ಇವತ್ತು ಬೆಳಗಿನ ಜಾವದಿಂದ ಹುಷಾರಿರಲಿಲ್ಲ, ನನಗೆ. ಅದಕ್ಕೇ ತಿಂಡಿ ತಿಂದಾದ ನಂತರ ಮಾತ್ರೆ ತಗೊಂಡು ಮಲಗಿಬಿಟ್ಟೆ.
ಮಧ್ಯಾಹ್ನದ ಹೊತ್ತಿಗೊಂದು ಕನಸು! ನಾನು ಭಾರತದಲ್ಲಿ, ನಮ್ಮ ಮನೆಯಲ್ಲಿದ್ದಂತೆ.. ಅವರೂ ಇದ್ದರು, ಮನೆಯಲ್ಲಿ. ನನಗೆ ಅವರನ್ನು ಕಂಡು ಸಂತೋಷ, ಸಮಾಧಾನ. ಬಹಳ ದಿನಗಳಿಂದ ಎಲ್ಲೊ ದೂರದ ಊರಿಗೆ ಹೋಗಿದ್ದವರು ತಿರುಗಿ ಮನೆಗೆ ಬಂದಾಗ ಅನಿಸುವುದಲ್ಲ, ಅವರನ್ನು ಕಂಡು ಹಾಗೇ ಅನಿಸಿತ್ತು, ನನಗೂ. ಆಗ ಕತ್ತಲಾಗಿತ್ತು. ಬಹಳ ಹಸಿವಾಗಿದ್ದಿರಬೇಕು, ನನಗೆ. ಮೆಲ್ಲಗೆ ಅವರ ರೂಮಿಗೆ ಹೋಗಿ ನೋಡಿದೆ. ದಣಿವಿನಿಂದಲೊ ಏನೊ, ಮಲಗಿದ್ದರು. ಒಮ್ಮೆ ಕೂಗಿ ಎಬ್ಬಿಸಿದೆ "ಮಾ, ಊಟ ಮಾಡೋಣ ಬನ್ರಿ".
"ನಿನ್ನ ಕೈ ಗಾಯಕ್ಕೆ ಡ್ರೆಸ್ಸಿಂಗ್ ಮಾಡ್ಕೊಳೊಲ್ವಾ? ಹಾಗೇ ಬಿಟ್ಟಿದ್ದೀಯಲ್ಲ...." ಅಂತ ನನ್ನನ್ನು ಕೇಳುತ್ತ ಊಟಕ್ಕೆದ್ದರು.
ಇನ್ನೇನು ಎಲ್ಲರೂ ಊಟಕ್ಕೆ ಕೂರಬೇಕು, ಅಷ್ಟರಲ್ಲಿ ನನ್ನ ರೂಮ್'ಮೇಟ್ ಫೋನ್ ಮಾಡಿದ. ಎಚ್ಚರಾಯಿತು, ನನಗೆ. ಅದುವರೆಗೆ ನಾನು ಕಂಡದ್ದು ಕನಸೆಂದು ಆಗಷ್ಟೆ ನನಗೆ ಅರಿವಾಗಿದ್ದು.
ಇಂತಹ ಕನಸುಗಳು ನಾನು ಇಲ್ಲಿಗೆ ತಿರುಗಿ ಬಂದಾಗಿನಿಂದ ಬಹಳ ಸಾರಿ ಕಂಡದ್ದುಂಟು. ಆ ಕನಸುಗಳಲ್ಲಿ ಒಂದಾದರೂ ನಿಜವಾಗಬಾರದೆ ಎಂದು ಹಲವು ಸಾರಿ ಕನಸಿನಲ್ಲೂ ಕನವರಿಸಿದ್ದೇನೆ. ಆದರೆ ನನಗೆ ಗೊತ್ತು, ಹಾಗೆ ಇನ್ನೆಂದೂ ಆಗಲಾರದೆಂದು.
ಆದರೂ, ಈ ಕನಸುಗಳು ನನಗೆ ಯಾವಾಗಲೂ ಅಚ್ಚರಿಯನ್ನುಂಟು ಮಾಡುತ್ತವೆ. ಕನಸುಗಳಲ್ಲೂ ಅವರು ತೋರುತ್ತಿದ್ದ ಪ್ರೀತಿ, ಕಾಳಜಿಗಳು ಅಚ್ಚಳಿಯದೆ ನನ್ನ ಅನುಭವಕ್ಕೆ ಬರುತ್ತದೆ.
ಅವರು ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಲು ಹೋದಾಗಲೆಲ್ಲ ನನ್ನ ಕೈಯ ಗಾಯ ಅವರಿಗೆ ಕಾಣದಂತೆ ಜಾಗ್ರತೆವಹಿಸುತ್ತಿದ್ದೆ. ಆದರೆ ಅದೊಂದು ರಾತ್ರಿ (ಕೊನೆಯ ರಾತ್ರಿ) ಔಷಧಿಯನ್ನು ಕೊಡಲೆಂದು ಒಳಗೆ ಹೋದಾಗ ಕೈಯನ್ನು ಮರೆಮಾಚಿಕೊಳ್ಳುವುದನ್ನು ಮರೆತುಬಿಟ್ಟಿದ್ದೆ. ಅವರು ನನ್ನನ್ನು ನೋಡಿದ ತಕ್ಷಣ 'ಏನಾಯ್ತು ಕೈಗೆ' ಅಂತಲೇ ಕೇಳಿದ್ದರು. ಹೆಚ್ಚಿನದೇನೂ ಆಗಿಲ್ಲವೆಂದೇನೊ ಹೇಳಿ ಸುಮ್ಮನಾಗಿದ್ದೆ.
ಆ ಸಂಜೆಯಷ್ಟರಲ್ಲಾಗಲೆ ಎಲ್ಲವೂ ಮುಗಿಯುವ ಹಂತಕ್ಕೆ ಬಂದಿದೆಯೆಂಬುದು ಎಲ್ಲರಿಗೂ ತಿಳಿದಿತ್ತು. ಇನ್ನು ಮಾಡುವುದೇನೂ ಉಳಿದಿರಲಿಲ್ಲ. ಅಷ್ಟಕ್ಕೂ ಆ ಸಂಜೆಯ ನಂತರ ಅವರಿಗೆ ಪ್ರಜ್ಞೆ ಮರಳಿಬಂದದ್ದೂ, ಅಷ್ಟೊಇಷ್ಟೊ ಅಸ್ಪಷ್ಟವಾಗಿ ಅವರು ನಮ್ಮೊಡನೆ ಮಾತಾಡಿದ್ದೂ ನಮ್ಮ ಸುದೈವವೆಂದೇ ಹೇಳಬೇಕು. ಇಲ್ಲವಾದರೆ ಕೊನೆಯ ಬಾರಿಗೆ ಅವರೊಡನೆ ಮಾತಾಡುವುದಕ್ಕೂ ಸಾಧ್ಯವಾಗ್ತಿರಲಿಲ್ಲ!
ಇವೆಲ್ಲದರ ನಡುವೆ ನನಗೆ ಅತೀವ ನೋವನ್ನು ತಂದ ಸಂಗತಿಯೆಂದರೆ, ಅಂತಹ ಸ್ಥಿತಿಯಲ್ಲಿದ್ದರೂ ಕೂಡ ಅವರು ನನ್ನ ಬಗ್ಗೆ, ನನ್ನ ಗಾಯದ ಬಗ್ಗೆ ತೋರಿದ ಕಾಳಜಿ, ಕಳವಳ. ಈಗಲೂ ಆ ಸನ್ನಿವೇಶವನ್ನು ನೆನೆದರೆ ಕಣ್ಣುತುಂಬಿ ಬರುತ್ತೆ, ನನಗೆ. ಈಗ ಇದನ್ನು ಟೈಪ್ ಮಾಡುವಾಗ ಕೂಡ ಕಣ್ಣು ಮಂಜಾಗಿವೆ. ಆ ನಂತರ ಸುಮಾರು ಹೊತ್ತು ಅವರೊಡನೆ ಮಾತಾಡಿದೆ. ಅವರು ಹೇಳುತ್ತಿದ್ದುದೆಲ್ಲವೂ ಅರ್ಥವಾಗುತ್ತಿರಲಿಲ್ಲವಾದರೂ 'ಈ ಮಾತುಗಳೆಲ್ಲ ಇಂದಿಗೇ ಕೊನೆಯಾಗುತ್ತವೆ' ಎಂಬ ವೇದನೆ ಎಲ್ಲಕ್ಕಿಂತ ಮಿಗಿಲಾಗಿ ನನ್ನ ಎದೆಯನ್ನು ಹಿಂಡುತ್ತಿತ್ತು.
ನಮ್ಮ ಬಗ್ಗೆಯೆಲ್ಲ ಇನ್ನುಮುಂದೆ ಚಿಂತೆ ಮಾಡಬಾರದೆಂದೂ, ನಾಳೆ ನಾವೆಲ್ಲ ಮನೆಗೆ ಹೋಗಬಹುದೆಂದೂ ಅವರಿಗೆ ತಿಳಿಸಿ, ದೇವರ ನಾಮ ಜಪಿಸುವಂತೆ ಹೇಳಿ ಅವರಿಂದ 'ಹರೆ ರಾಮ ಹರೆ ಕೃಷ್ಣ' ಹೇಳಿಸಿದೆ. ಅವರೂ ಒಂದೆರಡು ಸಾರಿ ಅದನ್ನು ಮಾರ್ನುಡಿದರು. ಕರುಳು ಕೊಯ್ದಂತಾಯ್ತು, ನನಗೆ. ತಮಗೆ ಹೇಳಿಕೊಟ್ಟುದ್ದನ್ನು ಮಕ್ಕಳು ಹೇಳಿ ಒಪ್ಪಿಸುತ್ತವಲ್ಲ, ಹಾಗಿತ್ತು - ಅವರು ರಾಮ-ಕೃಷ್ಣರ ನಾಮ ಜಪಿಸಿದ್ದು. ನನಗಂತೂ ಕ್ಷಣಕ್ಷಣಕ್ಕೂ ನರಕಯಾತನೆ ಅನುಭವಿಸಿದಂತಾಗುತ್ತಿತ್ತು. ನಾವೆಲ್ಲ ಇದ್ದೂ ಏನೂ ಮಾಡಲಾಗುತ್ತಿಲ್ಲವಲ್ಲ ಎಂದು ಅದೆಷ್ಟು ದುಃಖಿಸಿದ್ದೆ, ಆಗ!
ಮಾರನೆಯ ದಿನ ಬಂದೇ ಬಂತು - ಎಲ್ಲಕ್ಕೂ ತೆರೆ ಎಳೆಯಲು. ವಿಧಿಯ, ಸಾವಿನ ಆಟದೆದುರು ನಮ್ಮೆಲ್ಲ ಬಂಧಗಳೂ, ಅವನ್ನು ಉಳಿಸಿಕೊಳ್ಳಬೇಕೆಂಬ ನಮ್ಮ ಪ್ರಯತ್ನಗಳೆಲ್ಲವೂ ಎಷ್ಟಕ್ಕೂ ಲೆಕ್ಕಕ್ಕಿಲ್ಲವೆ ಎನಿಸಿತ್ತು ಆ ದಿನ.
ಆ ನಂತರದ ದಿನಗಳಲ್ಲಿ ನನ್ನ ಇರುವಿಕೆಯೇ ನನ್ನಲ್ಲಿ ನಾಚಿಕೆ ಮೂಡಿಸುತ್ತಿತ್ತು. ಇದೇನು ಈ ಮಾನವಿಲ್ಲದ ಬಾಳು, ನನಗೆ ಜನ್ಮವಿತ್ತ ಜೀವವೇ ಈಗ ಇಲ್ಲವೆಂದು ತಿಳಿದೂ ನಾನು ಇನ್ನೂ ಇದ್ದೇನಲ್ಲ ಎಂದು ನೆನೆದು ಅಚ್ಚರಿಯಾಗುತ್ತಿತ್ತು. ಇಂತಹ ಸನ್ನಿವೇಶದಲ್ಲೂ ಹಸಿವೆ-ನೀರಡಿಕೆ-ನಿದ್ದೆಗಳೆಂಬ ಪಿಪಾಸುಗಳು ಯಾವ ಸಂಕೋಚವಿಲ್ಲದೆ ನನ್ನನ್ನು ಕಾಡುವವಲ್ಲ ಎಂದು, ಅವಕ್ಕೆ ವಶವಾದ ನನ್ನನ್ನು ನಾನೇ ಶಪಿಸಿಕೊಂಡಿದ್ದೆ, ಆಗೆಲ್ಲ.
ಕಾರ್ಯಗಳೆಲ್ಲ ಮುಗಿದ ಮೇಲೆ ಇಲ್ಲಿಗೆ ಬಂದುಬಿಟ್ಟೆ. ಆದರೆ ಮನಸಿನ್ನೂ 'ಇದೆಲ್ಲ ನಿಜವೇ? ಇದೆಲ್ಲ ನಿಜವೇ?' ಎಂಬ ಪ್ರಶ್ನೆಯನ್ನು ಪುನಃ ಪುನಃ ಕೇಳುತ್ತಿತ್ತು.
------------------------------------------------------------------------------------------------------------------------
ಇಂದು ಸಂಕ್ರಾಂತಿ. ಕಳೆದ ವರ್ಷ ಸಂಕ್ರಾಂತಿಯ ದಿನ ನಾನು ಮನೆಯಲ್ಲಿದ್ದೆ - ನಮ್ಮ ಹಳೆಮನೆಯಲ್ಲಿ. ಈಗ ಇಲ್ಲಿದ್ದೇನೆ.. ಎಷ್ಟು ಬದಲಾಗಿದೆ ಈ ಒಂದು ವರ್ಷದಲ್ಲಿ!
ನನಗೇನೊ ಈಗಲೂ ಅವರು ಅಲ್ಲೆಲ್ಲೊ ಇದ್ದಾರೆಂದೇ ತೋರುವುದು. ಅಡುಗೆ ಮಾಡುವಾಗ, ಅವರು ಇಷ್ಟಪಡುತ್ತಿದ್ದ ಹಾಡು ಕೇಳುವಾಗ, ದೇವರಪೂಜೆಯ ಸಮಯದಲ್ಲೆಲ್ಲ ಅವರ ನೆನಪಾಗುವುದು. ಆಗೆಲ್ಲ ಮನಸಿನಲ್ಲೆ ಮತ್ತೆ ಅವರೊಡನೆ ಮಾತಾಡುತ್ತೇನೆ. ಏನಾದರೂ ತಪ್ಪು ಮಾಡಿದಾಗೊಮ್ಮೆ ಅವರು 'ತಿಮ್ಮ' ಎಂದೊ 'ಕರೀ' ಎಂದೊ ಮಂದಲಿಸಿ ಬೈದಂತೆ ಊಹಿಸಿಕೊಳ್ಳುತ್ತೇನೆ. ಹಾಗಾಗಿ ಜಾಗ್ರದವಸ್ಥೆಯಲ್ಲಿ ನನಗೆ 'ಅವರು ಇಲ್ಲ' ಎಂಬ ಸತ್ಯ ಅಷ್ಟಾಗಿ ತೋರದಾದರೂ, ಆ ನನ್ನ ಊಹೆಗಳು, ಕನಸುಗಳು ನಿಜವಾಗಲೆಂಬ ನನ್ನ ಒಳಹಂಬಲವನ್ನು ನನ್ನ ಸುಪ್ತಮನಸ್ಸು ಆಗಾಗ ಹೀಗೆ ಕನಸಿನ ರೂಪದಲ್ಲಿ ವ್ಯಕ್ತಪಡಿಸುತ್ತಿದೆಯೆನಿಸುತ್ತದೆ.
ನಾನೇನೊ ಮನೆಯಿಂದ, ಊರಿನಿಂದ ದೂರವಾಗಿ ಇಲ್ಲೆಲ್ಲೊ ಇದ್ದೇನೆ. ಹಾಗಾಗಿ ನನಗೆ ಅಷ್ಟಾಗಿ ಅವರು ಈಗ ಇಲ್ಲವೆಂಬ ಭಾವ ಕಾಡಲಾರದು ಎನಿಸುತ್ತದೆ (ಮನೆಯಲ್ಲಿರುವವರಿಗೆ ಹೋಲಿಸಿದರೆ). ಆದರೆ ಮನೆಯಲ್ಲಿರುವವರ ಬಗ್ಗೆ, ಮುಖ್ಯವಾಗಿ ಅಪ್ಪನ ಬಗ್ಗೆ ನೆನೆದರೆ ದುಃಖವಾಗುತ್ತದೆ. ಅವರೆಲ್ಲರಿಗೆ ಅಲ್ಲಿರುವ ಪ್ರತಿನಿಮಿಷವೂ 'ಅವರು ಈಗ ಇಲ್ಲ' ಎಂಬ ವಾಸ್ತವ - ನನಗಿಂತ ಹೆಚ್ಚಾಗಿ – ಕಾಡುತ್ತಿದ್ದಿರಬೇಕು. ಅದರಲ್ಲೂ ಹೀಗೆ, ಹಬ್ಬದ ದಿನ.! ಬಹಳ ಕಷ್ಟವೇ ಆಗಿದ್ದಿರಬೇಕು.
ಹಬ್ಬದ ದಿನಗಳಂದು ಅವರು ಸಂಭ್ರಮದಿಂದ ಮನೆಯೆಲ್ಲ ಓಡಾಡಿಕೊಂಡು, ಗಡಿಬಿಡಿಯಿಂದ ಇದ್ದಬದ್ದ ಕೆಲಸಗಳಷ್ಟನ್ನೂ ತಾವೇ ಮಾಡುತ್ತ, ಮೈಗಳ್ಳರಂತಿರುತ್ತಿದ್ದ ನಮ್ಮನ್ನು 'ಬೇಗ ಸ್ನಾನ ಮಾಡೇಳು' ಎಂದೊ 'ಆ ಪೇಪರ್ ಓದೋದ್ ನಿಲ್ಸಿ ಸ್ವಲ್ಪ ಸಹಾಯ ಮಾಡಕ್ಕಾಗಲ್ವಾ' ಅಂತಲೊ ಆಗ್ರಹಪಡಿಸದಾಗಲಷ್ಟೆ ಹಬ್ಬದ ನಿಜವಾದ ಅನುಭವ ನಮಗಾಗುತ್ತಿದ್ದುದು. ಅಣ್ಣ ಹಾಗೊ ಹೀಗೊ ಗೊಣಗಾಡಿಕೊಂಡೇ ಹೇಳಿದಷ್ಟನ್ನು ಮಾಡಿಮುಗಿಸುತ್ತಿದ್ದ. ನನಗಾದರೊ ಹಬ್ಬದ ದಿನ ಅವರ ಪಾಲಿಗಿರುತ್ತಿದ್ದ ಹೆಚ್ಚುಹೆಚ್ಚು ಕೆಲಸಗಳನ್ನು ಕಂಡು ಆಗಾಗ "ಇಷ್ಟೆಲ್ಲ ಕಷ್ಟಗಳು ಯಾಕಪ್ಪಾ! ಈ ಹಬ್ಬಗಳ ಗೊಡವೆಯೇ ಇಲ್ಲದಿದ್ದರೆ ಅಮ್ಮನಿಗೂ ಸ್ವಲ್ಪ ಆರಾಮ" ಎನಿಸಿದ್ದುಂಟು (ಮುಖ್ಯವಾಗಿ ನಮ್ಮ ಮನೆಯ ಪರಿಸ್ಥಿತಿಗಳು ಹಾಗಿರುತ್ತಿದ್ದವು). ಆದರೂ, ಇವಾವೂ ಅವರ ಉತ್ಸಾಹಕ್ಕೆ, ಸಂಭ್ರಮಕ್ಕೆ ಮುಳುವೆನಿಸುತ್ತಿರಲಿಲ್ಲ. ಅದೆಷ್ಟೇ ಅಡಚಣೆಗಳಿದ್ದರೂ ಅವೆಲ್ಲವನ್ನೂ ನಿಭಾಯಿಸಿ, ನಿವಾರಿಸಿ ಹಬ್ಬವನ್ನು ಸಾರ್ಥಕಗೊಳಿಸುವ ಸಾಮರ್ಥ್ಯ ಅವರಿಗಷ್ಟೆ ಇತ್ತು, ನಮ್ಮ ಮನೆಯಲ್ಲಿ.
ಆದರೆ.. ಇನ್ನುಮೇಲೆ ಅವಾವೂ ಇರಲಾರದು. ಇನ್ನೆಂದೂ ಅವರ ದನಿ ನಮ್ಮ ಮನೆಯಲ್ಲಿ ಮತ್ತೆ ಕೇಳಲಾರದು. ಅವೆಷ್ಟೇ ದಿನಗಳು ಕಳೆಯಬಹುದು, ಇನ್ನೂ ಅವೆಷ್ಟೋ ಹಬ್ಬಗಳು -ಮುಂಬರುವ ದಿನಗಳಲ್ಲಿ- ಬರಬಹುದು. ಆದರೆ ಅವಾವೂ ನನ್ನ ಪಾಲಿಗೆ ನಿಜವಾದ 'ಹಬ್ಬ' ಎನಿಸಲಾರವು!