, ಬಿಟ್ಟುಬಿಡು" ಎಂದ ತನ್ನ ಸಹಚರ-ಮುನಿಕುಮಾರರಿಗೆ ಹೆದರಬೇಡಿ
ಎಂದು ಅಭಯವನಿತ್ತು ಕುದುರೆಯ ಕಾವಲಿಗೆ ನಿಂತನು.
ಅಷ್ಟರಲ್ಲಿ, ಯಜ್ಞಾಶ್ವವನ್ನು
ಹುಡುಕುತ್ತ ಅಲ್ಲಿಗೆ ಬಂದ ಕಾವಲಿನವರು ಬಾಳೆಮರಕ್ಕೆ ಕಟ್ಟಿಹಾಕಲ್ಪಟ್ಟ ಕುದುರೆಯನ್ನು ನೋಡಿದರು.
ಅವರು ಲವನನ್ನೂ, ಅಲ್ಲಿದ್ದ ಬಾಲಕರನ್ನೂ ಕುರಿತು
"ಯಜ್ಞಾಶ್ವವನ್ನೇಕೆ ಕಟ್ಟಿದಿರಿ.. ಈಗಿಂದೀಗಲೇ ಅದನ್ನು ಬಿಟ್ಟುಬಿಡಿ.." ಎನ್ನುತ್ತ
ಗರ್ಜಿಸಿ ನುಡಿದರು. ಲವನು "ಯಾವ ಕಾರಣಕ್ಕೂ ಈ ಅಶ್ವವನ್ನು ಬಿಡುವುದಿಲ್ಲ. ಅದನ್ನು ಬಿಡಿಸಲು ಉಪಕ್ರಮಿಸುವವರ ಕೈಯನ್ನು ಕಡಿದು
ಬಿಸುಡುತ್ತೇನೆ." ಎಂದು ಹೇಳಿದನು. ಅದಾಗಿಯೂ ಆ ಸೈನಿಕರು ಕುದುರೆಯ ಕಟ್ಟನ್ನು ಬಿಚ್ಚಲು
ಹೋದಾಗ ಲವನು ಅವರ ಮೇಲೆ ಬಾಣದ ಮಳೆಗರೆದು ಅವರ ಕೈಕಾಲುಗಳನ್ನು ಕತ್ತರಿಸಿ ಅವರನ್ನು ಅಲ್ಲಿಂದ
ಓಡಿಸಿದನು. ಅವರುಗಳು ಬಂದು, ನಡೆದುದೆಲ್ಲವನ್ನೂ ವಿವರಿಸಿ
ಶತ್ರುಘ್ನನಲ್ಲಿ ಮೊರೆಯಿಟ್ಟರು.