Monday, 22 June 2015

ಬೀಸಿತು ಸುಖಸ್ಪರುಶವಾತಂ - ೨

ಸೀತೆಯು ಆಶ್ರಮಕ್ಕೆ ಹೊರಡಲು ಸಂಭ್ರಮದಿಂದ ತಯಾರಾದಳು. ನಗುನಗುತ್ತ 'ನಂಬಿದವರ ಅಭೀಷ್ಟವನ್ನು ನೆರವೇರಿಸುವ ಕೃಪಾಳು ತಾನು ಎಂದು ಈ ದಿನ ರಘುರಾಮನು ನಿರೂಪಿಸಿದ್ದಾನೆ’ ಎಂದು ಕೌಸಲ್ಯೆಗೆ ಹೇಳಿ, ಆಕೆಗೆ ನಮಸ್ಕರಿಸಿ, ಹಾಗೆಯೇ ಕೈಕೇಯಿ ಸುಮಿತ್ರೆಯರಿಗೂ ನಮಸ್ಕರಿಸಿ, ಅವರೆಲ್ಲರ ಹಾರೈಕೆ ಆಶೀರ್ವಾದಗಳನ್ನು ಪಡೆದು, ತನ್ನ ಸಖಿಯರೊಂದಿಗೂ ಪ್ರೇಮದ ಮಾತುಗಳನ್ನಾಡಿ ಅವರೆಲ್ಲರಿಂದ ಬೀಳ್ಕೊಂಡಳು.
ಆ ನಂತರ ಸೀತೆಯು ತಪೋವನದ ಋಷಿಗಳಿಗೆ, ಮುನಿಪತ್ನಿಯರಿಗೆ ಕೊಡಲೆಂದು ಅಗರು, ಚಂದನ, ಕುಂಕುಮಾನುಲೇಪನಗಳನ್ನೂ, ಬಗೆಬಗೆಯ ದಿವ್ಯಾಂಬರಗಳನ್ನೂ, ಇತರೆ ಸುವಸ್ತುಗಳನ್ನೂ ತೆಗೆದು ಕಟ್ಟಿಸಿ ರಥದೊಳಗಿರಿಸಿದಳು. ಹೊರಡುವ ಮುನ್ನ ರಾಮನನ್ನು ನೆನೆದು ಅವನ ಪಾದುಕೆಗಳನ್ನು ತರಿಸಿಕೊಂಡು ತನ್ನೊಡನಿಟ್ಟುಕೊಂಡು ಸಂತಸದಿಂದ ಮಣಿರಥವನ್ನೇರಿದಳು.
ಇತ್ತ ಲಕ್ಷ್ಮಣನು ತನ್ನ ಅಣ್ಣ ತನ್ನ ಮೇಲೆ ಹೊರಿಸಿರುವ ಘೋರವಾದ ಕಾರ್ಯದ ಭಾರವನ್ನು ನೆನೆದು, ಹಾಗೆಯೇ ಸೀತೆಯು ತಾನು ತಪೋವನಕ್ಕೇ ಹೊರಟಿದ್ದೇನೆಂದು ಹಿಗ್ಗಿ ಸಂತಸಪಡುತ್ತಿರುವುದನ್ನೂ ಕಂಡು ಮನದಲ್ಲೇ ಮಮ್ಮಲ ಮರುಗಿದನು. ತುಂಬಿ ಬರುವ ಕಂಬನಿಗಳನ್ನು ಹೇಗೋ ನಿಗ್ರಹಿಸಿಕೊಂಡು ರಥವನ್ನು ಹೊರಡಿಸು ಎಂದು ಸಾರಥಿಗೆ ಸೂಚನೆಯನ್ನಿತ್ತನು.

ರಥವು ವೇಗವಾಗಿ ಅಯೋಧ್ಯಾನಗರವನ್ನು ದಾಟಿ ಗಂಗಾನದಿಯತ್ತ ಹೊರಟಿತ್ತು. ಸೀತೆಯೇನೊ ತಪೋವನಕ್ಕೆ ಹೊರಟಿರುವುದನ್ನು ನೆನೆದು ಸಂತಸದಿಂದಿದ್ದಾಳೆ... ದಾರಿಯ ಸುತ್ತಲಿನ ರಮ್ಯ ದೃಶ್ಯಗಳನ್ನು ಕಂಡು ಆನಂದಿಸುತ್ತಿದ್ದಾಳೆ. ಆದರೆ ಇತ್ತ ಲಕ್ಷ್ಮಣನ ಮನದಲ್ಲಿ ಮತ್ತೆ ತಲ್ಲಣವುಂಟಾಗುತ್ತದೆ :-

’ಧುರದೊಳಾಂತರನಿರಿದು ಮೆರೆಯಲೇರುವ ರಥಂ
ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು
ಧರೆಯೊಳಾರ್ತರನೈದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು
ಕರುಣಮಿಲ್ಲದೆ ಹೊರೆವ ಹರಣಮಂ ಸುಡಲಿ ನಿ
ಷ್ಠುರದೊಳೆಂತೀ ಕೃತ್ಯಮೆಸಗುವೆನೊ! ರಾಘವೇ
ಶ್ವರನೆಂತಿದಕ್ಕೆ ಬೆಸಸಿದನೊ ತನಗೆ’ನುತ ಸೌಮಿತ್ರಿ ಮರುಗುತ ನಡೆದನು.                  -೧೯.೨

ಅಷ್ಟರಲ್ಲಿ ಸೀತೆಯ ಕಣ್ಣಿಗೆ ಅನತಿ ದೂರದಲ್ಲಿ ಹರಿಯುತ್ತಿರುವ ದೇವನದಿ ಗಂಗೆ ಕಾಣಿಸುತ್ತದೆ. ಆಹಾ! ಆ ದಿವಿಜನದಿಯ ಬೆಳ್ಳನೆಯ ತೆರೆಗಳ ಕಲ್ಲೋಲ ಮಾಲೆಗಳ ಸೊಗಸೇನು.. ಅಲ್ಲಿ ನಲಿಯುತ್ತಿರುವ ರಾಜಹಂಸಗಳ ಸಂಭ್ರಮವೇನು.. ಅದೆಷ್ಟು ತಿರುವು-ಮುರಿವುಗಳುಗಳು, ಅದೆಷ್ಟು ಸುಳಿಗಳು ಅಲ್ಲಿ.. ಅದೆಷ್ಟು ಬಗೆಯ ಜಲಚರಗಳು ಸುಳಿದಾಡುತ್ತಿವೆ, ಅಲ್ಲಿ...

ಸ್ವಲ್ಪ ಹೊತ್ತಿಗೆ ಅವರ ರಥವು ಬಿಳುಪಾದ ನೊರೆ-ತೆರೆಗಳನ್ನೆಬ್ಬಿಸಿ ಘೂರ್ಮಿಸಿ ಹರಿಯುತ್ತಿರುವ, ಮುನಿಗಣ ಸೇವಿತ ಪರಮಪಾವನೆ ಗಂಗೆಯಿದ್ದಲ್ಲಿಗೆ ಬಂದು ತಲುಪಿತು.
ಇಳಿದು ರಥದಿಂದ ಮಂದಾಕಿನಿಗೆ ಪೊಡಮಟ್ಟು, ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ ಕಳೆದು, ನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ ಒಳಗೊಳಗೆ ಮರುಗಿ, ಬಿಸುಸುಯ್ದು ಚಿಂತಿಸುತ ಮುಂದಳೆದು’ಉಗ್ರ ಮೃಗ-ಪಕ್ಷಿಗಣದಿಂದ ಘೂರ್ಮಿಸುವ ಹಳುವಮಂ ಪೊಕ್ಕನ್ - ಅಡಿಯಿಡುವೊಡೆ ಅಸದಳಮೆಂಬ ಕರ್ಕಶ ಮಾರ್ಗದೊಳು.
ಶಕುನಿ ಮುಂತಾದ ಪಕ್ಷಿಗಳ ಚೀತ್ಕಾರದಿಂದ, ಅನೇಕ ಬಗೆಯ ಉರಗ-ವಿಷಜಂತುಗಳಿಂದ, ತೋಳ ಕರಡಿ ಹುಲಿ ಕಾಡುಹಂದಿ - ಮುಂತಾದ ನಾನಾ ಮೃಗಗಳಿಂದ ಕೂಡಿದ, ಇದು ಹಗಲೊ ಅಥವಾ ಇರುಳೊ ಎಂಬ ವ್ಯತ್ಯಾಸವೂ ತಿಳಿಯಲಾಗದಷ್ಟು ದಟ್ಟವಾಗಿ ಹಬ್ಬಿದ ಕಾಡಿನ ದಾರಿಯಲ್ಲಿ ಅವರಿಬ್ಬರೂ ನಡೆದು ಸಾಗಿದರು. ಮುಂದೆ :
ಅಟವಿಯ ಮಹಾಘೋರ ಗಹ್ವರಂ ಮುಂದೆ ದುರ್ಘಟಮಾಗೆ ನಡುನಡುಗಿ ಭೀತಿಯಿಂ ಸೀತೆ ಸಂಕಟದಿಂದ ರಾಮನಾಮಂಗಳಂ ಜಪಿಸುತ, "ಎಲೆ ಸೌಮಿತ್ರಿ, ಕಾನನಮಿದು ಅಟನಕೆ(ಒಡಾಡಲು) ಅಸದಳಮಪ್ಪುದು. ಇಲ್ಲಿ ಪುಣ್ಯಾಶ್ರಮದ ಜಟೆಗಳಂ, ವಲ್ಕಲಗಳನುಟ್ಟ ಮುನಿವಧುಗಳಂ, ವಟುಗಳಂ, ಶ್ರುತಿಘೋಷ-ಹೋಮಧೂಮಂಗಳಂ ಕಾಣೆನ್" ಎಂದು ಅಳವಳಿದಳು.
"ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗಳ್? ಎಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಂಗಳ್? ಎಲ್ಲಿ ಸು-ಹವಿಗಳ ಕಂಪೊಗೆದ ಪೊಗೆದಳೆದ ಅಗ್ನಿಹೋತ್ರದ ಕುಟೀರಂಗಳು? ಎಲ್ಲಿ ಪರಿಚಿತವಾದ ವೇದಶಾಸ್ತ್ರಧ್ವನಿಗಳ್... ಅಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿಗೆ, ಇಲ್ಲಿಗೇಕೈತಂದೆ, ತಂದೆ, ಸೌಮಿತ್ರಿ? ಹೇಳ್" ಎಂದು ಜಾನಕಿ ಸುಯ್ದಳು.

ಸೀತೆಯ ನುಡಿಗಳನ್ನು ಕೇಳಿ, ಅದಕ್ಕೆ ಉತ್ತರಿಸುವುದು ಹೇಗೊ ಎಂದು ತೋಚದೆ ಲಕ್ಷ್ಮಣನು ತೊಳಲಿದನು. "...ರಾಘವೇಶ್ವರನೆಂದ ಕಷ್ಟಮಂ ಪೇಳ್ದಪೆನೊ, ಮೇಣ್ ಉಸಿರದಿರ್ದಪೆನೊ! ನಿಷ್ಠುರದೊಳು ತರಣಿಕುಲಸಾರ್ವಭೌಮನ ರಾಣಿಯಂ ಬನದೊಳ್ ಇರಿಸಿ ಪೋದಪೆನೆಂತೊ! ಮರಳದಿರ್ದೊಡೆ ಸಹೋದರನ್ ಅದೇನೆಂದಪನೊ! ಹಾ!" ಎಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು.
ಉಕ್ಕಿದುವು ಕಂಬನಿಗಳ್, ಅಧರೋಷ್ಠಂ ಅದಿರಿತು... ಅಲಗಿಕ್ಕಿ ತಿರುಪಿದವೊಲಾಯ್ತೊಡಲೊಳ್ (ಅಲಗು - ಕತ್ತಿ/ಖಡ್ಗ; ಖಡ್ಗದಿಂದ ಒಡಲಿಗೆ ಇರಿದು ತಿರುಪಿದಾಗ ಉಂಟಾಗುವಷ್ಟು ನೋವಾಯ್ತು ಎಂಬ ಭಾವ)... ಕಂಪಿಸಿದುದು ಅವಯವಂ, ಕರಗಿರ್ತು ಎದೆ.. ಸೈರಣೆ ಸಮತೆಗೆಟ್ಟುದು... ಸಿಕ್ಕಿದುವು ಕಂಠದೊಳ್ ಮಾತುಗಳ್; ಸೆರೆ ಬಿಗಿದು ಮಿಕ್ಕುಮೀರುವ ಶೋಕದಿಂದ ಬೆಂಡಾಗಿ ಕಡುಗಕ್ಕಸದ ಕೆಲಸಮನ್ ಉಸಿರಲರಿಯದೆ ಅವನ್ ಒಯ್ಯನೆ ಅವನಿಸುತೆಗೆ ಇಂತೆಂದನು :
"ದೇವಿ, ನಿನಗಿನ್ನೆಗಂ ಪೇಳ್ದುದಿಲ್ಲ, ಅಪವಾದಂ ಆವರಿಸೆ ನಿನ್ನನ್ ಒಲ್ಲದೆ ರಘುಕುಲೋದ್ಭವಂ ಸೀವರಿಸಿ ಬಿಟ್ಟು ’ಕಾಂತಾರಕ್ಕೆ ಕಳುಹಿ ಬಾ’ ಎಂದೆನಗೆ ನೇಮಿಸಿದೊಡೆ ಆ ವಿಭುವಿನಾಜ್ಞೆಯಂ ಮೀರಲ್ ಅರಿಯದೆ ಮೆಲ್ಲನೀ ವಿಪಿನಕೊಡಗೊಂಡು ಬಂದೆನ್, ಇನ್ನೊಯ್ಯೆನ್. ಆವಲ್ಲಿಗಾದೊಡಂ ಪೋಗೆಂದು" ಲಕ್ಷ್ಮಣಂ ಭಾಷ್ಪಲೋಚನನಾದನು.

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ
ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತ
ಮರೆದಳಂಗೋಪಾಂಗಮಂ. ಬಳಿಕ ಸೌಮಿತ್ರಿ
ಮರುಗಿ ಕಣ್ಣೀರ್ದಳೆದು ಪತ್ರದೊಳ್ ಕೊಡೆವಿಡಿದು
ಸೆರಗಿಂದ ಬೀಸಿ ’ರಾಮನ ಸೇವೆ ಸಂದುದೇ ತನಗೆಂದು’ ರೋದಿಸಿದನು.                     -೧೯.೧೬

ಒಂದರೆಘಳಿಗೆಯ ನಂತರ ಸೀತೆಗೆ ಎಚ್ಚರವಾಯಿತು. ಕಣ್ತೆರೆದು ದೈನ್ಯದಿಂದ ಸೌಮಿತ್ರಿಯನ್ನು ನೋಡಿ ’ಕೊಯ್ಯಲೊಲ್ಲದೆ ಕೊರಳನ್ ಇಂತು.. ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ ಪೊಯ್ಯೆಂದು ಪೇಳದೆ ಅಡವಿಗೆ ಕಳುಹಿ ಬಾಯೆಂದನಯ್ಯಯ್ಯೊ! ರಾಘವಂ ಕರುಣಾನಿಧಿ...’ ಎಂದು ನೊಂದು ನುಡಿದಳು.

"ಬಿಟ್ಟನೆ ರಘುಶ್ರೇಷ್ಠನ್ ಎನ್ನಂ? ಅಕಟಕಟ! ತಾ ಮುಟ್ಟನೆ..!? ನೆಗಳ್ದ ಬಾಳ್ಕೆಗೆ ಸಂಚಕಾರಮಂ ಕೊಟ್ಟನೆ...!? ಸುಮಿತ್ರಾ ತನುಜ, ಕಟ್ಟರಣ್ಯದೊಳ್ ಕಳುಹಿ ಬಾ ಎಂದು ನಿನಗೆ ಕೊಟ್ಟನೆ ನಿರೂಪಮಂ!? ...ಮನೋವಲ್ಲಭನನ್ ಅಗಲ್ದು ಅಡವಿಯೊಳ್ ನೆಟ್ಟನೆ ಪಿಶಾಚಿಯವೊಲ್ ಅದೆಂತಿಹೆನೊ, ಕೆಟ್ಟೆನಲ್ಲಾ.." ಎಂದೊರಲ್ದಳ್ ಅಬಲೆ.
ಮತ್ತೆ ಮತ್ತೆ ರಾಮನನ್ನು ನೆನೆದು, ಹಿಂದೆ ವನವಾಸದಲ್ಲಿ ತಾನು ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನೂ ಆಗೆಲ್ಲ ರಾಮನು ತೋರಿದ ಪ್ರೇಮವನ್ನೂ ನೆನೆದು ಮತ್ತಷ್ಟು ರೋದಿಸಿದಳು... ಜಾನಕಿಯ ದುಃಖವನ್ನು ಕಂಡು ಲಕ್ಷ್ಮಣನೂ ಕಂಬನಿ ಮಿಡಿಯುತ್ತ ನಿಂತನು.

"ತಾಯೆ, ನಿನ್ನಂ ಬಿಟ್ಟು ಪೋಗಲಾರೆಂ. ಪೋಗದೀಯವಸ್ಥೆಯೊಳಿರ್ದೊಡೆ ಅಣ್ಣನೇಗೈದಪನೊ.. ಹಾ!" ಎಂದು ಲಕ್ಷ್ಮಣಂ ಶೋಕ ಗದ್ಗದನಾಗೆ ಸೀತೆ ಮಗುಳಿಂತೆಂದಳು -

"ತಂದೆ, ಲಕ್ಷ್ಮಣ, ನಿನ್ನೊಳೆಂದೊಡಿನ್ನೇನಹುದು.. ಹಿಂದಣ ಜನಸ್ಥಾನದಂದದೊಳ್ ಪೋಗು ನೀಂ. ಕೊಂದುಕೊಂಬಡೆ ತನ್ನ ಬೆಂದೊಡಲೊಳ್ ಇದೆ ಬಸಿರ ದಂದುಗಂ.. ಕಾನನದೊಳು ಬಂದುದಂ ಕಾಣ್ಬೆನ್ ನಾನಿಂದು...." (ನನ್ನನ್ನು ನಾನು ಕೊಂದುಕೊಳ್ಳೋಣವೆಂದರೆ ಬಸಿರೊಳಗೆ ಇನ್ನೊಂದು ಜೀವವುಂಟು.. ಆದ್ದರಿಂದ ನಾನು ಆ ಕೆಲಸವನ್ನೂ ಮಾಡಲಾರೆ. ಇನ್ನು ಮುಂದೆ ಈ ಕಾಡಿನಲ್ಲಿ ಎದುರಾದ ಕಷ್ಟವನ್ನು ಅನುಭವಿಸುತ್ತೇನೆ..)

"ಏಕೆ ನಿಂದಪೆ? ಪೋಗು, ಸೌಮಿತ್ರಿ. ಕೋಪಿಸನೆ ಕಾಕುತ್ಸ್ಥನ್(ರಾಮ) ಇಲ್ಲಿ ತಳುವಿದೊಡೆ? ನೆರವುಂಟು ತನಗೀ ಕಾಡೊಳ್ ಉಗ್ರಜಂತುಗಳ್. ಅಲ್ಲಿ ರಘುನಾಥನ್ ಏಕಾಕಿಯಾಗಿರ್ಪನು...
ಲೋಕದ ಅರಸು ಏಗೈದೊಡಂ ತನ್ನ ಕಿಂಕರರ್ ’ಬೇಕು..ಬೇಡ..’ ಎಂದು ಪೇಳರೆ...? ಭರತ-ಶತ್ರುಘ್ನರೀ ಕೆಲಸಕೆ ಒಪ್ಪಿದರೆ? ಹನುಮಂತನಿರ್ದಪನೆ, ಪೇಳ್" ಎಂದು ಅಳಲ್ದಳ್ ಅಬಲೆ.

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಜನಿಸಿ ತ
ನ್ನೊಡಲಂ ಪೊರೆವುದೆನ್ನೊಳಪರಾಧಮುಂಟು.. ಸಾಕಿಲ್ಲಿರಲ್ಬೇಡ ನೀನು,
ನಡೆ, ಪೋಗು.. ನಿಲ್ಲದಿರ್. ನಿನಗೆ ಮಾರ್ಗದೊಳಾಗ
ಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ
ಮಿಡಿದಾರ್ತೆಯಾಗಿರಲ್ ಸೌಮಿತ್ರಿ ನುಡಿದನಾ ವಿಪಿನದಭಿಮಾನಿಗಳ್ಗೆ :                     -೧೯.೨೭

"ಎಲೆ ವನಸ್ಥಳಗಳಿರ, ವೃಕ್ಷಂಗಳಿರ, ಮೃಗಂಗಳಿರ.. ಕ್ರಿಮಿ-ಕೀಟಂಗಳಿರ, ಪಕ್ಷಿಗಳಿರ, ಲತೆಗಳಿರ, ತೃಣ-ಗುಲ್ಮಂಗಳಿರ, ಪಂಚಭೂತಂಗಳಿರ, ದೆಸೆಗಳಿರ - ಕಾವುದು... ಎಲೆ ಧರ್ಮದೇವತೆ, ಜಗಜ್ಜನನಿ ಜಾಹ್ನವಿಯೆ, ಸಲಹಿಕೊಂಬುದು ತನ್ನ ಮಾತೆಯಂ ಜಾನಕಿಯನ್. ಎಲೆ ತಾಯೆ ಭೂದೇವಿ, ನಿನ್ನ ಮಗಳಿಹಳೆಂದು" ಸೌಮಿತ್ರಿ ಕೈಮುಗಿದನು. ಹೀಗೆ ಅಲ್ಲಿನ ವೃಕ್ಷ, ತೃಣ-ಗುಲ್ಮಗಳಿಗೂ, ಅಲ್ಲಿನ ಪ್ರಾಣಿಪಕ್ಷಿಗಳಿಗೂ ಕೈಮುಗಿದು ತನ್ನ ತಾಯಿ ಜಾನಕಿಯನ್ನು ಕಾಪಾಡಬೇಕೆಂದು ಪ್ರಾರ್ಥಿಸಿ ಲಕ್ಷ್ಮಣನು ಹೊರಡಲನುವಾದನು. ’ಅಯ್ಯೊ, ತನಗೆ ಇಂತಹ ಕೆಲಸವನ್ನು ಮಾಡಬೇಕಾಗಿ ಬಂತು. ಈ ಪಾಪಕ್ಕೆ ತನ್ನ ಒಡಲನ್ನು ಎರಡಾಗಿ ಸೀಳಿ ಕೆಡಹಬೇಕು.. ಛೆ, ಸುಡಲಿ ನನ್ನೀ ಬಾಳನ್ನು’ ಎಂದು ತನ್ನನ್ನೇ ತಾನು ಹಳಿದುಕೊಂಡು, ಸೀತೆಗೆ ನಮಸ್ಕರಿಸಿ, ತಾಯಿಹಸುವನ್ನು ಅಗಲಲಾರದೆ ಅಗಲುವ ಎಳೆಗರುವಿನಂತೆ ನಡೆಯಲಾರದೆ ನಡೆಯುತ್ತ ಗಂಗೆಯ ಕಡೆಗೆ ಹೊರಟನು.

ತಾಯನ್ ಎಳೆಗರು ಬಿಚ್ಚುವಂತೊಯ್ಯನೊಯ್ಯನೆ ಅತ್ಯಾಯಾಸದಿಂ ಅಗಲ್ದು ಅಮರನದಿಯಂ ದಾಂಟಿ.. ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲ್. ಇವಳಿತ್ತಲು ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮಸುಳಲ್, ’ಹಾ!’ ಎಂದೊರಲ್ದು ಭಯ-ಶೋಕದಿಂದ ಅಸವಳಿದು ಕಾಯಮಂ ಮರೆದು ಇಳೆಗೊರಗಿದಳ್ - ಮೂಲಮಂ ಕೊಯ್ದ ಎಳೆಯ ಬಳ್ಳಿಯಂತೆ.

ಸೀತೆಯು ಹೀಗೆ ಮೂರ್ಛೆಹೋದುದನ್ನು ಕಂಡು ಅಲ್ಲಿದ್ದ ಮೃಗ-ಪಕ್ಷಿಗಳು ಅವಳ ಶುಶ್ರೂಷೆಗೆಂದು ತಮ್ಮ ವೈರವನ್ನು ಮರೆತು, ಹುಲ್ಲು-ಮೇವುಗಳನ್ನೂ ಮರೆತು ಅಲ್ಲಿ ನಿಂದು ಅವಳ ಕಷ್ಟವನ್ನು ನೋಡಿ ಕೊರಗಿದವು. ತಮ್ಮ ಕೈಲಾದ ಮಟ್ಟಿಗೆ ಸೀತೆಯನ್ನು ಉಪಚರಿಸಿದವು.

’..ಅಲ್ಲಿರ್ದ ಪಕ್ಷಿ ಮೃಗ ಜಂತುಗಳ್ ಧರಣಿಸುತೆಯಂ ಬಳಸಿ ನಿಂದು ಮೈಯುಡುಗಿ ಜೋಲ್ದಿರದೆ ಕಂಬನಿಗರೆದು. ನಿಜವೈರಮಂ ಮರೆದು, ಪುಲ್ಮೇವುಗಳನೆ ತೊರೆದು ಕೊರಗುತಿರ್ದುವು ಶೋಕಭಾರದಿಂ... ಜಗದೊಳ್ ಉತ್ತಮರ ಹಾನಿಯಂ ಕಂಡು ಸೈರಿಸುವರುಂಟೆ!’

ಮೊರೆಯಲೊಲ್ಲವು ತುಂಬಿ, ಕುಣಿಯಲೊಲ್ಲವು ನವಿಲ್, ಬೆರೆಯಲೊಲ್ಲವು ಕೋಕಿ, ನಡೆಯಲೊಲ್ಲವು ಹಂಸೆ, ಕರೆಯಲೊಲ್ಲವು ಪಿಕಂ, ನುಡಿಯಲೊಲ್ಲವು ಶುಕಂ. ನಲಿಯಲೊಲ್ಲವು ಚಕೋರಿ, ನೆರೆಯಲೊಲ್ಲವು ಹರಿಣಿ. ಒರೆಯಲೊಲ್ಲವು ಕರಿಣಿ, ಪೊರೆಯಲೊಲ್ಲವು ಚಮರಿ, ಮೆರೆಯಲೊಲ್ಲವು ಸಿಂಗಂ... - ಅರರೆ, ಜಾನಕಿಯ ಶೋಕಂ ತಮ್ಮದೆಂದಾಕೆಯಂಗಮಂ ನೋಡಿ ನೋಡಿ.

ಬೀಸಿದುವು ಬಾಲದಿಂ ಚಮರಿಗಳ್ ಚಮರಮಂ, ಪಾಸಿದುವು ಕರಿಗಳ್ ಎಳೆದಳಿರ ಮೃದುತಲ್ಪಮಂ. ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು ಆ ಸಿರಿಮೊಗಕ್ಕೆ. ಬಿಸಿಲಾಗದಂತೆ ಆಗಸದೊಳೋಸರಿಸದೆ ಆಂಚೆಗಳ್ ಎರಂಕೆಯನ್ ಅಗಲ್ಚಿ ನೆರಳಾಸೆಗೈದವು ರಾಘವನ ರಾಣಿ ದುಃಖಸಂತಪ್ತೆಯಾಗಿರಲ್ಕೆ.

ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು
ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ
ರ್ದರವಿಂದಗಂಧವತಿಭಾರಮಂ ಪೊರಲಾರದಿರ್ದೊಡಂ ಧರಣಿಸುತೆಯ
ಪರಿತಾಪಮಂ ತವಿಸದಿರಬಾರದೆಂದು ತರ
ಹರದೊಳೊಯ್ಯೊಯ್ಯನೈತಂದು ಬೀಸಿತು ಸುಖ
ಸ್ಪರುಶವಾತಂ. ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ?             -೧೯.೩೫


ಗಂಗಾನದಿಯ ತೆರೆತೆರೆಗಳ ನಡುವೆ ಬಿದ್ದು-ಎದ್ದು ಆಯಾಸಗೊಂಡು.. ಬರಲಾಗದಿದ್ದರೂ, ಗಂಗೆಯ ಮಡಿಲಲ್ಲಿ ಅರಳಿದ ಕಮಲಗಳ ಗಂಧದ ಭಾರವನ್ನು ಹೊರಲಾಗದಿದ್ದರೂ - ಹೇಗೋ ತನ್ನ ಎಲ್ಲ ಕಷ್ಟಗಳನ್ನೂ ಸೈರಿಸಿಕೊಂಡು, ಸೀತೆಯ ಪರಿತಾಪವನ್ನು ಹೇಗಾದರೂ ಮಾಡಿ ಕಡಿಮೆಗೊಳಿಸಲೇಬೇಕು ಎಂದು ಬೀಸಿ ಬಂದಹಾಗೆ ಹಿತವಾದ ಗಾಳಿಯು ಮೆಲ್ಲಮೆಲ್ಲನೆ ಬೀಸಿತು. ಉಪಕಾರಿಯಾದವರು ಎಂದಾದರೂ ತಮ್ಮ ನೋವನ್ನೇ ನೋಡುತ್ತ (ಉಪಕಾರ ಮಾಡದೆಯೇ) ಕುಳಿತುಕೊಳ್ಳುತ್ತಾರೆಯೇ!


(ಮುಂದುವರೆಯುವುದು..)