ಅರಸಿನುಡುಗೆಯ ನಡುವೆ, ರನ್ನದೊಡವೆಯ ನಡುವೆ
ಬಂಧಿಸಿಹೆ ಮಗುವನ್ನು- ಸಿರಿಯ ಸೆರೆಯೊಳಗಿರಿಸಿ ;
ಆಡೀತು ಹೇಗೆ ಅದು, ನಲಿದೀತು ಹೇಗೆ ಅದು-
ಪ್ರತಿ ಹೆಜ್ಜೆಗೂ ತಡೆವ - ಹೊನ್ನ ತೆರೆಯನು ಸರಿಸಿ?
ಚಿನ್ನ - ರನ್ನದ ದಿರಿಸು ಅಡಿಗಡಿಗೆ ತಗುಲುವುದು,
ಅದರ ಕಾಟಕೆ ಅವನ ಸಂತೋಷವಳಿಯುವುದು;
ಬಣ್ಣ ಕೆಟ್ಟೀತೆಂಬ, ಧೂಳು ಮೆತ್ತೀತೆಂಬ -
ಭಯದಲ್ಲಿ ಆ ಮಗುವು ಸರಿಯಲೂ ಹೆದರುವುದು.
ನ್ಯಾಯವೇ ಇದು ನಿನಗೆ? ಈ ಬಂಧ ಲೇಸಹುದೆ? -
ತನ್ನ ಪ್ರೇಮವು ಮಗುವ ಸ್ವಾತಂತ್ರ್ಯ ಕಸಿಯುವೆಡೆ,
ಧೂಳಿನೊಳಗಾಡುವS ಆನಂದ ಕದಿಯುವೆಡೆ,
ಜಗದ ಸಿರಿಜಾತ್ರೆಯಾ ದ್ವಾರದೊಳು ನಿಲುಹುವೆಡೆ.
ಬಂಧ ಸಡಿಲಿಸು ತಾಯೆ, ಬಾಳ ಸವಿಯಲಿ ಅವನು;
ಭುವಿಯ ಸಿರಿಮಡಿಲಿನೊಳು ಬಾಲ್ಯ ಪಡೆಯಲಿ ಅವನು.