ಚಿಂದಿಯ ಪೇಟವಂ ಸುತ್ತಿ
ಹರಕು ಬಟ್ಟೆಯ ಧರಿಸಿ
ಕೋಲ್ದಂಡವಂ ಪಿಡಿದು
ಪೊಳಲೊಳಗಲೆದಾಡುತಿರ್ದ
ಮರುಳನೋರ್ವನ ಕಂಡೆ |
ಇಹದ ಪರಿವೆಯು ಇರದೆ
ಪರದ ಪರಿವೆಯು ಇರದೆ
ಭ್ರಮಾಪರಿಧಿಯೊಳಗಿಂತು
ಸಿಲುಕಿ ನಲುಗುತಿಹ ಅವನ
ಹೀನ ಸ್ಥಿತಿಯನು ಕಂಡೆ |
ಮತ್ತಿನೊಳಗೆಂಬಂತೆ ತೂರುತ್ತ ನಡೆಯುವ,
ಅಲ್ಲಲ್ಲಿ ನಿಲ್ಲುತ್ತ ಅಲ್ಲಲ್ಲಿ ಕೂರುವ,
ಆಗೊಮ್ಮೆ ಈಗೊಮ್ಮೆ ಗತ್ತಿನಿಂದರಚುವ,
ಒಮ್ಮೊಮ್ಮೆ ಅತ್ತು ಒಮ್ಮೊಮ್ಮೆ ನಗುವs;
ತನ್ನ ಸ್ಥಿತಿಯನು ತಾನು ಆರಿಯದೆಯೆ ಸಾಗುವ.
ಕಾಂಬ ವಸ್ತುವ ಕಸಿದು ಕಿಸೆಯೊಳಗೆ ತುಂಬುವ,
ಬೆತ್ತವಂ ಬೀಸುತ್ತ ಹೆದರಿಸುತ ಕಾಡುವ,
ಮಂದಿಯs ಗುಂಪಿಂಗೆ ಕಲ್ಲನ್ನು ಎಸೆಯುವ,
ಅನ್ಯರs ಆಳಲಿಂಗೆ ಮುದವನ್ನು ತಾಳುವ;
ತನ್ನ ಮರುಳಿನೊಳಿಂತು ಜಗಮರೆತು ಬಾಳುವ.
ಭಾವಿಸಿ ನೋಡಲು ಎಲ್ಲರೂ ಮರುಳರೇ;
ಕೆಲರು ಬಾಹ್ಯದೊಳು ಮರುಳರು!
ಕೆಲರಬಾಹ್ಯದೊಳು ಮರುಳರು!
"ತಾನೆಂಬ ಮರುಳು ಹತ್ತಿರಲು ಜನಕೆ,
ಸತ್ಯದs ಅರಿವು ಬಾರದೆಂದಿಗು ಜಗಕೆ"
ಅಹಂಕಾರದs ಚಿಂದಿ ಪೇಟವನು ಸುತ್ತಿ,
ಅಧಿಕಾರದs ಮುರುಕು ಬೆತ್ತವನು ಹಿಡಿದು,
ಸ್ವಾರ್ಥದs ಹರಕು ಬಟ್ಟೆಯನು ಧರಿಸಿ,
ಭ್ರಮೆಯ ಲೋಕದೊಳಗಲೆಯುವೆವು;
ಮರುಳರೇ ನಾವು! ಮರುಳರೇ ನಾವು!
ಕಂಡದ್ದೆಲ್ಲವ ಬಾಚಿ ಕಿಸೆಯಲ್ಲಿ ತುಂಬುವೆವು,
ಅನ್ಯರಿಗಪಕಾರವನೆಸಗೆ ಮುದವನ್ನು ತಾಳುವೆವು,
ದರ್ಪವಂ ತೋರುತ್ತ ಅವರಿವರ ಕಾಡುವೆವು,
ನಮ್ಮ ಕಾಯ್ದವರೊಡನೆ ಕಿಚ್ಚಿನಿಂ ಕಾದುವೆವು;
ಕಡುಧೂರ್ತರೇ ನಾವು! ಕಡುಧೂರ್ತರೇ ನಾವು!
ಕಂಡವರ ಕಷ್ಟಕ್ಕೆ ಕುರುಡಾಗಿ ನಡೆಯುವೆವು,
ಮೋಹಕ್ಕೆ ಸೆರೆಯಾಗಿ ಜಗಮರೆತು ಸಾಗುವೆವು,
ಸರ್ವಥಾ ನಾನೆಂಬ ಭ್ರಮೆಯಲ್ಲಿ ಬಾಳುವೆವು,
ನಮ್ಮ ನೆಲೆಯರಿಯುವೆಡೆ ಮನಸನ್ನೆ ಮಾಡೆವು;
ಕಡುಮೂಢರೇ ನಾವು! ಕಡುಮೂಢರೇ ನಾವು!
ವಿಚಾರಿಸಿ ನೋಡಲು ಜಗವೆಲ್ಲ ಮರುಳೇ;
ನಾನು-ತಾನೆಂಬ ಮರುಳು ಏರಿಹುದು ಜನಕೆಲ್ಲ,
'ತನ್ನ'ತನದೊಳಗೆ ಮುಳುಗಿಹುದು ಜಗವೆಲ್ಲ;
ಇದ ಹರಿಸಿ ಕಾವುದನು ಶಿವ ಮಾತ್ರ ಬಲ್ಲ!
ನಮ್ಮ ಕಾವುದನು ಆ ಶಿವ ಮಾತ್ರ ಬಲ್ಲ.